ವಿದ್ಯಮಾನ
ಭಾರತದ ಪೌರಾಣಿಕ ಪಾತ್ರಗಳಲ್ಲಿ ಶ್ರೀರಾಮನಷ್ಟು ಜನಪ್ರಿಯವಾದ ಪಾತ್ರ ಇನ್ನೊಂದಿಲ್ಲವೆಂತಲೇ ಹೇಳಬಹುದು. ಹಾಗೆಯೇ, ಶ್ರೀರಾಮನಷ್ಟು ವಿಮರ್ಶೆಗೊಳಗಾದ ಪಾತ್ರವೂ ಇನ್ನೊಂದಿರಲಿಕ್ಕಿಲ್ಲ, ಹಾಗಾಗಿಯೇ ಶ್ರೀರಾಮ ಭಾರತೀಯ ಮನಸ್ಸುಗಳಲ್ಲಿ ಇಂದಿಗೂ ರಾರಾಜಿಸುತ್ತಿದ್ದಾನೆ, ಯುಗಾಂತರ ಗಳಾದರೂ ತನ್ನ ಪ್ರಸ್ತುತತೆಯನ್ನು ಇನ್ನೂ ಉಳಿಸಿಕೊಂಡಿದ್ದೇನೆ.
ಇವೆಲ್ಲ ಹಾಗೆ ಸುಮ್ಮನೆ ಆಗಿದ್ದಲ್ಲ ಅಥವಾ ಕೇವಲ ದೈವಲೀಲೆಯಿಂದ ಆಗಿದ್ದಲ್ಲ. ಮಾನುಷ ಯತ್ನದಿಂದಲೇ ಆಗಿರುವಂಥದ್ದು ಎನ್ನುವುದನ್ನು ನಾವು ಗಮನಿಸಬೇಕು. ಶ್ರೀರಾಮನಿಗೆ ಒಪ್ಪುವ ಅನ್ವರ್ಥನಾಮವೆಂದರೆ ‘ಗುಣಧಾಮ’ ಎನ್ನವುದು. ಹೀಗೆಂದರೆ ಸಕಲ ಸದ್ಗುಣಗಳಿಗೆ ಆಶ್ರಯಭೂತ ನಾದವನು ಎಂದರ್ಥ.
ಮರ್ಯಾದಾ ಪುರುಷೋತ್ತಮ, ಧರ್ಮದ ಪ್ರತಿರೂಪ (‘ರಾಮೋ ವಿಗ್ರಹವಾನ್ ಧರ್ಮಃ’ ಎನ್ನುವ ಮಾರೀಚೋಕ್ತಿ) ಮುಂತಾದ ಕೀರ್ತಿಗಳು ಆತನ ಸುಸಂಸ್ಕೃತ ನಡುವಳಿಕೆಗಳಿಂದಲೇ ಆರ್ಜಿಸಿ ಕೊಂಡಂಥವುಗಳು.
ಶ್ರೀರಾಮ ನವಮಿಯ ಸುಸಂದರ್ಭದಲ್ಲಿ ಅನುಸರಣೀಯವಾಗಿರುವ ಶ್ರೀರಾಮ ಗುಣಗಳನ್ನು ಪರಿಭಾವಿಸಬೇಕು ಎನ್ನುವುದು ನನ್ನ ಸಂಕಲ್ಪವಾಗಿತ್ತು. ಇಡಿಯಾಗಿ ರಾಮಾಯಣವನ್ನು ಓದಲಾಗದ, ಓದಿದರೂ ಪೂರ್ತಿ ಅರ್ಥಮಾಡಿಕೊಳ್ಳಲಾಗದ, ಅಲ್ಲಿ ಇಲ್ಲಿ ಕೇಳಿ-ನೋಡಿ ಶ್ರೀರಾಮನ ಕುರಿತಾಗಿ ಅಭಿಮಾನ ಬೆಳೆಸಿಕೊಂಡಿರುವ ನಮ್ಮಂಥವರಿಗೆ ಘನೀಭೂತವಾದ ಶ್ರೀರಾಮಗುಣ ಘೃತವನ್ನು ಬಡಿಸುವವರಾರು? ಅವನನ್ನು ಮಾತ್ರ ನಮಗೆ ಪರಿಚಯಿಸುವವರಾರು ಎನ್ನುವ ವಿಚಾರ ಬಂದಾಗ, ನನಗೆ ನೆನಪಾಗಿದ್ದು, ದಿವಂಗತ ಡಾ.ಕೆ.ಎಸ್.ನಾರಾಯಣಾಚಾರ್ಯರ ‘ರಾಮಾಯಣ ಸಾಹಸ್ರೀ’ ಗ್ರಂಥಮಾಲಿಕೆ.
ಇದನ್ನೂ ಓದಿ: Vinayak V Bhat Column: ಸೋಲು-ಗೆಲುವು ತಾತ್ಕಾಲಿಕ, ಔದಾರ್ಯ-ಸೌಶೀಲ್ಯ ಶಾಶ್ವತ
ಈ ಮಧ್ಯದಲ್ಲಿ ಕನ್ನಡ ಸಾರಸ್ವತ ಲೋಕದ ಆಚಾರ್ಯ ಪುರುಷ ಡಿ.ವಿ.ಗುಂಡಪ್ಪನವರ ‘ಸಂಸ್ಕೃತಿ’ ಎನ್ನುವ ಪುಸ್ತಕವನ್ನು ಓದುವ ಮನಸಾಯ್ತು. ಅದರಲ್ಲಿ, ‘ಜಂಟ್ಲ್‌ಮನ್’ ಯಾರು ಎನ್ನುವುದನ್ನು ಡಿವಿಜಿಯವರು ವಿಶ್ಲೇಷಿಸುತ್ತಾ, ಶ್ರೀಮದ್ರಾಮಾಯಣದಲ್ಲಿ ಆದಿಕವಿ ವಾಲ್ಮೀಕಿ ತೋರಿಸಿದ ಶ್ರೀರಾಮಗುಣಗಳ ವರ್ಣನೆಯನ್ನೇ ಮಾಡಿದ್ದಾರೆ.
ಅವರ ಪ್ರಕಾರ ಶ್ರೀರಾಮನೇ ಕಾಲಾತೀತವಾದ ‘ಜಂಟ್ಲ್‌ಮನ್’ ಆಗಿದ್ದಾನೆ. ಅದಕ್ಕೆ ಅವರು ಪುಸ್ತಕ ದಲ್ಲಿ ಅನೇಕ ಆಧಾರ ವಾಕ್ಯಗಳನ್ನೂ ಪುಷ್ಕಳವಾಗಿ ಒದಗಿಸಿದ್ದಾರೆ. ತಾತ್ವಿಕಾಗಿ ಭಿನ್ನತೆ ಇಲ್ಲದಿ ದ್ದರೂ, ಡಿವಿಜಿಯವರು ಡಾ.ಕೆ.ಎಸ್.ನಾರಾಯಣಾಚಾರ್ಯರಿಗಿಂತ ಸ್ವಲ್ಪ ವಿಭಿನ್ನವಾಗಿ ಇಲ್ಲಿ ವಿಮರ್ಶಿಸಿದ್ದಾರೆ. ಡಿವಿಜಿಯವರು ಕಂಡ ‘ಜಂಟ್ಲ್‌ಮನ್’ ಶ್ರೀರಾಮನನ್ನು ಹಾಗೂ ಅವನ ಗುಣ ವಿಶೇಷಗಳನ್ನು ಅವರದೇ ಭಾಷೆಯಲ್ಲಿ (ಸಂಕ್ಷಿಪ್ತವಾಗಿಯಾದರೂ) ನಿಮಗೆ ಹೇಳುವ ಪ್ರಯತ್ನ ನನ್ನದು.
ಹಾಗಾದರೆ ಸುಸಂಸ್ಕೃತನೆಂಥವನು ಎಂದು ಕೇಳುವುದಾದರೆ 5 ಲಕ್ಷಣಗಳನ್ನು ಹೇಳಬಹುದು. ಆತನಿಗೆ ಸ್ವಸ್ಥಾನ ಪರಿಜ್ಞಾನ, ಪರೇಂಗಿತ ಪರಿಗ್ರಹಣ. ಸ್ವಾರ್ಥ ನಿಯಮನ, ಸಮನ್ವಯ ದೃಷ್ಟಿ ಹಾಗೂ ಸರಸತೆ ಎನ್ನುವ ಐದು ಗುಣಗಳಿರಬೇಕಾಗುತ್ತದೆ. ಈ ಐದೂ ಗುಣಗಳನ್ನು ನಾವು ಶ್ರೀರಾಮ ನಲ್ಲಿ ಬಹುವಾಗಿ ಕಾಣಬಹುದು.
ಸುಸಂಸ್ಕೃತನು ತನ್ನ ಸುತ್ತಮುತ್ತಣವರ ಮಾತುಕತೆಗಳಲ್ಲಿಯೂ, ನಡವಳಿಕೆಗಳಲ್ಲಿಯೂ ಇರುವ ವಕ್ರವಿಕಾರಗಳ ವಿಷಯದಲ್ಲಿ ಸಮ್ಮತಿಪಟ್ಟಿರುವವನಲ್ಲ, ಆದರೆ ಅವರನ್ನು ತಿದ್ದಬೇಕೆಂದು ದುಡುಕುವವನೂ ಅಲ್ಲ. ಅವನು ಯಾವಾಗಲೂ ತನ್ನನ್ನು ತಾನು ತಿದ್ದಿಕೊಳ್ಳುವ ಮತ್ತು ತನಗೆ ಬೇಕಾದವರನ್ನು ಮಾತ್ರ ತಿದ್ದುವ ಯೋಚನೆಯಲ್ಲಿಯೇ ಇರುತ್ತಾನೆ. ಆದರೆ ಆ ತಿದ್ದುವ ಪರಿಪಾಟಿ ಯಲ್ಲಿ ಒರಟಾಟವಿರದು.
ಹಠದ ಕೂಗು ಅವನ ಬಾಯಿಂದ ಹೊರಡದು, ಕೆಂಗಣ್ಣೂ, ಕಡಿಹಲ್ಲೂ ಅವನ ಮುಖದಲ್ಲಿ ತೋರವು. ಅಸಮ್ಮತಿ ತಿಳಿಸುವುದು ಅವಶ್ಯವಾದಾಗ, ಬಿಚ್ಚುನುಡಿ ಅನಿವಾರ್ಯವಾದಾಗ, ಅವನು ಎಷ್ಟು ಮಟ್ಟಿನ ಬಿಸಿ ಬಿರುಸುಗಳು ಸಾಕಾದಾವೋ ಅಷ್ಟನ್ನು ಮಾತ್ರ ತೋರಿಸಿಯಾನೇ ಹೊರತು ಮನಸ್ವೀ ರೇಗಾಟವಾಡನು ಮತ್ತು ತನ್ನ ಮಾತಿನಿಂದಾಗಲಿ ನಡತೆಯಿಂದಾಗಲಿ ಆದ ನೋವನ್ನು ಬೇಗ ಮರೆಯಿಸುತ್ತಾನೆ.
ಮಗುವನ್ನು ಶಿಕ್ಷಿಸುವಲ್ಲಿ ತಾಯಿ ಹೇಗೆ ನಡೆದಾಳೋ, ಗಂಡನನ್ನು ದಂಡಿಸುವಲ್ಲಿ ಸಾಧ್ವಿ ಹೇಗೆ ನಡೆದಾಳೋ, ಹಾಗೆ ಲೋಕವೃತ್ತಕ್ಕೆ ತನ್ನ ಪ್ರತಿವೃತ್ತದಿಂದ ಉತ್ತರ ಕೊಡುವವನು ಸುಸಂಸ್ಕೃತನು. ಇತರರ ಗಟ್ಟಿಗಂಟಲು ಅವನಿಂದ ಬೊಬ್ಬೆ ಹಾಕಿಸದು; ಇತರರ ಕೆಟ್ಟಮೋರೆ ಅವನ ಪ್ರಸನ್ನತೆ ಯನ್ನು ಹಾರಿಸದು ಎನ್ನುತ್ತಾರೆ ಗುಂಡಪ್ಪನವರು.
ಭವಭೂತಿಯ ‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ, ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಮರ್ಹತಿ’ ಎನ್ನುವ ವಾಕ್ಯವನ್ನು ಸ್ಮರಿಸುತ್ತಾ ಸುಸಂಸ್ಕೃತನೊಬ್ಬ ಹೇಗಿರುತ್ತಾನೆ ಎನ್ನುವುದನ್ನು ತಿಳುಹುತ್ತಾರೆ.
ವಾಲ್ಮೀಕಿಗಳೂ ಶ್ರೀರಾಮನ ವಿಷಯದಲ್ಲಿ ಇದೇ ಮಾತನ್ನು ಬೇರೆ ಶಬ್ದಗಳಿಂದ ವಿವರಿಸುತ್ತಾರೆ. ‘ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ ಪ್ರಿಯದರ್ಶನಃ ಕಾಲಾಗ್ನಿ ಸದೃಶಃ ಕ್ರೋಧೇ ಕ್ಷಮಯಾ ಪೃಥಿವೀ ಸಮಃ’- ಅಂದರೆ ಶ್ರೀರಾಮನು ಪರಾಕ್ರಮದಲ್ಲಿ ವಿಷ್ಣುವಿನಂಥವನು; ಆದರೂ ಕಣ್ಣಿ ಗೆ ಚಂದ್ರನಂತೆ ತಂಪು. ಕೋಪಗೊಂಡಾಗ ಅನನು ಪ್ರಲಯಾಗ್ನಿ ಆದರೆ ಕ್ಷಮಿಸುವುದರಲ್ಲಿ ಭೂಮಾತೆಯಂತೆ.
ಶ್ರೀರಾಮನ ವಿಷಯದಲ್ಲಿ ವಾಲ್ಮೀಕಿಗಳು ತೋರಿಸಿದ, ಹೇಳಲೇಬೇಕಾದ ಒಂದಿಷ್ಟು ಆದರ್ಶಗಳನ್ನು ಗುಂಡಪ್ಪನವರು ಪಟ್ಟಿ ಮಾಡುತ್ತಾರೆ: ಆತನು ಯಾವಾಗಲೂ ಶಾಂತಸ್ವಭಾವದವನು. ಸಂಭಾಷಣೆ ಯನ್ನು ತಾನೇ ಮೊದಲು ಪ್ರಾರಂಭ ಮಾಡುವವನು ಮತ್ತು ಮೃದುವಾಗಿ ಮಾತಾಡುವವನು. ಬಿರುಸಾಗಿ ಮಾತನಾಡಿದವರಿಗೆ ಮರುಬಿರುಸನ್ನು ನುಡಿಯದವನು.
ಎಂದೋ ತನಗೆ ಮಾಡಿದ್ದ ಯಾವುದೋ ಒಂದು ಉಪಕಾರವನ್ನು ಯಾವಾಗಲೂ ನೆನಪಿಸಿಕೊಂಡು ಸಂತೋಷಷಡುತ್ತಾನೆ. ನೂರು ಅಪಕಾರಗಳು ತನಗಾಗಿದ್ದರೂ ಅದನ್ನು ನೆನೆಯುವುದೇ ಇಲ್ಲ; ಆತನು ದೀನರಲ್ಲಿ ಸದಾ ಸಹಾನುಭೂತಿಯುಳ್ಳವನು, ಧರ್ಮವನ್ನ ತಿಳಿದವನು, ತನ್ನ ಮೇಲೆ ಹಿಡಿತವಿರಿಸಿಕೊಂಡವನು, ಶುಚಿಯುಳ್ಳವನು. ಕುಲಕ್ಕೆ ತಕ್ಕ ಬುದ್ಧಿ ಸಂಪತ್ತುಳ್ಳವನು, ತನ್ನ ಕ್ಷತ್ರಿಯ ಧರ್ಮವನ್ನು ಗೌರವಿಸುವವನು. ಶುಭ ಗುಣಗಳಿಗೆ ಆಕರಪ್ರಾಯನು, ಸಾಧು, ಧೀರನು, ಸತ್ಯಭಾಷಿ, ಸರಳನು. ಧರ್ಮಾರ್ಥಗಳನ್ನು ಬಲ್ಲವರಿಂದ ಕಲಿತವನು.
ಧರ್ಮ ಅರ್ಥ ಕಾಮಗಳೆಂಬ ಪುರುಷಾರ್ಥಗಳ ತತ್ವವನ್ನರಿತವನು, ಸ್ಮೃತಿಶಕ್ತಿ ಪ್ರತಿಭಾಶಕ್ತಿ ಸಂಪನ್ನನು. ಲೋಕನೀತಿಗಳಲ್ಲಿಯೂ ಸಮಾಜದ ಸಂಕೇತ ಸಂಪ್ರದಾಯಗಳಲ್ಲಿಯೂ ಅವುಗಳ ಮರ್ಮವರಿತು ನಡೆಯುವವನು. ನಿಶ್ಚಲವಾದ ಭಗವದ್ಭಕ್ತಿಯುಳ್ಳವನು, ಸ್ಥಿರವಾದ ವಿವೇಕ ವಿಜ್ಞಾನಗಳುಳ್ಳವನು, ಕೆಟ್ಟದ್ದನ್ನೊಪ್ಪದವನು ಹಾಗೂ ಕೆಟ್ಟದ್ದನನ್ನು ನುಡಿಯದವನು.
ಸೋಮಾರಿತನವಿಲ್ಲದವನು, ಶಾಸ್ತ್ರ ನಿಪುಣನು, ಕೃತ್ಯಾಕೃತ್ಯ ವಿವೇಕಿ, ಇತರರ ಅಂತರಂಗವನ್ನು ಊಹಿಸಿ ಕಂಡವನು. ದಂಡಿಸುವುದರಲ್ಲಿಯೂ ಅನುಗ್ರಹಿಸುವುದರಲ್ಲಿಯೂ ನ್ಯಾಯವನ್ನು ನಡೆಸಲು ಶಕ್ತನು. ಜನರನ್ನು ಸಂಪಾದಿಸಿಕೊಳ್ಳುವುದರಲ್ಲಿಯೂ ಹದ್ದಿನಲ್ಲಿರಿಸುವುದರಲ್ಲಿಯೂ ಅದಕ್ಕೆ ತಕ್ಕ ಸ್ಥಾನ, ಕಾಲ ಸಂದರ್ಭಗಳನ್ನರಿತವನು.
ಆದಾಯದ ಕೆಲಸಗಳಲ್ಲಿ ಉಪಾಯಶಾಲಿ, ವ್ಯಯವಿಚಾರವನ್ನು ನೋಡಿಕೊಳ್ಳುವುದರಲ್ಲಿ ಜಾಗರೂಕನು. ಶಾಸ್ತ್ರಜ್ಞ ಸಭೆಯಲ್ಲಿಯೂ, ಪಂಡಿತ ಪಾಮರರು ಕಲಿತುಕೊಂಡಿರುವಲ್ಲಿಯೂ ಶ್ರೇಷ್ಠತೆ ಪಡೆದಿರುವವನು. ಅರ್ಥ (ಧನ)ವನ್ನೂ ಧರ್ಮವನ್ನೂ ಶೇಖರ ಮಾಡಿ ಸುಖಪಡುವು ದರಲ್ಲಿ ಆಲಸ್ಯವಿಲ್ಲದೆ ದಕ್ಷನಾಗಿರುವವನು.
ಹೊಟ್ಟಿ ಕಿಚ್ಚಿಲ್ಲದವನು, ಕೋಪವನ್ನು ಗೆದ್ದವನು, ಗರ್ವವಿಲ್ಲದವನು, ಅನ್ಯರ ಅಭಿವೃದ್ಧಿಗೆ ಕರುಬ ದವನು. ಯಾವ ಪ್ರಾಣಿಯನ್ನೂ ಅವಮಾನ ಪಡಿಸದವನು, ಧರ್ಮತತ್ತ್ವವನ್ನೂ ತನ್ನ ಪ್ರತಿಜ್ಞೆ ಯನ್ನೂ ಮರೆತು ಆಯಾ ಕ್ಷಣಕ್ಕೆ ಸರಿಯೆನಿಸಿದಂತೆ ನಡೆಯುವವನಲ್ಲ. ನಿರಹಂಕಾರ, ವಿನಯ, ಸೌಜನ್ಯ, ಪರೇಂಗಿತಚಿಂತನೆ, ಲೋಕಹಿತದೃಷ್ಟಿ, ತತ್ವವಿವೇಕ, ಅಧ್ಯಾತ್ಮ ನಿಷ್ಠೆ ಇವೇ ಮೊದಲಾದ ಗುಣ ಶೀಲ ಸೌಂದರ್ಯಗಳೆಲ್ಲವೂ ಶ್ರೀರಾಮನಲ್ಲಿ ಅಡಕವಾಗಿವೆ.
ಸಂಸ್ಕೃತಿಯ ಸ್ವರೂಪವೆಂಥಂಬುದನ್ನು ಮನಗಾಣಬಯಸುವವರು ಆದಿಕವಿ ಚಿತ್ರಿಸಿರುವ ಶ್ರೀರಾಮನ ಚಿತ್ರಪಟವನ್ನು ನೋಡುವಲ್ಲಿ ಮನನಮಾಡಲಿ ಎನ್ನುತ್ತಾರೆ ಡಿವಿಜಿ. ಇಂಥಾ ಗುಣರಾಶಿ ಯುಳ್ಳವನಾದ ಆದರ್ಶಪುರುಷ ಶ್ರೀರಾಮನ ನಾಮವನ್ನು ನೆರೆ ನಂಬಿ, ‘ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎಂದು ಸಾಧನೆ ಮಾಡುವ ಮಹನೀಯರು ಗಳು ನಮ್ಮ ದೇಶದಲ್ಲಿ ಅನೇಕ ಜನ ಆಗಿಹೋಗಿದ್ದಾರೆ ಹಾಗೂ ಈಗಲೂ ಇದ್ದಾರೆ.
ಶ್ರೀರಾಮನಾಮದ ಮಹಿಮೆಯನ್ನು ಹೇಳುವ ಕಥೆಯೊಂದಿದೆ: ದಕ್ಷಿಣ ದೇಶದ ಪದ್ಮನಾಭ ಪಂಡಿತ ಎನ್ನುವವರು ಶ್ರೀ ಕ್ಷೇತ್ರ ಕಾಶಿಯಲ್ಲಿ ನಾಮನಿಷ್ಠ ಸಂತ ಕಬೀರದಾಸರ ಶಿಷ್ಯರಾಗಿ ಅವರ ಸೇವೆ ಮಾಡಿಕೊಂಡಿದ್ದರು. ಪದ್ಮನಾಭ ಪಂಡಿತರು ಒಮ್ಮೆ ಗಂಗಾ ತಟದಲ್ಲಿ ಸಂಚರಿಸುತ್ತಿದ್ದಾಗ, ಭಯಂಕರ ಕುಷ್ಟರೋಗದಿಂದ ಬಳಲುತ್ತಿದ್ದವನೊಬ್ಬ ರೋಗಮುಕ್ತಿಗೆ ಏನು ಮಾಡುವುದು ಎಂದು ತಿಳಿಯದೇ ರೋದಿಸುತ್ತಿದ್ದ.
ಶ್ರೀನಾಮ ಸಾಧಕರಾಗಿದ್ದ ಪದ್ಮನಾಭ ಪಂಡಿತರಿಗೆ ಅವನ ಮೇಲೆ ಕನಿಕರವುಂಟಾಗಿ, ಮೂರು ಬಾರಿ ಶ್ರೀರಾಮ ತಾರಕ ಮಂತ್ರವನ್ನು ಜಪಿಸುತ್ತಾ ಗಂಗೆಯಲ್ಲಿ ಮುಳುಗೇಳುವ ಪರಿಹಾರವನ್ನು ಆತನಿಗೆ ಸೂಚಿಸಿದರು. ಹೀಗೆ ಮಾಡುವುದರಿಂದ ನಿನಗೆ ಖಂಡಿತ ರೋಗದಿಂದ ಸಂಪೂರ್ಣ ಮುಕ್ತಿಯಾಗು ತ್ತದೆ ಎಂದರು. ಪದ್ಮನಾಭ ಪಂಡಿತರ ಸೂಚನೆಯಂತೆ ಮೂರು ಬಾರಿ ತಾರಕಮಂತ್ರ ಯುಕ್ತವಾಗಿ ಗಂಗೆಯಲ್ಲಿ ಮುಳುಗೆದ್ದ ರೋಗಿಗೆ ಕ್ಷಣಾರ್ಧದಲ್ಲಿ ಮೈಮೇಲಿನ ಕುಷ್ಠವೆ ಸಂಪೂರ್ಣ ಮಾಯವಾಗಿ ಹೋಯಿತು.
ಗುರುಗಳಾದ ಕಬೀರರಲ್ಲಿಗೆ ಬಂದ ಪದ್ಮನಾಭ ಪಂಡಿತರು ಗಂಗಾತಟದಲ್ಲಿ ನಡೆದ ಘಟನೆಯನ್ನೆ ಉತ್ಸಾಹದಿಂದ ವಿವರಿಸಿದರು. ಕುಷ್ಠರೋಗಿಯ ಮೇಲೆ ತಾರಕಮಂತ್ರ ಮಾಡಿದ ಪವಾಡವನ್ನು ಕಬೀರರಿಗೆ ವರ್ಣಿಸಿದರು. ಈ ಘಟನೆಯಿಂದ ಸಂತೋಷಪಡುವ ಬದಲು ಕಬೀರದಾಸರು ಪಂಡಿತರ ಕುರಿತು ಸ್ವಲ್ಪ ರುಷ್ಠರೇ ಆದರು. ತಾನು ಸಿದ್ಧಿಸಿಕೊಂಡಿದ್ದ ನಾಮದ ಮಹಿಮೆಯನ್ನು ಅನ್ಯರ ಸಂಕಟ ಪರಿಹಾರಕ್ಕೆ ಪ್ರಕಟ ಮಾಡಿದ್ದರಿಂದ, ಗುರುಗಳಾದ ಕಬೀರರು ಮೆಚ್ಚುಗೆ ಸೂಚಿಸುತ್ತಾರೆ ಎಂದುಕೊಂಡಿದ್ದ ಪದ್ಮನಾಭ ಪಂಡಿತರಿಗೆ ಸ್ವಾಭಾವಿಕವಾಗಿ ನಿರಾಸೆಯಾಯಿತು.
ಆಗ ಪದ್ಮನಾಭ ಪಂಡಿತರಿಗೆ ಕಬೀರರು ಹೇಳಿದ್ದು, ಶ್ರೀರಾಮ ತಾರಕ ಮಂತ್ರವನ್ನು ಕೇವಲ ಒಂದು ಬಾರಿ ಜಪಿಸಿದರೂ ಈ ಕ್ಷುಲ್ಲಕ ರೋಗ ನಿವಾರಣೆಯಾಗುತ್ತಿತ್ತು. ಹಾಗೆ ನೋಡಿದರೆ, ಮೂರು ಬಾರಿ ಏಕೆ? ಒಂದು ಸಲವೂ ಪಠಿಸುವ ಅಗತ್ಯವಿರಲಿಲ್ಲ, ಕೇವಲ ಶ್ರೀನಾಮದ ಆಭಾಸವಾದರೂ (ನಾಮಾಭಾಸ- ಮರ ಎಂದರೂ ಅದರಲ್ಲಿ ರಾಮ ಶಬ್ಧವಿರುವುದರಿಂದ ಅಷ್ಟೇ ಸಾಕಾಗುತ್ತದೆ) ಮನುಷ್ಯನ ಇಷ್ಟಾರ್ಥ ಸಿದ್ಧಿಯಾಗುವುದರಲ್ಲಿ ಸಂಶಯವಿರುವುದಿಲ್ಲ.
ಶ್ರೀನಾಮಕ್ಕೆ ಅಷ್ಟು ಶಕ್ತಿ ಇರುವಾಗ, ನೀನು ಅವರಿಗೆ ಮೂರು ಬಾರಿ ಜಪಿಸುವಂತೆ ಹೇಳಿ ಶ್ರೀನಾಮಕ್ಕೇ ಅವಮಾನ ಮಾಡಿದ ಹಾಗಾಯ್ತು ಎಂದರಂತೆ. ಈ ಕುರಿತು ಏಕಪಕ್ಷದೃಷ್ಟಿ ಸರಿಯಲ್ಲ, ಶ್ರೀರಾಮಗುಣಗಳ ಜೀವನಾನ್ವಯವಾಗದ ಹೊರತು, ಮಾಡಬಾರದ ಅನಾಚಾರಗಳನ್ನು ಮಡುತ್ತಾ ಸುಮ್ಮನೇ ನಾಮಜಪ ಮಾಡುವುದರಿಂದ ಏನೂ ಪ್ರಯೋಜನವಾಗದು ಎನ್ನುವುದು ಡಿವಿಜಿಯವರ ಅಭಿಮತ. ಅದಕ್ಕೆ ಪುಷ್ಟೀಕರಣವಾಗಿ ಉತ್ತಮ ಉದಹರಣೆಯೊಂದನ್ನು ಅವರು ನೀಡುತ್ತಾರೆ.
ಹಲವು ವರ್ಷಗಳ ಹಿಂದೆ ಉತ್ತರದೇಶದಲ್ಲಿ ಲವಣಾನಂದ ಸ್ವಾಮಿಗಳೆಂಬವರು ಒಬ್ಬರಿದ್ದರು. ಅವರ ವಾದವೇನೆಂದರೆ, ಉಪ್ಪೊಂದೇ ಲೋಕದಲ್ಲಿ ಸಂಜೀವನಿ; ಉಪ್ಪು ತಿನ್ನುತ್ತಿದ್ದರೆ ಎಲ್ಲ ವ್ಯಾಧಿಗಳೂ ವಾಸಿಯಾಗುತ್ತವೆ; ಬೇರೆ ಯಾವ ಔಷಧವೂ ಕೆಲಸಕ್ಕೆ ಬಾರದು’ ಎಂಬುದು. ಹಾಗೆಯೇ ರಾಮಭಕ್ತರು ಕೆಲವರಿರುತ್ತಾರೆ.
ನೀವು ಯಾವ ತಪ್ಪುಮಾಡಿರಲಿ, ನಿಮಗೆ ಏನು ಬೇಕಾಗಿರಲಿ, ‘ರಾ’ ‘ಮ’ ಈ ಎರಡು ಅಕ್ಷರಗಳನ್ನು ನುಡಿದುಬಿಟ್ಟರೆ ಎಲ್ಲ ದುಃಖಗಳೂ ತೊಲಗಿ ಎಲ್ಲ ಇಷ್ಟಗಳೂ ಕೈಗೂಡುತ್ತವೆ. ಹೀಗೆಂದು ಡಾಂಭಿಕ ರಾಮನಾಮೋಪಾಸಕರ ವಾದ. ಕವಿಯೊಬ್ಬ ಹೀಗೆ ಹೇಳಿದ್ದಾನೆ ‘ವನೇಚರಾಮೋ ವಸುಚಾಪಹರಾಮಃ ನದೀಂತರಾಮೋ ನಭಯಂ ಸ್ಮರಾಮಃ, ಇತೀರಯಂತೋಪಿ ವನೇ ಕಿರಾತಾಃ ಮುಕ್ತಿಂಗತಾ ರಾಮಪದಾನುಸಂಗಾತ್’ ಕಾಡಿನಲ್ಲಿ ಬೇಡರು ಹೀಗೆ ಹೇಳಿಕೊಂಡು ಹೋಗುತ್ತಿದ್ದರು: ಅಡವಿಯಲ್ಲಿ (ಚರಾಮಃ) ತಿರುಗಾಡುತ್ತಿರೋಣ; ಸಿಕ್ಕಿದ ಪ್ರಯಾಣಿಕರ ಒಡವೆ ವಸ್ತ್ರಗಳನ್ನು (ಅಪಹರಾಮಃ) ಆಪಹರಿಸೋಣ, ಆಮೇಲೆ ನದಿಯನ್ನು (ತರಾಮಃ) ದಾಟಿಬಿಡೋಣ. ಆಗ ನಮಗೆ ಭಯದ (ಸ್ಮರಾಮಃ) ಚಿಂತೆ ಬೇಕಿಲ್ಲ.
ಹೀಗೆಂದು ಹೇಳುತ್ತಾ ನಡೆಯುತ್ತಿದ್ದ ಚೋರರೂ ‘ರಾಮ ರಾಮ’ ಎಂಬ ಪದ ಬಾಯಲ್ಲಿ ನುಡಿಯು ತ್ತಿದ್ದ ಕಾರಣ ಅವರಿಗೆ ಮುಕ್ತಿದೊರೆಯಿತು ಎನ್ನುವುದು ಈ ಶ್ಲೋಕದ ತಾತ್ಪರ್ಯ. ಇದು ರಾಮಭಕ್ತಿ ಯ ಅತಿರೇಕ. ಈ ಪದ್ಯವನ್ನು ಕೇವಲ ಶಬ್ದ ಚಮತ್ಕಾರದ ದೃಷ್ಟಿಯಿಂದ ಮೆಚ್ಚಿಕೊಳ್ಳಬೇಕಾದದ್ದೇ ಸರಿ ಆದರೆ, ಮುಕ್ತಿಗೆ ನಿರ್ವಿಚಾರಭಕ್ತಿಯಷ್ಟೇ ಸಾಲುತ್ತದೆಯೆ? ವಿಚಾರವೂ ತದನುಸಾರಿಯಾದ ಜೀವವರ್ತನೆಯೂ ಅಲ್ಲಿ ಸೇರಬೇಡವೆ? ಎನ್ನುವುದು ಡಿವಿಜಿಯವರ ಚಿಂತನೆ.
ರಾಮನ ನಾಮಕೀರ್ತನೆ ಸುಲಭದ್ದು, ಕಿವಿಗೂ ಇಂಪು, ಅವನ ವನವಾಸ, ಸತ್ಯನಿಷ್ಠೆ, ರಾಜಧರ್ಮದ ಪಾಲನೆ ಊಹೆಗೂ ನಿಲುಕದ್ದು. ಆದ್ದರಿಂದ ಮನಸ್ಸು ಸುಲಭವಾದ ಶ್ರೀರಾಮ ಭಜನೆಯೆಡೆಗೆ ಹೋಗುತ್ತದೆ; ರಾಮನ ದೃಢ ಪ್ರತಿಜ್ಞೆಯನ್ನು ಜ್ಞಾಪಕಕ್ಕೂ ತಂದುಕೊಳ್ಳುವುದಿಲ್ಲ.
ಯಾವುದು ಸುಲಭವೋ ಅದನ್ನು ಗ್ರಹಿಸುವುದು ಸ್ವಾಭಾವಿಕ. ಪುಣ್ಯದ ಫಲ ಎಲ್ಲರಿಗೂ ಬೇಕು ಆದರೆ ಪುಣ್ಯಾರ್ಜನೆಗೆ ಬೇಕಾದ ಕಷ್ಟದ ಪೂರ್ವಸಿದ್ಧತೆ ಯಾರಿಗೂ ಬೇಡ, ಅಂತೆಯೇ ಶ್ರೀರಾಮ, ಅವನ ನಾಮ, ಕಥೆ ಬೇಕು, ಆದರೆ ಅವನು ನಡೆದು ತೋರಿಸಿದ ರಾಮಾಯಣದ ಮಾರ್ಗ ಮಾತ್ರ ಯಾರಿಗೂ ಬೇಡ. ಇದು ಶ್ರೀರಾಮ ಭಕ್ತಿಯಾಗಲಾರದು ಎನ್ನುವುದು ಡಿವಿಜಿಯವರ ಮತವಷ್ಟೆ, ಸಂತ ಕಬೀರದಾಸರ ನಾಮನಿಷ್ಠೆಯ ಬಗ್ಗೆ ತಕರಾರಲ್ಲ.
ಈ ಲೇಖನ, ಗುಣವಂತ (ಜಂಟ್ಲ್‌ಮನ್) ಶ್ರೀರಾಮನಿಗೂ, ಅವನನ್ನು ನಮಗಾಗಿ ಉಳಿಸಿಟ್ಟ ರಾಮಾಯಣ ಮಹಾಕಾವ್ಯಕ್ಕೂ, ಅದರ ರಚಯಿತರಾದ ವಾಲ್ಮೀಕಿ ಮಹರ್ಷಿಗಳಿಗೂ ಹಾಗೂ ಶ್ರೀ ರಾಮ ತತ್ವಾನುಯಾಯಿ ನಿಜಸಾಧಕರಿಗೂ ಸಮರ್ಪಣೆ.