ಒಂದೊಳ್ಳೆ ಮಾತು
ಸೆಪ್ಟೆಂಬರ್ 1887. ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಒಬ್ಬ ಯುವತಿ ಅಲೆದಾಡುತ್ತಿದ್ದಳು. ಆಕೆಯ ಹೆಸರು ನೆಲ್ಲಿ ಬ್ಲೈ. ಕೇವಲ ಇಪ್ಪತ್ಮೂರು ವರ್ಷದ ಈಕೆ ಸಾಧಾರಣ ಯುವತಿಯಲ್ಲ; ಸತ್ಯವನ್ನು ಹುಡುಕಿ ಹೊರಟ ದಿಟ್ಟ ಪತ್ರಕರ್ತೆ. ಅಂದು ಆಕೆ ಒಂದು ವಸತಿ ನಿಲಯಕ್ಕೆ ಕಾಲಿಟ್ಟು, ತನಗೆ ಹುಚ್ಚು ಹಿಡಿದಂತೆ ನಟಿಸಲು ಆರಂಭಿಸಿದಳು.
ಆಕೆಯ ನಟನೆಯ ಹಿಂದೆ ಒಂದು ಬಲವಾದ ಕಾರಣವಿತ್ತು: ಬ್ಲ್ಯಾಕ್‌ವೆಲ್ ದ್ವೀಪದ ‘ಮಹಿಳಾ ಹುಚ್ಚು ಆಸ್ಪತ್ರೆ’ಯಲ್ಲಿ (Women's Lunatic Asylum) ನಡೆಯುತ್ತಿದ್ದ ಅನ್ಯಾಯಗಳನ್ನು ಜಗತ್ತಿಗೆ ತೋರಿಸುವುದು. ಅಧಿಕಾರಿಗಳು ಆಕೆಯ ನಟನೆಯನ್ನು ನಿಜವೆಂದು ನಂಬಿದರು.
ಯಾವುದೇ ಸರಿಯಾದ ತಪಾಸಣೆ ಇಲ್ಲದೆ, ಒಬ್ಬ ವೈದ್ಯ ಮತ್ತು ನ್ಯಾಯಾಧೀಶ ಆಕೆಗೆ ‘ಹುಚ್ಚಿ’ ಎಂಬ ಹಣೆಪಟ್ಟಿ ಹಚ್ಚಿ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿಗೆ ಹೋದ ನಂತರ ನೆಲ್ಲಿ ಕಂಡ ದೃಶ್ಯಗಳು ಎದೆ ನಡುಗಿಸುವಂತಿದ್ದವು.
ಆಸ್ಪತ್ರೆಯ ಒಳಗಿನ ನರಕ: ಅಲ್ಲಿ ಸಾವಿರ ಜನರಿರಬೇಕಾದ ಜಾಗದಲ್ಲಿ ಹದಿನಾರು ನೂರು ಮಹಿಳೆಯರನ್ನು ಕುರಿಗಳಂತೆ ತುಂಬಲಾಗಿತ್ತು. ಅಲ್ಲಿ ಕೇವಲ ರೋಗಿಗಳಿರಲಿಲ್ಲ; ಇಂಗ್ಲಿಷ್ ಮಾತನಾಡಲು ಬಾರದ ವಲಸೆ ಮಹಿಳೆಯರು ಮತ್ತು ಬಡವರೂ ಇದ್ದರು. ಅಲ್ಲಿನ ನರ್ಸ್‌ಗಳು ಕ್ರೂರಿಗಳಾಗಿದ್ದರು.
ಇದನ್ನೂ ಓದಿ: Roopa Gururaj Column: ಕಾಲಕ್ಕಿಂತ ಮುಂದಿದ್ದ ದೂರದರ್ಶಿ ನಿಕೋಲಾ ಟೆಸ್ಲಾ
ಮಹಿಳೆಯರಿಗೆ ಮಂಜುಗಡ್ಡೆಯಂಥ ತಣ್ಣೀರಿನಲ್ಲಿ ಸ್ನಾನ ಮಾಡಿಸಲಾಗುತ್ತಿತ್ತು, ಕೆಟ್ಟ ಆಹಾರ ನೀಡಲಾಗುತ್ತಿತ್ತು ಮತ್ತು ಸಣ್ಣ ತಪ್ಪುಗಳಿಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತು. ಅಲ್ಲಿ ಹೋದ ಸೌಮ್ಯ ಹೆಣ್ಣುಮಕ್ಕಳು ಸಹ ಅಲ್ಲಿನ ಕಿರುಕುಳಕ್ಕೆ ನಿಜವಾಗಿಯೂ ಹುಚ್ಚರಾಗುವ ಪರಿಸ್ಥಿತಿ ಇತ್ತು.
ನೆಲ್ಲಿ ಅಲ್ಲಿಗೆ ಹೋದ ತಕ್ಷಣ ತನ್ನ ನಟನೆಯನ್ನು ನಿಲ್ಲಿಸಿ ಸಾಮಾನ್ಯರಂತೆ ಮಾತನಾಡ ತೊಡಗಿ ದಳು. ಆದರೆ ವಿಪರ್ಯಾಸವೆಂದರೆ, ಒಮ್ಮೆ ಹುಚ್ಚರೆಂದು ಮುದ್ರೆ ಬಿದ್ದ ಮೇಲೆ ಅವರು ಆಡುವ ಸತ್ಯದ ಮಾತುಗಳೂ ಸಹ ಹುಚ್ಚುತನದ ಲಕ್ಷಣಗಳಾಗಿಯೇ ಕಾಣುತ್ತಿದ್ದವು.
ನೆಲ್ಲಿ ಅಲ್ಲಿ ಹತ್ತು ದಿನಗಳ ಕಾಲ ನರಕಯಾತನೆಯನ್ನು ಅನುಭವಿಸುತ್ತಲೇ ಪ್ರತಿಯೊಂದು ಘಟನೆ ಯನ್ನು ತನ್ನ ಮನಸ್ಸಿನಲ್ಲಿ ದಾಖಲಿಸಿಕೊಂಡಳು. ಸತ್ಯದ ಜಯ: ಹತ್ತು ದಿನಗಳ ನಂತರ ವಕೀಲರ ನೆರವಿನಿಂದ ನೆಲ್ಲಿ ಬಿಡುಗಡೆಯಾದಳು. ಅಕ್ಟೋಬರ್ 9, 1887ರಂದು ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಯಲ್ಲಿ ಆಕೆಯ ವರದಿ Behind Asylum Bars ಪ್ರಕಟವಾಯಿತು.
ಇಡೀ ನ್ಯೂಯಾರ್ಕ್ ನಗರವೇ ಬೆಚ್ಚಿಬಿದ್ದಿತು. ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿತು. ಪರಿಣಾಮವಾಗಿ ಸರಕಾರವು ತನಿಖೆಗೆ ಆದೇಶಿಸಿತು. ಆಸ್ಪತ್ರೆಗೆ ಹೆಚ್ಚಿನ ಅನುದಾನ ಸಿಕ್ಕಿತು, ಕ್ರೂರಿ ನರ್ಸ್‌ಗಳನ್ನು ತೆಗೆದುಹಾಕಲಾಯಿತು ಮತ್ತು ರೋಗಿಗಳ ಸ್ಥಿತಿ ಸುಧಾರಿಸಿತು.
ನೆಲ್ಲಿ ಬ್ಲೈ ಕೇವಲ ವರದಿಗಾರ್ತಿಯಾಗಿ ಉಳಿಯಲಿಲ್ಲ; ಆಕೆ ‘ತನಿಖಾ ಪತ್ರಿಕೋದ್ಯಮ’ದ (In vestigative Journalism) ಜನಕಿಯಾದಳು. ವ್ಯವಸ್ಥೆಯ ಕತ್ತಲೆಯನ್ನು ಹೋಗಲಾಡಿಸಲು ಸ್ವತಃ ಆ ಕತ್ತಲೆಯೊಳಗೆ ಇಳಿದು ಹೋಗಬೇಕೆಂದು ಅವಳು ಜಗತ್ತಿಗೆ ತೋರಿಸಿ ಕೊಟ್ಟಳು.
ಇಂದು ಬ್ಲ್ಯಾಕ್‌ವೆಲ್ ದ್ವೀಪದಲ್ಲಿ ನೆಲ್ಲಿ ಬ್ಲೈ ಅವರ ಸ್ಮಾರಕವಿದ್ದು, ಅದು ಅಸಹಾಯಕರ ಪರವಾಗಿ ಧ್ವನಿ ಎತ್ತಿದ ಒಬ್ಬ ಧೀಮಂತ ಮಹಿಳೆಯ ಸಾಕ್ಷಿಯಾಗಿ ನಿಂತಿದೆ. ನಾವು ಮಾಡುವ ವೃತ್ತಿ ಯಾವುದೇ ಆದರೂ ಅದರಲ್ಲಿ ನೆಲಿ ಬ್ಲೈನಂತೆ ಒಂದು ಪ್ರಾಮಾಣಿಕ ಪ್ರಯತ್ನ ಇದ್ದಾಗ ಮಾತ್ರ ಈ ರೀತಿಯ ಧೈರ್ಯ ಮಾಡಲು ಸಾಧ್ಯ.
ಸೈನ್ಯದಲ್ಲಿ, ವೈದ್ಯ ಪ್ರಪಂಚದಲ್ಲಿ, ಪೊಲೀಸ್ ಇಲಾಖೆಯಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಹೀಗೆ ಸಮಾಜ ದ ನಾನಾ ಸ್ತರಗಳಲ್ಲಿ ಅನೇಕರು ತಮ್ಮ ಜೀವವನ್ನೇ ಪಣಕ್ಕೊಡ್ಡಿ ಸತ್ಯದ ಅನ್ವೇಷಣೆಗೆ ತೊಡಗು ತ್ತಾರೆ. ಅವರಿಗೂ ಕುಟುಂಬ, ಭಾವನಾತ್ಮಕ ಸಂಬಂಧಗಳು ಎಲ್ಲವೂ ಇರುತ್ತವೆ. ಆದರೆ ವೃತ್ತಿಪರತೆ ಮತ್ತು ಆತ್ಮಸ್ಥೈರ್ಯ ಎಲ್ಲರಿಗಿಂತ ಎರಡು ಹಿಡಿ ಜಾಸ್ತಿಯೇ ಇರುತ್ತದೆ.
ಇಂಥವರ ಅನೇಕ ಸಾಹಸಗಳಿಂದ, ತ್ಯಾಗಗಳಿಂದ ಸಾಮಾನ್ಯರ ಬದುಕು ಸುರಕ್ಷಿತವಾಗಿದೆ. ಅನ್ಯಾ ಯಕ್ಕೆ ಒಳಗಾದ ಅನೇಕರಿಗೆ ನ್ಯಾಯ ದೊರಕಿಸುವಲ್ಲಿ ಇವರು ಒಂದಿಷ್ಟೂ ಹಿಂಜರಿಯದೆ ನೆರವಾಗಿದ್ದಾರೆ. ಇಂಥವರಿಗೆಲ್ಲ ದೊಡ್ಡ ನಮಸ್ಕಾರ.