ಒಂದೊಳ್ಳೆ ಮಾತು
rgururaj628@gmail.com
ಮಹಾಕಾಲೇಶ್ವರ ಜ್ಯೋತಿರ್ಲಿಂಗವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ಸ್ಥಳಗಳಲ್ಲಿ ಒಂದು. ಪುರಾಣ ಕಾಲದಿಂದಲೂ, ಹಲವು ಶತಮಾನಗಳ ಅವಧಿಯಲ್ಲಿ ವಿವಿಧ ರಾಜರು ಮತ್ತು ಆಡಳಿತಗಾರರ ಕೈಗಳಲ್ಲಿ ಈ ದೇವಾಲಯ ಪುನರ್ನಿರ್ಮಾಣಗೊಂಡಿದೆ.
ಪುರಾಣಗಳಲ್ಲಿ ಉಜ್ಜಯಿನಿ ನಗರವನ್ನು ‘ಅವಂತಿಕಾ’ ಎಂದು ಕರೆಯಲಾಗುತ್ತಿತ್ತು. ಇದರ ವೈಭವವನ್ನು ಮಹಾಭಾರತ ಮತ್ತು ಇತರ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಾಚೀನ ಕಾಲದಲ್ಲಿ, ಉಜ್ಜಯಿನಿಯಲ್ಲಿ ವೇದಪ್ರಿಯ ಎಂಬ ಬ್ರಾಹ್ಮಣ ವಾಸಿಸುತ್ತಿದ್ದನು. ಆತನಿಗೆ ನಾಲ್ಕು ಜನ ಧರ್ಮನಿಷ್ಠ ಪುತ್ರರಿದ್ದರು. ಅವರು ಶಿವನ ಪರಮಭಕ್ತರಾಗಿದ್ದರು, ಪ್ರತಿದಿನವೂ ಶಿವನ ಆರಾಧನೆ ಮಾಡುತ್ತಿದ್ದರು.
ಅದೇ ಸಮಯದಲ್ಲಿ ದೂಷಣ ಎಂಬ ರಾಕ್ಷಸನು ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡು ವರ ಪಡೆದು ಬಲಶಾಲಿಯಾಗಿ, ಅಹಂಕಾರಿಯಾಗಿ, ಜನರ ಮೇಲೆ ದಾಳಿ ಮಾಡಲು ಶುರುಮಾಡಿದ್ದನು. ದೂಷಣನು ಮೊದಲು ಬ್ರಾಹ್ಮಣ ಮತ್ತು ಆತನ ಮಕ್ಕಳನ್ನು ಪೀಡಿಸಿ ಶಿವನ ಪೂಜೆಯನ್ನು ನಿಲ್ಲಿಸು ವಂತೆ ಒತ್ತಾಯಿಸಿದನು. ಆದರೆ ಅವರು ದೂಷಣನ ದರ್ಪಕ್ಕೆ ಮಣಿಯಲಿಲ್ಲ.
ಇದನ್ನೂ ಓದಿ: Roopa Gururaj Column: ಅನಂತ ಪದ್ಮನಾಭ ಪೂಜಾಫಲ
ದೂಷಣನು ಶಿವನ ಭಕ್ತರನ್ನು ನಾಶಮಾಡಲು ನಿರ್ಧರಿಸಿದನು. ಆಗ ಬ್ರಾಹ್ಮಣ ಮತ್ತು ಆತನ ಮಕ್ಕಳು ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಲು ಪ್ರಾರಂಭಿಸಿ, ದೂಷಣನ ಉಪಟಳದಿಂದ ಮುಕ್ತಿ ಕೋರಿದರು. ಭಕ್ತರ ಪ್ರಾರ್ಥನೆಗೆ ಮೆಚ್ಚಿದ ಶಿವನು ಭೂಮಿಯನ್ನು ಸೀಳಿ ಅಲ್ಲಿಂದ ಮಹಾಕಾಲೇಶ್ವರ ಜ್ಯೋತಿರ್ಲಿಂಗದ ರೂಪದಲ್ಲಿ ಹೊರಬಂದನು.
ಶಿವನು ಕೋಪಾಗ್ನಿಯಿಂದ ಧಗಧಗಿಸುತ್ತ ಮಹಾಕಾಲನಾಗಿ, ರಾಕ್ಷಸನಾದ ದೂಷಣನನ್ನು ವಧಿಸಿ ದನು. ಭಕ್ತರ ಕೋರಿಕೆಯ ಮೇರೆಗೆ ಶಿವನು ಆ ಸ್ಥಳದಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿ ಭಕ್ತರನ್ನು ರಕ್ಷಿಸುವುದಾಗಿ ವಚನ ನೀಡಿದನು. ಅಂದಿನಿಂದ ಆ ಜ್ಯೋತಿರ್ಲಿಂಗವು ಮಹಾಕಾಲೇಶ್ವರ ಎಂದು ಪ್ರಸಿದ್ಧವಾಯಿತು.
ಹಲವು ಶತಮಾನಗಳ ಕಾಲ ಈ ದೇವಾಲಯವು ವಿವಿಧ ಆಕ್ರಮಣಗಳಿಗೆ ಒಳಗಾಗಿದೆ. ಕ್ರಿ.ಶ. 1234 ರಲ್ಲಿ, ಇಲ್ತುಮಿಶ್ ಎಂಬ ಮುಸ್ಲಿಂ ಆಡಳಿತಗಾರನು ಉಜ್ಜಯಿನಿಯ ಮೇಲೆ ದಾಳಿ ಮಾಡಿ ಈ ದೇವಾ ಲಯವನ್ನು ಧ್ವಂಸಗೊಳಿಸಿದನು. ಆಕ್ರಮಣಕಾರರು ದೇವಾಲಯದ ಜ್ಯೋತಿರ್ಲಿಂಗವನ್ನು ಒಡೆದು ಸಮೀಪದ ಕೋಟಿತೀರ್ಥ ಎಂಬ ಕೊಳದಲ್ಲಿ ಅದನ್ನು ಎಸೆದರು ಎಂದು ಹೇಳಲಾಗುತ್ತದೆ.
ಹಲವು ವರ್ಷಗಳ ಕಾಲ ಈ ದೇವಾಲಯವು ಧ್ವಂಸವಾದ ಅವಸ್ಥೆಯ ಉಳಿಯಿತು. ನಂತರ, ೧೮ನೇ ಶತಮಾನದಲ್ಲಿ ಮರಾಠರ ಆಳ್ವಿಕೆಯಲ್ಲಿ, ವಿಶೇಷವಾಗಿ ರಾನೋಜಿರಾವ್ ಸಿಂಧಿಯಾನ ಕಾಲದಲ್ಲಿ, ದೇವಾಲಯವನ್ನು ಪುನಃ ನಿರ್ಮಿಸಲಾಯಿತು. ಹೀಗಾಗಿಯೇ ಇಂದಿನ ದೇವಾಲಯವು ಮರಾಠರ ವಾಸ್ತುಶಿಲ್ಪ ಶೈಲಿಯನ್ನು ಹೋಲುತ್ತದೆ; ಜತೆಜತೆಗೆ ಕೊಂಚ ಆಧುನಿಕತೆಯ ಸ್ಪರ್ಶವನ್ನು ಪಡೆದು ಕೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ, ಮಹಾಕಾಲೇಶ್ವರ ದೇವಾಲಯವನ್ನು ಪುನರ್ ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ‘ಮಹಾಕಾಲ್ ಲೋಕ್ ಕಾರಿಡಾರ್’ ಎಂಬ ಯೋಜನೆಯ ಅಡಿ ಯಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ನವೀಕರಿಸಲಾಗಿದೆ. ಶಿವನ ಕಥೆಗಳನ್ನು ಹೇಳುವ ಅನೇಕ ಶಿಲ್ಪಗಳು, ಕಂಬಗಳು ಮತ್ತು ಕೆತ್ತನೆಗಳನ್ನು ನಿರ್ಮಿಸಲಾಗಿದೆ. ಈ ಸ್ಥಳವನ್ನು ದರ್ಶಿಸಲು ಬರುವ ಭಕ್ತರಿಗೆ ಶಿವನ ಸಂಪೂರ್ಣ ಪುರಾಣವನ್ನು ಶಿಲ್ಪಗಳ ಸ್ವರೂಪದಲ್ಲಿನ ಕಥೆಗಳ ಮೂಲಕ ಹಂಚಿಕೊಳ್ಳುವ ಈ ಯೋಜನೆಯಿಂದ ಇಡೀ ಸ್ಥಳದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.
ಮಹಾಕಾಲೇಶ್ವರ ಜ್ಯೋತಿರ್ಲಿಂಗವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ಇದು ಒಂದು ಧಾರ್ಮಿಕ ಕೇಂದ್ರವಲ್ಲ, ಇದು ಭಾರತದ ಪ್ರಾಚೀನ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಒಂದು ಭಾಗವೇ ಆಗಿದೆ. ಇದು ಕಾಲಕಾಲಕ್ಕೂ ಹಲವಾರು ದಾಳಿಗಳನ್ನು ಎದುರಿಸಿ, ಇಂದಿಗೂ ಲಕ್ಷಾಂತರ ಭಕ್ತರಿಗೆ, ಭಕ್ತಿ- ಭರವಸೆ-ನಂಬಿಕೆಯ ಕೇಂದ್ರವಾಗಿ ಉಳಿದಿದೆ.
ಇಂಥ ಸ್ಥಳಪುರಾಣಗಳನ್ನು ನಮ್ಮ ಮಕ್ಕಳಿಗೆ ತಿಳಿಸಿ ಆ ಭಕ್ತಿಕೇಂದ್ರಗಳನ್ನು ಭೇಟಿ ಮಾಡಿದಾಗ, ನಮ್ಮ ಸನಾತನ ಧರ್ಮದ ಪದ್ಧತಿ ಮತ್ತು ಆಚರಣೆಗಳಲ್ಲಿ ಅವರಿಗೆ ನಂಬಿಕೆ ಹಾಗೂ ಅಭಿಮಾನ ಮೂಡಲು ಪ್ರೇರಣೆ ದೊರೆಯುತ್ತದೆ. ಭಾರತದಲ್ಲಿ ಇರುವ ಇಂಥ ಅನೇಕ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಹತ್ತಿರದಿಂದ ನೋಡಿ ಕೃತಾರ್ಥರಾಗುವ ಸದವಕಾಶವನ್ನು ನಮ್ಮದಾಗಿಸಿಕೊಳ್ಳೋಣ.