ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಕಾವೇರಿ ಕಾವಾರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ

ಕೃಷ್ಣ, ತುಂಗಾ ಭದ್ರ ನದಿಗಳಿಗೆ ಹೋಲಿಸಿದರೆ ಕಾವೇರಿ ಹರಿವಿನ ಪ್ರಮಾಣದಲ್ಲಿ ಸಣ್ಣದೆನಿಸಿದರೂ ವಿವಾದದ ವಿಷಯದಲ್ಲಿ ಬಹುದೊಡ್ಡ ಕಿಡಿಯನ್ನೇ ಹೊತ್ತಿಸುತ್ತದೆ. ಶತಮಾನಗಳ ಇತಿಹಾಸವಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾನೂನು ಹೋರಾಟ ಗಳು ನಡೆದು ಅಂತಿಮ ತೀರ್ಪು ಪ್ರಕಟವಾದರೂ, ಆಗಾಗ್ಗೆ ವಿವಾದ ಭುಗಿಲೇಳುವುದಕ್ಕೆ ಪ್ರಮುಖ ಕಾರಣ ಮಳೆ ಕೊರತೆ

ಕಾವೇರಿ ಕಾವಾರಿಸಲು ಸಂಕಷ್ಟ ಸೂತ್ರವೊಂದೇ ಪರಿಹಾರ

-

ಅಶ್ವತ್ಥಕಟ್ಟೆ

ಕರ್ನಾಟಕಕ್ಕೆ ನೀರಾವರಿ ವಿವಾದ, ಕಾನೂನು ಹೋರಾಟಗಳೇನು ಹೊಸದಲ್ಲ. ಕೃಷ್ಣೆಯ ವಿಷಯ ದಲ್ಲಿ ನೆರೆ ರಾಜ್ಯ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದೊಂದಿಗೆ, ಮಹದಾಯಿ ವಿಷಯದಲ್ಲಿ ಗೋವಾ, ಮಹಾರಾಷ್ಟ್ರದೊಂದಿಗೆ ದಶಕಗಳಿಂದ ತಿಕ್ಕಾಟವಿದ್ದೇ ಇದೆ. ಅತ್ತ ಆಂಧ್ರದೊಂದಿಗೆ ತುಂಗಾ-ಭದ್ರಾ ವಿಷಯದಲ್ಲಿ ನಡೆಯುತ್ತಲೇ ಇದೆ. ಆದರೆ ಈ ಎಲ್ಲವನ್ನು ಮೀರಿ, ಇಡೀ ದೇಶದ ಗಮನ ಸೆಳೆಯುವ, ಎರಡು ರಾಜ್ಯಗಳ ನಡುವೆ ಹೋರಾಟದ ಕಿಡಿ ಹೊತ್ತಿಸುವ, ಪ್ರತಿಭಟನೆ, ಬಂದ್‌ಗೆ ಕಾರಣವಾಗುವ ವಿವಾದವೆಂದರೆ ಕಾವೇರಿ ನದಿ ನೀರು ಹಂಚಿಕೆ.

ಕೃಷ್ಣ, ತುಂಗಾ ಭದ್ರ ನದಿಗಳಿಗೆ ಹೋಲಿಸಿದರೆ ಕಾವೇರಿ ಹರಿವಿನ ಪ್ರಮಾಣದಲ್ಲಿ ಸಣ್ಣದೆನಿಸಿದರೂ ವಿವಾದದ ವಿಷಯದಲ್ಲಿ ಬಹುದೊಡ್ಡ ಕಿಡಿಯನ್ನೇ ಹೊತ್ತಿಸುತ್ತದೆ. ಶತಮಾನಗಳ ಇತಿಹಾಸವಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಕಾನೂನು ಹೋರಾಟ ಗಳು ನಡೆದು ಅಂತಿಮ ತೀರ್ಪು ಪ್ರಕಟವಾದರೂ, ಆಗಾಗ್ಗೆ ವಿವಾದ ಭುಗಿಲೇಳುವುದಕ್ಕೆ ಪ್ರಮುಖ ಕಾರಣ ಮಳೆ ಕೊರತೆ. ಸಮೃದ್ಧ ಮುಂಗಾರು ಮಳೆಯಾದರೆ, ಕಾವೇರಿಯಷ್ಟು ಶಾಂತ ಮತ್ತೊಂದಿ ರುವುದಿಲ್ಲ. ಆದರೆ ಮಳೆ ಕೊರತೆ ಎದುರಾಗುತ್ತಿದ್ದಂತೆ ಬರಗಾಲ ನಿರ್ವಹಣೆ ಮೀರಿದ ಒತ್ತಡ ತಮಿಳುನಾಡಿಗೆ ನೀರು ಹರಿಸುವ ವಿಷಯದಲ್ಲಿ ಕರ್ನಾಟಕ ಸರಕಾರಕ್ಕೆ ಎದುರಾಗುವುದು ಸುಳ್ಳಲ್ಲ.

ಸಂಕಷ್ಟ ವರ್ಷದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ, ಕೃಷಿ ಮತ್ತು ನೀರಾವರಿಗೆ ಎರಡನೇ ಆದ್ಯತೆ, ಜಲವಿದ್ಯುತ್‌ಗೆ ಮೂರನೇ ಆದ್ಯತೆ, ಕೈಗಾರಿಕೆಗಳಿಗೆ ನಾಲ್ಕನೇ ಆದ್ಯತೆ ಹಾಗೂ ಐದನೇ ಆದ್ಯತೆಯಾಗಿ ಪರಿಸರ ಹಾಗೂ ಇತರ ಬಳಕೆಗೆ ನೀರನ್ನು ಹಂಚಬೇಕು ಎನ್ನುವುದು ರಾಷ್ಟ್ರೀಯ ಜಲ ನೀತಿಯಲ್ಲಿಯೇ ಸ್ಪಷ್ಟವಾಗಿದೆ.

ಇದನ್ನೂ ಓದಿ: Ranjith H Ashwath Column: ಜೆನ್ ಝೀ ಜಿರಳೆಗಳ ಲಘುವಾಗಿ ಪರಿಗಣಿಸಿದ ಕೈ-ಕಮಲ!

ಇದಕ್ಕೆ ಪೂರಕವಾಗಿಯೇ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶದಲ್ಲಿ ಕರ್ನಾಟಕಕ್ಕೆ ಹೆಚ್ಚುವರಿ 4.75 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಆದರೂ, ಪ್ರತಿವರ್ಷ ಮುಂಗಾರು ಕೈಕೊಟ್ಟಾಗ ತಮಿಳುನಾಡು ತನ್ನ ರಾಜ್ಯದ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬೇಕು ಎಂದು ಕ್ಯಾತೆ ಶುರು ಮಾಡುತ್ತದೆ. ಕರ್ನಾಟಕದಲ್ಲಿ ಕುಡಿಯುವ ನೀರಿಗೆ ‘ಬರ’ವಿದ್ದಾ ಗಲೂ ತನ್ನ ರೈತರ ಬೆಳೆಗೆ ನೀರು ಬಿಡಿ ಎನ್ನುವ ತಮಿಳುನಾಡಿನ ವಾದವೇ ಕಿಡಿ ಹತ್ತಲು ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ.

ಮಳೆ ಕೊರತೆ ವರ್ಷ ಎದುರಾದಾಗೆಲ್ಲ ಕರ್ನಾಟಕ-ತಮಿಳುನಾಡು ನಡುವೆ ಈ ರೀತಿಯ ಗೊಂದಲ, ಗಲಾಟೆಗಳು ಸರ್ವೇಸಾಮಾನ್ಯ. ಅಂತಿಮ ಅಧಿಸೂಚನೆಯ ಬಳಿಕ ಬರಗಾಲ ಎದುರಾದಾಗಲೆಲ್ಲ ತಮಿಳುನಾಡು ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಅರ್ಜಿ ಸಲ್ಲಿಸುವುದು, ಅದಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿದ ಹೊರತಾಗಿಯೂ ಇಂತಿಷ್ಟು ನೀರು ಬಿಡಿ ಎಂದು ಸಮಿತಿ ಯಿಂದ ಆದೇಶವಾಗುವುದು, ಈ ಆದೇಶ ಪ್ರಶ್ನಿಸಿ ಪ್ರಾಧಿಕಾರದ ಮುಂದೆ ಹೋಗುವುದು ‘ಸಂಪ್ರದಾಯ’ ಎನ್ನುವಂತಾಗಿದೆ.

ಪ್ರಾಧಿಕಾರವೂ ನೀರು ಹರಿಸುವಂತೆ ಹೇಳಿದಾಗ, ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತದೆ. ಇಲ್ಲವೇ, ನೀರು ಹರಿಸಿಲ್ಲ ಎಂದು ಕರ್ನಾಟಕ ಸರಕಾರದ ನಡೆಯನ್ನು ಪ್ರಶ್ನಿಸಿ ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರೆ. ಮಳೆಯ ಕೊರೆತ ಹೊರತಾಗಿ ಯೂ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ತೀರ್ಪನ್ನು ಪ್ರಶ್ನಿಸಿ ಈವರೆಗೆ ಆರು ಬಾರಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿದೆ. ಆದರೆ ಈ ಆರು ಬಾರಿಯೂ, ಪ್ರಾಧಿಕಾರದ ತೀರ್ಮಾನವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

61 ok

ಏಕೆಂದರೆ, ನೀರು ವಿವಾದ ಪ್ರತಿಬಾರಿಯೂ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದು ಬೇಡ ಎನ್ನುವ ಕಾರಣಕ್ಕೆ ರಚಿಸಿರುವ ಪ್ರಾಧಿಕಾರದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ಯ ಪ್ರತಿನಿಧಿ ಗಳು ಸೇರಿದಂತೆ ಕೇಂದ್ರ ಜಲಶಕ್ತಿ ಇಲಾಖೆ ಅಧಿಕಾರಿಗಳು, ತಜ್ಞರನ್ನು ಒಳಗೊಂಡ ಸಮಿತಿಯಿದೆ. ಪ್ರಾಧಿಕಾರದ ಬಳಿ ‘ತಾಂತ್ರಿಕ’ ಮಾಹಿತಿಯಿದೆ. ಆ ಮಾಹಿತಿಯ ಆಧಾರದಲ್ಲಿಯೇ ನೀರು ಹರಿಸುವಂತೆ ಸೂಚನೆ ನೀಡಲಾಗುತ್ತದೆ. ಆದ್ದರಿಂದ ಈ ಆದೇಶದಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲ ಎನ್ನುವ ಮಾತನ್ನು ಪ್ರತಿಬಾರಿ ಸುಪ್ರೀಂ ಕೋರ್ಟ್ ಹೇಳುತ್ತದೆ. ನೀರು ಬಿಡುಗಡೆ ವಿರೋಧಿಸಿ ಕನ್ನಡಪರ ಸಂಘಟನೆ ನಡೆಸುವ ಪ್ರತಿಭಟನೆ, ಕರ್ನಾಟಕ ಬಂದ್, ಹೋರಾಟಗಳು ಕೆಲವೊಮ್ಮೆ ಕರ್ನಾಟಕಕ್ಕೆ ವ್ಯತಿರಿಕ್ತ ಪರಿಣಾಮ ಬೀರಿರುವ ಉದಾಹರಣೆಗಳು ನಮ್ಮ ಮುಂದೆ ಎನ್ನುವುದನ್ನು ಮರೆಯಬಾರದು.

ಕಾವೇರಿ ನ್ಯಾಯಾಧೀಕರಣ, ಸುಪ್ರೀಂ ಕೋರ್ಟ್ ಸರಾಸರಿ ಮಳೆಯನ್ನು ಗಮನದಲ್ಲಿರಿಸಿಕೊಂಡು ಸೂತ್ರವೊಂದನ್ನು ಸಿದ್ಧಪಡಿಸಿದೆ. ಆದರೆ ಸಂಕಷ್ಟ ಸಮಯದಲ್ಲಿ ಯಾವ ಸೂತ್ರದಲ್ಲಿ ನೀರು ಹರಿಸಬೇಕು ಎನ್ನುವ ವಿಷಯದಲ್ಲಿ ಸ್ಪಷ್ಟನೆ ಇಲ್ಲದಿರುವುದೇ ಇಂದಿನ ಈ ಸಮಸ್ಯೆಗೆ ಕಾರಣ. ಕಾವೇರಿ ನೀರು ಬಿಡಬಾರದು ಎಂದು ಯಾರೆಷ್ಟೇ ಹೋರಾಟ ಮಾಡಿದರೂ, ಕರ್ನಾಟಕ ಸರಕಾರ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಒಂದು ಭಾಗವನ್ನಾದರೂ ನೀಡಬೇಕಾದ ಸ್ಥಿತಿಯಲ್ಲಿದೆ.

ಇತಿಹಾಸವನ್ನು ಕೆದಕಿದರೆ, 1991ರಲ್ಲಿ ಕರ್ನಾಟಕದಲ್ಲಿ ತೀವ್ರ ಮಳೆ ಅಭಾವವಿದ್ದಾಗಲೂ, ಸುಮಾರು 205 ಟಿಎಂಸಿ ನೀರು ಬಿಡಬೇಕು ಎನ್ನುವ ಆದೇಶವನ್ನು ಕಾವೇರಿ ನ್ಯಾಯಮಂಡಳಿ ನೀಡಿತ್ತು. ಈ ಆದೇಶವನ್ನು ಧಿಕ್ಕರಿಸಿ ನೀರು ಬಿಡದೇ ಇರಲು ಅಂದಿನ ಎಸ್.ಬಂಗಾರಪ್ಪನವರ ಸರಕಾರ, ಸುಗ್ರೀವಾಜ್ಞೆ ಹೊರಡಿಸಿದ್ದು ಇಂದಿಗೂ ಕರ್ನಾಟಕ ನೀರಾವರಿ ವಿವಾದದಲ್ಲಿ ತೆಗೆದುಕೊಂಡ ದಿಟ್ಟ ತೀರ್ಮಾನವೆಂದೇ ವಿಶ್ಲೇಷಿಸಲಾಗುತ್ತದೆ. ಆದರೆ ಬಂಗಾರಪ್ಪನವರ ಸರಕಾರದ ಈ ನಡೆಯನ್ನು ಕಟುಶಬ್ದದಲ್ಲಿ ಸುಪ್ರೀಂ ಕೋರ್ಟ್ ಟೀಕಿಸಿದ್ದಷ್ಟೇ ಅಲ್ಲದೇ, ಅಂದಿನ ಮುಖ್ಯ ಕಾರ್ಯದರ್ಶಿಗೆ ಕಾನೂನು ಸಂಕಷ್ಟ ಎದುರಾಯಿತು.

ನೀರು ಬಿಡದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎನ್ನುವ ಸ್ಪಷ್ಟ ಎಚ್ಚರಿಕೆ ಯನ್ನು ಕರ್ನಾಟಕ ಸರಕಾರಕ್ಕೆ ನೀಡಿದ ಬಳಿಕ ಅನಿವಾರ್ಯವಾಗಿ ನೀರು ಬಿಡಬೇಕಾ ಯಿತು. ಈ ಘಟನೆಯ ಬಳಿಕ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಕಾಲದಲ್ಲಿ ಈ ಪ್ರಕರಣದ ಬಳಿಕ, ಹಲವು ಬಾರಿ ನೀರು ಹರಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಿದ್ದರೂ ನೀರು ಬಿಡುವುದಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಹೇಳಲು ಯಾವ ಸರಕಾರಗಳೂ ಮುಂದಾಗಲಿಲ್ಲ.

ಹಾಗೆ ನೋಡಿದರೆ, ಕರ್ನಾಟಕ-ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಕಾವೇರಿಯೂ ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ಹರಿದರೂ, ಬಹುಪಾಲು ನೀರು ಕರ್ನಾಟಕ ತಮಿಳುನಾಡಿಗೆ ಹಂಚಿಕೆಯಾಗುವುದರಿಂದ ಈ ಸಮಸ್ಯೆ ಎರಡು ರಾಜ್ಯಗಳ ನಡುವೆ ಉದ್ಭವಿಸುತ್ತದೆ. ವಿವಾದದ ಮೂಲ ನೋಡಿದರೆ, ಸುಮಾರು 130 ವರ್ಷದ ಹಿಂದೆ ಹೋಗುತ್ತದೆ.

1892ರಲ್ಲಿ ಮೈಸೂರು ಸಂಸ್ಥಾನ ಮತ್ತು ಬ್ರಿಟಿಷರ ಆಡಳಿತದಲ್ಲಿದ್ದ ಮದ್ರಾಸ್ ಪ್ರಾಂತ್ಯದ ನಡುವೆ ಒಪ್ಪಂದವಾಗಿತ್ತು. ಮೈಸೂರು ರಾಜರು ಕಾವೇರಿ ಮೇಲ್ದಂಡೆಯಲ್ಲಿರುವ ಮೈಸೂರು ಭಾಗದಲ್ಲಿ ಹೊಸ ನೀರಾವರಿ ಯೋಜನೆ ಗಳನ್ನು ಕೈಗೊಂಡರೆ ಮದ್ರಾಸ್ ಪ್ರಾಂತ್ಯದ ಹಿತಾಸಕ್ತಿಗೆ ಧಕ್ಕೆಯಾಗು ತ್ತದೆ ಎನ್ನುವ ಕಾರಣಕ್ಕೆ ವಿವಾದ ಶುರುವಾಯಿತು. ಆದರೆ ಈ ವಿಷಯದಲ್ಲಿ ಮೈಸೂರು, ಮದ್ರಾಸ್ ಪ್ರಾಂತ್ಯದ ನಡುವೆ ಭಿನ್ನ ನಿಲುವುಗಳ ಹೊರತಾಗಿಯೂ, ಕರ್ನಾಟಕದಲ್ಲಿ (ಅಂದಿನ ಮೈಸೂರು ಪ್ರಾಂತ್ಯ) ನಿರ್ಮಾಣವಾಗುವ ನೀರಾವರಿ ಯೋಜನೆಗಳಿಗೆ ಮದ್ರಾಸ್ ಸರಕಾರದ ಪೂರ್ವಾನುಮತಿ ಪಡೆಯಬೇಕು ಎನ್ನುವ ಸ್ಥಿತಿ ನಿರ್ಮಾಣವಾಯಿತು.

ಸುಮಾರು ಮೂರು ದಶಕದ ತಿಕ್ಕಾಟದ ಬಳಿಕ, 1924ರಲ್ಲಿ ಮೈಸೂರು ಮತ್ತು ಮದ್ರಾಸ್ ನಡುವೆ ಒಪ್ಪಂದ ನಡೆಯಿತು. ಅದರ ಪ್ರಕಾರ ಮೈಸೂರು ಪ್ರಾಂತ್ಯಕ್ಕೆ ಕೆಆರ್‌ಎಸ್ ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿ ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿ, ನೀರಾವರಿ ವಿಸ್ತರಣೆಗೆ ಸಂಬಂಧಿಸಿದ ಕೆಲವೊಂದಷ್ಟು ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು.

ಒಪ್ಪಂದಲ್ಲಿ 50 ವರ್ಷದ ಬಳಿಕ ಮರುಪರಿಶೀಲಿಸಲು ಅವಕಾಶ ನೀಡಲಾಗಿತ್ತು. ಆದ್ದರಿಂದ 1974ನ್ನು ಕಾವೇರಿ ನೀರು ಹಂಚಿಕೆ ವಿವಾದದ ಮತ್ತೊಂದು ಪ್ರಮುಖ ಘಟ್ಟವೆಂದೇ ಹೇಳಲಾಗುತ್ತದೆ. ಮರು ಒಪ್ಪಂದದ ಸಮಯದಲ್ಲಿ ಕರ್ನಾಟಕ ಈ ಹಿಂದಿನ ಒಪ್ಪಂದದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ವಾದಿಸಿದರೆ, ತಮಿಳುನಾಡು ಕಾವೇರಿ ನೀರು ಅವಲಂಬಿಸಿ ಬೆಳೆದ ತನ್ನ ಕೃಷಿ ಪ್ರದೇಶವನ್ನು ರಕ್ಷಿಸಲು ಕ್ರಮವಹಿಸಬೇಕು ಎಂದು ವಾದಿಸಿತ್ತು. ಅಲ್ಲಿಂದ ಈ ವಿವಾದ ಮಾತುಕತೆ ಹಂತ ಮೀರಿ, ರಾಜಕೀಯ ಮತ್ತು ಕಾನೂನು ಹೋರಾಟವಾಗಿ ತಿರುಗಿತು.

ಎರಡು ರಾಜ್ಯಗಳ ನಡುವೆ ಹತ್ತು ಹಲವು ಬಾರಿ ಮಾತುಕತೆ ನಡೆದರೂ ಒಮ್ಮತಕ್ಕೆ ಬರಲು ಸಾಧ್ಯ ವಾಗದೇ ಇದಿದ್ದರಿಂದ 1990ರಲ್ಲಿ ಕೇಂದ್ರ ಸರಕಾರ ಕಾವೇರಿ ಜಲ ವಿವಾದ ನ್ಯಾಯಮಂಡಳಿ ರಚಿಸಿತ್ತು. 1991ರಲ್ಲಿ ನ್ಯಾಯಮಂಡಳಿ ಕರ್ನಾಟಕದಿಂದ ತಮಿಳುನಾಡಿಗೆ ನಿರ್ದಿಷ್ಟ ಪ್ರಮಾಣದ ನೀರು ಹರಿಯಬೇಕೆಂಬ ಮಧ್ಯಂತರ ಆದೇಶ ನೀಡಲಾಯಿತು. ಆದರೆ ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂದು ರಾಜ್ಯಾದ್ಯಂತ ಹೋರಾಟ ನಡೆದಿದ್ದರಿಂದ ಈ ವಿವಾದ ಕೇವಲ ಕೃಷಿ, ನೀರಾವರಿ, ಕುಡಿಯುವ ನೀರಿನ ಪ್ರಶ್ನೆಯಾಗಿ ಉಳಿಯದೇ ಭಾವನಾತ್ಮಕ ಹೋರಾಟವಾಯಿತು.

ಸುಮಾರು 17 ವರ್ಷಗಳ ವಿಚಾರಣೆಯ ಬಳಿಕ ಅಂದರೆ 2007ರಲ್ಲಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿತು. ಅದರನ್ವಯ, ಲಭ್ಯವಿರುವ ಕಾವೇರಿ ನೀರನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ಹಂಚಿಕೆ ಮಾಡಲಾಯಿತು. ಸರಾಸರಿ 740 ಟಿಎಂಸಿ ನೀರಿನ ಪೈಕಿ ತಮಿಳುನಾಡಿಗೆ 419.25 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ ಏಳು ಟಿಎಂಸಿ ನಿಗದಿಯಾಯಿತು.

ಇನ್ನುಳಿದ ನೀರು ಸಮುದ್ರಕ್ಕೆ ಹೋಗಬೇಕೆಂಬ ಆದೇಶವನ್ನು ಪ್ರಕಟಿಸಲಾಗಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ, ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, 2018ರ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ಅಂತಿಮ ಆದೇಶದಲ್ಲಿ, ತಮಿಳುನಾಡು ಪಾಲಿನ 14.75 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಕುಡಿಯುವ ನೀರಿನ ಕಾರಣಕ್ಕಾಗಿ ನೀಡಿ, ಅಂತಿಮವಾಗಿ ಕರ್ನಾಟಕಕ್ಕೆ 284.75 ಟಿಎಂಸಿ, ತಮಿಳುನಾಡಿಗೆ 404.25 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಯಿತು. ಈ ನಡುವೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲುವಿನಲ್ಲಿ 177 ಟಿಎಂಸಿ ನೀರು ಹರಿಯ ಬೇಕು. ಇಡೀ ವ್ಯವಸ್ಥೆಯನ್ನು ನಿರ್ವಹಣೆ ಮಾಡಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿಯನ್ನು ರಚಿಸಲಾಯಿತು.

ಸಾಮಾನ್ಯ ವರ್ಷಗಳಲ್ಲಿ ಯಾವಾಗ ಎಷ್ಟು ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕು ಎನ್ನುವ ಸ್ಪಷ್ಟ ಆದೇಶವಿದೆ. ಆದರೆ ವಿವಾದಕ್ಕೆ ಕಾರಣವಾಗುವುದು ಈ ಆದೇಶವೇ ಎಂದರೆ ತಪ್ಪಾಗುವುದಿಲ್ಲ. ಕೇರಳ, ಕೊಡಗು ಭಾಗದಲ್ಲಿ ಉತ್ತಮ ಮಳೆಯಾದ ಸಮಯದಲ್ಲಿ, ನಿಗದಿಪಡಿಸಿ ರುವ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಹರಿಸಲಾಗುತ್ತದೆ. ಉದಾಹರಣೆಗೆ ಕಳೆದ ವರ್ಷ 450 ಟಿಎಂಸಿಗೂ ಹೆಚ್ಚು ನೀರು ಹರಿದಿದೆ.

ಜಲಶಕ್ತಿ ಇಲಾಖೆ ನೀಡಿರುವ ಅಂಕಿ-ಅಂಶದ ಪ್ರಕಾರ, 2018-19ರಲ್ಲಿ ಸುಮಾರು 405.4 ಟಿಎಂಸಿ ನೀರು ಹರಿದಿದ್ದರೆ, 2022-23ರಲ್ಲಿ 667.483 ಟಿಎಂಸಿ ನೀರು ಹರಿದಿದೆ. ಆದರೆ 2023-24ರಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದರಿಂದ ಕೇವಲ 81 ಟಿಎಂಸಿ ನೀರು ಹರಿಸಲಾಗಿದೆ. ಮಳೆ ಉತ್ತಮವಾಗಿದ್ದ ಸಮಯದಲ್ಲಿ ಹೆಚ್ಚುವರಿ ನೀರಿನ ಲೆಕ್ಕವನ್ನು ನೀಡದ ತಮಿಳುನಾಡು ಸರಕಾರ, ಕಡಿಮೆ ನೀರು ಹರಿದಾಗ ಮಾತ್ರ ತನ್ನ ಧ್ವನಿ ಎತ್ತುತ್ತಿದೆ. ಹೆಚ್ಚುವರಿಯಾಗಿ ಹರಿಯುವ ನೀರನ್ನು ಮುಂದಿನ ವರ್ಷಕ್ಕೆ ತೋರಿಸಲು ಆದೇಶದಲ್ಲಿ ಅವಕಾಶವಿಲ್ಲದಿರುವುದರಿಂದ ಬರಗಾಲದ ವರ್ಷದಲ್ಲಿ ನೀರು ಹಂಚಿಕೆಯ ಸಮಸ್ಯೆ ಎದುರಾಗುತ್ತದೆ.

ಇನ್ನು ಸಂಕಷ್ಟ ವರ್ಷದಲ್ಲಿ ನೀರಿನ ಕೊರತೆ ಎದುರಾದಾಗ ಯಾವ ಪ್ರಮಾಣದಲ್ಲಿ ನೀರನ್ನು ಕಡಿತ ಗೊಳಿಸಬೇಕು ಎನ್ನುವ ವಿಷಯದಲ್ಲಿ ಸ್ಪಷ್ಟನೆ ಇಲ್ಲ. ಒಟ್ಟಾರೆ ಕೊರತೆಯಾಗಿರುವ ನೀರಿನ ಪ್ರಮಾಣವನ್ನು ಸಮಾನವಾಗಿ ಹಂಚಬೇಕು ಎನ್ನುವ ಪ್ರಸ್ತಾಪವಿದೆ. ಉದಾಹರಣೆಗೆ ಶೇ.10ರಷ್ಟು ನೀರು ಕಡಿಮೆ ಸಿಕ್ಕರೆ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿನ ನೀರಿನ ಪ್ರಮಾಣವನ್ನು ಇಷ್ಟೇ ಪ್ರಮಾಣದಲ್ಲಿ ಇಳಿಸಬೇಕು ಎನ್ನುವ ಪ್ರಸ್ತಾಪವಿದೆ. ಆದರೆ ಈ ವಿಷಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿಗೆ ಭಿನ್ನ ಅಭಿಪ್ರಾಯಗಳಿವೆ.

ಸಮೃದ್ಧಿ ವರ್ಷದಲ್ಲಿ ನೀರು ಹರಿಸುವಂತೆ ಸಂಕಷ್ಟದ ವರ್ಷದಲ್ಲಿ ಏನು ಮಾಡಬೇಕು ಎನ್ನುವ ವಿಷಯದಲ್ಲಿ ಸ್ಪಷ್ಟನೆ ಸಿಗಬೇಕಿದೆ. ಪ್ರಮುಖವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಮೊದಲಿಗೆ ಕುಡಿಯುವ ನೀರಿಗೆ ಅಗತ್ಯವಿರುವಷ್ಟು ನೀರನ್ನು ಶೇಖರಿಸಿ, ಬಳಿಕ ಕೃಷಿಗೆ ಎಷ್ಟು ನೀರು ಲಭ್ಯವಿದೆ ಎನ್ನುವುದನ್ನು ಗಮನಿಸಬೇಕು.

ಕೇವಲ ನದಿಯ ಹರಿವನ್ನು ನೆಚ್ಚಿಕೊಳ್ಳದೆ, ತಮಿಳುನಾಡಿನ ಡೆಲ್ಟಾ ಪ್ರದೇಶದಲ್ಲಿ ಲಭ್ಯವಿರುವ ಅಂತರ್ಜಲ ಮಟ್ಟ ಹಾಗೂ ಮಣ್ಣಿನ ತೇವಾಂಶವನ್ನು ಪರಿಗಣಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಈ ಎಲ್ಲವನ್ನು ಮೀರಿ, ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟರೂ, ತಮಿಳುನಾಡಿ ನಲ್ಲಿ ಹಿಂಗಾರು ಮಳೆ ಕೈಹಿಡಿಯುವ ಸಾಧ್ಯತೆಯಿರುತ್ತದೆ. ಆದ್ದರಿಂದ ತಮಿಳುನಾಡಿನಲ್ಲಿ ಹಿಂಗಾರು ಮಳೆಯ ಮುನ್ಸೂಚನೆಗಳನ್ನು ಗಮನಿಸಬೇಕು.

ಮೊದಲೇ ಹೇಳಿದಂತೆ ಕಾವೇರಿ ಎನ್ನುವುದು ಕೇವಲ ನದಿ ವಿವಾದವಾಗಿ ಉಳಿಯದೇ, ಕರ್ನಾಟಕ-ತಮಿಳುನಾಡಿನಲ್ಲಿ ರಾಜಕೀಯ ಅಸವಾಗಿದೆ. ಆದ್ದರಿಂದ ತಮ್ಮ ಪಾಲಿನ ನೀರನ್ನು ಪಡೆಯದೇ ಹೋದರೆ ರಾಜಕೀಯವಾಗಿ ತೀವ್ರ ಹಿನ್ನಡೆಯಾಗುತ್ತದೆ ಎನ್ನುವುದು ತಮಿಳುನಾಡು ರಾಜಕಾರಣಿಗಳ ಲೆಕ್ಕಾಚಾರ. ಇನ್ನೊಂದೆಡೆ ಮಂಡ್ಯ, ಮೈಸೂರು ಭಾಗದ ರೈತರಿಗೆ ನೀರು ಬಿಡದೇ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಸರಕಾರದ ವಿರುದ್ಧ ಹೋರಾಟಗಳು ಶುರುವಾಗುತ್ತದೆ. ಸಂಕಷ್ಟ ಸೂತ್ರವನ್ನು ಅಳವಡಿಸಿ ಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಈ ಭಾವನಾತ್ಮಕ ವಿಷಯವೂ ಒಂದು ಪ್ರಮುಖ ಕಾರಣ.

ಕಾವೇರಿ ನದಿ ವಿವಾದ ನೀರು ಹಂಚುವಿಕೆ ಮೀರಿ ಭಾವನಾತ್ಮಕ ವಿಷಯವಾಗಿರುವುದರಿಂದ ಸಂಕಷ್ಟ ಸೂತ್ರವನ್ನು ಸಿದ್ಧಪಡಿಸಿ ಎರಡೂ ರಾಜ್ಯಗಳು ಒಪ್ಪುವುದು ಸುಲಭವಲ್ಲ. ಆದ್ದರಿಂದ ಕಾನೂನು ಮೀರಿದ ಪ್ರಕೃತಿಯ ಕೃಪೆಯಿಂದ ಮಾತ್ರವೇ ಈ ವಿವಾದ ತಣ್ಣಗಾಗಿಸಲು ಸಾಧ್ಯ. ಉದಾಹರಣೆಗೆ, ಕೆಲ ದಿನಗಳ ಹಿಂದೆ ಮಳೆ ಕೊರತೆ ಇದ್ದಿದ್ದರಿಂದ 3500 ಕ್ಯುಸೆಕ್ ನೀರು ಹರಿಸುವುದು ಸವಾಲು ಎನ್ನುವ ಪರಿಸ್ಥಿತಿ ಇತ್ತು. ಆದರೆ ನಾಲ್ಕೈದು ದಿನದ ಮಳೆಯಿಂದ ಇಡೀ ವಿವಾದವೇ ತಣ್ಣಗಾಗಿ ಪ್ರಾಧಿಕಾರ ಹೇಳಿದ್ದಕ್ಕಿಂತ ಹೆಚ್ಚು ನೀರು ಹರಿಯುವಂತಾಯಿತು. ರಾಜಕೀಯ, ಭಾವನಾತ್ಮಕ ವಿಷಯವಾಗಿರುವ ಕಾವೇರಿಯ ವಿವಾದ ತಣ್ಣಗಾಗಿಸಲು ಪ್ರಕೃತಿಯಿಂದ ಮಾತ್ರ ಸಾಧ್ಯ!