ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ !

ತನ್ನದೇ ಸಂಸ್ಥೆಯ ಉದ್ಯೋಗಿಯೊಬ್ಬನ ಸುದ್ದಿಯನ್ನು ಅಷ್ಟು ನಿರ್ದಯವಾಗಿ, ನಿಷ್ಕರುಣೆಯಿಂದ ಆ ಪತ್ರಿಕೆ ಪ್ರಕಟಿಸಿತ್ತು. ಅಷ್ಟಕ್ಕೂ ಒಬ್ಬ ಪತ್ರಕರ್ತನ ಸಾವಿಗೆ ಬೆಲೆಯೇ ಇಲ್ಲವಾ? ಪತ್ರಿಕೆಯ ಸುದ್ದಿ ಮನೆ ಯಲ್ಲಿ ಒಂದು ಅಲಿಖಿತ ನಿಯಮವಿದೆ -‘ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ’ ಅಥವಾ ಹೆಚ್ಚೆಂದರೆ, ‘ಪತ್ರಕರ್ತನ ಸಾವು ಸಿಂಗಲ್ ಕಾಲಂ ಸುದ್ದಿ’.

ಪತ್ರಿಕೆಯ ಸುದ್ದಿಮನೆಯಲ್ಲಿ ಒಂದು ಅಲಿಖಿತ ನಿಯಮವಿದೆ -‘ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ’ ಅಥವಾ ಹೆಚ್ಚೆಂದರೆ, ‘ಪತ್ರಕರ್ತನ ಸಾವು ಸಿಂಗಲ್ ಕಾಲಂ ಸುದ್ದಿ’. ಈ ಮಾತು ನನಗೆ, ಪ್ರತಿ ಸಲ ಪತ್ರಕರ್ತರು ನಿಧನರಾದಾಗಲೆಲ್ಲ ಅವರು ಕೆಲಸ ಮಾಡಿದ ಪತ್ರಿಕೆ ಯಲ್ಲಿ ಪ್ರಕಟವಾದ ಅವರ ನಿಧನ ಸುದ್ದಿಯನ್ನು ನೋಡಿದಾಗಲೆಲ್ಲ ನಿಜ ಎಂದು ಅನಿಸುತ್ತಿದೆ.

Scooterist Killed!

2003 ಜನೆವರಿ 27ರ ಬೆಂಗಳೂರು ಆವೃತ್ತಿಯ ‘ಟೈಮ್ಸ್ ಆಫ್ ಇಂಡಿಯಾ’ದ ಮೂರನೇ ಪುಟದಲ್ಲಿ ಸಿಂಗಲ್ ಕಾಲಂ ಪೇಜ್ ಫಿಲ್ಲರ್ ಸುದ್ದಿಯ ಶೀರ್ಷಿಕೆಯಿದು. ಯಾವುದೋ ಕ್ರೈಂ ಸುದ್ದಿಯ ಶೀರ್ಷಿಕೆ ಯ ಕೆಳಗಡೆ ಚಿಕ್ಕ ಸಬ್ ಹೆಡ್‌ಲೈನ್ ಆಗಿ ಈ ಸುದ್ದಿ ಪ್ರಕಟವಾಗಿತ್ತು. ಆ ಸ್ಕೂಟರಿಸ್ಟ್ ಮತ್ಯಾರೂ ಆಗಿರಲಿಲ್ಲ. ತನ್ನದೇ ಇಂಟರ್ನೆಟ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ ದೀಕ್ಷಿತ್ ಎಂಬ ಒಬ್ಬ ಪ್ರತಿಭಾವಂತ ಯುವ ಪತ್ರಕರ್ತ ಸ್ಕೂಟರ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದ. ‌ಆತನ ಸಾವಿನ ಸುದ್ದಿ ಯಾವನೋ ಅಬ್ಬೇಪಾರಿಯ ಸಾವಿನ ಸುದ್ದಿಯಂತೆ ಪ್ರಕಟವಾಗಿತ್ತು.

ತನ್ನದೇ ಸಂಸ್ಥೆಯ ಉದ್ಯೋಗಿಯೊಬ್ಬನ ಸುದ್ದಿಯನ್ನು ಅಷ್ಟು ನಿರ್ದಯವಾಗಿ, ನಿಷ್ಕರುಣೆಯಿಂದ ಆ ಪತ್ರಿಕೆ ಪ್ರಕಟಿಸಿತ್ತು. ಅಷ್ಟಕ್ಕೂ ಒಬ್ಬ ಪತ್ರಕರ್ತನ ಸಾವಿಗೆ ಬೆಲೆಯೇ ಇಲ್ಲವಾ? ಪತ್ರಿಕೆಯ ಸುದ್ದಿ ಮನೆಯಲ್ಲಿ ಒಂದು ಅಲಿಖಿತ ನಿಯಮವಿದೆ -‘ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ’ ಅಥವಾ ಹೆಚ್ಚೆಂದರೆ, ‘ಪತ್ರಕರ್ತನ ಸಾವು ಸಿಂಗಲ್ ಕಾಲಂ ಸುದ್ದಿ’.

ಈ ಮಾತು ನನಗೆ, ಪ್ರತಿ ಸಲ ಪತ್ರಕರ್ತರು ನಿಧನರಾದಾಗಲೆಲ್ಲ ಅವರು ಕೆಲಸ ಮಾಡಿದ ಪತ್ರಿಕೆ ಯಲ್ಲಿ ಪ್ರಕಟವಾದ ಅವರ ನಿಧನ ಸುದ್ದಿಯನ್ನು ನೋಡಿದಾಗಲೆಲ್ಲ ನಿಜ ಎಂದು ಅನಿಸುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ‌

ನೀವು ಖ್ಯಾತ ಪತ್ರಕರ್ತ ಪೊತೆನ್ ಜೋಸೆಫ್ ಹೆಸರನ್ನು ಕೇಳಿರಬಹುದು. ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ, ಬೆಂಗಳೂರಿನಲ್ಲಿ ಅಂದಿನ ಖ್ಯಾತ ಅಬಕಾರಿ ಗುತ್ತಿಗೆದಾರರಾದ ಕೆ.ಎನ್.ಗುರುಸ್ವಾಮಿ ಅವರು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯನ್ನು ಆರಂಭಿಸಬಯಸಿದಾಗ, ಮೊದಲ ಸಂಪಾದಕರನ್ನಾಗಿ ಪೊತೆನ್ ಜೋಸೆಫ್ ಅವರನ್ನೇ ನೇಮಿಸಬೇಕು ಎಂದು ನಿರ್ಧರಿಸಿದ್ದರು. ‌

ಇದನ್ನೂ ಓದಿ: Vishweshwar Bhat Column: ಭಾರತದಲ್ಲಿ ಭಯೋತ್ಪಾದನೆಗಿಂತ ಪ್ರೇಮವೇ ಹೆಚ್ಚು ಅಪಾಯಕಾರಿ !

ಆ ದಿನಗಳಲ್ಲಿ ಜೋಸೆಫ್ ಹೆಸರು ಜನಪ್ರಿಯತೆಯ ಉತ್ತುಂಗದಲ್ಲಿತ್ತು. ಅವರು ಆ ಹೊತ್ತಿಗೆ ದೇಶ ಮತ್ತು ವಿದೇಶಗಳ ಪ್ರಮುಖ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಬಯಸಿದಾಗಲೆಲ್ಲ ಅವರು ಗಾಂಧೀಜಿ, ನೆಹರು, ಮಹಮದ್ ಅಲಿ ಜಿನ್ನಾ, ಟಿಳಕ್, ರಾಜಾಜಿ, ಸರೋಜಿನಿ ನಾಯ್ಡು, ಮೋತಿ ಲಾಲ್ ನೆಹರು, ಅನಿ ಬೆಸೆಂಟ್ ಮುಂತಾದವರ ಸಂದರ್ಶನವನ್ನು ಮಾಡುವಷ್ಟು ಸಲುಗೆ, ಘನತೆ ಮತ್ತು ವೃತ್ತಿ ಹಿರಿಮೆಯನ್ನು ಗಳಿಸಿದ್ದರು.

ನೆಹರು ಅವರ ‘ನ್ಯಾಷನಲ್ ಹೆರಾಲ್ಡ್’ ಸಂಪಾದಕರಾಗಿದ್ದ ಜೋಸೆ-, ಅದರ ವ್ಯತಿರಿಕ್ತ ವಿಚಾರ ಧಾರೆಗೆ ಸೇರಿದ್ದ ಮಹಮದ್ ಅಲಿ ಜಿನ್ನಾ ಅವರ ’Dawn’ ಪತ್ರಿಕೆಗೂ ಸಂಪಾದಕ ರಾಗಿದ್ದರು. ಅಷ್ಟೇ ಅಲ್ಲ, ಆ ದಿನಗಳಲ್ಲಿ ಅವರು ‘ಬಾಂಬೇ ಕ್ರಾನಿಕಲ್’, ‘ಇಂಡಿಯನ್ ಎಕ್‌ʼಪ್ರೆಸ್’, ‘ಇಂಡಿಯನ್ ಡೇಲಿ ಟೆಲಿಗ್ರಾಫ್’, ‘ಸ್ಟಾರ್ ಆಫ್‌ ಇಂಡಿಯಾ’, ‘ವಾಯ್ಸ್ ಆಫ್ ಇಂಡಿಯಾ’, ‘ಹೈದರಾಬಾದ್ ಬುಲೆಟಿನ್’, ‘ಸ್ವರಾಜ್ಯ’ ಸೇರಿದಂತೆ ಸುಮಾರು ಇಪ್ಪತ್ತೆಂಟು ಪತ್ರಿಕೆಗಳ ಸಂಪಾದಕರಾಗಿದ್ದರು. ‌

ಅವರು ನಿತ್ಯ ಬರೆಯುತ್ತಿದ್ದ ‘Over A Cup of Tea’ ಅಂಕಣ ಬಹಳ ಪ್ರಸಿದ್ಧವಾಗಿತ್ತು. ಇಂಥವರೇ ತಮ್ಮ ನೂತನ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ಗೆ ಸಂಪಾದಕರಾಗಬೇಕು ಎಂದು ಗುರುಸ್ವಾಮಿ ಬಯಸಿ ದ್ದರು. ತಮ್ಮ ಮನದ ಇಂಗಿತವನ್ನು ಜೋಸೆಫ್ ಮುಂದೆ ವ್ಯಕ್ತಪಡಿಸಿದಾಗ, ಅವರು ಸಕಾರಾ ತ್ಮಕವಾಗಿ ಪ್ರತಿಕ್ರಿಯಿಸಿದರು. ‌

‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗೆ ತಮ್ಮ ಅಲ್ಲಿವರೆಗಿನ ವೃತ್ತಿ ಅನುಭವವನ್ನು ಧಾರೆಯೆರೆಯಲು ಜೋಸೆಫ್ ನಿರ್ಧರಿಸಿದರು. ನಾಳೆ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮೊದಲ ಸಂಚಿಕೆ ಮಾರುಕಟ್ಟೆಗೆ ಬರುವುದಿತ್ತು. ಇಂದು ಮಧ್ಯಾಹ್ನದ ಹೊತ್ತಿಗೆ ಜೋಸೆಫ್ ಅವರ ಪತ್ನಿ ತೀವ್ರ ಅನಾರೋಗ್ಯಕ್ಕೊಳ ಗಾಗಿದ್ದಾರೆ ಎಂಬ ಸುದ್ದಿ ಬಂದಿತು.

Screenshot_2 ಋ

ಆದರೆ ಜೋಸೆಫ್ ಪತ್ರಿಕೆಯ ಮೊದಲ ಸಂಚಿಕೆಯನ್ನು ರೂಪಿಸುವ, ಮುಖಪುಟದಲ್ಲಿ ಸಂಪಾದಕೀಯ ಬರೆಯುವ ಗಡಿಬಿಡಿಯಲ್ಲಿದ್ದರು. ಅದು ಪತ್ರಿಕೆಯ ಚೊಚ್ಚಲ ಹೆರಿಗೆ! ಈ ಸುದ್ದಿ ಬಂದ ಕೆಲ ಹೊತ್ತಿಗೆ ಪತ್ನಿ ನಿಧನಳಾಗಿದ್ದಾಳೆ ಎಂಬ ಸುದ್ದಿಯೂ ಬಂತು.

ಒಂದೆಡೆ ಜೀವನವಿಡೀ ಸಂಗಾತಿಯಾಗಿದ್ದ ಪತ್ನಿಯ ಸಾವು, ಇನ್ನೊಂದೆಡೆ ನೂತನ ಪತ್ರಿಕೆಯ ಮೊದಲ ಸಂಚಿಕೆಯನ್ನು ಕಟ್ಟುವ ನಿರ್ಣಾಯಕ ಹೊಣೆಗಾರಿಕೆ! ಒಂದು ಸಾವಿಗೆ ಸ್ಪಂದನೆ, ಇನ್ನೊಂದು ಹೊಸ ಸಾಹಸಕ್ಕೆ ಜೀವ ನೀಡುವ ಕಾಯಕ.

ಜೋಸೆಫ್ ಎರಡನೆಯದನ್ನೇ ಆಯ್ಕೆ ಮಾಡಿಕೊಂಡರು. ಪತ್ನಿಯ ಸಾವಿನ ಸುದ್ದಿ ಬರುತ್ತಿದ್ದಂತೆ ಮನೆಗೆ ಹೋಗಲಿಲ್ಲ. ಆ ದಿನ ರಾತ್ರಿಯೆಲ್ಲ ಹೊಸ ಪತ್ರಿಕೆಗೆ ರೂಪ ಕೊಡುವುದರಲ್ಲಿಯೇ ತಲ್ಲೀನ ರಾಗಿ ಸುದ್ದಿಮನೆಯಲ್ಲಿಯೇ ಕಳೆದರು. ಮರುದಿನವೇ ಅವರ ಪತ್ನಿಯ ಪಾರ್ಥಿವ ಶರೀರವನ್ನು ನೋಡಿದ್ದು!

ಭಾ‌ರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ಒಬ್ಬ ದಂತಕಥೆಯಂತಿದ್ದ ಜೋಸೆಫ್ ಅವರು ನಂತರ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಆ ಪತ್ರಿಕೆಗೆ ಭದ್ರವಾದ ಅಡಿಪಾಯ ಹಾಕಿಕೊಟ್ಟರು. 1948ರಿಂದ ಮುಂದಿನ ಹತ್ತು ವರ್ಷಗಳ ಕಾಲ ಅವರು ಆ ಪತ್ರಿಕೆಗೆ ಸಂಪಾದಕ ರಾಗಿದ್ದರು. ಅವರ ವೃತ್ತಿ ಜೀವನದಲ್ಲಿ ಅಷ್ಟು ದೀರ್ಘ ಅವಧಿಗೆ ಸಂಪಾದಕರಾಗಿದ್ದುದು ಅದೇ ಮೊದಲು. ಆದರೆ, 1972ರಲ್ಲಿ ಅವರು ನಿಧನರಾದಾಗ, ಅವರು ಕಟ್ಟಿ ಬೆಳೆಸಿದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು ಅವರ ಸಾವಿನ ಸುದ್ದಿಯನ್ನು ಪ್ರಕಟಿಸಿದ ರೀತಿ ಇಂದಿಗೂ ಪತ್ರಿಕೋದ್ಯಮದ ವಲಯ ದಲ್ಲಿ ಒಂದು ಚರ್ಚಿತ ಮತ್ತು ವಿಷಾದನೀಯ ಉದಾಹರಣೆಯಾಗಿ ಉಳಿದು ಬಿಟ್ಟಿದೆ. ‌

ಜೋಸೆಫ್ ನಿಧನಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸಹ ಶೋಕ ಸಂದೇಶ ನೀಡಿದ್ದರು. ಆದರೆ ತನ್ನ ಸಂಸ್ಥಾಪಕ ಸಂಪಾದಕನ ಸಾವಿನ ಸುದ್ದಿಯನ್ನು ‘ಡೆಕ್ಕನ್ ಹೆರಾಲ್ಡ್’ ಒಳಗಿನ ಪುಟ ದಲ್ಲಿ ಕೇವಲ ಒಂದು ಕಾಲಮ್ ಗಾತ್ರದಲ್ಲಿ ಪ್ರಕಟಿಸಿತ್ತು!

ಇದು ಅವರ ಘನತೆಗೆ ತಕ್ಕುದಾದ ಗೌರವವಾಗಿರಲಿಲ್ಲ. ಪತ್ರಿಕೆಯ ಮುಖಪುಟದಲ್ಲಿ ಆ ಸುದ್ದಿಯ ಪ್ರಸ್ತಾಪವೂ ಇರಲಿಲ್ಲ. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯನ್ನು ಕರ್ನಾಟಕದ ಪ್ರಭಾವಿ ಪತ್ರಿಕೆಯನ್ನಾಗಿ ರೂಪಿಸಿದ ಜೋಸೆಫ್, ಆ ಪತ್ರಿಕೆಯ ‘ಆತ್ಮ’ದಂತಿದ್ದರು. ಆದರೆ ಅವರು ನಿವೃತ್ತರಾಗಿ ಹದಿನಾಲ್ಕು ವರ್ಷಗಳ ನಂತರ ನಿಧನರಾದಾಗ, ಪತ್ರಿಕೆಯ ಆಡಳಿತ ಮಂಡಳಿ ಅಥವಾ ಅಂದಿನ ಸಂಪಾದಕೀಯ ಮಂಡಳಿಯು ಅವರನ್ನು ಒಬ್ಬ ಸಾಮಾನ್ಯ ‘ಮಾಜಿ ಉದ್ಯೋಗಿ’ ಎಂಬಂತೆ ಪರಿಗಣಿಸಿತೇ ಹೊರತು, ಸಂಸ್ಥೆಯ ನಿರ್ಮಾತೃ ಎಂದು ಪರಿಗಣಿಸಲೇ ಇಲ್ಲ. ‌

ಅದೇ ಸಂಚಿಕೆಯಲ್ಲಿ ಬೆಂಗಳೂರಿನ ರೌಡಿಯೊಬ್ಬನ ಸಾವು, ಜೋಸೆಫ್ ಸಾವಿನ ಸುದ್ದಿಯ ಪಕ್ಕದಲ್ಲಿ, ನಾಲ್ಕು ಕಾಲಮ್ಮುಗಳಲ್ಲಿ ಜೋರಾಗಿ ಪ್ರಕಟವಾಗಿದ್ದು ವಿಪರ್ಯಾಸ! (ಮುಂದಿನ ವರ್ಷ ಅವರಿಗೆ ಮರಣೋತ್ತರ ‘ಪದ್ಮಭೂಷಣ’ ಪ್ರಶಸ್ತಿ ಬಂದಿತು.) ಜೋಸೆಫ್ ಅವರು ಬದುಕಿದ್ದಾಗ ಒಮ್ಮೆ ಹೇಳಿದ್ದ ರಂತೆ - ‘ಪತ್ರಕರ್ತನು ಬರೆಯುವ ಶಾಯಿ ಒಣಗುವ ಮೊದಲೇ ಮರೆಯಾಗುತ್ತಾನೆ’. ಅವರು ತಮ್ಮ ಸಾವಿನ ನಂತರ ತಾವು ಕಟ್ಟಿ ಬೆಳೆಸಿದ ಪತ್ರಿಕೆಯಲ್ಲಿ ಆಗಬಹುದಾದ ತಮ್ಮ ನಿರ್ಲಕ್ಷ್ಯವನ್ನು ಬಹುಶಃ ಮೊದಲೇ ಊಹಿಸಿದ್ದರೇನೋ!

ತಾವು ಕಟ್ಟಿದ ಪತ್ರಿಕೆಯ ಪೊತೆನ್ ಜೋಸೆಫ್ ನಿಧನ ಸಿಂಗಲ್ ಕಾಲಂ ಆಯ್ತು ಎಂದು ವ್ಯಥೆ ಪಡುವಾಗಲೆಲ್ಲ ನೆನಪಾಗುವ ಇನ್ನೊಂದು ಹೆಸರು ಫ್ರಾಂಕ್ ಮೊರೇಸ್. ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು.

ಭಾರತದಲ್ಲಿ ಇಂಗ್ಲಿಷ್ ಪತ್ರಿಕೆಯ ಅಗ್ರಗಣ್ಯ ಹತ್ತು ಸಂಪಾದಕರ ಪಟ್ಟಿಯಲ್ಲಿ ಮೊದಲ ಮೂರು ಹೆಸರಿನಲ್ಲಿ ಬರುವ ಹೆಸರು ಫ್ರಾಂಕ್ ಮೊರೇಸ್. ತಾವು ಕಟ್ಟಿದ ಪತ್ರಿಕೆಯನ್ನು ಅವರು ಬಿಡಬೇಕಾಗಿ ಬಂದಿತು. ಅದಾಗಿ ಎರಡು ವರ್ಷಗಳ ನಂತರ ನಿಧನರಾದಾಗ ಆ ಸುದ್ದಿ ಆರನೇ ಪುಟದ ಕೆಳಭಾಗ ದಲ್ಲಿ ಸಿಂಗಲ್ ಕಾಲಮ್ಮಿನಲ್ಲಿ ಚಿಕ್ಕದಾಗಿ ಪ್ರಕಟವಾಗಿತ್ತು. ‌

ಸುಮಾರು ನಾಲ್ಕು ದಶಕಗಳ ಹಿಂದೆ,‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ (ಬಹುಶಃ ಕ್ರೀಡಾ ವಿಭಾಗವಿದ್ದಿರ ಬೇಕು) ವರದಿಗಾರರೊಬ್ಬರು ಕಚೇರಿಯಲ್ಲಿ ಕೆಲಸ ಮಾಡುವಾಗಲೇ ಹೃದಯಾಘಾತ‌ದಿಂದ ನಿಧನ ರಾದರು. ಮರುದಿನ ಈ ಸುದ್ದಿ, ಆ ಪತ್ರಿಕೆಯ ಯಾವ ಪುಟಗಳಲ್ಲೂ ಪ್ರಕಟವಾಗಲಿಲ್ಲ. ಎರಡು ದಿನಗಳ ಬಳಿಕ ಅವರ ಫೋಟೋ ಅದೇ ಪತ್ರಿಕೆಯಲ್ಲಿ ಪ್ರಕಟವಾಯಿತು, ಆದರೆ ಜಾಹೀರಾತು ರೂಪದಲ್ಲಿ! ವರದಿಗಾರರ ನಿಧನವನ್ನು ಕುಟುಂಬದವರು ಹಣ ತೆತ್ತು ಜಾಹೀರಾತು ರೂಪದಲ್ಲಿ ಪ್ರಕಟಿಸಿದ್ದರು!

ಆ ದಿನಗಳಲ್ಲಿ, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ದಿ ಹಿಂದು’, ತಮ್ಮ ಸಂಸ್ಥೆಯ ಪತ್ರಕರ್ತರು ನಿಧನರಾದರೆ, ಆ ಸುದ್ದಿಯನ್ನು ಪ್ರಕಟಿಸುತ್ತಿರಲಿಲ್ಲ. ತಿಹಾರ ಜೈಲಿನಲ್ಲಿ ಕೈದಿ ಸತ್ತರೆ, ರೌಡಿಗಳು, ಬೀದಿಸೊಳೆಯರು ನಿಧನರಾದರೆ ಪ್ರಕಟಿಸುವ ಪತ್ರಿಕೆಗಳು, ತಮ್ಮದೇ ಸಂಸ್ಥೆಯ ಪತ್ರಕರ್ತ ಸತ್ತರೆ ಪ್ರಕಟಿಸುತ್ತಿರಲಿಲ್ಲ.

ಹದಿನೇಳು ವರ್ಷಗಳ ಕಾಲ ‘ತರಂಗ’ ಪತ್ರಿಕೆಯ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿ‌ ಯವರು 2010ರ ಡಿಸೆಂಬರ್ 10ರಂದು ನಿಧನರಾದರು. ಅವರ ನಿಧನದ ಸುದ್ದಿ ಬಂದಾಗ ರಾತ್ರಿ ಹತ್ತೂವರೆ ಗಂಟೆ. ನಾನು ‘ವಿಜಯ ಕರ್ನಾಟಕ’ದಲ್ಲಿ ಆ ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಆಫೀಸಿನ ಹೊರಗೆ ನಿಂತಿದ್ದೆ.

ಸುದ್ದಿ ಸಂಪಾದಕರು ಗುಲ್ವಾಡಿಯವರ ನಿಧನದ ಸುದ್ದಿಯ ವಿಷಯ ತಿಳಿಸಿದಾಗ, ನಾನು ವಾಪಸ್ ಹೋಗಿ ಅವರ ಕುರಿತು ಮುದ್ರಿತ ಅರ್ಧ ಪುಟ ಆಗುವಷ್ಟು ವಿಶೇಷ ಶ್ರದ್ಧಾಂಜಲಿ ಲೇಖನ ಬರೆದೆ. ಅಷ್ಟೇ ಅಲ್ಲ, ಗುಲ್ವಾಡಿ ಅವರ ನಿಧನಕ್ಕೆ ಅಂದು ನಾವು ಒಂದು ಇಡೀ ಪುಟವನ್ನು ಮೀಸಲಿಟ್ಟಿ ದ್ದೆವು.

ಇದಕ್ಕಾಗಿ ಪುಟಗಳನ್ನು ಮುದ್ರಣಕ್ಕೆ ಅರ್ಧ ಗಂಟೆ ತಡೆ ಹಿಡಿದು ಆ ಪುಟವನ್ನು ಸಿದ್ಧಪಡಿಸಿದ್ದೆವು. ನಾನು ಬರೆದ ಲೇಖನ ಮುಖಪುಟದಿಂದ ಆರಂಭವಾಗಿ ವಿಶೇಷ ಪುಟದ ತನಕ ಸಾಗಿತ್ತು. ಮರುದಿನ ಗುಲ್ವಾಡಿಯವರು ಕೆಲಸ ಮಾಡಿದ ‘ತರಂಗ’ ಪತ್ರಿಕೆಯ ‘ಉದಯವಾಣಿ’ ದೈನಿಕ ಈ ಸುದ್ದಿಯನ್ನು ಹೇಗೆ ಕವರ್ ಮಾಡಿರಬಹುದು ಎಂಬ ಬಗ್ಗೆ ಅತೀವ ಕುತೂಹಲವಿತ್ತು. ಪಾಪ, ಗುಲ್ವಾಡಿಯವರು ತಣ್ಣಗೆ ಸಿಂಗಲ್ ಕಾಲಮ್ಮಿನಲ್ಲಿ ಮಲಗಿದ್ದರು!

ಮೂವತ್ತು-ನಲವತ್ತು ವರ್ಷ ಸುದ್ದಿಮನೆಯಲ್ಲಿ ಜೀವ ಸವೆಸಿದ ಒಬ್ಬೊಬ್ಬ ಪತ್ರಕರ್ತರು, ಆ ಅವಧಿ ಯಲ್ಲಿ ಏನಿಲ್ಲವೆಂದರೂ ಸಾವಿರಾರು ಜನರ ಸಾವನ್ನು ನೋಡಿರುತ್ತಾರೆ, ಅವರ ನಿಧನ ಸುದ್ದಿ ಯನ್ನು ಬರೆದಿರುತ್ತಾರೆ. ಅದರಲ್ಲೂ ಡೆಸ್ಕ್ ಪತ್ರಕರ್ತರು ಆ ಪ್ರತಿಯೊಂದು ಸಾವನ್ನೂ ನೆನಪಿನಲ್ಲಿ ಉಳಿಯುವಂತೆ ಕಟ್ಟಿಕೊಟ್ಟಿರುತ್ತಾರೆ.

ಸತ್ತವರ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದು, ಅವರ ಹತ್ತಿರದವರಿಂದ ಬರೆಯಿಸುವುದು, ಅವರ ಇಡೀ ಜೀವನವನ್ನು ಅಕ್ಷರಗಳಲ್ಲಿ ಕೆತ್ತುವುದು, ಉತ್ತಮ, ಅಪರೂಪದ ಫೋಟೋಗಳನ್ನು ಹುಡುಕಿ ಪ್ರಕಟಿಸುವುದು, ಆ ಸುದ್ದಿಗೆ ಸದಾ ನೆನಪಿನಲ್ಲಿ ಉಳಿಯುವ ಶೀರ್ಷಿಕೆ ನೀಡುವುದು, ಆ ಪುಟವನ್ನು ವಿಶೇಷವಾಗಿ ವಿನ್ಯಾಸಗೊಳಿಸುವುದು, ಯಾವ ಸಣ್ಣ ತಪ್ಪೂ ನುಸುಳದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು.. ಹೀಗೆ ಆ ಸಾವಿನ ಸುದ್ದಿಗೆ ‘ಜೀವ ಕೊಡುವ’ ಕಾಯಕದಲ್ಲಿ ನಿರತನಾಗಿರುತ್ತಾರೆ. ತಮ್ಮ ಪತ್ರಿಕೆಯಲ್ಲಿ ಆ ನಿಧನ ಸುದ್ದಿ ಚೆನ್ನಾಗಿ ಬರಬೇಕು ಎಂಬುದಷ್ಟೇ ಅವರ ಕಾಳಜಿ.

ಹೀಗಿರುವಾಗ, ಈ ಸುದ್ದಿಜೀವಿಗಳು ಸತ್ತರೆ ಅವರ ಸುದ್ದಿಗೂ ನ್ಯಾಯ ಸಿಗಬೇಕಲ್ಲವೇ? ಸತ್ತಾಗ ಒಮ್ಮೆ ಸುದ್ದಿ ಪ್ರಕಟಿಸಿದ ಮೇಲೆ ನಾವು ಅವರ ಬಗ್ಗೆ ನಂತರ ಏನು ಬರೆಯುತ್ತೇವೆ, ಹೇಳಿ? ಸುದ್ದಿಮನೆಯ ಕರ್ಮಯೋಗಿಗಳ ಸಾವು ಸಹ ಸುದ್ದಿಯಾಗಬೇಡವೇ? ಅಷ್ಟಕ್ಕೂ ಅವರೇನು ತಪ್ಪು ಮಾಡಿದ್ದಾರೆ? ಈ ಕಾರಣದಿಂದಲೇ ಪತ್ರಕರ್ತರ ನಿಧನ ಸುದ್ದಿಯನ್ನು ನಾವು ಸಿಂಗಲ್ ಕಾಲಮ್ಮಿನ ಆಚೆ ನೋಡುವ ಪ್ರಯತ್ನವನ್ನು ಮಾಡಿದೆವು.

ನನ್ನ ಜತೆ ಸುಮಾರು ಹದಿಮೂರು ವರ್ಷಗಳ ಕಾಲ, ಸುದ್ದಿ ಸಂಪಾದಕ ಮತ್ತು ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದ ವಸಂತ ನಾಡಿಗೇರ ನಿಧನರಾದಾಗ, ‘ವಿಶ್ವವಾಣಿ’ಯಲ್ಲಿ ಮುಖ ಪುಟದಲ್ಲಿ ಎರಡು ಕಾಲಮ್ಮುಗಳಲ್ಲಿ ಸುದ್ದಿ ಪ್ರಕಟಿಸಿ, ಒಳಗೆ ಒಂದಿಡೀ ಪುಟವನ್ನು ಮೀಸಲಿಟ್ಟಿ ದ್ದೆವು.

ಡೆಸ್ಕ್ ಪತ್ರಕರ್ತರೊಬ್ಬರ ನಿಧನ ಸುದ್ದಿಯನ್ನು ಇಷ್ಟು ವ್ಯಾಪಕವಾಗಿ ಯಾರೂ ಕವರ್ ಮಾಡಿರ ಲಿಕ್ಕಿಲ್ಲ. ನಾಡಿಗೇರ ಆಗ ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ (ಸಂಯುಕ್ತ ಕರ್ನಾಟಕ) ಮೂರು ಕಾಲಮ್ಮು ಸುದ್ದಿ ಮಾತ್ರ ಪ್ರಕಟವಾಗಿತ್ತು. ಪತ್ರಕರ್ತರು ಸಹ ಎಲ್ಲರಂತೆ ಸುದ್ದಿಗೆ ಅರ್ಹರು. ಅವರು ಹೇಗೆ ಸುದ್ದಿ ಬರೆಯುತ್ತಾರೋ, ಸುದ್ದಿಯಾಗಲೂ ಯೋಗ್ಯರು.

ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ, ನಮ್ಮ ಸಹೋದ್ಯೋಗಿ ಮಿತ್ರರಿಗೆ, ಅವರ ಕುಟುಂಬದವರಿಗೆ ಸಂಬಂಧಿಸಿದ ಸುದ್ದಿಯನ್ನೆಲ್ಲ ಪ್ರಕಟಿಸುತ್ತಿದ್ದೆವು. ನಮ್ಮ ಸಿಬ್ಬಂದಿಯ ವಿವಾಹ ಸುದ್ದಿಯನ್ನೂ ಪತ್ರಿಕೆಯಲ್ಲಿ ಸುದ್ದಿ ಮಾಡುತ್ತಿದ್ದೆವು. ನನ್ನ ನಂತರ ಆ ಸಂಪ್ರದಾಯ ನಿಂತುಹೋಯಿತು.

ಇವೆಲ್ಲ ಯಾಕೆ ನೆನಪಾಯಿತು ಅಂದ್ರೆ ಬುಧವಾರ ಬೆಳಗ್ಗೆ ‘ದಿ ಹಿಂದು’ ಪತ್ರಿಕೆಯಲ್ಲಿ ಪಿ.ರಾಮಯ್ಯ ಅವರ ನಿಧನ ಸುದ್ದಿಯನ್ನು ಓದುತ್ತಿದ್ದೆ. ರಾಮಯ್ಯನವರು ಸುಮಾರು ನಲವತ್ತೆಂಟು ವರ್ಷಗಳ ಕಾಲ ಆ ಪತ್ರಿಕೆಯಲ್ಲಿ ಕೆಲಸ ಮಾಡಿದವರು. ‘ಹಿಂದು ರಾಮಯ್ಯ’ ಎಂದೇ ಎಲ್ಲರೂ ಅವರನ್ನು ಗುರುತಿಸುತ್ತಿದ್ದರು (ಅದೇ ಹೆಸರಿನಲ್ಲಿ ಅವರು ಆತ್ಮಕಥೆಯನ್ನೂ ಬರೆದಿದ್ದಾರೆ). ಅವರು ಆ ಪತ್ರಿಕೆ ಯ ಬೆಂಗಳೂರು ಆವೃತ್ತಿಯ ಮುಖ್ಯಸ್ಥರೂ ಆಗಿದ್ದರು. ಆ ಪತ್ರಿಕೆಯ ಕಚೇರಿ ನಿರ್ಮಾಣಕ್ಕೆ ಭೂಮಿ ಪಡೆಯಲು ರಾಮಯ್ಯನವರು ಹೆಣಗಿದ್ದರು. ಒಬ್ಬ ವ್ಯಕ್ತಿ ತನ್ನ ಜೀವಿತ ಅವಧಿಯ ಅರ್ಧ ಶತಮಾನ ವನ್ನು ಒಂದು ಸಂಸ್ಥೆಗೆ ಮೀಸಲಿಡುವುದು ಸಣ್ಣ ವಿಷಯವಲ್ಲ.

ರಾಮಯ್ಯನವರ ನಿಧನ ಸುದ್ದಿ ಆ ಪತ್ರಿಕೆಯ ನಾಲ್ಕನೇ ಪುಟದಲ್ಲಿ ಡಬಲ್ ಕಾಲಮ್ಮಿನಲ್ಲಿ ಪ್ರಕಟ ವಾಗಿತ್ತು. ‘ವಿಶ್ವವಾಣಿ’ ಸೇರಿದಂತೆ ಕನ್ನಡ ಪತ್ರಿಕೆಗಳೇ ಅವರ ನಿಧನ ಸುದ್ದಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯ ನೀಡಿದ್ದವು! ರಾಮಯ್ಯನವರ ಬಗ್ಗೆ ಅವರ ಕಾಲಖಂಡದಲ್ಲಿ ಕೆಲಸ ಮಾಡಿದವರಿಂದ ನಾಲ್ಕು ಒಳ್ಳೆಯ ಮಾತುಗಳನ್ನು ಸಹ ಆ ಪತ್ರಿಕೆ ಬರೆಸಿ ಪ್ರಕಟಿಸಲಿಲ್ಲ!

ಛೇ!

ವಿಶ್ವೇಶ್ವರ ಭಟ್‌

View all posts by this author