Vinayak V Bhat Column: ನಾನು ಭಾರತವನ್ನು ಪ್ರೀತಿಸುತ್ತೇನೆ ಎನ್ನಲು ಮನವಿಲ್ಲ...
2025ರ ಸೆಪ್ಟೆಂಬರ್ 4ರಂದು, ಕಾನ್ಪುರದ ರಾವತ್ಪುರ ಪ್ರದೇಶದಲ್ಲಿ, ಈದ್-ಎ-ಮಿಲಾದ್-ಉನ್-ನಬಿ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ) ಗಾಗಿ ಇಸ್ಲಾಂ ಸಮುದಾಯದವರ ಮೆರವಣಿಗೆ ನಡೆಯುತ್ತಿತ್ತು. ಅಲ್ಲಿ ‘ಐ ಲವ್ ಮುಹಮ್ಮದ್’ ಎಂಬ ಬ್ಯಾನರ್ ಅನ್ನು ಪ್ರದರ್ಶಿಸಲಾಯಿತು. ಅದೇ ವೇಳೆ, ಹಿಂದೂ ಧಾರ್ಮಿಕ ಮೆರವಣಿಗೆಯು ಅದೇ ಹಾದಿಯಲ್ಲಿ ಹಾದು ಹೋಗುತ್ತಿತ್ತು.

-

ವಿದ್ಯಮಾನ
2019ರ ಡಿಸೆಂಬರ್ 15ರವರೆಗೆ, ಹಳೆದೆಹಲಿಯ ನಿವಾಸಿಗಳಿಗೆ ಶಾಹೀನ್ ಬಾಗ್ ಬಗ್ಗೆ ಹೆಚ್ಚಿನ ಕಲ್ಪನೆ ಇರಲಿಲ್ಲ. ಅನೇಕರು ಅದರ ಬಗ್ಗೆ ಕೇಳಿಯೂ ಇರಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎನ್ನುವ ಸುದ್ದಿ ಬಂದಾಗ, ಡಿಸೆಂಬರ್‌ನ ಒಂದು ಸಂಜೆ ಎಲ್ಲವನ್ನೂ ಬದಲಿಸಿಬಿಟ್ಟಿತು.
ಈ ಚಳವಳಿಯಲ್ಲಿ ಜಾಮಿಯಾದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ವಾಸಿಸುವ ಶಾಹೀನ್ ಬಾಗ್‌ನ 70 ಮತ್ತು 80ರ ಹರೆಯದ ಮಹಿಳೆಯರನ್ನು ಮುಂದೆಬಿಡಲಾಯಿತು. ಸಿಎಎಯನ್ನು ಯುವಕರು ಶಾಂತಿಯುತವಾಗಿ, ನಿರಂತರವಾಗಿ ವಿರೋಧಿಸಬಹುದಾಗಿತ್ತು. ಆದರೆ ಅಚ್ಚರಿ ಯೆಂಬಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದು ಈ ಮಹಿಳೆಯರು.
ಅವರೆಂದಿಗೂ ತಮ್ಮ ಮನೆಗಳಿಂದ ಹೊರಬಂದವರಾಗಿರಲಿಲ್ಲ; ಆದರಿಲ್ಲಿ ಒಂದು ಕೈಯಲ್ಲಿ ಭಾರತದ ಸಂವಿಧಾನವನ್ನೂ ಮತ್ತೊಂದರಲ್ಲಿ ಕುರಾನ್ ಪ್ರತಿಯನ್ನೂ ಹಿಡಿದು ನಿಂತಿದ್ದರು. ಪ್ರತಿಭಟನೆ ನೋಡನೋಡುತ್ತಿದ್ದಂತೆ ಬೃಹತ್ ಚಳವಳಿಯಾಗಿ ಮಾರ್ಪಟ್ಟಿತು, ದೇಶಾದ್ಯಂತ ಹರಡಿ ಅಂತಾರಾಷ್ಟ್ರೀಯ ಗಮನವನ್ನೂ ಸೆಳೆಯಿತು.
ಶಾಹೀನ್ ಬಾಗ್‌ನ ಅಜ್ಜಿಯರು ಟೈಮ್ ನಿಯತಕಾಲಿಕದಲ್ಲಿ ಸ್ಥಾನ ಪಡೆದರು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಂದರೆ ಹಿಂದುಗಳು, ಜೈನರು ಮತ್ತು ಬೌದ್ಧರಿಗೆ ಭಾರತದಲ್ಲಿ ಪೌರತ್ವ ಪಡೆಯಲು ಅನುವು ಮಾಡಿಕೊಡುವ ಸಿಎಎ ವಿರುದ್ಧದ ಈ ಹೋರಾಟದ ಬಗ್ಗೆ ವಿದೇಶಿ ಪತ್ರಿಕೆಗಳು ಬರೆಯಲು ಪ್ರಾರಂಭಿಸಿದವು. ಮುಂದಿನದೆಲ್ಲ ಗೊತ್ತಿರುವಂಥದ್ದೇ.
ಇದನ್ನೂ ಓದಿ: Vinayaka V Bhat Column: ಸಂಸ್ಕೃತದ ಸೇವೆಯಲ್ಲಿ ಸುಧರ್ಮ ಕಂಡ ಸಾರ್ಥಕತೆ
ಈಗ ಮತ್ತದೇ ಮಾದರಿಯ ‘ಐ ಲವ್ ಮೊಹಮ್ಮದ್’ ಎಂಬ ಅಭಿಯಾನ ದೇಶದಲ್ಲಿ ಶುರುವಾದಂತೆ ಕಾಣುತ್ತಿದೆ. ಆದರಿಲ್ಲಿ ನಿಜವಾದ ಪ್ರಶ್ನೆಯಿರುವುದು, ಇದು ನಿಜವಾಗಿಯೂ ಮುಸ್ಲಿಂ ಸಮುದಾಯದ ಭಾವನೆಗಳ ಸ್ವಾಭಾವಿಕ ಹೊರಹರಿವೇ ಅಥವಾ ರಾಜಕೀಯ ಪುಡಾರಿಗಳಿಂದ ಉತ್ತೇಜಿಸಲ್ಪಟ್ಟ, ಎಚ್ಚರಿಕೆಯಿಂದ ಸಂಘಟಿಸಿದ ‘ಟೂಲ್ ಕಿಟ್’ ಆಗಿದೆಯೇ ಎಂಬುದು.
ಪುರಾವೆಗಳು ಎರಡನೆಯದನ್ನೇ ಹೆಚ್ಚು ಪುಷ್ಟೀಕರಿಸುತ್ತವೆ ಎಂಬುದು ಗಮನಾರ್ಹ. 2025ರ ಸೆಪ್ಟೆಂಬರ್ 4ರಂದು, ಕಾನ್ಪುರದ ರಾವತ್ಪುರ ಪ್ರದೇಶದಲ್ಲಿ, ಈದ್-ಎ-ಮಿಲಾದ್-ಉನ್-ನಬಿ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ) ಗಾಗಿ ಇಸ್ಲಾಂ ಸಮುದಾಯದವರ ಮೆರವಣಿಗೆ ನಡೆಯುತ್ತಿತ್ತು. ಅಲ್ಲಿ ‘ಐ ಲವ್ ಮುಹಮ್ಮದ್’ ಎಂಬ ಬ್ಯಾನರ್ ಅನ್ನು ಪ್ರದರ್ಶಿಸಲಾಯಿತು. ಅದೇ ವೇಳೆ, ಹಿಂದೂ ಧಾರ್ಮಿಕ ಮೆರವಣಿಗೆಯು ಅದೇ ಹಾದಿಯಲ್ಲಿ ಹಾದು ಹೋಗುತ್ತಿತ್ತು. ಆಗ, ಗುಂಪಿನಲ್ಲಿದ್ದ ಕೆಲವು ಮುಸ್ಲಿಂ ಯುವಕರು ಹಿಂದೂ ಪೋಸ್ಟರ್‌ಗಳನ್ನು ಕೋಲುಗಳಿಂದ ಹರಿದು, ಘರ್ಷಣೆಗೆ ನಾಂದಿ ಹಾಡಿದರು ಎಂಬುದನ್ನು ವರದಿಗಳು ದೃಢಪಡಿಸುತ್ತವೆ.
ಕೋಮು ಸೌಹಾರ್ದಕ್ಕೆ ಭಂಗ ತಂದಿದ್ದಕ್ಕಾಗಿ ಪೊಲೀಸರು ಮಧ್ಯಪ್ರವೇಶಿಸಿ ಗಲಭೆಕೋರರ ವಿರುದ್ಧ ಎಫ್ ಐಆರ್ ದಾಖಲಿಸಿದರು. ಆದರೆ, ಇದನ್ನು ಸ್ಥಳೀಯ ಕಾನೂನು-ಸುವ್ಯವಸ್ಥೆಯ ಸಮಸ್ಯೆಯಾಗಿ ಪರಿಗಣಿಸಲಿಲ್ಲ; ಎಫ್ಐಆರ್ ದಾಖಲಿಸಿದ್ದನ್ನು ‘ನಾನು ಮುಹಮ್ಮದ್‌ನನ್ನು ಪ್ರೀತಿಸುತ್ತೇನೆ’ ಎಂದು ಹೇಳಿದ್ದಕ್ಕಾಗಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಪಿತೂರಿ ಎಂಬಂತೆ ಬಿಂಬಿಸಲಾಯಿತು.
ಈ ಅಭಿಯಾನ ಅನತಿ ಕಾಲದಲ್ಲಿ ಅರ್ಧ ಉತ್ತರ ಪ್ರದೇಶವನ್ನಾವರಿಸಿ ಅದರಾಚೆಗೂ ಹರಡಿತು. ಉತ್ತರಪ್ರದೇಶದ ಬಹ್ರೈಚ್, ಬರೇಲಿ, ಲಖನೌ, ಅಮೇಥಿ, ಉನ್ನಾವೋ, ಕೌಶಂಬಿ, ಮಹಾರಾಜಗಂಜ್ ಎಲ್ಲವೂ ಇಂಥದೇ ಪ್ರತಿಭಟನೆಗಳಿಗೆ ಸಾಕ್ಷಿಯಾದವು.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್‌ಗಳಲ್ಲಿ ರಾಷ್ಟ್ರವ್ಯಾಪಿ ‘ಐ ಲವ್ ಮೊಹಮ್ಮದ್’ನದ್ದೇ ಸುದ್ದಿಯಾಯಿತು. ಇದೇ ವೇಳೆ ಮಧ್ಯಪ್ರದೇಶದಲ್ಲಿ ಕಾಳಿ ವಿಗ್ರಹದ ಮೇಲೆ ಕಲ್ಲು ತೂರಾಟ ವಾಯಿತು. ಗುಜರಾತ್‌ನ ಗೋಧ್ರಾದಲ್ಲಿ ಪ್ರತಿಭಟನಾ ನಿರತ ಗುಂಪು ಪೊಲೀಸ್ ಠಾಣೆ ಯನ್ನು ಸುತ್ತುವರಿಯಿತು. ಉತ್ತರಾಖಂಡದ ಕಾಶಿಪುರದಲ್ಲಿ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಯನ್ನು ಥಳಿಸಿದ ಘಟನೆಯೂ ವರದಿಯಾಯಿತು.
ಉತ್ತರಪ್ರದೇಶದ ನಗರವೊಂದರಲ್ಲಿ ಮೂಲತಃ ಕಾನೂನು-ಸುವ್ಯವಸ್ಥೆಯ ಪ್ರಕರಣವಾಗಬೇಕಿದ್ದ ವಿಷಯವು ಅನೇಕ ರಾಜ್ಯಗಳಲ್ಲಿ ಕೋಮುವಾದಿ ಆಂದೋಲನವಾಗಿ ತಿರುಗಿತು. ‘ಐ ಲವ್ ಮುಹಮ್ಮದ್’ ಬ್ಯಾನರ್‌ಗೆ ಸಂಬಂಧಿಸಿ ಕರ್ನಾಟಕದಲ್ಲೂ ಕೋಮು ಗಲಭೆಗಳು ಅಲ್ಲಲ್ಲಿ ದಾಖಲಾಗುತ್ತಿದ್ದು, ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ದೊಡ್ಡದಾಗುತ್ತಿಲ್ಲ ಅಷ್ಟೆ. ಇತ್ತೀಚೆಗೆ ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ‘ಐ ಲವ್ ಮುಹಮ್ಮದ್’ ಫ್ಲೆಕ್ಸ್ ಬ್ಯಾನರ್ ಗಾಗಿ ಕೋಮು ಉದ್ವಿಗ್ನತೆ ಭುಗಿಲೆದ್ದಿತ್ತು.
ಕಲ್ಲು ತೂರಾಟದಿಂದ ಸಣ್ಣಪುಟ್ಟ ಗಾಯಗಳು, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಪೊಲೀಸರು ತ್ವರಿತವಾಗಿ ಮಧ್ಯಪ್ರವೇಶಿಸಿ, ಬ್ಯಾನರ್ ಅನ್ನು ತೆಗೆದುಹಾಕಿ, ಶಾಂತಿಯನ್ನು ಪುನಃ ಸ್ಥಾಪಿಸಿದರು ಎನ್ನಲಾಗಿದೆ. ಗಣೇಶನ ಮೆರವಣಿಗೆಯ ವೇಳೆ ಮಂಡ್ಯ ಹಾಗೂ ಇತರ ಊರುಗಳಲ್ಲಿ ನಡೆದ ಕಲ್ಲು ತೂರಾಟ, ಘರ್ಷಣೆಗಳಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಕರ್ನಾಟಕ, ಹೊಸದೊಂದು ವಿವಾದಕ್ಕೆ ಸಾಕ್ಷಿಯಾಯಿತು.
ಇತ್ತೀಚೆಗೆ ಲೇಹ್ ಲಡಾಖ್‌ನಲ್ಲಿ ನಡೆದ ದಂಗೆಯ ಬಗ್ಗೆ, ಅದರ ಹಿಂದಿರುವ ವಿದೇಶಿ ಕೈವಾಡಗಳ ಬಗ್ಗೆ ಇನ್ನೂ ತನಿಖೆಗಳಾಗುತ್ತಿವೆ. ಆದರೆ, ಇದು ಆಕಸ್ಮಿಕ ಘಟನೆಯಲ್ಲ, ಪ್ರತ್ಯೇಕತಾವಾದಿಗಳು, ದೇಶದಲ್ಲಿ ಅರಾಜಕತೆ ಸೃಷ್ಟಿಮಾಡಬೇಕೆನ್ನುವವರೇ ಇದರ ಹಿಂದಿzರೆ ಎನ್ನುವ ಸತ್ಯ ಒಂದೊಂದಾಗಿ ಬಯಲಾಗುತ್ತಿವೆ.
‘ಇಂಡಿಯಾ’ ಮೈತ್ರಿಕೂಟದ ಕೆಲವು ರಾಜಕೀಯ ಪಕ್ಷಗಳು ಈ ‘ಐ ಲವ್ ಮುಹಮ್ಮದ್’ ಅಭಿಯಾನ ಗಳನ್ನು ಪರೋಕ್ಷವಾಗಿ ಅನುಮೋದಿಸಲು ಪ್ರಾರಂಭಿಸಿದ ನಂತರವಂತೂ, ಅದು ವೇಗ-ವಿಸ್ತಾರ ವನ್ನೂ ಪಡೆಯಿತು. ಸೆಪ್ಟೆಂಬರ್ 20ರಂದು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ಹೇಳಿಕೆ ನೀಡಿ, ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಎಫ್ಐಆರ್ ಎದುರಿಸುತ್ತಿರುವವರನ್ನು ತನ್ನ ಪ್ರತಿನಿಧಿಗಳು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ ಎಂದಿದೆ.
ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಈ ಘೋಷಣೆಯನ್ನು ಬಹಿರಂಗವಾಗಿ ಬೆಂಬಲಿಸಿದರು ಕೂಡಾ.ಸಮಾಜವಾದಿ ಪಕ್ಷವೂ ಈ ಅಭಿಯಾನಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವಂತಿದೆ. ನಾನು ಮುಹಮ್ಮದ್‌ನನ್ನು ಪ್ರೀತಿಸುತ್ತೇನೆ ಎಂದಿದ್ದಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಎಸ್‌ಪಿ ನಾಯಕ ಅಬು ಅಜ್ಮಿ ಘೋಷಿಸಿ ಬೆಂಕಿಗೆ ತುಪ್ಪ ಸುರಿದರು.
ಪಕ್ಷದ ವಕ್ತಾರ ಅಮಿಕ್ ಜಮೈ, ‘ಐ ಲವ್ ಶ್ರೀರಾಮ’ ಅಥವಾ ‘ಐ ಲವ್ ಮುಹಮ್ಮದ್’ ಎರಡೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳಪಡುತ್ತವೆ ಎಂದು ಹೇಳಿ ಹಿಂದುಗಳನ್ನು ಚುಚ್ಚುವ ಕೆಲಸ ಮಾಡಿದರು. ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ಐ ಲವ್ ಮುಹಮ್ಮದ್’ ಎನ್ನುವುದು ಅಪರಾಧವಾಗಿದ್ದರೆ, ಅದಕ್ಕೆ ನೀಡಬಹುದಾದ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಘೋಷಿಸಿದ ನಂತರ ಬರೇಲಿಯಲ್ಲಿ ಹಿಂಸಾಚಾರ ಉಲ್ಬಣಗೊಂಡಿತು.
ನಂತರ, ಕಾಶಿಪುರದಲ್ಲಿ ಅಶಾಂತಿಯನ್ನು ಪ್ರಚೋದಿಸುವಲ್ಲಿ ಎಸ್‌ಪಿ ನಾಯಕ ನದೀಮ್ ಅಖ್ತರ್ ಪ್ರಮುಖ ವ್ಯಕ್ತಿ ಎಂದು ವರದಿಗಳು ಸೂಚಿಸುತ್ತಿವೆ. ಕೇವಲ ‘ಐ ಲವ್ ಮುಹಮ್ಮದ್’ ಘೋಷಣೆಗಾಗಿ ಲಕ್ಷಾಂತರ ಮುಸ್ಲಿಮರ ವಿರುದ್ಧ ಅನ್ಯಾಯವಾಗಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಕೂಡಾ ಆರೋಪಿಸುತ್ತಿದ್ದಾರೆ.
ಈ ಪ್ರತಿಭಟನೆಗಳ ಗಮನಾರ್ಹ ಅಂಶವೆಂದರೆ, ಶಾಹೀನ್ ಬಾಗ್‌ನಲ್ಲಿನಂತೆ ಮುಸ್ಲಿಂ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆ. ಲಖನೌದಲ್ಲಿ, ವಿವಾದಾತ್ಮಕ ಕವಿ ಮುನಾವರ್ ರಾಣಾರ ಪುತ್ರಿ ಹಾಗೂ ಸಮಾಜವಾದಿ ಪಕ್ಷದ ವಕ್ತಾರೆ ಸುಮಯ್ಯ ರಾಣಾ ಇತರ ಪ್ರತಿಭಟನಾಕಾರ್ತಿಯರೊಂದಿಗೆ ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದಾರೆ.
ಸಿಎಎ-ಎನ್‌ಆಸಿರ್ ವಿವಾದದ ವೇಳೆ ಶಾಹೀನ್ ಬಾಗ್ ಪ್ರತಿಭಟನೆಯ ತಂತ್ರಗಳನ್ನು ಇದು ಪ್ರತಿಸೃಷ್ಟಿಸುತ್ತಿರುವಂತೆ ಕಾಣುತ್ತಿದೆ. ಶಾಹೀನ್ ಬಾಗ್‌ನಲ್ಲಿ ಶಾಂತಿಯುತ ಹಾಗೂ ಬಲಿಪಶುವಿನ ಚಿತ್ರಣವನ್ನು ಪ್ರದರ್ಶಿಸಿ ಜಗತ್ತಿನ ಸಹಾನುಭೂತಿ ಗಳಿಸಲು ಮಹಿಳೆಯರನ್ನು ಮುಂಚೂಣಿ ಯಲ್ಲಿರಿಸಲಾಗಿತ್ತು.
ವಾಸ್ತವದಲ್ಲಿ, ಆಂದೋಲನದ ವರ್ಚಸ್ಸನ್ನು ಮೃದುವೆಂದು ಬಿಂಬಿಸಲು ಬೃಹತ್ ರಾಜಕೀಯ ಕಾರ್ಯತಂತ್ರವೊಂದರ ಭಾಗವಾಗಿಯೂ ಈ ತಂತ್ರವು ಆ ಆಂದೋಲನದ ಪ್ರಭಾವವನ್ನು ಹೆಚ್ಚಿಸಿತ್ತು. ಐ ಲವ್ ಮುಹಮ್ಮದ್ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಎಫ್ಐಆರ್‌ಗಳನ್ನು ನೋಂದಾಯಿಸಲಾಗಿಲ್ಲ, ಬದಲಾಗಿ ಹಿಂದೂ ಪೋಸ್ಟರ್‌ಗಳನ್ನು ಧ್ವಂಸಗೊಳಿಸಿದ್ದರಿಂದ, ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವಂಥ ಘೋಷಣೆಗಳನ್ನು ಪರಿಚಯಿಸಿದ್ದರಿಂದ ಹಾಗೆ ಮಾಡಲಾ ಯಿತು ಎಂಬುದನ್ನು ಎತ್ತಿ ತೋರಿಸಲು ಹೆಚ್ಚಿನ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ವಿಫಲವಾಗಿವೆ.
ನಿಜ ಹೇಳಬೇಕೆಂದರೆ, ಈ ಘಟನೆಗಳ ನೈಜಬಲಿಪಶುಗಳು ಹಿಂದೂಗಳೇ ಆಗಿದ್ದಾರೆ, ಆದರೆ ಹಿಂದೂ ದೇವತೆಗಳು/ಪೋಸ್ಟರ್‌ಗಳಿಗೆ ಅಗೌರವ ತೋರಿದ ಕಥೆಯನ್ನು ಬೇರೆಯದೇ ರೀತಿಯಲ್ಲಿ ತಿರುಗಿಸ ಲಾಯಿತು, ಮುಸ್ಲಿಮರನ್ನು ಕಿರುಕುಳದ ಬಲಿಪಶುಗಳೆಂದು ಚಿತ್ರಿಸಲಾಯಿತು. ಈ ವಾಸ್ತವದ ಉದ್ದೇಶಪೂರ್ವಕ ವಿರೂಪವು, ಮೂಲ ಅಪರಾಧದಿಂದ ಗಮನವನ್ನು ಬೇರೆಡೆಗೆ ಸೆಳೆಯಿತು ಮತ್ತು ರಾಜಕೀಯ ಶಕ್ತಿಗಳು ಸ್ವಂತಲಾಭಕ್ಕೆ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.
ಈ ತರಹದ ಘಟನೆಗಳ ಇಂಥ ತಪ್ಪಾದ ನಿರೂಪಣೆಯನ್ನು ದೇಶಾದ್ಯಂತ ವಿಸ್ತರಿಸಿ ರಾಜಕೀಯವಾಗಿ ಬಳಸಿಕೊಳ್ಳುವಲ್ಲಿನ ಕಾಂಗ್ರೆಸ್‌ನ ಪಾತ್ರ ದೇಶದ ಜನತೆಗೆ ಹೊಸದೇನಲ್ಲ ಅಥವಾ ದಶಕಗಳಿಂದ ಇರುವ ಕಾಂಗ್ರೆಸ್ಸಿನ ತುಷ್ಟೀಕರಣದ ಧೋರಣೆಯನ್ನು ಅರಿತ ಯಾರಿಗೂ ಇದು ಆಶ್ಚರ್ಯವೆನಿಸಲೇ ಇಲ್ಲ. ಇಸ್ಲಾಮಿಕ್ ಭಯೋತ್ಪಾದಕರಿಗಿಂತ ಹಿಂದೂ ಮೂಲಭೂತವಾದಿ ಸಂಘಟನೆಗಳು ಹೆಚ್ಚು ಅಪಾಯಕಾರಿ ಎಂದು ರಾಹುಲ್ ಗಾಂಧಿ, ಚಿದಂಬರಂ ಮುಂತಾದ ಕಾಂಗ್ರೆಸ್ಸಿನ ನಾಯಕರುಗಳು ಹಿಂದೆ ಹೇಳಿರುವುದನ್ನು ಕೇಳಿದ್ದೇವೆ.
ಅಷ್ಟೇ ಅಲ್ಲದೆ, ಇದು ‘ಹಿಂದೂ ಭಯೋತ್ಪಾದನೆ’ ಎಂಬ ಸುಳ್ಳುಸಿದ್ಧಾಂತವನ್ನು ಹಿಂದೊಮ್ಮೆ ಆರೋಪಿಸಿದ ಪಕ್ಷವೇ. ಒಂದುಕಡೆ ‘ಮೊಹಬ್ಬತ್ ಕಿ ದುಕಾನ್’ನಂಥ ಘೋಷಣೆಗಳನ್ನು ಬಳಸುವ ಕಾಂಗ್ರೆಸ್ ನಾಯಕರು, ಈ ಸಂದರ್ಭದಲ್ಲಿ ಸತ್ಯವನ್ನು ಅರಿಯುವಲ್ಲಿ ಆಸಕ್ತಿ ತೋರದೇ, ತನಿಖೆಗಳಲ್ಲಿ ವಿಶ್ವಾಸ ಇರಿಸದೇ ಅಥವಾ ತನಿಖಾ ವರದಿಗಳು ಬರುವ ತನಕ ಕಾಯದೇ, ವಿಧ್ವಂಸಕತೆ, ಹಿಂಸಾಚಾರ ಮತ್ತು ಪೊಲೀಸರ ಮೇಲಿನ ದಾಳಿಯಲ್ಲಿ ತೊಡಗಿರುವ ಗುಂಪುಗಳಿಗೆ ಪರೋಕ್ಷವಾಗಿ ಬೆಂಬಲಿಸಲು ತವಕಿಸುತ್ತಿರುವಂತೆ ಕಾಣುತ್ತಿದೆ.
ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಶತಾಯಗತಾಯ ಗೆಲ್ಲಲೇಬೇಕೆಂಬ ಹಪಹಪಿಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಶ್ರಮಿಸುತ್ತಿವೆ. ಈಗ ಮುಸ್ಲಿಮರ ಪರನಿಂತರೆ, ಬಿಹಾರದಲ್ಲಿ ಮುಸ್ಲಿಮರ ಮತಗಳ ಕ್ರೋಡೀಕರಣ ಸುಲಭವಾಗಬಹುದು ಎಂದು ಕಾಂಗ್ರೆಸ್ ಆಲೋಚಿಸು ತ್ತಿದ್ದಂತಿದೆ.
ಐ ಲವ್ ಮುಹಮ್ಮದ್ ಚಳವಳಿಯು ಸ್ವಯಂಪ್ರೇರಿತವಾದ ಹಾಗೂ ಕೇವಲ ನಂಬಿಕೆಯ ಆಧಾರದ ಪ್ರದರ್ಶನವಾಗಿರಲಿಲ್ಲ. ಇದು ಎಚ್ಚರಿಕೆಯಿಂದ ರೂಪಿಸಲಾದ ಅಭಿಯಾನವಾಗಿದೆ, ಭಾವನೆ ಗಳನ್ನು ಪ್ರಚೋದಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಬಲಿಪಶುವಿನ ಚಿತ್ರಣವನ್ನು ರಚಿಸಲು ವಿನ್ಯಾಸಗೊಳಿಸಲಾಗಿದೆ ಎನ್ನುವುದು ಎದ್ದು ಕಾಣುತ್ತಿದೆ.
ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಸತ್ಯವನ್ನು ತಿರುಚುವ ಮೂಲಕ, ರಾಜಕೀಯ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸ್ಥಳೀಯ ಘರ್ಷಣೆಯನ್ನು ರಾಷ್ಟ್ರವ್ಯಾಪಿ ಫ್ಲ್ಯಾಶ್ ಪಾಯಿಂಟ್ ಆಗಿ ಪರಿವರ್ತಿಸಲು ಯತ್ನಿಸುತ್ತಿರುವುದರಲ್ಲಿ ಅನುಮಾನವಿಲ್ಲ. ಸತತವಾಗಿ 3 ಚುನಾವಣೆಗಳನ್ನು ಗೆದ್ದು ಕೇಂದ್ರದಲ್ಲಿ ಭದ್ರವಾಗಿರುವ ಸರಕಾರವನ್ನುಬುಡಮೇಲು ಮಾಡುವಲ್ಲಿನ ಎಲ್ಲ ಯತ್ನಗಳೂ ವ್ಯರ್ಥವಾದವು. ಇವಿಎಂಗಳನ್ನು ದೂರಿಯಾಯ್ತು, ಮತಗಳ್ಳತನದ ಆರೋಪ ಮಾಡಿಯಾಯ್ತು, ಆದರೂ ವಿಪಕ್ಷಗಳಿಗೆ ಚುನಾವಣೆ ಗಳನ್ನು ಗೆಲ್ಲಲಾಗುತ್ತಿಲ್ಲ, ಗಣತಿಯ ಹೆಸರಿನಲ್ಲಿ ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚಿದರೂ ಪ್ರಯೋಜನ ಅಷ್ಟಾಗಿ ಕಾಣುತ್ತಿಲ್ಲ.
ಹಾಗಾದರೆ ಸರಕಾರಗಳನ್ನು ಉರುಳಿಸುವ ಇನ್ನುಳಿದ ದಾರಿಗಳು ಯಾವುದು? ಒಂದೇ ದಾರಿ. ಶ್ರೀಲಂಕಾ, ಬಾಂಗ್ಲಾ ದೇಶ, ನೇಪಾಳಗಳು ತೋರಿಸಿದ ದಾರಿ ನಮ್ಮದೂ ಆಗಬಹುದಾ ಎಂದು ಕೆಲವು ಹಿತಾಸಕ್ತಿಗಳು ಪರೀಕ್ಷಿಸುತ್ತಿರುವಂತಿದೆ. ವೃಥಾ ಅಪವಾದ ಮಾಡೋಣವೆಂದರೆ 12 ವರ್ಷದ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಅಥವಾ ಉತ್ತರಪ್ರದೇಶದ ಆದಿತ್ಯನಾಥರ ಆಡಳಿತ ದಲ್ಲಿ ಗಟ್ಟಿಯಾದ ಭ್ರಷ್ಟಾಚಾರದ ಪ್ರಕರಣಗಳು ಕಾಣುತ್ತಿಲ್ಲ.
ನಕ್ಸಲರ ಮೂಲಕ ಸಮಾಜದಲ್ಲಿ ಅಶಾಂತಿ ಹರಡೋಣವೆಂದರೆ, ಅವರೂ ಒಂದೋ ಬೇಷರತ್ತಾಗಿ ಶರಣಾಗುತ್ತಿದ್ದಾರೆ ಅಥವಾ ಸೈನ್ಯದ ಗುಂಡಿಗೆ ಬಲಿಯಾಗುತ್ತಿದ್ದಾರೆ. ಈಗ ಉಳಿದಿರುವ ಒಂದೇ ದಾರಿಯೆಂದರೆ, ಸಾರ್ವತ್ರಿಕ ದಂಗೆಗಳು. ಕೋಮುಗಲಭೆ-ಸಾರ್ವತ್ರಿಕ ದಂಗೆಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು. ಈ ತಂತ್ರದ ಬಳಕೆಯಿಂದ ನೆರೆರಾಷ್ಟ್ರಗಳಲ್ಲಿ ಚುನಾಯಿತ ಸರಕಾರ ಗಳನ್ನೇ ತಲೆಕೆಳಗಾಗಿಸುವಲ್ಲಿ ಯಶಸ್ಸನ್ನು ಕಂಡಾಗಿದೆ,
ಭಾರತದಲ್ಲೂ ಈ ತಂತ್ರವನ್ನೇಕೆ ಬಳಸಬಾರದು ಎಂಬ ವಿದೇಶಿ ಬೆಂಬಲಿತ/ನಿರ್ದೇಶಿತ ಗುಂಪುಗಳು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಆದರೆ, ಉತ್ತರಪ್ರದೇಶದಲ್ಲಿರುವುದು ಬಿಜೆಪಿ ಸರಕಾರ ಎನ್ನುವುದಕ್ಕಿಂತ ಹೆಚ್ಚಾಗಿ, ಯೋಗಿ ಆದಿತ್ಯನಾಥರ ಸರಕಾರವಾಗಿರುವುದರಿಂದ ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿದೆ ಎನ್ನಬಹುದು. ಮನೆಮುಂದೆ ಪೋಸ್ಟರ್ ಅಂಟಿಸಿಕೊಂಡವರೆಲ್ಲ, ಈಗ ನಿಧಾನವಾಗಿ ತಾವೇ ಕೀಳುತ್ತಿದ್ದಾರೆ.
ಅಲ್ಲಿ ಯಾರಾದರೂ ದಂಗೆಯೆಬ್ಬಿಸುವ ಕಾರ್ಯಮಾಡಿದರೆ ಅವರ ಮೂರು ತಲೆಮಾರುಗಳು ನೆನಪಿಟ್ಟುಕೊಳ್ಳುವ ಪಾಠವನ್ನು ಕಲಿಸಲಾಗುವುದು ಎಂದು ಆದಿತ್ಯನಾಥರೇ ಗುಡುಗಿದ್ದಾರೆ. ಉತ್ತರ ಪ್ರದೇಶಕ್ಕೇನೋ ಆದಿತ್ಯನಾಥರಿzರೆ; ಆದರೆ, ಬೇರೆ ರಾಜ್ಯಗಳಿಗೆ ಹಾಗಲ್ಲವಲ್ಲ. ಪಾಕಿಸ್ತಾನ, ಬಾಂಗ್ಲಾಗಳಿಂದ ಸಾವಿರಾರು ಅಕ್ರಮ ವಲಸಿಗರು ರಾಜ್ಯದಲ್ಲಿ ನೆಲೆನಿಂತರೂ, ಏನೂ ತಿಳಿಯ ದವರಂತೆ ತಣ್ಣಗೆ ಪ್ರತಿಕ್ರಿಯಿಸುವ ಸರಕಾರಗಳೇ ಹೆಚ್ಚಿವೆ.
ಹಾಗಾಗಿ, ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ, ಉಳಿದ ರಾಜ್ಯಗಳ ಮುಖ್ಯಮಂತ್ರಿಗಳು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ತುಷ್ಟೀಕರಣದ ರಾಜಕಾರಣವನ್ನು ಬಿಟ್ಟು ಎಚ್ಚರಗೊಳ್ಳುವುದೊಳಿತು.