Lokesh Kaayarga Column: ಸೇನೆಯ ಆದರ್ಶ ನಮಗೆ ಪಾಠವಾಗಬೇಕಿದೆ
ಶತ್ರು ದೇಶದ ಮೇಲೆ ಮುಗಿ ಬೀಳಲು ರೋಷಾವೇಶ ಬೇಕೇಬೇಕು. ಆದರೆ ಹೇಗೆ ಯುದ್ಧ ಮಾಡಬೇಕು. ಹೇಗೆ ಸುಲಭವಾಗಿ ಮಣಿಸಬೇಕು ಎನ್ನುವಲ್ಲಿ ನಮ್ಮ ಜಾಣ್ಮೆ ಮತ್ತು ವಿವೇಕ ಹೆಚ್ಚು ಕೆಲಸ ಮಾಡಬೇಕು. ಆಪರೇಶನ್ ಸಿಂದೂರ ಮತ್ತು ಆ ಬಳಿಕದ ಸಂಘರ್ಷದಲ್ಲಿ ಭಾರತೀಯ ಸೇನೆ ಪ್ರದರ್ಶಿಸಿದ ಸಮಯೋ ಚಿತ ನಡೆಯಲ್ಲಿ ಇವೆಲ್ಲವೂ ಇತ್ತು. ಪಹಲ್ಗಾಮ್ ದಾಳಿಗೆ ನಮ್ಮಲ್ಲಿಯೇ ಅವರಿವರನ್ನು ಬೊಟ್ಟು ಮಾಡುತ್ತಿದ್ದಾಗ ಸೇನೆ ತೆಗೆದುಕೊಂಡ ಸಾಂದರ್ಭಿಕ ನಿರ್ಧಾರಗಳು ದೇಶವನ್ನು ಒಟ್ಟಾಗಿಸಿದ್ದು ಗಮನಾರ್ಹ. ದೇಶ ಮೊದಲು ಎಂಬ ಸೇನೆಯ ಧ್ಯೇಯ ನಮಗೆ ಮಾದರಿಯಾಗಬೇಕಿದೆ.


ಲೋಕಮತ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಉಗ್ರರು ಮತ್ತು ಅವರ ಪೋಷಕರಿಗೆ ನಾವು ಪಾಠ ಕಲಿಸುತ್ತೇವೆ ಎಂದಿದ್ದಾಯಿತು. ತಕ್ಕ ಪಾಠ ಕಲಿಸಿಯೂ ಆಯಿತು. ಭಾರತೀಯರು ಹೇಡಿಗಳು ಎಂದಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಬಾಯಿ ಮುಚ್ಚಿಸಿದ್ದಾ ಯಿತು. ಈಗ ನಾವು ಬಾಯಿ ತೆರೆಯಲು ಆರಂಭಿಸಿದ್ದೇವೆ. ಆಪರಷನ್ ಸಿಂದೂರ ಕಾರ‍್ಯಾಚರಣೆ ನಿಲ್ಲಿಸಬಾರದಿತ್ತು. ವೈರಿ ರಾಷ್ಟ್ರದ ವಿರುದ್ಧ ನಿರ್ಣಾಯಕ ಯುದ್ಧ ಸಾರಬೇಕಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಇದು ಸಕಾಲವಾಗಿತ್ತು. ಸರಕಾರ ನಮ್ಮ ಯೋಧರ ಕೈ ಕಟ್ಟಿ ಹಾಕಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಕದನ ವಿರಾಮ ಘೋಷಿಸುವ ನಿರ್ಧಾರ ತೆಗೆದು ಕೊಂಡಿದೆ... ಇತ್ಯಾದಿ ಮಾತುಗಳು ಕೇಳಿ ಬರುತ್ತಿವೆ. ಯಾವುದೇ ಯುದ್ಧ ಶತ್ರುದೇಶವನ್ನು ಮಣಿಸುವ ಜತೆಗೆ ದೇಶವಾಸಿಗಳನ್ನು ಒಂದುಗೂಡಿಸಬೇಕು.
ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ವೈರಿ ರಾಷ್ಟ್ರದ ಆಕ್ರಮಣವನ್ನು ಮಣಿಸಬೇಕು. ಆಪರೇಶನ್ ಸಿಂದೂರ ಈ ನಿಟ್ಟಿನಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದೆ. ಒಂದೆರಡು ಅಪಸ್ವರಗಳ ಹೊರತಾಗಿಯೂ ಪಾಕ್ ವಿರುದ್ಧ ನಮ್ಮ ಸೇನೆಯ ಹೋರಾಟಕ್ಕೆ ರಾಜಕೀಯ ನಾಯಕರೆಲ್ಲರೂ ಒಕ್ಕೊರಲ ಬೆಂಬಲ ನೀಡಿದ್ದಾರೆ. 140 ಕೋಟಿ ದೇಶವಾಸಿಗಳ ನಂಬಿಕೆಗೆ ತಕ್ಕಂತೆ ನಮ್ಮ ಸೇನೆ ತನ್ನ ಕಾರ‍್ಯಾಚರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.
ನಿರ್ಣಾಯಕ ಯುದ್ಧ ನಡೆದರೆ ಭಾರತದ ಎದುರು ತಾನೆಷ್ಟು ದುರ್ಬಲ ಎನ್ನುವುದು ಪಾಕಿಸ್ತಾನಕ್ಕೆ ಮನವರಿಕೆಯಾಗಿದೆ. ಇಷ್ಟಾದರೂ ಅಲ್ಲಿನ ಸೇನೆ, ನಾಯಕರು ಮತ್ತು ಕ್ರಿಕೆಟಿಗರು ನಾವೇ ಗೆದ್ದವ ರೆಂದು ಹೇಳಿಕೊಂಡು ಮಾಧ್ಯಮಗಳ ಮುಂದೆ ಬೊಗಳೆ ಬಿಡುವ ಕೆಲಸ ಬಿಟ್ಟಿಲ್ಲ. ಪಾಕಿಸ್ತಾನದ ವಿಚಾರ ಏನೇ ಇರಲಿ. ಈ ಯುದ್ಧದ ಮೂಲಕ ನಮ್ಮ ಸೇನೆ ಹಲವು ಪಾಠಗಳನ್ನು ಹೇಳಿಕೊಟ್ಟಿದೆ.
ಇದರಲ್ಲಿ ಮತೀಯ ಸೂಕ್ಷ್ಮ ವಿಚಾರಗಳಿಂದ ಹಿಡಿದು ಕಷ್ಟದ ಸನ್ನಿವೇಶವನ್ನು ಒಟ್ಟಾಗಿ ಹೇಗೆ ಎದುರಿಸಬೇಕೆಂಬ ಪಾಠವೂ ಸೇರಿದೆ. ದೇಶದ ನಾಗರಿಕರೆಲ್ಲರಿಗೂ ಸೇನೆಯ ಈ ಆದರ್ಶ, ಮೌಲ್ಯಗಳು ಪಾಠವಾಗಬೇಕಿದೆ. ಮೇ ಆರರಂದು ರಾತ್ರಿ ಉಗ್ರರ ವಿರುದ್ಧ ಕಾರ‍್ಯಾಚರಣೆಯನ್ನು ಯೋಜಿಸಿದ ರೀತಿ, ಎಣಿಕೆಯಂತೆ ಕಾರ‍್ಯಗತಗೊಳಿಸಿದ ವಿಧಾನ ಮತ್ತು ಮರುದಿನ ಬೆಳಿಗ್ಗೆ ಕಾರ‍್ಯಾಚರಣೆಯ ಮಾಹಿತಿ ಹಂಚಿಕೊಳ್ಳುವವರೆಗೂ ನಮ್ಮ ಸೇನೆ ಅತ್ಯಂತ ವೃತ್ತಿಪರವಾಗಿ ಕಾರ‍್ಯನಿರ್ವಹಿಸಿರುವುದು ಗಮನಾರ್ಹ.

ಆ ಬಳಿಕ ಪಾಕ್ ಸೇನೆಯ ದುಸ್ಸಾಹಸಕ್ಕೆ ಉತ್ತರ ನೀಡುವಲ್ಲೂ ನಮ್ಮ ಸೇನೆ ತೋರಿಸಿದ ಸಂಯಮ, ದಕ್ಷತೆ, ಪೂರ್ವ ಸಿದ್ಧತೆ ಮತ್ತು ಕರಾವಾಕ್ಕಾದ ದಾಳಿ ವಿಶ್ವದ ಗಮನ ಸೆಳೆದಿದೆ. ಕಾರ್ಪೋರೇಟ್ ಕಂಪನಿಯೊಂದು ತನ್ನ ಸೇವೆ ನೀಡುವಲ್ಲಿ ಯಾವ ರೀತಿಯಲ್ಲಿ ಎಚ್ಚರಿಕೆ ಮತ್ತು ಮುತುವರ್ಜಿ ವಹಿಸುತ್ತದೋ ಅದೆಲ್ಲವನ್ನೂ ಈ ಕಾರ‍್ಯಾಚರಣೆಯಲ್ಲಿ ಕಾಣಬಹುದಿತ್ತು.
ಮುಖ್ಯವಾಗಿ ‘ಆಪರೇಷನ್ ಸಿಂದೂರ’ ಎಂಬ ಹೆಸರೇ ಭಾರತೀಯರೆಲ್ಲರನ್ನೂ ಒಂದೇ ದಾರದಡಿ ಪೋಣಿಸುವಂತಿತ್ತು. ಆ ಬಳಿಕ ಸೇನೆಯ ಪರವಾಗಿ ಈ ಕಾರ‍್ಯಾಚರಣೆಯ ವಿವರ ನೀಡಲು ವಿದೇ ಶಾಂಗ ಕಾರ‍್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ಆಯ್ಕೆ ಮಾಡುವ ಮೂಲಕವೂ ಸೇನೆ ಉಗ್ರರಿಗೆ ಮಾತ್ರವಲ್ಲ ಉಗ್ರ ಪೋಷಕ ರಾಷ್ಟ್ರಗಳಿಗೂ ಸಂದೇಶ ರವಾನಿಸಿತ್ತು.
ಫಲಿಸದ ಉಗ್ರರ ತಂತ್ರ
ಪಹಲ್ಗಾಮ್ ದಾಳಿಯ ಬಳಿಕ ಸ್ಥಳೀಯ ಕಾಶ್ಮೀರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳೀಯರ ಕೈವಾಡವಿಲ್ಲದೆ ಇಂತಹ ದಾಳಿ ಸಾಧ್ಯವಿಲ್ಲವೆಂಬ ಮಾತು ಕೇಳಿ ಬಂದಿತ್ತು. ಅದರಲ್ಲೂ ಹಿಂದೂ ಧರ್ಮಿಯರನ್ನು ಗುರಿ ಮಾಡಿಕೊಂಡು ದಾಳಿ ಮಾಡಿದ್ದು ಹಿಂದೂ-ಮುಸ್ಲಿಂ ವಿದ್ವೇಷಕ್ಕೆ ಕಾರಣ ವಾಗಿತ್ತು. ಕೋಮು ಪ್ರಚೋದನೆಯ ಮೂಲಕ ಅಶಾಂತಿ ಸೃಷ್ಟಿಸುವುದು ಪಾಕ್ ಪ್ರೇರಿತ ಭಯೋ ತ್ಪಾದಕರ ಹುನ್ನಾರವೂ ಆಗಿತ್ತು.
ಇದನ್ನೂ ಓದಿ: Lokesh Kaayarga Column: ಸೇನೆಯ ಜತೆಗೆ ನಾವೂ ಸಮರ ಸನ್ನದ್ಧರಾಗಬೇಕಿದೆ !
ಕೆಲವು ಕಿಡಿಗೇಡಿಗಳು ಈ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವ, ಗೋಡೆ ಬರಹಗಳನ್ನು ಬರೆಯುವ ಮತ್ತು ಜಾಲತಾಣಗಳಲ್ಲಿ ವಿಷ ಕಾರುವ ಮೂಲಕ ಪಾಕಿಸ್ತಾನದ ಸಂಚಿಗೆ ಸಹಕರಿಸಿದ್ದರು. ಇದೇ ನೆಪದಲ್ಲಿ ಮಂಗಳೂರಿನಲ್ಲಿ ಯುವಕನೊಬ್ಬನ ಹತ್ಯೆ ನಡೆದಿತ್ತು. ಆದರೆ ಕರ್ನಲ್ ಸೋಫಿಯಾ ಖುರೇಶಿ ಅವರು ಉಗ್ರರ ನೆಲೆಗಳನ್ನು ಗುರಿ ಮಾಡಿಕೊಂಡು ಭಾರತ ನಡೆಸಿದ ಕಾರ‍್ಯಾಚರಣೆಯ ವಿವರ ನೀಡುತ್ತಿದ್ದಂತೆಯೇ ಇಡೀ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿತ್ತು.
ಭಾರತೀಯ ಸೇನೆಯಲ್ಲಿ ನಾನಾ, ಜಾತಿ, ಪಂಗಡ ಮತ್ತು ಭಾಷಾ ಹಿನ್ನೆಲೆಯ ಯೋಧರು ಇರುವಂತೆ ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಸೇರಿದಂತೆ ಎಲ್ಲ ಧರ್ಮಿಯರು ಇದ್ದಾರೆ. ಇವರೆಲ್ಲರಿಗೂ ಮಾತೃಭೂಮಿಯ ರಕ್ಷಣೆಯೇ ಪರಮೋಚ್ಚ ಎನ್ನುವುದನ್ನು ಈ ನಡೆ ಎತ್ತಿ ತೋರಿಸಿತ್ತು. ಮುಸ್ಲಿಮ್ ಹೆಣ್ಣು ಮಗಳೊಬ್ಬಳು ಸೇನೆಯ ಮುಂಚೂಣಿ ಸ್ಥಾನದಲ್ಲಿ ಇದ್ದಾಳೆ ಎನ್ನುವುದು ಭಾರತೀಯ ಸೇನೆಯ ಬಹುತ್ವಕ್ಕೆ ಸಾಕ್ಷಿಯಾಗಿತ್ತು. ಈ ನಡೆ ದೇಶದ ಹೃದಯವನ್ನು ತೆರೆದಿಟ್ಟಿತ್ತು.
ಕರ್ನಲ್ ಸೋಫಿಯಾ ಖುರೇಶಿ ಅವರ ಉಪಸ್ಥಿತಿ ಧರ್ಮದ ಹೆಸರು ಹೇಳಿಕೊಂಡು ದೇಶದ ಮೇಲೆ ಜಿಹಾದ್ ಸಾರಿದವರ ಪೊಳ್ಳುತನವನ್ನು ಬಯಲು ಮಾಡಿತ್ತು. ನಾವೂ ಈ ದೇಶದ ರಕ್ಷಣೆಗೆ ನಿಂತಿ ದ್ದೇವೆ ಎಂದು ತಮ್ಮ ಧರ್ಮಿಯರಲ್ಲಿ ಹೆಮ್ಮೆ ಮೂಡಿಸಿದ ಖುರೇಷಿ, ಎಲ್ಲ ಅನರ್ಥಗಳಿಗೂ ಒಂದು ಸಮುದಾಯವನ್ನು ಗುರಿ ಮಾಡಿದವರ ಬಾಯಿ ಮುಚ್ಚಿಸಿದ್ದರು.
ಝಕೀರ್ ನಾಯ್ಕ್‌ನಂತಹ ಅರೆಬೆಂದ ಮತಪ್ರಚಾರಕರ ಮಾತು ಕೇಳಿ ಮುಸ್ಲಿಮ್ ಹೆಣ್ಣು ಮಕ್ಕಳು ಬುರ್ಖಾ ಧರಿಸಿ ಮನೆಯಲ್ಲಿರಬೇಕೆಂದು ಬಯಸುವ ಸಂಕುಚಿತ ಮನಸ್ಸುಗಳಿಗೆ, ‘ಜೈ ಹಿಂದ್, ವಂದೇ ಮಾತರಂ’ ಎಂದು ದೇಶದ ಪರ ಘೋಷಣೆ ಕೂಗಲು ಹಿಂದೇಟು ಹಾಕುವವರಿಗೂ ಕರ್ನಲ್ ಖುರೇಷಿ ಉತ್ತರವಾಗಿ ನಿಂತಿದ್ದರು. ಈ ದೇಶದ ಅರ್ಧದಷ್ಟಿರುವ ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತ ರಾಗಬೇಕಾದ ಇಲ್ಲವೇ ಕಠಿಣ ಕೆಲಸಗಳಿಂದ ದೂರವುಳಿಯಬೇಕಾದ ಅಗತ್ಯ ಇಲ್ಲ ಎನ್ನುವುದನ್ನು ಈ ಇಬ್ಬರು ಸಮವಸಧಾರಿ ಹೆಣ್ಣು ಮಕ್ಕಳು ತೋರಿಸಿ ಕೊಟ್ಟಿದ್ದರು.
ಇದಕ್ಕೂ ಮೊದಲು ಪಹಲ್ಗಾಮ್ ದಾಳಿಯ ಬಳಿಕ ನಡೆದ ಉಗ್ರರ ದಮನ ಕಾರ‍್ಯಾಚರಣೆಯಲ್ಲಿ ಮುಸ್ಲಿಂ ಯೋಧರೊಬ್ಬರು ಹುತಾತ್ಮರಾಗಿದ್ದರು. ಧರ್ಮದ ನೆಲೆಯಲ್ಲಿ ಈ ದೇಶವನ್ನು ಒಡೆಯುವ, ಒಂದು ಸಮುದಾಯದ ಸಹಾನುಭೂತಿ ಗಳಿಸುವ ಪಾಕ್‌ನ ಕುತ್ಸಿತ ಸಂಚನ್ನು ನಮ್ಮ ಸೇನೆ ಆರಂಭ ದಲ್ಲೇ ಹೊಡೆದು ಹಾಕಿತ್ತು.
ಕಾಶ್ಮೀರಿ ಮೂಲದ ವಿದೇಶಾಂಗ ಕಾರ‍್ಯದರ್ಶಿ ವಿಕ್ರಮ್ ಮಿಶ್ರಿ ಅವರ ಉಪಸ್ಥಿತಿ ಪಂಡಿತ ಸಮುದಾಯದ ಲಕ್ಷಾಂತರ ಮೂಲನಿವಾಸಿಗಳು ಕಾಶ್ಮೀರದಲ್ಲಿ ನೆಲೆ ಕಳೆದುಕೊಂಡ ಘಟನೆಯನ್ನು ನೆನಪಿಸುವಂತಿತ್ತು. ದೇಶ ರಕ್ಷಣೆಯ ವಿಷಯ ಬಂದಾಗ ಇಡೀ ಭಾರತ ಹಿಂದೆಯೂ ಒಂದಾಗಿ ನಿಂತಿತ್ತು. ಈ ಬಾರಿಯೂ ನಿಂತಿದೆ. ಮುಂದೆಯೂ ನಿಲ್ಲಲಿದೆ ಎಂಬ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆ ರವಾನೆಯಾಗಿದೆ.
ಸಂಯಮದ ಪ್ರದರ್ಶನ
ಆಪರೇಷನ್ ಸಿಂದೂರ ಭಯೋತ್ಪಾದನೆ ವಿರುದ್ಧದ ಕಾರ‍್ಯಾಚರಣೆಯಾಗಿದ್ದು ಇದು ಪಾಕ್ ಸೇನೆ ಇಲ್ಲವೇ ನಾಗರಿಕರ ವಿರುದ್ಧ ಸಾರಿದ ಸಮರ ಅಲ್ಲ ಎಂದು ಸಾರಿ ಹೇಳುವ ಮೂಲಕ ಭಾರತ ಆರಂಭದಲ್ಲಿಯೇ ಜಗತ್ತಿನ ಇತರ ದೇಶಗಳ ಬೆಂಬಲ ಪಡೆಯಲು ಸಫಲವಾಗಿತ್ತು. 60ಕ್ಕೂ ಹೆಚ್ಚು ಮುಸ್ಲಿಂ ದೇಶಗಳ ಪೈಕಿ ಟರ್ಕಿ ಬಿಟ್ಟರೆ ಇನ್ನಾವ ದೇಶವೂ ಪಾಕಿಸ್ತಾನದ ಪರ ಹೇಳಿಕೆ ನೀಡಲಿಲ್ಲ ಎನ್ನುವುದು ಗಮನಾರ್ಹ.
ಪರಮಾಪ್ತ ರಾಷ್ಟ್ರ ಚೀನಾ ಕೂಡ ಉಗ್ರರ ವಿರುದ್ಧದ ಕಾರ‍್ಯಾಚರಣೆಯನ್ನು ಸಮರ್ಥಿಸುವಂತಿರ ಲಿಲ್ಲ. ಇನ್ನೊಂದೆಡೆ ಅಪರೇಷನ್ ಸಿಂದೂರ ಮತ್ತು ಆನಂತರ ಪಾಕ್ ಮೇಲೆ ಪ್ರತಿದಾಳಿಯ ಸಂದರ್ಭದಲ್ಲೂ ಭಾರತೀಯ ಸೇನೆ ಗರಿಷ್ಠ ಸಂಯಮ ವಹಿಸಿ ನಾಗರಿಕರ ಸಾವು-ನೋವು ಗಳಾಗದಂತೆ ಎಚ್ಚರಿಕೆ ವಹಿಸಿತ್ತು.
ಇದಕ್ಕೆ ತದ್ವಿರುದ್ಧವಾಗಿ ಪಾಕ್ ಸೇನೆ ಗಡಿ ರಾಜ್ಯಗಳಲ್ಲಿ ನಮ್ಮ ನಾಗರಿಕರನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸುವ ಮೂಲಕ 35ಕ್ಕೂ ಹೆಚ್ಚು ನಾಗರಿಕರ ಸಾವಿಗೆ ಕಾರಣವಾಗಿತ್ತು. ದಾಳಿಯ ಸಂದರ್ಭಗಳಲ್ಲಿ ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ನಾಯಕರು ಒಂದಕ್ಕೊಂದು ತದ್ವಿರುದ್ಧ ಹೇಳಿಕೆ ನೀಡಿದರೆ, ಭಾರತದ ಸೇನೆ ಇಲ್ಲವೇ ನಾಯಕರು ಎಡಬಿಡಂಗಿ ಹೇಳಿಕೆಗಳನ್ನು ನೀಡಲಿಲ್ಲ.
ಪಾಕಿಸ್ತಾನ ಈ ಹಿಂದೆ ಅಮೆರಿಕದ ಕೈ ಗೊಂಬೆಯಾಗಿ ಉಗ್ರರಿಗೆ ಶಸ್ತ್ರಾಸ್ತ್ರ ತರಬೇತಿ ಮತ್ತು ವಿಧ್ವಂಸಕ ಕೃತ್ಯ ಎಸಗಲು ಕಳುಹಿಸಿದ್ದನ್ನು ಒಪ್ಪಿಕೊಳ್ಳುವ ಮೂಲಕ ಅಲ್ಲಿನ ರಕ್ಷಣಾ ಸಚಿವರೇ ಸೆಲ್ಫ್ ಗೋಲು ಹೊಡೆದಿದ್ದರು.
ಉಗ್ರರಿಗೆ ಸೇನಾ ಗೌರವ
ಕಾರ್ಗಿಲ್ ಯುದ್ಧದ ವೇಳೆ ಭಾರತದ ವಿರುದ್ಧ ಹೋರಾಡಿ ಮೃತಪಟ್ಟ ತನ್ನ ನೂರಾರು ಸೈನಿಕರ ಶವಗಳನ್ನು ಹಿಂಪಡೆಯಲು ಪಾಕ್ ನಿರಾಕರಿಸಿತ್ತು. ಈ ಮೂಲಕ ಹುತಾತ್ಮ ಯೋಧರ ದೇಶಸೇವೆ ಯನ್ನು ಅವಮಾನಿಸಿತ್ತು. ಆದರೆ ಈ ಬಾರಿ ಆಪರೇಷನ್ ಸಿಂದೂರ ಕಾರ‍್ಯಾಚರಣೆ ವೇಳೆ ಮಡಿದ ಉಗ್ರರ ದ-ನದ ವೇಳೆ ಸೇನೆಯ ಹಿರಿಯ ಸಮವಸಧಾರಿ ಅಧಿಕಾರಿಗಳೇ ಹಾಜರಿದ್ದರು. ಮೃತ ಉಗ್ರರು ಮತ್ತು ಅವರ ಕುಟುಂಬ ಸದಸ್ಯರ ಶವಗಳ ಮೇಲೆ ರಾಷ್ಟ್ರಧ್ವಜ ಹೊದಿಸುವ ಮುಲಕ ಪಾಕ್ ಅಂತಾ ರಾಷ್ಟ್ರೀಯ ಸಮುದಾಯದ ಮುಂದೆ ಬೆತ್ತಲಾಗಿ ನಿಂತಿತ್ತು. ಇದು ಸಾಲದೆಂಬಂತೆ ಭಾರತದ ದಾಳಿ ಯಿಂದಾದ ನಷ್ಟಗಳನ್ನು ಮುಚ್ಚಿಡಲು ಪ್ರಯತ್ನಿಸಿ ನೆರೆ ರಾಷ್ಟ್ರ ನಗೆಪಾಟಲಿಗೀಡಾಗಿತ್ತು.
‘ಭಾರತದ ರಫೆಲ್ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಮಹಿಳಾ ಪೈಲಟ್ ಸೆರೆ ಸಿಕ್ಕಿದ್ದಾರೆ’ ಇತ್ಯಾದಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಪಾಕ್ ತನ್ನದೇ ದೇಶದ ನಾಗರಿಕರಿಂದ ಟ್ರೋಲ್ ಆಗಿತ್ತು. ಆದರೆ ಭಾರತದ ಸೇನೆ ಎಂದೂ ದೇಶದ ಜನರ ದಿಕ್ಕು ತಪ್ಪಿಸಲಿಲ್ಲ. ನಮ್ಮ ಸೇನೆಯ ವಕ್ತಾರರು ದೈನಂದಿನ ಪತ್ರಿಕಾಗೋಷ್ಠಿಗಳಲ್ಲಿ ದಾಳಿ ಕುರಿತ ವಿಡಿಯೋ ಇಲ್ಲವೇ ಫೋಟೋ ಸಾಕ್ಷಿಗಳನ್ನು ಮುಂದಿಡುವ ಮೂಲಕ ಎಲ್ಲ ಕಾರ‍್ಯಾಚರಣೆಗಳಿಗೂ ಸಾಕ್ಷಿ ನೀಡಿದ್ದರು.
ನಾಗರಿಕರ ಒಗ್ಗಟ್ಟು ಸೇನೆಗೆ ಬಲ
ಕದನವಿರಾಮ ಘೋಷಣೆಯಾಗುತ್ತಿದ್ದಂತೆ ಎಂದಿನಂತೆ ನಮ್ಮ ರಾಜಕೀಯ ನಾಯಕರ ಕಚ್ಚಾಟ ಆರಂಭವಾಗಿದೆ. ಪಾಕಿಸ್ತಾನವನ್ನು ಸಂಪೂರ್ಣವಾಗಿ ಬಗ್ಗು ಬಡಿಯಲು ಅವಕಾಶವಿದ್ದರೂ ಅಮೆರಿಕದ ಒತ್ತಡಕ್ಕೆ ಮಣಿದು ಏಕಾಏಕಿ ಕದನ ವಿರಾಮ ಘೋಷಿಸಲಾಗಿದೆ ಎನ್ನುವುದು ಅನೇಕರ ದೂರು. ಆದರೆ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯುದ್ಧ ಆರಂಭಿಸುವ ಇಲ್ಲವೇ ನಿಲ್ಲಿ ಸುವ ನಿರ್ಧಾರಗಳನ್ನು ಒಬ್ಬಿಬ್ಬರು ತೆಗೆದುಕೊಳ್ಳಲು ಸಾಧ್ಯವಿಲ್ಲ.
ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಗೃಹಸಚಿವರು, ಭದ್ರತಾ ಸಲಹೆಗಾರರು ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸಮಾಲೋಚನೆ ನಡೆಸಿದ ಬಳಿಕವೇ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯ. ಶತ್ರುದೇಶದ ದಾಳಿಯನ್ನು ಸಮರ್ಥವಾಗಿ ತಡೆದು, ಅಲ್ಲಿನ ಒಂಬತ್ತಕ್ಕೂ ಹೆಚ್ಚು ವಾಯು ನೆಲೆಗಳನ್ನು ಧ್ವಂಸ ಮಾಡಿದ ಸೇನೆಯನ್ನು ದೂರವಿಟ್ಟು ಕದನ ವಿರಾಮಕ್ಕೆ ಮುಂದಾಗಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಇನ್ನಷ್ಟು ಚರ್ಚೆ ಅನಗತ್ಯ. ಭಾರತವು ಇನ್ನು ಮುಂದೆ ಭಯೋತ್ಪಾ ದಕ ದಾಳಿಗಳನ್ನು ಸಹಿಸುವುದಿಲ್ಲ.
ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ. ಆಪರೇಷನ್ ಸಿಂದೂರ ಭಾರತದ ಮುಂದಿನ ರಣ ನೀತಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಅಣ್ವಸ್ತ್ರ ದಾಳಿಯ ಬೆದರಿಕೆಯೊಡ್ಡಿ ಇನ್ನು ಪಾಕ್ ಆಟ ನಡೆಯದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ಭಾರತದ ರಾಜತಾಂತ್ರಿಕ ನಿಲುವಿನಲ್ಲಿ ಮಹತ್ವದ ಬದಲಾವಣೆ. ಭವಿಷ್ಯದಲ್ಲಿ ಇಂತಹ ಮತ್ತಷ್ಟು ಕಾರ‍್ಯಾಚರಣೆಗಳಿಗೆ ನಮ್ಮ ಸೇನೆ ಮತ್ತು ನಾವು ಸಿದ್ಧರಾಗಿರ ಬೇಕಾದ ಮುನ್ಸೂಚನೆ.
ರಕ್ಷಣಾ ಸಾಮರ್ಥ್ಯದ ಪ್ರದರ್ಶನ
ಈ ಸಂಘರ್ಷದಲ್ಲಿ ನಮ್ಮ ಸಶಸ್ತ್ರ ಪಡೆಗಳು ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳ ಸಣ್ಣ ಪರಿಚಯವಾಗಿದೆ. ನಮ್ಮ ವೈಮಾನಿಕ ರಕ್ಷಣಾ ವ್ಯವಸ್ಥೆಯು ಶತ್ರುಗಳ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಯಶಸ್ವಿಯಾಗಿ ತಡೆದಿದೆ. ಮೂರುಪಡೆಗಳ ನಡುವಿನ ಸಮನ್ವಯ ತೆಗೂ ಸಾಕ್ಷಿಯಾಗಿದೆ. ಸೇನಾ ಬಲದ ಜತೆ ನಮ್ಮ ಗುಪ್ತಚರ ದಳ ಎಷ್ಟು ಬಲವಾಗಿದೆ ಎನ್ನುವುದೂ ಜಗತ್ತಿಗೆ ಗೊತ್ತಾಗಿದೆ. ಈ ದೃಷ್ಟಿಯಿಂದ ಆಪರೇಶನ್ ಸಿಂದೂರವು ಭಾರತದ ಭದ್ರತಾ ನೀತಿಯಲ್ಲಿ ಒಂದು ಮಹತ್ವದ ತಿರುವು. ಇದು ಭಯೋತ್ಪಾದನೆಯನ್ನು ಎದುರಿಸಲು ಭಾರತದ ದೃಢ ಸಂಕಲ್ಪ ವನ್ನು ಜಗತ್ತಿಗೆ ಸಾರಿ ಹೇಳಿದೆ. ಭವಿಷ್ಯದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಭಾರತವನ್ನು ಸನ್ನದ್ಧಗೊಳಿಸಿದೆ. ನಮ್ಮ ವೃತ್ತಿಪರ ಸೇನೆ ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ‘ದೇಶ ಮೊದಲು’ ಸೇನೆಯ ತತ್ವ, ಆದರ್ಶಗಳನ್ನು ನಾವೂ ಪಾಲಿಸಬೇಕಿದೆ.