ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು

ಕೆಲಸಗಳು ಸರಸರ ನಿಮಿಷವೂ ಬಿಡುವಿಲ್ಲದಂತೆ ನಡೆಯುತ್ತಲೇ ಇತ್ತು. ಇದನ್ನು ಕಂಡ ಮನುಷ್ಯ ಮತ್ತೆ ದೇವತೆಯನ್ನು ಕೇಳಿದ, ಅದಕ್ಕೆ ದೇವತೆ ಇದು ‘ವಿತರಣಾ’ ವಿಭಾಗ. ಪ್ರಾರ್ಥನೆ ಹಾಗೂ ಪೂಜೆಯ ಮೂಲಕ ಸಂದಾಯವಾದ ಜನರ ಬೇಡಿಕೆಗಳನ್ನೆಲ್ಲಾ ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಭಗವಂತನು ಅನುಗ್ರಹಿಸುತ್ತಾನೆ. ಅವುಗಳನ್ನೆಲ್ಲಾ ಸರಿ ಮಾಡಿ ಆ ಅನುಗ್ರಹಗಳನ್ನು ಅದಕ್ಕೆ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಈ ವಿಭಾಗದ್ದು. ಮನುಷ್ಯನಿಗೆ ಬಹಳ ಸಂತೋಷವಾಯಿತು.

ದೇವರ ಅನುಗ್ರಹಕ್ಕೆ ಕೃತಜ್ಞತೆ ಹೇಳಲು ಮರೆತ ಮನುಷ್ಯರು

ಒಂದೊಳ್ಳೆ ಮಾತು

rgururaj628@gmail.com

ಮನುಷ್ಯನೊಬ್ಬ ಆಯಸ್ಸು ತೀರಿ ಮರಣ ಹೊಂದಿದ. ಅವನು ಮಾಡಿದ ಪುಣ್ಯ ಕಾರ್ಯಗಳಿಂದ ನೇರವಾಗಿ ಸ್ವರ್ಗಕ್ಕೆ ಬಂದನು. ಸ್ವರ್ಗದಲ್ಲಿ ಒಬ್ಬ ದೇವತೆಯು ಬಂದು ಅವನನ್ನು ಒಳಗೆ ಕರೆದುಕೊಂಡು ಹೋದಳು. ಹೀಗೆ ಸಾಗುತ್ತಿರುವಾಗ ಅಲ್ಲೊಂದು ಕೊಠಡಿ ಕಾಣುತ್ತದೆ. ಅಲ್ಲಿ ದೇವತೆಗಳು ಬಹಳ ಗಡಿಬಿಡಿಯಿಂದ ಕೆಲಸ ಮಾಡುತ್ತಾ, ಅಲ್ಲಿಂದಿಲ್ಲಿಗೆ ಅವಸರವಸರವಾಗಿ ಓಡಾಡುತ್ತಿದ್ದರು ಹಾಗೂ ಅಲ್ಲೊಂದಷ್ಟು ದೊಡ್ಡ ದೊಡ್ಡ ಪುಸ್ತಕಗಳಿದ್ದು ಅದರೊಳಗೆ ಏನೇನೋ ಬರೆಯುತ್ತಿದ್ದರು.

ಇದನ್ನು ನೋಡಿದ ಮನುಷ್ಯ ದೇವತೆಯನ್ನು ಕೇಳಿದ ಅವರೆಲ್ಲ ಏನು ಮಾಡುತ್ತಿದ್ದಾರೆ ? ಎಂದು. ದೇವತೆ ಹೇಳಿದಳು ಇದು ‘ಸ್ವೀಕೃತಿ’ ವಿಭಾಗ. ಇದು ಭೂಮಿಯ ಮೇಲಿನ ಜನರು ದೇವರಲ್ಲಿ ಅನೇಕ ಬೇಡಿಕೆಗಳನ್ನು ಬೇಡಿರುತ್ತಾರೆ ಅದನ್ನೆಲ್ಲ ‘ಸ್ವೀಕೃತಿ’ ವಿಭಾಗದಲ್ಲಿ ದಾಖಲಿಸುತ್ತಾರೆ ಎಂದಳು.

ಇದನ್ನೂ ಓದಿ: Roopa Gururaj Column: ತುಳಸಿದಾಸರಿಗೆ ರಾಮನಾಗಿ ದರ್ಶನ ನೀಡಿದ ಪುರಿ ಜಗನ್ನಾಥ

ಅವರು ಮತ್ತಷ್ಟು ಮುಂದೆ ಸಾಗಿದರು. ಅಲ್ಲಂತೂ ಬಹಳ ವಿಸ್ತಾರವಾದ ಕೊಠಡಿಯಿತ್ತು. ಕೆಲಸಗಳು ಸರಸರ ನಿಮಿಷವೂ ಬಿಡುವಿಲ್ಲದಂತೆ ನಡೆಯುತ್ತಲೇ ಇತ್ತು. ಇದನ್ನು ಕಂಡ ಮನುಷ್ಯ ಮತ್ತೆ ದೇವತೆಯನ್ನು ಕೇಳಿದ, ಅದಕ್ಕೆ ದೇವತೆ ಇದು ‘ವಿತರಣಾ’ ವಿಭಾಗ. ಪ್ರಾರ್ಥನೆ ಹಾಗೂ ಪೂಜೆಯ ಮೂಲಕ ಸಂದಾಯವಾದ ಜನರ ಬೇಡಿಕೆಗಳನ್ನೆಲ್ಲಾ ಪರಿಶೀಲಿಸಿ ಅಗತ್ಯಕ್ಕೆ ತಕ್ಕಂತೆ ಭಗವಂತನು ಅನುಗ್ರಹಿಸುತ್ತಾನೆ. ಅವುಗಳನ್ನೆಲ್ಲಾ ಸರಿ ಮಾಡಿ ಆ ಅನುಗ್ರಹಗಳನ್ನು ಅದಕ್ಕೆ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಈ ವಿಭಾಗದ್ದು. ಮನುಷ್ಯನಿಗೆ ಬಹಳ ಸಂತೋಷವಾಯಿತು.

ಅಂತೂ ಭಗವಂತ ನಮ್ಮ ಒಂದು ಬೇಡಿಕೆಯನ್ನು ಕಡೆಗಣಿಸದೆ, ಎಲ್ಲವನ್ನೂ ನಮಗೆ ಅನುಗ್ರಹಿಸು ತ್ತಾನೆ ಎನ್ನುವ ಸಂತೃಪ್ತಿ. ಸ್ವಲ್ಪ ದೂರ ನಡೆದಾಗ ಅಲ್ಲಿ ಬಹಳ ದೊಡ್ಡ ಚೌಕಿ. ದಾಟಿ ಮುಂದೆ ಬಂದಾಗ ಅಲ್ಲೊಂದು ಸಣ್ಣ ಕೊಠಡಿ ಕಾಣುತ್ತದೆ. ಅಲ್ಲೊಬ್ಬ ದೇವತೆ ಏಕಾಂತದಲ್ಲಿ ಕುಳಿತಿದ್ದಳು. ಅವಳಿಗೆ ಮಾಡಲು ಏನೂ ಕೆಲಸವಿಲ್ಲ.

ಯಾವುದೋ ನಿರೀಕ್ಷೆಯಲ್ಲಿದ್ದಂತೆ ಕಾಣುತ್ತಿತ್ತು. ಮನುಷ್ಯನಿಗೆ ಆಶ್ಚರ್ಯವಾಯಿತು, ಮತ್ತೆ ದೇವತೆಯನ್ನು ಇದೇನು? ಮೊದಲು ನೋಡಿದ ಎರಡು ಕೊಠಡಿಗಳಲ್ಲಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲು ಆಗದಷ್ಟು ಕೆಲಸ ಮಾಡುತ್ತಿದ್ದರು. ಆದರೆ ಇಲ್ಲಿ ಈ ದೇವತೆ ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದಾಳೆ ಏಕೆ? ಈ ಕೊಠಡಿಯ ಅಗತ್ಯವಾದರೂ ಏನು ಎಂದು ಕೇಳಿದ. ಆಗ ದೇವತೆ ಬಹಳ ಬೇಸರದಿಂದ ಹೇಳಿದಳು.

ಇದು ಕೃತಜ್ಞತೆ ಅರ್ಪಿಸಿದವರ ಹೆಸರನ್ನು ಬರೆದುಕೊಳ್ಳುವ ವಿಭಾಗ. ಭಗವಂತನನ್ನು ಅರ್ಚಿಸಿ ಜನರು ಬೇಡಿಕೆಗಳನ್ನು ಬೇಡುತ್ತಾರೆ. ಭಗವಂತ ಅವುಗಳನ್ನು ಅನುಗ್ರಹಿಸುತ್ತಾನೆ. ದೇವರ ‘ಅನುಗ್ರಹ ವನ್ನು’ ನಾವುಗಳು ಭಕ್ತರಿಗೆ ಮರೆಯದಂತೆ ವಿತರಣೆ ಮಾಡುತ್ತೇವೆ. ನಮಗೆ ತಲುಪಿದೆ ಎಂದು ಜನರು ದೇವರಿಗೊಂದು ಕೃತಜ್ಞತೆಯನ್ನು ನಮಸ್ಕಾರವನ್ನು, ಅರ್ಪಿಸಿದರೆ ಮಾತ್ರ ಇಲ್ಲಿ ದಾಖಲಾಗುತ್ತದೆ.

ಆದರೆ ಅಂಥ ಕೃತಜ್ಞತೆಯನ್ನು ಅರ್ಪಿಸುವವರು ಬಹಳ ಕಡಿಮೆ. ಆದುದರಿಂದ ಇಲ್ಲಿ ಈ ದೇವತೆಗೆ ಕೆಲಸವಿಲ್ಲ ಎಂದಳು. ಕಥೆ ಕಾಲ್ಪನಿಕ ವಿರಬಹುದು. ಆದರೆ ಅದರಲ್ಲಿ ಚರ್ಚಿಸಿರುವ ವಿಷಯ ಮಾತ್ರ ನಿಜವೇ ಅಲ್ಲವೇ? ನಾವು ಬುದ್ಧಿ ಬಂದಾಗಿನಿಂದ, ಸಾಯುವವರೆಗೆ ಒಂದಲ್ಲ ಒಂದು ವಿಷಯಕ್ಕೆ ಅನುಗ್ರಹಿಸು ಎಂದು ಭಗವಂತನನ್ನು ನಿರಂತರವಾಗಿ ಬೇಡುತ್ತಿರುತ್ತೇವೆ.

ಆದರೆ ಅದೇ ಕೈಗೂಡಿದಾಗ, ಇದು ನನ್ನ ಪರಿಶ್ರಮದಿಂದ ದೊರೆತದ್ದು ಎಂದು ಪ್ರಪಂಚವೆಲ್ಲ ಡಂಗುರ ಸಾರುತ್ತೇವೆ. ಭಗವಂತನ ಕೃಪಾಕಟಾಕ್ಷ ನಮಗೆ ಮರೆತೇ ಹೋಗುತ್ತದೆ. ನಾವು ಅದನ್ನು ಎಷ್ಟು ಕಷ್ಟಪಟ್ಟು ಗಳಿಸಿದೆವು ಎಂದು, ಸ್ನೇಹಿತರಿಗೆ ಆದರೆ ಅದೇ ಕೈಗೂಡಿದಾಗ, ಇದು ನನ್ನ ಪರಿಶ್ರಮದಿಂದ ದೊರೆತದ್ದು ಎಂದು ಪ್ರಪಂಚವೆಲ್ಲ ಡಂಗುರ ಸಾರುತ್ತೇವೆ. ಭಗವಂತನ ಕೃಪಾ ಕಟಾಕ್ಷ ನಮಗೆ ಮರೆತೇ ಹೋಗುತ್ತದೆ. ನಾವು ಅದನ್ನು ಎಷ್ಟು ಕಷ್ಟಪಟ್ಟು ಗಳಿಸಿದೆವು ಎಂದು, ಸ್ನೇಹಿತರಿಗೆ ಶ್ರೇಯವನ್ನೆಲ್ಲ ನಾವೇ ತೆಗೆದುಕೊಳ್ಳುತ್ತೇವೆ.

ಒಮ್ಮೆ ಯೋಚಿಸಿ ನೋಡಿ ಭಗವಂತನ ಅನುಗ್ರಹವಿಲ್ಲದೆ ಹೋದರೆ ಏನನ್ನಾದರೂ ಸಾಧಿಸುವ ಮನಸ್ಥಿತಿ ನಮಗಿರುತ್ತದೆಯೇ? ದೀನರಾಗಿ ಭಗವಂತನನ್ನು ಕೇಳಿಕೊಳ್ಳುವಾಗ ಇರುವ ವಿನಯ, ಆ ಕೆಲಸವಾದ ಮೇಲೂ ಏನನ್ನಾದರೂ ಸಾಧಿಸಿದ ಮೇಲೂ ಇರಬೇಕು. ಬದುಕಿನಲ್ಲಿ ಏನೇ ಒಳ್ಳೆಯದು ನಡೆದರು ಅದರಲ್ಲಿ ಭಗವಂತನ ಆಶೀರ್ವಾದ ಇದ್ದೇ ಇದೆ ಎನ್ನುವ ಅರಿವು ನಮಗಿದ್ದಾಗ, ನಾನು, ನನ್ನಿಂದ ಎನ್ನುವ ಅಹಂಕಾರ ಕಳೆದು ಬದುಕಿಗೆ ಹೆಚ್ಚು ಕೃತಜ್ಞರಾಗಿ ಬದುಕುತ್ತೇವೆ.