Dr Vijay Darda Column: ಅಪರೂಪದ ಖನಿಜಗಳ ಅತಿದೊಡ್ಡ ಜಾಗತಿಕ ಮೇಲಾಟ
ವಿಜ್ಞಾನಿಗಳು ಈವರೆಗೆ ನಡೆಸಿದ ಅಧ್ಯಯನ ಹಾಗೂ ಸಂಶೋಧಕರು ಈವರೆಗೆ ಪತ್ತೆಹಚ್ಚಿದ ಖನಿಜಗಳನ್ನು ವಿಶ್ಲೇಷಿಸಿ ನೋಡಿದಾಗ ಜಗತ್ತಿನಲ್ಲಿ ೧೭ ವಸ್ತುಗಳನ್ನು ಅಪರೂಪದ ಖನಿಜಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ; ಲಂಥಾನಮ್, ಸೀರಿಯಮ್, ಪ್ರೆಸೆಯೋಡಿಮಿ ಯಮ್, ನಿಯೋಡಿಮಿಯಮ್, ಪ್ರೊಮೇಥಿಯಮ್, ಸಮೇರಿಯಮ್, ಯುರೋಪಿಯಮ್, ಗೆಡೋಲಿನಿಯಮ್, ಟೆರ್ಬಿಯಮ್, ಡಿಸ್ಪ್ರೋಸಿಯಮ್, ಹೋಲ್ಮಿಯಮ್, ಎರ್ಬಿಯಮ್, ಥೂಲಿಯಮ್, ಯೆಟೆರ್ಬಿಯಮ್, ಲುಟೇಟಿಯಮ್, ಸ್ಕ್ಯಾಂಡಿಯಮ್ ಮತ್ತು ಯೆಟ್ರಿಯಮ್.
-
ಡಾ.ವಿಜಯ್ ದರಡಾ
Nov 6, 2025 9:54 AM
ಸಂಗತ
ಭಾರತದಲ್ಲಿ ಜಗತ್ತಿನ ಮೂರನೇ ಬಹುದೊಡ್ಡ ಅಪರೂಪದ ಖನಿಜಗಳ ನಿಕ್ಷೇಪ ವಿದೆ. ಆದರೂ ನಾವು ನಮಗೆ ಬೇಕಾದ ಶೇ.97ರಷ್ಟು ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತೇವೆ, ಏಕೆ? ಇಷ್ಟಕ್ಕೂ ಜಗತ್ತಿಗೆ ಇಂದು ಅಪರೂಪದ ಖನಿಜಗಳ ತುರ್ತು ಅಗತ್ಯವೇನಿದೆ?
ಜಗತ್ತಿನ ಬೇರೆ ಬೇರೆ ದೇಶಗಳಿಗೆ ಅಪರೂಪದ ಖನಿಜಗಳನ್ನು ಪೂರೈಸುತ್ತಿದ್ದ ಚೀನಾ ಇದ್ದಕ್ಕಿದ್ದಂತೆ ಒಂದು ದಿನ ತಾನಿನ್ನು ಈ ಖನಿಜಗಳ ಪೂರೈಕೆಯನ್ನು ತನ್ನಿಷ್ಟದಂತೆ ಮಾಡುವುದಾಗಿ ಪ್ರಕಟಿಸಿದಾಗ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು. ತಕ್ಷಣ ಎಲ್ಲರ ಮನಸ್ಸಿಗೆ ಬಂದ ಪ್ರಶ್ನೆಯೇನೆಂದರೆ, ಮುಂದೇನಾಗಲಿದೆ? ನಿಜವಾಗಿಯೂ ಈ ವಿಷಯದಲ್ಲಿ ಜಗತ್ತು ಚೀನಾದ ಮರ್ಜಿಗೆ ಸಿಲುಕಿದೆಯೇ ಎಂಬಿತ್ಯಾದಿ ಯೋಚನೆಗಳು ಹರಿದಾಡಿದವು. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.
ಹೀಗಾಗಿ, ಜಗತ್ತನ್ನೇ ಅಡಿಸಿದ ಈ ಅಪರೂಪದ ಖನಿಜಗಳ ಬಗ್ಗೆ ಇಂದು ಚರ್ಚಿಸೋಣ. ಹಾಗೆ ನೋಡಿದರೆ, ಅಪರೂಪದ ಖನಿಜವೆಂಬುದು ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯ. ಅಷ್ಟು ಸುಲಭಕ್ಕೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೂ ಸಾಮಾನ್ಯ ಜ್ಞಾನಕ್ಕೆ ಬೇಕಾದಷ್ಟು ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
ವಿಜ್ಞಾನಿಗಳು ಈವರೆಗೆ ನಡೆಸಿದ ಅಧ್ಯಯನ ಹಾಗೂ ಸಂಶೋಧಕರು ಈವರೆಗೆ ಪತ್ತೆಹಚ್ಚಿದ ಖನಿಜಗಳನ್ನು ವಿಶ್ಲೇಷಿಸಿ ನೋಡಿದಾಗ ಜಗತ್ತಿನಲ್ಲಿ ೧೭ ವಸ್ತುಗಳನ್ನು ಅಪರೂಪದ ಖನಿಜಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ; ಲಂಥಾನಮ್, ಸೀರಿಯಮ್, ಪ್ರೆಸೆಯೋಡಿಮಿಯಮ್, ನಿಯೋಡಿಮಿಯಮ್, ಪ್ರೊಮೇಥಿಯಮ್, ಸಮೇರಿಯಮ್, ಯುರೋಪಿಯಮ್, ಗೆಡೋಲಿನಿಯಮ್, ಟೆರ್ಬಿಯಮ್, ಡಿಸ್ಪ್ರೋಸಿಯಮ್, ಹೋಲ್ಮಿಯಮ್, ಎರ್ಬಿಯಮ್, ಥೂಲಿಯಮ್, ಯೆಟೆರ್ಬಿಯಮ್, ಲುಟೇಟಿಯಮ್, ಸ್ಕ್ಯಾಂಡಿಯಮ್ ಮತ್ತು ಯೆಟ್ರಿಯಮ್. ಈ ಖನಿಜಗಳನ್ನು ಮೊಬೈಲ್ ಫೋನ್, ಲ್ಯಾಪ್ ಟಾಪ್, ಟೀವಿ ಸ್ಕ್ರೀನ್‌ಗಳು, ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೆಮೋರಿ ಕಾರ್ಡ, ಸೋಲಾರ್ ಪ್ಯಾನಲ್, ಗಾಳಿ ಯಂತ್ರ ಗಳು, ಬ್ಯಾಟರಿಗಳು, ಹೈಬ್ರೀಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಮೋಟರ್‌ಗಳಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: Dr Vijay Darda Column: ಸಿಜೆಐಗೇ ಚಪ್ಪಲಿ ಎಸೆಯುವುದರ ಹಿಂದೆ ದುಷ್ಟ ಧಾರ್ಷ್ಟ್ಯ
ಅಷ್ಟೇ ಅಲ್ಲ, ಕ್ಷಿಪಣಿಗಳು, ರಾಡಾರ್ ವ್ಯವಸ್ಥೆ, ಯುದ್ಧವಿಮಾನದ ಎಂಜಿನ್, ಇನ್ನಿತರ ರಕ್ಷಣಾ ಉಪಕರಣಗಳು, ಎಂಆರ್‌ಐ ಯಂತ್ರಗಳು ಮತ್ತು ಇತರ ವೈದ್ಯಕೀಯ ಉಪಕರಣ ಗಳಲ್ಲೂ ಬಳಸಲಾಗುತ್ತದೆ. ನೇರವಾಗಿ ಹೇಳಬೇಕು ಅಂದರೆ, ಈ 17 ಖನಿಜಗಳು ಆಧುನಿಕ ಮನುಷ್ಯನ ದಿನನಿತ್ಯದ ಬದುಕಿಗೆ ಇಂದು ಅತ್ಯವಶ್ಯ ವಸ್ತುಗಳಾಗಿ ಮಾರ್ಪಟ್ಟಿವೆ.
ಆದರೆ, ಕುತೂಹಲಕರ ಸಂಗತಿಯೇನೆಂದರೆ ಈ ಸೋಕಾಲ್ಡ್ ಅಪರೂಪದ ಖನಿಜಗಳು ನಿಜವಾಗಿಯೂ ಅಪರೂಪವೇನಲ್ಲ. ಭೂಮಿಯಲ್ಲಿ ಇವುಗಳ ಅಗಾಧ ಸಂಗ್ರಹವಿದೆ. ಹಾಗಿದ್ದರೆ ಇವುಗಳನ್ನೇಕೆ ಅಪರೂಪದ ಖನಿಜಗಳು ಎಂದು ಕರೆಯುತ್ತಾರೆ? ಇದನ್ನು ಕೂಡ ಮುಂದೆ ಚರ್ಚಿಸೋಣ. ಆದರೆ, ಮೊದಲಿಗೆ ಇನ್ನೊಂದು ವಿಚಾರ ಗಮನಿಸೋಣ.
ಇದು ನಿಮಗೆ ಆಶ್ಚರ್ಯವನ್ನೂ, ಹೆಮ್ಮೆಯನ್ನೂ ಉಂಟುಮಾಡಬಹುದು. ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯದ ಇತ್ತೀಚಿನ ವರದಿಯ ಪ್ರಕಾರ, ಕೆಲ ಅಪರೂಪದ ಖನಿಜಗಳ ಸಂಪತ್ತಿನಲ್ಲಿ ಭಾರತವು ಜಗತ್ತಿನ ಮೂರನೇ ಸ್ಥಾನದಲ್ಲಿದೆ. ಆದರೂ ನಾವು ನಮ್ಮ ದೇಶಕ್ಕೆ ಬೇಕಾದ ಶೇ.97ರಷ್ಟು ಅಪರೂಪದ ಖನಿಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳು ತ್ತೇವೆ.
ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯದ ವರದಿಯ ಪ್ರಕಾರ ಯಾವ ದೇಶದಲ್ಲಿ ಎಷ್ಟು ಅಪರೂಪದ ಖನಿಜಗಳಿವೆ ಎಂಬುದನ್ನು ನೋಡೋಣ. ಅಮೆರಿಕದ ವರದಿಯ ಪ್ರಕಾರ, ಜಗತ್ತಿನ ಅತಿ ಹೆಚ್ಚು ಅಪರೂಪದ ಖನಿಜಗಳ ಸಂಗ್ರಹವಿರುವುದು ಚೀನಾದಲ್ಲಿ.
ಅಲ್ಲಿ 44 ದಶಲಕ್ಷ ಟನ್‌ಗಳಷ್ಟು ಅಪರೂಪದ ಖನಿಜಗಳಿವೆ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, ಅಲ್ಲಿ 21 ದಶಲಕ್ಷ ಟನ್ ಗಳಷ್ಟು ಅಪರೂಪದ ಖನಿಜಗಳಿವೆ. ಭಾರತ ಮೂರನೇ ಸ್ಥಾನದಲ್ಲಿದ್ದು, 6.9 ದಶಲಕ್ಷ ಟನ್ ಅಪರೂಪದ ಖನಿಜಗಳ ಸಂಗ್ರಹವನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ 5.7 ದಶಲಕ್ಷ ಟನ್‌ನೊಂದಿಗೆ ಆಸ್ಟ್ರೇಲಿಯಾ, 3.8 ದಶಲಕ್ಷ ಟನ್ ನೊಂದಿಗೆ ರಷ್ಯಾ ಹಾಗೂ 1.9 ದಶಲಕ್ಷ ಟನ್‌ನೊಂದಿಗೆ ಅಮೆರಿಕ ದೇಶಗಳಿವೆ.
ಅಪರೂಪದ ಖನಿಜಗಳಿಗೆ ಕೆಲ ವಿಶಿಷ್ಟ ಗುಣಗಳಿವೆ. ಇವುಗಳಲ್ಲಿ ಗರಿಷ್ಠ ಅಯಸ್ಕಾಂತೀಯ ಶಕ್ತಿಯಿರುತ್ತದೆ. ಇವು ಬೆಳಕನ್ನು ಹೊರಸೂಸುವ ಶಕ್ತಿ ಹೊಂದಿರುತ್ತವೆ. ಎಷ್ಟು ಬಿಸಿ ಮಾಡಿ ದರೂ ಕರಗುವುದಿಲ್ಲ. ಅತ್ಯಂತ ಗರಿಷ್ಠ ಉಷ್ಣತೆಯವರೆಗೆ ಇವು ಕುದಿಯುತ್ತಲೇ ಇರುತ್ತವೆ. ಇವು ಅತ್ಯುತ್ತಮ ವಿದ್ಯುತ್ ಮತ್ತು ಶಾಖದ ವಾಹಕಗಳು. ಈ ಎಲ್ಲ ಗುಣಗಳು ಅಪರೂಪದ ಖನಿಜಗಳನ್ನು ನಿಜಕ್ಕೂ ಅಪರೂಪವಾಗಿಸಿವೆ.
ಚೀನಾ ಬಹಳ ಮೊದಲೇ ಈ ಅಪರೂಪದ ಖನಿಜಗಳ ವಿಶೇಷತೆಯನ್ನು ಅರ್ಥ ಮಾಡಿ ಕೊಂಡಿತ್ತು. ಅಪರೂಪದ ಖನಿಜಗಳು ಭವಿಷ್ಯದಲ್ಲಿ ಬಹಳ ದೊಡ್ಡ ಸಂಪತ್ತಾಗು ತ್ತವೆ ಎಂಬುದು ಆ ದೇಶಕ್ಕೆ ತಿಳಿದಿತ್ತು. ಹೀಗಾಗಿ ಅದು ಅಪರೂಪದ ಖನಿಜಗಳನ್ನು ಭೂಮಿ ಯಿಂದ ಹೊರತೆಗೆಯಲು ಸುಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಕೊಂಡಿತು.
ಅವುಗಳನ್ನು ಭೂಮಿಯಿಂದ ತೆಗೆದ ಮೇಲೆ ನಮ್ಮ ಬಳಕೆಗೆ ಯೋಗ್ಯವಾಗಿಸಲು ಅತ್ಯಾಧು ನಿಕ ಸಂಸ್ಕರಣಾ ವ್ಯವಸ್ಥೆಯನ್ನೂ ರೂಪಿಸಿಕೊಂಡಿತು. ಹೀಗಾಗಿ ಇಂದು ಜಗತ್ತಿನಲ್ಲಿ ಉತ್ಪಾದನೆಯಾಗುವ ಅಪರೂಪದ ಖನಿಜಗಳ ಪೈಕಿ ಶೇ.70ರಷ್ಟು ಚೀನಾದ ಉತ್ಪಾದನೆ ಯಾಗುತ್ತಿವೆ. ಮತ್ತು ಜಗತ್ತಿನಲ್ಲಿ ಸಂಸ್ಕರಣೆಯಾಗುವ ಅಪರೂಪದ ಖನಿಜಗಳ ಪೈಕಿ ಶೇ.೯೦ರಷ್ಟು ಚೀನಾದಲ್ಲೇ ಸಂಸ್ಕರಣೆಯಾಗುತ್ತಿವೆ.
ಭಾರತ ಕೂಡ ಕೆಲ ಅಪರೂಪದ ಖನಿಜಗಳ ಗಣಿಗಾರಿಕೆ ನಡೆಸಿ, ಭೂಮಿಯಿಂದ ಹೊರ ತೆಗೆದು, ಸಂಸ್ಕರಣೆಗಾಗಿ ಅವುಗಳನ್ನು ಚೀನಾಕ್ಕೆ ಕಳುಹಿಸುತ್ತದೆ. ಅಪರೂಪದ ಖನಿಜಗಳ ಗಣಿಗಾರಿಕೆ ಬಹಳ ಕಷ್ಟಕರವಾದ ಹಾಗೂ ದುಬಾರಿಯಾದ ಕೆಲಸ. ಹೆಚ್ಚಿನ ಸಲ ಈ ಖನಿಜಗಳು ಅಪಾಯಕಾರಿ ವಿಕಿರಣಶೀಲತೆಯನ್ನು ಹೊಂದಿರುವ ಯುರೇನಿಯಮ್ ಮತ್ತು ಥೋರಿಯಮ್‌ನೊಂದಿಗೆ ಬೆರೆತಿರುತ್ತವೆ.
ಹೀಗಾಗಿ ಈ ಖನಿಜಗಳನ್ನು ಭೂಮಿಯಿಂದ ಹೊರತೆಗೆಯಲು ವಿಶೇಷವಾದ ಕೌಶಲ್ಯ ಬೇಕಾಗುತ್ತದೆ. ಅದಿಲ್ಲದೆ ಇವುಗಳನ್ನು ಭೂಮಿಯಿಂದ ಹೊರ ತೆಗೆದರೆ ಗಣಿಯಲ್ಲಿ ಕೆಲಸ ಮಾಡುವವರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವವರು ವಿಕಿರಣಶೀಲತೆಗೆ ತುತ್ತಾಗಬೇಕಾಗುತ್ತದೆ.
ಭಾರತದಲ್ಲಿ ಅಪರೂಪದ ಖನಿಜಗಳನ್ನು ಹೊರತೆಗೆಯುವ ಹಾಗೂ ಸಂಸ್ಕರಿಸುವ ಜಾಗತಿಕ ಮಟ್ಟದ ತಂತ್ರಜ್ಞಾನಗಳ ಕೊರತೆಯಿದೆ. ಗಣಿಗಾರಿಕೆಗೆ ಸಂಬಂಧಿಸಿದ ತಂತ್ರಜ್ಞಾನ ಗಳಿಗಾಗಿ ನಾವು ಆಸ್ಟ್ರೇಲಿಯಾ, ಸ್ವೀಡನ್‌ನಂತಹ ದೇಶಗಳನ್ನು ಅವಲಂಬಿಸಿದ್ದೇವೆ.
ಆದರೆ, ನಮ್ಮ ವಿಜ್ಞಾನಿಗಳು ಕೂಡ ಸಾಕಷ್ಟು ವರ್ಷಗಳಿಂದ ಸಮರೋಪಾದಿಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಹೀಗಾಗಿ ಆದಷ್ಟು ಶೀಘ್ರದ ನಮಗೆ ಅಪರೂಪದ ಖನಿಜಗಳಿಗೆ ಸಂಬಂಧಿಸಿದ ದೇಸೀ ತಂತ್ರಜ್ಞಾನಗಳು ಲಭಿಸಬಹುದು. ಇದಕ್ಕಾಗಿ ಭಾರತ ಈಗಾಗಲೇ ರಾಷ್ಟ್ರೀಯ ಅಪರೂಪದ ಖನಿಜಗಳ ಮಿಷನ್ ಜಾರಿಗೊಳಿಸಿದೆ. ಅದರಡಿ, 2031ರೊಳಗೆ ೩೦ ಪ್ರಮುಖ ಖನಿಜ ನಿಕ್ಷೇಪಗಳನ್ನು ಗುರುತಿಸಲಾಗುತ್ತದೆ. ಅವುಗಳನ್ನು ಹೊರ ತೆಗೆಯುವು ದರಲ್ಲಿ ಮತ್ತು ಸಂಸ್ಕರಣೆ ನಡೆಸುವುದರಲ್ಲಿ ನಾವು ಯಶಸ್ವಿಯಾದರೆ ಅಪರೂಪದ ಖನಿಜಗಳ ವಿಷಯದಲ್ಲಿ ಭಾರತ ಸ್ವಾವಲಂಬಿಯಾಗಲಿದೆ.
ಇಂದು ಇಡೀ ಜಗತ್ತು ಅಪರೂಪದ ಖನಿಜಗಳಿಗಾಗಿ ಚೀನಾವನ್ನು ಅವಲಂಬಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾದ ಮೇಲಿನ ಅವಲಂಬನೆಯೆಂದರೆ ನಮ್ಮ ಕಾಲನ್ನು ನಾವೇ ಕಡಿದು ಕೊಂಡಂತೆ. ಅಪರೂಪದ ಖನಿಜಗಳ ಪೂರೈಕೆಯಲ್ಲಿ ಚೀನಾ ವ್ಯತ್ಯಾಸ ಉಂಟು ಮಾಡು ತ್ತಿರುವುದು ಇದೇನೂ ಮೊದಲಲ್ಲ. 2010ರಲ್ಲಿ ಜಪಾನ, ಅಮೆರಿಕ ಮತ್ತು ಐರೋಪ್ಯ ದೇಶಗಳಿಗೆ ಅಪರೂಪದ ಖನಿಜಗಳ ರಫ್ತನ್ನು ಚೀನಾ ನಿಲ್ಲಿಸಿ ಬಿಟ್ಟಿತ್ತು. ಇತ್ತೀಚೆಗೆ ಮತ್ತೆ ಚೀನಾ ಸರಕಾರ ಅಪರೂಪದ ಖನಿಜಗಳ ರಫ್ತಿಗೆ ನಿರ್ಬಂಧಗಳನ್ನು ವಿಧಿಸಿದೆ.
ಅದರಿಂದಾಗಿ ಸ್ಮಾರ್ಟ್ ಫೋನ್ ಉತ್ಪಾದನೆ, ರಕ್ಷಣಾ ಸಲಕರಣೆಗಳ ಉತ್ಪಾದನೆ ಹಾಗೂ ಹಸಿರು ಇಂಧನ ಯೋಜನೆಗಳಿಗೆ ಹೊಡೆತ ಬಿದ್ದಿದೆ. ಈ ಕಾರಣದಿಂದಾಗಿಯೇ ಅಮೆರಿಕ ಇಂದು ಅಪರೂಪದ ಖನಿಜಗಳ ಜಪ ಮಾಡುತ್ತಿದೆ. ಯಾವ ದೇಶಕ್ಕೇ ಹೋದರೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮಗೆ ಅಪರೂಪದ ಖನಿಜ ನಿಕ್ಷೇಪಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾದ ಜೊತೆಗೆ ಅಮೆರಿಕ ಮಾಡಿಕೊಂಡ ಒಪ್ಪಂದದಲ್ಲೂ ಅಪರೂಪದ ಖನಿಜಗಳನ್ನು ಖರೀದಿಸುವ ಸಂಗತಿಯಿದೆ. ಹೀಗಾಗಿಯೇ ಅಮೆರಿಕದ ಕಣ್ಣು ಗ್ರೀನ್‌ಲ್ಯಾಂಡ್ ಮೇಲೆ ಬಿದ್ದಿದೆ. ಅಲ್ಲಿ ವ್ಯರ್ಥವಾಗಿ ಹಿಮದ ಹೊದಿಕೆ ಹೊದ್ದು ಸಾವಿರಾರು ವರ್ಷಗಳಿಂದ ಮಲಗಿರುವ ಅಪಾರ ಭೂಸಂಪತ್ತಿದೆ. ಅದರಡಿಯಲ್ಲಿ ಸಾಕಷ್ಟು ಖನಿಜಗಳೂ ಇರಬಹುದು.
ಆದ್ದರಿಂದ ಗ್ರೀನ್ ಲ್ಯಾಂಡನ್ನು ಅಮೆರಿಕಕ್ಕೆ ಸೇರಿಸಿಕೊಂಡರೆ ದೊಡ್ಡ ಲಾಭವಿದೆ ಎಂದು ಶ್ವೇತಭವನ ಲೆಕ್ಕ ಹಾಕುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಉಕ್ರೇನ್‌ನ ಕೆಲ ಭೂಭಾಗಗಳನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಪರೂಪದ ಖನಿಜಗಳು ಅಲ್ಲಿವೆ ಎಂಬ ಕಾರಣಕ್ಕೇ ರಷ್ಯಾ ಆ ಪ್ರದೇಶಗಳ ಮೇಲೆ ಕಣ್ಣು ಹಾಕಿತ್ತು ಎಂಬ ವಾದ ಗಳಿವೆ.
ಒಟ್ಟಿನಲ್ಲಿ ಈ 17 ಅಪರೂಪದ ಖನಿಜಗಳು ಆಗಾಗ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತಲೇ ಬಂದಿವೆ. ಅಪರೂಪದ ಖನಿಜ ಸಂಪತ್ತನ್ನು ಯಾರು ನಿಯಂತ್ರಿಸು ತ್ತಾರೋ ಅವರೇ ಮುಂದೆ ದೊಡ್ಡ ನಾಯಕರಾಗುತ್ತಾರೆ. ಇದನ್ನೆಲ್ಲ ನೋಡಿದರೆ ನನಗೊಂದು ಕವಿತೆ ನೆನಪಾಗುತ್ತದೆ: ನೀನು ನನಗೆ ಅಪರೂಪವಲ್ಲ, ನೀನು ನನ್ನ ಆಸೆಗಳಲ್ಲಿದ್ದೀಯೆ, ನೀನು ನನ್ನ ಕನಸುಗಳಲ್ಲಿದ್ದೀಯೆ, ನಿನಗಾಗಿಯೇ ನಾನು ತುಡಿಯು ತ್ತಿರುವೆ!
ಕೊನೆಯ ಗುಟುಕು: ಕಳೆದ ವಾರ ಅಮೆರಿಕದಲ್ಲಿ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ 2600ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದವು. ಅವುಗಳಲ್ಲಿ ಒಟ್ಟು 70 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಆ ಪ್ರತಿಭಟನೆ ಅದಕ್ಕೂ ಹಿಂದೆ ಯಾವತ್ತೂ ಕಂಡು ಕೇಳರಿಯದ್ದಾಗಿತ್ತು. ಹಿಂದಿನ ಯಾವುದೇ ಒಬ್ಬ ಅಧ್ಯಕ್ಷರಿಗೂ ಈ ಪರಿಯ ವಿರೋಧ ವ್ಯಕ್ತವಾಗಿರಲಿಲ್ಲ. ಆದರೂ ಡೊನಾಲ್ಡ್ ಟ್ರಂಪ್ ಹೇಗೆ ಜಗತ್ತಿನ ಅತ್ಯಂತ ಶಕ್ತಿಶಾಲಿ ನಾಯಕ ನಾಗುತ್ತಾರೆ? ಅವರು ಕೃತಕ ಬುದ್ಧಿಮತ್ತೆ ಬಳಸಿ, ಪ್ರತಿಭಟನಾಕಾರರ ಮೇಲೆ ತಾವೇ ಕೆಸರು ಎರಚುವ ವಿಡಿಯೋವೊಂದನ್ನು ಮಾಡಿಸಿ ಹರಿಬಿಟ್ಟಿದ್ದರು.
ಇಷ್ಟು ಚೀಪ್ ಆಗಿ ವರ್ತಿಸುವುದು ಅಮೆರಿಕದ ಅಧ್ಯಕ್ಷರ ಘನತೆಗೆ ಎಷ್ಟು ದೊಡ್ಡ ಘಾಸಿ ಮಾಡಿರಬೇಡ? ಬಹುಶಃ ಟ್ರಂಪ್‌ಗೆ ಅಮೆರಿಕದ ಕಾಂಗ್ರೆಸ್ಸನ್ನು ಕಂಡರೆ ಭಯ. ಆದರೆ ಅದನ್ನು ಮುಚ್ಚಿಟ್ಟುಕೊಂಡು, ತಾನೊಬ್ಬ ಧೈರ್ಯಶಾಲಿ ಎಂಬಂತೆ ತೋರಿಸಿಕೊಳ್ಳಲು ಅವರು ಈ ರೀತಿಯ ನಾಟಕಗಳನ್ನು ಮಾಡುತ್ತಿದ್ದಾರೆ! ಅವರಿಗೆ ಯಾರಾದರೂ ಒಬ್ಬರು ಒಳ್ಳೆಯ ಸಲಹೆ ನೀಡುವವರು ಬೇಕಾಗಿದ್ದಾರೆ. ಅಂತಹವರು ಯಾರಿದ್ದಾರೆ?