ನಿಜಲಿಂಗಪ್ಪ, ಅರಸು, ಬಂಗಾರಪ್ಪ, ಯಡಿಯೂರಪ್ಪ ಮುಂತಾದವರು ದಿಲ್ಲಿ ವರಿಷ್ಠರಿಗೆ ಸಡ್ಡು ಹೊಡೆದು ಸ್ಥಾಪಿಸಿದ ರಾಜಕೀಯ ಪಕ್ಷಗಳು ಕನ್ನಡಿಗರ ಬೆಂಬಲ ಪಡೆದು ಭದ್ರವಾಗಿ ನೆಲೆಯೂರಿ ದ್ದರೂ ತಮಿಳುನಾಡು, ಆಂಧ್ರಪ್ರದೇಶಗಳಂತೆ ನಮಗೂ ಚೌಕಾಶಿ ಶಕ್ತಿ ಸಿಗು ತ್ತಿತ್ತು. ರಾಷ್ಟ್ರ ರಾಜಕಾರಣದಲ್ಲಿ ನಮ್ಮದೇ ಆಟವಾಡುವ ಅವಕಾಶ ಸಿಗುತ್ತಿತ್ತು. ರಾಷ್ಟ್ರ ರಾಜಕಾರಣದಲ್ಲಿ ನಮ್ಮದೇ ಆಟವಾಡುವ ಅವಕಾಶ ಸಿಗುತ್ತಿತ್ತು.
ರಾಜ್ಯವೊಂದರ ಮುಖ್ಯಮಂತ್ರಿಯನ್ನು ನಿರ್ಧರಿಸುವವರು ಯಾರು ? ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಕೇಳಿದರೆ ಈ ಪ್ರಶ್ನೆಗೆ ಉತ್ತರ ತೀರಾ ಸರಳ. ಬಹುಮತ ಪಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದವರು ಸಿಎಂ ಪಟ್ಟಕ್ಕೆ ಅರ್ಹತೆ ಪಡೆಯುತ್ತಾರೆ.
ಮೈತ್ರಿಕೂಟದ ಯುಗದಲ್ಲಿ ಮಿತ್ರಪಕ್ಷಗಳು ಒಮ್ಮತದಿಂದ ಆಯ್ಕೆ ಮಾಡಿದ ನಾಯಕ ಈ ಹುದ್ದೆ ಗೇರುತ್ತಾರೆ. ಆದರೆ ನಾಡಿನ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಂದ ಮೊದಲ್ಗೊಂಡು ಹಾಲಿ ಸಿಎಂ ಸಿದ್ದರಾಮಯ್ಯ ಅವರ ತನಕ ಇದುವರೆಗೆ ಯಾರೂ ಇಷ್ಟು ಸಲೀಸಾಗಿ ಆಯ್ಕೆಯಾದವರಿಲ್ಲ. ಶಾಸಕರೆಲ್ಲರಿಗೂ ಮಿಗಿಲಾದ ಹೈ‘ಕಮಾಂಡ್’ ಸೂಚಿಸಿದ ವ್ಯಕ್ತಿಯನ್ನು ಶಾಸಕಾಂಗ ಸಭೆಯಲ್ಲಿ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಅಂದರೆ ದಿಲ್ಲಿಯಲ್ಲಿ ಕುಳಿತ ಬೆರಳೆಣಿಕೆಯ ವ್ಯಕ್ತಿ ಗಳು ಕರ್ನಾಟಕದ ರಾಜಕೀಯದ ದಿಕ್ಕು ದೆಸೆಯನ್ನು ನಿರ್ಧರಿಸುತ್ತಾ ಬಂದಿದ್ದಾರೆ.
ದುರದೃಷ್ಟವಶಾತ್ ಈಗಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಏಳೂವರೆ ದಶಕಗಳ ಹಿಂದೆ ಕೆ.ಸಿ.ರೆಡ್ಡಿಯವರು ಸಿಎಂ ಸ್ಥಾನಕ್ಕೆ ಆಯ್ಕೆಯಾದ ವಿಧಾನಕ್ಕೂ 2023ರಲ್ಲಿ ಎರಡನೇ ಬಾರಿ ಸಿದ್ದರಾಮಯ್ಯ ಅವರು ಆಯ್ಕೆಯಾದ ವಿಧಾನಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ.
ಒಂದು ವೇಳೆ ದಿಲ್ಲಿ ವರಿಷ್ಠರ ಮಧ್ಯಪ್ರವೇಶವಿಲ್ಲದೆ, ನೇರವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ನಡೆದಿದ್ದರೂ ಸಿದ್ದರಾಮಯ್ಯ ಅವರ ಆಯ್ಕೆ ಖಚಿತವಿತ್ತು ಎಂದಿಟ್ಟು ಕೊಳ್ಳೋಣ. ಹೈಕಮಾಂಡ್ ರೆಡ್ ಸಿಗ್ನಲ್ ತೋರಿಸಿದ್ದರೆ ಇದೇ ಶಾಸಕಾಂಗ ಸಭೆಯಲ್ಲಿ ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದ್ದರು.
ಇದನ್ನೂ ಓದಿ: Lokesh Kaayarga Column: ಸರಕಾರದ ಸರ್ವರ್ ಸ್ಲೋ ಸಾರ್ವಕಾಲಿಕ !
ರಾಜ್ಯ ರಾಜಕೀಯದಲ್ಲಿ ಸದ್ಯ ನಡೆಯುತ್ತಿರುವ ನಾಯಕತ್ವದ ಪ್ರಶ್ನೆ ಬಂದಾಗಲೂ, ಕಾಂಗ್ರೆಸ್ ಪಕ್ಷದ ಶಾಸಕರಿಂದ ಹಿಡಿದು ನಾಯಕರವರೆಗೆ ಎಲ್ಲರೂ ಹೈಕಮಾಂಡ್ ನಿರ್ಧರಿಸಲಿದೆ ಎಂದೇ ಹೇಳುತ್ತಾ ಬಂದಿದ್ದಾರೆ. ತಮಾಷೆ ಎಂದರೆ ಹೈಕಮಾಂಡ್ ನಾಯಕನ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೂ ಇದೇ ಮಾತನ್ನು ಹೇಳು ತ್ತಿದ್ದಾರೆ.
ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಪರ ಮತ್ತು ವಿರುದ್ಧ ಮಾತನಾಡುತ್ತಿರುವವರು ಅಂತಿಮವಾಗಿ ಮುಖ ಮಾಡಿರುವುದು ದಿಲ್ಲಿಯತ್ತಲೇ. ಅಲ್ಲಿಗೆ ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಎಂದರೆ ಗಾಂಧಿ ಪರಿವಾರ, ಬಿಜೆಪಿಯಲ್ಲಿ ಸಂಘಪರಿವಾರ ಎನ್ನುವುದು ಸ್ಪಷ್ಟ. ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ರಾಜಕಾರಣದ ದಿಕ್ಕು ದೆಸೆಗಳೆಲ್ಲವೂ ದೆಹಲಿ ವರಿಷ್ಠ ರಿಂದಲೇ ತೀರ್ಮಾನವಾಗುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳುವುದಾದರೆ, ಪ್ರಜಾಸತ್ತೆಯ ಬಹುಮತದ ಆಶಯಕ್ಕೆ ಏನು ಮೌಲ್ಯ ಎಂದು ಪ್ರಶ್ನಿಸಬೇಕಾಗುತ್ತದೆ.
ಪ್ರಜಾಪ್ರಭುತ್ವದಲ್ಲಿ ಅಧಿಕಾರ ಹಿಡಿಯಲು ಬಹುಜನರ ಮತವೇ ಅಂತಿಮ ಎಂಬ ಮಾತನ್ನು ಹೈಕಮಾಂಡ್ ನೇತಾರರು ಆಗಾಗ ಸುಳ್ಳು ಮಾಡುತ್ತಲೇ ಬಂದಿದ್ದಾರೆ. ಮಾತ್ರವಲ್ಲ ರಾಜ್ಯ ರಾಜಕಾರಣದ ಸೂತ್ರವನ್ನು ಹಿಡಿದು ಇಲ್ಲಿನ ನಾಯಕರನ್ನು ಮನ ಬಂದಂತೆ ಆಡಿಸಿದ್ದಾರೆ.
ಕಾಂಗ್ರೆಸ್ ಕೇಂದ್ರ ನಾಯಕತ್ವ ಹಿಂದೆಂದಿಗಿಂತಲೂ ದುರ್ಬಲ ಎನ್ನುತ್ತಿರುವ ಈ ಕಾಲ ಘಟ್ಟದಲ್ಲೂ ಇಲ್ಲಿನ ರಾಜಕೀಯದ ನೀತಿ ನಿರ್ಧಾರಗಳು ಅಲ್ಲಿಂದಲೇ ನಿಯಂತ್ರಣವಾಗುತ್ತಿವೆ ಎಂದರೆ ಇದು ರಾಜ್ಯದ ಪಾಲಿಗೆ ದುರದೃಷ್ಟಕರ ವಿಚಾರ.
ಕೇಂದ್ರ ಮತ್ತು ರಾಜ್ಯಗಳ ಕೊಡುಕೊಳ್ಳುವಿಕೆಯ ವಿಚಾರ ಬಂದಾಗಲೆಲ್ಲ ಹೈಕಮಾಂಡ್ ನಿಯಂತ್ರಿತ ರಾಜ್ಯಗಳೆಲ್ಲವೂ ದಿಲ್ಲಿ ವರಿಷ್ಠರ ಮಾತಿನಂತೆ ನಡೆದುಕೊಂಡಿವೆ. ರಾಜ್ಯಕ್ಕೆ ಅನ್ಯಾಯ ವಾಗುತ್ತಿದ್ದರೂ ನಮ್ಮ ನಾಯಕರು ಮೌನದಿಂದ ಸಹಿಸಿಕೊಂಡಿದ್ದಾರೆ. ಪ್ರಾದೇಶಿಕ ನಾಯಕತ್ವ ಪಡೆದ ರಾಜ್ಯಗಳು ದಿಲ್ಲಿಯ ವರಿಷ್ಠರನ್ನೇ ತಮ್ಮ ಕಾಲಬುಡಕ್ಕೆ ಕರೆಸಿಕೊಂಡಿದ್ದಾರೆ. ತಮಗೆ ಮತ್ತು ತಮ್ಮ ರಾಜ್ಯಕ್ಕೆ ಬೇಕಾದ ಎಲ್ಲವನ್ನೂ ಪಡೆದಿದ್ದಾರೆ.
ನಮ್ಮ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡಿ ನಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕೇಂದ್ರದಿಂದ ಪಾಲು ಪಡೆಯಲು ಅವರು ಹಿಂದೆ ಬಿದ್ದಿಲ್ಲ. ಕೇಂದ್ರದಲ್ಲಿ ಮೈತ್ರಿಕೂಟ ಸರಕಾರ ಬಂದಾಗಲೆಲ್ಲ ಅವರು ತಮ್ಮ ರಾಜ್ಯಕ್ಕೆ ಏನು ಬೇಕಿತ್ತೋ ಅದನ್ನು ಪಡೆದುಕೊಂಡರು.
ಮೋದಿ ಸರಕಾರ ಆಂಧ್ರಪ್ರದೇಶ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಕೇಳಿದ್ದೆಲ್ಲವನ್ನೂ ಕೊಡು ತ್ತಿದೆ. ತಮ್ಮದೇ ಪಕ್ಷದ ೨೩ ಸಂಸದರು ಇದ್ದಾಗಲೂ ಕರ್ನಾಟಕಕ್ಕೆ ನೀಡುತ್ತಿರುವ ಕೊಡುಗೆ ಅಷ್ಟಕ್ಕಷ್ಟೇ.
ಭಾಷೆ ಮತ್ತು ಸ್ಥಳೀಯ ಅಸ್ಮಿತೆಯ ಹೆಸರಿನಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜಕಾರಣ ವು ದಿಲ್ಲಿಯ ಸಂಕೋಲೆಯಿಂದ ಬಿಡುಗಡೆ ಪಡೆದರೆ ಕರ್ನಾಟಕ ಅಂತಹ ಸದವಕಾಶವನ್ನು ಕಳೆದು ಕೊಂಡಿದ್ದು ಐತಿಹಾಸಿಕ ನಷ್ಟ. ಕಾಂಗ್ರೆಸ್‌ಗೆ ಪರ‍್ಯಾಯವಾಗಿ ಬಂದ ಜನತಾ ಪಕ್ಷ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿದ ಬಳಿಕವೂ ನಾಯಕರ ಒಳ ಜಗಳದಿಂದಾಗಿ ಈ ಪಕ್ಷ ಒಂದಂಕಿ ಸ್ಥಾನಕ್ಕೆ ಇಳಿದಿದ್ದು ಪಕ್ಷದ ನಾಯಕರಿಗಿಂತಲೂ ರಾಜ್ಯದ ಜನತೆಗೆ ಆದ ದೊಡ್ಡ ನಷ್ಟ.
ಒಂದು ವೇಳೆ ಇದೇ ಜೆಡಿಎಸ್ ೧೦ಕ್ಕಿಂತ ಹೆಚ್ಚು ಸಂಸದರನ್ನು ಹೊಂದಿದ್ದು, ಮೋದಿ ಸರಕಾರದಲ್ಲಿ ಪಾಲುದಾರಿಕೆ ಪಡೆದಿದ್ದರೆ ಚಂದ್ರಬಾಬು ನಾಯ್ಡು ಸರಕಾರದಂತೆ ನಾವೂ ಚೌಕಾಶಿಗಿಳಿಯ ಬಹುದಿತ್ತು. ಭದ್ರಾ ಮೇಲ್ದಂಡೆ ಯೋಜನೆ, ಮೇಕೆದಾಟು, ಮಹದಾಯಿ, ಆಲಮಟ್ಟಿ ಮತ್ತಿತರ ನೀರಾವರಿ ವಿಚಾರಗಳಲ್ಲಿ ರಾಜ್ಯದ ಬೇಡಿಕೆ ಎಂದೋ ಈಡೇರುತ್ತಿತ್ತು.
ಬರ, ಅತಿವೃಷ್ಟಿ ವಿಷಯಗಳಲ್ಲಿ ರಾಜ್ಯಕ್ಕೆ ಅನುದಾನ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲು ಏರುವ ಅಗತ್ಯ ಇರಲಿಲ್ಲ. ಹಾಗೆ ನೋಡಿದರೆ ನಮ್ಮ ನಾಯಕರಾರೂ ನೆರೆ ರಾಜ್ಯದ ನಾಯಕರಿಗಿಂತ ಕಡಿಮೆ ವರ್ಚಸ್ಸು ಹೊಂದಿದವರರಲ್ಲ. ನಾಡಿನ ಎರಡನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನ ಸೌಧವೇ ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ.
ಪ್ರಧಾನಿ ನೆಹರೂ ಅವರಿಂದ ಉದಾಸೀನದ ಮಾತುಗಳು ಬಂದರೂ ರಾಜ್ಯದ ಪ್ರಜಾಪ್ರಭುತ್ವದ ದೇಗುಲಕ್ಕೆ ಅತ್ಯಪರೂಪದ ಕಟ್ಟಡ ಅವಶ್ಯ ಎಂದು ಕೆಂಗಲ್ ಮನಗಂಡಿದ್ದರು. ರಾಜ್ಯದ ಏಕೀಕರಣ ದ ಪ್ರಶ್ನೆ ಬಂದಾಗ, ಮೈಸೂರು ಭಾಗದ ತಮ್ಮದೇ ಜಾತಿಯ ಹಿರಿಯ ನಾಯಕರನ್ನು ಎದುರು ಹಾಕಿಕೊಂಡು ಅಖಂಡ ಕನ್ನಡ ನಾಡಿಗಾಗಿ ಶ್ರಮಿಸಿದರು.
ಕೆಂಗಲ್ ಕಟ್ಟಿದ ಸೌಧ ಇಡೀ ದೇಶದ ಗಮನ ಸೆಳೆದರೂ ಕಾಂಗ್ರೆಸ್ ಹೈಕಮಾಂಡ್ ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡಲಿಲ್ಲ. ಒಕ್ಕಲಿಗ ಮುಖಂಡರು ಮತ್ತು ಲಿಂಗಾಯತ ಮುಖಂಡರು ಸೇರಿ ಸತತವಾಗಿ ದಿಲ್ಲಿಯ ವರಿಷ್ಠರಿಗೆ ದೂರು ನೀಡಿ ಅವರ ಸ್ಥಾನ ನಷ್ಟಕ್ಕೆ ಕಾರಣ ರಾದರು.
ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿಜಲಿಂಗಪ್ಪ ಅವರು ರಾಷ್ಟ್ರ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದವರು. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ಅವರು ಇನ್ನಷ್ಟು ಕಾಲ ಮುಂದುವರಿದಿದ್ದರೆ ಪಕ್ಷದ ಹೈಕಮಾಂಡ್ ಸಂಸ್ಕೃತಿ ಅಂದೇ ಅಂತ್ಯ ವಾಗುತ್ತಿತ್ತೇನೋ ? ಆದರೆ ಇಂದಿರಾಗಾಂಧಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಹೊಸ ಪಕ್ಷ ಕಟ್ಟಲು ಹೊರಟ ಅವರ ಪ್ರಯತ್ನ ಸಫಲವಾಗಲಿಲ್ಲ.
ಒಂದು ವೇಳೆ ಅಂದು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪರ‍್ಯಾಯವಾಗಿ ಪ್ರಾದೇಶಿಕ ಪಕ್ಷವೊಂದು ಗಟ್ಟಿಯಾಗಿ ನೆಲೆಯೂರಿದ್ದರೂ ರಾಜ್ಯದ ಇತಿಹಾಸ ಬದಲಾಗುತ್ತಿತ್ತು. ಇಂದಿರಾ ಅವರ ಹಿಡಿತಕ್ಕೆ ಸಿಕ್ಕಿದ ಬಳಿಕ ಕಾಂಗ್ರೆಸ್ ಪಕ್ಷ ಇಂದಿಗೂ ಗಾಂಧಿ ಪರಿವಾರದ ಕುಟುಂಬದ ಆಸ್ತಿಯಾಗಿಯೇ ಉಳಿದಿದೆ. ಗಾಂಧಿ ಕುಟುಂಬ ಇಲ್ಲದೆ ಹೋಗಿದ್ದರೆ ಪಕ್ಷ ಹಲವು ಹೋಳುಗಳಾಗಿ ಒಡೆಯುತ್ತಿತ್ತು ಎನ್ನುವ ಕಾಂಗ್ರೆಸ್ ನಾಯಕರ ಮಾತು ಸ್ವಲ್ಪ ಮಟ್ಟಿಗೆ ನಿಜ. ಆದರೆ ಪ್ರಜಾಸತ್ತೆಯ ಮೂಲ ಆಶಯ ಗಳೆಲ್ಲವನ್ನೂ ಬದಿಗೊತ್ತಿ ರಾಷ್ಟ್ರೀಯ ಪಕ್ಷದ ಆಗು ಹೋಗುಗಳೆಲ್ಲವನ್ನೂ ಒಂದು ಕುಟುಂಬ ನಿರ್ಧರಿಸುವ ಮಟ್ಟಕ್ಕೆ ಇಳಿಯಬಾರದಿತ್ತು.
ಪ್ರಧಾನಿಯಾಗಿ ದೇಶಕ್ಕೆ ಸಮರ್ಥ ನಾಯಕತ್ವ ನೀಡಿದರೂ, ಇಂದಿರಾ ಅವರು ಪಕ್ಷದ ನಾಯಕಿ ಯಾಗಿ ಬೇರೆ ಯಾರನ್ನೂ ತಮ್ಮ ಸಮಾನಕ್ಕೆ ಬೆಳೆಯುವುದನ್ನು ಸಹಿಸುತ್ತಿರಲಿಲ್ಲ. ದೇವರಾಜ ಅರಸು ಅವರನ್ನು ಇಂದಿರಾ ನಡೆಸಿಕೊಂಡ ರೀತಿಯೇ ಇದಕ್ಕೆ ಉತ್ತಮ ಉದಾಹರಣೆ. 1970ರಲ್ಲಿ ಅರಸು ಅವರು ಪಕ್ಷದ ಪರವಾಗಿ ಗಟ್ಟಿಯಾಗಿ ನಿಲ್ಲದೇ ಹೋಗಿದ್ದರೆ ಕಾಂಗ್ರೆಸ್ ಅಂದೇ ನಾಮಾವ ಶೇಷವಾಗುತ್ತಿತ್ತು.
ತುರ್ತು ಪರಿಸ್ಥಿತಿ ಬಳಿಕ ಇಡೀ ದೇಶದಲ್ಲಿ ಕಾಂಗ್ರೆಸ್ ವಿರುದ್ಧ ಅಲೆಯಿದ್ದರೂ ಅರಸು ಅವರು ಜಾರಿ ಗೊಳಿಸಿದ ಜನಪರ ಕಾರ‍್ಯಕ್ರಮಗಳಿಂದ ಕರ್ನಾಟಕದಲ್ಲಿ ಪಕ್ಷ ಮತ್ತೆ ಅಧಿಕಾರ ಗದ್ದುಗೆ ಹಿಡಿಯಿತು. ಆದರೆ ಇಂದಿರಾ ಅವರು ಮರಳಿ ಪ್ರಧಾನಿ ಪಟ್ಟಕ್ಕೆ ಏರಿದ ಕೂಡಲೇ ಅರಸು ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರು. ಹಿರಿಯ ನಾಯಕರೆಲ್ಲರನ್ನೂ ಕಡೆಗಣಿಸಿ ಕರ್ನಾಟಕದ ರಾಜಕಾರಣಕ್ಕೆ ಅಷ್ಟೇನೂ ಪರಿಚಿತರಲ್ಲದ, ಕಿರಿಯ ವಯಸ್ಸಿನ ಆರ್.ಗುಂಡೂರಾವ್ ಅವರನ್ನು ಸಿಎಂ ಸ್ಥಾನಕ್ಕೆ ತಂದಿದ್ದು ಹೈಕಮಾಂಡ್ ನಿರ್ದೇಶನ. ಅಂದು ಶಾಸಕಾಂಗ ಸಭೆಯಲ್ಲಿ ಮುಕ್ತವಾಗಿ ಮತ ಹಾಕಲು ಅವಕಾಶ ನೀಡಿದ್ದರೆ ಗುಂಡೂರಾವ್ ಸಿಎಂ ಪಟ್ಟಕ್ಕೇರುತ್ತಿರಲಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಅಂದು ಆರಂಭವಾದ ಲಕೋಟೆ ಸಿಎಂ ಸಂಸ್ಕೃತಿ ಬಹುಕಾಲ ಮುಂದುವರಿ ಯಿತು. ಪ್ರಧಾನಿ ರಾಜೀವ್ ಗಾಂಧಿ ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಸಿಎಂ ಬದಲಾವಣೆಗೆ ಆದೇಶ ನೀಡಿ ವೀರೇಂದ್ರ ಪಾಟೀಲ್ ಅವರ ಸ್ಥಾನಪಲ್ಲಟಗೊಳಿಸಿದ್ದು ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿಯ ತುರಿಯಾವಸ್ಥೆ ಎಂದರೂ ತಪ್ಪಾಗಲಾರದು.
ವೀರಪ್ಪ ಮೊಯ್ಲಿ ಮತ್ತು ಬಂಗಾರಪ್ಪ ಇಬ್ಬರೂ ಹೈಕಮಾಂಡ್ ಆಟಕ್ಕೆ ದಾಳವಾದರು. ಬಂಗಾರಪ್ಪ ಅವರು ಹೈಕಮಾಂಡ್ ವಿರುದ್ಧ ಸೆಟೆದು ನಿಂತು ಆತ್ಮಾಭಿಮಾನ ಪ್ರದರ್ಶಿಸಿದರು. ಅವರ ಸ್ಥಾಪಿಸಿದ ಕ್ರಾಂತಿರಂಗ ಪಕ್ಷ ಆರಂಭದಲ್ಲಿ ಯಶಸ್ಸು ಕಂಡರೂ ರಾಷ್ಟ್ರೀಯ ಪಕ್ಷ ವೊಂದನ್ನು ಎದುರು ಹಾಕಿಕೊಂಡು ಬೆಳೆಯಲು ಶಕ್ತವಾಗಲಿಲ್ಲ.
ನಿಜಲಿಂಗಪ್ಪ, ಅರಸು, ಬಂಗಾರಪ್ಪ, ಯಡಿಯೂರಪ್ಪ ಮುಂತಾದವರು ದಿಲ್ಲಿ ವರಿಷ್ಠರಿಗೆ ಸಡ್ಡು ಹೊಡೆದು ಸ್ಥಾಪಿಸಿದ ರಾಜಕೀಯ ಪಕ್ಷಗಳು ಕನ್ನಡಿಗರ ಬೆಂಬಲ ಪಡೆದು ಭದ್ರವಾಗಿ ನೆಲೆಯೂರಿ ದ್ದರೂ ತಮಿಳುನಾಡು, ಆಂಧ್ರಪ್ರದೇಶಗಳಂತೆ ನಮಗೂ ಚೌಕಾಶಿ ಶಕ್ತಿ ಸಿಗುತ್ತಿತ್ತು.
ರಾಷ್ಟ್ರ ರಾಜಕಾರಣದಲ್ಲಿ ನಮ್ಮದೇ ಆಟವಾಡುವ ಅವಕಾಶ ಸಿಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಜನತಾದಳದ ಹಿರಿಯ ನಾಯಕರಾದ ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ಅವರು ಭಿನ್ನಾಭಿ ಪ್ರಾಯ ಮರೆತು ಒಂದಾಗಿ ನಿಂತಿದ್ದರೆ ಜನತಾದಳ ಇಂದಿಗೂ ರಾಜ್ಯದ ಪ್ರಬಲ ರಾಜಕೀಯ ಪಕ್ಷವಾಗಿ ಉಳಿಯುತ್ತಿತ್ತು.
ರಾಜ್ಯ ರಾಜಕಾರಣ ಬೇರೆಯೇ ದಿಕ್ಕು ಪಡೆಯುತ್ತಿತು. ಅಂದು ಕಾಂಗ್ರೆಸ್ ಹೈಕಮಾಂಡ್ ಸಂಸ್ಕೃತಿ ಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಜನತಾ ಪರಿವಾರದ ನಾಯಕರಲ್ಲಿ ಹಲವರು ಇಂದು ಕಾಂಗ್ರೆಸ್ ನಾಯಕರು. ಇಂದು ಅದೇ ನಾಯಕರು ಪಕ್ಷದ ಹೈಕಮಾಂಡ್ ರಕ್ಷೆಯಲ್ಲಿ ಮುಂದುವರಿದಿದ್ದಾರೆ. ಸದ್ಯಕ್ಕೆ ಕರ್ನಾಟಕ ಹೈಕಮಾಂಡ್ ಮುಷ್ಟಿಯಿಂದ ಬಿಡುಗಡೆ ಪಡೆಯುವ ಲಕ್ಷಣಗಳು ಕಾಣುತ್ತಿಲ್ಲ