ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಇಂಗ್ಲಿಷ್‌ ಭಾಷೆ ಸೊರಗುತ್ತಿಲ್ಲ, ಅಸಲಿಗೆ ಅದು ಪಾರ್ಟಿ ಮಾಡುತ್ತಿದೆ !

‘ಇಂಗ್ಲಿಷ್ ಒಂದು ಭಾಷೆಯೋ, ಒಂದು ಕೌಶಲವೋ?’ ಎಂಬ ಪ್ರಶ್ನೆಯಿಂದ ಹಿಡಿದು, ಅದು ಪ್ರಾದೇಶಿಕ ಭಾಷೆಗಳ ಮೇಲೆ ಬೀರುತ್ತಿರುವ ಪ್ರಭಾವದವರೆಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಇಂಗ್ಲಿಷ್ ಭಾಷೆಯ ಈ ‘ಪ್ರಜಾ ಪ್ರಭುತ್ವೀಕರಣ’ ಅಥವಾ ಅದರ ರೂಪಾಂತರವು, ಅದು ಒಂದು ಕಾಲದ ಶಿಸ್ತಿನ ಬ್ರಿಟಿಷ್ ಶಾಲಾ ಮಾಸ್ತರ ನಿಂದ ಈಗ ‘ಮಾಸ್’ ಹೀರೋ ಆಗಿ ಬದಲಾದ ಕಥೆಯಂತೆ ಕೇಳಿಸುತ್ತದೆ.

ನೂರೆಂಟು ವಿಶ್ವ

ಇಂಗ್ಲಿಷ್ ಭಾಷೆಗೆ ಏನು ಕಾದಿದೆ ? ಅದರ ಭವಿಷ್ಯವೇನು?’ ಈ ವಿಷಯ ಕುರಿತು ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ಅಪರೂಪದ ವಿಚಾರ ಸಂಕಿರಣ ನಡೆಯಿತು. ದಿನವಿಡೀ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದೆ. ಇಂಗ್ಲಿಷ್ ಭಾಷೆಯು ಇಂದು ಕೇವಲ ಒಂದು ಸಂವಹನ ಮಾಧ್ಯಮವಾಗಿ ಉಳಿದಿಲ್ಲ.

‘ಇಂಗ್ಲಿಷ್ ಒಂದು ಭಾಷೆಯೋ, ಒಂದು ಕೌಶಲವೋ?’ ಎಂಬ ಪ್ರಶ್ನೆಯಿಂದ ಹಿಡಿದು, ಅದು ಪ್ರಾದೇಶಿಕ ಭಾಷೆಗಳ ಮೇಲೆ ಬೀರುತ್ತಿರುವ ಪ್ರಭಾವದವರೆಗೆ ಅನೇಕ ಸ್ವಾರಸ್ಯಕರ ಸಂಗತಿ ಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಇಂಗ್ಲಿಷ್ ಭಾಷೆಯ ಈ ‘ಪ್ರಜಾ ಪ್ರಭುತ್ವೀಕರಣ’ ಅಥವಾ ಅದರ ರೂಪಾಂತರವು, ಅದು ಒಂದು ಕಾಲದ ಶಿಸ್ತಿನ ಬ್ರಿಟಿಷ್ ಶಾಲಾ ಮಾಸ್ತರ ನಿಂದ ಈಗ ‘ಮಾಸ್’ ಹೀರೋ ಆಗಿ ಬದಲಾದ ಕಥೆಯಂತೆ ಕೇಳಿಸುತ್ತದೆ.

ಒಂದು ಕಾಲದಲ್ಲಿ ಇಂಗ್ಲಿಷ್ ಎಂದರೆ ಅದು ಬ್ರಿಟಿಷರ ಮನೆಯಲ್ಲಿ ಬೆಳೆದ ಶಿಸ್ತಿನ ಮಗುವಿ ನಂತಿತ್ತು. ಸರಿಯಾದ ಉಚ್ಚಾರಣೆ ಇರಬೇಕು, ವ್ಯಾಕರಣದ ಗೆರೆ ದಾಟಬಾರದು ಎಂಬ ಭಯವಿತ್ತು. ಆ ಕಾಲದಲ್ಲಿ ಇಂಗ್ಲಿಷ್ ಅಂದ್ರೆ ಇಸಿ ಮಾಡಿದ ಬಿಳಿ ಶರ್ಟ್, ಟೈ ಧರಿಸಿ, ಕೈಯಲ್ಲಿ ಬೆತ್ತ ಹಿಡಿದು ನಿಂತ ‘ಬ್ರಿಟಿಷ್ ಶಾಲಾ ಮಾಸ್ಟರ್’ ನಂತಿತ್ತು. ’P’ ಅಕ್ಷರವನ್ನು ಹೇಗೆ ಉಚ್ಚರಿಸಬೇಕು, ‘The’ ಎಲ್ಲಿ ಬಳಸಬೇಕು ಎಂದು ಸ್ವಲ್ಪ ತಪ್ಪಾದರೂ ಸಾಕು, ಈ ಮಾಸ್ತರ ಬೆತ್ತ ಹಿಡಿದು ಅಟ್ಟಾಡಿಸಿಕೊಂಡು ಬರುತ್ತಿದ್ದ.

ವ್ಯಾಕರಣದ ಗೆರೆ ದಾಟುವುದೆಂದರೆ ಲಕ್ಷ್ಮಣ ರೇಖೆ ದಾಟಿದಂತೆ ಎಂಬ ಭಯವಿತ್ತು. ಆ ಕಾಲದಲ್ಲಿ ಇಂಗ್ಲಿಷ್ ಎಂದರೆ ಅದು ಲಂಡನ್‌ನ ಸೈನಿಕನಂತಿತ್ತು. ಆದರೆ ಇಂದು ಇಂಗ್ಲಿಷ್ ಆ ಶಿಸ್ತಿನ ಕೋಟೆಯನ್ನು ದಾಟಿ ಬೀದಿಗೆ ಬಂದಿದೆ. ಆದರೆ ಕಾಲ ಬದಲಾದಂತೆ, ಈಗ ಆತ ಟೈ ಕಳಚಿಟ್ಟು, ಶರ್ಟ್ ಸ್ಲೀವ್ಸ್ ಮಡಚಿ, ರೇಬನ್ ಗ್ಲಾಸ್ ಹಾಕಿ ‘ಮಾಸ್ ಹೀರೋ’ ಆಗಿ ಎಂಟ್ರಿ ಕೊಟ್ಟಿದ್ದಾನೆ!

ಇದನ್ನೂ ಓದಿ: Vishweshwar Bhat Column: ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !

ಈಗ ಈತನಿಗೆ ವ್ಯಾಕರಣದ ಶಿಸ್ತಿಗಿಂತ ‘ವಿಸಿಲ್’ ಮತ್ತು ‘ಚಪ್ಪಾಳೆ’ ಮುಖ್ಯ. ಬ್ರಿಟಿಷರ ಮನೆಯ ಮಗುವಾಗಿದ್ದವನು ಈಗ ಬೀದಿಗೆ ಬಂದು ಎಲ್ಲರ ಜತೆ ‘ಫ್ರೆಂಡ್’ ಆಗಿಬಿಟ್ಟಿದ್ದಾನೆ. ಈಗ ಅದು ‘ಜಾಗತಿಕ ಸಾಮಾನ್ಯ ಭಾಷೆ’ ಅಥವಾ Lingua Franca. ಈಗ ಈ ಮಾಸ್ ಹೀರೋ ಎಲ್ಲಿಗೆ ಹೋಗುತ್ತಾನೋ ಆ ಊರಿನ ಬಣ್ಣ ಹಚ್ಚಿಕೊಳ್ಳುತ್ತಾನೆ. ಅಮೆರಿಕಕ್ಕೆ ಹೋದರೆ ಒಂದು ಥರ, ಭಾರತಕ್ಕೆ ಬಂದರೆ ‘ಐ ಆಮ್ ಸಿಂಪ್ಲಿ ಟೆಲ್ಲಿಂಗ್ ಯು ನೋ’ ಎನ್ನುವ ಮಸಾಲೆ ಅವತಾರ!

ಈ ಹೀರೋಗೆ ಈಗ ಶಿಸ್ತಿನ ಕ್ಲಾಸ್‌ರೂಮ್‌ಗಿಂತ ಜನಸಾಮಾನ್ಯರ ನಡುವೆ ಇರುವುದೇ ಇಷ್ಟ. ಯಾರಾದರೂ ‘ನಿಮ್ಮ ಗ್ರಾಮರ್ ಸರಿ ಇಲ್ಲ’ ಅಂದ್ರೆ, ಈ ಮಾಸ್ ಹೀರೋ ಕೂಲ್ ಆಗಿ ‘ಅರ್ಥ ಆಯ್ತಲ್ಲ? ಅಷ್ಟೇ ಸಾಕು, ಬ್ರೋ’ ಎಂದು ಡೈಲಾಗ್ ಹೊಡೆಯುತ್ತಾನೆ. ಒಟ್ಟಿನಲ್ಲಿ, ಇಂಗ್ಲಿಷ್ ಈಗ ಎಲ್ಲರ ಕೈಗೆ ಸಿಗುವ, ಎಲ್ಲರಿಗೂ ಬೇಕಾದ ‘ಪಕ್ಕಾ ಲೋಕಲ’ ಹೀರೋ!

ಅಂದರೆ, ಒಬ್ಬ ಚೀನಿಯ ಮತ್ತು ಒಬ್ಬ ಕನ್ನಡಿಗ ವ್ಯಾಪಾರ ಮಾಡುವಾಗ ಬಳಸುವ ಇಂಗ್ಲಿಷ್‌ನಲ್ಲಿ ‘ಷೇಕ್ಸ್‌ಪಿಯರ್’ ಇರುವುದಿಲ್ಲ, ಬದಲಾಗಿ ಅಲ್ಲಿ ‘ವ್ಯಾಪಾರ’ ಮಾತ್ರ ಇರುತ್ತದೆ. ಇಲ್ಲಿ ಉಚ್ಚಾರಣೆಗಿಂತ ಎದುರಿಗಿದ್ದವನಿಗೆ ವಿಷಯ ತಲುಪಿತೇ ಎಂಬುದು ಮುಖ್ಯ.

ಆಕ್ಸ್ʼಫರ್ಡ್ ಡಿಕ್ಷನರಿ ಕೂಡ ಈಗ ‘ನೀವು ಮಾತಾಡೋದು ನಮಗೂ ಅರ್ಥವಾಗ್ತಿಲ್ಲಪ್ಪಾ’ ಎಂದು ಬಾಯಿ ಮುಚ್ಚಿಕೊಳ್ಳುವಂತಾಗಿದೆ. ಇಂಗ್ಲಿಷ್ ಭಾಷೆ ಈಗ ಬ್ರಿಟಿಷರ ಆಸ್ಥಾನದಿಂದ ಹೊರಬಂದು ನಮ್ಮ ಮನೆಯ ಅಡುಗೆ ಮನೆಯೊಳಗೆ ನುಗ್ಗಿದೆ. ಅದು ಈಗ ಎಲ್ಲರ ಮನೆ ಮಗಳಾಗಿ, ಆಯಾ ದೇಶದ ಸಂಸ್ಕೃತಿಗೆ ತಕ್ಕಂತೆ ರೂಪ ಬದಲಿಸಿಕೊಳ್ಳುತ್ತಿದೆ. ಇದನ್ನು ನೋಡಿದರೆ ಇಂಗ್ಲಿಷ್‌ಗೆ ಮರುನಾಮಕರಣ ಮಾಡುವ ಕಾಲ ಬಂದಿದೆ ಎನಿಸುತ್ತದೆ. ಸಿಂಗಾ ಪುರಕ್ಕೆ ಹೋದರೆ ಈ ಇಂಗ್ಲಿಷ್ ಮಗಳು ‘ಸಿಂಗ್ಲಿಷ್’ ಎಂಬ ಹೊಸ ಅವತಾರ ತಾಳುತ್ತಾಳೆ.

ಅಲ್ಲಿ ನೀವು ಯಾವುದೇ ವಾಕ್ಯದ ಕೊನೆಯಲ್ಲಿ ‘Lah’ (ಲಾ) ಎಂದು ಸೇರಿಸದಿದ್ದರೆ ನಿಮ್ಮ ಮಾತು ಅಪೂರ್ಣ. ‘Okay lah!', "Coming lah!’ ಎನ್ನದಿದ್ದರೆ ಅವರಿಗೆ ಸಂವಹನವೇ ನಡೆಸಿದಂತಾಗುವುದಿಲ್ಲ. ಅದು ಒಂಥರಾ ಕಾಫಿಗೆ ಸಕ್ಕರೆ ಹಾಕಿದಂತೆ. ‘ಲಾ’ ಇಲ್ಲದಿದ್ದರೆ ಆ ಇಂಗ್ಲಿಷ್‌ಗೆ ರುಚಿಯೇ ಇಲ್ಲ.

Screenshot_3

ಇನ್ನು ನಮ್ಮ ಭಾರತಕ್ಕೆ ಬಂದರೆ, ನಾವು ಈ ಇಂಗ್ಲಿಷ್‌ಗೆ ಪಕ್ಕಾ ದೇಸಿ ಮಸಾಲೆ ಹಾಕಿ ‘ಕಂಗ್ಲಿಷ್’ ಅಥವಾ ‘ಹಿಂಗ್ಲಿಷ್’ ಎಂಬ ಘಮಘಮಿಸುವ ಒಗ್ಗರಣೆ ಹಾಕುತ್ತೇವೆ. ನಮ್ಮವರು ‘I am simply telling like that only’ ಎಂದು ಹೇಳುವಾಗ ಸಿಗುವ ಆ ಒಂದು ಆತ್ಮ ತೃಪ್ತಿ ಇದೆಯಲ್ಲ, ಅದು ಸಾಕ್ಷಾತ್ ಷೇಕ್ಸ್‌ಪಿಯರ್ ಬಂದರೂ ಕೊಡಲು ಸಾಧ್ಯವಿಲ್ಲ. ನಾವು ಇಂಗ್ಲಿಷ್ ಅನ್ನು ಕೇವಲ ಭಾಷೆಯಾಗಿ ನೋಡುವುದಿಲ್ಲ, ಅದರಲ್ಲಿ ನಮ್ಮ ಭಾವನೆಗಳನ್ನು ತುರುಕುತ್ತೇವೆ.

ಬ್ರಿಟಿಷರು ‘ಪೀಸಾ’ (Pizza) ಅಂದಾಗ ಅದು ಬಾಯಲ್ಲಿ ಕರಗಬಹುದು, ಆದರೆ ನಾವು ಅದನ್ನು ‘ಪಿಜ್ಜಾ’ ಅಂದಾಗ ಮಾತ್ರ ನಮಗೆ ಹೊಟ್ಟೆ ತುಂಬಿದ ಅನುಭವವಾಗುವುದು ಸುಳ್ಳಲ್ಲ! ನಾವು ಇಂಗ್ಲಿಷ್ ಅಕ್ಷರಗಳ ಜತೆ ನಮ್ಮ ತಾಯ್ನುಡಿಯ ವ್ಯಾಕರಣವನ್ನು ಬೆರೆಸಿ ಒಂದು ವಿಚಿತ್ರ ಸಲಾಡ್ ಮಾಡಿದ್ದೇವೆ.

’ Why you are doing like this?’ ಎಂದು ನಾವು ಕೇಳುವಾಗ ಬ್ರಿಟಿಷ್ ಗ್ರಾಮರ್ ಮಾಸ್ತರ ಬೆಚ್ಚಿಬೀಳಬಹುದು, ಆದರೆ ನಮಗೆ ಎದುರಿಗಿದ್ದವನಿಗೆ ವಿಷಯ ತಲುಪಿದರೆ ಅಷ್ಟೇ ಸಾಕು. ಇಂಗ್ಲಿಷ್ ಈಗ ನಮ್ಮೂರಿನ ಹೋಟೆಲ್‌ನಲ್ಲಿ ಸಿಗುವ ‘ಫಿಲ್ಟರ್ ಕಾಫಿ’ಯಂತೆ ಎಲ್ಲರಿಗೂ ಒಗ್ಗಿಕೊಂಡಿದೆ. ಭಾಷೆಯ ಈ ರೂಪಾಂತರವನ್ನು ನೋಡಿದರೆ, ಭವಿಷ್ಯದಲ್ಲಿ ಇಂಗ್ಲೆಂಡ್ನ ವರೇ ನಮ್ಮ ಹತ್ತಿರ ಬಂದು ‘ನಮಗೆ ನಿಮ್ಮ ಇಂಗ್ಲಿಷ್ ಕಲಿಸಿಕೊಡಿ’ ಎಂದು ಕೇಳಿದರೂ ಆಶ್ಚರ್ಯವಿಲ್ಲ!

ಇಂಗ್ಲಿಷ್ ಎಂಬ ಈ ‘ಮನೆ ಮಗಳು’ ಈಗ ಜಗತ್ತಿನಾದ್ಯಂತ ಸಂಚರಿಸುತ್ತಾ ಎಲ್ಲರನ್ನೂ ನಗಿಸುತ್ತಾ, ಬೆಸೆಯುತ್ತಾ ಸಾಗುತ್ತಿದ್ದಾಳೆ .ಇಂಗ್ಲೆಂಡ್‌ನ ರಾಣಿ ಕೂಡ ಇಂದಿನ ಇಂಗ್ಲಿಷ್ ಸ್ಲ್ಯಾಂಗ್ʼಗಳನ್ನು (Slang) ಕೇಳಿದ್ದರೆ ‘ಇದು ನಾವು ಕೊಟ್ಟ ಭಾಷೆಯಾ?’ ಎಂದು ಮೂರ್ಛೆ ಹೋಗಬಹುದು. ಆದರೆ ಜಗತ್ತಿನ ಪಾಲಿಗೆ ಇದು ಸಂವಹನದ ಸುಲಭ ದಾರಿ.

ಐವತ್ತು ವರ್ಷಗಳ ಹಿಂದೆ ಇಂಗ್ಲಿಷ್ ಎಂಬುದು ನಮ್ಮೂರಿಗೆ ಬಂದ ಹೊಸ ‘ಕಲೆಕ್ಟರ್’ ಇದ್ದಂತೆ ಇತ್ತು. ಜನ ದೂರದಿಂದಲೇ ಅದಕ್ಕೆ ನಮಸ್ಕಾರ ಹಾಕಿ, ‘ನಮಗ್ಯಾಕಪ್ಪ ಈ ಸಾಹೇಬರ ಭಾಷೆ’ ಎಂದು ಓಡಿ ಹೋಗುತ್ತಿದ್ದರು. ಅಪ್ಪಿತಪ್ಪಿ ಯಾರಾದರೂ ಇಂಗ್ಲಿಷ್‌ನಲ್ಲಿ ಒಂದೆರಡು ಪದ ಮಾತಾಡಿದರೆ, ಇಡೀ ಊರು ಅವರನ್ನೇ ಆಶ್ಚರ್ಯದಿಂದ ನೋಡುತ್ತಿತ್ತು.

ಅಂದು ಒಂದು ’Fullstop’ ಮಿಸ್ ಆದರೂ ಸಾಕು, ಏನೋ ದೊಡ್ಡ ಅಪರಾಧ ಮಾಡಿದಂತೆ ಬೆವರುತ್ತಿದ್ದರು. ಇಂಗ್ಲಿಷ್ ಅಂದರೆ ಅದು ಕೇವಲ ಬುದ್ಧಿವಂತರ, ಸೂಟು-ಬೂಟು ಹಾಕುವವರ ಸ್ವತ್ತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ!

ಇವತ್ತು ಇಂಗ್ಲಿಷ್ ಅಂದರೆ ಆ ಶಿಸ್ತಿನ ಕಲೆಕ್ಟರ್ ಅಲ್ಲ, ಬದಲಾಗಿ ನಮ್ಮ ಗಲ್ಲಿ ಕ್ರಿಕೆಟ್ ಆಡುವ ‘ಫ್ರೆಂಡ್’ ಇದ್ದಂತೆ. ಈಗ ತಪ್ಪೋ, ಸರಿಯೋ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ‘ English is just a language, not a knowledge’ ಎಂಬ ಡೈಲಾಗ್ ಹೊಡೆದು, ಜನ ತಮಗೆ ತೋಚಿದಂತೆ ಇಂಗ್ಲಿಷನ್ನು ಬಗ್ಗಿಸಿ, ಜಗ್ಗಿಸಿ ಆಟವಾಡುತ್ತಿದ್ದಾರೆ.

ಈಗಿನ ಕಾಲದ ಇಂಗ್ಲಿಷ್ ಬಳಕೆ ಹೇಗಿದೆ ಎಂದರೆ, ‘I am going to market to taking sugar ’ ಅಂದರೂ ಕೇಳುವವನು ‘ಓಕೆ’ ಎನ್ನುತ್ತಾನೆ. ಇಲ್ಲಿ ‘ing’ ಎಲ್ಲಿ ಬರಬೇಕು, ‘to’ ಎಲ್ಲಿ ಹಾಕಬೇಕು ಎಂಬ ತಲೆನೋವೇ ಇಲ್ಲ. ನಮಗೆ ಬೇಕಾಗಿರುವುದು ಅರ್ಥವಾಗುವ ಸಂವಹನ ವಷ್ಟೇ! ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಇಂಗ್ಲಿಷ್ ಕಥೆ ಕೇಳಲೇ ಬೇಡಿ. ‘Good Morning’ ಎಂಬುದು ‘GM’ ಆಗಿದೆ, ‘Thank You’ ಎಂಬುದು ‘TY’ ಆಗಿದೆ.

ಅಕ್ಷರಗಳನ್ನು ಉಳಿಸುವ ಭರದಲ್ಲಿ ನಾವು ಇಂಗ್ಲಿಷನ್ನು ಎಷ್ಟು ಕುಟ್ಟಿ ಪುಡಿ ಮಾಡಿದ್ದೇವೆ ಎಂದರೆ, ಸ್ವತಃ ಬ್ರಿಟಿಷರೇ ಬಂದು ನೋಡಿದರೆ ‘ಇದು ನಾವೇ ಕಂಡುಹಿಡಿದ ಭಾಷೆಯೇ?’ ಎಂದು ಕಕ್ಕಾಬಿಕ್ಕಿಯಾಗುವುದು ಗ್ಯಾರಂಟಿ.

ಐವತ್ತು ವರ್ಷಗಳ ಹಿಂದೆ ಭಯ ಹುಟ್ಟಿಸುತ್ತಿದ್ದ ಇಂಗ್ಲಿಷ್ ಇಂದು ‘ಪಕ್ಕಾ ಲೋಕಲ್’ ಆಗಿ‌ ಬಿಟ್ಟಿದೆ. ಅದು ಈಗ ತನ್ನ ಗತ್ತು-ಗೈರತ್ತು ಬಿಟ್ಟು, ನಮ್ಮೂರಿನ ಮಣ್ಣಿನ ವಾಸನೆಗೆ ಒಗ್ಗಿಕೊಂಡಿದೆ. ತಪ್ಪಾಗಿ ಮಾತಾಡಿದರೂ ಆತ್ಮವಿಶ್ವಾಸದಿಂದ ಮಾತಾಡುವ ಈ ಕಾಲದ ಜನರನ್ನು ನೋಡಿದರೆ, ಇಂಗ್ಲಿಷ್ ಭಾಷೆಯೇ ಸೋತು ಶರಣಾದಂತೆ ಕಾಣುತ್ತಿದೆ! ಇಂಗ್ಲಿಷ್ ಈಗ ಬರೆಯುವ ಭಾಷೆಯಲ್ಲ, ನಮ್ಮ ಮನಸ್ಸಿಗೆ ಬಂದಂತೆ ‘ಆಡುವ’ ಭಾಷೆಯಾಗಿದೆ.

ಇತ್ತೀಚೆಗೆ ಇಂಗ್ಲಿಷ್ ಭಾಷೆಯ ಅಂಗಳದಲ್ಲಿ ಏನೋ ಒಂದು ವಿಚಿತ್ರವಾದ ಸಂಭ್ರಮ ನಡೆಯುತ್ತಿದೆ. ಹಳೆಯ ಕಾಲದ ನಿಘಂಟುಗಳು ತಮ್ಮ ಗಂಭೀರ ಮುಖ ಹೊತ್ತು ಕಪಾಟಿ ನಲ್ಲಿ ಮೌನವಾಗಿ ಕುಳಿತಿವೆ. ಕಾರಣ ಇಷ್ಟೇ, ಈಗಿನ ಕಾಲಕ್ಕೆ ದೊಡ್ಡ ದೊಡ್ಡ ಪದಗಳ ತೂಕಕ್ಕಿಂತ ಒಂದು ಪುಟ್ಟ ಎಮೋಜಿಯ ಮಿಂಚು ಹೆಚ್ಚು ಆಪ್ತವಾಗುತ್ತಿದೆ.

ಯಾರೋ ದೀರ್ಘವಾಗಿ ಬರೆದ ಪ್ರೇಮಪತ್ರಕ್ಕೋ ಅಥವಾ ಸುದೀರ್ಘ ಅಳಲಿಗೋ ಪ್ರತಿ ಯಾಗಿ ಒಂದು ‘Thumbs up’ ಕಳುಹಿಸಿದರೆ ಸಾಕು, ಅಲ್ಲಿಗೆ ಮಾತುಕತೆ ಮುಕ್ತಾಯ. ಸಾವಿರ ಅರ್ಥಗಳ ಪದರವನ್ನು ಒಂದು ಹಳದಿ ಬಣ್ಣದ ಬೆರಳು ಅಷ್ಟು ಲೀಲಾಜಾಲವಾಗಿ ದಾಟಿಸಿ ಬಿಡುತ್ತದೆ. ಈ ಮೊದಲು ಒಂದು ವಾಕ್ಯದ ಕೊನೆಯಲ್ಲಿ ‘Full stop’ ಇಡದಿದ್ದರೆ ಏನೋ ಕಳೆದುಕೊಂಡ ಆತಂಕವಿರುತ್ತಿತ್ತು. ಈಗ ಎಲ್ಲವೂ ‘LOL’ (ಲೊಲ್) ಎಂಬ ಮೂರಕ್ಷರದ ನಗುಮೊಗದಲ್ಲಿ ಐಕ್ಯವಾಗಿ ಬಿಡುತ್ತದೆ.

ಭಾಷೆ ಈಗ ಗಾಜಿನ ಅರಮನೆಯಿಂದ ಕೆಳಗಿಳಿದು, ನಮ್ಮೂರಿನ ಫುಟ್‌ಪಾತ್ ಬದಿಯ ಟೀ ಅಂಗಡಿಯಲ್ಲಿ ನಿಂತು ಹರಟೆ ಹೊಡೆಯುವ ಹುಡುಗನಂತಾಗಿದೆ. ಅಲ್ಲಿ ಸಂವಹನಕ್ಕೆ ಪದಗಳ ಹಂಗಿಲ್ಲ, ಕೇವಲ ಒಂದು ಸಂಕೇತದ ಸ್ಪರ್ಶವಿದ್ದರೆ ಸಾಕು.

ಹಳೆಯ ಸಾಹಿತಿಗಳು ಹಣೆ ಸುಕ್ಕುಗಟ್ಟಿಸಿ, ‘ಅಯ್ಯೋ, ಭಾಷೆ ಸಾಯುತ್ತಿದೆ, ಅದರ ಆಯುಷ್ಯ ಮುಗಿಯುತ್ತಿದೆ’ ಎಂದು ಮರುಗುತ್ತಿರುತ್ತಾರೆ. ಆದರೆ ಪೇಟೆಯ ಗಲ್ಲಿಗಲ್ಲಿಗಳಲ್ಲಿ ಓಡಾಡುವ ಯುವ ಪೀಳಿಗೆಯನ್ನು ಕೇಳಿ ನೋಡಿ, ಅವರು ಕಣ್ಣು ಮಿಟುಕಿಸಿ ಹೇಳುತ್ತಾರೆ - ‘ಭಾಷೆ ಸಾಯುತ್ತಿಲ್ಲ ಸರ್, ಅದು ಪಾರ್ಟಿ ಮಾಡುತ್ತಿದೆ’.

ಹೌದು, ಇದು ಭಾಷೆಯ ಸಂಭ್ರಮದ ಕಾಲ. ಕಟ್ಟುನಿಟ್ಟಿನ ನಿಯಮಗಳ ಇಸಿ ಪೆಟ್ಟಿಗೆಯಿಂದ ಆಚೆ ಬಂದು, ಇಂಗ್ಲಿಷ್ ಈಗ ತನಗೆ ಇಷ್ಟ ಬಂದಂತೆ ಕುಣಿಯುತ್ತಿದೆ. ಒಂದು ಕಾಲದಲ್ಲಿ ಭಾಷೆ ಅಂದರೆ ಅದು ಕೇವಲ eನದ ಪ್ರದರ್ಶನವಾಗಿತ್ತು. ಈಗ ಅದು ಕೇವಲ ಒಂದು ಭಾವನೆಯ ಎಳೆ. ಅರ್ಥವಾಗದ ಸಂಕೀರ್ಣ ಪದಗಳಿಗಿಂತ, ಅರ್ಥವಾಗುವ ಒಂದು ಪುಟ್ಟ ಚಿತ್ರ ಈಗ ಹೆಚ್ಚು ಸಂವಹನಕಾರಿ.

ನಗರದ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದ ಮನುಷ್ಯನಿಗೆ ಉದ್ದನೆಯ ಕವಿತೆಗಿಂತ ಒಂದು ‘ಹೃದಯದ’ ಗುರುತು (Emoji) ಹೆಚ್ಚು ಸಾಂತ್ವನ ನೀಡಬಲ್ಲದು. ಭಾಷೆ ಈಗ ತನ್ನ ಭಾರ ವನ್ನು ಇಳಿಸಿಕೊಂಡು ಹಗುರಾಗುತ್ತಿದೆ. ಗಾಳಿಯಲ್ಲಿ ತೇಲುವ ಬಣ್ಣದ ಹಕ್ಕಿಯಂತೆ ಅದು ಎಲ್ಲರ ಮನೆಯ ಕಿಟಕಿಗಳ ಮೇಲೆ ಕುಳಿತು ಚಿಲಿಪಿಲಿ ಎನ್ನುತ್ತಿದೆ. ಇದಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಇನ್ನೇನು ಬೇಕು?‘ಭಾಷೆಯ ಮೇಲಿನ ಪಾಂಡಿತ್ಯಕ್ಕಿಂತ, ವಿಚಾರಗಳ ಸ್ಪಷ್ಟತೆ ಮುಖ್ಯ’ ಎಂಬ ಚರ್ಚೆ ನಡೆಯುತ್ತಿದೆ.

ಭಾಷೆ ಈಗ ಬರೆಯುವ ಕಲೆಯಾಗುವುದಕ್ಕಿಂತ ಹೆಚ್ಚಾಗಿ ‘ಪ್ರಾಂಪ್ಟ್’ (Prompt) ನೀಡುವ ಕೌಶಲವಾಗಿ ಬದಲಾಗುತ್ತಿದೆ. ಹಿಂದೆಲ್ಲ ಪತ್ರ ಬರೆಯುವಾಗ ‘ಗೌರವಾನ್ವಿತರೇ...’ ಎಂದು ಶುರುಮಾಡಿ, ವಿಷಯವನ್ನು ನಾಜೂಕಾಗಿ ಪದಗಳಲ್ಲಿ ಪೋಣಿಸಲು ಹರಸಾಹಸ ಪಡಬೇಕಿತ್ತು.

ಆದರೆ ಈಗ, ಕೃತಕ ಬುದ್ಧಿಮತ್ತೆಯ (AI) ಮುಂದೆ ಕುಳಿತು, ‘ನೋಡಪ್ಪಾ, ನನಗೊಂದು ರಜೆ ಬೇಕು, ನಮ್ಮ ಬಾಸ್ ಮೆಚ್ಚುವಂತೆ ಇಂಗ್ಲಿಷ್‌ನಲ್ಲಿ ಒಂದು ಪತ್ರ ಕೊಡು’ ಎಂದು ಒಂದು ಸಾಲಿನ ಆದೇಶ ನೀಡಿದರೆ ಸಾಕು. ಮರುಕ್ಷಣವೇ ಅದು ಷೇಕ್ಸ್‌ಪಿಯರ್ ಕೂಡ ಬೆರಗಾಗುವ ಇಂಗ್ಲಿಷ್‌ನಲ್ಲಿ ಕಾಗದ ಸಿದ್ಧಪಡಿಸಿ ನಮ್ಮ ಕೈಗಿಡುತ್ತದೆ!

ನಮಗೆ ಇಂಗ್ಲಿಷ್ ಬರದಿದ್ದರೂ ಪರವಾಗಿಲ್ಲ, ಅದನ್ನು ಹೇಗೆ ‘ಕೆಲಸಕ್ಕೆ ಹಚ್ಚಬೇಕು’ ಎನ್ನುವ ಕಲೆ ಗೊತ್ತಿದ್ದರೆ ಸಾಕು. ಅಂದರೆ, ಭಾಷೆ ಈಗ ಬರೆಯುವ ಕಲೆಯಾಗುವುದಕ್ಕಿಂತ ಹೆಚ್ಚಾಗಿ, GI ಎಂಬ ಜಿನಿಯನ್ನು ಪಳಗಿಸುವ ‘ಮಂತ್ರ’ವಾಗಿ ಬದಲಾಗಿದೆ.

‘ಭಾಷೆ ಮುಖ್ಯವಲ್ಲ, ವಿಚಾರ ಮುಖ್ಯ’ ಎಂಬ ಚರ್ಚೆ ಎಷ್ಟು ಜೋರಾಗಿದೆಯೆಂದರೆ, ಸರಿಯಾದ ಸ್ಪೆಲ್ಲಿಂಗ್ ಬರೆಯದವನೂ ಈಗ ಅತ್ಯುತ್ತಮ ಲೇಖಕನಂತೆ ಪೋಸು ಕೊಡ ಬಹುದು. ಯಾಕೆಂದರೆ ಆತನ ಹಿಂದೆ ‘ಪ್ರಾಂಪ್ಟ್’ ಎಂಬ ಶಕ್ತಿಯಿದೆ. ಹಿಂದೆ ಜನ ಇಂಗ್ಲಿಷ್ ಕಲಿಯಲು ಡಿಕ್ಷನರಿ ಹಿಡಿದು ಕುಳಿತುಕೊಳ್ಳುತ್ತಿದ್ದರು. ಈಗ ‘ಈ ಐಡಿಯಾವನ್ನು ಸರಿಯಾಗಿ ಎಐಗೆ ಹೇಳುವುದು ಹೇಗೆ?’ ಎಂದು ಯೋಚಿಸುತ್ತಾ ಕುಳಿತುಕೊಳ್ಳುತ್ತಾರೆ. ಇದು ಒಂಥರಾ ಹೇಗಿದೆಯೆಂದರೆ, ಅಡುಗೆ ಮಾಡಲು ಬರದಿದ್ದರೂ ಆರ್ಡರ್ ಮಾಡುವುದು ಹೇಗೆ ಎಂದು ತಿಳಿದಿದ್ದರೆ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂಬಂತೆ!

ಭಾಷೆಯ ಮೇಲಿನ ಪಾಂಡಿತ್ಯ ಈಗ ಕೇವಲ ಅಲಂಕಾರಿಕ ವಸ್ತುವಾಗುತ್ತಿದೆ, ಆದರೆ ವಿಚಾರ ಗಳನ್ನು ಬಿತ್ತರಿಸುವ ಈ ‘ಪ್ರಾಂಪ್ಟ್ ಕೌಶಲ’ ಮಾತ್ರ ಭವಿಷ್ಯದ ಬ್ರಹ್ಮಾಸ್ತ್ರ ವಾಗುತ್ತಿದೆ. ಭಾಷೆಯ ಶಿಸ್ತು ಈಗ ಎಐ ಪಾಲು, ಕಲ್ಪನೆ ಮಾತ್ರ ನಮ್ಮ ಪಾಲು!

ಈಗಿನ ಕಾಲದಲ್ಲಿ ‘ಶುದ್ಧ ಇಂಗ್ಲಿಷ್’ ಅಥವಾ ‘ಶುದ್ಧ ಕನ್ನಡ’ ಮಾತನಾಡುವವರನ್ನು ಹುಡುಕುವುದು ಹಳೆ ಕಾಲದ ನಾಣ್ಯ ಹುಡುಕಿದಷ್ಟೇ. ಎಲ್ಲಿ ನೋಡಿದರೂ ಎರಡೂ ಭಾಷೆ ಗಳ ‘ಜುಗಲ್‌ಬಂದಿ’. ಇದನ್ನು ಭಾಷಾ ತಜ್ಞರು ಗೌರವದಿಂದ ‘Code-Switching’ ಎನ್ನುತ್ತಾರೆ.

ಇದು ಭಾಷೆಯ ವಿನಾಶವೇ ಅಥವಾ ವಿಕಾಸವೇ ಎಂಬ ಚರ್ಚೆ ಒಂದು ಕಡೆಯಿರಲಿ, ಆದರೆ ವಾಸ್ತವ ಮಾತ್ರ ತುಂಬಾ ತಮಾಷೆಯಾಗಿದೆ. ಇವತ್ತು ಯಾರಾದರೂ ಒಬ್ಬರು ‘ನಾನು ಇಂದು ದೂರವಾಣಿ ಯಂತ್ರದ ಮೂಲಕ ನಿನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ನೀನು ಅಲಭ್ಯನಿದ್ದೆ’ ಅಂದರೆ ನಮಗೆ ಅದು ಅರ್ಥವಾಗುವುದೇ ಇಲ್ಲ!

ಅದರ ಬದಲು, ‘ನಾನು ನಿನಗೆ ಕಾಲ್ ಮಾಡಿz, ನೀನು ಸಿಗಲಿಲ್ಲ’ ಅಂದ ತಕ್ಷಣ ಅರ್ಥ ವಾಗುತ್ತದೆ. ಇಂಗ್ಲಿಷ್ ಈಗ ನಮ್ಮ ಮೇಲೆ ಸವಾರಿ ಮಾಡುತ್ತಿಲ್ಲ, ಬದಲಾಗಿ ನಾವು ಇಂಗ್ಲಿಷನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪಳಗಿಸಿದ್ದೇವೆ. ಭಾಷೆ ಎಂಬುದು ಹರಿಯುವ ನದಿಯಿದ್ದಂತೆ. ಅದಕ್ಕೆ ಹೊಸ ಹೊಸ ಪದಗಳ ತೊರೆ ಸೇರುತ್ತಿರಬೇಕು. ಇಂಗ್ಲಿಷ್ ಇಲ್ಲದೆ ಕನ್ನಡದ ವಾಕ್ಯ ಪೂರ್ಣಗೊಳಿಸುವುದು ಇವತ್ತು ಕಷ್ಟವಾಗಿರಬಹುದು, ಆದರೆ ಈ ‘ಬೆರೆಸುವ ಕಲೆ’ಯೇ ಇಂದಿನ ಕಾಲದ ಅತಿ ದೊಡ್ಡ ಸ್ವಾರಸ್ಯ!

ನಾವು ಭಾಷೆಯನ್ನು ಸಾಯಿಸುತ್ತಿಲ್ಲ, ಬದಲಾಗಿ ಅದಕ್ಕೆ ಆಧುನಿಕತೆಯ ‘ಪೌಡರ್’ ಹಚ್ಚಿ ರೆಡಿ ಮಾಡುತ್ತಿದ್ದೇವೆ. ಇಂಗ್ಲಿಷ್ ಇಂದು ಕೇವಲ ಪ್ರಬಂಧ, ಕವಿತೆ, ವಿಮರ್ಶೆ ಬರೆಯುವ ಭಾಷೆಯಾಗಿ ಉಳಿದಿಲ್ಲ. ಅದು ಎಟಿಎಂ ಕಾರ್ಡ್ʼನಂತೆ ಕೆಲಸ ಮಾಡುವ ಒಂದು ‘ಎಕನಾಮಿಕ್ ಟೂಲ್’.

ಇವತ್ತು ಯಾರಾದರೂ ಬಂದು ‘ನನಗೆ ಇಂಗ್ಲಿಷ್ ಬರಲ್ಲ, ಆದರೆ ಅದ್ಭುತವಾಗಿ ಸಾಹಿತ್ಯ ಬರೆಯಬ’ ಅಂದರೆ, ಜಗತ್ತು ಅವರನ್ನು ಒಬ್ಬ ಕಲಾವಿದನಾಗಿ ನೋಡಬಹುದು. ಆದರೆ ಅದೇ ವ್ಯಕ್ತಿ ‘ನನಗೆ ಇಂಗ್ಲಿಷ್ ಬರುತ್ತೆ’ ಅಂದ ತಕ್ಷಣ, ಕಂಪನಿಗಳು ಅವರಿಗೆ ‘ಆಫರ್ ಲೆಟರ್’ ಹಿಡಿದು ಸಾಲಿನಲ್ಲಿ ನಿಲ್ಲುತ್ತವೆ! ಇದೇ ಇಂಗ್ಲಿಷ್ ಅಧಿಪತ್ಯದ ಅಸಲಿ ಮ್ಯಾಜಿಕ್.

ಇಂಗ್ಲಿಷ್ ಎಂಬುದು ಈಗಿನ ಕಾಲದ ‘ಮಹಾದ್ವಾರ’ ಇದ್ದಂತೆ. ಈ ಭಾಷೆಯ ಗುಟ್ಟು ಗೊತ್ತಿರುವವರಿಗೆ ಎಸಿ ರೂಮಿನ ಉದ್ಯೋಗ, ಗೊತ್ತಿಲ್ಲದವರಿಗೆ ಅನಿವಾರ್ಯವಾಗಿ ಬಿಸಿಲಿ ನಲ್ಲಿ ಕೆಲಸ ಹೀಗೊಂದು ಅಲಿಖಿತ ನಿಯಮ ಜಾರಿಯಲ್ಲಿದೆ. ಇದರಿಂದಾಗಿ ಸಮಾಜದಲ್ಲಿ ಇಂಗ್ಲಿಷ್ ಬಲ್ಲವರು ಮತ್ತು ಬಾರದವರ ನಡುವೆ ಒಂದು ದೊಡ್ಡ ಕಂದಕ ನಿರ್ಮಾಣ ವಾಗಿದೆ. ಇದನ್ನು ತಜ್ಞರು ‘ Linguistic Imperialism’ ಎಂದು ಕರೆಯುತ್ತಾರೆ. ಸುಲಭವಾಗಿ ಹೇಳಬೇಕೆಂದರೆ, ಇದು ಇಂಗ್ಲಿಷ್ ಭಾಷೆಯ ‘ದಾದಾಗಿರಿ’!

ಇನ್ನು ಶಿಕ್ಷಣದ ವಿಷಯಕ್ಕೆ ಬಂದರೆ, ಇದು ಎಂದಿಗೂ ಮುಗಿಯದ ‘ರಿಯಾಲಿಟಿ ಶೋ’ ನಂತಿದೆ. ಮನೆ ಮುಂದೆ ನಿಂತು ಭಾಷಣ ಮಾಡುವಾಗ ‘ಮಾತೃಭಾಷೆಯ ಶಿಕ್ಷಣ ಇರಬೇಕು’ ಎನ್ನುವ ನಾಯಕರು, ಸಂಜೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಸ್ಕೂಲ್‌ಗೆ ಬಿಡಲು ಮರೆಯುವುದಿಲ್ಲ. ’ಹೊಟ್ಟೆಗೆ ಇಂಗ್ಲಿಷ್ ಬೇಕು, ದೇವರಿಗೆ ಕನ್ನಡ ಬೇಕು’ ಎಂಬ ವಿಚಿತ್ರ ದ್ವಂದ್ವದ ನಡುವೆ ನಾವು ಸಿಕ್ಕಿಹಾಕಿಕೊಂಡಿದ್ದೇವೆ.

ಇಂಗ್ಲಿಷ್ ಬರದೇ ಇರುವ ವ್ಯಕ್ತಿ ಎಷ್ಟೇ ಬುದ್ಧಿವಂತನಾಗಿದ್ದರೂ, ಸಮಾಜ ಆತನನ್ನು ಸ್ವಲ್ಪ ಸಂಶಯದಿಂದಲೇ ನೋಡುತ್ತದೆ. ಆದರೆ ಅರೆಬರೆ ಇಂಗ್ಲಿಷ್‌ನಲ್ಲಿ ‘ಕಾನ್ಫಿಡೆಂಟ್’ ಆಗಿ ತಪ್ಪು ತಪ್ಪಾಗಿ ಮಾತಾಡುವವನು ದೊಡ್ಡ ಸ್ಕಾಲರ್‌ನಂತೆ ಫೋಸು ಕೊಡುತ್ತಾನೆ!

ಹಿಂದೆಲ್ಲ ಇಂಗ್ಲಿಷ್ ಎಂದರೆ ಅದು ಕೇವಲ ಒಂದು ಭಾಷೆಯಾಗಿತ್ತು, ಅಂದರೆ ನಾವು ಓದುವ ಒಂದು ಸಬ್ಜೆಕ್ಟ್ ಅಥವಾ ಮಾತನಾಡುವ ಒಂದು ಮಾಧ್ಯಮ. ಆದರೆ ಈಗಿನ ಕಾಲದಲ್ಲಿ ಇಂಗ್ಲಿಷ್ ತನ್ನ ರೂಪವನ್ನೇ ಬದಲಿಸಿಕೊಂಡು ಒಂದು ‘ಜಾಗತಿಕ ಆಪರೇಟಿಂಗ್ ಸಿಸ್ಟಮ’ (Global Operating System) ಆಗಿ ಬಿಟ್ಟಿದೆ. ಅಂದರೆ, ನಿಮ್ಮ ಹತ್ತಿರ ಎಷ್ಟೇ ದೊಡ್ಡ ‘ಸಾಫ್ಟ್‌ʼವೇರ್ ’ (ಅರ್ಥಾತ್ ಬುದ್ಧಿವಂತಿಕೆ) ಇದ್ದರೂ, ಅದನ್ನು ರನ್ ಮಾಡಲು ಇಂಗ್ಲಿಷ್ ಎಂಬ ‘ಓಎಸ್’ (ಆಪರೇಟಿಂಗ್ ಸಿಸ್ಟಮ್) ಇಲ್ಲದಿದ್ದರೆ ಕೆಲಸವೇ ನಡೆಯುವುದಿಲ್ಲ.

ಇದು ಒಂಥರಾ ಕಂಪ್ಯೂಟರ್ನಲ್ಲಿ ವಿಂಡೋಸ್ ಅಥವಾ ಆಂಡ್ರಾಯ್ಡ್ ಇದ್ದಂತೆ. ನೀವು ಜಗತ್ತಿನ ಯಾವುದೇ ಮೂಲೆಗೆ ಹೋದರೂ, ಅಲ್ಲಿನ ಸ್ಥಳೀಯ ಭಾಷೆ ಬೇರೆಯೇ ಇರಬಹುದು, ಆದರೆ ಒಳಗಿನ ಸಿಸ್ಟಮ್ ಮಾತ್ರ ಇಂಗ್ಲಿಷ್‌ನ ಇರುತ್ತದೆ. ಒಬ್ಬ ಜಪಾನಿ ಮತ್ತು ಒಬ್ಬ ಬ್ರೆಜಿಲಿಯನ್ ಸಂಧಿಸಿದರೆ, ಅವರು ಪರಸ್ಪರ ಮಾತನಾಡಲು ಬಳಸುವ ‘ಸಾ-ವೇರ್’ ಇಂಗ್ಲಿಷ್ .

ತಮಾಷೆಯೆಂದರೆ, ಇಬ್ಬರಿಗೂ ಆ ಭಾಷೆ ಸರಿಯಾಗಿ ಬರದಿದ್ದರೂ, ಆ ‘ಓಎಸ್’ ಮಾತ್ರ ಹೇಗೋ ಮ್ಯಾನೇಜ್ ಮಾಡಿ ಬಿಡುತ್ತದೆ! ಈಗಿನ ಕಾಲದಲ್ಲಿ ಇಂಗ್ಲಿಷ್ ಬರದೇ ಇರುವುದು ಎಂದರೆ ನಿಮ್ಮ ‘ಸಾಫ್ಟ್‌ʼವೇರ್’ ಅಪ್‌ಡೇಟ್ ಆಗಿಲ್ಲ ಎಂದರ್ಥ. ಹಿರಿಯ ತಲೆಮಾರಿನವರು ಇಂಗ್ಲಿಷ್ ಅನ್ನು ‘ಪರ್ಫೆಕ್ಟ್ ’ ಆಗಿ ಬಳಸಲು ಪ್ರಯತ್ನಿಸುತ್ತಿದ್ದರು. ಅಂದರೆ ಅದು ಹಳೆಯ ಕಾಲದ ಮೈಕ್ರೋಸಾಫ್ಟ್ ಡಾಸ್ (MS-DOS) ಇದ್ದಂತೆ ಒಂದು ಕಮಾಂಡ್ ತಪ್ಪಾದರೂ ಎರರ್ ತೋರಿಸುತ್ತಿತ್ತು.

ಆದರೆ ಈಗಿನ ಇಂಗ್ಲಿಷ್ ಪಕ್ಕಾ ಮಾಡರ್ನ್ ವಿಂಡೋಸ್ ಇದ್ದಂತೆ. ನೀವು ಏನೋ ಹೇಳಲು ಹೋಗಿ ಇನ್ನೇನೋ ಅಂದರೂ, ಅದು ‘Did you mean this? ’ ಎಂದು ಕೇಳಿ ತಾನೇ ಸರಿಪಡಿಸಿಕೊಂಡು ಕೆಲಸ ಮುಗಿಸಿಬಿಡುತ್ತದೆ. ಇಂಗ್ಲಿಷ್ ಎಂಬ ಈ ಆಪರೇಟಿಂಗ್ ಸಿಸ್ಟಮ್‌ನ ಅತಿ ದೊಡ್ಡ ತಮಾಷೆಯೆಂದರೆ, ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಈಗ ಯಾರಿಗೂ ಕಷ್ಟವಾಗುತ್ತಿಲ್ಲ. ಸಣ್ಣ ಮಕ್ಕಳು ಕೂಡ ಡೌನ್ ಲೋಡ್ ಮಾಡಿಕೊಂಡವರಂತೆ ಸ್ಕ್ರೀನ್ ಮುಂದೆ ಕುಳಿತು ‘Hello guys, welcome to my vlog’ ಎಂದು ಇಂಗ್ಲಿಷ್ ಓಎಸ್‌ನಲ್ಲಿ ಮಿಂಚುತ್ತಿದ್ದಾರೆ.

ಭಾಷೆ ಈಗ ಸಾಹಿತ್ಯದ ತೂಕವನ್ನು ಕಳೆದುಕೊಂಡು ಸಂವಹನದ ’ಡ್ರೈವರ್’ ಆಗಿ ಬದಲಾಗಿದೆ. ಸಮಾಜದಲ್ಲಿ ನಿಮ್ಮ ಸ್ಟೇಟಸ್ ಅಥವಾ ನಿಮ್ಮ ಕೆಲಸದ ವೇಗ ಎಲ್ಲವೂ ಈ ಇಂಗ್ಲಿಷ್ ಓಎಸ್ ಮೇಲೆ ನಿಂತಿದೆ. ಒಟ್ಟಿನಲ್ಲಿ, ಇಂಗ್ಲಿಷ್ ಈಗ ಬಾಯಿ ಮಾತಿನ ಭಾಷೆಯಲ್ಲ, ಅದು ಇಡೀ ಜಗತ್ತನ್ನು ರನ್ ಮಾಡುತ್ತಿರುವ ಒಂದು ಡಿಜಿಟಲ್ ಆತ್ಮ!

ವಿಶ್ವೇಶ್ವರ ಭಟ್‌

View all posts by this author