ಮನಿ ಮೈಂಡೆಡ್
ಬೆಳಗಿನ ಜಾವ ಕಣ್ಣುಬಿಟ್ಟ ತಕ್ಷಣ ಹಾಸಿಗೆಯಿಂದ ಏಳಲು ನಮಗೊಂದು ಸ್ಪಷ್ಟ ಕಾರಣವಿರು ತ್ತದೆಯೇ? ಅಥವಾ ದಿನಗಳು ಯಾವುದೇ ಉದ್ದೇಶವಿಲ್ಲದೆ ಕೇವಲ ಯಾಂತ್ರಿಕವಾಗಿ ಕಳೆದುಹೋಗು ತ್ತಿವೆಯೇ? ಆಧುನಿಕ ಬದುಕಿನ ನೂರು ಬಗೆಯ ಒತ್ತಡಗಳು ಮತ್ತು ಗೊಂದಲಗಳ ನಡುವೆ ನಮ್ಮ ಇರುವಿಕೆಗೆ ಒಂದು ಅರ್ಥವನ್ನು ಹುಡುಕಿಕೊಳ್ಳಲು ಹೊರಟರೆ, ಅಲ್ಲಿ ನಮಗೆ ದಾರಿದೀಪ ವಾಗುವುದು ಜಪಾನಿನ ಪ್ರಾಚೀನ ಸಂಸ್ಕೃತಿಯಿಂದ ಬಂದಿರುವ ‘ಇಕಿಗಾಯ’ ಎಂಬ ತತ್ತ್ವ.
ಜೀವನದ ಪ್ರತಿ ಹಂತದಲ್ಲೂ ಸಮಾಧಾನ, ನೆಮ್ಮದಿ ಮತ್ತು ನಿಜವಾದ ಸಂತೋಷವನ್ನು ತಂದು ಕೊಡುವ ಶಕ್ತಿ ಯಾವುದಕ್ಕಾದರೂ ಇದ್ದರೆ, ಅದು ನಮ್ಮ ಬದುಕಿನ ಸ್ಪಷ್ಟವಾದ ಗುರಿಗೆ ಮಾತ್ರ ಎಂಬುದು ಜಪಾನೀಯರ ಅಚಲ ನಂಬಿಕೆ. ಅದನ್ನು ಅವರು ‘ಇಕಿಗಾಯ್’ ಎಂದು ಕರೆಯುತ್ತಾರೆ. ಶರೀರ ಮತ್ತು ಮನಸ್ಸಿನ ಆರೋಗ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ದಾರಿದೀಪ ವಾಗುತ್ತದೆ. ನಾವು ದಿನನಿತ್ಯದ ಬದುಕಿನಲ್ಲಿ ಎದುರಿಸುವ ಒತ್ತಡಗಳು, ಸವಾಲುಗಳು ಮತ್ತು ಗೊಂದಲಗಳ ನಡುವೆ ನಮ್ಮ ಇರುವಿಕೆಗೆ ಒಂದು ಅರ್ಥವನ್ನು ಕಲ್ಪಿಸಿಕೊಡುವ ಕೆಲಸವನ್ನು ಈ ಸಿದ್ದಾಂತ ಮಾಡುತ್ತದೆ.
ಜಪಾನಿನಲ್ಲಿ ನಿವೃತ್ತಿ ಎಂಬ ಪದವೇ ಇಲ್ಲ! ಜಪಾನ್ ದೇಶಕ್ಕೆ ಹೋದಾಗ ಅಥವಾ ಅಲ್ಲಿನ ಜನರ ಜೀವನ ಶೈಲಿಯನ್ನು ಸೂಕ್ಷ ವಾಗಿ ಗಮನಿಸಿದಾಗ ಗೊತ್ತಾಗುವ ಅತಿ ದೊಡ್ಡ ವಿಸ್ಮಯವೆಂದರೆ, ಅಲ್ಲಿನ ಹಿರಿಯರು ನಿವೃತ್ತಿಯ ನಂತರವೂ ಎಷ್ಟು ಸಕ್ರಿಯವಾಗಿರುತ್ತಾರೆ ಎಂಬುದು. ನಮ್ಮಲ್ಲಿ ಅರವತ್ತು ಅಥವಾ ಅರವತ್ತೈದು ವರ್ಷ ತುಂಬುತ್ತಿದ್ದಂತೆ ಉದ್ಯೋಗದಿಂದ ಸಂಪೂರ್ಣವಾಗಿ ಹೊರನಡೆದು, ಮನೆಯಲ್ಲಿ ವಿಶ್ರಾಂತಿ ಪಡೆಯುವ ಅಥವಾ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವ ಸಂಪ್ರದಾಯವಿದೆ. ಆದರೆ ಜಪಾನಿನ ಬಹುತೇಕ ಮಂದಿ ಎಂದಿಗೂ ಪೂರ್ಣ ಪ್ರಮಾಣದಲ್ಲಿ ನಿವೃತ್ತ ರಾಗುವುದಿಲ್ಲ. ತಮ್ಮ ಆರೋಗ್ಯ ಎಷ್ಟು ದಿನ ಅವಕಾಶ ಮಾಡಿಕೊಡುತ್ತದೋ, ಅಷ್ಟು ದಿನ ತಮಗೆ ಇಷ್ಟವಾದ, ಪ್ರೀತಿಸಿದ ಕೆಲಸದಲ್ಲಿ ಅವರು ನಿರತರಾಗಿರುತ್ತಾರೆ.
ಇದನ್ನೂ ಓದಿ: Keshava Prasad B Column: ಯುಪಿಐ: ದೊಡ್ಡ ವರ್ತಕರಿಂದ ಅಲ್ಪ ಶುಲ್ಕ ಪಡೆದರೆ ತಪ್ಪೇನು ?
ನಿಜ ಹೇಳಬೇಕೆಂದರೆ, ಜಪಾನಿ ಭಾಷೆಯಲ್ಲಿ ಇಂಗ್ಲಿಷಿನ ರಿಟೈರ್ಮೆಂಟ್ (Retirement) ಅಂದರೆ ಉದ್ಯೋಗದಿಂದ ಕಾಯಂ ಆಗಿ ಹಿಂದೆ ಸರಿಯುವುದು ಅಥವಾ ಕೆಲಸಕ್ಕೆ ಪೂರ್ಣವಿರಾಮ ಇಡುವುದು ಎಂಬ ಅರ್ಥವನ್ನು ನೀಡುವ ನಿರ್ದಿಷ್ಟ ಪದವೇ ಇಲ್ಲ! ನ್ಯಾಶನಲ್ ಜಿಯೋಗ್ರಾಫಿಕ್‌ನ ಬರಹಗಾರ ಹಾಗೂ ಈ ಕ್ಷೇತ್ರವನ್ನು ಆಳವಾಗಿ ಅಧ್ಯಯನ ಮಾಡಿರುವ ಡ್ಯಾನ್ ಬ್ಯೂಟ್ನರ್ ಹೇಳುವಂತೆ, ಜಪಾನಿನ ಸಂಸ್ಕೃತಿ ಯಲ್ಲಿ ಬದುಕಿಗೊಂದು ನಿರ್ದಿಷ್ಟ ಗುರಿ ಅಥವಾ ಉದ್ದೇಶ ಇರುವುದು ಎಷ್ಟು ಮುಖ್ಯವಪ್ಪಾ ಎಂದರೆ, ನಮ್ಮ ಸಮಾಜದಲ್ಲಿರುವ ‘ನಿವೃತ್ತಿ’ಯ ಕಲ್ಪನೆಯೇ ಅಲ್ಲಿ ಅಸ್ತಿತ್ವದಲ್ಲಿಲ್ಲ!
ಉದ್ದೇಶವಿಲ್ಲದೆಯೇ ಅವರು ಒಂದು ದಿನವೂ ಇರಲಾರರು. ವಿಶ್ವದ ಹಲವು ವೈದ್ಯಕೀಯ ಹಾಗೂ ಆಯುರ್ದಾಯಕ ಅಧ್ಯಯನಗಳು ಒಂದು ಸತ್ಯವನ್ನು ಬಹಿರಂಗಪಡಿಸಿವೆ. ಅದೇನೆಂದರೆ, ಕೇವಲ ಆರೋಗ್ಯಕರವಾದ ಆಹಾರ ಪದ್ಧತಿಯೊಂದೇ ದೀರ್ಘಾಯುಷ್ಯಕ್ಕೆ ಕಾರಣವಲ್ಲ; ಅದರೊಂದಿಗೆ ದೃಢವಾದ ಸಾಮಾಜಿಕ ನಂಟು ಹಾಗೂ ಸ್ಪಷ್ಟವಾದ ಬದುಕಿನ ಗುರಿ ಕೂಡ ಅಷ್ಟೇ ಮುಖ್ಯ, ಕೆಲವೊಮ್ಮೆ ಅದಕ್ಕಿಂತಲೂ ಮಿಗಿಲಾದದ್ದು!
ಜಪಾನ್ ದೇಶದ ಒಕಿನಾವಾ ದ್ವೀಪದ ಶತಾಯುಷಿಗಳ ಕುರಿತಾದ ವೈದ್ಯಕೀಯ ಸಂಶೋಧನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಜಗತ್ತಿನಲ್ಲಿ ಅತಿ ಹೆಚ್ಚು ಕಾಲ, ಅಂದರೆ ನೂರು ವರ್ಷಗಳಿಗೂ ಅಧಿಕ ಕಾಲ ಆರೋಗ್ಯವಾಗಿ ಬದುಕುವ ಮನುಷ್ಯರು ವಾಸಿಸುವ ಭೌಗೋಳಿಕ ಪ್ರದೇಶಗಳನ್ನು ‘ಬ್ಲೂ ಝೋ’ ಎಂದು ಕರೆಯಲಾಗುತ್ತದೆ. ಈ ವಲಯಗಳ ವಿಶೇಷತೆಗಳೇನೆಂದರೆ, ಇಲ್ಲಿನ ಜನರು ಪ್ರಪಂಚದ ಉಳಿದ ಜನರಿಗಿಂತ ಹೆಚ್ಚು ಕಾಲ ಬಾಳುತ್ತಾರೆ. ಅಷ್ಟೇ ಅಲ್ಲದೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಂತಹ ಗಂಭೀರ ಹಾಗೂ ದೀರ್ಘಕಾಲದ ರೋಗಗಳು ಇವರ ಹತ್ತಿರಕ್ಕೂ ಸುಳಿಯುವುದಿಲ್ಲ.
ದೇಹದಲ್ಲಿ ಉರಿಯೂತವನ್ನುಂಟುಮಾಡುವ ಅಶುದ್ಧಿಗಳು ಇಲ್ಲಿ ತೀರಾ ಕಡಿಮೆ. ಅತ್ಯಂತ ಮುಪ್ಪಿನ ವಯಸ್ಸಿನಲ್ಲೂ ಈ ಶತಾಯುಷಿಗಳು ಅನುಭವಿಸುವ ಉತ್ಸಾಹ, ಚೈತನ್ಯ ಹಾಗೂ ದೈಹಿಕ ಸದೃಢತೆ ಇತರ ದೇಶಗಳ ವೃದ್ಧರಿಗೆ ಕಲ್ಪಿಸಿಕೊಳ್ಳಲೂ ಅಸಾಧ್ಯವಾದದ್ದು. ಇವರ ರಕ್ತವನ್ನು ಪರೀಕ್ಷಿಸಿದಾಗ ಜೀವಕೋಶ ಗಳ ವೃದ್ಧಾಪ್ಯಕ್ಕೆ ಕಾರಣವಾಗುವ ಫ್ರೀ ರ್ಯಾಡಿಕಲ್ಸ್ ಬಹಳ ಕಡಿಮೆ ಇರುವುದು ಕಂಡುಬಂದಿದೆ. ಇದಕ್ಕೆ ಮುಖ್ಯ ಕಾರಣ ಅವರು ನಿತ್ಯವೂ ಸೇವಿಸುವ ಗ್ರೀನ್ ಟೀ ಹಾಗೂ ಮಿತಾಹಾರ ಸೇವನೆ. ಹೊಟ್ಟೆ ಬಿರಿಯುವಂತೆ ಅವರು ತಿನ್ನುವುದಿಲ್ಲ.
ಶೇಕಡಾ 80ರಷ್ಟು ಮಾತ್ರ ಸಾಕಾಗುತ್ತದೆ. ಇಲ್ಲಿನ ಮಹಿಳೆಯರಲ್ಲಿ ಋತುಬಂಧದ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತವೆ. ಗಂಡಸು ಮತ್ತು ಹೆಂಗಸು ಇಬ್ಬರೂ ತಮ್ಮ ಜೀವನದ ಬಹಳ ಕಾಲದವರೆಗೆ ಲೈಂಗಿಕ ಹಾರ್ಮೋನುಗಳನ್ನು ಉನ್ನತ ಮಟ್ಟದಲ್ಲಿ ಕಾಪಾಡಿಕೊಳ್ಳುತ್ತಾರೆ. ಇನ್ನು ಮೆದುಳಿನ ಜ್ಞಾಪಕಶಕ್ತಿ ಕುಂದುವ ಡಿಮೆನ್ಷಿಯಾ (Dementia) ರೋಗದ ಪ್ರಮಾಣ ಇಲ್ಲಿ ಜಾಗತಿಕ ಸರಾಸರಿ ಗಿಂತಲೂ ಬಹಳ ಕೆಳಗಿದೆ.
ಜಪಾನಿ ಭಾಷೆಯಲ್ಲಿ ‘ಇಕಿಗಾಯ್’ ಎಂದರೆ ಬದುಕಿನ ಮೌಲ್ಯ. ಇದರಲ್ಲಿ ‘ಇಕಿ’ ಎಂದರೆ ಜೀವ ಅಥವಾ ಬದುಕು ಎಂದರ್ಥವಾದರೆ, ‘ಗಾಯ’ ಎಂದರೆ ಬೆಲೆಬಾಳುವ, ಸಾರ್ಥಕವಾದ ಅಥವಾ ಮೌಲ್ಯಯುತ ವಾದ ಎಂದರ್ಥ. ಅಂದರೆ, ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಏಳಲು ನಮಗೊಂದು ಸ್ಪಷ್ಟವಾದ ಕಾರಣವಿರಬೇಕು. ನಮ್ಮ ಅಸ್ತಿತ್ವಕ್ಕೆ ಒಂದು ಬೆಲೆ ಇದೆ, ನಮ್ಮಿಂದ ಸಮಾಜಕ್ಕೆ ಅಥವಾ ನಮಗೆ ಪ್ರಿಯವಾದ ಕೆಲಸಕ್ಕೆ ಒಂದು ಕೊಡುಗೆಯಿದೆ ಎಂಬ ಭಾವನೆ ನಮ್ಮಲ್ಲಿರಬೇಕು.
ಒಕಿನಾವಾದ ಜನರು ತಮ್ಮ ಜೀವನದ ಪ್ರತಿ ಕ್ಷಣಕ್ಕೂ ಈ ‘ಇಕಿಗಾಯ’ ಮೂಲಕ ಒಂದು ಅರ್ಥ ಪೂರ್ಣ ದಿಕ್ಕನ್ನು ನೀಡಿರುವುದೇ ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯದ ರಹಸ್ಯವಾಗಿದೆ. ಡ್ಯಾನ್ ಬ್ಯೂಟ್ನರ್ ತಮ್ಮ ಸಂಶೋಧನಾ ಗ್ರಂಥದಲ್ಲಿ ಜಗತ್ತಿನಾದ್ಯಂತ ಒಟ್ಟು ಐದು ನೀಲಿ ವಲಯಗಳನ್ನು ಗುರುತಿಸಿದ್ದಾರೆ.
ಇವುಗಳಲ್ಲಿ ಜಪಾನಿನ ಒಕಿನಾವಾ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಜನರು ತರಕಾರಿಗಳು, ಹಣ್ಣು ಹಂಪಲುಗಳು ಮತ್ತು ಆಹಾರಗಳನ್ನು ಸಣ್ಣ ತಟ್ಟೆಗಳಲ್ಲಿ ಮಿತವಾಗಿ ಸೇವಿಸುತ್ತಾರೆ. ತಮ್ಮ ಇಕಿಗಾಯ್ ತತ್ತ್ವದ ಜತೆಗೆ ಆತ್ಮೀಯ ಸ್ನೇಹಿತರ ಬಳಗವು ಅವರ ಬದುಕಿನ ಏಳುಬೀಳುಗಳಲ್ಲಿ ಪರಸ್ಪರ ಆಸರೆಯಾಗಿ ನಿಲ್ಲುತ್ತದೆ. ಇಟಲಿಯ ಸಾರ್ಡಿನಿಯಾದಲ್ಲಿ ಜನರು ತಾಜಾ ತರಕಾರಿಗಳು ಹಾಗೂ ಮಿತವಾಗಿ ಒಂದೆರಡು ಲೋಟ ವೈನ್ ಸೇವಿಸುತ್ತಾರೆ. ಇಲ್ಲಿಯೂ ಕೂಡ ಸಮುದಾಯದ ಒಗ್ಗಟ್ಟು ಮತ್ತು ಪರಸ್ಪರ ನಂಬಿಕೆ ದೀರ್ಘಾಯುಷ್ಯಕ್ಕೆ ಕಾರಣವಾಗಿದೆ.
ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾ ಎಂಬಲ್ಲಿ ವಾಸಿಸುವ ಸೆವೆಂತ್-ಡೇ ಅಡ್ವೆಂಟಿಸ್ಟ್‌ಗಳ ಸಮುದಾಯವು ಅತ್ಯಂತ ಶಿಸ್ತಿನ, ಆರೋಗ್ಯಕರ ಹಾಗೂ ನೈತಿಕ ಜೀವನಶೈಲಿಯನ್ನು ಅಳವಡಿಸಿ ಕೊಂಡಿದ್ದು, ಅಮೆರಿಕದಲ್ಲಿ ಅತಿ ಹೆಚ್ಚು ಕಾಲ ಬದುಕುವ ಜನರೆನಿಸಿಕೊಂಡಿದ್ದಾರೆ. ಕೋಸ್ಟರಿಕಾದ ನಿಕೋಯಾ ಪೆನಿನ್ಸುಲಾದಲ್ಲಿ ಹಿರಿಯರು ತೊಂಬತ್ತರ ವಯಸ್ಸನ್ನು ದಾಟಿದ ಮೇಲೂ ಅತ್ಯಂತ ಚಟುವಟಿಕೆಯಿಂದಿರುತ್ತಾರೆ.
ಮುಂಜಾನೆ ಐದೂವರೆಗೆ ಎದ್ದು ತಮ್ಮ ಗದ್ದೆಗಳಲ್ಲಿ, ತೋಟಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವುದು ಅವರಿಗೆ ಎಂದಿಗೂ ಆಯಾಸದಾಯಕವಲ್ಲ. ಗ್ರೀಸ್‌ನ ಇಕಾರಿಯಾ ಎಂಬ ಪುಟ್ಟ ದ್ವೀಪದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ತೊಂಬತ್ತು ವರ್ಷ ದಾಟಿದವರಾಗಿದ್ದಾರೆ (ಅಮೆರಿಕದಲ್ಲಿ ಇದು ಶೇಕಡಾ ಒಂದಕ್ಕಿಂತಲೂ ಕಡಿಮೆ).
ಕ್ರಿ.ಪೂ. 500ರಿಂದಲೂ ನಡೆದುಕೊಂಡು ಬಂದಿರುವ ಇಲ್ಲಿನ ಸರಳ ಜೀವನಶೈಲಿಯೇ ಈ ದ್ವೀಪದ ಆಯುಸ್ಸಿನ ಗುಟ್ಟು. ಗಮನಿಸಬೇಕಾದ ಕುತೂಹಲಕಾರಿ ಸಂಗತಿಯೆಂದರೆ, ಈ ಐದು ವಲಯಗಳಲ್ಲಿ ಮೂರು ಪ್ರದೇಶಗಳು ದ್ವೀಪಗಳೇ ಆಗಿವೆ. ದ್ವೀಪಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳು ಸೀಮಿತ ವಾಗಿರುತ್ತವೆ. ಹೀಗಾಗಿ ಅಲ್ಲಿನ ಜನರು ಬದುಕುಳಿಯಲು ಪರಸ್ಪರ ಸಹಾಯ ಮಾಡಲೇಬೇಕಾದ ಪರಿಸ್ಥಿತಿ ಇರುತ್ತದೆ. ಕಷ್ಟದಲ್ಲಿರುವವರಿಗೆ ಕೈಜೋಡಿಸುವುದು, ಪರರಿಗೆ ಸಹಾಯ ಮಾಡುವುದೇ ಬಹುಶಃ ಅವರ ಉಸಿರನ್ನು ಗಟ್ಟಿಯಾಗಿ ಹಿಡಿದಿಡುವ ಪ್ರಬಲ ‘ಇಕಿಗಾಯ’ ಆಗಿ ಕಾರ್ಯ ನಿರ್ವಹಿಸುತ್ತದೆ.
ವಿಶ್ವದ ಈ ಐದು ನೀಲಿ ವಲಯಗಳನ್ನು ದೀರ್ಘಕಾಲ ಅಧ್ಯಯನ ಮಾಡಿದ ವಿಜ್ಞಾನಿಗಳು ಮತ್ತು ತಜ್ಞರು ಕೆಲವು ಸಾರ್ವತ್ರಿಕ ಸೂತ್ರಗಳನ್ನು ಹೊರಹಾಕಿದ್ದಾರೆ. ಪ್ರತಿಯೊಬ್ಬ ಮನುಷ್ಯನು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಆ ನಾಲ್ಕು ಸೂತ್ರಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳೇನು ಗೊತ್ತೇ? ಮೊದಲನೆಯದಾಗಿ ಸಮತೋಲಿತ ಹಾಗೂ ಮಿತವಾದ ಆಹಾರ ಸೇವಿಸಬೇಕು.
ಮಾಂಸ ಮತ್ತು ಸಂಸ್ಕರಿಸಿದ ಕೃತಕ ಆಹಾರಗಳ ಸೇವನೆ ಬಹಳ ಕಡಿಮೆ ಇರಬೇಕು. ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ಮಿತಾಹಾರ ಆರೋಗ್ಯಕ್ಕೆ ವರ. ಎರಡನೆಯದಾಗಿ ನಿತ್ಯದ ದೈಹಿಕ ಚಟುವಟಿಕೆ ಅವಶ್ಯಕ. ಜಿಮ್ ಗಳಲ್ಲಿ ಮಾಡುವ ಕಠಿಣವಾದ, ಸುಸ್ತಾಗಿಸುವ ವ್ಯಾಯಾಮಗಳು ಇಲ್ಲಿ ಮುಖ್ಯವಲ್ಲ. ಬದಲಿಗೆ ಪ್ರತಿದಿನವೂ ಕಾಲ್ನಡಿಗೆಯ ಮೂಲಕ ಓಡಾಟ ನಡೆಸುವುದು, ತಮ್ಮ ಕೈಯಾರೆ ತೋಟದಲ್ಲಿ ಕೆಲಸ ಮಾಡುವುದು, ಮಣ್ಣಿನೊಂದಿಗೆ ಒಡನಾಡುವುದು ಅತಿ ಮುಖ್ಯ.
ದಿನನಿತ್ಯದ ಮಿತವಾದ ಶ್ರಮವೇ ದೇಹವನ್ನು ಸದೃಢವಾಗಿಡುತ್ತದೆ. ಮೂರನೆಯದಾಗಿ ಬದುಕಿ ಗೊಂದು ಸ್ಪಷ್ಟ ಗುರಿ ಅಗತ್ಯ. ಜೀವನದಲ್ಲಿ ನಿಷ್ಪ್ರಯೋಜಕ ಎಂಬ ಭಾವನೆಗೆ ಅವಕಾಶವಿಲ್ಲದೆ, ಪ್ರತಿದಿನ ಬೆಳಿಗ್ಗೆ ಏಳಲು ನಮಗೊಂದು ಕಾರಣವಿರಬೇಕು. ಮಾಡುವ ಕೆಲಸದ ಮೇಲೆ ಪ್ರೀತಿ ಇರಬೇಕು. ನಾಲ್ಕನೆಯದಾಗಿ ಉತ್ತಮ ಸಾಮಾಜಿಕ ನಂಟು ಕೂಡ ಇರಬೇಕು.
ವಿಶಾಲವಾದ ಸ್ನೇಹಿತರ ಬಳಗ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಕುಟುಂಬ ಹಾಗೂ ಸಮಾಜ ದೊಂದಿಗೆ ಗಟ್ಟಿಯಾದ ಬಾಂಧವ್ಯವಿರಬೇಕು. ಹಾಗಾದರೆ, ಜಪಾನಿಗರ ಈ ಇಕಿಗಾಯ್ ಪರಿಕಲ್ಪನೆ ಗೂ ಹಣ ಸಂಪಾದನೆಗೂ ಸಂಬಂಧವಿಲ್ಲವೇ? ಖಂಡಿತಾ ಇದೆ. ಇಕಿಗಾಯ್ ನ ನಕ್ಷೆಯನ್ನು ಗಮನಿಸಿದರೆ, ಅದು ಕೇವಲ ಆಧ್ಯಾತ್ಮಿಕ ತೃಪ್ತಿಯ ಮಾತಷ್ಟೇ ಅಲ್ಲ.
ನಮಗೆ ಇಷ್ಟವಾದದ್ದು, ನಾವು ಯಾವುದರಲ್ಲಿ ನುರಿತವರು, ಜಗತ್ತಿಗೆ ಯಾವುದರ ಅವಶ್ಯಕತೆಯಿದೆ ಮತ್ತು ನಾವು ಯಾವುದಕ್ಕೆ ಹಣ ಪಡೆಯಬಹುದು-ಈ ನಾಲ್ಕೂ ಅಂಶಗಳು ಛೇದಿಸುವ ಜಾಗದ ನಿಜವಾದ ಇಕಿಗಾಯ್ ಅಡಗಿದೆ. ಜಪಾನಿಯರು ಹಣದ ಬೆನ್ನುಹತ್ತುವುದಿಲ್ಲ ನಿಜ, ಆದರೆ ಆರ್ಥಿಕ ಸ್ವಾವಲಂಬನೆ ಮತ್ತು ಜೀವನೋಪಾಯವು ಬದುಕಿನ ಒಂದು ಅನಿವಾರ್ಯ ಹಾಗೂ ಆರೋಗ್ಯಕರ ಭಾಗ ಎಂಬುದನ್ನು ಅವರು ಬಲ್ಲರು.
ಇಳಿವಯಸ್ಸಿನಲ್ಲೂ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಅವರು ಕೇವಲ ಮಾನಸಿಕ ತೃಪ್ತಿಯನ್ನಷ್ಟೇ ಅಲ್ಲ, ಆರ್ಥಿಕ ಸ್ವಾತಂತ್ರ್ಯವನ್ನೂ ಕಾಪಾಡಿಕೊಳ್ಳುತ್ತಾರೆ. ಹೀಗಾಗಿ, ನೀವು ಏನೇ ಮಾಡಿ, ಆದರೆ ಬದುಕಿನಿಂದ ಎಂದಿಗೂ ನಿವೃತ್ತರಾಗಬೇಡಿ ಎಂಬ ಸಂದೇಶವೇ ಈ ಎಲ್ಲಾ ಅಧ್ಯಯನಗಳ ಸಾರ. ನಿವೃತ್ತಿ ಎಂದರೆ ಕಾರ್ಯಶೀಲತೆಯನ್ನು ಮುಕ್ತಾಯಗೊಳಿಸುವುದಲ್ಲ. ನಮ್ಮ ಆಸಕ್ತಿಗಳು, ನಮ್ಮ ಒಡನಾಟಗಳು ಮತ್ತು ಸಮಾಜಕ್ಕೆ ನಾವು ನೀಡುವ ಕೊಡುಗೆಯನ್ನು ಜೀವಿತದ ಕೊನೆಯ ಕ್ಷಣದವರೆಗೆ ಜೀವಂತವಾಗಿಡುವುದು. ನಮ್ಮೊಳಗಿನ ‘ಇಕಿಗಾಯ್’ ಅನ್ನು ಅರಿತುಕೊಂಡು, ಪ್ರಕೃತಿಯೊಂದಿಗೆ ಮೇಳೈಸುತ್ತಾ, ಪ್ರತಿಯೊಬ್ಬರೊಂದಿಗೆ ಪ್ರೀತಿಯಿಂದ ಬಾಳಿದರೆ ನೂರು ಕಾಲ ಆರೋಗ್ಯದಿಂದ ಬದುಕುವುದು ಕಷ್ಟವಲ್ಲ, ಅದೊಂದು ಸುಂದರ ಅನುಭವವಷ್ಟೆ.