ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravi Sajangadde Column: ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !

ಎಲ್ಲಾ ಕ್ಷೇತ್ರ- ಸ್ತರಗಳಲ್ಲೂ ಮಾರಿಕೊಂಡವರು ಇದ್ದಾರೆ ಮತ್ತು ಅದೇ ಸಮಯದಲ್ಲಿ, ಅಂಥವರ ಸಂಖ್ಯೆ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಮಾಣಿಕರೂ ಇದ್ದಾರೆ ಎನ್ನುವುದೂ ನಿರ್ವಿವಾದ. ಸತ್ಯವನ್ನು ನಿರ್ಭೀತವಾಗಿ ಸಮಾಜದ ಮುಂದಿಡಬೇಕಾದ, ದಮನಿತರ ಧ್ವನಿಯಾಗಬೇಕಾದ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಯಾವುದೇ ಅಡೆತಡೆಯಿಲ್ಲದೆ ಜನರೆದುರು ತೆರೆದಿಡಬೇಕಾದ ಮಾಧ್ಯಮಗಳು ಇಂದು ಕಾರ್ಪೊರೇಟ್ ಶಕ್ತಿಗಳ, ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗುತ್ತಿವೆ ಎಂಬ ಆರೋಪ ಹೊಸದೇನಲ್ಲ.

ಕೊಳ್ಳುವವರು ಇರುವ ತನಕ ಮಾರಿಕೊಳ್ಳುವವರೂ ಇರುತ್ತಾರೆ !

-

Profile
Ashok Nayak Jun 19, 2026 10:21 AM

ಮುಕ್ತ ಮಾಧ್ಯಮ

ರವಿ ಸಜಂಗದ್ದೆ

ನಾವೇ ಆರಿಸಿ ಕಳುಹಿಸಿದ ರಾಜಕಾರಣಿಗಳಿಂದ ತೊಡಗಿ ಮಾಧ್ಯಮಗಳ ತನಕ ವಿವಿಧ ಹಂತಗಳಲ್ಲಿ, ವಿವಿಧ ರೀತಿಯ ಆಕ್ಷೇಪ, ಆಕ್ರೋಶ ಮತ್ತು ಅಸಮಾಧಾನ ಜನರ ನಡುವೆ ಆಗಾಗ ಇರುವುದು ಅತ್ಯಂತ ಸಹಜ. ಅಂತಹಾ ಸಿಟ್ಟು-ಸಿಡುಕುಗಳನ್ನು ಸಾಂವಿಧಾನಿಕ ಶೈಲಿ ಮತ್ತು ಭಾಷೆಯಲ್ಲಿ ಪ್ರಕಟಿಸಲು ಭಾರತ ದೇಶದ ಪ್ರಜಾಪ್ರಭುತ್ವ ನಮಗೆಲ್ಲ ಅನುವು ಮಾಡಿಕೊಡುತ್ತದೆ.

ಆಡಿದ ಮಾತುಗಳಿಂದಾಗಿ ವಿಷಯ/ಅನಿಸಿಕೆ ಒಂದಷ್ಟು ವಿವಾದದ ಸ್ವರೂಪ ಪಡೆದುಕೊಂಡಾಗ, ‘ನೀವು ಯಾರ ಬಗ್ಗೆ ಈ ಆಕ್ರೋಶ ವ್ಯಕ್ತಪಡಿಸಿದ್ದು?’ ಎಂದು ಅಂಥಾ ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿಯನ್ನು ಯಾರಾದರೂ ಕೇಳಿದಾಗ, ‘ನಿಮ್ಮ ಬಗ್ಗೆ ಅಲ್ಲ; ನಿಮ್ಮ ಕ್ಷೇತ್ರದ ಇತರ ಕೆಲವರ ಬಗ್ಗೆ’ ಎಂದು ಸುಖಾಸುಮ್ಮನೆ ವಿಷಯವನ್ನು ಜನರಲೈಸ್ ಮಾಡಿ ಮಾತನಾಡುವುದಕ್ಕೆ ‘ಗಾಳಿಯಲ್ಲಿ ಗುಂಡು ಹೊಡೆದಂತೆ’ ಎನ್ನುತ್ತಾರೆ. ಆ ಕೆಲಸವನ್ನು ಪ್ರಕಾಶ್ ರಾಜ್ ಮಾಡಿ, ಕೈ ಮತ್ತಿನ್ನೇನೇನೋ ಸುಟ್ಟುಕೊಂಡಿದ್ದಾರೆ!

ಒಂದು ಸಣ್ಣ ಅವಧಿಗೆ ಅಭಿನಯದಿಂದ ಜನರ ನಡುವೆ ಚಲಾವಣೆಯಲ್ಲಿ ಇದ್ದ ಅವರು ಈಗ ತಮ್ಮ ಮಹೋನ್ನತ ನಾಟಕ ಮತ್ತು ಒಟ್ರಾಶಿ ಅಭಿಪ್ರಾಯಗಳಿಂದ ಚಲಾವಣೆ ಮತ್ತು ನ್ಯೂಸ್ʼನಲ್ಲಿರಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ‘ಧರ್ಮಸ್ಥಳ ಬುರುಡೆ ಗ್ಯಾಂಗ್’ ಜೊತೆಗಿನ ಅವರ ಸಂಬಂಧ. ಆ ಷಡ್ಯಂತ್ರಕ್ಕೆ ಅದೆಲ್ಲಿಂದಲೋ ಕೋಟ್ಯಂತರ ರೂಪಾಯಿ ಫಂಡಿಂಗ್ ಮತ್ತು ಈ ಪ್ರಕರಣದ ಜೊತೆಗೆ ಅವರ ಹೆಸರು ತಳಕು ಹಾಕಿಕೊಂಡದೆ.

ಇದನ್ನೂ ಓದಿ: Ravi Sajangadde Column: ಯುದ್ಧ ಮತ್ತು ಎಲ್‌ ನಿನೋ, ಕೃಷಿ ಹೇಗೋ ಏನೋ ?!

ಈ ವಿವಾದಿತ ವಿಚಾರದ ಕುರಿತು ಸ್ಪಷ್ಟೀಕರಣ ನೀಡುವ ಪ್ರಕ್ರಿಯೆಯ ಭಾಗವಾಗಿ ಪ್ರಕಾಶ್ ರಾಜ್ ಕರೆದ ಸುದ್ದಿಗೋಷ್ಠಿಯ ಆಹ್ವಾನದ ಕೊನೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದು ಕೊಂಡ ‘ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ’ ಎನ್ನುವ ವಿಚಾರ ಒಂದಷ್ಟು ಸದ್ದು-ಸುದ್ದಿ ಎರಡೂ ಮಾಡಿದೆ. ಒಟ್ಟಿನಲ್ಲಿ ‘ನಗುವವರ ಮಧ್ಯೆ ಜಾರಿಬಿದ್ದ ದೈನೇಸಿ ಪರಿಸ್ಥಿತಿ’ ಸನ್ಮಾನ್ಯ ಪ್ರಕಾಶ್ ರಾಜ್ ಅವರದ್ದು!ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಂಡಿರುವ ಹಾಗೂ ಸಮಾಜದ ಕಾವಲುಗಾರನಂತೆ ಕೆಲಸ ಮಾಡಬೇಕಾದ ಮಾಧ್ಯಮ ಕ್ಷೇತ್ರದ ಮೇಲೆ ಇಂತಹ ಗಂಭೀರ ಆರೋಪ ಬಂದಾಗ, ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಉಂಟಾಗಿದೆ. ಪ್ರಕಾಶ್ ರಾಜ್ ಅವರ ಈ ಹೇಳಿಕೆಯನ್ನು ಪತ್ರಿಕೋದ್ಯಮದ ಚೌಕಟ್ಟಿಗೆ ಮಾತ್ರ ಸೀಮಿತಗೊಳಿಸಿ ನೋಡು ವುದು ಎಷ್ಟು ಸರಿ? ಆಳವಾಗಿ ವಿಶ್ಲೇಷಿಸಿದರೆ, ಮೌಲ್ಯಗಳನ್ನು ಗಾಳಿಗೆ ತೂರಿ ‘ಮಾರಿಕೊಳ್ಳುವ’ ಪ್ರವೃತ್ತಿ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿದೆ ಎನ್ನುವುದು ಕಟು ವಾಸ್ತವ.

ಎಲ್ಲಾ ಕ್ಷೇತ್ರ- ಸ್ತರಗಳಲ್ಲೂ ಮಾರಿಕೊಂಡವರು ಇದ್ದಾರೆ ಮತ್ತು ಅದೇ ಸಮಯದಲ್ಲಿ, ಅಂಥವರ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾಮಾಣಿಕರೂ ಇದ್ದಾರೆ ಎನ್ನುವುದೂ ನಿರ್ವಿವಾದ. ಸತ್ಯವನ್ನು ನಿರ್ಭೀತವಾಗಿ ಸಮಾಜದ ಮುಂದಿಡಬೇಕಾದ, ದಮನಿತರ ಧ್ವನಿಯಾಗಬೇಕಾದ, ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ಯಾವುದೇ ಅಡೆತಡೆಯಿಲ್ಲದೆ ಜನರೆದುರು ತೆರೆದಿಡಬೇಕಾದ ಮಾಧ್ಯಮಗಳು ಇಂದು ಕಾರ್ಪೊರೇಟ್ ಶಕ್ತಿಗಳ, ರಾಜಕೀಯ ಪಕ್ಷ ಅಥವಾ ಪ್ರಭಾವಿ ವ್ಯಕ್ತಿಗಳ ಕೈಗೊಂಬೆಯಾಗುತ್ತಿವೆ ಎಂಬ ಆರೋಪ ಹೊಸದೇನಲ್ಲ.

ಟಿಆರ್‌ಪಿ ಬೆನ್ನಟ್ಟಿ ಹೊರಟಿರುವ ಸುದ್ದಿ ವಾಹಿನಿಗಳು, ಪೇಯ್ಡ್ ನ್ಯೂಸ್ ಹಾವಳಿ, ಬ್ಲಾಕ್‌ಮೇಲ್ ತಂತ್ರಗಳು ಮತ್ತು ಪತ್ರಕರ್ತರೇ ದಳಿಗಳಂತೆ ವರ್ತಿಸಿದಂತಹ ಕೆಲವು ಕರಾಳ ಘಟನೆಗಳು ಈ ಆರೋಪಗಳಿಗೆ ಬಲವಾದ ಇಂಬು ನೀಡಿವೆ. ಅನೇಕ ಮಾಧ್ಯಮ ಸಂಸ್ಥೆಗಳು ಇಂದು ಲಾಭ ಮಾಡುವ ಉದ್ಯಮಗಳಾಗಿ ಬದಲಾಗಿವೆ.

Prakash Raj ok

ಪ್ರಕಾಶ್ ರಾಜ್ ಅವರ ಮಾತುಗಳಲ್ಲಿನ ಆಕ್ರೋಶಕ್ಕೆ ಒಂದು ತಾರ್ಕಿಕ ನೆಲೆ ಇದ್ದರೂ, ಇಡೀ ಪತ್ರಕರ್ತರ ಸಮುದಾಯವನ್ನೇ ಒಂದೇ ತಕ್ಕಡಿಯಲ್ಲಿ ತೂಗುವುದು ನ್ಯಾಯಸಮ್ಮತವಲ್ಲ. ಇಂದಿಗೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಅತ್ಯಲ್ಪ ವೇತನದಲ್ಲಿ, ಶುಭ್ರ ನೀರಿನಷ್ಟೇ ನಿಷ್ಕಲ್ಮಷ ವಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಪತ್ರಕರ್ತರು ನಮ್ಮ ನಡುವೆ ಇದ್ದಾರೆ.

ಕೆಲವರ ತಪ್ಪುಗಳಿಗೆ ಇಡೀ ವೃತ್ತಿ ಸಮುದಾಯವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ. ಇನ್ನು ಸಮಾಜವನ್ನು ಒಳಿತಿನತ್ತ ಮುನ್ನಡೆಸಬೇಕಾದ ರಾಜಕೀಯ ಕ್ಷೇತ್ರದತ್ತ ಕಣ್ಣು ಹಾಯಿಸಿದರೆ, ‘ಮಾರಿಕೊಳ್ಳುವಿಕೆ’ ಎನ್ನುವುದು ಅಲ್ಲಿ ಒಂದು ವ್ಯವಸ್ಥಿತ ಉದ್ಯಮ! ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಕೋಟಿ ಕೋಟಿ ರೂಪಾಯಿಗಳಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸುವ ‘ಆಪರೇಷನ್’ಗಳು, ರೆಸಾರ್ಟ್ ರಾಜಕಾರಣಗಳು ನಮ್ಮ ಕಣ್ಣ ಮುಂದೆಯೇ ನಿರಂತರವಾಗಿ ನಡೆಯುತ್ತಿವೆ.

ಸೈದ್ಧಾಂತಿಕ ಬದ್ಧತೆಯಾಗಲಿ, ಜನಪರ ಕಾಳಜಿಯಾಗಲಿ ಇಂದು ಚುನಾವಣಾ ಗೆಲುವಿನ ಮಾನ ದಂಡಗಳಾಗಿ ಉಳಿದಿಲ್ಲ. ಹಣ, ಹೆಂಡ, ಮತ್ತು ಜಾತಿಯ ಆಧಾರದ ಮೇಲೆ ಟಿಕೆಟ್ ಹಂಚಿಕೆ ಹಾಗೂ ಮತಗಳ ಖರೀದಿ ಪ್ರಕ್ರಿಯೆ ರಾಜಕೀಯದಲ್ಲಿ ‘ಮಾರಿಕೊಳ್ಳುವಿಕೆ’ಯ ಪರಾಕಾಷ್ಠೆಯಾಗಿದೆ. ಆಳುವ ವರ್ಗವೇ ಹೀಗೆ ಬಹಿರಂಗವಾಗಿ ತಮ್ಮ ನೈತಿಕತೆಯನ್ನು ಮಾರಿಕೊಳ್ಳುತ್ತಿರುವಾಗ, ಇತರ ಕ್ಷೇತ್ರಗಳತ್ತ ಬೆರಳು ಮಾಡಿ ತೋರಿಸುವ ನೈತಿಕ ಹಕ್ಕು ರಾಜಕೀಯ ನಾಯಕರಿಗೆ ಉಳಿದಿಲ್ಲ. ವಿಪರ್ಯಾಸ ವೆಂದರೆ, ಚುನಾವಣೆಗಳಲ್ಲಿ ಹಣಕ್ಕಾಗಿ ಮತ ಮಾರಿಕೊಳ್ಳುವ ಪ್ರಜೆಗಳೂ ಈ ಭ್ರಷ್ಟ ವ್ಯವಸ್ಥೆಯ ಸಕ್ರಿಯ ಪಾಲುದಾರರು!

ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಆಡಳಿತ ಯಂತ್ರವನ್ನು ಮುನ್ನಡೆ ಸುವ ಅಧಿಕಾರಶಾಹಿ ವ್ಯವಸ್ಥೆ ಭ್ರಷ್ಟಾಚಾರದ ಕೂಪವಾಗಿ ದಶಕಗಳೇ ಕಳೆದಿವೆ. ಲಂಚವಿಲ್ಲದೆ ಸರಕಾರಿ ಕಚೇರಿಯಲ್ಲಿ ಕಡತಗಳು ಮುಂದಕ್ಕೆ ಹೋಗುವುದಿಲ್ಲ ಎಂಬುದು ಸಾಮಾನ್ಯ ಜನರ ದೈನಂದಿನ ಕಹಿ ಅನುಭವ. ತಮ್ಮ ಹುದ್ದೆ, ಅಧಿಕಾರ ಮತ್ತು ಜವಾಬ್ದಾರಿಯನ್ನು ಹಣಕ್ಕಾಗಿ ಮಾರಿಕೊಂಡಿರುವ ಸಾವಿರಾರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ನಿರಂತರವಾಗಿ ಬೀಳುತ್ತಲೇ ಇರುತ್ತಾರೆ.

ವರ್ಗಾವಣೆ ದಂಧೆ, ಕಮಿಷನ್ ಆಸೆಗಾಗಿ ಕಳಪೆ ಕಾಮಗಾರಿಗಳಿಗೆ ಅನುಮೋದನೆ ನೀಡುವುದು, ಬಡವರ ಹಕ್ಕುಗಳನ್ನು ಕಸಿದುಕೊಳ್ಳುವುದು- ಇವೆಲ್ಲವೂ ಅಧಿಕಾರಶಾಹಿಯಲ್ಲಿನ ‘ಮಾರಿಕೊಳ್ಳುವ’ ಪ್ರವೃತ್ತಿಯ ಜ್ವಲಂತ ಉದಾಹರಣೆಗಳು.

ಭಾರತೀಯ ಪರಂಪರೆಯಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳು ಸಮಾಜದ ಅತ್ಯಂತ ಪವಿತ್ರ ವೃತ್ತಿಗಳೆಂದು, ಸೇವಾ ವಲಯಗಳೆಂದು ಒಂದು ಕಾಲಘಟ್ಟದ ತನಕ ಪರಿಗಣಿಸಲ್ಪಟ್ಟಿದ್ದವು. ಇವೆರಡೂ ಬೃಹತ್ ಕಾರ್ಪೊರೇಟ್ ಉದ್ಯಮಗಳಾಗಿ ಮಾರ್ಪಟ್ಟು ದಶಕಗಳೇ ಕಳೆದಿವೆ. ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲಗಳಾಗಿ ಉಳಿಯದೆ, ಡೊನೇಷನ್ ಮತ್ತು ದುಬಾರಿ ಶುಲ್ಕ ಸುಲಿಯುವ ಕೂಪಗಳಾಗಿವೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ, ನೈತಿಕತೆ ಕಲಿಸುವ ಬದಲು, ಅಂಕಗಳನ್ನೇ ಗುರಿಯಾಗಿಸಿ ಶೈಕ್ಷಣಿಕ ಮೌಲ್ಯಗಳನ್ನು ಮಾರುಕಟ್ಟೆಯ ಲಾಭದ ದೃಷ್ಟಿಯಿಂದ ಮಾರಿಕೊಳ್ಳ ಲಾಗುತ್ತಿದೆ. ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತೂ ಅರ್ಥ ಕಳೆದುಕೊಳ್ಳುತ್ತಿದೆ.

ರೋಗಿಗಳ ಜೀವದ ಜೊತೆ ಚೆಟವಾಡುವ, ಹಣಕ್ಕಾಗಿ ಅನಗತ್ಯ ಪರೀಕ್ಷೆಗಳನ್ನು ಬರೆದು ಕೊಡುವ, ಕಮಿಷನ್ ಆಸೆಗೆ ನಿರ್ದಿಷ್ಟ ಕಂಪನಿಗಳ ದುಬಾರಿ ಔಷಧಗಳನ್ನು ಶಿಫಾರಸು ಮಾಡುವ ‘ಮಾರಿ ಕೊಂಡ’ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳ ಸಂಖ್ಯೆ ಆತಂಕಕಾರಿಯಾಗಿ ಬೆಳೆಯುತ್ತಿದೆ. ಮಾನವೀಯತೆಯನ್ನು ಹಣದ ತಕ್ಕಡಿಯಲ್ಲಿ ತೂಗುವ ತುಚ್ಛ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಂದು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ದೇವದುರ್ಲಭರ ಪಡೆಯೂ ಅಪರೂಪ ಎನ್ನುವಷ್ಟು ಇದೆ ಎನ್ನುವುದೂ ದಿಟ.

ಪ್ರಕಾಶ್ ರಾಜ್ ಅವರು ಪ್ರತಿನಿಽಸುವ ಸಿನಿಮಾ ಮತ್ತು ಕಲಾ ಕ್ಷೇತ್ರವೂ ಈ ಸಾಂಕ್ರಾಮಿಕ ಅನಿಷ್ಟ ದಿಂದ ಹೊರತಾಗಿಲ್ಲ. ಹಾಗೆ ನೋಡಿದರೆ ಮನರಂಜನೆ ಕ್ಷೇತ್ರದಷ್ಟು ಕೊಳಕಾಗಿರುವ, ಮಾರಿಕೊಂಡ ಕ್ಷೇತ್ರ ಮತ್ತೊಂದಿಲ್ಲ ಎನ್ನುವುದು ಸತ್ಯ. ಅಲ್ಲೂ ಅಪರಂಜಿಯಷ್ಟು ಶುದ್ಧವಾಗಿರುವವರೂ ಕೆಲ ಮಂದಿ ಇದ್ದೇ ಇದ್ದಾರೆ!

ವಿವಿಧ ರಾಷ್ಟ್ರೀಯ ಅಥವಾ ರಾಜ್ಯ ಪ್ರಶಸ್ತಿಗಳಿಗಾಗಿ ಲಾಬಿ ಮಾಡುವುದು, ಸಬ್ಸಿಡಿಗಳಿಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸುವುದು, ಸೃಜನಶೀಲತೆಯನ್ನು ಮಾರುಕಟ್ಟೆಯ ಅಗ್ಗದ ಅಭಿರುಚಿಗೆ ತಕ್ಕಂತೆ ಮಾರಿಕೊಳ್ಳುವುದು ಸಾಹಿತ್ಯ, ಕಲೆ ಮತ್ತು ಸಿನಿಮಾ ರಂಗದಲ್ಲಿ ಸರ್ವೇ ಸಾಮಾನ್ಯ. ಮತ್ತೆ ಪ್ರಕಾಶ್ ರಾಜ್ ಪ್ರಸ್ತಾಪಿಸಿದ ‘ಮಾರಿಕೊಂಡ ಮಾಧ್ಯಮಗಳು’ ವಿಷಯಕ್ಕೆ ಬರುವುದಾದರೆ, ಭಾರತದಂತಹ ವೈವಿಧ್ಯಮಯ ಮತ್ತು ಬೃಹತ್ ದೇಶವನ್ನು ಒಗ್ಗೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ.

ಕೋವಿಡ್ ಮಹಾಮಾರಿಯ ಸಮಯದಲ್ಲಿ, ವೈದ್ಯರು ಮತ್ತು ಪೊಲೀಸರಷ್ಟೇ ಸಮರ್ಥವಾಗಿ ಪತ್ರಕರ್ತರು ‘ಕರೋನಾ ವಾರಿಯರ್ಸ್’ ಆಗಿ ಕೆಲಸ ಮಾಡಿದರು. ಆಕ್ಸಿಜನ್ ಕೊರತೆ, ಆಸ್ಪತ್ರೆಗಳ ದುಃಸ್ಥಿತಿಯನ್ನು ಸರಕಾರದ ಗಮನಕ್ಕೆ ತಂದು ಅನೇಕ ಜೀವಗಳನ್ನು ಉಳಿಸಿದರು. ಕೇರಳ, ಕೊಡಗು ಅಥವಾ ಉತ್ತರಾಖಂಡದ ಭೀಕರ ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ಸಂತ್ರಸ್ತರ ಕಣ್ಣೀರು ಮತ್ತು ಹಸಿವನ್ನು ಹೊರಜಗತ್ತಿಗೆ ತೋರಿಸಿ ಪರಿಹಾರ ಸಿಗುವಂತೆ ಮಾಡಿದ್ದು ಇದೇ ಮಾಧ್ಯಮಗಳು.

ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಶುದ್ಧೀಕರಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು. ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಬೋಫೋರ್ಸ್ ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣಗಳನ್ನು ಬಯಲಿಗೆಳೆದಿದ್ದು ತನಿಖಾ ಪತ್ರಕರ್ತರು. ಇಂದಿಗೂ ಭ್ರಷ್ಟಾಧಿಕಾರಿಗಳ ಕರಾಳ ಮುಖವನ್ನು ಜನರಿಗೆ ತಲುಪಿಸುತ್ತಿರುವುದು ಮಾಧ್ಯಮಗಳೇ. 2002ರ ದೆಹಲಿಯ ‘ನಿರ್ಭಯಾ’ ಅತ್ಯಾಚಾರ ಪ್ರಕರಣವನ್ನು ರಾಷ್ಟ್ರೀಯ ಜನಾಂದೋಲನವಾಗಿ ಮಾಧ್ಯಮಗಳು ರೂಪಿಸಿದ ಪರಿಣಾಮವಾಗಿ ಅತ್ಯಾಚಾರದ ವಿರುದ್ಧದ ಕಾನೂನುಗಳು ಕಠಿಣ ವಾದವು.

ಗ್ರಾಮೀಣ ಭಾಗದಲ್ಲಿ ದಲಿತರು, ಅಲ್ಪಸಂಖ್ಯಾತರು, ರೈತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಅವರಿಗೆ ನ್ಯಾಯ ಒದಗಿಸುವಲ್ಲಿ ಮಾಧ್ಯಮಗಳ ನಿರಂತರ ಹೋರಾಟವಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗಲು ಮಾಧ್ಯಮಗಳೇ ಕಾರಣ.

ಅಭ್ಯರ್ಥಿಗಳ ಹಿನ್ನೆಲೆ, ಅವರ ಆಸ್ತಿ ವಿವರ, ಅಪರಾಧ ಹಿನ್ನೆಲೆಗಳನ್ನು ಜನರಿಗೆ ತಿಳಿಸಿ, ‘ಮತದಾನದ ಮಹತ್ವ’ದ ಬಗ್ಗೆ ಅರಿವು ಮೂಡಿಸುತ್ತವೆ. ಸರ್ಕಾರದ ನೀತಿ-ನಿಯಮಗಳು, ಬಜೆಟ್ ವಿಶ್ಲೇಷಣೆ ಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ವಿವರಿಸುವ ಮೂಲಕ ಪ್ರeವಂತ ಸಮಾಜವನ್ನು ನಿರ್ಮಿಸುತ್ತಿವೆ.

ಕೇವಲ ರಾಷ್ಟ್ರೀಯ ಸುದ್ದಿವಾಹಿನಿಗಳಷ್ಟೇ ಅಲ್ಲ, ಸಾವಿರಾರು ಪ್ರಾದೇಶಿಕ ಪತ್ರಿಕೆಗಳು, ಸ್ಥಳೀಯ ಕೇಬಲ್ ಚಾನೆಲ್‌ಗಳು ಮತ್ತು ಇಂದಿನ ಡಿಜಿಟಲ್ ಮಾಧ್ಯಮಗಳು ಜನರ ದೈನಂದಿನ ಸಮಸ್ಯೆಗಳಾದ ರಸ್ತೆಗುಂಡಿ, ಕುಡಿಯುವ ನೀರಿನ ಸಮಸ್ಯೆ, ಶಾಲೆಗಳ ದುಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವಲ್ಲಿ ನಿತ್ಯ ಶ್ರಮಿಸುತ್ತಿವೆ.

ಹೀಗಿರುವಾಗ ಯಾರೋ ನಾಲ್ಕು ಜನ ಅಬ್ಬೆಪಾರಿಗಳು ಮಾಡಿದ ಕೆಲಸಕ್ಕೆ ಇಡೀ ಮಾಧ್ಯಮ ಕ್ಷೇತ್ರವನ್ನು ‘ಮಾರಿಕೊಂಡವರು’ ಎನ್ನುವುದು ಅಪರಾಧವಾಗುತ್ತದೆ. ಹಾಗೆಂದು ಹೇಗೆ ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೋ, ಕೊಳ್ಳುವವರು ಇರುವವರೆಗೆ ಮಾರಿಕೊಳ್ಳುವವರೂ ಇರುತ್ತಾರೆ!

ಕೊನೆಯದಾಗಿ, ಮಾಧ್ಯಮಗಳು ಸಂಪೂರ್ಣ ಪರಿಪೂರ್ಣ ಎಂದು ಹೇಳಲಾಗದು; ಟಿಆರ್‌ಪಿ ಹಪಾಹಪಿ, ಸೆನ್ಸೇಷನಲಿಸಂ, ಬ್ರೇಕಿಂಗ್ ನ್ಯೂಸ್, ನಮ್ಮ ಮೊದಲು, ನಮ್ಮ ವರದಿಯ ಫಲಶ್ರುತಿ ಮುಂತಾದ ನ್ಯೂನತೆಗಳು ಖಂಡಿತಾ ಇವೆ. ಮಾಧ್ಯಮಗಳ ಮೇಲೆಯೂ ಕಠಿಣ ವಿಮರ್ಶೆ ಮತ್ತು ಹದ್ದಿನ ಕಣ್ಣು ಖಂಡಿತಾ ಇರಲೇಬೇಕು.

ಅವುಗಳ ಅಗಾಧ ಸಕಾರಾತ್ಮಕ ಕೊಡುಗೆಗಳನ್ನು ಮರೆಮಾಚಿ, ‘ಎಲ್ಲವೂ ಮಾರಾಟವಾಗಿವೆ, ಎಲ್ಲರೂ ಮಾರಾಟವಾಗಿದ್ದಾರೆ’ ಎಂಬ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಭಾರತೀಯ ಮಾಧ್ಯಮಗಳು ಇಂದಿಗೂ ಶ್ರೇಷ್ಠ ವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಕಾಶ್ ರಾಜ್‌ರಂಥವರು ಸದಾ ಚಲಾವಣೆಯಲ್ಲಿ ಇರುವ ಹಪಾಹಪಿಯ ಭಾಗವಾಗಿ ಇಂಥಾ ಅಗ್ಗದ ನಡೆ ಅನುಸರಿಸುವುದನ್ನು ನಿಲ್ಲಿಸಿ ತಮ್ಮ ಅಭಿನಯ ವೃತ್ತಿಯನ್ನು ತೆರೆಯ ಮೇಲೆ ತೋರಿಸಲಿ. ಜೊತೆಗೆ ‘ಧರ್ಮಸ್ಥಳ ವಿವಾದ’ ಆದಷ್ಟು ಬೇಗ ಸುಖಾಂತ್ಯ ವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.