Lokesh Kayarga Column: ಸರಕಾರ ನಡೆಸಲು ಶಾಸಕರು, ಸಂಸದರೂ ಬೇಕಾಗಿಲ್ಲ, ಬಿಡಿ!
ನಮ್ಮ ಸಂವಿಧಾನದ 243-ಇ ಮತ್ತು 243-ಯು ವಿಧಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ (ಪಂಚಾಯತ್ ಮತ್ತು ಪೌರಾಡಳಿತ) ಅಧಿಕಾರಾವಧಿ ಮುಗಿಯುವುದಕ್ಕೆ ಕನಿಷ್ಠ ಆರು ತಿಂಗಳ ಮುಂಚಿತವಾಗಿಯೇ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿ, ಅವಧಿ ಮುಗಿಯುತ್ತಿದ್ದಂತೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಬೇಕಿರುವುದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ಆದರೆ ಕರ್ನಾಟಕದ ಇಂದಿನ ಚಿತ್ರಣವೇ ಬೇರೆ.
-
ಲೋಕಮತ
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸರಕಾರಕ್ಕೆ ಇಷ್ಟವಿಲ್ಲ ಬಿಡಿ! ಇದು 2023ರ ಮುನ್ನ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಕಾಂಗ್ರೆಸ್ ನಾಯಕರು ಆಡುತ್ತಿದ್ದ ಟೀಕೆಯ ಮಾತು. ಕಾಲ ಚಕ್ರ ಉರುಳಿದೆ, ಅಧಿಕಾರದ ಚುಕ್ಕಾಣಿ ಬದಲಾಗಿದೆ. ಆದರೆ ಅದೇ ಮಾತು, ಅದೇ ಆಕ್ರೋಶ ಈಗ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ನಾಯಕರ ಬಾಯಿಂದ ಕೇಳಿಬರುತ್ತಿದೆ. ಪಕ್ಷಗಳು ಬದಲಾಗಬಹುದು, ಆದರೆ ಅಧಿಕಾರ ಕೇಂದ್ರಿತ ಮನಸ್ಥಿತಿ ಬದಲಾಗುವುದಿಲ್ಲ ಎಂಬುದಕ್ಕೆ ಕರ್ನಾಟಕದ ಪ್ರಸ್ತುತ ರಾಜಕೀಯ ಮತ್ತು ಆಡಳಿತಾತ್ಮಕ ಸ್ಥಿತಿಯೇ ಸಾಕ್ಷಿ.
ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗಳು ಅದ್ಧೂರಿಯಾಗಿ ನಡೆದು ಹೋದವು. ಶಾಸಕರು, ಸಂಸದರು ಆಯ್ದು ಬಂದು ಮಂತ್ರಿಗಿರಿಗಳ ಹಂಚಿಕೆಯೂ ಮುಗಿಯಿತು. ಇದೀಗ ಹೊಸ ಮುಖ್ಯಮಂತ್ರಿ ಪೀಠ ಅಲಂಕರಿಸಿದ್ದಾರೆ. ಆದರೆ, ಪ್ರಜಾಪ್ರಭುತ್ವದ ನಿಜವಾದ ಬೇರುಗಳಾಗಿರುವ, ಗ್ರಾಮೀಣ ಮತ್ತು ನಗರ ಪ್ರದೇಶಗಳ ತಳಮಟ್ಟದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮಾತ್ರ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿವೆ. ಅಧಿಕಾರ ವಿಕೇಂದ್ರೀಕರಣವು ಮಹಾತ್ಮಾ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ದ ಕನಸಾಗಿತ್ತು.
ಸಂವಿಧಾನದ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಈ ಆಶಯಕ್ಕೆ ಕಾನೂನಿನ ರಕ್ಷಣೆಯನ್ನೂ ನೀಡಲಾಗಿದೆ. ಆದರೆ, ಇಂದಿನ ಆಡಳಿತಗಾರರಿಗೆ ಹಳ್ಳಿ ಯಿಂದ ಹಿಡಿದು ಬೆಂಗಳೂರಿನ ವಿಧಾನಸೌಧದವರೆಗಿನ ಇಂಚಿಂಚೂ ಅಧಿಕಾರ ತಮ್ಮದೇ ಮುಷ್ಠಿ ಯಲ್ಲಿರಬೇಕೆಂಬ ಹಪಾಹಪಿ ತೀವ್ರವಾಗಿ ಕಾಡುತ್ತಿರುವಂತೆ ಕಾಣುತ್ತಿದೆ.
ಇದನ್ನೂ ಓದಿ: Lokesh Kayarga Column: ಮನೆಯೇ ಮೊದಲ ಕ್ರೌರ್ಯದ ತಾಣ ಆಗದಿರಲಿ !
ನಮ್ಮ ಸಂವಿಧಾನದ 243-ಇ ಮತ್ತು 243-ಯು ವಿಧಿಗಳ ಪ್ರಕಾರ, ಸ್ಥಳಯ ಸಂಸ್ಥೆಗಳ (ಪಂಚಾ ಯತ್ ಮತ್ತು ಪೌರಾಡಳಿತ) ಅಧಿಕಾರಾವಧಿ ಮುಗಿಯುವುದಕ್ಕೆ ಕನಿಷ್ಠ ಆರು ತಿಂಗಳ ಮುಂಚಿತ ವಾಗಿಯೇ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿ, ಅವಧಿ ಮುಗಿಯುತ್ತಿದ್ದಂತೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಬೇಕಿರುವುದು ಸರಕಾರದ ಸಾಂವಿಧಾನಿಕ ಜವಾಬ್ದಾರಿ. ಆದರೆ ಕರ್ನಾಟಕದ ಇಂದಿನ ಚಿತ್ರಣವೇ ಬೇರೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 5,952ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಅವಧಿ ಮುಗಿದು ಹೋಗಿದೆ. 239 ತಾಲ್ಲೂಕು ಪಂಚಾಯಿತಿಗಳು (3,671 ಕ್ಷೇತ್ರಗಳು) ಹಾಗೂ 31 ಜಿಲ್ಲಾ ಪಂಚಾಯಿತಿ ಗಳು (1,130 ಕ್ಷೇತ್ರಗಳು) ಸರಿಸುಮಾರು 5 ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಬರಿದಾಗಿವೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿ ಸುಮಾರು 185 ನಗರ ಸ್ಥಳೀಯ ಸಂಸ್ಥೆಗಳ ಕಥೆಯೂ ಇದೇ ಆಗಿದೆ. ಹೊಸದಾಗಿ ರಚನೆಯಾದ ಬೆಂಗಳೂರಿನ ಐದು ಹೊಸ ಪಾಲಿಕೆಗಳು ಸೇರಿದಂತೆ ಮೈಸೂರು, ಶಿವಮೊಗ್ಗ, ಮಂಗಳೂರು, ತುಮಕೂರು ಮತ್ತು ದಾವಣಗೆರೆ ಮಹಾನಗರ ಪಾಲಿಕೆಗಳು ಚುನಾವಣೆ ಕಾಣದೆ ವರ್ಷಗಳೇ ಉರುಳಿವೆ. ವಿಧಾನಸಭೆ ಅಥವಾ ಲೋಕಸಭೆಯ ಅವಧಿ ಮುಗಿಯುವ ಮುನ್ನವೇ ಚುನಾವಣೆಗೆ ಸಿದ್ಧವಾಗುವ ಸರಕಾರಗಳು, ಸ್ಥಳೀಯ ಸಂಸ್ಥೆಗಳ ವಿಷಯ ಬಂದಾಗ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮುಂದೂಡಿಕೆ ತಂತ್ರ ಬಳಸುವುದು ಪ್ರಜಾಪ್ರಭುತ್ವದ ಅಣಕ.
ಕಾಲಹರಣ ತಂತ್ರ
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರಕಾರಗಳು ತೋರುತ್ತಿರುವ ನಿರಾಸಕ್ತಿಯನ್ನು ಕಂಡು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ಸರಣಿ ಚಾಟಿ ಬೀಸುತ್ತಲೇ ಬಂದಿವೆ. ಆದರೂ, ‘ಮೀಸಲಾತಿ ನಿಗದಿ’, ‘ವಾರ್ಡ್ ಮರುವಿಂಗಡಣೆ’, ‘ಜನಸಂಖ್ಯೆ ಲೆಕ್ಕಾಚಾರ’ ಎಂಬ ನೆಪಗಳನ್ನು ಮುಂದೊಡ್ಡಿ ಸರಕಾರ ಅಲ್ಲೂ, ಇಲ್ಲೂ ಪದೇ ಪದೇ ಕಾಲಾವಕಾಶ ಕೇಳುತ್ತಾ ಕಾಲಹರಣ ಮಾಡುತ್ತಲೇ ಬಂದಿದೆ. ನ್ಯಾಯಾಲಯದ ಅಂತಿಮ ಆದೇಶದ ಹೊರತಾಗಿಯೂ ಐದಾರು ವರ್ಷ ಚುನಾವಣೆ ಮುಂದೂಡಲು ಸಾಧ್ಯ ಎಂದು ನಮ್ಮ ಸರಕಾರವೇ ಉದಾಹರಣೆ ಸಹಿತ ಮಾಡಿ ತೋರಿಸಿದೆ. ಈ ಬಗ್ಗೆ ಬೀದಿಗಿಳಿದು ಹೋರಾಡಬೇಕಾದ ವಿರೋಧ ಪಕ್ಷಗಳೂ ಅನುಕೂಲಸಿಂಧು ರಾಜಕಾರಣದ ಮೊರೆ ಹೋಗಿವೆ.
ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗವು ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹೂಡಿದೆ. 12 ವಾರಗಳಲ್ಲಿ ಮೀಸಲು ಅಂತಿಮಗೊಳಿಸುವುದಾಗಿ 2023ರ ಡಿಸೆಂಬರ್ ನಲ್ಲಿ ಕೋರ್ಟ್‌ಗೆ ನೀಡಿದ್ದ ಭರವಸೆಯನ್ನು ಸರಕಾರ ಇನ್ನೂ ಈಡೇರಿಸಿಲ್ಲ. ಇದೇ ಜೂನ್ 5ರಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಅರುಣ್ ಅವರಿದ್ದ ಪೀಠದ ಮುಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಹಾಜರಾಗಿ, ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿಲ್ಲ ಎಂದು ಕ್ಷಮೆಯಾಚಿಸಿ, ಮೀಸಲು ನಿಗದಿ ಪ್ರಕ್ರಿಯೆ ಪೂರ್ಣ ಗೊಳಿಸಲು ಮತ್ತೆ 8 ವಾರಗಳ ಕಾಲಾವಕಾಶ ಪಡೆದಿದ್ದಾರೆ. ನ್ಯಾಯಾಲಯವು ಈ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.
ರಾಜ್ಯದ 6,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದರೂ, ಅವುಗಳಿಗೆ ಪ್ರವರ್ಗವಾರು ಮೀಸಲಾತಿಯನ್ನು 30 ದಿನಗಳಲ್ಲಿ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಗಡುವು ನೀಡಲಾಗಿದೆ. ಈ ಪ್ರಕ್ರಿಯೆಯೂ ವಿಳಂಬ ಹಾದಿಯಲ್ಲಿದ್ದು, ಹೈಕೋರ್ಟ್ ಇದರ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ಮೀಸಲು, ವಾರ್ಡ್ ವಿಂಗಡಣೆ ನೆಪ
ಬೆಂಗಳೂರಿನ ಹಳೆಯ ಬಿಬಿಎಂಪಿ ಅವಧಿ ಮುಗಿದಿದ್ದು 2020ರ ಸೆಪ್ಟೆಂಬರ್ 10ರಂದು. ಅಂದಿನಿಂದ ಇಂದಿನವರೆಗೂ ರಾಜಧಾನಿಯಲ್ಲಿ ಮೇಯರ್ ಆಗಲಿ, ಕಾರ್ಪೋರೇಟರ್‌ಗಳಾಗಲಿ ಇಲ್ಲ.ಪಾಲಿಕೆ ಅವಧಿ ಮುಗಿಯುವ ಒಂಬತ್ತು ತಿಂಗಳ ಮೊದಲೇ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಕಾರ‌್ಯದಲ್ಲಿ ಸಹಕರಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನವನ್ನು ನೀಡುವಂತೆ ಕೋರಿ ಚುನಾವಣೆ ಆಯೋಗವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅಸ್ತಿತ್ವದಲ್ಲಿರುವ 198 ವಾರ್ಡ್‌ಗಳಿಗೆ ಸಂವಿಧಾ ನದ 243ನೇ ವಿಧಿಯ ಪ್ರಕಾರ ಚುನಾವಣೆಗಳನ್ನು ನಡೆಸುವಂತೆ ಅಂದು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ರಾಜ್ಯಸರಕಾರ ಹೈಕೋರ್ಟ್ ಆದೇಶದ ಅದೇ ವರ್ಷ ಡಿಸೆಂಬರ್ 18ರಂದು ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಯಿತು. ಅಂದಿ ನಿಂದ ಇಂದಿನ ತನಕವೂ ವಾರ್ಡ್ ವಿಂಗಡಣೆ, ಮೀಸಲು ಪಟ್ಟಿ ತಯಾರಿ ಮತ್ತಿತರ ನೆಪಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನುಮಂದೂಡುತ್ತಲೇ ಬರಲಾಗಿದೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಿಬಿಎಂಪಿಯನ್ನು ಮರು ವಿಂಗಡಣೆ ಮಾಡಿ, ‘ಗ್ರೇಟರ್ ಬೆಂಗಳೂರು ಅಥಾರಿಟಿ’ (ಜಿಬಿಎ) ಅಡಿಯಲ್ಲಿ 5 ಹೊಸ ನಗರ ಪಾಲಿಕೆಗಳನ್ನು (369 ವಾರ್ಡ್‌ಗಳು) ಸೃಷ್ಟಿಸಲಾಯಿತು. ಆಯುಕ್ತರು, ಉಪ ಆಯುಕ್ತರ ಹೆಸರಿನಲ್ಲಿ ಅಧಿಕಾರಿಗಳ ದಂಡನ್ನು ತರಲಾಯಿತು. ಆದರೆ ಚುನಾವಣೆ ವಿಷಯ ಮತ್ತೆ ಮುಂದಕ್ಕೆ ಸಾಗುತ್ತಲೇ ಇದೆ. ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಈ ಹಿಂದೆ ಅಂತಿಮ ಆದೇಶ ನೀಡಿತ್ತು. ಆದರೆ ಸಿಬ್ಬಂದಿ ಕೊರತೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯ ನೆಪ ನೀಡಿ ಸರಕಾರ ಈ ಆದೇಶದಿಂದಲೂ ಪಾರಾಗಿದೆ. ಇದೀಗ 2026ರ ಆಗಸ್ಟ್ 31ರೊಳಗೆ ಕಡ್ಡಾಯವಾಗಿ ಚುನಾವಣೆ ಪ್ರಕ್ರಿಯೆ ಮುಗಿಸುವಂತೆ ಸುಪ್ರೀಂಕೋರ್ಟ್ ಡೆಡ್‌ಲೈನ್ ನೀಡಿದೆ. ಇದನ್ನೂ ಮೀರಲು ಸರಕಾರದ ಬಳಿ ಇನ್ನೆನಾದರೂ ನೆಪಗಳು ಇರಬಹುದು.
ಮೈಸೂರು, ಶಿವಮೊಗ್ಗ, ಮಂಗಳೂರು, ತುಮಕೂರು, ದಾವಣಗೆರೆ ಪಾಲಿಕೆಗಳೂ ಜನಪ್ರತಿನಿಧಿ ಗಳಿಲ್ಲದೆ ಅಧಿಕಾರಿಗಳ ದರ್ಬಾರ್‌ನಲ್ಲಿವೆ. ಚುನಾವಣೆ ಕೋರಿ ಈ ಪಾಲಿಕೆಗಳ ಪರವಾಗಿಯೂ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಸರಕಾರ ಕಾಲಕಾಲಕ್ಕೆ ನಾನಾ ನೆಪಗಳನ್ನು ಹೇಳುತ್ತಲೇ ಇವುಗಳ ಚುನಾವಣೆಯನ್ನು ಯಶಸ್ವಿಯಾಗಿ ಮುಂದೂಡಿಕೊಂಡು ಬಂದಿದೆ. ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆಗಳು ಅನಾಥವಾಗಿವೆ. ಜನರು ತಮ್ಮ ವಾರ್ಡ್‌ಗಳ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪದ ಸಮಸ್ಯೆಯನ್ನು ಅಧಿಕಾರಿಗಳ ಬಳಿ ಹೇಳಿದರೆ ಅವರು ಕ್ಯಾರೇ ಎನ್ನುತ್ತಿಲ್ಲ. ಶಾಸಕರು, ಸಂಸದರ ಬಳಿ ಹೋದರೆ ಭೇಟಿ ಅವಕಾಶವೇ ಕಷ್ಟ. ಜನರೂ ಈಗ ಸಮಸ್ಯೆಗಳ ನಡುವೆ ಹೊಂದಿಕೊಂಡು ಬಾಳುವುದನ್ನು ಕಲಿತಿದ್ದಾರೆ.
ಪಂಚಾಯಿತಿಯಿಂದ ಹಿಡಿದು ಮಹಾನಗರಪಾಲಿಕೆವರೆಗೆ ಸರಕಾರದಿಂದ ನೇಮಕಗೊಂಡ ಆಡಳಿತಾಧಿಕಾರಿಗಳು, ಆಯುಕ್ತರು ಮತ್ತು ನೋಡಲ್ ಅಧಿಕಾರಿಗಳು ಕಚೇರಿಗಳಲ್ಲಿ ಕೂತು ಫೈಲುಗಳನ್ನು ವಿಲೇವಾರಿ ಮಾಡುತ್ತಿದ್ದಾರೆಯೇ ಹೊರತು ಜನಸಾಮಾನ್ಯರ ಧ್ವನಿಗೆ ಸ್ಪಂದಿಸುತ್ತಿಲ್ಲ. ವಾರ್ಡ್ ಸಭೆಗಳು, ಗ್ರಾಮ ಸಭೆಗಳು ನಡೆಯುತ್ತಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಕಳಪೆ ಅಭಿವೃದ್ಧಿ ಕಾಮಗಾರಿಗಳನ್ನು ಯಾರು ಪ್ರಶ್ನಿಸುತ್ತಿಲ್ಲ. ವಿಕೇಂದ್ರೀಕರಣ ವ್ಯವಸ್ಥೆಯ ಮೂಲ ಆಶಯವೇ ಸಾರ್ವಜನಿಕರ ಸಹಭಾಗಿತ್ವ. ಆದರೆ ಇಂದು ಜನರೇ ವ್ಯವಸ್ಥೆಯಿಂದ ಹೊರ ಗುಳಿದಿದ್ದಾರೆ. ಸಾವಿರಾರು ಕೋಟಿ ರುಪಾಯಿ ಮೊತ್ತದ ಟೆಂಡರ್, ಕಾಮಗಾರಿಗಳನ್ನು ಬೆರಳೆಣಿಕೆ ಯಷ್ಟು ಮಂದಿ ತೀರ್ಮಾನಿಸುತ್ತಿದ್ದಾರೆ.
ತಮಗೆ ಅನುಕೂಲವಾಗುವಂತೆ ವಾರ್ಡ್‌ಗಳ ಗಡಿ ಗುರುತಿಸುವುದು ಮತ್ತು ಮೀಸಲಾತಿ ಪಟ್ಟಿ ಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳುವವರೆಗೂ ಚುನಾವಣೆಯನ್ನು ಮುಂದೂಡುತ್ತಾ ಹೋಗುವುದು ರಾಜಕೀಯ ಪಕ್ಷಗಳ ಹಳೆಯ ಚಾಳಿ. ಅಧಿಕಾರದಲ್ಲಿರುವ ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆಯಾದರೆ, ಅದು ಸರಕಾರದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬ ಭಯ. ಸ್ಥಳೀಯ ಮಟ್ಟದಲ್ಲಿ ವಾರ್ಡ್ ಸದಸ್ಯರು ಅಥವಾ ಪಂಚಾಯತ್ ಅಧ್ಯಕ್ಷರು ಬಲಿಷ್ಠರಾದರೆ, ತಮ್ಮ ಕ್ಷೇತ್ರಗಳ ಮೇಲಿನ ಹಿಡಿತ ತಪ್ಪಬಹುದು ಎಂಬ ಆತಂಕ ಕೆಲವು ಶಾಸಕರದ್ದು. ಅಧಿಕಾರಿಗಳ ಮೂಲಕವೇ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವುದು ಶಾಸಕರಿಗೂ, ಮಂತ್ರಿಗಳಿಗೂ ಸುಲಭದ ದಾರಿ. ಹೀಗಾಗಿ ಈ ನಿರ್ವಾತ ಸ್ಥಿತಿ ಪಕ್ಷಾತೀತವಾಗಿ ಎಲ್ಲರಿಗೂ ಇಷ್ಟ.
ಅಪಾಯಕಾರಿ ನಡೆ
ಈ ಇಡೀ ಪ್ರಹಸನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಮುನ್ಸೂಚನೆಯನ್ನು ನೀಡುತ್ತಿದೆ. ಸಂವಿಧಾನದ ಸ್ಪಷ್ಟ ನಿರ್ದೇಶನಗಳಿದ್ದರೂ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗಳು ಪದೇ ಪದೆ ಗಡುವು ನೀಡುತ್ತಿದ್ದರೂ, ಚುನಾಯಿತ ಸರಕಾರಗಳು ಕಾನೂನಿನ ಹುಳುಕುಗಳನ್ನು ಬಳಸಿಕೊಂಡು ಚುನಾವಣೆಯನ್ನು ವರ್ಷಗಟ್ಟಲೆ ಮುಂದೂಡಲು ಶಕ್ತವಾಗುತ್ತಿವೆ ಎಂದರೆ ಏನರ್ಥ? ಇದೇ ತರ್ಕವನ್ನು ಮುಂದುವರಿಸಿದರೆ, ಮುಂದೊಂದು ದಿನ ಕೇಂದ್ರದಲ್ಲೋ ಅಥವಾ ರಾಜ್ಯದಲ್ಲೋ ಅಧಿಕಾರದಲ್ಲಿರುವ ಪಕ್ಷ ತನಗೆ ರಾಜಕೀಯ ಪರಿಸ್ಥಿತಿ ಪೂರಕವಾಗಿಲ್ಲ ಎಂಬ ನೆಪ ಒಡ್ಡಿ, ಕ್ಷೇತ್ರ ಪುನರ್ವಿಂಗಡಣೆಯ ಕಾರಣ ನೀಡಿ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಗಳನ್ನೂ ಹೀಗೆಯೇ 4-5 ವರ್ಷ ಮುಂದೂಡಲು ಸಾಧ್ಯವಿಲ್ಲವೇ? ಸ್ಥಳೀಯ ಸಂಸ್ಥೆಗಳ ಚುನಾವಣೆ ಯನ್ನು ಕಡೆಗಣಿಸುವ ಮೂಲಕ ನಾವು ಅಂತಹದೊಂದು ಸರ್ವಾಧಿಕಾರಿ ಅಥವಾ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಮುನ್ನುಡಿ ಬರೆಯುತ್ತಿದ್ದೇವೆಯೇ ಎಂಬ ಗಂಭೀರ ಪ್ರಶ್ನೆ ಮೂಡುತ್ತದೆ.
ಸರಕಾರ ನಡೆಸಲು ಕೇವಲ ವಿಧಾನಸೌಧದಲ್ಲಿ ಕೂರುವ ಶಾಸಕರು, ದೆಹಲಿಗೆ ಹೋಗುವ ಸಂಸದ ರಷ್ಟೇ ಸಾಲದು. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದು ಗ್ರಾಮ ಪಂಚಾಯಿತಿಯ ಕಟ್ಟೆಯ ಮೇಲೆ ಮತ್ತು ನಗರದ ವಾರ್ಡ್‌ಗಳ ಬೀದಿಗಳಲ್ಲಿ. ಕರ್ನಾಟಕ ಸರಕಾರ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಬದಿಗಿಟ್ಟು, ನ್ಯಾಯಾಲಯಗಳ ತೀರ್ಪಿಗೆ ಗೌರವ ನೀಡಿ, ತಕ್ಷಣವೇ ಬಾಕಿ ಇರುವ ಎಲ್ಲಾ ಪಂಚಾಯತ್ ಹಾಗೂ ಪೌರಾಡಳಿತ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟಿಸಬೇಕಿದೆ. ಇಲ್ಲದಿದ್ದರೆ, ‘ಅಧಿಕಾರ ವಿಕೇಂದ್ರೀಕರಣ’ ಎಂಬುದು ಕೇವಲ ಭಾಷಣದ ಸರಕಾಗಿ, ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ಶಿಥಿಲವಾಗಲಿದೆ. ಸರಕಾರದ ಈ ‘ಚುನಾವಣಾ ವಿಮುಖ’ ಧೋರಣೆಯನ್ನು ತಡೆದು ಸಂವಿಧಾನದ ಆಶಯವನ್ನು ಜಾರಿಗೆ ತರಬೇಕಾದ ಹೊಣೆಗಾರಿಕೆ ನ್ಯಾಯಾಂಗ ಮತ್ತು ನಾಗರಿಕರಾದ ನಮ್ಮ ಮೇಲಿದೆ.