Keshava Prasad B Column: ಯುಪಿಐ: ದೊಡ್ಡ ವರ್ತಕರಿಂದ ಅಲ್ಪ ಶುಲ್ಕ ಪಡೆದರೆ ತಪ್ಪೇನು ?
ಇದು ಎಷ್ಟು ನ್ಯಾಯ? ನ್ಯಾಯಯುತವಾಗಿ ನೋಡಿದರೆ, ಸೇವೆಯನ್ನು ಬಳಸುವವರು ಅದರ ವೆಚ್ಚದ ಸ್ವಲ್ಪ ಭಾಗವನ್ನು ಭರಿಸುವುದೇ ಸರಿಯಾದ ಕ್ರಮ ಎಂಬುದು ಮತ್ತೊಂದು ವಾದ. ಇನ್ನು ಅಂಗಡಿ ಯವರು ಎಂಡಿಆರ್ ಶುಲ್ಕವನ್ನು ಗ್ರಾಹಕರ ಮೇಲೆ ಹೇರುತ್ತಾರೆ ಎಂಬ ಆತಂಕದ ಬಗ್ಗೆ ಹೇಳುವುದಾದರೆ, ‘ಇದು ಸಂಪೂರ್ಣವಾಗಿ ಹಾಗೆ ಆಗುವುದಿಲ್ಲ.
-
ಮನಿ ಮೈಂಡೆಡ್
ಯಾವುದೇ ಆರ್ಥಿಕ ವ್ಯವಸ್ಥೆ ಕೇವಲ ಸರ್ಕಾರದ ಸಬ್ಸಿಡಿಯ ಮೇಲೆಯೇ ದೀರ್ಘಕಾಲ ಯಶಸ್ವಿ ಯಾಗಿ ಮುಂದುವರಿಯಲು ಸಾಧ್ಯವಿಲ್ಲ. ದೊಡ್ಡ ಮೊತ್ತದ ವ್ಯಾಪಾರಿ ವಹಿವಾಟುಗಳ ಮೇಲೆ ವಿಧಿಸುವ ಒಂದು ಸಣ್ಣ ಶುಲ್ಕ, ಇಡೀ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ದೀರ್ಘಕಾಲಿಕ ವಾಗಿ ಉಳಿಸಲು ಮತ್ತು ಭಾರತದ ಆರ್ಥಿಕ ಪ್ರಗತಿಯ ಮುಂದಿನ ಹೆಜ್ಜೆಗೆ ಅಗತ್ಯವಿರುವ ಒಂದು ಚಿಕ್ಕ ಬೆಲೆಯಾಗಿದೆ.
ಜೇಬಿನಲ್ಲಿ ನೋಟುಗಳಿಲ್ಲದಿದ್ದರೂ ಚಿಂತೆಯಿಲ್ಲ; ದರ್ಶಿನಿಯ-ಕೆಫೆಯ ಒಂದು ಕಪ್ ಚಹಾ ಕುಡಿದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಷಣಮಾತ್ರದಲ್ಲಿ ಹಣ ಪಾವತಿಸುವುದು ಈಗ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಭಾರತೀಯರಿಗೆ ‘ಭೀಮ್ ಯುಪಿಐ’ (UPI) ತಂದುಕೊಟ್ಟಿರುವ ಈ ಸೌಲಭ್ಯ ಕ್ರಾಂತಿಕಾರಿಯೆಂದೇ ಹೇಳಬೇಕು. ಯಾವುದೇ ಶುಲ್ಕವಿಲ್ಲದೆ, ಕನಿಷ್ಠ ಒಂದು ರೂಪಾಯಿ ಕೂಡ ಹೆಚ್ಚುವರಿಯಾಗಿ ನೀಡದೆ ಹಣ ಕಳುಹಿಸುವ ಈ ಸೌಕರ್ಯಕ್ಕೆ ಎಲ್ಲರೂ ಒಗ್ಗಿಕೊಂಡಿದ್ದಾರೆ.
ಆದರೆ, ಇದೀಗ ಕೇಂದ್ರ ಸರ್ಕಾರದಿಂದ ಒಂದು ಪ್ರಮುಖ ನಿರ್ಧಾರ ಹೊರಬಿದ್ದಿದೆ. 2026ರ ಅಕ್ಟೋಬರ್ 15 ರಿಂದ 2000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಕೆಲವೊಂದು ನಿಯಮಗಳ ಅಡಿಯಲ್ಲಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. (ಗಮನಿಸಿ: ಒಬ್ಬರಿಂದ ಮತ್ತೊಬ್ಬರಿಗೆ ಮಾಡುವ ವೈಯಕ್ತಿಕ ಹಣ ವರ್ಗಾವಣೆಗಳು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿವೆ). ಇದು ಸಾಮಾನ್ಯ ಬಳಕೆದಾರರಿಗೆ, ಸಣ್ಣ ಪುಟ್ಟ ಬಿಸಿನೆಸ್ ಮಾಡುವವರಿಗೆ ಅನ್ವಯವಾಗುವುದಿಲ್ಲ.
ಇದನ್ನೂ ಓದಿ: Keshava Prasad B Column: ಭಾರತದ ಚಹಾ ಅಂಗಡಿಯಿಂದ ಬ್ರಿಕ್ಸ್ ಯುಪಿಐ ಕ್ರಾಂತಿ !
ಹೆಚ್ಚಿನ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳು ಭರಿಸಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ. ಹೀಗಿದ್ದರೂ, ಈ ನಿರ್ಧಾರ ಹೊರ ಬರುತ್ತಿದ್ದಂತೆ ಜನರ ಮನಸ್ಸಿನಲ್ಲಿ ಒಂದು ಸಹಜ ಆತಂಕ ಮೂಡಿದೆ. ವ್ಯಾಪಾರಿಗಳು ಈ ಶುಲ್ಕದ ಭಾರವನ್ನು ನಮ್ಮ ಮೇಲೆಯೇ ಹಾಕಿ ವಸ್ತುಗಳ ಬೆಲೆ ಹೆಚ್ಚಿಸದೆ ಇರುತ್ತಾರೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ಆತಂಕ ತಪ್ಪೇನಲ್ಲ. ಆದರೆ, ಯುಪಿಐ ವ್ಯವಸ್ಥೆ ಹೀಗೇ ಉಚಿತವಾಗಿ ಮುಂದುವರಿಯಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವ ಮೊದಲು ನಾವು ಬಹಳ ಮುಖ್ಯವಾದ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ನಮಗೆ ಸಂಪೂರ್ಣ ಉಚಿತ ವಾಗಿ ಸಿಗುವ ಈ ಸೇವೆಯ ವೆಚ್ಚವನ್ನು ವಾಸ್ತವವಾಗಿ ಭರಿಸುತ್ತಿರುವವರು ಯಾರು? ಇದನ್ನು ಅರ್ಥಮಾಡಿಕೊಳ್ಳಲು ಮೂರು ಉದಾಹರಣೆಗಳನ್ನು ಗಮನಿಸಬಹುದು.
ನಾವು ಒಬ್ಬ ಆಟೋ ಡ್ರೈವರ್‌ಗೆ 1000 ರೂಪಾಯಿ ನಗದು ಹಣ ನೀಡಿದರೆ ಯಾರೂ ಯಾವುದೇ ಶುಲ್ಕ ಪಡೆಯುವುದಿಲ್ಲ. ಆದರೆ ವಾಸ್ತವವಾಗಿ ಆ ನಗದು ಹಣ ಉಚಿತವಲ್ಲ. ಕರೆನ್ಸಿ ನೋಟುಗಳ ಮುದ್ರಣ, ಸಾಗಾಟ, ಶೇಖರಣೆ ಮತ್ತು ಹಳೆಯ ನೋಟುಗಳ ಬದಲಾವಣೆಗೆ ತಗಲುವ ಅಪಾರ ವೆಚ್ಚವನ್ನು ಸರ್ಕಾರ ಮತ್ತು ಆರ್‌ಬಿಐ ಭರಿಸುತ್ತವೆ, ಅಂತಿಮವಾಗಿ ಅದರ ಹೊರೆ ಸಾರ್ವಜನಿಕರ ಮೇಲೆಯೇ ಬೀಳುತ್ತದೆ.
ಇನ್ನು, ನಾವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದರೆ ನಮಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. ಆದರೆ ಅಂಗಡಿಯವರು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (ಎಂಡಿಆರ್) ಎಂಬ ಶುಲ್ಕವನ್ನು ಈ ಪಾವತಿ ವ್ಯವಸ್ಥೆಗೆ ನೀಡುತ್ತಾರೆ. ಈ ಶುಲ್ಕವನ್ನು ವ್ಯಾಪಾರಿಗಳ ಬ್ಯಾಂಕ್, ಕಾರ್ಡ್ ನೆಟ್ವರ್ಕ್ ಒದಗಿಸುವವರು (ಉದಾಹರಣೆಗೆ: ವೀಸಾ, ಮಾಸ್ಟರ್ ಕಾರ್ಡ್, ರುಪೇ) ಮತ್ತು ಗ್ರಾಹಕರ ಕಾರ್ಡ್ ನೀಡಿದ ಬ್ಯಾಂಕ್ ಪರಸ್ಪರ ಹಂಚಿಕೊಳ್ಳುತ್ತವೆ. ಆದರೆ ಯುಪಿಐ ಮೂಲಕ ಪಾವತಿಸುವಾಗ ನಾವಾಗಲಿ ಅಥವಾ ಅಂಗಡಿಯವರಾಗಲಿ ಯಾವುದೇ ಹೆಚ್ಚುವರಿ ಹಣ ನೀಡುವುದಿಲ್ಲ.
ಹಾಗಂದ ಮಾತ್ರಕ್ಕೆ ಇದಕ್ಕೆ ಯಾವುದೇ ಖರ್ಚಿಲ್ಲ ಎಂದರ್ಥವಲ್ಲ. ಇದರ ಹಿಂದೆ ಅತ್ಯಾಧುನಿಕ ತಂತ್ರಜ್ಞಾನ, ಸೈಬರ್ ಭದ್ರತೆ, ಬೃಹತ್ ಸರ್ವರ್‌ಗಳು, ನೆಟ್ವರ್ಕ್ ಮತ್ತು ಮೂಲಭೂತ ಸೌಕರ್ಯಗಳ ನಿರಂತರ ನಿರ್ವಹಣೆ ಇದೆ. ಸದ್ಯಕ್ಕೆ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳೇ (PSPs) ಈ ಸಂಪೂರ್ಣ ಹಿನ್ನೆಲೆ ವೆಚ್ಚವನ್ನು ಭರಿಸುತ್ತಿವೆ.
ಹಾಗಾದರೆ ಪ್ರಶ್ನೆ ಇರುವುದು ಖರ್ಚಿನ ಬಗ್ಗೆ ಅಲ್ಲ, ಆ ವೆಚ್ಚವನ್ನು ಯಾರು ಭರಿಸಬೇಕು ಎಂಬುದರ ಬಗ್ಗೆ. ಯುಪಿಐ ಸಂಪೂರ್ಣ ಉಚಿತವಾಗಿರಬೇಕು ಎನ್ನುವುದಕ್ಕೆ ಪ್ರಬಲವಾದ ವಾದಗಳಿವೆ. ಉಚಿತ ಸೇವೆ ಇರುವುದರಿಂದಲೇ ಕೋಟ್ಯಂತರ ಸಣ್ಣ ವ್ಯಾಪಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳು ಡಿಜಿಟಲ್ ಪಾವತಿಯತ್ತ ಆಕರ್ಷಿತರಾಗಿದ್ದಾರೆ. ಒಂದು ವೇಳೆ ಶುಲ್ಕ ವಿಧಿಸಿದರೆ ಈ ಬಳಕೆ ಕುಂಠಿತಗೊಂಡು ಜನರು ಮತ್ತೆ ಹಳೆಯ ನಗದು ವ್ಯವಹಾರಕ್ಕೇ ಮರಳುವ ಅಪಾಯವಿದೆ. ಅಲ್ಲದೆ, ಯುಪಿಐ ಡಿಜಿಟಲ್ ಹೆಜ್ಜೆಗುರುತನ್ನು ಸೃಷ್ಟಿಸಿ, ಆರ್ಥಿಕತೆಯನ್ನು ಅಧಿಕೃತಗೊಳಿಸುತ್ತದೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಸಾಲ ಪಡೆಯಲು ಸಹಾಯ ಮಾಡುತ್ತದೆ. ಈ ಲಾಭಗಳು ಇಡೀ ದೇಶಕ್ಕೆ ಸಿಗುತ್ತಿವೆ ಎನ್ನುವುದು ಒಂದು ವಾದ.
ಮತ್ತೊಂದೆಡೆ, ಶುಲ್ಕ ವಿಧಿಸಬೇಕು ಎನ್ನುವ ವಾದಕ್ಕೂ ಬಲವಾದ ಆರ್ಥಿಕ ಕಾರಣಗಳಿವೆ. ಬ್ಯಾಂಕ್ ಗಳು ಈ ಹೊರೆಯನ್ನು ನಿರಂತರವಾಗಿ ಹೊರಬೇಕಾದರೆ, ಅವು ಇತರ ಮಾರ್ಗಗಳ ಮೂಲಕ ಹಣ ರಿಕವರಿ ಮಾಡಲು ನೋಡುತ್ತವೆ. ಉದಾಹರಣೆಗೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಭಾರಿ ಮೊತ್ತದ ಫಿಕ್ಸೆಡ್ ಡೆಪಾಜಿಟ್ ಇದ್ದು, ನೀವು ಎಂದಿಗೂ ಯುಪಿಐ ಬಳಸುವುದಿಲ್ಲ ಎಂದಟ್ಟುಕೊಳ್ಳಿ. ಆದರೂ ಬ್ಯಾಂಕ್ ಒದಗಿಸುವ ಉಚಿತ ಯುಪಿಐ ಸೇವೆಗಳ ವೆಚ್ಚವನ್ನು ಬ್ಯಾಂಕ್ ತನ್ನ ಇಡೀ ವ್ಯವಸ್ಥೆಯ ಮೂಲಕ ನಿರ್ವಹಿಸಬೇಕು. ಇದರ ಪರಿಣಾಮವಾಗಿ ನಿಮ್ಮ ಎಫ್ʼಡಿ ಮೇಲಿನ ಬಡ್ಡಿ ದರ ಕಡಿಮೆ ಆಗಬಹುದು ಅಥವಾ ಸಾಲಗಳ ಮೇಲಿನ ಶುಲ್ಕ ಹೆಚ್ಚಾಗಬಹುದು. ಅಂದರೆ, ನೀವು ಯುಪಿಐ ಬಳಸದಿದ್ದರೂ ಪರೋಕ್ಷವಾಗಿ ಇತರರ ಯುಪಿಐ ಬಳಕೆಗೆ ಸಬ್ಸಿಡಿ ನೀಡುತ್ತಿದ್ದೀರಿ ಎಂದಾಯಿತು.
ಇದು ಎಷ್ಟು ನ್ಯಾಯ? ನ್ಯಾಯಯುತವಾಗಿ ನೋಡಿದರೆ, ಸೇವೆಯನ್ನು ಬಳಸುವವರು ಅದರ ವೆಚ್ಚದ ಸ್ವಲ್ಪ ಭಾಗವನ್ನು ಭರಿಸುವುದೇ ಸರಿಯಾದ ಕ್ರಮ ಎಂಬುದು ಮತ್ತೊಂದು ವಾದ. ಇನ್ನು ಅಂಗಡಿಯವರು ಎಂಡಿಆರ್ ಶುಲ್ಕವನ್ನು ಗ್ರಾಹಕರ ಮೇಲೆ ಹೇರುತ್ತಾರೆ ಎಂಬ ಆತಂಕದ ಬಗ್ಗೆ ಹೇಳುವುದಾದರೆ, ‘ಇದು ಸಂಪೂರ್ಣವಾಗಿ ಹಾಗೆ ಆಗುವುದಿಲ್ಲ.
ಅಂಗಡಿಯವರು ಯಾವುದೇ ವಸ್ತುವಿನ ಬೆಲೆ ನಿಗದಿಪಡಿಸುವಾಗ ಬಾಡಿಗೆ, ಕರೆಂಟ್ ಬಿಲ, ಸಾಗಾಣಿಕೆ ವೆಚ್ಚಗಳನ್ನು ಹೇಗೆ ಒಟ್ಟಾಗಿ ಸರಿದೂಗಿಸಿಕೊಳ್ಳುತ್ತಾರೋ, ಹಾಗೆಯೇ ಇದನ್ನೂ ಕೂಡ ನಿಭಾಯಿಸು ತ್ತಾರೆ. ದೊಡ್ಡ ಮಳಿಗೆಗಳು ಇದನ್ನು ತಮ್ಮ ಲಾಭದ ಅಂಚಿನ ಭರಿಸಿದರೆ, ಸಣ್ಣ ವ್ಯಾಪಾರಿಗಳು ಬೆಲೆ ಹೆಚ್ಚಿಸಿದರೂ ಅದು ನಿರ್ದಿಷ್ಟವಾಗಿ ಯುಪಿಐ ಗ್ರಾಹಕರಿಗೆ ಮಾತ್ರ ಅನ್ವಯಿಸುವುದಿಲ್ಲ; ಒಟ್ಟಾರೆ ಬೆಲೆಗಳ ಮೇಲೆ ಅದರ ಪ್ರಭಾವವಿರಬಹುದು.
ಹಾಗಂದ ಮಾತ್ರಕ್ಕೆ ಪ್ರಸ್ತುತ ಇರುವ ಉಚಿತ ಪದ್ಧತಿಯೇ ಉತ್ತಮ ಎಂದರ್ಥವಲ್ಲ; ಪಾರದರ್ಶಕ ವಾದ ಸಣ್ಣ ಶುಲ್ಕವಿದ್ದರೆ ಇಡೀ ಹಣಕಾಸು ವ್ಯವಸ್ಥೆಯ ಮೇಲೆ ಬೀಳುವ ಅನಗತ್ಯ ಒತ್ತಡ ತಪ್ಪುತ್ತದೆ’ ಎನ್ನುತ್ತಾರೆ ಆರ್‌ಬಿಐನ ಮಾಜಿ ಗವನರ್ರ ಡಿ.ಸುಬ್ಬರಾವ್. ಯುಪಿಐ ಎನ್ನುವುದು ಭಾರತ ಕಂಡ ಅತ್ಯಂತ ಅದ್ಭುತವಾದ ಯೋಜನೆ. ಇದು ಪಾವತಿ ವ್ಯವಸ್ಥೆಯಲ್ಲಿ ಆರ್ಥಿಕ ಸೇರ್ಪಡೆಯನ್ನು ಅದ್ಭುತವಾಗಿ ಸಾಧಿಸಿದೆ. ಆದರೆ ಪಾವತಿ ಮಾತ್ರವೇ ಆರ್ಥಿಕ ಸೇರ್ಪಡೆಯಲ್ಲ; ಇದರ ಮುಂದಿನ ದೊಡ್ಡ ಗುರಿ ‘ಸಾಲ ಸೌಲಭ್ಯ’.
ಡಿಜಿಟಲ್ ಪಾವತಿ ಪಡೆಯುವ ಸಣ್ಣ ವ್ಯಾಪಾರಿಗಳು ಮುಂದೆ ಸುಲಭವಾಗಿ ಬಂಡವಾಳ ಸಾಲ ಪಡೆಯಲು, ತಮ್ಮ ವ್ಯವಹಾರವನ್ನು ಬೆಳೆಸಿಕೊಳ್ಳಲು ಇದು ದಾರಿ ಮಾಡಿಕೊಡಬೇಕು. ಅದಕ್ಕಾಗಿ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿರಬೇಕು. ದೊಡ್ಡ ಮೊತ್ತದ ವ್ಯಾಪಾರಿ ವಹಿವಾಟುಗಳ ಮೇಲೆ ವಿಧಿಸುವ ಅತ್ಯಲ್ಪ ಹಾಗೂ ಸೂಕ್ತ ವಿನಾಯಿತಿಗಳಿರುವ ಒಂದು ಸಣ್ಣ ಶುಲ್ಕ, ಇಡೀ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ದೀರ್ಘಕಾಲಿಕವಾಗಿ ಉಳಿಸಲು ಮತ್ತು ಭಾರತದ ಆರ್ಥಿಕ ಪ್ರಗತಿಯ ಮುಂದಿನ ಹೆಜ್ಜೆಗೆ ಅಗತ್ಯವಿರುವ ಒಂದು ಚಿಕ್ಕ ಬೆಲೆಯಾಗಿದೆ.
ಯುಪಿಐ ಶುಲ್ಕಕ್ಕೆ ಸಂಬಂಧಿಸಿ ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಮೋಹನ್ ದಾಸ್ ಪೈ ಸರಳವಾಗಿ ವಿವರಿಸಿದ್ದಾರೆ. ಇದರಿಂದಾಗಿ ಶೇ.96ರಷ್ಟು ಯುಪಿಐ ವಹಿವಾಟು ಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಷ್ಟು ಉಚಿತವಾಗಿಯೇ ಮುಂದುವರಿಯಲಿದೆ. ಏಕೆಂದರೆ, ಒಟ್ಟು ಪಾವತಿ ಗಳಲ್ಲಿ ಸುಮಾರು ಶೇ 70ರಷ್ಟು ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ವರ್ಗಾವಣೆಗಳಾಗಿವೆ.
ಇವುಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. 2000 ರುಪಾಯಿಗಿಂತ ಕಡಿಮೆ ಮೊತ್ತದ ಪಾವತಿಗಳು ಸಂಪೂರ್ಣವಾಗಿ ವಿನಾಯಿತಿಯನ್ನು ಹೊಂದಿವೆ. ಕೇವಲ 2000 ದಾಟಿದ ವಹಿವಾಟುಗಳಿಗೆ ಮಾತ್ರ ಅತ್ಯಲ್ಪ ಎಂಡಿಆರ್ ಅನ್ವಯಿಸುತ್ತದೆ. ಎಂಡಿಆರ್ ಎನ್ನುವುದು ಸರ್ಕಾರಕ್ಕೆ ಕಟ್ಟುವ ತೆರಿಗೆಯಲ್ಲ. ಇದು ಕ್ರೆಡಿಟ್ ಕಾರ್ಡ್ ಬಳಕೆಯಂತೆ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ನೀಡುವ ಪ್ರೊಸೆಸಿಂಗ್ ಶುಲ್ಕವಷ್ಟೇ. ಯುಪಿಐ ವಹಿವಾಟುಗಳು ಹೆಚ್ಚಾದಾಗ ಒಂದಷ್ಟು ವಹಿವಾಟು ಗಳು ವಿಫಲಗೊಳ್ಳುತ್ತಿದ್ದವು.
ಮುಂದಿನ ಎರಡು ವರ್ಷಗಳಲ್ಲಿ ವಹಿವಾಟುಗಳ ಪ್ರಮಾಣವು ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ. ಈ ಬೃಹತ್ ದಟ್ಟಣೆಯನ್ನು ನಿಭಾಯಿಸಲು ಮತ್ತು ರಿಯಲ್-ಟೈಮ್ ಪ್ರೊಸೆಸಿಂಗ್ ಗಾಗಿ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಬೇಕಿದೆ. ಈ ಅಪ್‌ಗ್ರೇಡ್ ವೆಚ್ಚವನ್ನು ಬ್ಯಾಂಕ್ ಗಳಷ್ಟೇ ಭರಿಸುತ್ತಾ ಹೋದರೆ, ಅದು ಅಂತಿಮವಾಗಿ ಸಾಮಾನ್ಯ ಡೆಪಾಸಿಟರ್‌ಗಳ (ಖಾತೆದಾರರ) ಮೇಲೆಯೂ ಪರಿಣಾಮ ಬೀರುತ್ತದೆ.
ಹೀಗಾಗಿ, ಆನ್‌ಲೈನ್ ಪಾವತಿಗಳಿಂದ ನೇರವಾಗಿ ಲಾಭ ಪಡೆಯುವ ವ್ಯಾಪಾರಿಯೇ ಈ ವೆಚ್ಚವನ್ನು ಹಂಚಿಕೊಳ್ಳುವುದು ನ್ಯಾಯಯುತವಾದ ನಡೆಯಾಗಿದೆ ಎಂದು ಪೈ ವಿವರಿಸಿದ್ದಾರೆ. ಉದ್ಯಮ ವಲಯದ ಅಂದಾಜು ಪ್ರಕಾರ ಯುಪಿಐ, ರುಪೇ ಪಾವತಿ ವ್ಯವಸ್ಥೆಗೆ ವಾರ್ಷಿಕ 20000 ಕೋಟಿ ರುಪಾಯಿಗೂ ಹೆಚ್ಚು ವೆಚ್ಚವಾಗುತ್ತದೆ. ಬ್ಯಾಂಕ್‌ಗಳು, ಫಿನ್ ಟೆಕ್ ಕಂಪನಿಗಳು, ಎನ್‌ಪಿಸಿಐ ಇದನ್ನು ಭರಿಸುತ್ತಿವೆ.
ಕೇಂದ್ರ ಸರಕಾರವೂ ಇತ್ತೀಚಿನ ಬಜೆಟ್‌ನಲ್ಲಿ 2000 ಕೋಟಿ ಸಹಾಯ ಧನ ಮೀಸಲಿಟ್ಟಿತ್ತು. ಈ ದೊಡ್ಡ ಮೊತ್ತದ ವೆಚ್ಚವನ್ನು ಸದಾಕಾಲ ಸಂಪೂರ್ಣವಾಗಿ ಸರ್ಕಾರ ಅಥವಾ ಬ್ಯಾಂಕ್‌ಗಳೇ ಭರಿಸುವುದು ಕಷ್ಟವಾಗುತ್ತಿರುವುದರಿಂದ, ದೊಡ್ಡ ವ್ಯಾಪಾರಿಗಳಿಗೆ ಅಲ್ಪ ಪ್ರಮಾಣದ ಎಂಡಿಆರ್ (MDR) ಶುಲ್ಕವನ್ನು ವಿಽಸಲು ಸರ್ಕಾರ ನಿರ್ಧರಿಸಿದೆ. ಯಾವುದೇ ಆರ್ಥಿಕ ವ್ಯವಸ್ಥೆಯು ಕೇವಲ ಸರ್ಕಾರದ ಸಬ್ಸಿಡಿಯ ಮೇಲೆಯೇ ದೀರ್ಘಕಾಲ ಯಶಸ್ವಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಆದ್ದರಿಂದ ಯುಪಿಐ ವ್ಯವಸ್ಥೆಯನ್ನು ನಡೆಸುವ ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳಿಗೆ ಅದು ಲಾಭದಾಯಕವಾಗಲು ಒಂದು ಹಂತದ ನಂತರ ಮಾರುಕಟ್ಟೆ ಆಧಾರಿತ ಶುಲ್ಕಗಳು ಅನಿವಾರ್ಯವಾಗುತ್ತವೆ ಎಂಬುದು ಬ್ಯಾಂಕಿಂಗ್ ತಜ್ಞರ ಅಭಿಪ್ರಾಯವಾಗಿದೆ.