ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಪ್ರತ್ಯೇಕ ಧರ್ಮವೆಂಬ ಅಪ್ರಸ್ತುತ ಪ್ರಸಂಗ...

‘ರಾಷ್ಟ್ರೀಯ ಅಲ್ಪಸಂಖ್ಯಾತ’ ಸ್ಥಾನಮಾನವನ್ನು ಪಡೆದ ಆರು ಧರ್ಮಗಳೆಂದರೆ ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಮತ್ತು ಝೋರಾಸ್ಟ್ರಿಯನ್. ಈ ಆರು ಧರ್ಮಗಳ ಜತೆಗೆ, ಭಾರತವು ಇತರ ಅನೇಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಅನುಯಾಯಿಗಳಿಗೆ ನೆಲೆಯಾಗಿದೆ ಎನ್ನುವುದು ವಿಶೇಷ.

ವಿದ್ಯಮಾನ

vinayakavbhat@autoaxle.com

ಹಿಂದೂ ಸಂಪ್ರದಾಯದಲ್ಲಿ ಶಾಕ್ತರು, ಶೈವರು, ವೈಷ್ಣವರು ನಯ್ಯಾಯಿಕರು, ಬಹುದೇವತಾ ಉಪಾಸಕರು ಅಥವಾ ಏಕದೇವತಾ ಉಪಾಸಕರು, ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ನಾಸ್ತಿಕರು ಹೀಗೆ ಎಲ್ಲರಿಗೂ ಸ್ಥಾನವನ್ನು ಕೊಟ್ಟಿದೆ. ಆಚರಣೆಯ ಆಧಾರದಲ್ಲಿ ಹೀಗೆ ಒಂದೊಂದೇ ಅವಯವ ಕಳಚುತ್ತಾ ಹೋದರೆ, ದೇಹ (ಸಮಗ್ರ ಹಿಂದೂ ಧರ್ಮ) ಅಂತ ಉಳಿಯುವುದಾದರೂ ಹೇಗೆ? ಹಿಂದೂ ಧರ್ಮದೊಳಗಿನ ಎಲ್ಲ ಸಂಪ್ರದಾಯಗಳು ಹೀಗೆ ಪ್ರತ್ಯೇಕ ಧರ್ಮವನ್ನು ಕೇಳಲು ಶುರುಮಾಡಿದರೆ ಏನಾಗಬಹುದು?

ಭಾರತದ ಸಂವಿಧಾನವು ಅಧಿಕೃತವಾಗಿ ನಿರ್ದಿಷ್ಟ ಸಂಖ್ಯೆಯ ಧರ್ಮಗಳನ್ನು ಗುರುತಿಸುವುದಿಲ್ಲ, ಏಕೆಂದರೆ ದೇಶವನ್ನು ಜಾತ್ಯತೀತ ಹಾಗೂ ಧರ್ಮನಿರಪೇಕ್ಷತೆಯ ತತ್ವದ ಆಧಾರದಲ್ಲಿ ಸ್ಥಾಪಿಸಲಾಗಿದೆ. ಇದರರ್ಥ, ದೇಶದಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಬೇಕು ಎನ್ನುವುದಾಗಿದೆ ಹಾಗೂ ಬಹುಧರ್ಮೀಯತೆಯನ್ನು ಪ್ರೋತ್ಸಾಹಿಸುವುದಾಗಿದೆ.

ಆದಾಗ್ಯೂ, ಸಂವಿಧಾನ ಆರು ಪ್ರಮುಖ ಧರ್ಮಗಳಿಗೆ ಔಪಚಾರಿಕವಾಗಿ ‘ಅಲ್ಪಸಂಖ್ಯಾತ’ ಸ್ಥಾನಮಾನವನ್ನು ನೀಡಿದೆ. ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ, ಭಾರತದ ಜನಸಂಖ್ಯೆಯು ಪ್ರಾಥಮಿಕವಾಗಿ ಹಿಂದೂ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಅನುಯಾಯಿ ಗಳನ್ನು ಒಳಗೊಂಡಿದೆ.

‘ರಾಷ್ಟ್ರೀಯ ಅಲ್ಪಸಂಖ್ಯಾತ’ ಸ್ಥಾನಮಾನವನ್ನು ಪಡೆದ ಆರು ಧರ್ಮಗಳೆಂದರೆ ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಮತ್ತು ಝೋರಾಸ್ಟ್ರಿಯನ್. ಈ ಆರು ಧರ್ಮಗಳ ಜತೆಗೆ, ಭಾರತವು ಇತರ ಅನೇಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಅನುಯಾಯಿಗಳಿಗೆ ನೆಲೆಯಾಗಿದೆ ಎನ್ನುವುದು ವಿಶೇಷ.

ಹೀಗಿದ್ದೂ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಳೆದ ಭಾನುವಾರ ನಡೆದ, ಕೆಲವು ಲಿಂಗಾಯತ ಮಠಾಧೀಶರ ಒಕ್ಕೂಟವು ಆಯೋಜಿಸಿದ್ದ ‘ಬಸವ ಸಂಸ್ಕೃತಿ ಅಭಿಯಾನ’ದ ಸಮಾರೋಪ ಸಮಾ ರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದ ಪ್ರತ್ಯೇಕ ಧರ್ಮದ ಸ್ಥಾನಮಾನ ಕ್ಕಾಗಿ ಬೇಡಿಕೆ ಕೇಳಿ ಬಂದಿದೆ.

ಇದನ್ನೂ ಓದಿ: Vinayak V Bhat Column: ನಾನು ಭಾರತವನ್ನು ಪ್ರೀತಿಸುತ್ತೇನೆ ಎನ್ನಲು ಮನವಿಲ್ಲ...

ಭಾನುವಾರ ನಡೆದ ಸಮಾರಂಭದಲ್ಲಿ ಅಂಗೀಕರಿಸಲಾದ ನಿರ್ಣಯಗಳಲ್ಲಿ ಲಿಂಗಾಯತರಿಗೆ ಧಾರ್ಮಿಕ ಮಾನ್ಯತೆ ನೀಡುವ ಬಗ್ಗೆ ಜಾಗೃತಿ ಮೂಡಿಸುವುದೂ ಸೇರಿದೆ. ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಇತರ ಶರಣರು ಮುನ್ನೆಲೆಗೆ ತಂದ ಶ್ರೇಷ್ಠ ಧರ್ಮವಾಗಿದೆ. ಭೌಗೋಳಿಕವಾಗಿ, ನಾವೆಲ್ಲರೂ ಹಿಂದೂಗಳು.

ಲಿಂಗಾಯತರು ಬೌದ್ಧರು, ಜೈನರು ಮತ್ತು ಸಿಖ್ಖರಂತೆ ಸರಕಾರಿ ಸವಲತ್ತುಗಳು ಮತ್ತು ಮೀಸಲಾತಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಧಾರ್ಮಿಕ ಮಾನ್ಯತೆಗಾಗಿ ಜಾಗೃತಿ ಮೂಡಿಸುವುದನ್ನು ಮುಂದುವರಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಅನೇಕ ಸಚಿವರೂ ಭಾಗವಹಿಸಿ, ಈ ಪ್ರತ್ಯೇಕ ಧರ್ಮದ ಬೇಡಿಕೆಗೆ ಇಂಬುಕೊಟ್ಟಂತೆ ಕಾಣುತ್ತಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ನೇತೃತ್ವದ ಒಂದು ವರ್ಗವು ವೀರಶೈವರು ಮತ್ತು ಲಿಂಗಾ ಯತರು ಒಂದೇ ಎಂದು ಪ್ರತಿಪಾದಿಸಿ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ಕೋರಿದ್ದರೆ, ಇನ್ನೊಂದು ಗುಂಪು ವೀರಶೈವರು ಹಿಂದೂ ಧರ್ಮದ ಭಾಗವಾಗಿರುವ ಶೈವರ ಏಳು ಪಂಗಡಗಳಲ್ಲಿ ಒಂದು ಎಂದು ನಂಬುವುದರೊಂದಿಗೆ ಲಿಂಗಾಯತರಿಗೆ ಮಾತ್ರ ಪ್ರತ್ಯೇಕ ಧರ್ಮ ಬೇಕೆಂದು ಬಯಸುತ್ತಿದೆ.

Screenshot_7 R

ಸಮುದಾಯದ ಅನೇಕ ಮುಖಂಡರು ಕಾರ್ಯಕ್ರಮದಿಂದ ದೂರ ಉಳಿದಿದ್ದರಿಂದ ವಿಭಜನೆ ಎದ್ದು ಕಾಣುತ್ತಿತ್ತು. ಈ ಸಮುದಾಯದ ಇತರ ಪಕ್ಷಗಳ ಪ್ರಮುಖರು ಯಾರೂ ಈ ಸಭೆಯಲ್ಲಿ ಕಾಣಲಿಲ್ಲ ವೆನ್ನುವುದನ್ನೂ ನಾವು ಗಮನಿಸಬಹುದು. ಆದರೆ, ಸಚಿವ ಎಂ.ಬಿ. ಪಾಟೀಲ್ ಅವರು ಮಾತ್ರ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಮತ್ತೆ ಬಲವಾಗಿ ಮುಂದಿಡುತ್ತಿದ್ದಾರೆ.

ಹಿಂದಿನ ರಾಜಕೀಯ ಗೊಂದಲಗಳನ್ನು ತಪ್ಪಿಸಿ ಈ ವಿಷಯವನ್ನು ಸಕಾರಾತ್ಮಕವಾಗಿ ಮುನ್ನಡೆ ಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಬಸವ ಧರ್ಮ ಆಧಾರಿತ ಭಾರತೀಯ ಮೂಲದ ಧರ್ಮ ಎಂದು ಪ್ರತಿಪಾದಿಸುತ್ತಾ, ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಹಾಗೂ ಹಿಂದೂ ಗಳು. ಆದರೆ ಲಿಂಗಾಯತ ಧರ್ಮವು ಬಸವ ಧರ್ಮ, ಇದು ಒಂದು ‘ಇಂಡಿಕ್ ರಿಲಿಜಿಯನ್’ (ಭಾರತೀಯ ಮೂಲದ ಧರ್ಮ) ಎನ್ನುವ ವ್ಯಾಖ್ಯಾನವನ್ನು ಪಾಟೀಲ್ ಮುಂದಿಟ್ಟಿದ್ದಾರೆ.

ಜೈನರು, ಸಿಖ್ಖರು, ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ? ಇಲ್ಲವಲ್ಲ. ಹಾಗೆಯೇ ಲಿಂಗಾಯತ ಧರ್ಮದಿಂದಲೂ ಯಾರಿಗೂ ತೊಂದರೆಯಾಗುವುದಿಲ್ಲ, ತಾವು ಹಿಂದೂ ವಿರೋಧಿ ಗಳಲ್ಲ ಎನ್ನುವುದು ಅವರ ವಾದವಾಗಿದೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ತಮ್ಮ ಹತ್ತಿರ ಬಂದಿದೆ.

ದಾವಣಗೆರೆಯಲ್ಲಿ ನಡೆದ ಸಭೆಯ ನಿರ್ಣಯದಲ್ಲಿ ತಾವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳುವ ಮೂಲಕ, ಅವರೂ ನಮ್ಮತ್ತ ಅರ್ಧ ದಾರಿಗೆ ಬಂದಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ಸರಕಾರದ ವೀರಶೈವ ಲಿಂಗಾಯತ ಸಚಿವರ ಬಿರುಕು ಮೂಡಿದಂತಿದೆ.

ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿನ ವಿಚಾರಕ್ಕೆ ಅಸಮಾಧಾನ ಭುಗಿಲೇಳುವ ಲಕ್ಷಣಗಳು ಕಾಣುತ್ತಿವೆ. ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂದು ಎಂಬಿ ಪಾಟೀಲ್ ಹೇಳಿದ್ದರೆ, ವೀರಶೈವ ಲಿಂಗಾಯತ ಎರಡು ಒಂದೇ ಎಂದು ಈಶ್ವರ್ ಖಂಡ್ರೆ ವಾದ ಮಂಡಿಸಿದ್ದಾರೆ.

ಅನೇಕ ವೀರಶೈವ ಲಿಂಗಾಯತ ಮಠಾಧೀಶರ ಸೂಚನೆ ಮಧ್ಯೆಯೂ ಬಸವ ಸಂಸ್ಕೃತಿ ಅಭಿಯಾನ ದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಗಿಯಾದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಕೆಲವು ಮಠಾಧೀಶರುಗಳು, ‘ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ’ ಎಂದಿದ್ದರ ಜತೆಗೆ, ‘ಸಿಎಂ ಪ್ರತ್ಯೇಕ ಲಿಂಗಾಯತ ಧರ್ಮ ಸಮಾರಂಭಕ್ಕೆ ಹೋಗಿರುವುದು ಒಂದು ಕಡೆ ಸಂತೋಷ, ಇನ್ನೊಂದು ಕಡೆ ದುಃಖ ಆಗಿದೆ.

ಬಸವಣ್ಣನ ಹೆಸರು ನಮ್ಮ ಮೆಟ್ರೋಗೆ ಇಡುವುದು, ಅವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿ ಯಾಗಿ ಗುರುತಿಸಿದ್ದು ಹಾಗೂ ಬಸವ ಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ ಸೇರಿ ಕೆಲವು ವಿಷಯ ಸ್ವಾಗತಾರ್ಹವಾಗಿದೆ’ ಎಂದಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರು ಧರ್ಮ ಇಬ್ಬಾಗ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದರು, ಹಾಗಾಗಿ, ಮತ್ತೆ ಜೇನುಗೂಡಿಗೆ ಕೈ ಹಾಕುವುದು ಬೇಡ ಎಂದು ಹೇಳಿದ್ದೆವು. ಆದರೂ ಪ್ರತ್ಯೇಕ ಲಿಂಗಾಯತ ಸ್ವಾಮೀಜಿಗಳ ಸಭೆಗೆ ಹೋಗಿದ್ದಾರೆ, ಪ್ರತ್ಯೇಕ ಧರ್ಮದ ಬಗ್ಗೆ ಹೇಳಿಕೆ ನೀಡದೇ ಜಾಣ ನಡೆಯನ್ನೇನೋ ಅನುಸರಿಸಿದ್ದಾರೆ.

ಆದರು ಸಹ, ಆ ಸಭೆಗೆ ಹೋಗಿದ್ದರಿಂದ ಸರಕಾರಕ್ಕೆ ಸ್ವಲ್ಪ ಮುಜುಗರ ಉಂಟಾಗಿದೆ ಎನ್ನುವುದು ಸತ್ಯ, ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಿದರೆ ಸಿಎಂ ಸ್ಥಾನ ಶಾಶ್ವತವೆಂದ ಸ್ವಾಮಿಗಳು, ನಾವು ವೀರಶೈವ ಲಿಂಗಾಯತರೆ ಒಂದು ಎನ್ನುವುದನ್ನು ಹೇಳುತ್ತಾ ಬಂದಿದ್ದೇವೆ, ಸರಕಾರವೂ ಇಬ್ಭಾಗ ಮಾಡುವುದು ಬಿಟ್ಟು ಒಂದು ಮಾಡಿದ್ರೆ ಒಳ್ಳೆಯದಾಗುತ್ತದೆ ಎನ್ನುತ್ತಿದ್ದಾರೆ.

ಮೂಲದಲ್ಲಿ ನಾವೆಲ್ಲಾ ಹಿಂದೂ ಧರ್ಮದ ಆಚರಣೆಯಲ್ಲಿರುವುದರಿಂದ ಒಟ್ಟುಗೂಡಿ ಹೋಗಬೇಕು ಎಂದು ಕೆಲವು ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಪ್ರತ್ಯೇಕ ಧರ್ಮದ ಬೇಡಿಕೆಯಿಂದ ಮುಖ್ಯಮಂತ್ರಿಗಳು ಅಂತರ ಕಾಯ್ದುಕೊಳ್ಳುತ್ತಿದ್ದರೂ, ಸಚಿವ ಪಾಟೀಲರು ಮಾತ್ರ, ಬಹಿರಂಗವಾಗಿ ಮಾತಾಡುವ ಮೂಲಕ ತಮ್ಮ ಹಿಂದಿನ ಅಭಿಪ್ರಾಯಗಳಿಗೆ ಬದ್ಧರಾಗಿರುವಂತೆ ತೋರುತ್ತಿದೆ.

ಹಾಗಂತ ಈ ಪ್ರತ್ಯೇಕ ಧರ್ಮದ ಹೋರಾಟ ಹೊಸದೇನಲ್ಲ, 1980ರ ದಶಕದ ವೇಳೆಗೆ, ಅಲ್ಪ ಸಂಖ್ಯಾತ ಧರ್ಮದ ಸ್ಥಾನಮಾನವನ್ನು ಕೋರಿದ ಚಳವಳಿಯೊಂದು ಹುಟ್ಟಿಕೊಂಡಿತು, ಇದು 2017-18ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ವೇಗವನ್ನು ಪಡೆಯಿತು.

ಲಿಂಗಾಯತ ಸಮುದಾಯಕ್ಕೆ ‘ಧಾರ್ಮಿಕ ಅಲ್ಪಸಂಖ್ಯಾತ’ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತೆಗೆದುಕೊಂಡ ನಿರ್ಧಾರವು ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಿಗೂ ಕಾರಣವಾಯಿತು ಎಂದು ವಿಶ್ಲೇಷಿಸಲಾಗಿತ್ತು. 2000ನೇ ಇಸವಿಯಲ್ಲಿ, ಅಖಿಲ ಭಾರತ ವೀರಶೈವ ಮಹಾಸಭಾವು ವೀರಶೈವರು ಅಥವಾ ಲಿಂಗಾಯತರು ಹಿಂದೂಯೇತರ ಧರ್ಮವೆಂದು ಗುರುತಿಸಲು ಮತ್ತು ಜನಗಣತಿಯಲ್ಲಿ ಪ್ರತ್ಯೇಕ ಪಟ್ಟಿಗಾಗಿ ಅಭಿಯಾನವನ್ನು ಪ್ರಾರಂಭಿಸಿತ್ತು.

2013ರಲ್ಲಿ, ಅಖಿಲ ಭಾರತ ವೀರಶೈವ ಮಹಾಸಭಾವು ಲಿಂಗಾಯತರು ಹಿಂದೂ ಧರ್ಮವು ಪ್ರಚಾರ ಮಾಡುವ ಸಾಮಾಜಿಕ ತಾರತಮ್ಯವನ್ನು ತಿರಸ್ಕರಿಸುತ್ತದೆ ಎಂದು ವಾದಿಸುತ್ತಾ ಲಿಂಗಾಯತರನ್ನು ಪ್ರತ್ಯೇಕ ಧಾರ್ಮಿಕ ಸಮುದಾಯವೆಂದು ಗುರುತಿಸಲು ಲಾಬಿ ನಡೆಸಿತ್ತು.

ಕರ್ನಾಟಕದಲ್ಲಿ 2018ರ ಚುನಾವಣೆಗಳಿಗೆ ಸ್ವಲ್ಪ ಮುಂಚೆ ಪ್ರತ್ಯೇಕ ಧಾರ್ಮಿಕ ಗುರುತಿನ ಬೇಡಿಕೆ ಗಳು ಮತ್ತಷ್ಟು ವೇಗವನ್ನು ಪಡೆದುಕೊಂಡವು. ಕಾಂಗ್ರೆಸ್ ಪಕ್ಷವು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಕರೆಯುವ ಕರೆಗಳನ್ನು ಬೆಂಬಲಿಸಿದರೆ, ಬಿಜೆಪಿಯು ಕಾಂಗ್ರೆಸ್ಸಿನ ಈ ಧರ್ಮ ವಿಭಜನೆಯ ನಡೆಯನ್ನು ವಿರೋಧಿಸಿತ್ತು.

ಆದಾಗ್ಯೂ, ಕೆಲವು ಮಠಗಳು ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಅಭಿಯಾನವನ್ನು ಬೆಂಬಲಿ ಸುತ್ತಾ ಬಂದಿವೆ. ಆದರೆ, ಇತರರು ಹಿಂದೂ ಧರ್ಮದೊಳಗೆ ಒಂದು ಜಾತಿಯಾಗಿ ಪರಿಗಣಿಸಲ್ಪಡು ವಲ್ಲಿ ತೃಪ್ತರಾಗಿಯೂ ಇದ್ದಾರೆ.

ಮಾರ್ಚ್ 2018ರಲ್ಲಿ, ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯು ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ರೂಪಿಸಲು ಸಲಹೆ ನೀಡಿತು. ಕರ್ನಾಟಕ ಸರಕಾರವು ಈ ಪ್ರತ್ಯೇಕ ಧಾರ್ಮಿಕ ಸ್ಥಾನಮಾನದ ಬೇಡಿಕೆಯನ್ನು ಅನುಮೋದಿಸಿತು ಮತ್ತು ಭಾರತ ಸರಕಾರಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವಂತೆ ಶಿಫಾರಸು ಮಾಡಿತು. ಆದರೆ, ಕೇಂದ್ರ ಸರಕಾರವು ನಂತರ ಈ ಶಿಫಾರಸನ್ನು ನಿರಾಕರಿಸಿತ್ತು.

ವೀರಶೈವ ಸಂಪ್ರದಾಯವನ್ನು ಹಿಂದೂ ಧರ್ಮದ ಏಳು ಶೈವ ಸಂಪ್ರದಾಯಗಳಲ್ಲಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಈ ಸಂಪ್ರದಾಯವು ಶಿವನಿಗೆ ವಿಶೇಷ ಭಕ್ತಿಯನ್ನು ಒತ್ತಿ ಹೇಳುತ್ತದೆ ಮತ್ತು ಕಟ್ಟುನಿಟ್ಟಾದ ಏಕದೇವತಾ ವಾದವನ್ನು ಪ್ರತಿಪಾದಿಸುತ್ತದೆ. ಈ ಸಂಪ್ರದಾಯವು ತನ್ನದೇ ಆದ ಪಂಚ ಗುರುಪೀಠಗಳನ್ನು ಹೊಂದಿದೆ. ಇದು ಆದಿಶಂಕರರು ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳಿಗೆ ಹೋಲುತ್ತದೆ.

ಅನೇಕ ಜನ್ಮಗಳ ಅಗತ್ಯವಿಲ್ಲದೆಯೇ, ಶಿವನಲ್ಲಿ ಅವ್ಯಾಜ ಭಕ್ತಿ ಹಾಗೂ ಸತ್ಕರ್ಮಗಳ ಮೂಲಕ ಒಂದೇ ಜೀವಿತಾವಧಿಯಲ್ಲಿ ಮೋಕ್ಷವನ್ನು ಸಾಧಿಸಬಹುದು ಎಂದು ಈ ಸಂಪ್ರದಾಯ ಕಲಿಸುತ್ತದೆ. ಆಧ್ಯಾತ್ಮಿಕ ಸಮಾಜ ಸುಧಾರಕರಾಗಿದ್ದ ಭಕ್ತಿ ಭಂಡಾರಿ ಬಸವಣ್ಣ ಮತ್ತು ಇತರ ಶಿವ ಶರಣರು ಹನ್ನೆರಡನೇ ಶತಮಾನದಲ್ಲಿ ವೀರಶೈವ ಸಂಪ್ರದಾಯವನ್ನು ಮುನ್ನೆಲೆಗೆ ತಂದು, ಅದರಲ್ಲಿ ಅಡಕವಾಗಿದ್ದ ಆಚರಣೆಗಳನ್ನು ಸರಳಗೊಳಿಸಿದ್ದಾರೆ.

ಈ ಸಂಪ್ರದಾಯವು, ಆಗಮ ಶಾಸ್ತ್ರಗಳನ್ನು ಆಧರಿಸಿದ ಸಿದ್ಧಾಂತ ಶಿಖಾಮಣಿಯಂಥ ತನ್ನದೇ ಆದ ಆಧಾರ ಗ್ರಂಥವನ್ನೂ ಹೊಂದಿದೆ. ಸಂಪ್ರದಾಯದ ಮೂಲಪುರುಷರಾದ ರೇಣುಕಾಚಾರ್ಯರು ಮತ್ತು ಅಗಸ್ತ್ಯ ಮುನಿಗಳ ನಡುವಿನ ಸಂಭಾಷಣೆಯ ರೂಪದಲ್ಲಿರುವ ಈ ಗ್ರಂಥವನ್ನು, ಪಂಚಾ ಚಾರ್ಯರುಗಳು ಪ್ರಚುರಪಡಿಸಿದರು ಎಂದು ನಂಬಲಾಗಿದೆ.

ಮುಂದೆ ಈ ಪರಂಪರೆಯಲ್ಲಿ ಬಂದ ವಚನ ಸಾಹಿತ್ಯವನ್ನೂ ಮೂಲಭೂತ ಗ್ರಂಥವೆಂದು ಆದರಿಸ ಲಾಗುತ್ತದೆ. ವೀರಶೈವ ಸಂಪ್ರದಾಯವು ಅದರಲ್ಲೂ ಬಸವಣ್ಣನ ಕ್ರಾಂತಿಕಾರಿ ವಿಚಾರ ಧಾರೆಯು ಸಾಮಾಜಿಕ ಸಮಾನತೆಗೆ ಬಲವಾದ ಒತ್ತು ನೀಡುತ್ತದೆ. ಇದು ಜಾತಿ ಮತ್ತು ಲಿಂಗಭೇದಗಳನ್ನು ತೊಡೆದು ಹಾಕಲು ಪ್ರಯತ್ನಿಸುತ್ತದೆ ಮತ್ತು ಎಲ್ಲಾ ವರ್ಗದ ಜನರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವುದರ ಮೂಲಕ ಮಾನವತಾವಾದವನ್ನು ಪ್ರೋತ್ಸಾಹಿಸುತ್ತದೆ.

ಹಿಂದೂ ಸಂಪ್ರದಾಯದಲ್ಲಿ ಶಾಕ್ತರು, ಶೈವರು, ವೈಷ್ಣವರು ನಯ್ಯಾಯಿಕರು, ಬಹುದೇವತಾ ಉಪಾಸಕರು ಅಥವಾ ಏಕದೇವತಾ ಉಪಾಸಕರು, ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ನಾಸ್ತಿಕರು ಹೀಗೆ ಎಲ್ಲರಿಗೂ ಸ್ಥಾನವನ್ನು ಕೊಟ್ಟಿದೆ. ಆಚರಣೆಯ ಆಧಾರದಲ್ಲಿ ಹೀಗೆ ಒಂದೊಂದೇ ಅವಯವ ಕಳಚುತ್ತಾ ಹೋದರೆ, ದೇಹ (ಸಮಗ್ರ ಹಿಂದೂ ಧರ್ಮ) ಅಂತ ಉಳಿಯುವುದಾದರೂ ಹೇಗೆ? ಹಿಂದೂ ಧರ್ಮದೊಳಗಿನ ಎಲ್ಲ ಸಂಪ್ರದಾಯಗಳು ಹೀಗೆ ಪ್ರತ್ಯೇಕ ಧರ್ಮವನ್ನು ಕೇಳಲು ಶುರುಮಾಡಿದರೆ ಏನಾಗಬಹುದು? ಧರ್ಮದ ಆಚರಣೆಯಲ್ಲಿರುವ ತಾರತಮ್ಯಗಳನ್ನು ವಿರೋಧಿಸಿ ದರೇ ವಿನಾ, ತಮ್ಮದು ಪ್ರತ್ಯೇಕ ಧರ್ಮವೆಂತ ಬಸವಣ್ಣ ಎಂದಾದರೂ ಹೇಳಿದ್ದರಾ? ಎಂಬೆಲ್ಲಾ ಪ್ರಶ್ನೆಗಳಿಗೆ ಪ್ರತ್ಯೇಕತಾವಾದಿಗಳು ಉತ್ತರ ಕಂಡುಕೊಳ್ಳುವುದೊಳಿತು.

ಭಾರತದಲ್ಲಿ ಹಿಂದೂಗಳೆಲ್ಲರೂ ಒಟ್ಟಾಗಿದ್ದಾಗಲೇ, ಅನೇಕ ಪರಕೀಯ ದಾಳಿಗಳನ್ನು ಎದುರಿಸಲು ಹೆಣಗಾಡಿರುವ ಇತಿಹಾಸವಿರುವಾಗ, ಹಿಂದೂ ನಂಬಿಕೆಯಮೇಲೆ ಅನ್ಯ ಧರ್ಮಗಳಿಂದ ಆಘಾತ ಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತ್ಯೇಕತೆಯ ಕೂಗು ಎಷ್ಟರಮಟ್ಟಿಗೆ ಪ್ರಸ್ತುತ ಎನ್ನುವು ದನ್ನು ವಿಚಾರವಂತರು ಚಿಂತಿಸಬೇಕಿದೆ.

ಸನಾತನ ಹಿಂದೂ ಧರ್ಮವನ್ನು ಸಮಗ್ರವಾಗಿಯೇ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪರಿಶಿಷ್ಟ ಜಾತಿ ಪಂಗಡ, ಒಕ್ಕಲಿಗ, ಲಿಂಗಾಯತ, ವೀರಶೈವ, ಬ್ರಾಹ್ಮಣ ಹೀಗೆ ಅನೇಕ ಸಮುದಾಯ ಗಳು ಹಿಂದೂ ಧರ್ಮದ ಅಡಿಯಲ್ಲಿ ಸಾವಿರಾರು ವರ್ಷಗಳಿಂದ ಅನೇಕ ವೈರುಧ್ಯಗಳ ನಡುವೆಯೂ ಸಹಜೀವನ ನಡೆಸಿಕೊಂಡು ಬಂದಿವೆ.

ಹಾಗಾಗಿ, ಕೇವಲ ಆರ್ಥಿಕ ಅಥವಾ ರಾಜಕೀಯ ಲಾಭಕ್ಕಾಗಿ, ಒಟ್ಟಾರೆ ಹಿಂದೂ ಅಸ್ಮಿತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದನ್ನು ಒಟ್ಟಾರೆ ಹಿಂದೂ ಸಮಾಜ, ಲಿಂಗಾಯತ/ವೀರಶೈವ ಸಮುದಾಯದಿಂದ ನಿರೀಕ್ಷಿಸುತ್ತಿದೆ. ಹಿಂದೂ ಧರ್ಮದ ಅಡಿಯಲ್ಲಿ ಬರುವ ಎಲ್ಲ ವರ್ಗಗಳ ಆರ್ಥಿಕ ಸಾಮಾಜಿಕ ಸಮಸ್ಯೆಗಳಿಗಾಗಿ ಒಟ್ಟಾಗಿ ಹೋರಾಟ ಮಾಡಬಹುದಾಗಿದೆ, ಬಸವಣ್ಣ ನಮ್ಮೆಲ್ಲರ ಹೆಮ್ಮೆ, ಅದರಲ್ಲಿ ಎರಡುಮಾತಿಲ್ಲ.

‘ನಮ್ಮ ಮೆಟ್ರೋ’ಗೆ ಬಸವಣ್ಣನವರ ಹೆಸರಿಡುವುದು, ಅವರನ್ನು ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿರುವುದು ಸ್ವಾಗತಾರ್ಹವೇ, ಆದರೆ ಪ್ರತ್ಯೇಕ ಧರ್ಮದ ಬೀಜವನ್ನು ಬಿತ್ತುವುದು ಅಥವಾ ಉತ್ತೇಜಿಸುವುದು ಸರಿಯಾದ ದಾರಿಯಲ್ಲ. ಸ್ವಾತಂತ್ರ್ಯ ಬಂದು ಸಂವಿಧಾನ ರಚನೆಯಾದಮೇಲೆ, ಸರಕಾರಗಳು ಈ ತರಹದ ಎಷ್ಟು ಹೊಸ ಪಂಗಡಗಳನ್ನು ಪ್ರತ್ಯೇಕ ಧರ್ಮ ವೆಂದು ಗುರುತಿಸಿವೆ ಎಂದು ನೋಡಿದರೆ, ಒಂದೂ ಇಲ್ಲ.

ಹಾಗಾಗಿ ರಾಜಕೀಯ ಲಾಭಕ್ಕಾಗಿ ರಾಜ್ಯ ಸರಕಾರಗಳು ಇಂಥಾ ಶಿಫಾರಸುಗಳನ್ನು ಮಾಡಿದರೂ, ಕೇಂದ್ರದಲ್ಲಿರುವ ಸರಕಾರ ಈ ತರಹದ ಪ್ರಸ್ತಾಪಗಳನ್ನು ಪುರಸ್ಕರಿಸುವ ಸಾಹಸ ಮಾಡಲಿಕ್ಕಿಲ್ಲ ಎನ್ನುವ ನಂಬಿಕೆಯಿದೆ. ಅದು ಸುಲಭವೂ ಅಲ್ಲ ಬಿಡಿ.

ವಿನಾಯಕ ವೆಂ ಭಟ್ಟ

View all posts by this author