ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ravi Sajangadde Column: ಇರುವಿಕೆಯ ಅರಿವು, ಗುರಿ ತೋರಿಸುವವನೇ ಗುರು !

ಸಂಸ್ಕೃತದಲ್ಲಿ ‘ಗು’ ಎಂದರೆ ಅಂಧಕಾರ ಅಥವಾ ಅಜ್ಞಾನ ಎಂದರ್ಥ. ‘ರು’ ಎಂದರೆ ಕಳೆಯುವ ಅಥವಾ ದೂರಮಾಡುವ ಎಂದರ್ಥ. ಹಾಗಾಗಿ ‘ಗುರು’ ಎಂದರೆ ಅಂಧಕಾರ ಅಥವಾ ಅಜ್ಞಾನವನ್ನು ಕಳೆಯುವ, ದೂರಮಾಡುವ ಮೇಧಾವಿ ಎನ್ನುವ ಸರಳ ಅರ್ಥ. ಮನುಷ್ಯ ಜನ್ಮದಲ್ಲಿ ಪ್ರಮುಖವಾಗಿ ತೀರಿಸಲಾಗದ ನಾಲ್ಕು ಋಣಗಳ ಉಲ್ಲೇಖವು ಶಾಸ್ತ್ರಗ್ರಂಥಗಳಲ್ಲಿದೆ. ಅವೆಂದರೆ ತಾಯಿಯ ಋಣ, ತಂದೆಯ ಋಣ, ಗುರುವಿನ ಋಣ ಮತ್ತು ಈ ಮಣ್ಣಿನ/ನೆಲದ ಋಣ. ಈ ನಾಲ್ಕಕ್ಕೂ ಮನುಷ್ಯ ಸದಾ ಚಿರಋಣಿ ಯಾಗಿರಬೇಕು.

ಗುರುಪೂರ್ಣಿಮೆ

ರವೀ ಸಜಂಗದ್ದೆ

‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಸ್ಸಾಕ್ಷಾತ್ ಪರಬ್ರಹ್ಮಾ ತಸ್ಮೆ ಶ್ರೀ ಗುರವೇ ನಮಃ || ನಾವುಗಳು ಜೀವನವನ್ನು ಚೊಕ್ಕವಾಗಿ, ಸುಂದರವಾಗಿ ಬಾಳುವಂತಾಗಲು ಬೇಕಾಗುವ ಜ್ಞಾನದ ಅರಿವನ್ನು ಗುರುಗಳು ಕೊಡುತ್ತಾರೆ. ಮನಸ್ಸು ಮತ್ತು ಬದುಕಿನ ಅಜ್ಞಾನ ವೆಂಬ ಅಂಧಕಾರ ವನ್ನು ತೊಲಗಿಸುವವರೂ ಗುರುಗಳು.

ಜ್ಞಾನ, ಮೌಲ್ಯ, ಶಿಕ್ಷಣ, ಸಂಸ್ಕಾರ ಮತ್ತು ಕೌಶಲ್ಯದ ಪ್ರಮುಖ ಜೀವನ ಪಾಠಗಳನ್ನು ಕಲಿಸುವವರು ಗುರುಗಳು. ಪ್ರಪಂಚದ ಅತಿ ಉತ್ಕೃಷ್ಟ ಪರಂಪರೆಯಾಗಿರುವ ಗುರುಗಳನ್ನು ನೆನೆದು, ಗೌರವಿಸುವ ವಿಶಿಷ್ಟ ದಿನವೇ ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ‘ಗುರು ಪೂರ್ಣಿಮಾ’. ಆಧ್ಯಾತ್ಮ ಎಂದರೆ ‘ನಮ್ಮನ್ನು ನಾವು ಅರಿತುಕೊಳ್ಳುವುದು’. ನಮ್ಮನ್ನು ನಾವು ಸರಿಯಾಗಿ ಮತ್ತು ಸೂಕ್ತವಾಗಿ ಅರಿದು ತಿಳಿದುಕೊಳ್ಳಲು ನೆರವಾಗುವವರು ಇದೇ ಗುರುಗಳು!

ಶ್ರೀಯುತ ವೇದವ್ಯಾಸರು ಆಷಾಢ ಮಾಸದ ಇದೇ ಹುಣ್ಣಿಮೆಯಂದು ಜನಿಸಿದರು. ಹಾಗಿರುವಾಗ, ನಮ್ಮ ಸನಾತನ ಸಂಸ್ಕೃತಿಗೆ ಗುರುಸ್ವರೂಪದಲ್ಲಿರುವ ಗುರು ಪೂರ್ಣಿಮೆಯನ್ನು ವೇದವ್ಯಾಸರ ಪೂಜೆ ಮಾಡಿ, ‘ವ್ಯಾಸ ಪೂರ್ಣಿಮೆ’ಯಾಗಿ ಆಚರಿಸುವುದೂ ಔಚಿತ್ಯಪೂರ್ಣ ವಿಚಾರ. ಗುರು ಪೂರ್ಣಿಮೆಯ ದಿನದಂದು ಉಳಿದೆಲ್ಲ ದಿನಗಳಿಗಿಂತ ‘ಗುರು ಸೂತ್ರ’ದ ಪ್ರಭಾವ ಹಲವಾರು ಪಟ್ಟು ಹೆಚ್ಚು, ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂಬುದಾಗಿ ತಲೆತಲಾಂತರದಿಂದ ಬಂದ ನಂಬಿಕೆ.

ಇದನ್ನೂ ಓದಿ: Ravi Sajangadde Column: ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !

ಸಂಸ್ಕೃತದಲ್ಲಿ ‘ಗು’ ಎಂದರೆ ಅಂಧಕಾರ ಅಥವಾ ಅಜ್ಞಾನ ಎಂದರ್ಥ. ‘ರು’ ಎಂದರೆ ಕಳೆಯುವ ಅಥವಾ ದೂರಮಾಡುವ ಎಂದರ್ಥ. ಹಾಗಾಗಿ ‘ಗುರು’ ಎಂದರೆ ಅಂಧಕಾರ ಅಥವಾ ಅಜ್ಞಾನವನ್ನು ಕಳೆಯುವ, ದೂರಮಾಡುವ ಮೇಧಾವಿ ಎನ್ನುವ ಸರಳ ಅರ್ಥ. ಮನುಷ್ಯ ಜನ್ಮದಲ್ಲಿ ಪ್ರಮುಖವಾಗಿ ತೀರಿಸಲಾಗದ ನಾಲ್ಕು ಋಣಗಳ ಉಲ್ಲೇಖವು ಶಾಸ್ತ್ರಗ್ರಂಥಗಳಲ್ಲಿದೆ. ಅವೆಂದರೆ ತಾಯಿಯ ಋಣ, ತಂದೆಯ ಋಣ, ಗುರುವಿನ ಋಣ ಮತ್ತು ಈ ಮಣ್ಣಿನ/ನೆಲದ ಋಣ. ಈ ನಾಲ್ಕಕ್ಕೂ ಮನುಷ್ಯ ಸದಾ ಚಿರಋಣಿಯಾಗಿರಬೇಕು.

‘ಗುರುಗಳು ಹೇಳಿದ ಸಾಧನೆಯನ್ನು ಅಂಗೀಕರಿಸಿ ಅವರು ಹೇಳಿದ ಸನ್ಮಾರ್ಗದಲ್ಲಿ ಮುನ್ನಡೆದು, ಸಾಧನೆಯ ಮೂಲಕ ಸ್ವತಃ ಗುರುತ್ವ ಪ್ರಾಪ್ತಿಸಿಕೊಂಡಾಗಲಷ್ಟೇ ಗುರುಋಣ ತೀರಿಸಲು ಸಾಧ್ಯ’ ಎನ್ನುವುದು ಶಾಸ್ತ್ರದಲ್ಲಿ ಉಲ್ಲೇಖಿತ ಸುವಿಚಾರ. ಈ ವಿಷಯದಲ್ಲಿ ಸಂತ ಕಬೀರದಾಸರು ಹೇಳಿದ ಒಂದು ಉಕ್ತಿಯ ಭಾವಾನುವಾದ ಹೀಗಿದೆ. ಗುರುಗಳು ಮತ್ತು ಭಗವಂತ ನಮ್ಮೆದುರು ಬಂದಾಗ ಯಾರಿಗೆ ಮೊದಲು ವಂದಿಸಬೇಕು ಎನ್ನುವ ಜಿeಸೆಗೆ ‘ಮೊದಲು ನಾವು ಗುರುವಿನ ಪಾದಕ್ಕೆ ನಮಸ್ಕರಿಸಬೇಕು, ಯಾಕೆಂದರೆ ಗುರುವಿನ ಕೃಪೆ ಇಲ್ಲದೆ ನಮಗೆ ಭಗವಂತ ಸಿಗಲು ಸಾಧ್ಯವಿಲ್ಲ’ ಎಂಬುದಾಗಿ ಉತ್ತರಿಸಿ ಗುರುವಿನ ಶ್ರೇಷ್ಠತೆಗೆ ಕನ್ನಡಿ ಹಿಡಿದಿದ್ದಾರೆ.

ನಮಗೆ ಸುಜ್ಞಾನದ ಧಾರೆ ಎರೆಯುವ ಮೂಲಕ ಗುರುವು ನಮ್ಮನ್ನು ಜನ್ಮಮೃತ್ಯುಚಕ್ರದಿಂದ ಪಾರು ಮಾಡುತ್ತಾರೆ. ಹಾಗಾಗಿ, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವ ಪುರಂದರದಾಸರ ರಚನೆ ಗುರುವಿನ ಶ್ರೇಷ್ಠತೆ ಸಾರುವ ವಚನ ಸಾಹಿತ್ಯ. ಜೀವನದಲ್ಲಿ ಒಂದು ಅಕ್ಷರವನ್ನು ಅಥವಾ ಯಾವುದೋ ಒಂದು ಶೈಕ್ಷಣಿಕ ಅಥವಾ ಜೀವನ ಪಾಠವನ್ನು ಕಲಿಸಿದವ ರೆಲ್ಲರೂ ಗುರು ಸಮಾನರು ಎಂಬುದು ಹಿಂದಿನಿಂದಲೂ ನಡೆದು ಬಂದ ಒಕ್ಕಣೆ. ನಾವು ಕಲಿಯುವ ವಿದ್ಯೆ ಮತ್ತು ಜ್ಞಾನದ ರೂವಾರಿಗಳು ಯಾರೇ ಆದರೂ ಅವರೆಲ್ಲರೂ ಗುರುಗಳು.

72 ಒಕ

ಜ್ಞಾನ ಕೇವಲ ನಮ್ಮ ಸುತ್ತಲಿರುವ ಮನುಷ್ಯರಿಂದ ಅಥವಾ ಕೇವಲ ನಮಗಿಂತ ಹಿರಿಯರಿಂದ ಅಥವಾ ಕೇವಲ ಶಾಲಾ ಕಾಲೇಜುಗಳಿಂದ ಮಾತ್ರ ಒದಗುವಂಥದ್ದಲ್ಲ! ಗುರು ಎನ್ನುವುದು ತತ್ವವೇ ಹೊರತು ಮಾನುಷರೂಪ ಮಾತ್ರವೇ ಅಲ್ಲ. ನಾವಿರುವ ಪರಿಸರ, ಸಮಾಜ, ಪ್ರಕೃತಿ, ಪ್ರಾಣಿ ಸಂಕುಲ, ಪಕ್ಷಿ ವೃಂದ, ಗಾಳಿ, ಬೆಳಕು, ನದಿ, ಗುಡ್ಡ, ಬೆಟ್ಟ, ನೀರು, ಆಹಾರ, ವಾತಾವರಣ ಋತುಮಾನ... ಹೀಗೆ ಎಲ್ಲವೂ-ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುರುವಾಗಿ ಒದಗಿ ಒಂದಷ್ಟು ಪಾಠ, ಅನುಭವ ನಮಗೆ ಸಿಕ್ಕೇ ಸಿಗುತ್ತದೆ. ಮನುಷ್ಯನ ಲೌಕಿಕ, ಅಲೌಕಿಕ ಮತ್ತು ಪಾರಮಾರ್ಥಿಕ ಸಿದ್ಧಿ ಮತ್ತು ಸಾಧನೆ ಗೆ ಕಾರಣರಾ(ವಾ)ಗುವ ಎಲ್ಲರಿಗೂ/ಎಲ್ಲದಕ್ಕೂ ಹೃದಯದಿಂದ, ದೈನ್ಯವಾಗಿ, ಭಕ್ತಿ ಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವ ಪರ್ವದಿನವೇ ಗುರು ಪೂರ್ಣಿಮೆ! ಗುರು ಎನ್ನುವುದು ಸಾಗರಸತ್ವ ಮತ್ತು ಮಹಾತತ್ವ.

ಮಾನವನ ಮೂಲಾಶಯ ಮತ್ತು ಧಿಃಶಕ್ತಿಯ ಸಂಕೇತವದು. ಸದಾ ನೆಮ್ಮದಿಯನ್ನು ಅರಸುತ್ತಾ ಸಾಗುವುದು ಮನುಷ್ಯನ ಅಭ್ಯಾಸ! ನೂರಾರು ಸಮಸ್ಯೆಗಳ ಸುಳಿ, ತೊಂದರೆ, ಜೀವನ ನಶ್ವರತೆ, ಹೆಚ್ಚಿನ ಸುಖದ ಹಂಬಲ, ಪಾರಮಾರ್ಥಿಕ ಸಂತಸದ ಬಯಕೆ- ಹೀಗೆ ನಾನಾ ಕಾರಣ ಮತ್ತು ಸಮಸ್ಯೆಗಳು ನೆಮ್ಮದಿ ಮತ್ತು ಆನಂದದ ಹುಡುಕಾಟದಲ್ಲಿ ಮನುಷ್ಯ ಸದಾ ಬ್ಯುಸಿ!

ಈ ಹುಡುಕಾಟದ ನಾಗಾಲೋಟದ ಪ್ರಶ್ನೆಗಳಿಗೆ ನೆರವಿನ ಉತ್ತರವಾಗುವವನು, ತತ್ವಾನ್ವೇಷಣೆಯ ದಾರಿದೀಪವಾಗುವವನು ಜ್ಞಾನಾನಂದ ಗುರು. ಇಂದಿನ ಯುಗದಲ್ಲಿ ಯತಿಗಳು/ಸ್ವಾಮೀಜಿಗಳು ಮಾಡುತ್ತಿರುವ, ಪಾಲಿಸುತ್ತಿರುವ ಚಾತುರ್ಮಾಸ್ಯ ವ್ರತವು ವೇದವ್ಯಾಸರು ಹಾಕಿಕೊಟ್ಟ ವಿಶಿಷ್ಟ ಮತ್ತು ಶ್ರೇಷ್ಠ ಆಧ್ಯಾತ್ಮಿಕ ಪರಂಪರೆ.

ಅಂದಿನ ದಿನಗಳಲ್ಲಿ ಸಾಮಾನ್ಯ ವಾಗಿ ವರ್ಷದ ಎಂಟು ತಿಂಗಳುಗಳ ಕಾಲ ಕಾಲ್ನಡಿಗೆಯಲ್ಲಿ ಲೋಕ ಸಂಚಾರ ಮಾಡುತ್ತಿದ್ದ ಯತಿವರೇಣ್ಯರು ನಾಲ್ಕು ತಿಂಗಳುಗಳಷ್ಟು ಕಾಲ ಒಂದೆಡೆ ಕುಳಿತು, ಅಧ್ಯಯನ ಮಾಡಿ, ಆ ವೃದ್ಧಿಯಾದ ಸುಜ್ಞಾನವನ್ನು ಮುಂದಿನ ಲೋಕಸಂಚಾರದಲ್ಲಿ ಜನರಿಗೆ ಜ್ಞಾನಾರ್ಜನೆ ನೀಡಲಿ ಎನ್ನುವ ಮಹತ್ವ ಹೊಂದಿರುವ ಆಧ್ಯಾತ್ಮಿಕ ಪ್ರಕಾರವಿದು. ಆ ನಾಲ್ಕು ತಿಂಗಳ ಕಾಲದ ಜ್ಞಾನ ಪ್ರಸರಣದ ದೀವಟಿಗೆ ‘ಚಾತುರ್ಮಾಸ್ಯ’ವು ಇದೇ ವ್ಯಾಸ ಪೂರ್ಣಿಮೆಯಂದು ಆರಂಭವಾಗುತ್ತದೆ. ‘ಮನುಷ್ಯನು ವಾಯಸದಿಂದ ಮಾನಸಕ್ಕೆ ತೆರಳಬೇಕು’ ಎಂಬುದಾಗಿ ಭಾಗವತ ಪುರಾಣದಲ್ಲಿ ವ್ಯಾಸರು ಉಲ್ಲೇಖಿಸಿದ್ದಾರೆ.

ವಾಯಸವೆಂದರೆ ಸಾಧನಾ ರಹಿತರಾಗಿ, ಕರ್ತವ್ಯಹೀನರಾಗಿ, ಭೂಮಿಗೆ ಭಾರವಾಗಿ ತಿಂದುಂಡು ತನ್ನಷ್ಟಕ್ಕೆ ಇರುವುದು. ಮಾನಸವೆಂದರೆ ಅದು ಶುಭ್ರ ನೀರಿನ ಸರೋವರ! ‘ನಾವುಗಳು ಕಾಗೆ- ಹದ್ದು ಗಳು ಕುಡಿಯುವ ಕೊಳಕು ನೀರಿನಂತಾಗದೆ ಹಂಸಗಳು ಕುಡಿಯುವ ಪರಿಶುದ್ಧ ಮಾನಸ ಸರೋವರ ವಾಗಬೇಕು’ ಎನ್ನುವುದು ಇದರ ಆಶಯ. ಒಂದು ವೃತ್ತವನ್ನು ತೆಗೆದುಕೊಂಡರೆ ಅದರಲ್ಲಿ ಕೇಂದ್ರ ಬಿಂದು, ತ್ರಿಜ್ಯ, ಪರಿಧಿ ಮತ್ತು ವ್ಯಾಸ ಎನ್ನುವ ನಾಲ್ಕು ಪ್ರಕಾರಗಳಿವೆ. ಈ ನಾಲ್ಕರಲ್ಲಿ ಕೇಂದ್ರದ ಮೂಲಕವೇ ಎರಡೂ ಪರಿಧಿಗಳನ್ನು ತಲುಪಬಲ್ಲದ್ದು ‘ವ್ಯಾಸ’ ಮಾತ್ರ! ಈ ವೃತ್ತವೇ ನಮ್ಮ ಪ್ರಪಂಚ ಮತ್ತು ಈ ಜಗತ್ತು!

ಇಲ್ಲಿ ಧರ್ಮ ಮತ್ತು ನಂಬಿಕೆಗಳು ಕೇಂದ್ರ ಬಿಂದುವಾದರೆ ಶಿಕ್ಷಣ ಮತ್ತು ಆಧ್ಯಾತ್ಮ ಎರಡು ತುದಿ ಗಳು. ಇಹದ ಮತ್ತು ಪಾರಮಾರ್ಥಿಕ ಜೀವನಮಾರ್ಗದ ಎಳೆಗಳನ್ನು ಧರ್ಮ ಮತ್ತು ನಂಬಿಕೆಗಳೆಂಬ ವಿಶ್ವಸನೀಯ ಮೌಲ್ಯಗಳ ಮೂಲಕ ಗಟ್ಟಿಯಾಗಿ ಹಿಡಿದು ಇಟ್ಟುಕೊಳ್ಳುವುದು ಇದೇ ವ್ಯಾಸರು ಮತ್ತವರ ಅತ್ಯಂತ ಶ್ರೇಷ್ಠ ಪರಿಕಲ್ಪನೆಯ ಪ್ರಬೋಧನೆಗಳು. ವೇದವ್ಯಾಸರು ಈ ದಿನ ಜನ್ಮತಳೆ ದುದಲ್ಲದೆ ಮುಂದೆ ಆಷಾಢ ಶುಕ್ಲ ಪಕ್ಷದಲ್ಲಿ ಬ್ರಹ್ಮಸೂತ್ರಗಳ ರಚನೆಯನ್ನು ಆರಂಭಿಸಿದರು. ಈ ದಿನದಂದು ಶುಕ್ಲಪಕ್ಷ ಕೊನೆಗೊಳ್ಳುತ್ತದೆ.

ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ನಂತರ ತನ್ನ ಧರ್ಮೋಪದೇಶವನ್ನು ಇದೇ ದಿನ ನೀಡಿದ ಕಾರಣ ಬೌದ್ಧ ಧರ್ಮ ಅನುಯಾಯಿಗಳಿಗೆ ಗುರು ಪೂರ್ಣಿಮಾ ಅತ್ಯಂತ ಪವಿತ್ರವಾದ ದಿನ. ಜೈನ ಧರ್ಮದ 24ನೆಯ ತೀರ್ಥಂಕರ ಭಗವಾನ್ ಮಹಾವೀರರು ಕೈವಲ್ಯ ಪಡೆದ ನಂತರ, ಇದೇ ಶುಭ ದಿನದಂದು ಇಂದ್ರಭೂತಿ ಗೌತಮರನ್ನು ಶಿಷ್ಯನನ್ನಾಗಿ ಮಾಡಿಕೊಂಡು ಸುದಿನ ಈ ಗುರು ಪೂರ್ಣಿಮಾ. ಇನ್ನೊಂದೆಡೆ, ಯೋಗ ಸಂಪ್ರದಾಯದ ಪ್ರಕಾರ, ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆ ಎರೆದು ‘ಬ್ರಹ್ಮಾಂಡದ ಪ್ರಥಮ ಗುರು’ ಎಂಬ ಹೆಗ್ಗಳಿಕೆಗೆ ಪಾತ್ರರಾದ ದಿನ ಎಂಬ ನಂಬಿಕೆ ಇದೆ. ಇನ್ನು ಭಗವದ್ಗೀತೆಯೂ ಗುರು-ಶಿಷ್ಯ ಪರಂಪರೆಯ ಮತ್ತೊಂದು ಸಾರ್ವಕಾಲಿಕ ಉದಾಹರಣೆ!

ಯೋಗೀಶ್ವರನಾದ ಶ್ರೀಕೃಷ್ಣ ಪರಮಾತ್ಮನು ಗುರುವಾಗಿ, ಜಿಜ್ಞಾಸುವಾದ ಅರ್ಜುನ ಶಿಷ್ಯನಾಗಿ ನಡೆಸುವ ಸಂವಾದವು ಶ್ರೇಷ್ಠ ಗುರು-ಶಿಷ್ಯ ಪರಂಪರೆಯ ಜ್ಞಾನಾರ್ಜನೆಯ ಭಾಗ. ಈಗಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮಗೆ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕರೆಲ್ಲರನ್ನು ಸ್ಮರಿಸಿ, ಅವರ ಶುಭಾಶೀರ್ವಾದ ಪಡೆಯುವ ಅತುಲ್ಯ ದಿನವೇ ಈ ಗುರು ಪೂರ್ಣಿಮಾ. ದೇಶಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಶಾಖೆಗಳಲ್ಲಿ ಈ ಗುರು ಪೂರ್ಣಿಮೆಯನ್ನು ಆಚರಿಸಿ ಗುರುವಿನ ಮಹತ್ವ ಜಗಕ್ಕೆ ಸಾರುವ ಮತ್ತು ಗುರುವರೇಣ್ಯರಿಗೆ ವಂದನೆ ಸಲ್ಲಿಸುವ, ಅಭಿನಂದಿಸುವ ಕಾರ್ಯಕ್ರಮಗಳು ನಡೆಯುತ್ತವೆ.

ನಮ್ಮ ಕೈಹಿಡಿದು ಸಲಹಿ ನಡೆಸಿರುವ, ಜಗದಲ್ಲಿರುವ ಹಲವು ಶ್ರೇಷ್ಠರ ರೂಪದಲ್ಲಿ ಅವತರಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದ, ಜಗತ್ತಿನ ಇತರ ಜೀವಚರಗಳಂತೆಯೇ ತಾನೂ ಕ್ಷುದ್ರ ಜಂತು ಆಗಬಹುದಾಗಿದ್ದ ಮಾನವನಿಗೆ ಶ್ರೇಷ್ಠತೆಯನ್ನು ಅನುಭವಿಸುವ ಅವಕಾಶವನ್ನು ವಿದ್ಯಾರ್ಜನೆಯ ಮೂಲಕ ನೀಡಿದ ಇಡೀ ಗುರುಪರಂಪರೆಗೆ ವಂದನೆಗಳು.

ನಾವೆಲ್ಲರೂ ನಮ್ಮ ಶ್ರೇಷ್ಠತೆಯನ್ನು ಅರಿತು, ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಸಂಕಲ್ಪ ತೊಡೋಣ. ವಕೀಲರು/ನ್ಯಾಯಾಧೀಶರು ಇಲ್ಲದಿದ್ದರೆ ನ್ಯಾಯವಿಲ್ಲ, ಡಾಕ್ಟರ್- ನರ್ಸುಗಳು ಇಲ್ಲದಿದ್ದರೆ ಆರೋಗ್ಯವಿಲ್ಲ, ಪೊಲೀಸರು ಇಲ್ಲದಿದ್ದರೆ ಭದ್ರತೆ ಇಲ್ಲ, ಇಂಜಿನಿಯರುಗಳು ಇಲ್ಲದಿದ್ದರೆ ತಂತ್ರಜ್ಞಾನ ಇಲ್ಲ... ಆದರೆ ಶಿಕ್ಷಕರು/ಗುರುಗಳು ಇಲ್ಲದಿದ್ದರೆ ನಾವು ಮತ್ತು ಮೇಲೆ ಉಲ್ಲೇಖಿಸಿದ ಯಾರೂ ಜಗತ್ತಿನಲ್ಲಿ ಆ ವೃತ್ತಿಗಳಲ್ಲಿ ಇರಲು ಸಾಧ್ಯವೇ ಇಲ್ಲ!

ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮೆಲ್ಲರ ಬದುಕನ್ನು ಬಹಳ ಚೆಂದವಾಗಿ ರೂಪಿಸಿದ, ಕಲ್ಲಿನಂತಿದ್ದ ನಮ್ಮನ್ನೆಲ್ಲ ಕೆತ್ತಿ ಸುಂದರ ವಿಗ್ರಹ ರೂಪಕ್ಕೆ ತರುವಲ್ಲಿ ತಮ್ಮ ಬದುಕನ್ನು ಸವೆಸಿದ, ಮುಡಿಪಾಗಿಟ್ಟ ಜಗದಗಲದ ಸರ್ವ ಗುರುವೃಂದಕ್ಕೆ ಸಾಷ್ಟಾಂಗ ಪ್ರಣಾಮಗಳು. ಜೀವ ತಾಯಿಯ ಭಿಕ್ಷೆ, ಬದುಕು ತಂದೆಯ ಭಿಕ್ಷೆ ಮತ್ತು eನ ಗುರುಗಳು ನೀಡಿದ ಭಿಕ್ಷೆ. ‘ಹುಲು ಮಾನವ, ಲಘು ಮನುಷ್ಯನನ್ನು ಎಲ್ಲಾ ರೀತಿಯಲ್ಲಿ ಗಟ್ಟಿಗೊಳಿಸು ವವರು ಗುರುಗಳು’ ಎನ್ನುವುದು ಸದಾ ನೆನಪಿರಲಿ!

ಮುಂದಿನ ದಿನಗಳಲ್ಲಿ ಭಾರತವು ಸರ್ವರಂಗಗಳಲ್ಲೂ ಶಕ್ತಿಶಾಲಿ ದೇಶವಾಗಿ ಸ್ಥಾಪನೆಗೊಂಡು ನಿಜಾರ್ಥದಲ್ಲಿ ‘ವಿಶ್ವ ಗುರು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ. ಬಾದರಾಯಣ ಮಹರ್ಷಿಗಳಿಗೆ ಶಿರಬಾಗಿ ನಮಿಸುತ್ತಾ, ಓಂ ಶ್ರೀ ಗುರುಭ್ಯೋ ನಮಃ.