ಅಶ್ವತ್ಥಕಟ್ಟೆ
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭುವೆಂದರೂ, ನಾಡಿನ ಪ್ರಭುವಿನ ಆಯ್ಕೆ ಮಾತ್ರ ಆ ಪಕ್ಷದ ಪ್ರಭು (ಹೈಕಮಾಂಡ್) ಬಳಿಯಿರುತ್ತದೆ ಎನ್ನುವುದು ನಗ್ನ ಸತ್ಯ. ಅದರಲ್ಲಿಯೂ ರಾಷ್ಟ್ರೀಯ ಪಕ್ಷಗಳು ಅಧಿಕಾರ ನಡೆಸುವ ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಬಹುಮತ ಸಿಕ್ಕು ಅಧಿಕಾರ ಗದ್ದುಗೆ ಏರಿದರೂ, ದೆಹಲಿಯಲ್ಲಿರುವ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುವುದು ಎನ್ನುವುದು ಅಲಿಖಿತ ನಿಯಮ. ಇತ್ತೀಚಿನ ದಿನದಲ್ಲಿ ಈ ಹೈಕಮಾಂಡ್ ನಾಯಕರ ನಡೆಗಳು ಸ್ಥಳೀಯ ಮಟ್ಟದಲ್ಲಿ ಆಳುವ ನಾಯಕರಿಗೆ ಮುಜುಗರಕ್ಕೆ ಸಿಲುಕಿಸಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
ಎರಡು ತಿಂಗಳ ಹಿಂದೆ ವರ್ಷಗಳ ಕನಸಾಗಿದ್ದ ಮುಖ್ಯಮಂತ್ರಿ ಹುದ್ದೆಯನ್ನು ಪಡೆದುಕೊಂಡ ಡಿ.ಕೆ.ಶಿವಕುಮಾರ್, ಆರಂಭದ ದಿನದಲ್ಲಿ ಹತ್ತಾರು ಘೋಷಣೆಗಳ ಮೂಲಕ ಹೊಸದೇನೋ ಮಾಡಬಹುದು ಎನ್ನುವ ನಿರೀಕ್ಷೆಯನ್ನು ರಾಜ್ಯದ ಜನರಲ್ಲಿ ಹುಟ್ಟಿಸಿದ್ದರು. ಅದರಲ್ಲಿಯೂ ತಮ್ಮ ವ್ಯಕ್ವಿತ್ವದ ಮೂಲಕವೇ ರಾಜ್ಯ ರಾಜಕೀಯದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್, ಆಡಳಿತದಲ್ಲಿಯೂ ಹೊಸತನಕ್ಕೆ ನಾಂದಿ ಹಾಡಬಹುದು ಎನ್ನಲಾಗಿತ್ತು. ಅದಕ್ಕೆ ಪೂರಕವಾಗಿ ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಇಲಾಖೆ ಸೇರಿದಂತೆ ಹಲವು ಕಾರ್ಯಕ್ರಮ ಗಳನ್ನು ಕೈಗೆತ್ತಿಕೊಂಡಿದ್ದರು.
ಕೇವಲ ಘೋಷಣೆ ಮಾತ್ರವಲ್ಲದೇ, ನಿತ್ಯ ಹತ್ತಾರು ಸಭೆ, ಗಣ್ಯರ ಭೇಟಿ ಸೇರಿದಂತೆ ಬ್ಯುಸಿ ಶೆಡ್ಯೂಲ್ ಮೂಲಕ ಕರ್ನಾಟಕ ಭಿನ್ನ ರೀತಿಯ ಆಡಳಿತ ನೀಡಬಹುದೇನೋ ಎನ್ನುವ ಮಾತುಗಳನ್ನು ಆಡುವಂತೆ ಮಾಡಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ವಾರಗಟ್ಟಲೇ ದೆಹಲಿ ನಾಯಕರ ಹಾದಿ ಕಾದಿದ್ದು, ವಿಸ್ತರಣೆಯ ದಿನಾಂಕವನ್ನು ನಾಲ್ಕೈದು ಬಾರಿ ಮುಂದೂಡಿಕೆ ಮಾಡಿ ಹೈಕಮಾಂಡ್‌ನ ಒಪ್ಪಿಗೆಗೆ ಕಾದು ಕುಳಿತಿದ್ದು, ಸಂಪುಟ ವಿಸ್ತರಣೆಯಾದ ಬಳಿಕ ಖಾತೆ ಹಂಚಿಕೆಗೆ ವಾರಗಟ್ಟಲೇ ಸಮಯ ತೆಗೆದುಕೊಂಡಿದ್ದು ನೋಡಿ ರಾಜ್ಯದ ಜನ ಇಷ್ಟು ದಿನ ಕಂಡಿದ್ದ ಡಿ.ಕೆ.ಶಿವಕುಮಾರ್‌ಗಿಂತ ಭಿನ್ನವಾಗಿ ಕಂಡರು ಎಂದರೆ ತಪ್ಪಾಗುವುದಿಲ್ಲ. ಆದರೆ ಈ ವಿಷಯದಲ್ಲಿ ಡಿಕೆಶಿ ತಪ್ಪಿಗಿಂತ ಹೆಚ್ಚಾಗಿ ಪಕ್ಷದ ವರಿಷ್ಠರು ನಡೆದುಕೊಂಡ ರೀತಿಯ ಕುರಿತು ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: Ranjith H Ashwath Column: ಕಾವೇರಿ ಕಾವಾರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ
ಹಾಗೆ ನೋಡಿದರೆ, ಸಚಿವ ಸಂಪುಟದ ವಿಷಯದಲ್ಲಿ ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರೊಂದಿಗೂ ಬಿಜೆಪಿಯ ವರಿಷ್ಠರು ಇದೇ ರೀತಿ ನಡೆದುಕೊಂಡಿದ್ದರು. ಆದ್ದರಿಂದ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಬಂದಾಗ ಈ ರೀತಿಯ ಕಾಯುವಿಕೆ ಸರ್ವೇ ಸಾಮಾನ್ಯ. ಆದರೆ ಈ ಬಾರಿ ಹೈಕಮಾಂಡ್ ಸಂಪುಟ ವಿಸ್ತರಣೆ ವಿಷಯದಲ್ಲಿ ಮಾತ್ರವಲ್ಲದೇ, ಸಾಂವಿಧಾನಿಕ ಪೀಠಗಳ ವಿಷಯದಲ್ಲಿ ನಡೆದುಕೊಂಡ ರೀತಿಯೂ ಬಹುಚರ್ಚಿತ ಹಾಗೂ ವಿವಾದಾತ್ಮಕ ನಡೆ ಎಂದರೆ ತಪ್ಪಾಗುವುದಿಲ್ಲ.
ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ವಿಧಾನ ಸಭಾಧ್ಯಕ್ಷರಾಗಿ, ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಸಹಜ. ಆದರೆ ವಿಧಾನಪರಿಷತ್‌ನಲ್ಲಿ ಸರಕಾರ ಬಂದ ಆರಂಭಿಕ ಎರಡು ಮೂರು ವರ್ಷ ಪ್ರತಿಪಕ್ಷದಿಂದ ಆಯ್ಕೆಯಾದ ಸಭಾ ಪತಿಗಳೇ ಅಧಿಕಾರದಲ್ಲಿರುತ್ತಾರೆ. ಏಕೆಂದರೆ, ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗುವ ಸದಸ್ಯರು ಹಾಗೂ ನಾಮನಿರ್ದೇಶನಗೊಂಡ ಸದಸ್ಯರ ಅವಧಿ ಮೂರನೇ ವರ್ಷದಿಂದ ನೇಮಕವಾಗಲು ಶುರುವಾಗುವುದರಿಂದ ಬಹುಮತ ಸಿಗಲು ಸಮಯ ಬೇಕಾಗುತ್ತದೆ.
ಇದರೊಂದಿಗೆ ವಿಧಾನಪರಿಷತ್‌ನಲ್ಲಿ ಯಾವುದೇ ಪಕ್ಷದಿಂದ ಅಯ್ಕೆಯಾದರೂ, ಸರಕಾರ ಬದಲಾವಣೆಯಾದರೆ ಬದಲಾವಣೆ ಮಾಡಿದ ಉದಾಹರಣೆ ತೀರಾ ಕಡಿಮೆ. ಅದರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಿರುವ ಉದಾಹರಣೆಯೇ ಇಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಈ ಸಾಂವಿಧಾನಿಕ ಪೀಠದ ವಿಷಯದಲ್ಲಿಯೂ ಹೊಸ ಪರಂಪರೆಗೆ ನಾಂದಿ ಹಾಡಿರುವುದು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬೇಕು ಎಂದು ಎಐಸಿಸಿ ಲೆಟರ್‌ಹೆಡ್‌ನಲ್ಲಿ ಘೋಷಣೆ ಮಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿಧಾನಸಭಾಧ್ಯಕ್ಷ, ಉಪ ಸಭಾಧ್ಯಕ್ಷ, ವಿಧಾನಪರಿಷತ್ ಸಭಾಪತಿ, ಉಪಸಭಾಪತಿಯನ್ನಾಗಿ ಯಾರನ್ನು ಮಾಡಬೇಕು ಎನ್ನುವು ದನ್ನು ಅದೇ ಲೆಟರ್‌ಹೆಡ್‌ನಲ್ಲಿ ಕಳುಹಿಸಿದರು. ಪಕ್ಷಗಳನ್ನು ಮೀರಿದ ಹುದ್ದೆಗಳಿಗೂ ಈ ರೀತಿ ನೇಮಕ ಮಾಡಿರುವುದು ಕೆಟ್ಟ ಪರಂಪರೆ.
ಇದರಿಂದ ಸಾಂವಿಧಾನಿಕ ಹುದ್ದೆಯ ಘನತೆಗೆ ಧಕ್ಕೆಯಾಗಲಿದೆ ಎನ್ನುವ ಮಾತುಗಳು ಶುರುವಾಗಿದೆ. ಸಭಾಪತಿ ಹೊರಟ್ಟಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರೊಂದಿಗೆ ಮಾತನಾಡುವಾಗಲೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಎಐಸಿಸಿ ಲೆಟರ್ ಹೆಡ್‌ನಲ್ಲಿಯೇ ಸಭಾಪತಿ, ಸಭಾಧ್ಯಕ್ಷ ಹೆಸರನ್ನು ನೇಮಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ವಿಷಯಗಳಲ್ಲಿ ಪಕ್ಷಗಳು ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎನ್ನುವ ಮಾತುಗಳನ್ನು ಆಡಿದ್ದರು.
ಸಭಾಪತಿ, ಉಪಸಭಾಪತಿ, ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ನೇಮಕದ ಹಿಂದೆ ಪಕ್ಷದ ಹೈಕಮಾಂಡ್ ನಾಯಕರ ತೀರ್ಮಾನಗಳಿರುವುದು ಸಹಜ. ಆದರೆ ಅದನ್ನು ಅಧಿಕೃತವಾಗಿ ತೋರಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಹಲವರ ಮಾತಾಗಿದೆ. ಸಭಾಪತಿ ಹುದ್ದೆಯ ಒಂದು ಭಾಗವಾದರೆ, ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ನಡೆದು ಕೊಂಡ ರೀತಿಯೂ ಚರ್ಚಿತ ವಿಷಯ.
ಹಾಗೆ ನೋಡಿದರೆ, ಖಾತೆ ಹಂಚಿಕೆಯಲ್ಲಿನ ಗೊಂದಲಕ್ಕಿಂತ ಹೆಚ್ಚು ವಿವಾದವಾಗಿದ್ದು ಹೊರಟ್ಟಿ ಅವರಿಂದ ರಾಜೀನಾಮೆ ಪಡೆದ ರೀತಿಗೆ. ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಗೆ ಬಹುಮತವಿದೆ, ಪಕ್ಷದ ಹೈಕಮಾಂಡ್ ಸಭಾಪತಿ ಹುದ್ದೆಗೆ ಇನ್ನೊಬ್ಬರನ್ನು ಸೂಚಿಸಿದ್ದಾರೆ ಎನ್ನುವ ಕಾರಣಕ್ಕೆ ಮುಖ್ಯ ಮಂತ್ರಿ ಸ್ಥಾನದಿಂದ ಸಭಾಪತಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿರುವುದು ಸಂವಿಧಾನ ಬಾಹಿರ.
ಮೇಲ್ನೋಟಕ್ಕೆ ರಾಜಕೀಯವಾಗಿ ಇದೊಂದು ಸಹಜ ಪ್ರಕ್ರಿಯೆ ಎನಿಸಿದರೂ, ಸಂವಿಧಾನಾತ್ಮಕವಾಗಿ ನೋಡಿದರೆ ಕಾಂಗ್ರೆಸ್ ಹಾಗೂ ಸರಕಾರದಿಂದ ಬಹುದೊಡ್ಡ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಏಕೆಂದರೆ, ಶಿಷ್ಟಾಚಾರದ ಪ್ರಕಾರ ವಿಧಾನಪರಿಷತ್ ಸಭಾಪತಿಗಳು ಹಾಗೂ ವಿಧಾನಸಭಾಧ್ಯಕ್ಷರು ಮುಖ್ಯಮಂತ್ರಿಗಳಿಗಿಂತ ಮೇಲಿನ ಹುದ್ದೆಯಲ್ಲಿರುತ್ತಾರೆ.
ಸಭಾಪತಿ ಹುದ್ದೆ ಎನ್ನುವುದು ಸಾಂವಿಧಾನಿಕ ಹುದ್ದೆಯಾಗಿರುವುದರಿಂದ ರಾಜ್ಯ ಪಾಲರಿಗಿರು ವಷ್ಟೇ ಅಧಿಕಾರ ಸಭಾಪತಿಗಳಿಗೆ ಇರುತ್ತದೆ. ಹೀಗಿರುವಾಗ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಡಿ.ಕೆ. ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಈ ರೀತಿಯ ಸೂಚನೆ ನೀಡಲು ಬರುವುದೇ ಇಲ್ಲ.
ಸಭಾಪತಿ ಆಯ್ಕೆ, ವಜಾ ಎನ್ನುವುದು ವಿಧಾನಪರಿಷತ್ ಸದನದೊಳಗೆ ಆಗಬೇಕಿರುವ ಪ್ರಕ್ರಿಯೆಯೇ ಹೊರತು ಹೊರಗಲ್ಲ ಎನ್ನುವ ಅಭಿಪ್ರಾಯವನ್ನು ಸಂವಿಧಾನ ತಜ್ಞರು ಹೇಳಿದ್ದಾರೆ. ಈ ಎಲ್ಲ ಡ್ರಾಮಾದ ಬಳಿಕ ಹೊರಟ್ಟಿ ಅವರು ರಾಜೀನಾಮೆ ಒಪ್ಪಿಗೆ ನೀಡಿ, 14ಕ್ಕೆ ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡುತ್ತೇನೆ ಎಂದು ಡಿಕೆಶಿ ಹಾಗೂ ಬಿ.ಕೆ.ಹರಿಪ್ರಸಾದ್ ಅವರಿಗೆ ಹೇಳಿದ್ದರೂ, ಹೈಕಮಾಂಡ್ ಸೂಚನೆಯಿರುವುದರಿಂದ ಕೂಡಲೇ ರಾಜೀನಾಮೆ ನೀಡಿ ಎಂದು ಬಲವಂತವಾಗಿ ಶುಕ್ರವಾರ ರಾಜೀನಾಮೆ ಪಡೆದಿದ್ದಾರೆ ಎನ್ನುವ ಆರೋಪವಿದೆ.
ಶುಕ್ರವಾರ ಸಭಾಪತಿ ಕೊಠಡಿಗೆ ಪ್ರವೇಶಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ 20ಕ್ಕೂ ಹೆಚ್ಚು ಕಾಂಗ್ರೆಸ್‌ನ ಪರಿಷತ್ ಸದಸ್ಯರು ಸಭಾಪತಿಗಳ ಕೊಠಡಿಗೆ ತೆರಳಿ, ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ. ಸಭಾಪತಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಆದ್ದರಿಂದ ಸದನದಲ್ಲಿ ಮಾತನಾಡಿ, ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್ ನಾಯಕರು, ಈಗಲೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ. ಇದಿಷ್ಟೇ ಅಲ್ಲದೇ, ಬಸವರಾಜ ಹೊರಟ್ಟಿ ಅವರಿಗೆ ತಿಳಿಯದೇ ಅವರ ಲೆಟರ್ ಹೆಡ್‌ನಲ್ಲಿ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡು ಬಂದು ಸಹಿ ಹಾಕುವಂತೆ ಒತ್ತಡ ಹೇರಿದ್ದು, ಹೊರಟ್ಟಿ ಅವರನ್ನು ಸುತ್ತುವರಿದು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿದ್ದು ಸಹ ಸಂವಿಧಾನಬಾಹಿರವೇ.
ಯಾವುದೇ ಸರಕಾರ ಅಥವಾ ಪಕ್ಷ ಅಧಿಕಾರಕ್ಕೆ ಬರುವುದು ಹೋಗುವುದು ಸಹಜ ಪ್ರಕ್ರಿಯೆ. ಆದರೆ ಕೆಲವೊಂದಷ್ಟು ಸಾಂಪ್ರದಾಯ, ಶಿಷ್ಟಾಚಾರಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಂಡಾ ಗಲೇ ಅದು ವಿವಾದಕ್ಕೆ ಕಾರಣವಾಗುವುದು. ಹಾಗೆ ನೋಡಿದರೆ, ಸಂಪುಟದಲ್ಲಿ ಯಾರಿರಬೇಕು, ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವುದನ್ನು ಮುಖ್ಯಮಂತ್ರಿಗಳು ತೀರ್ಮಾನಿಸಬೇಕು. ಆದರೆ ಹೈಕಮಾಂಡ್ ಮುಂದೆ ಮಂಡಿಯೂರಿ ಒಪ್ಪಿಗೆ ಪಡೆದುಕೊಂಡು ಬಂದರೆ, ಆಡಳಿತದಲ್ಲಿ ಹಿಡಿತ ಸಾಧಿಸಲು ಹೇಗೆ ಸಾಧ್ಯ? ಅದೇ ರೀತಿ ಹೈಕಮಾಂಡ್ ಆಣತಿಯಂತೆ ಸಾಂವಿಧಾನಿಕ ಪೀಠಗಳಾಗಿರುವ ಸಭಾಧ್ಯಕ್ಷ, ಸಭಾಪತಿ ಪೀಠದಲ್ಲಿ ಕೂತರೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ? ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಹೈಕಮಾಂಡ್ ನಾಯಕರು ಸಹ, ಇಂತಹ ಸೂಕ್ಷ ವಿಷಯದಲ್ಲಿ ಕೊಂಚ ಮುತ್ಸದ್ಧಿನ ತೋರಬೇಕಾಗುತ್ತದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರಕ್ಕೆ ಬಾಕಿಯಿರುವುದೇ ಹೆಚ್ಚೆಂದರೆ 22 ತಿಂಗಳು. ಸದ್ಯಕ್ಕೆ ರಾಜ್ಯ ಬಿಜೆಪಿಯ ಸ್ಥಿತಿ ಮನೆಯೊಂದು ಹತ್ತಾರು ಬಾಗಿಲಾಗಿರುವು ದರಿಂದ, ಸಂಘಟನೆಯನ್ನೇ ಬಿಜೆಪಿ ನಾಯಕರು ಮರೆತಿರುವುದರಿಂದ ಸರಕಾರದ ವಿರುದ್ಧ ಹತ್ತಾರು ಆರೋಪಗಳು ಬಂದರೂ, ಅದನ್ನು ಎತ್ತಿಕೊಂಡು ಜನಾಕ್ರೋಶ ಬಿಂಬಿಸುವಷ್ಟು ಶಕ್ತವಾಗಿಲ್ಲ.
ಇಲ್ಲದೇ ಹೋಗಿದ್ದರೆ ಬರ ನಿರ್ವಹಣೆ, ಕೆಪಿಎಸ್ಸಿ ಸರಣಿ ಹಗರಣ, ಸಂಪುಟ ವಿಸ್ತರಣೆಗೆ ಎರಡು ತಿಂಗಳು, ಖಾತೆ ಹಂಚಿಕೆಗೆ ವಾರಗಟ್ಟಲೇ ಕಾಯುವ ಸ್ಥಿತಿಯನ್ನೇ ಮುಂದಿ ಟ್ಟುಕೊಂಡು ಜನಾಕ್ರೋಶ ಮೂಡಿಸಬಹುದಾಗಿತ್ತು. ಆದರೆ ಪ್ರತಿಪಕ್ಷ ಬಿಜೆಪಿಯಲ್ಲಿ ನಾಯಕತ್ವ ಭವಿಷ್ಯವೇ ಡೋಲಾ ಯಮಾನವಾಗಿರುವುದರಿಂದ ಸರಕಾರದ ಲೋಪದೋಷಗಳ ಬಗ್ಗೆ ಆಲೋಚನೆಗಳನ್ನು ಸಾಮಾಜಿಕ ಜಾಲತಾಣದ ಪೋಸ್ಟರ್ ಗಳಿಗೆ ಸೀಮಿತಗೊಳಿಸಿ ಓಡಾಡುತ್ತಿದ್ದಾರೆ.
ಸದ್ಯ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಕರ್ನಾಟಕದ ಮಟ್ಟಿಗೆ ಬಿಜೆಪಿಗೆ ತಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಹೀಗಿರುವಾಗ, ಇಡೀ ದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಬಲಿಷ್ಠ ರಾಜ್ಯಗಳಲ್ಲಿ ಉಳಿದಿರುವ ಕರ್ನಾಟಕದ ವಿಷಯದಲ್ಲಿ ಇನ್ನಷ್ಟು ವಿವೇಚನೆ ಬಳಸಬೇಕಾಗಿದೆ. ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ ಶಕ್ತಿಯುತವಾಗಿಲ್ಲ ಎನ್ನುವ ಏಕೈಕ ಕಾರಣಕ್ಕೆ ಚಲ್ತಾ ಹೈ ಎನ್ನುವ ಮನಸ್ಥಿತಿ ಯಲ್ಲಿಯೇ ಕಾಂಗ್ರೆಸ್ ನಾಯಕರು ಮುಂದುವರೆದರೆ ಚುನಾವಣೆ ಸಮಯದಲ್ಲಿ ಅದರ ಹೊಡೆತ ಯಾವ ಪ್ರಮಾಣದಲ್ಲಿ ಬೀಳುತ್ತದೆ ಎಂದು ಊಹಿಸಲು ಕಷ್ಟವಾಗುವುದಂತೂ ನಿಜ.
2028ರ ಚುನಾವಣೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲೇ ರೋಡ್‌ಮ್ಯಾಪ್ ಸಿದ್ಧಪಡಿಸಿಕೊಂಡು ಹೈಕಮಾಂಡ್ ಮುಂದೆ ಮಂಡಿಸಿರುವ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದು, ಪೂರ್ಣಾವಧಿ ಮುಖ್ಯಮಂತ್ರಿಯಾಗಿರಬೇಕು ಎಂಬ ಲೆಕ್ಕಾಚಾರಗಳಿವೆ. ಆದರೆ ಕಾಗದದ ಮೇಲಿರುವ ರೋಡ್ ಮ್ಯಾಪ್ ಅನ್ನು ನಿಜವಾಗಿಯೂ ಅಳವಡಿಸಿಕೊಳ್ಳಲು ಮುಂದಿನ 12 ತಿಂಗಳು ಬಹುಮುಖ್ಯ ವಾಗಿರುತ್ತದೆ. ಈ ಗೋಲ್ಡನ್ ಟೈಮ್ ಅನ್ನು ಪಕ್ಷದ ಹೈಕಮಾಂಡ್ ತಮ್ಮ ಪ್ರತಿಷ್ಠೆಗಳಿಗೆ ಬಿದ್ದು ಹಾಳುಮಾಡಿಕೊಂಡರೆ ರಾಜ್ಯ ಕಾಂಗ್ರೆಸ್‌ಗೆ ಆಗುವ ನಷ್ಟಕ್ಕಿಂತ ಬಹುದೊಡ್ಡ ನಷ್ಟವನ್ನು ದೆಹಲಿ ನಾಯಕರು ಅನು ಭವಿಸಬೇಕಾಗುತ್ತದೆ ಎನ್ನುವುದಂತೂ ಸತ್ಯ.