ಹಿಂದಿರು ನೋಡಿದಾಗ
naasomweswara@gmail.com
ಹದಿನೈದು ಸಾವಿರ ವರ್ಷಗಳ ಹಿಂದಿನ ಯುರೋಪ್ ಖಂಡ. ನಮ್ಮ ಪೂರ್ವಜರ ಜತೆಯಲ್ಲಿದ್ದ ಒಂದು ನಾಯಿಯು ಚಿರತೆಯ ಜತೆಯಲ್ಲಿ ಹೋರಾಡುತ್ತಾ ಗಾಯಗೊಂಡಿತು. ನಮ್ಮ ಪೂರ್ವಜರು ಗಾಯಗೊಂಡ ನಾಯಿಗೆ ತಮಗೆ ತಿಳಿದ ರೀತಿಯಲ್ಲಿ ಆರೈಕೆಯನ್ನು ಮಾಡಿದರು. ಸ್ವಲ್ಪ ಸುಧಾರಿಸಿ ಕೊಂಡ ನಾಯಿ, ಕುಂಟುತ್ತಾ ಹೊಳೆಯ ಬದಿಗೆ ಹೋಯಿತು. ಹೊಳೆಯ ಬದಿಯಲ್ಲಿ ಒಂದು ದೊಡ್ಡ ಮರವಿತ್ತು. ಆ ಮರದಲ್ಲಿ ಕಂದು ಬಣ್ಣದ ಬಿರುಕು ಬಿಟ್ಟ ತೊಗಟೆಯಿತ್ತು.
ನಾಯಿಯು ತೊಗಟೆಯನ್ನು ತನ್ನ ಹಲ್ಲಿನಿಂದ ಕಿತ್ತು ಜಗಿಯಲಾರಂಭಿಸಿತು. ನಮ್ಮ ಪೂರ್ವಜನಿಗೆ ಆಶ್ಚರ್ಯ! ಮಾಂಸಾಹಾರಿ ಪ್ರಾಣಿಯೊಂದು ಮರದ ತೊಗಟೆಯನ್ನು ತಿನ್ನುತ್ತಿದೆಯೆಂದರೆ?! ಇದರಲ್ಲಿ ಎನೋ ವಿಶೇಷತೆಯಿರಬೇಕೆಂದು ಆ ಮರದ ತೊಗಟೆಯನ್ನು ಕಿತ್ತು ತನ್ನ ಚರ್ಮದ ಚೀಲದಲ್ಲಿ ತುಂಬಿಕೊಂಡ. ಆ ನಾಯಿಯನ್ನು ಎತ್ತಿಕೊಂಡು ತನ್ನ ಗುಹೆಗೆ ಬಂದ. ಸಂಜೆಯ ವೇಳೆಗೆ ನಾಯಿಯು ಸುಧಾರಿಸಿಕೊಂಡಿತ್ತು.
ಕುಂಟುವುದನ್ನು ಕಡಿಮೆ ಮಾಡಿತ್ತು. ನಾಯಿಯ ಮುಂದೆ ಮತ್ತೆ ತೊಗಟೆಯನ್ನು ಹಾಕಿದ. ಅದು ಮತ್ತೆ ತಿಂದಿತು. ಕ್ರಮೇಣ ಅದರ ಗಾಯವು ಗುಣವಾಗಿ, ಚೇತರಿಸಿಕೊಂಡು, ಓಡಾಡಲು ಆರಂಭಿಸಿತು. ಇದರಿಂದ ಆ ನಮ್ಮ ಪೂರ್ವಜ ಒಂದು ದೊಡ್ಡ ಪಾಠವನ್ನು ಕಲಿತ. ತನ್ನ ಅರಿವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಿದ.
ಇದನ್ನೂ ಓದಿ: Dr N Someshwara Column: ರಾಮನು ಕಾಡಿಗೆ ಹೋದ ಮೇಲೆ ದಶರಥನೇಕೆ ಸತ್ತ ?
ಇಮ್‌ಹೋಟೆಪ್: ಈ ಪಾರಂಪರಿಕ ಜ್ಞಾನವು ಇಂದಿಗೆ 3500 ವರ್ಷಗಳ ಹಿಂದೆ ಬದುಕಿದ್ದ ಪ್ರಾಚೀನ ಸುಮೇರಿಯನ್, ಅಸ್ಸೀರಿಯನ್ ಹಾಗೂ ಈಜಿಪ್ಷಿಯನ್ ಜನರಿಗೆ ಹರಿದುಬಂದಿತು. ಕ್ರಿ.ಪೂ. 2600-2700ರ ನಡುವೆ ಬದುಕಿದ್ದ ಅಜ್ಞಾತ ಈಜಿಪ್ಷಿಯನ್ ವೈದ್ಯರು ಈ ಮೌಖಿಕ ಪಾರಂಪರಿಕ ವೈದ್ಯಕೀಯ ಜ್ಞಾನವನ್ನು ದಾಖಲಿಸಿದರು. ಇಂದಿಗೆ ಸುಮಾರು 2600 ವರ್ಷಗಳ ಹಿಂದೆ ಈಜಿಪ್ಷಿ ಯನ್ ವೈದ್ಯ ಇಮ್‌ಹೋಟೆಪ್ ತನ್ನ ಸಮಕಾಲೀನ ವೈದ್ಯಕೀಯ ದಾಖಲೆಗಳನ್ನೆಲ್ಲ ಸಂಗ್ರಹಿಸಿದ. ಯುವವೈದ್ಯರು ಈ ದಾಖಲೆಗಳನ್ನು ನಕಲು ಮಾಡಿಕೊಂಡು ಬಳಸುತ್ತಿದ್ದರು.
ಅಂಥ ನಕಲುಗಳಲ್ಲಿ ಎಡ್ವಿನ್ ಸ್ಮಿಥ್ ಪ್ಯಾಪಿರಸ್ ಮತ್ತು ಈಬರ್ಸ್ ಪ್ಯಾಪಿರಸ್ ಮುಖ್ಯವಾದವು (ಕ್ರಿ.ಪೂ.160ರ ಆಸುಪಾಸು). ಈಬರ್ಸ್ ಪ್ಯಾಪಿರಸ್ಸಿನಲ್ಲಿ 160 ಮೂಲಿಕೆಗಳು ಹಾಗೂ ತರಕಾರಿಗಳ ವೈದ್ಯಕೀಯ ಉಪಯೋಗದ ಬಗ್ಗೆ ಮಾಹಿತಿಯಿದ್ದವು. ಅವುಗಳಲ್ಲಿ ‘ಜೆರೆಟ್’ ಅಥವಾ ‘ಸ್ಯಾಲಿಕ್ಸ್’ ಎಂಬ ಮರವೂ ಒಂದಾಗಿತ್ತು. ಸ್ಯಾಲಿಕ್ಸ್ ಮರದ ಎಲೆಗಳನ್ನು ಜಗಿಯುವುದರಿಂದ ಅಥವಾ ತೊಗಟೆ ಯಿಂದ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ ಹಾಗೂ ನೋವು ನಿವಾರಣೆಯಾಗುತ್ತದೆ ಎನ್ನುವ ವಿಚಾರವು ಅದರಲ್ಲಿ ದಾಖಲಾಗಿತ್ತು.

ಸ್ಯಾಲಿಕ್ಸ್: ಯುರೋಪ್ ಮತ್ತು ಮಧ್ಯ ಏಷ್ಯಾದ ಜನರು ‘ಸ್ಯಾಲಿಕ್ಸ್’ ಅಥವಾ ‘ವಿಲ್ಲೋ’ ಎಂಬ ಹೆಸರಿನಿಂದ ಗುರುತಿಸುತ್ತಿದ್ದ ಮರವೊಂದರಲ್ಲಿ ಸುಮಾರು 350 ಪ್ರಭೇದಗಳಿವೆ. ಅವುಗಳಲ್ಲಿ ‘ಸ್ಯಾಲಿಕ್ಸ್ ಆಲ್ಬ’ ಎಂಬ ಮರದಿಂದ ಕ್ರಿಕೆಟ್ ಬ್ಯಾಟನ್ನು ತಯಾರಿಸಿದರು. ಈ ಗಿಡದ ಕಾಂಡದಿಂದ ಬಿದಿರಿನಂಥ ಸಣ್ಣ ಎಳೆಗಳನ್ನು ಸೀಳಿ, ಅದರಿಂದ ಬುಟ್ಟಿಗಳನ್ನು ಹೆಣೆದರು. ಮರವನ್ನು ಸುಟ್ಟು ಅದರ ಇದ್ದಿಲನ್ನು ಗನ್ ಪೌಡರ್ ತಯಾರಿಕೆಯಲ್ಲಿ ಬಳಸಿದರು. ಈ ಮರದಿಂದ ಒಸರುವ ರಸವನ್ನು ಚರ್ಮವನ್ನು ಹದಗೊಳಿಸಲು ಉಪಯೋಗಿಸಿದರು.
ಹಾಗೆಯೇ ಈ ಮರದ ತೊಗಟೆಯನ್ನು ಬಳಸಿ, ತಮ್ಮ ಜ್ವರವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಪ್ರಾಚೀನ ಗ್ರೀಸ್ ಸಾಮ್ರಾಜ್ಯದ ಹಿಪ್ಪೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370) ಸಹ, ತಲೆನೋವನ್ನು ಡಿಮೆ ಮಾಡಲು ಹಾಗೂ ಪ್ರಸವ ವೇದನೆಯನ್ನು ತಡೆದುಕೊಳ್ಳಲು ಸ್ಯಾಲಿಕ್ಸ್ ಮರದ ಎಲೆಗಳನ್ನು ಜಗಿಯಲು ಹೇಳುತ್ತಿದ್ದ. ವೇತಸ: ಕಾಶ್ಮೀರದ ಬೆಟ್ಟಗುಡ್ಡಗಳಲ್ಲಿ ‘ಸ್ಯಾಲಿಕ್ಸ್ ಕೇಪ್ರಿಯ’ ಎಂಬ ಪ್ರಭೇದವು ಬೆಳೆಯುತ್ತಿತ್ತು. ಇದನ್ನು ಸಂಸ್ಕೃತದಲ್ಲಿ ‘ವೇತಸ’ ಎಂದು ಕರೆದರು. ಕನ್ನಡದಲ್ಲಿ ಇದನ್ನು ಬೈಚೆಮರ, ಹೊಳೆಬೋಸಿ, ನೀರವಂಜಿ ಎಂದೆಲ್ಲ ಕರೆಯುವುದುಂಟು.
ಆಯುರ್ವೇದ ಗ್ರಂಥಗಳು ಜ್ವರವನ್ನು ನಿವಾರಿಸಲು ಗುಡೂಚಿ, ನಿಂಬ, ಹರಿದ್ರಾ, ಸರ್ಪಗಂಧ, ಶಲ್ಲಾಕಿ ಮುಂತಾದವನ್ನು ಬಳಸಬಹುದು ಎನ್ನುವುದರ ಜತೆಯಲ್ಲಿ ವೇತಸವನ್ನೂ ಪ್ರಸ್ತಾಪಿಸುತ್ತದೆ. ಚರಕಸಂಹಿತೆಯ ಸೂತ್ರಸ್ಥಾನ 27, ಸುಶ್ರುತ ಸಂಹಿತೆಯ ಸೂತ್ರಸ್ಥಾನ 45, ಅಷ್ಟಾಂಗ ಹೃದಯ ಸೂತ್ರಸ್ಥಾನ 6, ರಾಜ ನಿಘಂಟು, ಭಾವಪ್ರಕಾಶ ನಿಘಂಟುಗಳು ವೇತಸವನ್ನು ಜ್ವರಹಾರಕವಾಗಿ ಪ್ರಸ್ತಾಪಿ ಸುತ್ತವೆ. ಆದರೆ ಬಳಕೆಯಲ್ಲಿ ವೇತಸಕ್ಕಿಂತ ಇತರ ಮೂಲಿಕೆಗಳನ್ನು ಹೆಚ್ಚಿಗೆ ಸೂಚಿಸುತ್ತವೆ.
ಹಾಗಾಗಿ ಭಾರತದಲ್ಲಿ ಜ್ವರಹಾರಕವಾಗಿ ವೇತಸವು ಅಷ್ಟು ಪ್ರಸಿದ್ಧಿಗೆ ಬರಲಿಲ್ಲ. ಮೊದಲ ದಾಖಲೆ: 1763. ಎಡ್ವರ್ಡ್ ಸ್ಟೋನ್ (1702-1768) ಎಂಬ ಬ್ರಿಟಿಷ್ ಕ್ರೈಸ್ತ ಸನ್ಯಾಸಿಯು ಅಕಸ್ಮಾತ್ತಾಗಿ ಸ್ಯಾಲಿಕ್ಸ್ ಪುಡಿಯ ರುಚಿಯನ್ನು ನೋಡಿದ. ಅದು ತೀರಾ ಕಹಿಯಾಗಿತ್ತು. ಅವನಿಗೆ ಸಿಂಕೋನ ಮರದ ಪರಿಚಯವಿತ್ತು. ಸಿಂಕೋನ ಸಹ ತುಂಬಾ ಕಹಿ. ಆದರೆ ಅದು ಮಲೇರಿಯ ಜ್ವರವನ್ನು ಗುಣ ಪಡಿಸುತ್ತಿತ್ತು.
ಹಾಗಾಗಿ ಸ್ಯಾಲಿಕ್ಸ್ ಸಹ ಜ್ವರವನ್ನೋ ಅಥವಾ ಮತ್ತೊಂದನ್ನು ಗುಣಪಡಿಸಬಹುದು ಎಂಬ ತರ್ಕದ ಹಿನ್ನೆಲೆಯಲ್ಲಿ, ಚಳಿಜ್ವರದಿಂದ ನರಳುತ್ತಿದ್ದ 50 ಜನರಿಗೆ ವಿಲ್ಲೋ ಪುಡಿಯನ್ನು ನೀಡಿದ. ಅವರಲ್ಲಿ ತುಂಬಾ ಜನರ ಜ್ವರವು ಕಡಿಮೆಯಾಯಿತು. ಈ ಬಗ್ಗೆ ಒಂದು ಲೇಖನವನ್ನು ಬರೆದ. ಲಂಡನ್ನಿನ ರಾಯಲ್ ಸೊಸೈಟಿಯ ಮುಂದೆ ಈ ಪ್ರಬಂಧವನ್ನು ಮಂಡಿಸಿ, ವಿಲ್ಲೋವಿನ ಜ್ವರಹಾರಕ ಗುಣದ ಬಗ್ಗೆ ಮೊದಲ ಬಾರಿಗೆ ದಾಖಲಿಸಿದ.
ಜೊಹಾನ್ ಆಂಡ್ರಿಯಸ್ ಬುಕ್ನರ್ (1783-1582) ಸ್ಯಾಲಿಕ್ಸ್ ಮರದಿಂದ ಅತ್ಯಂತ ಕಹಿಯಾಗಿದ್ದ ವಿಲ್ಲೋ ಹರಳುಗಳನ್ನು ಪ್ರತ್ಯೇಕಿಸಿದ. ಆ ಹರಳುಗಳಿಗೆ ‘ಸ್ಯಾಲಿಸಿನ್’ ಎಂದು ನಾಮಕರಣವನ್ನು ಮಾಡಿದ. ಕೆಲವೇ ದಿನಗಳಲ್ಲಿ ರಫೇಲ್ ಪಿರಿಯ (1814-1865) ಎಂಬುವವನು ಈ ಸ್ಯಾಲಿಸಿನ್‌ನಲ್ಲಿ ನಿಜವಾಗಿಯೂ ಜ್ವರಹಾರಕವಾಗಿದ್ದ ಸ್ಯಾಲಿಸಿಲಿಕ್ ಆಸಿಡ್ ಎನ್ನುವ ಭಾಗವನ್ನು ಪ್ರತ್ಯೇಕಿಸಿದ.
ಇದು ಜ್ವರವನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತಿತ್ತು. ಆದರೆ ತಿಂದವರ ಹೊಟ್ಟೆಯಲ್ಲಿ ವಿಪರೀತ, ಉರಿ, ನೋವು, ಸಂಕಟಗಳನ್ನು ಉಂಟುಮಾಡುತ್ತಿತ್ತು. ಅನೇಕರು ವಾಂತಿಯನ್ನೂ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಒಂದು ಔಷಧವಾಗಿ ಸ್ಯಾಲಿಸಿಲಿಕ್ ಆಸಿಡ್ ಜನಪ್ರಿಯವಾಗಲಿಲ್ಲ.
ಫೆಲಿಕ್ಸ್ ಹಾಫ್ ಮನ್: 1853ಕ್ ಆಸಿಡ್ ಅನ್ನು ಬಳಸಿಕೊಂಡು, ಅದರಿಂದ ಒಂದು ಹೊಸ ರಾಸಾಯನಿಕ ಆಸಿಟೈಲ್ ಸ್ಯಾಲಿಸಿಲಿಕ್ ಆಸಿಡ್ ಅನ್ನು ರೂಪಿಸಿದ. ಈ ರಾಸಾಯನಿಕ ಸ್ವರೂಪವು ಅಸ್ಥಿರವಾಗಿದೆ ಎಂಬುದನ್ನು ಗಮನಿಸಿದ.
ಔಷಧಿ ತಯಾರಿಕಾ ವಿಧಾನವನ್ನು ಒಂದು ಪುಸ್ತಕದಲ್ಲಿ ಬರೆದು ಅದನ್ನು ಮೂಲೆಗೆಸೆದ. 40 ವರ್ಷಗಳಾದ ನಂತರ 1897ರಲ್ಲಿ ಫೆಲಿಕ್ಸ್ ಹಾಫ್ ಮನ್ (1868-1946) ಎಂಬ ಯುವ ರಾಸಾಯನಿಕ ವಿಜ್ಞಾನಿ ಜರ್ಮನಿಯ ಬಾಯರ್ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಿದ್ದ. ಈತನ ತಂದೆಗೆ ಅಸಾಧ್ಯ ವಾದ ಕೀಲುರಿಯೂತ (ಆರ್ಥ್ರೈಟಿಸ್) ಕಾಡುತ್ತಿತ್ತು. ಸ್ಯಾಲಿಸಿಲಿಕ್ ಆಸಿಡ್ ತಿಂದರೆ ವಿಪರೀತ ಹೊಟ್ಟೆ ಉರಿ ಕಾಣಿಸಿಕೊಂಡು ವಾಂತಿಯಾಗುತ್ತಿತ್ತು.
ಹಾಗಾಗಿ ಒಂದು ಸೌಮ್ಯ ಸ್ವರೂಪದ ಔಷಧಿಯನ್ನು ರೂಪಿಸಲು ಹೆಣಗುತ್ತಿದ್ದ. ಇವನಿಗೆ ಗೆರ್ಹಾರ್ಡ್ಟ್‌ನ ಪುಸ್ತಕವು ದೊರೆಯಿತು. ಅವನು ಅಸ್ಥಿರವಾಗಿದ್ದ ಅಸಿಟೈಲ್ ಸ್ಯಾಲಿಸಿಲಿಕ್ ಆಸಿಡ್‌ಗೆ ಒಂದು ಸ್ಥಿರವಾದ ರೂಪವನ್ನು ನೀಡಿದ. ಈ ಹೊಸ ಸ್ವರೂಪವು ಹೊಟ್ಟೆಗೆ ಅಷ್ಟೇನೂ ತೊಂದರೆ ಯನ್ನು ಕೊಡುತ್ತಿರಲಿಲ್ಲ. ಅಷ್ಟು ಕಹಿಯೂ ಇರಲಿಲ್ಲ. ಜತೆಗೆ ತ್ವರಿತವಾಗಿ ನೋವನ್ನು ಇಳಿಸು ತ್ತಿತ್ತು. ಅದನ್ನು ತನ್ನ ತಂದೆಗೆ ನೀಡಿದ. ಬಾಯರ್ ಸಂಸ್ಥೆಗೆ ತಕ್ಷಣವೇ ಈ ಔಷಧಿಯ ಮಹತ್ವವು ಅರಿವಾಯಿತು. ಕೊನೆಗೆ 1899ರಲ್ಲಿ ಈ ಹೊಸ ರಾಸಾಯನಿಕಕ್ಕೆ ‘ಆಸ್ಪಿರಿನ್’ ಎಂದು ನಾಮಕರಣ ವನ್ನು ಮಾಡಿ ಮಾರಾಟಕ್ಕೆ ಬಿಡುಗಡೆ ಮಾಡಿತು.
ಇದರಲ್ಲಿ ‘ಎ’ ಎನ್ನುವುದು ‘ಅಸಿಟೈಲ್’ ಎನ್ನುವುದನ್ನು ಪ್ರತಿನಿಧಿಸುತ್ತಿತ್ತು. ‘ಸ್ಪಿರ್’ ಎನ್ನುವುದು ‘ಸ್ಪೈರಿಯ ಉಲ್ಮೇರಿಯ’ ಎನ್ನುವ ಸಸ್ಯದ ಸಂಕ್ಷಿಪ್ತ ರೂಪವಾಗಿತ್ತು. ಇದನ್ನು ‘ಮೆಡೋಸ್ವೀಟ್’ ಎಂದೂ ಕರೆಯುತ್ತಾರೆ. ಇದನ್ನು ಅನಾದಿ ಕಾಲದಿಂದ ಸ್ಯಾಲಿಕ್ಸ್‌ನಂತೆ, ಜ್ವರಹಾರಕವಾಗಿ ಬಳಸುತ್ತಿದ್ದರು. ಇದರಲ್ಲೂ ಸ್ಯಾಲಿಸಿನ್ ಇತ್ತು.
‘ಇನ್’ ಎನ್ನುವುದು ಒಂದು ಉತ್ತರ ಪ್ರತ್ಯಯ. ಅಂದಿನ ದಿನಗಳಲ್ಲಿ ಔಷಧಿಗಳ ಹೆಸರಿನ ಕೊನೆಯಲ್ಲಿ ‘ಇನ್’ ಎಂದು ಸೇರಿಸುವ ಒಂದು ಪ್ರವೃತ್ತಿಯು ಇತ್ತು. ಮಹಾಯುದ್ಧ: ಬಾಯರ್ ಸಂಸ್ಥೆಯು ಆಸ್ಪಿರಿನ್ ಪುಡಿ ಯನ್ನು ಬಾಟಲಿಯಲ್ಲಿ ತುಂಬಿ ಮಾರಾಟಕ್ಕೆ ತಂದಿತು. ಜನರು ನಿರ್ದಿಷ್ಟ ಪ್ರಮಾಣದ ಪುಡಿಯನ್ನು ನೀರಿನಲ್ಲಿ ಕಲೆಸಿ ಕುಡಿಯುತ್ತಿದ್ದರು. ಆದರೆ ಅವರಿಗೆ ಎಷ್ಟು ಪುಡಿಯನ್ನು ನೀರಿನಲ್ಲಿ ಹಾಕಬೇಕೆಂಬುದರ ಬಗ್ಗೆ ಗೊಂದಲವಿತ್ತು.
ಆಗ 1915ರಲ್ಲಿ ನಿರ್ದಿಷ್ಟ ಪ್ರಮಾಣದ ಪುಡಿಯನ್ನು ಒತ್ತಿ, ಮಾತ್ರೆಯನ್ನು ರೂಪಿಸಿದರು. ಹಾಗಾಗಿ ಜಗತ್ತಿನಾದ್ಯಂತ ಆಸ್ಪಿರಿನ್ ಮಾತ್ರೆಗಳು ಪ್ರಸಿದ್ಧಿಗೆ ಬಂದವು. ಅದೇ ವೇಳೆಗೆ ವಿಶ್ವದ ಮೊದಲನೆಯ ಮಹಾಯುದ್ಧವು ಆರಂಭವಾಯಿತು. ರಣರಂಗದಲ್ಲಿ ಹೋರಾಡುತ್ತಿದ್ದ ಯೋಧರ ಜ್ವರವನ್ನು ಇಳಿಸಲು ಹಾಗೂ ಮೈಕೈ ನೋವನ್ನು ಕಡಿಮೆ ಮಾಡಲು ಒಂದು ಔಷಧವು ಬೇಕಾಗಿತ್ತು. ಅವರು ಅದನ್ನು ಆಸ್ಪಿರಿನ್ ನಲ್ಲಿ ಕಂಡುಕೊಂಡರು. ಹಾಗಾಗಿ ಆಸ್ಪಿರಿನ್‌ಗೆ ಹಠಾತ್ತನೆ ಎಲ್ಲಿಲ್ಲದ ಬೇಡಿಕೆ ಬಂದಿತು.
ವಿಶ್ವದ ಮೊದಲನೆಯ ಮಹಾಯುದ್ಧದಲ್ಲಿ ಜರ್ಮನಿಯು ಸೋತಿತು. 1919ರಲ್ಲಿ ‘ವರ್ಸೇಲಿಯಸ್ ಒಪ್ಪಂದ’ವು ನಡೆಯಿತು. ಈ ಒಪ್ಪಂದದ ಅನ್ವಯ, ಬಾಯರ್ ಸಂಸ್ಥೆಯು ಆಸ್ಪಿರಿನ್‌ನ ಮೇಲಿದ್ದ ತನ್ನ ಹಕ್ಕುಸ್ವಾಮ್ಯವನ್ನು (ಪೇಟೆಂಟ್) ಬಿಟ್ಟುಕೊಡಬೇಕಾಯಿತು. ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ದೇಶಗಳು ಆಸ್ಪಿರಿನ್‌ನಲ್ಲಿ ‘ಎ’ ಅಕ್ಷರವನ್ನು ಬಿಟ್ಟು ‘ಸ್ಪಿರಿನ್’ ಎಂಬ ಹೆಸರಿನಲ್ಲಿ ತಾವೇ ಆಸ್ಪಿರಿನ್ ಅನ್ನು ತಯಾರಿಸಿ ಮಾರಾಟ ಮಾಡಿ ಹಣ ಮಾಡಿಕೊಂಡವು. ಜರ್ಮನಿ ಮತ್ತು ಕೆನಡ ದೇಶಗಳಲ್ಲಿ ಮಾತ್ರ ಬಾಯರ್ ಸಂಸ್ಥೆಯು ತಾನು ತಯಾರಿಸಿದ ಆಸ್ಪಿರಿನ್ ಅನ್ನು ಮಾರಾಟ ಮಾಡುತ್ತಿತ್ತು.
ಅದರ ಆದಾಯ ಗಣನೀಯವಾಗಿ ಕಡಿಮೆಯಾಯಿತು. 1918ರಲ್ಲಿ ವಿಶ್ವದ ಕುಖ್ಯಾತ ‘ಸ್ಪ್ಯಾನಿಶ್ -’ ಆರಂಭವಾಯಿತು. ಆಗ ವೈದ್ಯರು ನೋವು ಮತ್ತು ಜ್ವರವನ್ನು ನಿವಾರಿಸಲು ಆಸ್ಪಿರಿನ್ ಅನ್ನು ಯದ್ವಾ ತದ್ವಾ ಬಳಸಿದರು. ಕೆಲವು ವೈದ್ಯರಂತೂ ದಿನಕ್ಕೆ 30 ಗ್ರಾಂ ಆಸ್ಪಿರಿನ್ ಅನ್ನು ಸೇವಿಸುವಂತೆ ಸಲಹೆಯನ್ನು ನೀಡಿದರು. ಇದರಿಂದ ಅನೇಕ ಜನರ ಅನಾರೋಗ್ಯವು ತಹಬಂದಿಗೆ ಬಂದಿತು ಎನ್ನುವುದು ನಿಜ. ಆದರೆ ಸಾಕಷ್ಟು ಜನರ ಶ್ವಾಸಕೋಶಗಳಲ್ಲಿ ನೀರು ತುಂಬಿಕೊಂಡಿತು ಹಾಗೂ ಜಠರ ಮತ್ತು ಕರುಳಿನಿಂದ ರಕ್ತಸ್ರಾವವಾಗಿ ಜನರು ಸಾಯುತ್ತಿದ್ದರು. ಆಸ್ಪಿರಿನ್‌ನ ಈ ಪಾರ್ಶ್ವ ಪರಿಣಾಮಗಳ ಬಗ್ಗೆ ಯಾರೂ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ.
ಹೃದಯ: ಜ್ವರಹಾರಕವಾಗಿ ಹಾಗೂ ನೋವುನಿವಾರಕವಾಗಿ ವಿಶ್ವದಾದ್ಯಂತ ಆಸ್ಪಿರಿನ್ ಜನಪ್ರಿಯ ವಾಯಿತು. 1948ರಲ್ಲಿ ಲಾರೆನ್ಸ್ ಕ್ರೇವನ್ ಎಂಬ ಅಮೆರಿಕನ್ ವೈದ್ಯನು “ಆಸ್ಪಿರಿನ್ ಸೇವಿಸುವವರಿಗೆ ಹೃದಯಾಘಾತವಾಗುವುದಿಲ್ಲ ಹಾಗೂ ಲಕ್ವ ಹೊಡೆಯುವುದಿಲ್ಲ" ಎಂದು ಸಾರಿದ. ಆದರೆ ಅವನ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಕೊನೆಗೆ 1971ರಲ್ಲಿ ಬ್ರಿಟನ್ನಿನ ಔಷಧ ಶಾಸ್ತ್ರಜ್ಞ ಜಾನ್ ವೇನ್ (1927-2004) ಆಸ್ಪಿರಿನ್‌ನ ನಿಜವಾದ ಸಾಮರ್ಥ್ಯವನ್ನು ಬೆಳಕಿಗೆ ತಂದ. ಇದು ಸೈಕ್ಲೋ ಆಕ್ಸಿಜಿನೇಸ್ (ಕಾಕ್ಸ್) ಎನ್ನುವ ಕಿಣ್ವವನ್ನು ನಿಗ್ರಹಿಸುತ್ತಿತ್ತು. ಹಾಗಾಗಿ ನೋವು, ಜ್ವರ ಹಾಗೂ ಉರಿಯೂತಕ್ಕೆ ಕಾರಣವಾಗುವ ಪ್ರಾಸ್ಟಾಗ್ಲಾಂದಿನ್ ಉತ್ಪಾದನೆಯಾಗುತ್ತಿರಲಿಲ್ಲ.
ಹಾಗೆಯೇ ಥ್ರಾಂಬಕ್ಸೇನ್ ಎಂಬ ರಾಸಾಯನಿಕದ ಕೆಲಸವನ್ನು ತಡೆಗಟ್ಟುತ್ತಿತ್ತು. ಈ ಥ್ರಾಂಬಕ್ಸೇನ್, ಕಿರುಬಿಲ್ಲೆಗಳು (ಪ್ಲೆಟ್‌ಲೆಟ್ಸ್) ಒಂದಕ್ಕೊಂದು ಅಂಟಿಕೊಂಡು ಉಂಡೆಗಟ್ಟುವಂತೆ ಮಾಡುತ್ತಿತ್ತು. ಈ ರಕ್ತದ ಉಂಡೆ ಅಥವಾ ಗರಣೆಯು (ಕ್ಲಾಟ್) ರಕ್ತನಾಳದಲ್ಲಿ ಅಡಚಿಕೊಂಡಾಗ ಹೃದಯಾಘಾತ ವಾಗುತ್ತಿತ್ತು ಅಥವಾ ಲಕ್ವ ಹೊಡೆಯುತ್ತಿತ್ತು.
ಆಸ್ಪಿರಿನ್, ಥ್ರಾಂಬಕ್ಸೇನಿನ ಸಹಜ ಕೆಲಸವನ್ನು ತಡೆಗಟ್ಟುತ್ತಿದ್ದ ಕಾರಣ, ಕಿರುಬಿಲ್ಲೆಗಳು ಉಂಡೆಗಟ್ಟುತ್ತಿರಲಿಲ್ಲ. ಈ ಒಂದು ಸಂಶೋಧನೆಗಾಗಿ ವೇನ್, 1982ರ ನೊಬೆಲ್ ಪಾರಿತೋಷಕ ವನ್ನು ಗಳಿಸಿದ. ಹೃದಯಾಘಾತ ಹಾಗೂ ಲಕ್ವವನ್ನು ಹಠಾತ್ತನೆ ತಡೆಗಟ್ಟುವ ‘ಜಾದೂ’ ಔಷಧವಾಗಿ ಆಸ್ಪಿರಿನ್ ಜನಪ್ರೀತಿಯನ್ನು ಗಳಿಸಿತು.
2000ನೇ ಇಸವಿಯ ಆಸುಪಾಸಿನಲ್ಲಿ ನಡೆದ ಸಂಶೋಧನೆಗಳು ದೊಡ್ಡ ಕರುಳು ಹಾಗೂ ನೆಟ್ಟ ಗರುಳಿನ (ಕೋಲೋರೆಕ್ಟಲ್) ಕ್ಯಾನ್ಸರನ್ನು ಮಾತ್ರವಲ್ಲ, ಇತರ ಅನೇಕ ಸ್ವರೂಪದ ಕ್ಯಾನ್ಸರ್ ಬೆಳೆಯದಂತೆ ತಡೆಗಟ್ಟುತ್ತದೆ ಎಂಬ ವಿಚಾರವು ತಿಳಿದುಬಂದು, ಅದರ ಖ್ಯಾತಿ ಮತ್ತು ಉಪಯೋ ಗವು ಮತ್ತಷ್ಟು ಹೆಚ್ಚಿತು. ಆದರೆ... ಆಸ್ಪಿರಿನ್‌ನ ಅವಗುಣಗಳೂ ಸಾಕಷ್ಟು ಹೊರ ಬಂದವು.
1960ರ ದಶಕದ ಆಸ್ಟ್ರೇಲಿಯಾ ಮತ್ತು ಅಮೆರಿಕ ದಲ್ಲಿ, ಜ್ವರ ಹಾರಕವಾಗಿ ಆಸ್ಪಿರಿನ್ ಬಳಸುತ್ತಿದ್ದ ಮಕ್ಕಳಲ್ಲಿ ಇದ್ದಕ್ಕಿದ್ದ ಹಾಗೆ ತೀವ್ರಸ್ವರೂಪದ ವಾಂತಿ, ಸೆಳವು, ಯಕೃತ್ ಉರಿಯೂತ ಹಾಗೂ ಮಿದುಳಿನಲ್ಲಿ ನೀರು ತುಂಬಿಕೊಳ್ಳಲಾರಂಭಿಸಿದವು. ಈ ಸಮಸ್ಯೆಗಳಿಗೆ ಈಡಾದ ಶೇ.30-40 ಮಕ್ಕಳು ಸಾಯಲಾರಂಭಿಸಿದರು. ವೈದ್ಯರು ಇದನ್ನು ‘ರೇಯಿಸ್ ಲಕ್ಷಣಾವಳಿ’ (ರೇಯಿಸ್ ಸಿಂಡ್ರೋಮ್) ಎಂದು ಕರೆದರು. ತಕ್ಷಣವೇ ಮಕ್ಕಳಲ್ಲಿ ಜ್ವರಹಾರಕವಾಗಿ ಆಸ್ಪಿರಿನ್ ಬಳಕೆಯನ್ನು ನಿಲ್ಲಿಸಿದರು. ಅದೇವೇಳೆಗೆ ಪ್ಯಾರಾಸಿಟಮಾಲ್ ಜ್ವರಹಾರಕವಾಗಿ ಪ್ರಖ್ಯಾತವಾಗಿತ್ತು. ಹೀಗೆ ಎರಡು ಅಲಗಿನ ಖಡ್ಗವಾಗಿ ಆಸ್ಪಿರಿನ್ ಇಂದಿಗೂ ಬಳಕೆಯಲ್ಲಿದೆ.