R T Vittalmurthy Column: ಸಿದ್ದುಗೆ ಅನುದಾನ ಹೊಂದಿಸುವ ತಲೆನೋವು ಶುರುವಾಗಿದೆ
ರಾಜ್ಯದ ಆದಾಯ ಕಡಿಮೆ, ಹೊರೆ ಜಾಸ್ತಿಯಾಗಿ ಬಜೆಟ್ಟಿನ ಸೊಂಟಕ್ಕೆ ‘ತಾಕತ್ ಕಿ ದವಾ’ ಕೊಡುವುದೇ ಸಿದ್ದರಾಮಯ್ಯ ಅವರಿಗೆ ಸವಾಲಾಗಿದೆ. ಇದೇ ಕಾರಣಕ್ಕಾಗಿ ಬಜೆಟ್ಟಿಗೆ ಹೊಸ ಸಂಪನ್ಮೂಲಗಳನ್ನು ಕಂಡುಹಿಡಿಯಲು ಆರ್ಥಿಕ ತಜ್ಞರಾದ ಕೃಷ್ಣನ್ ನೇತೃತ್ವದ ತಂಡವನ್ನು ರಚಿಸಿ, ವರದಿ ಪಡೆದಿದ್ದರೂ ಸಿದ್ದರಾಮಯ್ಯ ಅವರಿಗೆ ತಲೆನೋವು ತಪ್ಪಿಲ್ಲ.
-
ಮೂರ್ತಿಪೂಜೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಧ ತಲೆನೋವು ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಅರ್ಧ ತಲೆನೋವು ತಪ್ಪಿದ್ದಿಲ್ಲ. ಆದರೆ ಅದು ಕಂಟ್ರೋಲಿಗೆ ಬರುತ್ತಿದ್ದಂತೆಯೇ ಹೊಸ ಅರ್ಧ ತಲೆನೋವು ಶುರುವಾಗುತ್ತದೆ. ಈಗ ಅವರಿಗೆ ಶುರುವಾಗಿರುವ ಹೊಸ ಅರ್ಧ ತಲೆನೋವು ಬಜೆಟ್‌ಗೆ ಸಂಬಂಧಿಸಿದ್ದು.
ಅಂದ ಹಾಗೆ, ಅವರ ಈ ತಲೆನೋವಿಗೆ ಕೇಂದ್ರ ಸರಕಾರ ಕಾರಣ. ಕಳೆದ ವರ್ಷ 4.09 ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈ ಸಲ 4.30 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಸಮಸ್ಯೆ ಎಂದರೆ ಅವರ ಬಜೆಟ್‌ಗೆ ಹೊರಗಿನಿಂದ ಬರುವ ಆದಾಯ ಕುಗ್ಗಿದೆ. ಅದೇ ರೀತಿ ಅವರ ಬಜೆಟ್ ಮೇಲೆ ಹೊಸಹೊಸ ಭಾರಗಳೂ ಹೇರಿಕೆಯಾಗಿವೆ. ಆದಾಯ ಹೆಚ್ಚಿದ್ದಾಗ ಹೊರೆ ಹೆಚ್ಚಾದರೆ ತಡೆದುಕೊಳ್ಳಬಹುದು. ಆದರೆ ಒಂದು ಕಡೆಯಿಂದ ಆದಾಯ ಕಡಿಮೆಯಾಗಿ, ಮತ್ತೊಂದು ಕಡೆಯಿಂದ ಹೊಸ ಭಾರಗಳು ಹೆಚ್ಚಾದರೆ ತಡೆದುಕೊಳ್ಳುವುದು ಕಷ್ಟ.
ಗಮನಿಸಬೇಕಾದ ಸಂಗತಿ ಎಂದರೆ ಸಿದ್ದರಾಮಯ್ಯ ಅವರು ಹದಿನೇಳನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇದೊಂದು ದಾಖಲೆ. ಇದೇ ರೀತಿ ಭಾರತದ ಇತಿಹಾಸದಲ್ಲಿ ಹದಿನೆಂಟು ಬಾರಿ ಬಜೆಟ್ ಮಂಡಿಸಿರುವ ಗುಜರಾತಿನ ವಜೂಭಾಯಿ ವಾಲಾ ನಂಬರ್ ಒನ್ ಸ್ಥಾನದಲ್ಲಿದ್ದರೆ, ಹದಿನೇಳನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: R T Vittalmurthy Column: ಡೋಂಟ್ ವರಿ, ಕಮ್ ಟು ಡೆಲ್ಲಿ
ಆದರೆ ದಾಖಲೆಯೇ ಬೇರೆ, ತಲೆನೋವೇ ಬೇರೆ. ಯಾಕೆಂದರೆ ಸಿದ್ದರಾಮಯ್ಯ ಅವರ ಬಜೆಟ್‌ಗೆ ಈ ಬಾರಿ ಹಣದ ಹರಿವು ಕಡಿಮೆಯಾಗಲಿದೆ. ಇದಕ್ಕೆ ಮೋದಿ ಸರಕಾರದ ಜಿಎಸ್‌ಟಿ ನೀತಿಯೇ ಕಾರಣ. ಅದು ಜಿಎಸ್‌ಟಿ ಪ್ರಮಾಣವನ್ನು ಕಡಿಮೆ ಮಾಡಿರುವುದರಿಂದ ಈ ಬಾಬತ್ತಿನಲ್ಲಿ ರಾಜ್ಯಕ್ಕೆ ಬರುತ್ತಿದ್ದ ತೆರಿಗೆಯ ಪಾಲು ಕಡಿಮೆಯಾಗಲಿದೆ. ಇದೇ ರೀತಿ ‘ವಿಬಿ- ಜಿ ರಾಮ್ ಜಿ’ ಅಂತ ಬದಲಾಗಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗೆ ಕೇಂದ್ರ ಸರಕಾರ ಕೊಡುತ್ತಿದ್ದ ಪಾಲು ಕಡಿಮೆಯಾಗಿದೆ. ಹೀಗಾಗಿ ಈ ಯೋಜನೆಯಡಿ ರಾಜ್ಯ ಸರಕಾರ ತನ್ನ ಪಾಲು ಅಂತ ಹತ್ತು ಪರ್ಸೆಂಟ್ ಬದಲಿಗೆ ನಲವತ್ತು ಪರ್ಸೆಂಟ್‌ನಷ್ಟು ಹಣವನ್ನು ಕೊಡಬೇಕಿದೆ.
ಇದು ಒಂದು ಯೋಜನೆಗೆ ಅಂತಲ್ಲ, ಬದಲಿಗೆ ಕೇಂದ್ರದ ನೆರವಿನೊಂದಿಗೆ ಜಾರಿಯಾಗುವ ಬಹುತೇಕ ಎಲ್ಲ ಯೋಜನೆಗಳ ಕತೆಯೂ ಹೀಗೇ ಆಗಿದೆ. ಇದೇ ಕಾರಣಕ್ಕಾಗಿ ಹಲವು ಸಾವಿರ ಕೋಟಿ ರುಪಾಯಿಗಳ ಹೊರೆಯನ್ನು ಹೊರುವುದು ಸಿದ್ದರಾಮಯ್ಯ ಸರಕಾರಕ್ಕೆ ಅನಿವಾರ್ಯವಾಗಿದೆ.
ಇವತ್ತು ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಬಾಬತ್ತುಗಳಡಿ ಕರ್ನಾಟಕ ದಿಂದ ಪ್ರತಿ ವರ್ಷ ನಾಲ್ಕು ಲಕ್ಷ ಕೋಟಿ ರುಪಾಯಿಗಳಿಗಿಂತ ಅಧಿಕ ಹಣ ಪಡೆಯುವ ಕೇಂದ್ರ ಸರಕಾರವು ಶೇಕಡಾ ನಲವತ್ತೆರಡರಷ್ಟು ಪಾಲನ್ನು ಕರ್ನಾಟಕಕ್ಕೆ ಹಿಂದಿರುಗಿಸ ಬೇಕು.
ಅರ್ಥಾತ್, ಒಂದು ಲಕ್ಷದ ಅರವತ್ತು ಸಾವಿರ ಕೋಟಿ ರುಪಾಯಿಗಳಿಗಿಂತ ಹೆಚ್ಚು ಹಣ ಕೊಡಬೇಕು. ಆದರೆ ಅದು ಕೇವಲ ಹದಿಮೂರು ಪರ್ಸೆಂಟಿನಷ್ಟು, ಅಂದರೆ ಐವತ್ತೆರಡು ಸಾವಿರ ಕೋಟಿ ರುಪಾಯಿಗಳಷ್ಟು ಹಣವನ್ನು ಮಾತ್ರ ಹಿಂದಿರುಗಿಸುತ್ತಿದೆ.
ಪರಿಣಾಮ? ರಾಜ್ಯದ ಆದಾಯ ಕಡಿಮೆ, ಹೊರೆ ಜಾಸ್ತಿಯಾಗಿ ಬಜೆಟ್ಟಿನ ಸೊಂಟಕ್ಕೆ ‘ತಾಕತ್ ಕಿ ದವಾ’ ಕೊಡುವುದೇ ಸಿದ್ದರಾಮಯ್ಯ ಅವರಿಗೆ ಸವಾಲಾಗಿದೆ. ಇದೇ ಕಾರಣಕ್ಕಾಗಿ ಬಜೆಟ್ಟಿಗೆ ಹೊಸ ಸಂಪನ್ಮೂಲಗಳನ್ನು ಕಂಡುಹಿಡಿಯಲು ಆರ್ಥಿಕ ತಜ್ಞರಾದ ಕೃಷ್ಣನ್ ನೇತೃತ್ವದ ತಂಡವನ್ನು ರಚಿಸಿ, ವರದಿ ಪಡೆದಿದ್ದರೂ ಸಿದ್ದರಾಮಯ್ಯ ಅವರಿಗೆ ತಲೆನೋವು ತಪ್ಪಿಲ್ಲ.
ಯಾಕೆಂದರೆ ರಾಜ್ಯ ಸರಕಾರದ ಖರ್ಚಿನ ಬಾಬತ್ತುಗಳು ಹಾಗಿವೆ. ಅದು ಗ್ಯಾರಂಟಿ ಯೋಜನೆಗಳಿಗೆ ಕೊಡುವ ಐವತ್ತೆರಡು ಸಾವಿರ ಕೋಟಿ ರುಪಾಯಿಗಳಿರಬಹುದು, ಸರಕಾರಿ ನೌಕರರ ವೇತನ, ಪಿಂಚಣಿಗೆ ಅಂತ ಕೊಡುವ ಹಣ ಇರಬಹುದು ಮತ್ತು ಅರು ಲಕ್ಷ ಕೋಟಿಯ ಗಡಿ ದಾಟಿರುವ ರಾಜ್ಯ ಸರಕಾರದ ಸಾಲದ ಮೇಲಿನ ಅಸಲು, ಬಡ್ಡಿ, ಚಕ್ರಬಡ್ಡಿ ಗೆ ಹಣ ಪಾವತಿಸುವುದೇ ಇರಬಹುದು. ಒಟ್ಟಿನಲ್ಲಿ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂಥ ಪರಿಸ್ಥಿತಿ. ಹೀಗಾಗಿ ಈ ಅರ್ಧ ತಲೆನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಪರಿಸ್ಥಿತಿಯನ್ನು ಸರಿದೂಗಿಸಲು ಹರಸಾಹಸ ಪಡುತ್ತಿದ್ದಾರೆ. ಅವರ ಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ರಾಹುಲ್ ಗಾಂಧಿ ಕೂಡ ‘ಅಧಿಕಾರ ಹಸ್ತಾಂತರ’ ಎಂಬ ಹಳೇ ಅರ್ಧ ತಲೆನೋವನ್ನು ಇವರ ತಲೆಗೆ ತುಂಬದೆ ಮೌನವಾಗಿದ್ದಾರೆ.
ಐದು ಡಜನ್ ಗ್ಯಾರಂಟಿ ಕಣ್ರೀ
ಇನ್ನು, ಕಳೆದ ಶನಿವಾರ ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶವು ಆ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮೂಲಗಳ ಪ್ರಕಾರ, ಸಮಾವೇಶದ ಯಶಸ್ಸಿನಿಂದ ತೃಪ್ತರಾಗಿರುವ ದೇವೇಗೌಡರು, “ನಾನು ಪ್ರಧಾನಿಯಾದ ಸಂದರ್ಭದಲ್ಲೂ ಹಾಸನದಲ್ಲಿ ಇಷ್ಟು ಜನ ಸೇರಿರಲಿಲ್ಲ" ಅಂತ ಉದ್ಗರಿಸಿದರಂತೆ.
ಅಂದ ಹಾಗೆ, ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ನೆರೆದಿದ್ದನ್ನು ಕಂಡು ಖುಷಿಯಾದ ಗೌಡರು ಹುಲಿಯಂತೆ ಅಬ್ಬರಿಸಿದ್ದಾರೆ. ಅಷ್ಟೇ ಅಲ್ಲ, “ನಮಗೂ ಕಾಲ ಬರುತ್ತೆ" ಅಂತ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ಇಂಥ ಸಮಾವೇಶದ ಮೂಲಕ ಜೆಡಿಎಸ್ ಮಾಡಿದ ಸಾಧನೆ ಎಂದರೆ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಪ್ರತಿಷ್ಠಾಪಿಸಿದ್ದು.
ಭವಿಷ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಲಿರುವ ನಿಖಿಲ್ ಕುಮಾರಸ್ವಾಮಿಯವರಿಗೆ ಹಾಸನದ ಸಮಾವೇಶ ಭರ್ಜರಿಯಾಗೇ ಪ್ಲಸ್ ಆಗಿದೆ. ಸಮಾವೇಶದಲ್ಲಿ ನಿಖಿಲ್ ಅವರು ಮಾತನಾಡಿದ ರೀತಿ ಎಷ್ಟು ಸಾಲಿಡ್ಡಾಗಿತ್ತೆಂದರೆ, ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಅದು ಹೊಸ ಭರವಸೆ ಮೂಡಿಸಿದೆ.
ಹೀಗಾಗಿಯೇ ಸಮಾವೇಶದ ನಂತರ ಜೆಡಿಎಸ್ ಪಾಳಯದಲ್ಲಿ, “ನೋಡ್ತಾ ಇರಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಕಾ ಮತ್ತು ಮಿನಿಮಮ್ ಅರವತ್ತು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವುದೂ ಪಕ್ಕಾ" ಎಂಬ ಮಾತು ಶುರುವಾಗಿದೆ.
ಬಿಜೆಪಿಗೆ ಹೊಸಬಾಳೆ ಟಾನಿಕ್?
ಈ ಮಧ್ಯೆ ನಾಯಕತ್ವದ ಪರ-ವಿರುದ್ಧದ ಸಂಘರ್ಷದಿಂದ ಬಳಲಿದ್ದ ರಾಜ್ಯ ಬಿಜೆಪಿಗೆ ಸಂಘ ಪರಿವಾರದ ‘ನಂಬರ್ ಟು’ ನಾಯಕ ದತ್ತಾತ್ರೇಯ ಹೊಸಬಾಳೆ ಟಾನಿಕ್ ಕೊಟ್ಟಿದ್ದಾರಂತೆ. ಪರಿಣಾಮ? ಮೊನ್ನೆ ಮೊನ್ನೆಯ ತನಕ ‘ವಿಜಯೇಂದ್ರ ಹಟಾವೋ’ ಚಳವಳಿ ನಡೆಸುತ್ತಿದ್ದ ಬಿಜೆಪಿ ಭಿನ್ನರು ಇದ್ದಕ್ಕಿದ್ದಂತೆ ಸೈಲೆಂಟ್ ಮೋಡಿಗೆ ಜಾರಿದ್ದಾರೆ.
“ನೋಡ್ತಾ ಇರಿ. ಜೂನ್ ವೇಳೆಗೆ ವಿಜಯೇಂದ್ರ ಕೆಳಗೆ ಇಳೀತಾರೆ" ಎನ್ನುತ್ತಿದ್ದ ಭಿನ್ನರ ಪಡೆಯ ನಾಯಕರು ಈಗ, “ಪಕ್ಷ ಹೇಳಿದಂತೆ ಕೇಳುತ್ತೇವೆ" ಅಂತ ತಟ್ಟೆ ತಿರುವಿ ಹಾಕು ತ್ತಿದ್ದಾರೆ. ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಯಡಿಯೂರಪ್ಪ ಅವರ ಧ್ವನಿಯೂ ಬದಲಾಗಿದೆ.
ಮೊನ್ನೆ ಮೊನ್ನೆಯ ತನಕ, ‘ಟೈಗರ್’ ಈಶ್ವರಪ್ಪ ಬಿಜೆಪಿ ಬೋನಿಗೆ ಬರುವುದನ್ನು ವಿರೋಧಿ ಸುತ್ತಿದ್ದ ಅವರು ಈಗ ಸಡನ್ನಾಗಿ, “ಯಾವುದೋ ವಿಷಗಳಿಗೆ. ಈಶ್ವರಪ್ಪ ಪಕ್ಷದಿಂದ ಹೊರ ಹೋಗುವ ಸ್ಥಿತಿ ಬಂತು. ಈಗ ಅದೆಲ್ಲ ಮುಗಿದ ಕತೆ. ಹೀಗಾಗಿ ಪಕ್ಷದ ಕೆಲಸ ಮಾಡಿಕೊಂಡು ಹೋಗುವುದಿದ್ದರೆ ಅವರು ವಾಪಸ್ಸು ಬರಲಿ" ಅಂತ ಹೇಳುತ್ತಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ಇನ್ನು ಮೂರು ತಿಂಗಳಲ್ಲಿ ‘ಟೈಗರ್’ ಈಶ್ವರಪ್ಪ ಅವರ ‘ಘರ್ ವಾಪ್ಸಿ’ ಪ್ರೋಗ್ರಾಮು ಗ್ಯಾರಂಟಿ. ಹೀಗೆ ಇದ್ದಕ್ಕಿದ್ದಂತೆ ಬಿಜೆಪಿಯ ಎರಡೂ ಬಣಗಳ ಧ್ವನಿ ಬದಲಾಗಲು ದತ್ತಾತ್ರೇಯ ಹೊಸಬಾಳೆಯವರು ಕೊಟ್ಟ ಟಾನಿಕ್ಕೇ ಮುಖ್ಯ ಕಾರಣ. ಮಿತ್ರಪಕ್ಷ ಜೆಡಿಎಸ್ ತನ್ನೆಲ್ಲ ಶಕ್ತಿಯನ್ನು ಬಳಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಮೇಲೆದ್ದು ನಿಂತರೆ, ಬಿಜೆಪಿ ಮಾತ್ರ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿಲ್ಲ.
ಹೀಗಾಗಿ ಮೊದಲು ವೈಮನಸ್ಸು ಮರೆಯಿರಿ ಅಂತ ಹೊಸಬಾಳೆ ಉಭಯ ಬಣಗಳಿಗೆ ಇಂಜೆಕ್ಷನ್ನು ಕೊಟ್ಟಿದ್ದಾರೆ. ಪರಿಣಾಮ? ರಾಜ್ಯ ಬಿಜೆಪಿಯ ಎರಡು ಬಣಗಳು ಈಗ ಸೈಲೆಂಟಾಗಿರುವುದಷ್ಟೇ ಅಲ್ಲ, ಅರೆಸ್ಸೆಸ್‌ನ ಸೂಚನೆಯಂತೆ ರಾಜ್ಯದೆಡೆ ನಡೆಯುತ್ತಿರುವ ಹಿಂದೂ ಸಮಾಜೋತ್ಸವಗಳಲ್ಲಿ ಪಾಲ್ಗೊಳ್ಳುತ್ತಿದೆ.
ಬೈ ಎಲೆಕ್ಷನ್ ಕತೆಗಳು
ರಾಜ್ಯ ಬಿಜೆಪಿಗೆ ಹೊಸ ಚಿಂತೆ ಶುರುವಾಗಿದೆ. ಸದ್ಯದ ಎದುರಾಗಲಿರುವ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೇ ಇದಕ್ಕೆ ಕಾರಣ. ಈ ಪೈಕಿ ಎಚ್.ವೈ. ಮೇಟಿಯವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ದಿಂದ ವೀರಣ್ಣ ಚರಂತಿಮಠ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದರು. ಅವರ ಈ ನಿರ್ಧಾರದ ಬಗ್ಗೆ ಚರಂತಿಮಠ ಅವರಿಗೂ ಸಹಮತವಿತ್ತು. ಆದರೆ ಉಪಚುನಾವಣೆ ಎಂದರೆ ಸಣ್ಣ ಅಟವಲ್ಲವಲ್ಲ? ಹೀಗಾಗಿ ತಾವು ಕಣಕ್ಕಿಳಿಯ ಬೇಕೆಂದರೆ ಪಕ್ಷವೇ ಫುಲ್ಲು ‘ಪವರ್’ ಹಾಕಬೇಕು ಅಂತ ಚರಂತಿಮಠ ಹೇಳಿದರಂತೆ.
ಆದರೆ ಯಾವಾಗ ಅವರು ‘ಫುಲ್ ಪವರ್ರು ಪಕ್ಷದ್ದೇ’ ಅಂತ ಹೇಳಿದರೋ, ಆಗ ರಾಜ್ಯ ಬಿಜೆಪಿಯ ವರಿಷ್ಠರು ಹಿಂದೇಟು ಹಾಕಿದ್ದಾರೆ. ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಪವರ್ರನ್ನೂ ಹೂಡಿಕೆ ಮಾಡಿದರೆ, ನಾವು ಪ್ಲಸ್ ಮಾಡಬಹುದು. ಅದರೆ ಹಂಡ್ರೆಡ್ ಪರ್ಸೆಂಟು ನಿಮ್ಮದೇ ಪವರ್ರು ಬೇಕು ಎಂದರೆ ಹೇಗೆ? ಎಂಬುದು ಬಿಜೆಪಿ ವರಿಷ್ಠರ ಚಿಂತೆ.
ಮೂಲಗಳ ಪ್ರಕಾರ, ಚರಂತಿಮಠ್ ಅವರು ಈ ಬೇಡಿಕೆ ಮುಂದಿಡಲೂ ಕಾರಣವಿದೆ. ಅದೆಂದರೆ ಕಣಕ್ಕಿಳಿಯುವ ತಮಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಗ್ಯಾಂಗು ಅಡ್ಡೇಟು ಹೊಡೆದರೆ?ಎಂಬುದು. ಹೀಗಾಗಿ ಪವರ್ರು ಹಾಕಿ, ಸೋಲುವ ಸ್ಥಿತಿ ಎದುರಾದರೆ ಏನು ಮಾಡಬೇಕು? ಆದ್ದರಿಂದ ಪಕ್ಷವೇ ಪವರ್ರು ಹಾಕಲಿ. ಅಗ ಗೆದ್ದರೆ ಓಕೆ, ಸೋತರೆ ನಷ್ಟವಿಲ್ಲ ಎಂಬುದು ಚರಂತಿಮಠ ಅವರ ಆಲೋಚನೆ. ಯಾವಾಗ ಅವರ ಲೆಕ್ಕಾಚಾರ ಅರ್ಥ ವಾಯಿತೋ, ಅಗ ಬಿಜೆಪಿಯ ನಾಯಕರು ಮುರುಗೇಶ್ ನಿರಾಣಿ ಅವರಿಗೇ ಕ್ಯಾಂಡಿಡೇಟ್ ಆಗುವ ಆಫರ್ ಕೊಟ್ಟಿದ್ದಾರೆ. ಅದರೆ ಮುರುಗೇಶ್ ನಿರಾಣಿ ಅವರೂ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ.
ಕಾರಣ? ಚರಂತಿಮಠ ಆಂಡ್ ಗ್ಯಾಂಗು ಉಲ್ಟಾ ಹೊಡೆದರೆ? ಎಂಬುದು ಅವರ ಯೋಚನೆ. ಹೀಗಾಗಿ ಬಾಗಲಕೋಟೆ ಉಪಚುನಾವಣೆಗೆ ಯಾರು ಕ್ಯಾಂಡಿಡೇಟ್? ಎಂಬುದೇ ಬಿಜೆಪಿ ವರಿಷ್ಠರಿಗೆ ಚಿಂತೆಯಾಗಿದೆ.ಇನ್ನು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಷಯದಲ್ಲೂ ಅಷ್ಟೇ.
ಅಲ್ಲಿ ಅಭ್ಯರ್ಥಿಗಳಾಗಲು ಹಲವರು ತಯಾರಿzರಾದರೂ, ತಮ್ಮ ಪಕ್ಷದ ನಾಯಕರೇ ಶಾಮನೂರು ಕುಟುಂಬದ ಜತೆ ಕೈ ಜೋಡಿಸಿದರೆ? ಎಂಬುದು ಅವರ ಆತಂಕ. ಹೀಗಾಗಿ ಯಾರ ಕಡೆ ನೋಡಿದರೂ ಪಾಸಿಟಿವ್ ರೆಸ್ಪಾನ್ಸು ಸಿಗುತ್ತಿಲ್ಲ. ಆದ್ದರಿಂದ ಕ್ಷೇತ್ರದಿಂದ ಮಾಜಿ ಸಚಿವ ರವೀಂದ್ರನಾಥ್ ಅವರನ್ನೇ ಕಣಕ್ಕೆ ಇಳಿಸುವ ಲೆಕ್ಕಾಚಾರ ಶುರುವಾಗಿದೆ.