Vinayak V Bhat Column: ಸೋಲು-ಗೆಲುವು ತಾತ್ಕಾಲಿಕ, ಔದಾರ್ಯ-ಸೌಶೀಲ್ಯ ಶಾಶ್ವತ
ಚೆಂಡನ್ನು ಎತ್ತಿಕೊಂಡು ಮಿರಾಜ್‌ಗೆ ಹಸ್ತಾಂತರಿಸಲು ಆಘಾ ತಮ್ಮ ಕ್ರೀಸ್‌ನಿಂದ ಹೊರ ನಡೆದರು. ಆದರೆ ಅಷ್ಟರಲ್ಲಿ ಮಿರಾಜ್ ವಿಕೆಟ್‌ಗಳನ್ನು ಹೊಡೆದುರುಳಿಸಲು ಅವಕಾಶವನ್ನು ಬಳಸಿಕೊಂಡು ಅವರನ್ನು ಔಟ್ ಮಾಡಿದರು. ಮೈದಾನದಿಂದ ಹೊರಡುವ ಮೊದಲು ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ಎಸೆದರು. ರನ್ ಔಟ್ ಸಮರ್ಥನೀಯ ಎಂದು ಎಂಸಿಸಿ ಸ್ಪಷ್ಟ ಪಡಿಸಿದೆ.
-
ವಿದ್ಯಮಾನ
ವಿಶ್ವಕಪ್‌ನ ಹೀನಾಯ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗ ಮತ್ತೊಂದು ಅಘಾತವಾಯಿತು. ಮೊನ್ನೆ ಮೊನ್ನೆ ನಡೆದ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದ ನಡುವಿನ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನ ತಂಡವನ್ನು ಅವರದೇ ನೆಲದಲ್ಲಿ 2-1ರ ಅಂತರದಲ್ಲಿ ಸೋಲಿಸಿತು.
ಬಲಿಷ್ಠ ಪಾಕಿಸ್ತಾನವನ್ನು ಅವರದೇ ನೆಲದಲ್ಲಿ ನಿರ್ಣಾಯಕವಾಗಿ ಸೋಲಿಸಿರುವುದರಿಂದ ಬಾಂಗ್ಲಾ ತಂಡ ಜನಮೆಚ್ಚುಗೆಗೆ ಪಾತ್ರವಾದರೂ, ಕ್ರೀಡಾಮನೋಭಾವನೆಗೆ ವಿರುದ್ಧವಾದ ಬಾಂಗ್ಲಾ ಆಟಗಾರರ ನಡುವಳಿಕೆ ಪಂದ್ಯಾವಳಿಯಲ್ಲಿ ಅತೀವ ಟೀಕೆಗೊಳಗಾಯಿತು.
ಬಾಂಗ್ಲಾದೇಶದ ನಾಯಕ ಮೆಹಿದಿ ಹಸನ್ ಮಿರಾಜ್ ಅವರಿಂದ ಪಾಕಿಸ್ತಾನದ ಸಲ್ಮಾನ್ ಅಲಿ ಆಘಾ ಅವರ ವಿವಾದಾತ್ಮಕ ರನ್ ಔಟ್ ಮೊನ್ನೆ ಮೊನ್ನೆ ನಡೆದ 2ನೇ ಏಕದಿನ ಪಂದ್ಯದ ಸಮಯದಲ್ಲಿ ಸಂಭವಿಸಿತು.
ಅಲ್ಲಿ, ಪರಸ್ಪರ ಡಿಕ್ಕಿ ಹೊಡೆದ ನಂತರ, ಬ್ಯಾಟ್ಸ್‌ಮನ್ ಸಲ್ಮಾನ್ ಚೆಂಡನ್ನು ಬೌಲರ್‌ಗೆ ಹಿಂತಿರುಗಿಸಲು ಪ್ರಯತ್ನಿಸುವಾಗ ಅವರನ್ನು ಔಟ್ ಮಾಡಲಾಯಿತು. ಈ ಘಟನೆ ಬಾಂಗ್ಲಾ ಕ್ರಿಕೆಟಿಗರ ಕ್ರೀಡಾ ಮನೋಭಾವದ ಕುರಿತು ಭಾರಿ ಚರ್ಚೆಯನ್ನು ಹುಟ್ಟುಹಾಕಿತು. ಆಗಿದ್ದು ಇಷ್ಟೇ, 39ನೇ ಓವರ್‌ನಲ್ಲಿ, ಮೊಹಮ್ಮದ್ ರಿಜ್ವಾನ್ ಚೆಂಡನ್ನು ಬೌಲರ್ ಮೆಹಿದಿ ಹಸನ್ ಮಿರಾಜ್ ಕಡೆಗೆ ಒಗೆದರು. ಇದು ಸಲ್ಮಾನ್ ಆಘಾ (ನಾನ್ ಸ್ಟ್ರೈಕರ್) ಅವರೊಂದಿಗೆ ಸ್ವಲ್ಪ ಡಿಕ್ಕಿ ಹೊಡೆಯಲು ಕಾರಣವಾಯಿತು.
ಚೆಂಡು ಡೆಡ್ ಆಗಿದೆ ಎಂದು ಭಾವಿಸಿದ ಆಘಾ, ಅದನ್ನು ಎತ್ತಿಕೊಂಡು ಬೌಲರ್‌ಗೆ ಹಿಂದಿರುಗಿಸಲು ಬಾಗಿದರು. ಮಿರಾಜ್ ತ್ವರಿತವಾಗಿ ಪ್ರತಿಕ್ರಿಯಿಸಿ ಚೆಂಡನ್ನು ಹಿಡಿದು ಆಘಾ ಇನ್ನೂ ತಮ್ಮ ಕ್ರೀಸ್‌ನಿಂದ ಹೊರಗಿದ್ದಾಗ ಸ್ಟಂಪ್‌ಗಳನ್ನು ಛಿದ್ರಗೊಳಿಸಿದರು.
ಇದನ್ನೂ ಓದಿ: Vinayaka V Bhat Column: ಶಾಂತಿಯಂತೆ ಸಂಗ್ರಾಮಕ್ಕೂ ಜಗತ್ತಿಗೆ ಭಾರತವೇ ಆದರ್ಶ
ಚೆಂಡನ್ನು ಎತ್ತಿಕೊಂಡು ಮಿರಾಜ್‌ಗೆ ಹಸ್ತಾಂತರಿಸಲು ಆಘಾ ತಮ್ಮ ಕ್ರೀಸ್‌ನಿಂದ ಹೊರ ನಡೆದರು. ಆದರೆ ಅಷ್ಟರಲ್ಲಿ ಮಿರಾಜ್ ವಿಕೆಟ್‌ಗಳನ್ನು ಹೊಡೆದುರುಳಿಸಲು ಅವಕಾಶ ವನ್ನು ಬಳಸಿಕೊಂಡು ಅವರನ್ನು ಔಟ್ ಮಾಡಿದರು. ಮೈದಾನದಿಂದ ಹೊರಡುವ ಮೊದಲು ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ಎಸೆದರು. ರನ್ ಔಟ್ ಸಮರ್ಥನೀಯ ಎಂದು ಎಂಸಿಸಿ ಸ್ಪಷ್ಟಪಡಿಸಿದೆ.
ಚೆಂಡು ಇನ್ನೂ ಡೆಡ್ ಆಗಿರಲಿಲ್ಲ. ಈ ಘಟನೆಯ ಹೊರತಾಗಿಯೂ, ಪಾಕಿಸ್ತಾನವು ಪಂದ್ಯವನ್ನು ಗೆದ್ದಿತು ಎನ್ನುವುದು ಬೇರೆ ಮಾತು. ಬಾಂಗ್ಲಾ ಕ್ರಿಕೆಟಿಗರು ಹೀಗೆ ನಡೆದು ಕೊಳ್ಳುತ್ತಿರುವುದು ಇದೇ ಮೊದಲೇನಲ್ಲ, 2023ರ ವಿಶ್ವಕಪ್ ಸಮಯದಲ್ಲಿ, ಹೆಲ್ಮೆಟ್ ಪಟ್ಟಿಯ ದೋಷದಿಂದಾಗಿ ಮ್ಯಾಥ್ಯೂಸ್ ಕ್ರೀಸ್ ಪ್ರವೇಶಿಸಲು ವಿಳಂಬವಾಗಿತ್ತು.
ಇದೇ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅವರನ್ನು ‘ಟೈಮ್ಡ್ ಔಟ್’ ನಿಯಮದ ಮೂಲಕ ವಜಾಗೊಳಿಸುವಂತೆ ವಿವಾದಾತ್ಮಕವಾಗಿ ಮನವಿ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನ 146 ವರ್ಷಗಳ ಇತಿಹಾಸದಲ್ಲಿ ಇದು ಅಂಥ ಮೊದಲ ಘಟನೆಯಾಗಿದೆ.
ಹಿಂದಿನ ಬ್ಯಾಟ್ಸ್‌ಮನ್ ಔಟಾದ (ಅಥವಾ ನಿವೃತ್ತಿಯಾದ) ಎರಡು ನಿಮಿಷಗಳಲ್ಲಿ ತನ್ನ ಮೊದಲ ಎಸೆತವನ್ನು ಎದುರಿಸಲು ಸಿದ್ಧವಾಗಲು ವಿಫಲವಾದ ಕಾರಣಕ್ಕೆ ಮ್ಯಾಥ್ಯೂಸ್ ಅವರನ್ನು ‘ಟೈಮ್ಡ್ ಔಟ್’ ಎಂದು ಘೋಷಿಸಲಾಯಿತು.
ಮ್ಯಾಥ್ಯೂಸ್ ಅವರು, ತಮ್ಮ ಹೆಲ್ಮೆಟ್ ಪಟ್ಟಿ ಮುರಿದುಹೋಗಿತ್ತು, ಅದನ್ನು ಬದಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಅಗತ್ಯವಿತ್ತು ಎಂದು ವಾದಿಸಿದರು. ಆದರೆ ಅಂಪೈರ್, ನಿಯಮದಂತೆ ಶಕೀಬ್ ಅವರ ಮನವಿಗೆ ಬೆಂಬಲ ನೀಡಿದರು. ಕ್ರಿಕೆಟ್ ಮನೋಭಾವದ ಬಗ್ಗೆ ತೀವ್ರ ಚರ್ಚೆಯ ಹೊರತಾಗಿಯೂ, ಆಟದ ನಿಯಮಗಳಿಗೆ ಒಳಪಟ್ಟು ನಾನು ಅಪೀಲ್ ಮಾಡಿದ್ದೇನೆ,
ಹಾಗಾಗಿ ಮೇಲ್ಮನವಿಯನ್ನು ಹಿಂಪಡೆಯಲು ನಿರಾಕರಿಸಿದ್ದೆ ಎಂದಿದ್ದರು ಶಕೀಬ್. ಒಂದೊಮ್ಮೆ ಶಕೀಬ್ ಅವರು ಅಂಪೈರ್‌ಗೆ ಮನವಿ ಸಲ್ಲಿಸದಿದ್ದರೆ, ಅಂಪೈರ್ ತಾವೇ ತಾವಾಗಿ ಔಟ್ ನೀಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಎನ್ನುವುದು ಇಲ್ಲಿ ನಾವು ಗಮನಿಸಬೇಕಾದ ವಿಷಯ. ಇದು ಕೇವಲ ಮಿರಾಜ್ ಅಥವಾ ಶಕೀಬ್ ಅವರನ್ನು ದೂಷಿಸು ವಲ್ಲಿಗೆ ನಿಲ್ಲುವುದಿಲ್ಲ; ಅವರ ಈ ಎಲ್ಲ ಸಣ್ಣತನದ ವರ್ತನೆ ಇಡೀ ಬಾಂಗ್ಲಾದೇಶದ ಕ್ರಿಕೆಟ್‌ಗೆಗೆ ಶಾಶ್ವತ ಕಳಂಕವಾಗಿ ಇತಿಹಾಸದಲ್ಲಿ ದಾಖಲಾಗುಳಿಯುತ್ತೆ. ಬಾಂಗ್ಲಾ ಕ್ರಿಕೆಟಿಗರು ಅಂದರ ಹೀಗೇ ಎನ್ನುವ ‘ಬ್ರ್ಯಾಂಡ್’ ಆಗುತ್ತೆ.
ಕ್ರೀಡಾ ಮನೋಭಾವ ಅಥವಾ ಕ್ರೀಡಾ ಸ್ಪೂರ್ತಿ ಎನ್ನುವಂಥದ್ದು ಕ್ರೀಡೆಗಳಲ್ಲಿ ನ್ಯಾಯ ಸಮ್ಮತತೆ, ಕ್ರೀಡಾ ಗೌರವಗಳನ್ನು ಒತ್ತಿ ಹೇಳುವ ಒಂದು ನೈತಿಕ ಹಾಗೂ ಉದಾರ ಮನೋ ಭಾವವಾಗಿದೆ. ಅದರಲ್ಲೂ, ಕ್ರಿಕೆಟ್ ಅನ್ನು ಹೆಚ್ಚಾಗಿ ‘ಜಂಟ್ಲ್‌ಮನ್ಸ್ ಗೇಮ್’ ಎಂದೇ ಕರೆಯಲಾಗುತ್ತದೆ ಮತ್ತು ಅದರ ಇತಿಹಾಸವು, ಆಟಗಾರರು ಗೆಲುವಿಗಿಂತ ಹೆಚ್ಚಾಗಿ, ನಿಯಮಗಳನ್ನು ಮೀರಿದ ಔದಾರ್ಯ, ಆಟದ ಘನತೆ ಮತ್ತು ಗೌರವಕ್ಕೆ ಆದ್ಯತೆ ನೀಡುವ ಕ್ಷಣಗಳಿಂದ ಸಮೃದ್ಧವಾಗಿದೆ.
ಇದು ನಿಯಮಗಳ ಪ್ರಕಾರ ಆಡುವುದು, ವಿಜಯವನ್ನು ನಮ್ರತೆಯಿಂದ ಮತ್ತು ಸೋಲ ನ್ನು ಪ್ರಾಮಾಣಿಕವಾಗಿ ಸ್ವೀಕರಿಸುವುದು, ಎದುರಾಳಿಗಳನ್ನು ಗೌರವದಿಂದ ನಡೆಸಿಕೊಳ್ಳುವು ದನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಇತ್ತಂಡಗಳೂ ಪಂದ್ಯದ ಅಂತ್ಯದಲ್ಲಿ ಪರಸ್ಪರ ಕೈಕುಲುಕುವುದು, ಬಿದ್ದ ಎದುರಾಳಿಗೆ ಸಹಾಯ ಮಾಡುವುದು, ಎದುರಾಳಿ ಆಟಗಾರರಿಗೆ ಶೂ ಕಟ್ಟಲು ಸಹಾಯ ಮಾಡುವುದೂ ಸೇರಿದಂತೆ ಎದುರಾಳಿಗಳು, ತರಬೇತುದಾರರು ಮತ್ತು ಅಧಿಕಾರಿಗಳನ್ನು ಸೌಜನ್ಯದಿಂದ ನಡೆಸಿ ಕೊಳ್ಳುವುದು, ದೂರು ಇಲ್ಲದೆ ಸೋಲನ್ನು ಸ್ವೀಕರಿಸುವುದು ಮತ್ತು ಅಪಹಾಸ್ಯ ಅಥವಾ ಅತಿರೇಕವಿಲ್ಲದೇ ಗೆಲುವನ್ನು ಸಂಭ್ರಮಿಸು ವುದು, ತಾವು ಔಟಾಗಿರುವುದು ತಿಳಿದಾಗ ನಿರ್ಣಾಯಕರ ತೀರ್ಪಿಗೆ ಕಾಯದೇ ಹೊರ ನಡೆಯುವುದು ಇತ್ಯಾದಿ.
ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ, ಹೀಗೆ ಕ್ರೀಡಾ ಮನೋಭಾವಕ್ಕೆ, ಆಟದ ಘನತೆಗೆ ತಕ್ಕು ದಲ್ಲದ ನಡತೆಗೆ ಸಾಕ್ಷಿಯಗುವ ಅನೇಕ ಸಂದರ್ಭಗಳು ಹಿಂದೆಯೂ ಎದುರಾಗಿವೆ. ಪ್ರತಿಯಾಗಿ, ಅತ್ಯಂತ ಶ್ರೇಷ್ಠ ಮಟ್ಟದ ಕ್ರೀಡಾ ಸ್ಪೂರ್ತಿಗೆ ಮಾದರಿಯಾಗುವ ಘಟನೆಗಳೂ ಸಾಕಷ್ಟು ಇವೆ. ಇಲ್ಲಿ ಅವುಗಳನ್ನೆಲ್ಲ ಸ್ವಲ್ಪ ಅವಲೋಕಿಸುವ ಪ್ರಯತ್ನ ಮಾಡೋಣ.
ಕ್ರಿಕೆಟ್‌ನಲ್ಲಿ ‘ಮಂಕಡಿಂಗ್’ ಎಂಬುದು ಒಂದು ವಿವಾದಾತ್ಮಕ ಔಟ್ ನೀಡುವ ಪದ್ದತಿ ಆಗಿದ್ದು, ಅಲ್ಲಿ ಬೌಲರ್, ಬೌಲ್ ಮಾಡುವ ಮೊದಲೇ ನಾನ್ ಸ್ಟ್ರೈಕರ್ ಬ್ಯಾಟ್ಸ್‌ಮನ್ ತಮ್ಮ ಕ್ರೀಸ್ ಗೆರೆಯನ್ನು ತೊರೆದಿದ್ದಕ್ಕಾಗಿ ವಿಕೆಟ್ ಬೀಳಿಸುವ ಮೂಲಕ ನಾನ್-ಸ್ಟ್ರೈಕರ್ ಅನ್ನು ಔಟ್ ಮಾಡುತ್ತಾನೆ. ಭಾರತದ ಖ್ಯಾತ ಕ್ರಿಕೆಟಿಗ ವಿನೂ ಮಂಕಡ್ ಅವರು 1947ರಲ್ಲಿ ಆಸ್ಟ್ರೇಲಿಯಾದ ಬಿಲ್ ಬ್ರೌನ್ ಅವರನ್ನು ಹೀಗೆ ಔಟ್ ಮಾಡಿದ್ದರಿಂದ ಈ ರೀತಿಯಲ್ಲಿ ಔಟ್ ಮಾಡುವ ವಿಧಾನಕ್ಕೆ ‘ಮಂಕಡ್’ ಅವರ ಹೆಸರನ್ನು ಇಡಲಾಗಿದೆಯೆನೋ!
ಮಂಕಡ್ ನಂತರ, ಕಪಿಲ್ ದೇವ್, ಆರ್. ಅಶ್ವಿನ್ ಮುಂತಾದ ಭಾರತೀಯ ಆಟಗಾರರೂ ಈ ಮಂಕಡ್ ವಿಧಾನದಿಂದ ಔಟ್ ಮಾಡಿದ ಕೆಲವು ಕೆಟ್ಟ ಉದಾಹರಣೆಗಳಿವೆ. 2022ರಿಂದ ಐಸಿಸಿ ನಿಯಮಗಳ ಅಡಿಯಲ್ಲಿ ಈ ರೀತಿ ಔಟ್ ಮಾಡುವುದನ್ನು ಕಾನೂನುಬದ್ಧವಾಗಿ ಮಾನ್ಯವಾದ ರನ್ ಔಟ್ ಎಂದು ಪರಿಗಣಿಸಲಾಗಿದೆ. ಈಗ ಬೌಲರ್ ಎಸೆತದ ಕೊನೆಯ ಹೆಜ್ಜೆಯನ್ನು ಹಾಕುವ ಮೊದಲು ಮಾತ್ರ ರನ್ ಔಟ್ ಮಾಡಲು ಪ್ರಯತ್ನಿಸಬಹುದು,
ಅವರು ವಿಕೆಟ್ಟನ್ನು ದಾಟಿದ ನಂತರ ಅಲ್ಲ ಅಷ್ಟೆ. ಬೌಲ್ ಮಾಡುವವರೆಗೆ ತಮ್ಮ ಕ್ರೀಸ್‌ನ ಉಳಿಯುವ ಜವಾಬ್ದಾರಿಯು ನಾನ್-ಸ್ಟ್ರೈಕರ್ ಮೇಲೆ ಇರುತ್ತದೆಯಾದರೂ, ಹೀಗೆ ಔಟ್ ಮಾಡುವುದು ನೈತಿಕವಾಗಿ ಸರಿಯಲ್ಲ ಎಂದು ಪರಿಗಣಿಸಲಾಗುತ್ತದೆ.
2012ರ ‘ಟಿ-20’ ವಿಶ್ವಕಪ್ ಪಂದ್ಯಾವಳಿಯ ವೇಳೆ ಇಂಗ್ಲೆಂಡ್ ವಿರುದ್ಧದ ಸೂಪರ್ ಎಂಟನೇ ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ದಾಂಡಿಗ ಕ್ರಿಸ್ ಗೇಲ್ ಬೌಲ್ ಮಾಡುವಾಗ, ನಾನ್ ಸ್ಟ್ರೈಕರ್ ಇಯಾನ್ ಮಾರ್ಗನ್ ತಮ್ಮ ಕ್ರೀಸ್ ತೊರೆದಿರುವುದನ್ನು ನೋಡುತ್ತಾರೆ.
ಅವರನ್ನು ರನ್ ಔಟ್ ಮಾಡುವ ಅವಕಾಶವಿದ್ದರೂ ಗೇಲ್ ತಮ್ಮ ಬೌಲಿಂಗ್ ಕ್ರಿಯೆಯನ್ನು ನಿಲ್ಲಿಸಿ, ಮೋರ್ಗನ್‌ಗೆ ಹಾಸ್ಯಮಯವಾಗಿ ಕೈ ಸನ್ನೆ ಮಾಡಿ ಎಚ್ಚರಿಕೆ ನೀಡಿ ಜಂಟ್ಲ್‌ಮನ್ ಎನಿಸಿಕೊಂಡರು. ಬಲಗೈ ಆಫ್-ಬ್ರೇಕ್ ಬೌಲರ್ ಆಗಿ ಅವರು 200ಕ್ಕೂ ಹೆಚ್ಚು ಅಂತಾರಾ ಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದರೂ, ಎಂದಿಗೂ ಮಂಕಡ್ ವಿಧಾನದಿಂದ ಯಾರನ್ನೂ ಔಟ್ ಮಾಡುವ ಪ್ರಯತ್ನ ಮಾಡಿರಲಿಲ್ಲ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಇಯಾನ್ ಬೆಲ್ ಅವರನ್ನು ಎಂ.ಎಸ್. ಧೋನಿ, ಚೆಂಡು ನಾಲ್ಕು ರನ್ ಗಳಿಗೆ ಹೋಗಿದೆ ಎನ್ನುವ ಭ್ರಮೆ ಸೃಷ್ಟಿಸಿ ರನ್ ಔಟ್ ಮಾಡಿದ್ದರು. ಈ ರನ್ ಔಟ್ ತಾಂತ್ರಿಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ಸರಿಯಲ್ಲ ಎನ್ನುವ ಕಾರಣಕ್ಕೆ ಎಂ.ಎಸ್. ಧೋನಿ ತಮ್ಮ ಮನವಿಯನ್ನು ಹಿಂತೆಗೆದು ಕೊಂಡು, ಬೆಲ್ ತಮ್ಮ ಇನ್ನಿಂಗ್ಸ್ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಇಂಥ ಸಜ್ಜನಿಕೆಗೆ ಉದಾಹರಣೆಯಾಗಬಲ್ಲ ಇನ್ನೂ ಕೆಲವು ಐತಿಹಾಸಿಕ ಕ್ಷಣಗಳನ್ನು ಹೇಳುವುದಾದರೆ, 1987ರ ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಉತ್ತಮವಾಗಿ ಆಡುತ್ತ, ಪಂದ್ಯಾವಳಿಯನ್ನು ಗೆಲ್ಲುವ ‘ಹಾಟ್ ಫೇವರಿಟ್’ ತಂಡವೆಂತಲೇ ಗುರುತಿಸಲ್ಪಟ್ಟಿತ್ತು. ಪಾಕಿಸ್ತಾನದ ವಿರುದ್ಧದ ನಿರ್ಣಾಯಕ ಪಂದ್ಯವೊಂದರಲ್ಲಿ, ವೆಸ್ಟ್ ಇಂಡೀಸ್ ಗೆಲ್ಲಲು ಒಂದು ವಿಕೆಟ್ ಅಗತ್ಯವಿತ್ತು ಮತ್ತು ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿತ್ತು.
ಚೆಂಡು ಎಸೆಯುವ ಮೊದಲು ನಾನ್ ಸ್ಟ್ರೈಕರ್ ಸಲೀಮ್ ಜಾಫರ್ ತಮ್ಮ ಕ್ರೀಸ್‌ನಿಂದ ಹೊರಗುಳಿದಿದ್ದನ್ನು ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಕರ್ಟ್ನಿ ವಾಲ್ಶ್ ಗಮನಿಸಿದರು. ಆತನನ್ನು ಮಂಕಡ್ ವಿಧಾನದಿಂದ ಸುಲಭವಾಗಿ ಔಟ್ ಮಾಡಿ ಪಂದ್ಯವನ್ನು ಗೆಲ್ಲಬಹು ದಾಗಿದ್ದ ಸಂದರ್ಭ ಅದು. ಆದರೆ ಹಾಗೆ ಮಾಡುವ ಬದಲು ಕರ್ಟ್ನಿ ವಾಲ್ಶ್ ಅವನಿಗೆ ಎಚ್ಚರಿಕೆ ನೀಡಿದರು.
ಪಾಕಿಸ್ತಾನವು ಪಂದ್ಯವನ್ನು ಗೆದ್ದಿತು ಮತ್ತು ವೆಸ್ಟ್ ಇಂಡೀಸ್ ಪಂದ್ಯಾವಳಿಯಿಂದಲೇ ಹೊರಹೋಗಬೇಕಾಯಿತು. ಆದರೆ ಕರ್ಟ್ನಿ ವಾಲ್ಶ್ ಅವರ ಅಪಾರ ಕ್ರೀಡಾ ಮನೋಭಾವ ವನ್ನು ಕ್ರೀಡಾಲೋಕ ಬಹುವಾಗಿ ಪ್ರಶಂಸಿಸಿತು. 1980ರ ಭಾರತದ ಸುವರ್ಣ ಮಹೋತ್ಸವ ಟೆಸ್ಟ್ ವೇಳೆ, ಇಂಗ್ಲೆಂಡ್‌ನ ಬಾಬ್ ಟೇಲರ್ ಅವರಿಗೆ ಅಂಪೈರ್ ಕ್ಯಾಚ್ ಔಟ್ ನೀಡಿದ್ದರು.
ಟೇಲರ್ ಚೆಂಡನ್ನು ಹೊಡೆದಿಲ್ಲ ಎಂದು ತಿಳಿದಿದ್ದ ಭಾರತ ತಂಡದ ನಾಯಕ, ನಮ್ಮವರೇ ಆದ ಗುಂಡಪ್ಪ ವಿಶ್ವನಾಥ್ ಅವರು ಅಂಪೈರ್ ನಿರ್ಧಾರವನ್ನು ರದ್ದುಗೊಳಿಸುವಂತೆ ಕೇಳಿಕೊಂಡು ಟೇಲರ್ ಅವರನ್ನು ಹಿಂದೆ ಕರೆಸಿ ಆಡಿಸಿದರು. ಮುಂದೆ, ಟೇಲರ್ ಪಂದ್ಯ ಗೆಲ್ಲುವ ಜೊತೆಯಾಟವನ್ನು ನಿರ್ಮಿಸಿದರು. ಆದರೆ ವಿಶ್ವನಾಥ್ ಅವರ ವರ್ತನೆ ನ್ಯಾಯೋಚಿತ ಆಟದ ಐತಿಹಾಸಿಕ ಉದಾಹರಣೆಯಾಗಿ ಉಳಿಯಿತು.
2003ರ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಡಮ್ ಗಿಲ್ ಕ್ರಿಸ್ಟ್ ಅವರಿಗೆ ಅಂಪೈರ್ ಔಟ್ ನೀಡಲಿಲ್ಲ. ಆದರೆ ತಾವು ಚೆಂಡನ್ನು ‘ಎಡ್ಜ್’ ಮಾಡಿರುವುದು ತಿಳಿದಿದ್ದ ಗಿಲ್ ಕ್ರಿಸ್ಟ್, ತಾವೇ ಸ್ವತಃ ಹೊರನಡೆಯಲು ಮನಮಾಡಿದರು. ಹೀಗೆ, ಕ್ರೀಡೆಯ ಪರವಾದ ಹಾಗೂ ಸಣ್ಣತನದ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.
ಐಸಿಸಿಯು ‘ಸ್ಪಿರಿಟ್ ಆಫ್ ಕ್ರಿಕೆಟ್’ ಪ್ರಶಸ್ತಿಯ ಮೂಲಕ ಅಂತಾರಾಷ್ಟ್ರೀಯ ಆಟಗಾರರು ಅಥವಾ ತಂಡಗಳನ್ನು ಕ್ರೀಡಾ ಮನೋಭಾವ ಮತ್ತು ಮೈದಾನದಲ್ಲಿ ಆಟದ ಘನತೆಯನ್ನು ಎತ್ತಿಹಿಡಿದಿರುವ ಸಲುವಾಗಿ ಗುರುತಿಸಿ ಪುರಸ್ಕರಿಸುತ್ತದೆ. ಎಂ.ಎಸ್. ಧೋನಿ (2011ರ ದಶಕದ ಪ್ರಶಸ್ತಿ), ವಿರಾಟ್ ಕೊಹ್ಲಿ (2019) ಮತ್ತು ಡ್ಯಾರಿಲ್ ಮಿಚೆಲ್ (2021) ಈ ಪ್ರಶಸ್ತಿಯ ವಿಜೇತರಾಗಿದ್ದಾರೆ.
ಐಪಿಎಲ್ʼನಲ್ಲಿಯೂ ಇದೇ ಕಾರಣಕ್ಕೆ ‘ಫೇರ್ ಪ್ಲೇ’ ಪುರಸ್ಕಾರವನ್ನು ತಂಡಗಳಿಗೆ ನೀಡ ಲಾಗುತ್ತದೆ. ಯಾವುದೇ ಕ್ರೀಡೆಯಿರಲಿ, ಗೆಲ್ಲಬೇಕು ಅನ್ನುವ ಉದ್ದೇಶದಿಂದಲೇ ಎಲ್ಲರೂ ಆಡುವುದು; ಆದರೆ ಹೇಗೆ ಗೆದ್ದೆವು ಎನ್ನುವುದು ಕೆಲವರಿಗೆ ಗೆಲುವಿಗಿಂತ ಮುಖ್ಯವಾಗುತ್ತದೆ.
ಫಲಿತಾಂಶದಷ್ಟೇ ಅಥವಾ ಅದಕ್ಕಿಂತ ಅಧಿಕವಾಗಿ ‘ಪ್ರೊಸೆಸ್’ ಕೂಡಾ ಮುಖ್ಯವಾಗ ಬೇಕಾಗುತ್ತದೆ. ಅದಿಲ್ಲದಿದ್ದರೆ, ಆ ಗೆಲುವಿಗೆ ಅರ್ಥವೇ ಬರುವುದಿಲ್ಲ. ಮೌಲ್ಯಯುತವಲ್ಲದ ಗೆಲುವಿಗಿಂತ, ಸೋಲೇ ಹೆಚ್ಚು ಮೌಲ್ಯಯುತವಾಗಿ ಬಿಡುತ್ತದೆ. ಈ ತರಹ ‘ಮಂಕಡಿಂಗ್’ ಮಾಡಿ ಔಟ್ ಮಾಡಬಹುದಾದ ಸಂದರ್ಭಗಳು ಕ್ರೀಡೆಯಲ್ಲಿ ಮಾತ್ರವಲ್ಲ, ನಿಜಜೀವನ ದಲ್ಲೂ ಎದುರಾಗುತ್ತವೆ.
ಹಾಗಾದಾಗಲೆಲ್ಲ ಉದಾರತನದ ಮಾನವೀಯ ನಿರ್ಧಾರ ತೆಗೆದುಕೊಂಡವರು ಶ್ರೇಷ್ಠರೂ, ಸ್ಮರಣೀಯರೂ ಹಾಗೂ ಕೀರ್ತಿಶೇಷರೂ ಆಗಿ ಉಳಿಯುತ್ತಾರೆ. ವೃತ್ತಿಪರ ಅಥವಾ ವೈಯಕ್ತಿಕ ಹಿನ್ನಡೆಗಳನ್ನು ನಿರ್ವಹಿಸುವಂಥ ದೈನಂದಿನ ಜೀವನದಲ್ಲಿ ಕ್ರೀಡಾಮನೋಭಾವ ಎನ್ನುವುದು ಸಕಾರಾತ್ಮಕ ಅಭ್ಯಾಸಗಳನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ.
ಮೈದಾನದಲ್ಲಿ ತೋರ್ಪಡುವ ಕ್ರೀಡಾಮನೋಭಾವವು ಜೀವನದ ಮೈದಾನದಲ್ಲೂ ಕೈಹಿಡಿಯುತ್ತದೆ ಎಂದು ವಿವರಿಸಲಾಗುತ್ತದೆ. ಮೈದಾನದಲ್ಲಿ ಕಲಿತ ಶಿಸ್ತು ಮತ್ತು ಸ್ಥಿತಿಸ್ಥಾಪಕತ್ವವು ಶಿಕ್ಷಣ, ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧಗಳಂಥ ಇತರ ಕ್ಷೇತ್ರಗಳಲ್ಲಿನ ವೈಫಲ್ಯಗಳು ಮತ್ತು ಹಿನ್ನಡೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದು ಶತಾಯ ಗತಾಯ (By hook or crook) ಗೆಲ್ಲಲೇಬೇಕು ಎನ್ನುವ ಮನೋ ಧೋರಣೆ ಯ ಬದಲಿಗೆ, ನೈತಿಕತೆಗೆ, ಉದಾರತೆಗೆ ಹಾಗೂ ಪ್ರಾಮಾಣಿಕ ಸ್ಪರ್ಧಾತ್ಮಕತೆಗೆ ದಾರಿ ಮಾಡಿಕೊಡುತ್ತದೆ.
ಹಾಗಾಗಿ, ಅತಿ ಸ್ಪರ್ಧಾತ್ಮಕವಾದ, ಮತ್ತೊಬ್ಬರನ್ನು ಮೆಟ್ಟಿಯಾದರೂ ತಾನು ಮೇಲೆ ಬರಬೇಕು ಎಂದು ತುಡಿಯುತ್ತಿರುವ ಇಂದಿನ ಮಾನವ ಜೀವನಕ್ಕೆ, ಕ್ರೀಡಾಮನೋಭಾವನೆ ಎನ್ನುವಂಥದ್ದು ಅಗತ್ಯ ಹಾಗೂ ಅನುಸರಣೀಯ ಸಂಗತಿಯಾಗಿದೆ.