ಲೋಕಮತ
ಜುಲೈ 1, ಭಾರತೀಯ ಕ್ಯಾಲೆಂಡರ್‌ನಲ್ಲಿ ಕೇವಲ ಒಂದು ದಿನಾಂಕವಲ್ಲ, ಎರಡು ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತ ವೃತ್ತಿಗಳನ್ನು ಸ್ಮರಿಸುವ ಮಹತ್ವದ ದಿನ. ಒಂದು ವೈದ್ಯಲೋಕದ ದಂತಕಥೆ ಡಾ.ಬಿ.ಸಿ.ರಾಯ್ ಅವರ ಜನ್ಮದಿನದ ನೆನಪಿನಲ್ಲಿ ಆಚರಿಸಲಾಗುವ ‘ರಾಷ್ಟ್ರೀಯ ವೈದ್ಯರ ದಿನ’. ಮತ್ತೊಂದು 1843ರ ಇದೇ ದಿನ ಕಲ್ಲಚ್ಚಿನಲ್ಲಿ ಮುದ್ರಣಗೊಂಡು ಕನ್ನಡಿಗರ ಕೈಸೇರಿದ ಮೊಟ್ಟಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದ ನೆನಪಿನಲ್ಲಿ ಆಚರಿಸುವ ರಾಜ್ಯ ‘ಪತ್ರಿಕಾ ದಿನ’.
ವೈದ್ಯೋ ನಾರಾಯಣೋ ಹರಿಃ ಎನ್ನುವುದು ಹಿರಿಯರ ದೊಡ್ಡ ಮಾತು. ಮನುಷ್ಯನ ಪ್ರಾಣ ಉಳಿಸುವಾತ ದೇವರಿಗಿಂತ ಕಡಿಮೆಯಿಲ್ಲ ಎಂಬುದು ಇದರ ಹಿಂದಿನ ಆಶಯ. ಇನ್ನು ಪತ್ರಿಕಾರಂಗ ವನ್ನು ‘ಪ್ರಜಾಪ್ರಭುತ್ವದ ನಾಲ್ಕನೇ ಅಂಗ’ ಎಂದು ಬಣ್ಣಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರ ಮನುಷ್ಯನ ದೇಹದ ಸ್ವಾಸ್ಥ್ಯವನ್ನು ಕಾಪಾಡಿದರೆ, ಪತ್ರಿಕಾರಂಗ ಸಮಾಜದ ಹಾಗೂ ಪ್ರಜಾ ಪ್ರಭುತ್ವದ ಸ್ವಾಸ್ಥ್ಯವನ್ನು ಕಾಯುವ ಕಾವಲುಗಾರ. ಈ ಎರಡೂ ಕ್ಷೇತ್ರಗಳ ಮೂಲ ಉದ್ದೇಶ ‘ಜನಸೇವೆ’. ಆದರೆ, ವರ್ತಮಾನದ ವಾಸ್ತವದಲ್ಲಿ ಈ ಎರಡೂ ಕ್ಷೇತ್ರಗಳು ಹಿಂದೆಂದೂ ಎದುರಿಸ ದಂತಹ ತೀವ್ರ ಟೀಕೆ, ನೈತಿಕ ಬಿಕ್ಕಟ್ಟು ಮತ್ತು ಅಸ್ತಿತ್ವದ ಸವಾಲುಗಳನ್ನು ಎದುರಿಸುತ್ತಿವೆ.
ಸ್ಟೆತಸ್ಕೋಪ್‌ನಿಂದ ‘ಟಾರ್ಗೆಟ್’ ಕಡೆಗೆ
ಒಂದು ಕಾಲವಿತ್ತು; ವೈದ್ಯರು ರೋಗಿಯ ನಾಡಿ ಹಿಡಿದು, ನಾಲಿಗೆ ಮತ್ತು ಕಣ್ಣುಗಳನ್ನು ಪರೀಕ್ಷಿಸಿ, ಎದೆಗೆ ಸ್ಟೆತಸ್ಕೋಪ್ ಇಟ್ಟು ರೋಗದ ಮೂಲವನ್ನು ಪತ್ತೆ ಹಚ್ಚುತ್ತಿದ್ದರು. ವೈದ್ಯರ ಸ್ಪರ್ಶ ಮತ್ತು ಅವರ ಸಾಂತ್ವನದ ಮಾತುಗಳೇ ರೋಗಿಯ ಅರ್ಧ ಕಾಯಿಲೆ ಯನ್ನು ವಾಸಿ ಮಾಡುತ್ತಿದ್ದವು. ಆದರೆ ಇಂದು ವೈದ್ಯಕೀಯ ಕ್ಷೇತ್ರ ಬಹುದೂರ ಸಾಗಿಬಂದಿದೆ. ಸೇವೆ ಎಂಬುದು ಮರೆಯಾಗಿ, ಅದೊಂದು ವ್ಯಾಪಾರವಾಗಿ, ಕಾರ್ಪೋರೇಟ್ ಉದ್ಯಮವಾಗಿ ಬದಲಾಗಿದೆ.
ಇದನ್ನೂ ಓದಿ: Lokesh Kayarga Column: ಸರಕಾರ ನಡೆಸಲು ಶಾಸಕರು, ಸಂಸದರೂ ಬೇಕಾಗಿಲ್ಲ, ಬಿಡಿ!
ಆಸ್ಪತ್ರೆಗಳು ಧನದಾಹಿಗಳಾಗಿವೆ. ರೋಗಿಯನ್ನು ಉಳಿಸುವುದಕ್ಕಿಂತ ದುಡ್ಡು ವಸೂಲಿ ಮಾಡುವುದೇ ಮೊದಲ ಆದ್ಯತೆಯಾಗಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಈ ಅಪಸವ್ಯಗಳಿಗೆ ಕೇವಲ ವೈದ್ಯರನ್ನು ಮಾತ್ರ ದೂಷಿಸಲು ಸಾಧ್ಯವೇ? ವ್ಯವಸ್ಥೆಯ ಒಳಹೊಕ್ಕು ನೋಡಿದಾಗ ಕಾಣುವ ಚಿತ್ರಣವೇ ಬೇರೆ. ಭಾರತದಲ್ಲಿ ಇಂದು ಒಬ್ಬ ವೈದ್ಯನನ್ನು ತಯಾರು ಮಾಡುವುದು ಸಾಮಾನ್ಯದ ಮಾತಲ್ಲ. ವೈದ್ಯಕೀಯ ಶಿಕ್ಷಣವೆಂಬುದು ಅಕ್ಷರಶಃ ಒಂದು ಉದ್ಯಮ ವಾಗಿದೆ.
ಈ ವರ್ಷದ ನೀಟ್ ಪರೀಕ್ಷೆಯ ಅಂಕಿ-ಅಂಶಗಳನ್ನೇ ಗಮನಿಸಿ; ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ, ದೇಶದಲ್ಲಿರುವ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ ಕೇವಲ 1 ಲಕ್ಷದ ಆಸುಪಾಸಿನಲ್ಲಿದೆ. ಅಂದರೆ, ಕೇವಲ ಶೇ.4ರಿಂದ 5ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಸೀಟು ಸಿಗುವ ಅವಕಾಶವಿದೆ. ಉಳಿದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರಾಶೆ ಕಟ್ಟಿಟ್ಟ ಬುತ್ತಿ.
ಸೀಟು ವಂಚಿತರಾದವರಲ್ಲಿ ಕೆಲವರು ಆಯುರ್ವೇದ, ಯುನಾನಿ, ಹೋಮಿಯೋಪತಿಯಂತಹ ಪರ್ಯಾಯ ವೈದ್ಯಕೀಯ ಕೋರ್ಸ್‌ಗಳತ್ತ ಮುಖ ಮಾಡಿದರೆ, ಬಹುಪಾಲು ವಿದ್ಯಾರ್ಥಿಗಳ ವೈದ್ಯ ರಾಗುವ ಕನಸು ಕಮರಿಹೋಗುತ್ತದೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಕೋಟ್ಯಂತರ ರೂಪಾಯಿ ಡೊನೇಷನ್ ನೀಡಿ, ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ವೈದ್ಯರಾಗಿ ಹೊರಬರುವ ಯುವಜನತೆ ಯಿಂದ ‘ಉಚಿತ ಸೇವೆ’ಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಹೂಡಿದ ಬಂಡವಾಳವನ್ನು ಹಿಂದಕ್ಕೆ ಪಡೆಯುವ ಲೆಕ್ಕಾಚಾರ ಗಳು ವೈದ್ಯಕೀಯ ವೃತ್ತಿಯನ್ನು ಆವರಿಸಿಕೊಂಡಿವೆ. ವೈದ್ಯರು ಇಂದು ಹಿಂದಿನಂತೆ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡುವುದು ಕಷ್ಟಸಾಧ್ಯ. ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಸುಸಜ್ಜಿತ ಕ್ಲಿನಿಕ್ ತೆರೆಯಬೇಕಾದರೆ ನೂರಾರು ಕೋಟಿ ರೂಪಾಯಿಗಳ ಬಂಡವಾಳ, ಅತ್ಯಾಧುನಿಕ ಯಂತ್ರೋ ಪಕರಣಗಳು ಬೇಕು. ಹೀಗಾಗಿ ಬಹುಪಾಲು ಯುವ ವೈದ್ಯರು ಕಾರ್ಪೊರೇಟ್ ಆಸ್ಪತ್ರೆಗಳ ಮೊರೆ ಹೋಗುತ್ತಾರೆ.
ಇಲ್ಲಿಂದಲೇ ಅಸಲಿ ಸಮಸ್ಯೆ ಆರಂಭ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸೇವಾ ಮನೋ ಭಾವಕ್ಕಿಂತ ಹೆಚ್ಚಾಗಿ ‘ಟಾರ್ಗೆಟ್’ಗಳನ್ನು ನೀಡಲಾಗುತ್ತಿದೆ. ಪ್ರತಿದಿನ ಇಂತಿಷ್ಟು ರೋಗಿಗಳನ್ನು ನೋಡಬೇಕು, ಇಷ್ಟು ಲ್ಯಾಬ್ ಟೆಸ್ಟ್‌ಗಳನ್ನು ಬರೆದುಕೊಡಬೇಕು, ಇಂತಿಷ್ಟು ಶಸ್ತ್ರ ಚಿಕಿತ್ಸೆಗಳನ್ನು ಮಾಡಲೇಬೇಕು ಎಂಬ ಅಲಿಖಿತ ನಿಯಮಗಳಿವೆ.
ಸಣ್ಣ ಜ್ವರ ಬಂದರೂ ರಕ್ತಪರೀಕ್ಷೆ, ಸ್ಕ್ಯಾನಿಂಗ್ ಎಂದು ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಕಳುಹಿಸು ವ ಪ್ರವೃತ್ತಿ ಹೆಚ್ಚಾಗಿದೆ. ರೋಗ ನಿರ್ಣಯವನ್ನು ವೈದ್ಯರ ಅನುಭವದ ಬದಲು ಯಂತ್ರಗಳೇ ನಿರ್ಧರಿಸುತ್ತಿವೆ. ಇದೀಗ ಶಸ್ತ್ರಚಿಕಿತ್ಸೆಯನ್ನೂ ರೋಬೋಟ್‌ಗಳ ಕೈಯಲ್ಲಿ ಮಾಡಿಸಲಾಗುತ್ತಿದೆ. ಸೇವಾದೃಷ್ಟಿಯಿಂದ ಕೆಲಸಕ್ಕೆ ಸೇರಿದ ವೈದ್ಯರೂ ಸಹ ಪರಿಸ್ಥಿತಿಯ ಒತ್ತಡಕ್ಕೆ ಮಣಿದು, ಕಾರ್ಪೊ ರೇಟ್ ಆಸ್ಪತ್ರೆಗಳ ಸೇಲ್ಸ್‌ಮ್ಯಾನ್‌ಗಳಾಗುವ ದುರಂತ ನಮ್ಮ ಕಣ್ಣ ಮುಂದಿದೆ.
ಅಸಮತೋಲನ ಮತ್ತು ದುಬಾರಿಯಾದ ಸೇವೆ
ಭಾರತದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಜಗಜಾಂತರದಿಂದಾಗಿ ವೈದ್ಯಕೀಯ ಸೇವೆ ಅತಿ ದುಬಾರಿಯಾಗುತ್ತಿದೆ. ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ವೈದ್ಯಕೀಯ ಶುಲ್ಕವು ಪ್ರತೀ ವರ್ಷ ಶೇ.14 ರಿಂದ 25ರಷ್ಟು ಏರಿಕೆ ಕಾಣುತ್ತಿದೆ. ವರ್ಷದಿಂದ ವರ್ಷಕ್ಕೆ ವಿಮಾ ಕಂಪನಿಗಳ ಪ್ರೀಮಿಯಂ ಕಂತುಗಳು ಗಗನಕ್ಕೇರುತ್ತಿವೆ. ಇದಕ್ಕೂ ಹೊಸ ಷರತ್ತುಗಳ ಪಟ್ಟಿ ಸೇರಿಕೊಳ್ಳುತ್ತಿದೆ.
ಇನ್ನೊಂದೆಡೆ, ಭೌಗೋಳಿಕ ಅಸಮತೋಲನ. ದೇಶದ ಶೇಕಡಾ 60ಕ್ಕೂ ಹೆಚ್ಚು ಜನಸಂಖ್ಯೆ ಹಳ್ಳಿ ಗಳಲ್ಲಿದ್ದರೆ, ಶೇ.7ರಷ್ಟು ವೈದ್ಯರು ಮತ್ತು ಸುಸಜ್ಜಿತ ಆಸ್ಪತ್ರೆಗಳು ನಗರ ಪ್ರದೇಶಗಳಿಗೆ ಸೀಮಿತವಾಗಿ ದ್ದಾರೆ. ಕೋಟಿಗಟ್ಟಲೆ ಖರ್ಚು ಮಾಡಿ ಓದಿದ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸೇವೆ ಸಲ್ಲಿಸಲು ಸಿದ್ಧರಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಪ್ರತಿ ಸಾವಿರ ಜನರಿಗೆ ಒಬ್ಬ ವೈದ್ಯರಿರಬೇಕು. ಆದರೆ ಗ್ರಾಮೀಣ ಭಾರತದಲ್ಲಿ ಈ ಅನುಪಾತ ಇನ್ನೂ ಶೋಚನೀಯ ಸ್ಥಿತಿಯಲ್ಲಿದೆ.
ಸ್ಥಿತ್ಯಂತರದಲ್ಲಿ ಪತ್ರಿಕಾರಂಗ
ವೈದ್ಯಕೀಯ ಕ್ಷೇತ್ರದ ಕಥೆ ಇದಾದರೆ, ಸಮಾಜದ ಕನ್ನಡಿಯಾಗಿರುವ ಪತ್ರಿಕಾರಂಗದ ಪರಿಸ್ಥಿತಿ ಇದಕ್ಕಿಂತಲೂ ಹೆಚ್ಚು ಸಂಕೀರ್ಣ ಮತ್ತು ಬಹು ಆಯಾಮದ ಬಿಕ್ಕಟ್ಟು ಗಳಿಂದ ಕೂಡಿದೆ. 1843ರ ಜುಲೈ 1ರಂದು ಜರ್ಮನಿಯ ಬಾಸೆಲ್ ಮಿಷನರಿಗಳು ‘ಮಂಗಳೂರು ಸಮಾಚಾರ’ವನ್ನು ಪ್ರಾರಂಭಿ ಸಿದಾಗ ಅವರ ಮೂಲ ಉದ್ದೇಶ ಧರ್ಮ ಪ್ರಸಾರವಾಗಿತ್ತು.
ಆದರೆ, ಕಾಲಕ್ರಮೇಣ ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಮಹತ್ಕಾರ್ಯಕ್ಕೆ ನಾಂದಿ ಹಾಡಿತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಪತ್ರಿಕೆಗಳು ಜನಜಾಗೃತಿಯ ಪ್ರಬಲ ಅಸ್ತ್ರಗಳಾಗಿದ್ದವು. ಆದರೆ ಇಂದಿನ ಚಿತ್ರಣ ಸಂಪೂರ್ಣ ಬದಲಾಗಿದೆ.
ಸಂಪರ್ಕ ಮತ್ತು ಸಂವಹನ ಕ್ಷೇತ್ರದಲ್ಲಿ ಆಗಿರುವ ಸ್ಫೋಟಕ ತಂತ್ರಜ್ಞಾನದ ಬೆಳವಣಿಗೆಗಳು ಪತ್ರಿಕಾ ಕ್ಷೇತ್ರದ ದಿಕ್ಕನ್ನೇ ಬದಲಿಸಿವೆ. ಒಂದು ಕಾಲದಲ್ಲಿ ಮುಂಜಾನೆ ಎದ್ದ ಕೂಡಲೇ ಪತ್ರಿಕೆಗಾಗಿ ಕಾಯುತ್ತಿದ್ದ ಜನರಿಗೆ, ಈಗ ಜಗತ್ತಿನ ಆಗುಹೋಗುಗಳನ್ನು ತಿಳಿಯಲು ಪತ್ರಿಕೆ, ರೇಡಿಯೋ ಅಥವಾ ಟೆಲಿವಿಷನ್ʼಗಳ ಅಗತ್ಯವೇ ಇಲ್ಲ.
ಕೈಯಲ್ಲಿರುವ ಒಂದು ಸ್ಮಾಟ್ ಫೋನ್ ಇಡೀ ಜಗತ್ತನ್ನೇ ಅಂಗೈಗೆ ತಂದುಕೊಟ್ಟಿದೆ. ಸಾಮಾಜಿಕ ಮಾಧ್ಯಮಗಳ ಅಬ್ಬರದಲ್ಲಿ ಕ್ಷಣಾರ್ಧದಲ್ಲಿ ಬ್ರೇಕಿಂಗ್ ನ್ಯೂಸ್‌ಗಳು ಪ್ರಪಂಚದಾದ್ಯಂತ ಹರಡು ತ್ತವೆ. ಮೊಬೈಲ್ ಎಂಬ ಪುಟ್ಟ ಸಾಧನದೊಳಗೆ ಮುಳುಗಿರುವ ಇಂದಿನ ಯುವಜನತೆಗೆ ಉದ್ದುದ್ದದ ವಿಶ್ಲೇಷಣಾತ್ಮಕ ಲೇಖನಗಳನ್ನು ಓದುವ ವ್ಯವಧಾನವೇ ಇಲ್ಲದಂತಾಗಿದೆ. ರೋಚಕತೆ, ಕ್ಷಿಪ್ರ ಮಾಹಿತಿ ಮತ್ತು ಮನರಂಜನೆಯೇ ಇಂದಿನ ಸುದ್ದಿಯ ಮಾನದಂಡಗಳಾಗುತ್ತಿವೆ. ತಂತ್ರಜ್ಞಾನದ ಸುನಾಮಿ ಪತ್ರಿಕಾ ರಂಗ ಸೇರಿದಂತೆ ಸಾಂಪ್ರದಾಯಿಕ ಮಾಧ್ಯಮಗಳನ್ನು ಸ್ಥಿತ್ಯಂತರದ ಸ್ಥಿತಿಗೆ ತಂದು ನಿಲ್ಲಿಸಿದೆ.
ಯಾವುದೇ ಪತ್ರಿಕೆ ಅಥವಾ ವಾಹಿನಿ ಸ್ವತಂತ್ರವಾಗಿ ಮತ್ತು ದಕ್ಷವಾಗಿ ಕೆಲಸ ಮಾಡಬೇಕಾದರೆ ಆರ್ಥಿಕ ಭದ್ರತೆ ಅತ್ಯಗತ್ಯ. ಹಿಂದೆ ಜನರು, ಉದ್ಯಮ ಜಗತ್ತು ಮತ್ತು ಸರಕಾರ ನೀಡುತ್ತಿದ್ದ ಜಾಹೀರಾತುಗಳೇ ಪತ್ರಿಕೆಗಳ ಜೀವನಾಡಿಯಾಗಿದ್ದವು. ಆದರೆ ಇಂದು ಜಾಹೀರಾತು ಮಾರುಕಟ್ಟೆ ಸಂಪೂರ್ಣವಾಗಿ ಡಿಜಿಟಲ್ ಪ್ಲ್ಯಾಟ್ ಫಾರ್ಮ್‌ಗಳತ್ತ ವಾಲಿದೆ.
ಗೂಗಲ್ (ಯೂಟ್ಯೂಬ್) ಮೆಟಾ,(ವಾಟ್ಸ್ ಆಪ್, ಫೇಸ್ʼಬುಕ್, ಇನ್‌ಸ್ಟಾಗ್ರಾಂ), ಎಕ್ಸ್ ನಂತಹ ಬೆರಳೆಣಿಕೆಯ ಬೃಹತ್ ತಂತ್ರಜ್ಞಾನ ಕಂಪನಿಗಳು ಜಾಗತಿಕ ಜಾಹೀರಾತು ಆದಾಯದ ಸಿಂಹಪಾಲು ನುಂಗುತ್ತಿವೆ.
ಮೊಬೈಲ್ ಹಿಡಿದು ಯಾವುದೋ ಉತ್ಪನ್ನ, ಸೇವೆಯ ಬಗ್ಗೆ ನಾಲ್ಕು ಆಕರ್ಷಕ ಮಾತುಗಳನ್ನಾಡುವ ‘ಇನ್ ಫ್ಲೂಯೆನ್ಸರ್‌ಗಳು’ ಇಂದು ಸ್ಥಳೀಯ ಮತ್ತು ಕಾರ್ಪೊರೇಟ್ ಉದ್ಯಮಗಳ ಪಾಲಿಗೆ ನೆಚ್ಚಿನ ಮಾಡೆಲ್ ಮತ್ತು ಜಾಹೀರಾತುದಾರರಾಗಿದ್ದಾರೆ.
ಮತ್ತೊಂದೆಡೆ, ಪತ್ರಿಕೋದ್ಯಮವು ಕಾರ್ಪೋರೇಟ್ ಉದ್ಯಮದಂತೆ ಅತ್ಯಂತ ದುಬಾರಿ ವ್ಯವಹಾರ ವಾಗಿದೆ. ನ್ಯೂಸ್‌ಪ್ರಿಂಟ್ ಬೆಲೆ ಏರಿಕೆ, ಅತ್ಯಾಧುನಿಕ ಮುದ್ರಣ ಯಂತ್ರಗಳ ನಿರ್ವಹಣೆ, ಸಾಗಾಟ ವೆಚ್ಚ ಮತ್ತು ಸಂಪಾದಕೀಯ ಮತ್ತು ಇತರ ಸಿಬ್ಬಂದಿಯ ವೇತನ ಇವೆಲ್ಲವನ್ನೂ ಸರಿದೂಗಿಸಿ ಒಂದು ಪತ್ರಿಕೆಯನ್ನು ಲಾಭದತ್ತ ಕೊಂಡೊಯ್ಯುವುದು ಇಂದು ಅಸಾಧ್ಯ ಎನ್ನುವ ವಾತಾವರಣ ವಿದೆ.
ನೈತಿಕತೆಯ ತೊಳಲಾಟ
ಹಣಕಾಸಿನ ಮುಗ್ಗಟ್ಟು ಪತ್ರಿಕಾರಂಗದ ನೈತಿಕತೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಆಳುವ ವರ್ಗವನ್ನು ಪ್ರಶ್ನಿಸಬೇಕಾದ, ತನಿಖಾ ವರದಿಗಳ ಮೂಲಕ ಭ್ರಷ್ಟಾಚಾರವನ್ನು ಬಯಲಿಗೆಳೆಯ ಬೇಕಾದ ಮಾಧ್ಯಮಗಳು ಇಂದು ಅಸ್ತಿತ್ವದ ಉಳಿವಿಗಾಗಿ ಸರಕಾರ ಅಥವಾ ಬಂಡವಾಳಶಾಹಿಗಳ ವಕ್ತಾರರಂತೆ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿವೆ.
ತ್ವರಿತವಾಗಿ ಪ್ರವರ್ಧಮಾನಕ್ಕೆ ಬರಬೇಕೆಂಬ ಹಪಾಹಪಿಯಲ್ಲಿ ಕೆಲವರು ಅಡ್ಡದಾರಿ ಹಿಡಿಯು ತ್ತಿರುವ ದೂರುಗಳು, ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮದ ಆರೋಪಗಳು ಈ ಪವಿತ್ರ ವೃತ್ತಿಗೆ ಮಸಿ ಬಳಿಯುತ್ತಿವೆ.
ಇಷ್ಟೇ ಸಮಸ್ಯೆಗಳಿದ್ದರೂ, ಪತ್ರಿಕೋದ್ಯಮದ ಸೆಳೆತ ಕಡಿಮೆಯಾಗಿಲ್ಲ. ಮಾಹಿತಿ ತಂತ್ರಜ್ಞಾನ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಸಿಗುವಂತಹ ಆಕರ್ಷಕ ವೇತನವಾಗಲಿ, ಉದ್ಯೋಗ ಭದ್ರತೆ ಯಾಗಲೀ ಈ ಕ್ಷೇತ್ರದಲ್ಲಿಲ್ಲ. ಆದರೂ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗಗಳಿಂದ ಪದವಿ ಪಡೆದು, ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಅದಮ್ಯ ಉತ್ಸಾಹದಿಂದ ಈ ವೃತ್ತಿಗೆ ಕಾಲಿಡುತ್ತಲೇ ಇದ್ದಾರೆ. ಇದು ಮಾಧ್ಯಮ ವೃತ್ತಿಗಿರುವ ಚುಂಬಕ ಶಕ್ತಿ.
ವೈದ್ಯಕೀಯ ಮತ್ತು ಪತ್ರಿಕಾರಂಗ ಎರಡೂ ಇಂದು ಕವಲುದಾರಿಯಲ್ಲಿವೆ. ಟೀಕೆಗಳು, ಲೋಪಗಳು ಮತ್ತು ವ್ಯವಸ್ಥೆಯ ಕೊರತೆಗಳ ನಡುವೆಯೂ ಈ ಎರಡೂ ವೃತ್ತಿಗಳು ಸಮಾಜಕ್ಕೆ ಅತ್ಯಂತ ಅನಿವಾರ್ಯವಾಗಿವೆ.
ಯಂತ್ರಗಳು ಎಷ್ಟೇ ಆಧುನಿಕವಾದರೂ, ಡಯಾಗ್ನೊಸ್ಟಿಕ್ ರಿಪೋರ್ಟ್‌ಗಳು ಎಷ್ಟೇ ನಿಖರವಾ ದರೂ, ರೋಗಿಗೆ ಸಾಂತ್ವನ ಹೇಳುವ, ರೋಗದ ಸ್ವರೂಪವನ್ನು ಅರ್ಥೈಸಿ ಧೈರ್ಯ ತುಂಬುವ ಒಬ್ಬ ವೈದ್ಯನ ಮಾನವೀಯ ಮುಖದ ಅಗತ್ಯವನ್ನು ಯಾವ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ’ ಕೂಡ ತುಂಬಲು ಸಾಧ್ಯವಿಲ್ಲ. ತಂತ್ರಜ್ಞಾನ ಕೇವಲ ಸಾಧನವಾಗಬೇಕೇ ಹೊರತು, ವೈದ್ಯನ ಜಾಗವನ್ನು ಆಕ್ರಮಿಸಬಾರದು. ಈ ವೃತ್ತಿಯನ್ನು ಕೃತಕತೆ, ಯಾಂತ್ರಿಕತೆಯತ್ತ ತಳ್ಳಬಾರದು.
ಅದೇ ರೀತಿ, ಸಾಮಾಜಿಕ ಮಾಧ್ಯಮಗಳು ಎಷ್ಟೇ ವೇಗವಾಗಿ ಮಾಹಿತಿಯನ್ನು ರವಾನಿಸಿದರೂ, ಅಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ, ಸುಳ್ಳು ಸುದ್ದಿಗಳ (ಫೇಕ್ ನ್ಯೂಸ್) ಜಾಲ ವನ್ನು ಭೇದಿಸುವ ಜವಾಬ್ದಾರಿ ಸಾಂಪ್ರದಾಯಿಕ ಪತ್ರಿಕಾರಂಗದ ಮೇಲೆಯೇ ಇದೆ. ಮನೆ ಮುಂದಿನ ಚರಂಡಿ ಕಟ್ಟಿಕೊಂಡಿರುವ, ಲೈಟ್ ಕಂಬ ಉರಿಯದಂತಹ ತೀರಾ ಸ್ಥಳೀಯ ಸಮಸ್ಯೆ ಗಳಿಂದ ಹಿಡಿದು, ಜಾಗತಿಕ ಮಟ್ಟದ ಯುದ್ಧದ ಒಳಮರ್ಮಗಳವರೆಗೆ ಸಮಗ್ರವಾಗಿ ವಿಶ್ಲೇಷಿಸಿ, ಆಡಳಿತ ಗಾರರ ಕಿವಿ ಹಿಂಡುವ ಕೆಲಸವನ್ನು ಇನ್ನು ಮುಂದೆಯೂ ಪತ್ರಿಕೆಗಳೇ ಮಾಡಬೇಕಾಗಿದೆ.
ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್‌ಗಳಿಗೆ ಸಮಾಜದ ಕಷ್ಟ-ಸುಖಗಳ ಅರಿವಿರುವುದಿಲ್ಲ; ಆ ಮಾನವೀಯ ಸ್ಪರ್ಶ ಇರುವುದು ನೈಜ ಪತ್ರಕರ್ತನ ಲೇಖನಿಗೆ ಮಾತ್ರ.
ಎಲ್ಲಾ ಸವಾಲುಗಳನ್ನು, ವ್ಯವಸ್ಥೆಯ ಹುಳುಕುಗಳನ್ನು ಮೀರಿ ವೈದ್ಯಕೀಯ ಕ್ಷೇತ್ರ ಮತ್ತು ಪತ್ರಿಕಾ ಕ್ಷೇತ್ರಗಳು ಜನಪರವಾಗಿ ಮುನ್ನಡೆಯ ಬೇಕೆನ್ನುವುದು ಪ್ರತಿಯೊಬ್ಬ ನಾಗರಿಕನ ಹಕ್ಕೊತ್ತಾಯ ಮತ್ತು ಅಭಿಲಾಷೆಯಾಗಿದೆ. ಲಾಭ-ನಷ್ಟಗಳ ಲೆಕ್ಕಾಚಾರದ ಆಚೆಗೆ, ಈ ವೃತ್ತಿಗಳ ಮೂಲಭೂತ ಉದ್ದೇಶ ‘ಮಾನವ ಕಲ್ಯಾಣ’ ಎಂಬುದನ್ನು ಈ ಎರಡೂ ರಂಗಗಳ ವೃತ್ತಿಪರರು ಮತ್ತು ಈ ಕ್ಷೇತ್ರ ಗಳನ್ನು ನಿಯಂತ್ರಿಸುವ ಸರಕಾರಗಳು ಮರೆಯಬಾರದು.
ವೈದ್ಯರ ದಿನ ಮತ್ತು ಪತ್ರಿಕಾ ದಿನದ ಈ ಸಂದರ್ಭದಲ್ಲಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ವೃತ್ತಿಧರ್ಮದ ಪಾಲನೆಗಾಗಿ ಹಗಲಿರುಳು ಶ್ರಮಿಸುತ್ತಿರುವ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಸಂಖ್ಯಾತ ಪ್ರಾಮಾಣಿಕ ವೈದ್ಯರಿಗೆ ಹಾಗೂ ಬಿಸಿಲು, ಮಳೆ, ಚಳಿ ಎನ್ನದೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಶ್ರಮಿಸುತ್ತಿರುವ ನಿಷ್ಠಾವಂತ ಪತ್ರಕರ್ತರಿಗೆ ಇಡೀ ಸಮಾಜದ ಪರವಾಗಿ ಒಂದು ಸೆಲ್ಯೂಟ್ ಸಲ್ಲಲೇಬೇಕು. ಸಮಾಜದ ಸ್ವಾಸ್ಥ್ಯ ಮತ್ತು ಪ್ರಜಾಪ್ರಭುತ್ವ ದ ಬೇರುಗಳು ಗಟ್ಟಿಯಾಗಿರಲು ಈ ಎರಡೂ ಸ್ತಂಭಗಳು ಶುದ್ಧವಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.