ಶಿಶಿರಕಾಲ
ನಮ್ಮ ಮನೆಯ ಡೈನಿಂಗ್ ಟೇಬಲ್ ಸೆಟ್‌ನ ಒಂದು ಕುರ್ಚಿಯ ಕಾಲು ಸ್ವಲ್ಪ ಸಡಿಲಗೊಂಡಿತ್ತು. ತುರ್ತಾಗಿ ಆ ಕುರ್ಚಿಯನ್ನು ಹೆಚ್ಚಿಗೆ ಬಳಸದ ಜಾಗದಲ್ಲಿಟ್ಟು ಅಲ್ಲಿದ್ದ ಗಟ್ಟಿ ಕುರ್ಚಿಯನ್ನು ಆಚೀಚೆ ಮಾಡಿಟ್ಟಿದ್ದೆ. ಇರುತ್ತದೆಯಲ್ಲ, ಡೈನಿಂಗ್ ಟೇಬಲ್ಲಿನ ಒಂದು ಮೂಲೆಯ ಒಂದು ಕುರ್ಚಿ- ಸಾಮಾನ್ಯವಾಗಿ ಬಳಕೆಯಾಗದ, ಯಾರಾದರೂ ನೆಂಟರು ಬಂದಾಗ ಮಾತ್ರ ಬಳಕೆಯಾಗುವ ಕುರ್ಚಿ.
ಅದಾದ ಮೇಲೆ ನನಗೆ ಈ ಸಡಿಲಗೊಂಡ ಕುರ್ಚಿ ಮರೆತೇ ಹೋಗಿತ್ತು. ಮೊನ್ನೆ ಸ್ನೇಹಿತರೊಬ್ಬರು ಮನೆಗೆ ಬಂದಾಗ ಆ ಕುರ್ಚಿಯನ್ನು ಎಳೆದು ಕೂತ ರಭಸಕ್ಕೆ ಕುರ್ಚಿಯು ರಿಕ್ಟರ್ ಮಾಪಕದ ೮ರ ಭೂಕಂಪದಷ್ಟು ಅಲುಗಾಡಿದಾಗಲೇ ನಮಗೆ ನೆನಪಾದದ್ದು- ನಾವೆಲ್ಲರೂ ಒಮ್ಮೆ ಹೆದರಿದ್ದು. ಬಂದ ಸ್ನೇಹಿತರು ಹೊರಟು ಹೋದ ಮರುಕ್ಷಣವೇ ಮನೆಯಲ್ಲಿ ‘ಡಿಪಾರ್ಟ್ಮೆಂಟಲ್ ಎನ್‌ಕ್ವೈರಿ’. ತಕ್ಷಣ ಈ ಕುರ್ಚಿಯನ್ನು ಎಸೆಯಬೇಕು, ಹೊಸತೊಂದು ಕುರ್ಚಿ ಆರ್ಡರ್ ಮಾಡಬೇಕು ಎಂದು ಹೆಂಡತಿಯ ಫರ್ಮಾನು.
ಮಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ- ‘ಈ ಡೈನಿಂಗ್ ಟೇಬಲ್ ನಾನು ಹುಟ್ಟಿದಾಗಿನಿಂದ ಇದೆ, ಇದನ್ನೇ ಬದಲಿಸಬೇಕು’ ಎಂದಳು. ಇದರ ಮೇಲೆ ಕೂತಾಗ ಮುರಿದು ಬಿದ್ದು, ಯಾರಾದರೂ ಕೈಕಾಲು ನೋವು ಮಾಡಿಕೊಂಡರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ. ಕೊನೆಯಲ್ಲಿ ಹೊಂದುವ ಒಂದು ಕುರ್ಚಿ ಸಿಗುವುದಿಲ್ಲ, ಹಾಗಾಗಿ ಹೊಸತೊಂದು ಡೈನಿಂಗ್ ಸೆಟ್ ಅನ್ನೇ ಖರೀದಿಸಬೇಕೆಂದು ಮೀಟಿಂಗ್‌ನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇದನ್ನೂ ಓದಿ: Shishir Hegde Column: ಹಚ್ಚೆಯ ನೋವು, ಇಚ್ಛೆಯ ನೋವು ಕೂಡ ಆಗಿರಬಹುದು
ಈ ಡೈನಿಂಗ್ ಟೇಬಲ್ ಅನ್ನು ಮನೆಗೆ ತಂದು 8-10 ವರ್ಷವಾಗಿತ್ತು. ಅಷ್ಟು ದೀರ್ಘಕಾಲ ಅದು ಜತೆಯಲ್ಲಿತ್ತು. ನಮ್ಮ ಮನೆಯಲ್ಲಿ ಬಂದ ನೆಂಟರು, ಸ್ನೇಹಿತರು ಎಲ್ಲರೂ ಈ ಕುರ್ಚಿಗಳ ಮೇಲೆ, ಟೇಬಲ್ಲಿನ ಮುಂದೆ ಕೂತು ಹರಟಿದ್ದು, ಜತೆಯಲ್ಲಿ ಕೂತು ಊಟ ಮಾಡಿದ ತರಹೇವಾರಿ ನೆನಪು ಗಳಲ್ಲಿ ಈ ಡೈನಿಂಗ್ ಟೇಬಲ್ ಸೆಟ್ ಇದೆ.
ನಾವು ಮನೆಯವರೂ ಪ್ರತಿನಿತ್ಯ ಮಾತನಾಡುತ್ತ ಊಟಮಾಡುವ ಟೇಬಲ್ ಇದು. ಆ ಟೇಬಲ್ಲಿನ ಮೇಲೆ ವಿಶೇಷ ಸೆಳೆತವಿಲ್ಲದಿದ್ದರೂ ಆ ನೆನಪುಗಳ ಭಾಗವಾಗಿ ಟೇಬಲ್ ಇದ್ದದ್ದರಿಂದ ಇದೆಲ್ಲ ವನ್ನೂ ಬದಲಿಸಿ ಊಟದ ಮನೆಯ ದೆಶೆಯನ್ನು ಬದಲಿಸಲು ಮನಸ್ಸು ಒಪ್ಪುತ್ತಿರಲಿಲ್ಲ. ಮೋಹ ಕ್ಕಿಂತ ಆಚೆ, ಒಂದೇ ಕುರ್ಚಿಯ ಒಂದು ಕಾಲು ಸರಿಯಿಲ್ಲವೆಂದು ಇಡೀ ಟೇಬಲ್ ಮತ್ತು ಆರು ಕುರ್ಚಿಯನ್ನು ಬದಲಿಸುವುದೇ? ತಾತ್ವಿಕವಾಗಿ ಒಪ್ಪಲಾಗಲಿಲ್ಲ.
ಇಂಥದ್ದೊಂದು ‘ಹಾಳಾದರೆ ಎಸೆದು ಹೊಸತನ್ನು ಖರೀದಿಸಬೇಕಾದ’ ವ್ಯವಸ್ಥೆಯ ಮೇಲೆ ನನಗೆ ಮೊದಲಿನಿಂದಲೂ ಪ್ರತಿರೋಧವಿದೆ. ನಾನು ಆಗೀಗ ಆ ವ್ಯವಸ್ಥೆಯ ವಿರುದ್ಧ ಬಂಡಾಯವೇಳುವು ದಿದೆ. ಅದರಂತೆ ಈ ಕುರ್ಚಿಯನ್ನು ಹೇಗಾದರೂ ಮಾಡಿ ರಿಪೇರಿ ಮಾಡಬೇಕೆಂದು ನಿರ್ಧರಿಸಿದೆ.
 
    
ಚಿಕ್ಕಪುಟ್ಟ ಮರಗೆಲಸ ಮಾಡಿ ಅಭ್ಯಾಸವಿದೆ ನನಗೆ; ಚಿಕ್ಕ ಗರಗಸ, ಇಲೆಕ್ಟ್ರಿಕ್ ಸಾ, ಫೆವಿಕಾಲ್, ಸ್ಯಾಂಡ್ ಪೇಪರ್ ಎಲ್ಲವೂ ಮನೆಯಲ್ಲಿಯೇ ಇದ್ದವು. ಅದರ ಕಾಲು ಬಿಚ್ಚಿ, ಸೇರುವ ಜಾಗದಲ್ಲಿ ಮುರಿದಿದ್ದ ಮರದ ತುಂಡನ್ನು ಕತ್ತರಿಸಿ, ಅಂದು ತೂತು (ಡ್ರಿಲ್) ಮಾಡಿ, ಅದಕ್ಕೊಂದು ಕಬ್ಬಿಣದ ಮೊಳೆ ಹೊಡೆದ್ದಾಯಿತು. ಅಷ್ಟು ಚಿಕ್ಕ ಕೆಲಸಕ್ಕೆ ಮೂರು ಬಾರಿ ಸಾಮಾನಿಗೆಂದು ಹಾರ್ಡ್‌ವೇರ್ ಅಂಗಡಿಗೆ ಹೋಗಿಬರಬೇಕಾಯ್ತು. ರಿಪೇರಿ ಮಾಡಿದ ಮೇಲೆ ರಿಪೇರಿ ಕಾಣಿಸಬಾರದು.
ಮುಗಿಸುವಾಗ ಎರಡು ಒಪ್ಪತ್ತು ಬೇಕಾಯ್ತು. ಮನೆಯಲ್ಲಿ ಹೆಂಡತಿ-ಮಗಳು ‘ಇದು ಆಗುವ ಕೆಲಸ ವಲ್ಲ’ ಎಂದು ಉದ್ದಕ್ಕೂ ಮುಸಿಮುಸಿ ನಗುತ್ತಿದ್ದರು. ಆದರೆ ಇದು ಬಂಡಾಯ, ಕೈ ಬಿಡು ವಂತಿಲ್ಲ. ಕೊನೆಗೂ ಕುರ್ಚಿ ರಿಪೇರಿಯಾಯ್ತು, ಮೊದಲಿನಂತಾಯಿತು. ಆಗಲೇ ಆ ಅವಮಾನ, ಕುಹಕಗಳು ನಿಂತದ್ದು. ಇಷ್ಟು ಮಾಡಿ ಮುಗಿಸುವಾಗ ನನ್ನ ಮೈಕೈ ಬೆವರಿತ್ತು, ಬಗ್ಗಿ ಬೆನ್ನು ಸಣ್ಣಗೆ ನೋಯು ತ್ತಿತ್ತು; ಬಟ್ಟೆಗೆ, ಮುಖಕ್ಕೆಲ್ಲ ಆ ಹಳೆಯ ಮರದ ಪುಡಿಗಳು, ಒಣಮರದ ವಾಸನೆ. ಕೈ ಬೆರಳುಗಳಿಗೆಲ್ಲ ಫೆವಿಕಾಲ್ ಅಂಟಿದ್ದವು.
ಅಷ್ಟೆ ರಗಳೆಗಳ ನಂತರ, ಕೆಲಸ ಮುಗಿಸಿದ ನನ್ನಲ್ಲಿ ಏನೋ ಒಂದು ಸಮಾಧಾನ, ಸಂತೃಪ್ತಿ ಇತ್ತು. ರಿಪೇರಿ ಮಾಡಿದ ಹಣ ಉಳಿತಾಯಕ್ಕೋ? ಅಲ್ಲ. ಅಥವಾ ಆ ಕುರ್ಚಿಯ ಮೇಲಿದ್ದ ಮೋಹಕ್ಕೋ? ಅದೂ ಅಲ್ಲ. ಅದರಾಚೆ ಏನೋ ಒಂದನ್ನು ಸರಿಮಾಡಿದನೆಂಬ ತೃಪ್ತಭಾವ. ಈ ಭಾವದ ಅನುಭವ ಎಲ್ಲರಿಗೂ ಆಗಿರುತ್ತದೆ. ಏನೋ ಒಂದು ರಿಪೇರಿ ಮಾಡಿದಾಗ ಸಿಗುವ ಖುಷಿ.
ಇಂದು ಯಾವುದೇ ವಸ್ತು ಹಾಳಾದರೆ ನಮಗೆಲ್ಲ ಹೊಸತಕ್ಕೆಷ್ಟು ರೇಟು ಎಂದೇ ಮೊದಲು ಪ್ರಶ್ನೆ ಮೂಡುವುದು. ಇದೆಲ್ಲ ಹೀಗಿರಲಿಲ್ಲ. ಕೆಲವೇ ವರ್ಷಗಳ ಹಿಂದೆ ರಿಪೇರಿ ಎನ್ನುವುದು ತೀರಾ ಸಾಮಾನ್ಯವಾಗಿತ್ತು. ಈಗ ಹಾಗಲ್ಲ. ಯಾವುದನ್ನೂ ರಿಪೇರಿ ಮಾಡುವುದು ಈಗೀಗ ಅಷ್ಟು ಸುಲಭ ವಲ್ಲ.
ರಿಪೇರಿ ಎಂಬ ಪರಿಕಲ್ಪನೆಯೇ ಈಗೀಗ ಕಡಿಮೆಯಾಗುತ್ತಿದೆ. ಇತ್ತೀಚಿನ ಹೆಚ್ಚಿನ ವಸ್ತುಗಳನ್ನು ರಿಪೇರಿ ಮಾಡಲಿಕ್ಕೇ ಸಾಧ್ಯವಾಗುವುದಿಲ್ಲ. ಅವುಗಳ ರಚನೆಯನ್ನೇ ಆ ರೀತಿ ಮಾಡಿರುತ್ತಾರೆ. ಇಲೆಕ್ಟ್ರಾನಿಕ್ ವಸ್ತುಗಳಂತೂ ಹೆಚ್ಚು ಕಡಿಮೆ ಹೋದರೆ ಹೊಯ್ತೇ. ಮೊದಲೆಲ್ಲ ಮೊಬೈಲ್ ಫೋನ್‌ನ ಬ್ಯಾಟರಿ ಬದಲಿಸಬಹುದಿತ್ತು, ನೆನಪಿದೆಯಾ? ಆಮೇಲೆ ‘ಬ್ಯಾಟರಿ ತೆಗೆಯಲು ಬರುವುದಿಲ್ಲವಂತೆ’ ಎಂಬ ಹೊಸ ಫೋನುಗಳು ಬಂದವು.
ಈಗ? ಮೊದಲು ಲ್ಯಾಪ್‌ಟಾಪ್‌ನ ಹಾರ್ಡ್ ಡಿ, ರ‍್ಯಾಮ್ ಇತ್ಯಾದಿ ಎಲ್ಲವನ್ನೂ ಬದಲಿಸಬಹುದಿತ್ತು. ಎಂಜಿನಿಯರಿಂಗ್ ಹುಡುಗರು ಕಂಪ್ಯೂಟರಿನ ಬಿಡಿಭಾಗಗಳನ್ನೆಲ್ಲ ಒಟ್ಟು ಹಾಕಿ ಹೊಸತೊಂದು ಕಂಪ್ಯೂಟರ್ ಅನ್ನು ತಯಾರಿಸಿಕೊಳ್ಳುವುದು ಮೊದಲೆಲ್ಲ ಸಾಮಾನ್ಯವಾಗಿತ್ತು. ಅದರಲ್ಲಿ ಯಾವುದೇ ಭಾಗ ಹೋದರೆ ರಿಪೇರಿ ಸುಲಭ, ಅಥವಾ ಹೊಸ ಬಿಡಿಬಾಗ ತಂದು ಸಿಕ್ಕಿಕೊಂಡ ರಾಗಿತ್ತು.
ಆದರೆ ಈಗೀಗ ಬರುತ್ತಿರುವ ಹೊಸ ತಲೆಮಾರಿನ ಮ್ಯಾಕ್, ವಿಂಡೋಸ್ ಲ್ಯಾಪ್‌ಟಾಪ್‌ಗಳಲ್ಲಿ ಎಲ್ಲವನ್ನೂ ಒಂದೇ ಸರ್ಕಿಟ್ ಬೋರ್ಡಿಗೆ ಬೆಸುಗೆ ಹಾಕಲಾಗುತ್ತದೆ. ಬ್ಯಾಟರಿ, ಹಾರ್ಡ್ ಡಿ ಯಾವು ದನ್ನೂ ಬದಲಿಸಲಿಕ್ಕೆ ಸಾಧ್ಯವೇ ಇಲ್ಲ, ಈ ಕಂಪನಿಗಳ ಸರ್ವೀಸ್ ಸೆಂಟರಿಗೆ ಹೋದರೆ ಸರಿ ಮಾಡಲಿಕ್ಕಾಗುವುದಿಲ್ಲ ಎಂದುಬಿಡುತ್ತಾರೆ ಅಥವಾ ಬಲುತುಟ್ಟಿ.
ಅಮೆರಿಕದಲ್ಲಂತೂ ಯಾವುದನ್ನೂ ರಿಪೇರಿ ಮಾಡಿಸುವ ವ್ಯವಹಾರವೇ ಇಲ್ಲ. ಹೆಚ್ಚಿನ ವಸ್ತುಗಳು ಹಾಳಾದರೆ ಎಸೆಯುವುದು, ಹೊಸತು ಖರೀದಿಸುವುದು. ನಿತ್ಯಬಳಕೆಯ ಮಿಕ್ಸಿ, ಗ್ರೈಂಡರ್, ಟಿವಿ, ಮೊಬೈಲ್ ಎಲ್ಲವೂ. ತಮಾಷೆಗಲ್ಲ, ಇತ್ತೀಚೆಗೆ ನನ್ನ ಸೈಕಲ್ ಪಂಕ್ಚರ್ ಆಗಿತ್ತು ಮತ್ತು ಚೈನನ್ನು ಕೂಡ ಬದಲಿಸಬೇಕಿತ್ತು.
ಆದರೆ ಚೈನು, ಟ್ಯೂಬ್, ಹೊಸ ಟೈರ್ ಮತ್ತು ಬ್ರೇಕ್‌ಪ್ಯಾಡ್ ಇದಷ್ಟನ್ನು ಖರೀದಿಸಿದರೆ; ಅದರ ಮೇಲೆ ಇನ್ನೊಂದು ಸ್ವಲ್ಪ ಹಣ ಹಾಕಿದರೆ ಹೊಸ ಸೈಕಲ್ ಬರುತ್ತದೆ. ಅಮೆರಿಕದಂಥ ದೇಶಗಳಲ್ಲಿ ರಿಪೇರಿ ಎನ್ನುವ ವಿಷಯವೇ ಮರೆಯಾಗಿ ಹೋಗಿದೆ. ನಮ್ಮ ದೇಶವೂ ಹಾಗೆಯೇ ಬದಲಾಗುತ್ತಿದೆ. Use and throw!
ಒಂದು ಕಡೆ ಗ್ಲೋಬಲ್ ವಾರ್ಮಿಂಗ್ ಇತ್ಯಾದಿಯ ಸರಕಾರಿ ದೊಂಬರಾಟಗಳು, ಇನ್ನೊಂದು ಕಡೆ ರಿಪೇರಿ ಮಾಡಲು ಆಗಬಾರದು, ವಾರಂಟಿ-ಗ್ಯಾರಂಟಿ ಮುಗಿದ ಮೇಲೆ ಹೆಚ್ಚಿಗೆ ಬಾಳಿಕೆ ಬರಬಾರದು. ಆ ರೀತಿ ವಸ್ತು ವಿನ್ಯಾಸದಲ್ಲಿ ಕಂಪನಿಗಳು ತೊಡಗಿವೆ. ಹಾಳಾಗಲಿ ಎಂಬ ವಿನ್ಯಾಸವಲ್ಲ, ಬದಲಿಗೆ ನಿಗದಿತ ಬಾಳಿಕೆ ಬರಬೇಕು, ಗ್ರಾಹಕ ಅದಾದ ಮೇಲೆ ಇನ್ನೊಂದು ಖರೀದಿಸಬೇಕು. ಅಥವಾ ಇತ್ತೀಚೆಗೆ ಹೆಚ್ಚಿನವು ಚಂದಾ- Subscription Model .
ಇದೆಲ್ಲದರ ನಡುವೆ, ರಿಪೇರಿಯಿಂದ ಸಿಗುವ ಖುಷಿಯಿಂದ ಈಗಿನ ತಲೆಮಾರು ವಂಚಿತವಾಗು ತ್ತಿದೆಯೇ? ರೊಬೊಟಿಕ್ಸ್ ಕಲಿಯುವ ಇಂದಿನ ಮಕ್ಕಳಿಗೆ ಒಂದು ಸ್ವಿಚ್, ಪ್ಲಗ್, ಬಲ್ಬು ಬದಲಿಸಲು ಬಾರದಿದ್ದರೆ ಆಶ್ಚರ್ಯಪಡಬೇಕಿಲ್ಲ. . ಒಂದು ವಸ್ತುವಿನ ರಿಪೇರಿಗೆ ಏಕಾಗ್ರತೆ ಬೇಕು. ತಾಳ್ಮೆ ಬೇಕು. ಅದಕ್ಕಿಂತ ಮೊದಲು ಆ ನಿಸ್ತೇಜ ವಸ್ತುವಿನೊಂದಿಗೆ ಮೊದಲು ಒಂದು ಸಂಬಂಧ ಏರ್ಪಡಬೇಕು. 
ಸಾಮಾನ್ಯವಾಗಿ ರಿಪೇರಿ ಅತ್ಯಂತ ರಗಳೆಯ ಕೆಲಸ ಎನ್ನುವ ಭಾವನೆ ಸುಳ್ಳಲ್ಲ. ಹೆಚ್ಚಿನವರಿಗೆ ರಿಪೇರಿ ಮಾಡುವ ವ್ಯವಧಾನವಿರುವುದಿಲ್ಲ. ಅದೆಷ್ಟೋ ಜನರಿಗೆ ಹಾಳಾದ ವಸ್ತುಗಳನ್ನು ರಿಪೇರಿ ಮಾಡ ಬೇಕೆಂದು ಉದ್ದೇಶವೇನೋ ಇರುತ್ತದೆ. ಆದರೆ ರಿಪೇರಿ ಮಾಡಬೇಕೆಂದು ಬದಿಗಿಟ್ಟ ವಸ್ತು ಹಾಗೆಯೇ ಹರಗಣವಾಗಿ ಮನೆಯ ಒಂದಿಷ್ಟು ಜಾಗವನ್ನು ಆವರಿಸಿರುತ್ತದೆ. ಆದರೆ ರಿಪೇರಿಗೆ ಮುಹೂರ್ತವೇ ಬರುವುದಿಲ್ಲ.
ರಿಪೇರಿ ಎಂದರೆ ಅದೊಂದು ರಗಳೆಯ ಕೆಲಸವಾದದ್ದರಿಂದ ಆ ಕೆಲಸವನ್ನು ಮುಂದೂಡುತ್ತಲೇ ಇರುತ್ತಾರೆ. ಕೊನೆಗೊಂದು ದಿನ- ಹೋಗ್ಲಿ ಬಿಡು ಎಂದು ಆ ವಸ್ತುವನ್ನು ಎಸೆಯಲು ಮುಂದಾಗಿರು ತ್ತಾರೆ. ರಿಪೇರಿಗೆ ಕೂರುವ ಪ್ರಕ್ರಿಯೆಯೇ ಅತ್ಯಂತ ಕಷ್ಟದ್ದು. ಒಮ್ಮೆ ಕೂತರೆ ರಿಪೇರಿ ಕಷ್ಟವಾಗುವು ದಿಲ್ಲ. ರಿಪೇರಿಗೆ ಸಲಕರಣೆಗಳು ಬೇಕು, ರಿಪೇರಿ ಕಲಿತಿರಬೇಕು ಎಂಬುದೆಲ್ಲ ನಿಜ. ಆದರೆ ಮನೆಯ ಹೆಚ್ಚಿನ ಚಿಕ್ಕಪುಟ್ಟ ವಸ್ತುಗಳ ರಿಪೇರಿಗೆ ಅವು ಯಾವುವೂ ಬೇಕಿರುವುದಿಲ್ಲ.
ಬೇಕಿರುವುದು ರಿಪೇರಿ ಮಾಡಬೇಕೆಂಬ ಮನಸ್ಸು ಮಾತ್ರ. ಕೆಲವರಿರುತ್ತಾರೆ, ಅವರಿಗೆ ರಿಪೇರಿ ಒಂದು ಪ್ಯಾಷನ್-ಹವ್ಯಾಸ ಇತ್ಯಾದಿ. ಅವರ ಬಳಿ ನಾನಾ ರೀತಿಯ ಸಲಕರಣೆಗಳು, ಶೋಲ್ಡರ್ ಗನ್ ಎಲ್ಲವೂ ಇರುತ್ತವೆ. ಕೆಲವೊಬ್ಬರು ಒಂದು ಕೋಣೆಯನ್ನೇ ಸಲಕರಣೆಗಳಿಂದ ತುಂಬಿಸಿಡುತ್ತಾರೆ. ಕೆಲವರು ಅವರು ರಿಪೇರಿ ಮಾಡುವುದಕ್ಕಿಂತ ಹೆಚ್ಚಿನ ಬೆಲೆಯ ಸಲಕರಣೆ ಖರೀದಿಸಿರುತ್ತಾರೆ. ಅದು ಇನ್ನೊಂದು ಹಂತದ ಹವ್ಯಾಸ. ನಾನು ಅಂಥ ಗಂಭೀರ ಹವ್ಯಾಸಿ ರಿಪೇರಿ ಭೂಪರ ಬಗ್ಗೆ ಹೇಳುತ್ತಿಲ್ಲ.
ನಾನಿಲ್ಲಿ ಹೇಳುತ್ತಿರುವುದು ಚಿಕ್ಕಪುಟ್ಟ ರಿಪೇರಿಗಳು ಮತ್ತು ರಿಪೇರಿ ಕೊಡುವ ಖುಷಿಯ ಬಗ್ಗೆ. ರಿಪೇರಿಗೆ ಬೇಕಿರುವುದು ಮನಸ್ಸು ಮತ್ತು ತಾಳ್ಮೆ. ನೂರಕ್ಕೆ ತೊಂಬತ್ತು ಇಂಥ ರಿಪೇರಿಗಳಿಗೆ ಕೌಶಲ- ಸ್ಕಿಲ್ ನಗಣ್ಯ. ನಿಜ, ಅದೆಷ್ಟೋ ರಿಪೇರಿ ಮಾಡುವುದೇ ಒಂದು ಸ್ಕಿಲ್. ಶರವೇಗದ, ಪುರುಸೊತ್ತಿಲ್ಲದ ಜಗತ್ತಿನಲ್ಲಿ ಕೂತು ರಿಪೇರಿ ಮಾಡುವುದು ಇನ್ನಷ್ಟು ತಾಳ್ಮೆ ಕಲಿಸುತ್ತದೆ. ವಸ್ತು ರಿಪೇರಿಯಾದರೆ ಆಗ ಸಿಗುವ ಸಮಾಧಾನ ಅನನ್ಯ. ತಂದ ಹೊಸತರಲ್ಲಿ ವಸ್ತುಗಳಿಗೆ ಹೆಚ್ಚಿನ ಬೆಲೆ. ನಾವು ಅದನ್ನು ಮಕ್ಕಳಿಗೆ ಮುಟ್ಟಲು ಬಿಡುವುದಿಲ್ಲ, ಉಳಿದವರು ಬಳಸುವಾಗ ‘ಜಾಗ್ರತೆ’ ಎಂದು ಎಚ್ಚರಿಸುತ್ತೇವೆ ಇತ್ಯಾದಿ.
ಕ್ರಮೇಣ ಅವು ದೂರವಾಗುತ್ತವೆ, ಮೂಲೆ ಸೇರುತ್ತವೆ, ಕೊನೆಗೊಂದು ದಿನ ಹಾಳಾದರೆ ಅಲ್ಲಿಗೆ ಸಂಬಂಧವೇ ಮುಗಿದು ಹೋಯಿತು. ಆದರೆ ರಿಪೇರಿ ಮಾಡಿದಿರೋ, ಆ ವಸ್ತುವಿನ ಮೇಲೆ ವಿಚಿತ್ರ ವಾದ ಹೊಸ ಪ್ರೀತಿ ಹುಟ್ಟಿಬಿಡುತ್ತದೆ. ಭೌತಿಕ ಆದರೆ ಹೌದು, ರಿಪೇರಿ ಮಾಡಿದ ವಸ್ತು ಇನ್ನಷ್ಟು ಹತ್ತಿರವಾಗುತ್ತದೆ. ಇನ್ನು ರಿಪೇರಿ ಮಾಡಲು ಮುಂದಾಗಲು ಕೇವಲ ಮನಸ್ಸಿದ್ದರಷ್ಟೇ ಮುಗಿಯ ಲಿಲ್ಲ. ಅಸಾಮಾನ್ಯ ತಾಳ್ಮೆ ಬೇಕು. ರಿಪೇರಿ ನಮ್ಮ ಸಂಪೂರ್ಣ ಗಮನವನ್ನು ಬಯಸುತ್ತದೆ.
Attention to detail - ಅತಿ ಸೂಕ್ಷ್ಮ ಗಮನ, ಏಕಾಗ್ರತೆ. ಒಂದು ಮಜವೆಂದರೆ, ಈ ಗುಣಗಳ ಕೊರತೆ ಇದ್ದರೆ, ಇನ್ನಷ್ಟು ಏಕಾಗ್ರತೆಯನ್ನು ಪಡೆಯಲು ಕೂಡ ರಿಪೇರಿ ಸಹಾಯಕಾರಿ. ರಿಪೇರಿಯೆಂದರೆ ಅದು ಅಷ್ಟು ಕಾಲ ಮಿದುಳಿನ ಜಾಗೃತ ಸ್ಥಿತಿ, ಮನಸ್ಸಿನ ನಿರಂತರ ಹರಿವಿನ ಸ್ಥಿತಿ. ಹಾಗಾಗಿಯೇ ಅದು ಕೂಡ ಒಂದು ಧ್ಯಾನವೆನಿಸುವುದು.
Repair repays us, also repairs us. ರಿಪೇರಿ ನಮ್ಮನ್ನೂ ರಿಪೇರಿ ಮಾಡುತ್ತದೆ ಎಂಬ ಮಾತಿದೆ. ರಿಪೇರಿ ಕೇವಲ ವಸ್ತುಗಳದ್ದಷ್ಟೇ ಅಲ್ಲ. ನಮ್ಮ ಆಂತರ್ಯದಲ್ಲೂ ಆಗೀಗ ರಿಪೇರಿಗಳಾಗುತ್ತಲೇ ಇರಬೇಕು. ಅಂತೆಯೇ ನಮ್ಮ ಸ್ನೇಹ, ಕುಟುಂಬ ಸಂಬಂಧಗಳು, ಉಳಿದ ಮಾನವೀಯ ಸಂಬಂಧ ಗಳು ಕೂಡ ಆಗೀಗ ರಿಪೇರಿಗೆ ಬಂದು ನಿಲ್ಲುತ್ತವೆ.
ಆಗ ಆಯ್ಕೆಯಿರುವುದು ಹೊಸತೋ? ಅಥವಾ ಇದರದ್ದೇ ರಿಪೇರಿಯೋ? ಜಪಾನಿನ ಒಂದು ವಿಚಿತ್ರ ಹಳೆಯ ಹವ್ಯಾಸ ಈಗೀಗ ಅಮೆರಿಕದಲ್ಲೂ ಜನಪ್ರಿಯವಾಗುತ್ತಿದೆ. ಅದರ ಹೆಸರು ಕಿಂತ್ಸುಗಿ- Kintsugi. ಒಡೆದುಹೋದ ಪಿಂಗಾಣಿ ಪಾತ್ರೆಯ ಎಲ್ಲಾ ಚೂರುಗಳನ್ನು ಅಂತೂ ಹಾಕಿ ಜತೆಯಲ್ಲಿ ಜೋಡಿಸುವುದು, ಪೂರ್ಣಗೊಳಿಸುವುದು. ಸರಳ ಆದರೆ ಅತ್ಯಂತ ತಾಳ್ಮೆಯ ಕೆಲಸ.
ಪುನಃ ಜೋಡಿಸುವುದಷ್ಟೇ ಅಲ್ಲ, ಜತೆಯಲ್ಲಿ ಆ ಬಿರುಕುಗಳಲ್ಲಿ ಹಾಕಿದ ಅಂಟಿನ ಮೇಲೆ ಚಿನ್ನದ ಪುಡಿ ಉದುರಿಸುತ್ತಾರೆ. ಇಷ್ಟಾಗುವಾಗ ಆ ಪುನರ್ಜನ್ಮ ತಾಳಿದ ಪಿಂಗಾಣಿ ಪಾತ್ರೆಯ ಮೌಲಿಕ, ಮತ್ತು ಭೌತಿಕ ಬೆಲೆ ಕೂಡ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಹಾಳಾದ ಸಂಬಂಧ ರಿಪೇರಿ ಮಾಡಿಕೊಂಡಾಗ ಸಮಾಜ ಆ ರಿಪೇರಿಯನ್ನೇ ಕುಹಕದಿಂದ ಪ್ರಶ್ನಿಸುತ್ತದೆ.
ಹಾಗಾಗಿ ಸಂಬಂಧವನ್ನು ನಾವೇ ರಿಪೇರಿ ಮಾಡಿಕೊಂಡರೂ ಆ ರಿಪೇರಿಯನ್ನು ಮರೆಮಾಚುತ್ತೇವೆ, ಬಿರುಕನ್ನು ಮುಚ್ಚಿಡುತ್ತೇವೆ. ರಿಪೇರಿಯಾದದ್ದು ಎಂದರೆ ಕಡಿಮೆ ಬೆಲೆಯದು ಅಲ್ಲವೇ? ಹಾಳಾ ದದ್ದನ್ನು ಹಾಗಾಗಿರಲೇ ಇಲ್ಲ ಇಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಕಿಂತ್ಸುಗಿ ಹಾಗಲ್ಲ. ಆ ಬಿರುಕು, ರಿಪೇರಿ ಕೂಡ ಇಲ್ಲಿ ಸಂಭ್ರಮ. ಮುರುಕೇ ವಿಶೇಷಣ. ಸಾಮಾನ್ಯ ಪಿಂಗಾಣಿ ಗಿಂತ, ಬಳಸಿ, ಒಡೆದು, ನಾಶವಾಗಿ, ರಿಪೇರಿಯಾದ ಕಿಂತ್ಸುಗಿ ಪಿಂಗಾಣಿಗೆ ಹತ್ತುಪಟ್ಟು ಬೆಲೆ. ಸಂಬಂಧವನ್ನು ಕಿಂತ್ಸುಗಿಯಾಗಿಸಲೂ ಅದೇ ತಾಳ್ಮೆ, ಏಕಾಗ್ರತೆ, ಇಚ್ಛಾಶಕ್ತಿ ಎಲ್ಲವೂ ಬೇಕು.
ಅಂತೆಯೇ ವೈಯಕ್ತಿಕ ರಿಪೇರಿ. ನಾವೆಲ್ಲರೂ ಆಗೀಗ ಮಾನಸಿಕ ರಿಪೇರಿಗೆ ಬಂದು ನಿಲ್ಲುತ್ತಿರುತ್ತೇವೆ. ಕೆಲವರು ಅದನ್ನು ಅಲಕ್ಷಿಸುತ್ತಾರೆ, ಇನ್ನು ಕೆಲವರು ಅದರ ರಿಪೇರಿಗಿಳಿಯುತ್ತಾರೆ. ಈ ಸ್ವಂತದ ರಿಪೇರಿ ಸುಲಭದ್ದಲ್ಲ. ಅದಕ್ಕೆ ಮತ್ತದೇ ತಾಳ್ಮೆ ಇತ್ಯಾದಿ ಬೇಕೇ ಬೇಕು. ಅದು ಮನೆಯೊಳಗಿನ ಒಣಗಿ ಸಾಯುತ್ತಿರುವ ಗಿಡವನ್ನು ಬದುಕಿಸಿದಷ್ಟು.
ಯಾವುದೇ ರಿಪೇರಿಗೆ ಬೇಕಿರುವುದು ಜೀವನಪ್ರೀತಿ. ವಸ್ತು ಮತ್ತು ಸಂಬಂಧಗಳಲ್ಲಿ ಎಲ್ಲವನ್ನೂ ರಿಪೇರಿ ಮಾಡಲು ಸಾಧ್ಯವಿರುವುದಿಲ್ಲ. ಕೆಲವೊಂದು ಶಾಶ್ವತ. ಅಂಥದ್ದನ್ನು ಪಕ್ಕಕ್ಕಿಡಲೇಬೇಕು. ಪಕ್ಕಕ್ಕಿಟ್ಟರೂ ಅದೊಂದು ಹರಗಣ. ಹಾಗಾಗಿ ಎಸೆಯಲೇಬೇಕು. ಆದರೆ ಎಸೆಯುವುದಕ್ಕಿಂತ ಮೊದಲು ರಿಪೇರಿ ಯಾಕಾಗುವುದಿಲ್ಲ, ಹಾಳಾದದ್ದು ಎಲ್ಲಿ ಎಂದು ಒಮ್ಮೆ ಬಿಚ್ಚಿ ನೋಡಬೇಕು, ಪರೀಕ್ಷೆಯಾಗಲೇಬೇಕು.
ಹೇಗೆ ಹಾಳಾಯಿತು ಎಂಬ ಅರಿವು, ಸ್ಪಷ್ಟತೆ ನಮಗೆ ಇರಬೇಕು. ಕೆಲವು ಸಂಬಂಧಗಳನ್ನು ಸರಿ ಮಾಡಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಅಂಥವು ನೀರು ಹಾಕಿದರೆ ಕೊಳೆಯುತ್ತವೆ, ಹಾಕದಿದ್ದರೆ ಬಾಡುತ್ತವೆ. ಆದರೆ ವಿಷಯ ಸ್ವಂತದ ರಿಪೇರಿಯಾದಾದರೆ ಅಲ್ಲಿ ಮಾತ್ರ ಬದಲಿ ವ್ಯವಸ್ಥೆ ಇಲ್ಲ. ರಿಪೇರಿ ಅನಿವಾರ್ಯ. ಅನಿವಾರ್ಯವೆಂದಾದಾಗ ರಿಪೇರಿಗೆ ಬೇಕಾಗುವ ಸಲಕರಣೆಯನ್ನು ಒಟ್ಟುಹಾಕಲೇಬೇಕು, ರಿಪೇರಿಗೆ ನಾವು ಕೂರಲೇಬೇಕು !
Repair Repairs us.