ಒಂದೊಳ್ಳೆ ಮಾತು
rgururaj628@gmail.com
ಬ್ರಹ್ಮನ ಮಾನಸಪುತ್ರರಾದ ‘ಪುಲಸ್ಯ’ ಅಥವಾ ವಿಶ್ವವಸು ಮುನಿಗೆ ನಾಲ್ವರು ಪುತ್ರರು. ರಾವಣ, ಕುಂಭಕರ್ಣ, ವಿಭೀಷಣ ಹಾಗೂ ಶೂರ್ಪನಖಿ. ವಿಶ್ವವಸುವಿನ ಪತ್ನಿಯ ಹೆಸರು ‘ಕೈಕಸೆ’. ಈಕೆಗೆ ಪುಷೋತ್ಕಟೆ ಎಂಬ ಹೆಸರೂ ಇತ್ತು. ರಾಕ್ಷಸವಂಶದ ಸುಮಾಲಿ ಎಂಬವನ ಪತ್ನಿ ಕೈಕಸೆ. ಆದರೂ ಆಕೆಗೆ ಸ್ವಲ್ಪ ದೈವಭಕ್ತಿ, ನಿಷ್ಠೆ ಇತ್ತು.
ಕೈಕಸೆಯು ಪುತ್ರಾರ್ಥಿಯಾಗಿ ಸಂಧ್ಯಾಕಾಲದಲ್ಲಿ ಪತಿ ಮಿಲನ ಹೊಂದಿದುದರಿಂದ ರಾವಣ, ಕುಂಭಕರ್ಣ, ಶೂರ್ಪಣಖಿಯರುಗಳು ರಾಕ್ಷಸಗುಣದವರಾಗಿ ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಕ್ರೂರಬುದ್ಧಿಗೆ ಖಿನ್ನಳಾದ ಕೈಕಸೆ ಬ್ರಹ್ಮನನ್ನು ಪ್ರಾರ್ಥಿಸಿ ತನಗೆ ಧರ್ಮಾತ್ಮನೂ ತತ್ವಜ್ಞಾನಿ ಯೂ ಆದ ಪುತ್ರನು ಬೇಕೆಂದು ಕೋರಿಕೊಂಡಳು. ಇದರಿಂದ ಮುಂದೆ ಸದ್ಗುಣ ಸಂಪನ್ನನಾದ ವಿಭೀಷಣನು ಜನಿಸಿದನೆಂದು ತಿಳಿದು ಬರುತ್ತದೆ.
ಮಕ್ಕಳಾರ್ಥಿ ದಂಪತಿಗಳಿಗೆ ಪರೋಕ್ಷವಾಗಿ ಒಂದು ನೀತಿಯುಕ್ತ ಕಿವಿಮಾತನ್ನು ಇಲ್ಲಿ ವಾಲ್ಮೀಕಿ ಮಹರ್ಷಿ ಹೇಳುತ್ತಾನೆ. ಏನೆಂದರೆ...ಸಂಧ್ಯಾಕಾಲವಂತೂ ದೇವರ ಪೂಜೆ, ಭಜೆನೆಗೆ ಮೀಸಲಿಟ್ಟ ಕಾಲ. ಅದು ಬಿಟ್ಟು ದಾಂಪತ್ಯ ಸಂಬಂಧಿ ಕೃತ್ಯಗಳು ನಡೆದರೆ ಅದರಿಂದ ಕೆಟ್ಟ ಪರಿಣಾಮವನ್ನೆ ದುರಿಸಬೇಕಾಗುತ್ತದೆ ಎಂಬುದು ಎಚ್ಚರಿಕೆಯ ಮಾತು.
ಇದನ್ನೂ ಓದಿ: Roopa Gururaj Column: ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು
ಹಾಗೆಯೇ ಯೋಗ್ಯ ಸಮಯದಲ್ಲಿ ಸತ್ಸಂತಾನವನ್ನು ಬಯಸಿ ದಾಂಪತ್ಯ ನಡೆಸಿದಲ್ಲಿ ಅದರಿಂದ ಸತ್ಪ್ರಜೆಗಳು ಜನಿಸಬಹುದು ಎಂಬುದನ್ನೂ ಈ ಕತೆ ನಿರೂಪಿಸುತ್ತದೆ. ವಿಭೀಷಣ ತಾಯಿ ಬ್ರಹ್ಮ ನನ್ನು ಪ್ರಾರ್ಥಿಸಿದ ಪರಿಣಾಮವಾಗಿ ಒಲಿದು ಬಂದ ಗುಣವಂತ ಮಗನಿವನು. ತಾನೂ ಗೋಕರ್ಣ ದಲ್ಲಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಾನೆ. ತನಗೆ ಎಂತಹ ಕಷ್ಟಕಾಲದಲ್ಲಿಯೂ ಧರ್ಮಮಾರ್ಗ ದಲ್ಲೇ ಬುದ್ಧಿಯೋಡುವಂತೆಯೂ ಮಂತ್ರಾಭ್ಯಾಸವಿಲ್ಲದೆ ಬ್ರಹ್ಮಾಸ್ತ್ರವು ಸ್ವಾಧೀನ ವಾಗುವಂತೆಯೂ ವರ ಬೇಡಿದ.
ವಿಭೀಷಣನ ಸದ್ಗುಣಗಳಿಗೆ ಮೆಚ್ಚಿದ ಬ್ರಹ್ಮನು ಈತನು ಅಪೇಕ್ಷಿಸಿದ ವರವನ್ನಿತ್ತುದಲ್ಲದೆ ‘ಚಿರಂಜೀವಿಯಾಗು’ ಎಂಬ ವರವನ್ನೂ ಕರುಣಿಸಿದ. ಸಪ್ತ ಚಿರಂಜೀವಿಗಳಲ್ಲಿ ವಿಭೀಷಣ ಒಬ್ಬ. ಹನುಮಂತನಿಂದ ಲಂಕಾದಹನವಾದ ಮೇಲೆ ಮಂತ್ರಾಲೋಚನಾ ಸಭೆ ಕರೆದ ರಾವಣ, ಆಂಜನೇಯನನ್ನು ವಧಿಸಲು ಆಜ್ಞೆ ಮಾಡಿದಾಗ ದೂತವಧೆಯು ಸಲ್ಲದು ಎಂದು ಹೇಳಿ ದುಷ್ಕಾರ್ಯವನ್ನು ವಿಭೀಷಣ ತಡೆಯುತ್ತಾನೆ.
‘ಅಣ್ಣ..... ಪರಸತಿಗೆ ಆಸೆಪಟ್ಟು ಕಳ್ಳತನದಿಂದ ಸೀತೆಯನ್ನು ಹೊತ್ತು ತಂದಿರುವೆ. ಈಗ ಲಂಕಾ ದಹನವಾಗಿದೆ. ಇನ್ನು ಮುಂದೆ ವಾನರಸೇನೆ ಲಂಕೆಯನ್ನು ಮುತ್ತುವುದಕ್ಕೆ ಮೊದಲೇ ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿಬಿಡೋಣ. ನನ್ನ ಮಾತು ಕೇಳು. ಇದರಿಂದ ಎರಡೂ ಕಡೆ ಶಾಂತಿ ಇರುತ್ತದೆ.’ ಎಂದು ಎಷ್ಟೇ ನೀತಿ ಬೋಧಿಸಿದರೂ ತಮ್ಮನ ಹಿತವಚನ ರಾವಣನಿಗೆ ರುಚಿಸುವುದಿಲ್ಲ.
ಹಾಗೆಯೇ ವಿಭೀಷಣನ ಸಲಹೆ ಯಾವ ರಾಕ್ಷಸವೀರರಿಗೂ ಸರಿಕಾಣಲಿಲ್ಲ. ಸಭೆಯಲ್ಲಿದ್ದ ಎಲ್ಲರೂ ವಿಭೀಷಣನನ್ನು ಜರೆದು ಮಾತನಾಡಿದರಲ್ಲದೆ ರಾವಣನ ಮಗನಾದ ಇಂದ್ರಜಿತು, ಚಿಕ್ಕಪ್ಪನನ್ನು ಹೇಡಿಯೆಂದು ತಿರಸ್ಕರಿಸಲು ಇಂದ್ರಜಿತುವಿಗೂ ಬುದ್ದಿ ಹೇಳಿದಾಗ ರಾವಣ ಸಿಟ್ಟಿನಿಂದ ಕರಣ ನಿನ್ನ ಮತ್ಸರ ಬುದ್ಧಿಯನ್ನು ತೋರಿಸಬೇಡ, ಇಲ್ಲಿಂದ ತೊಲಗಾಚೆ. ಇಲ್ಲದಿದ್ದರೆ ಈಗಲೇ ನಿನ್ನನ್ನು ಕೊಲ್ಲುವೆ’ ಎನ್ನುತ್ತಾನೆ.
ತೀರಾ ವಿಷಾಧದಿಂದ ವಿಭೀಷಣ ಶ್ರೀರಾಮನ ಪಾಳಯಕ್ಕೆ ಬಂದು ಅವನಿಗೆ ಶರಣಾಗತನಾಗುತ್ತಾನೆ. ಶರಣು ಬಂದ ವಿಭೀಷಣನಿಗೆ ರಾಮ ಅಭಯ ನೀಡುತ್ತಾನೆ. ಕಾಳಗದಲ್ಲಿ ಇಂದ್ರಜಿತು ಮಾಯಾಸೀತೆಯನ್ನು ಸಂಹರಿಸಲು ಅದನ್ನು ನೋಡಿ ಪ್ರಲಾಪಿಸುತ್ತಿದ್ದ ಶ್ರೀರಾಮನನ್ನು ಸಮಾಧಾನಪಡಿಸುತ್ತಾನೆ.
ಇಂದ್ರಜಿತುವನ್ನು ವಧಿಸಬೇಕಾದರೆ ಹನ್ನೆರಡು ವರ್ಷ ಬ್ರಹ್ಮಚರ್ಯೆ ಪಾಲಿಸಿದ ವೀರನಿಗೆ ಮಾತ್ರ ಸಾಧ್ಯವೆಂಬ ಮರಣ ರಹಸ್ಯವನ್ನು ವಿಭೀಷಣ ಲಕ್ಷ್ಮಣನಿಗೆ ಹೇಳಿ ತನ್ಮೂಲಕ ಲಕ್ಷ್ಮಣನಿಂದ ಇಂದ್ರಜಿತುವಿನ ಸಂಹಾರವಾಗುತ್ತದೆ. ರಾವಣನ ಸಂಹಾರ ನಂತರ ಅಣ್ಣನ ಮರಣಕ್ಕಾಗಿ ದುಃ ಖಿಸುತ್ತಿದ್ದ ವಿಭೀಷಣ ಅಂತ್ಯ ಕ್ರಿಯೆಗಳನ್ನೆಲ್ಲ ಗೌರವದಿಂದ ಮಾಡುತ್ತಾನೆ. ಆತನನ್ನು ಶ್ರೀರಾಮ ಸಮಾಧಾನಪಡಿಸಿ ಲಂಕೆಯ ಅರಸನನ್ನಾಗಿ ಪಟ್ಟಾಭಿಷೇಕ ಮಾಡುತ್ತಾನೆ.
ವಿಭೀಷಣನು ರಾವಣನ ಪುಷ್ಪಕ ವಿಮಾನವನ್ನು ರಾಮನಿಗೆ ತಂದೊಪ್ಪಿಸುತ್ತಾನೆ. ಶ್ರೀರಾಮನು ಅಯೋಧ್ಯೆಗೆ ಹಿಂದಿರುಗುವಾಗ, ಲಂಕೆಗೆ ಸೇತುವೆಯ ಮುಂದೆಯೂ ಇದ್ದರೆ ತನಗೆ ಶತ್ರುಬಾಧೆ ತಪ್ಪಿದಲ್ಲವೆನ್ನಲು ಶ್ರೀರಾಮನು ಸೇತುವೆಯನ್ನು ಅಲ್ಲಲ್ಲಿ ಕಡಿಯುತ್ತಾನೆ. ಈ ಪ್ರದೇಶವನ್ನು ‘ಧನುಷೋಟಿ ತೀರ್ಥ’ ವೆನ್ನುತ್ತಾರೆ. ಮುಂದೆ ಅಯೋಧ್ಯೆಯ ಶ್ರೀರಾಮ ಪಟ್ಟಾಭಿಷೇಕದಲ್ಲೂ ವಿಭೀಷಣ ಭಾಗವಹಿಸಿದ್ದ. ಕೆಲವೊಮ್ಮೆ ನಮ್ಮ ಕೆಟ್ಟತನಗಳಿಗೆ ನಾವಿರುವ ಪರಿಸರದ, ಸುತ್ತಲಿರುವ ಜನರ ನೆಪ ಕೊಟ್ಟು ಜಾರಿಕೊಳ್ಳುತ್ತೇವೆ. ಆದರೆ ಸ್ವಭಾವ ನಮ್ಮ ಆಂತರ್ಯಕ್ಕೆ ಸಂಬಂಧಪಟ್ಟಿದ್ದು. ಕೆಸರೆರಿಲ್ಲಿ ಕಮಲ ಅರಳುವ ಹಾಗೆ, ಎಲ್ಲಿದ್ದರೂ ನಮ್ಮತನವನ್ನು ಉಳಿಸಿಕೊಳ್ಳಬಹುದು.