ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಕಾಲಕ್ಕಿಂತ ಮುಂದಿದ್ದ ದೂರದರ್ಶಿ ನಿಕೋಲಾ ಟೆಸ್ಲಾ

1884ರಲ್ಲಿ ಅಮೆರಿಕಕ್ಕೆ ಬಂದ ಟೆಸ್ಲಾ ಬರಿಗೈಲಿ ಬಂದಿರಲಿಲ್ಲ, ಬದಲಿಗೆ ಕನಸುಗಳ ಭಂಡಾರವನ್ನೇ ಹೊತ್ತು ತಂದಿದ್ದರು. ಥಾಮಸ್ ಎಡಿಸನ್‌ನ ‘ಡೈರೆಕ್ಟ್ ಕರೆಂಟ್’ (ಡಿ.ಸಿ) ಮಿತಿಯನ್ನು ಮೀರಿ, ಅವರು ‘ಆಲ್ಟರ್ನೇಟಿಂಗ್ ಕರೆಂಟ್’ (ಎ.ಸಿ) ಎಂಬ ಅದ್ಭುತ ಶಕ್ತಿಯನ್ನು ಪರಿಚಯಿಸಿದವರು. ಇಂದು ನಮ್ಮ ಮನೆಗಳಲ್ಲಿ ಬೆಳಗುವ ಪ್ರತಿಯೊಂದು ದೀಪವೂ ಟೆಸ್ಲಾರ ಈ ಯಶಸ್ವಿಗೆ ತಕ್ಕ ಸಾಕ್ಷಿ.

Roopa Gururaj Column: ಕಾಲಕ್ಕಿಂತ ಮುಂದಿದ್ದ ದೂರದರ್ಶಿ ನಿಕೋಲಾ ಟೆಸ್ಲಾ

-

ಒಂದೊಳ್ಳೆ ಮಾತು

ಜನವರಿ 7, 1943. ಮ್ಯಾನ್‌ಹ್ಯಾಟನ್‌ನ ಹೋಟೆಲ್ ನ್ಯೂಯಾರ್ಕರ್‌ನ 3327ನೇ ಸಂಖ್ಯೆಯ ಕೋಣೆ ನಿಶಬ್ದವಾಗಿತ್ತು. ಆಧುನಿಕ ಜಗತ್ತಿನ ರೂವಾರಿ, ಶ್ರೇಷ್ಠ ವಿಜ್ಞಾನಿ ನಿಕೋಲಾ ಟೆಸ್ಲಾ ಅಲ್ಲಿ ಒಂಟಿ ಯಾಗಿ ಕೊನೆಯುಸಿರೆಳೆದಿದ್ದರು. 86 ವರ್ಷದ ಆ ವೃದ್ಧ ವಿಜ್ಞಾನಿಯ ಜೇಬಿನಲ್ಲಿ ಅಂದು ಉಳಿದಿದ್ದು ಕೇವಲ 33 ಸೆಂಟ್ಸ್!

ಜಗತ್ತನ್ನೇ ವಿದ್ಯುತ್ ಶಕ್ತಿಯಿಂದ ಬೆಳಗಿದ ವ್ಯಕ್ತಿ, ಸಾಲದ ಹೊರೆಯಿಂದಾಗಿ ಹೋಟೆಲ್ ಕೋಣೆ ಯಲ್ಲಿ ಪಾರಿವಾಳಗಳನ್ನೇ ತನ್ನ ಒಡನಾಡಿಗಳನ್ನಾಗಿ ಮಾಡಿಕೊಂಡು ಕೊನೆಯ ದಿನಗಳನ್ನು ಅವರು ಕಳೆದಿದ್ದರು.

1884ರಲ್ಲಿ ಅಮೆರಿಕಕ್ಕೆ ಬಂದ ಟೆಸ್ಲಾ ಬರಿಗೈಲಿ ಬಂದಿರಲಿಲ್ಲ, ಬದಲಿಗೆ ಕನಸುಗಳ ಭಂಡಾರವನ್ನೇ ಹೊತ್ತು ತಂದಿದ್ದರು. ಥಾಮಸ್ ಎಡಿಸನ್‌ನ ‘ಡೈರೆಕ್ಟ್ ಕರೆಂಟ್’ (ಡಿ.ಸಿ) ಮಿತಿಯನ್ನು ಮೀರಿ, ಅವರು ‘ಆಲ್ಟರ್ನೇಟಿಂಗ್ ಕರೆಂಟ್’ (ಎ.ಸಿ) ಎಂಬ ಅದ್ಭುತ ಶಕ್ತಿಯನ್ನು ಪರಿಚಯಿಸಿದವರು. ಇಂದು ನಮ್ಮ ಮನೆಗಳಲ್ಲಿ ಬೆಳಗುವ ಪ್ರತಿಯೊಂದು ದೀಪವೂ ಟೆಸ್ಲಾರ ಈ ಯಶಸ್ವಿಗೆ ತಕ್ಕ ಸಾಕ್ಷಿ.

ನಯಾಗರ ಜಲಪಾತಕ್ಕೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಿದ ಅವರು, ಅಂದು ಇಡೀ ಜಗತ್ತಿಗೇ ಬೆರಗು ಮೂಡಿಸಿದ್ದರು. ಆದರೆ ಟೆಸ್ಲಾ ಸಂಶೋಧನೆ ಕೇವಲ ವಿದ್ಯುತ್ ಉತ್ಪಾದನೆಗೆ ಸೀಮಿತ ವಾಗಿರಲಿಲ್ಲ. ಅವರ ಕನಸುಗಳು ವಿಚಿತ್ರವೂ, ವಿಸ್ಮಯಕಾರಿಯೂ ಆಗಿದ್ದವು. ಅದರಲ್ಲಿ ಪ್ರಮುಖ ವಾದುದು ವಾರ್ಡನ್‌ ಟವರ್ ನ್ಯೂಯಾರ್ಕ್‌ನಲ್ಲಿ ಅವರು ನಿರ್ಮಿಸಿದ ಈ ಬೃಹತ್ ಗೋಪುರದ ಉದ್ದೇಶ ಇಡೀ ಜಗತ್ತಿಗೆ ತಂತಿ ಇಲ್ಲದೆಯೇ (ವೈರ್‌ಲೆಸ್) ಉಚಿತವಾಗಿ ವಿದ್ಯುತ್ ನೀಡುವುದಾಗಿತ್ತು.

ಇದನ್ನೂ ಓದಿ: Roopa Gururaj Column: ಕಪಿಲ ಮುನಿ ಮತ್ತು ದೇವಹೂತಿಯ ಸಂವಾದ, ಭಾಗವತದ ಕಥೆ

ಭೂಮಿಯ ವಾತಾವರಣವನ್ನೇ ಬಳಸಿ ಶಕ್ತಿಯನ್ನು ರವಾನಿಸುವ ಅವರ ಈ ಕಲ್ಪನೆ ಇಂದಿನ ವೈ-ಫೈ ಮತ್ತು ಬ್ಲೂಟೂತ್ ತಂತ್ರಜ್ಞಾನಕ್ಕೆ ಅಡಿಪಾಯವಾಯಿತು. ಆದರೆ ಇದರಲ್ಲಿ ಲಾಭ ಕಾಣದ ಹೂಡಿಕೆದಾರ ಜೆ.ಪಿ. ಮಾರ್ಗನ್ ಹಣಕಾಸಿನ ನೆರವು ನಿಲ್ಲಿಸಿದರು. ಟೆಸ್ಲಾ ಸೋಲಲಿಲ್ಲ, ಆದರೆ ಜಗತ್ತು ಅವರ ಉನ್ನತ ಚಿಂತನೆಗೆ ಇನ್ನೂ ಸಿದ್ಧವಾಗಿರಲಿಲ್ಲ.

ಟೆಸ್ಲಾರ ಮತ್ತೊಂದು ನಿಗೂಢ ಸಂಶೋಧನೆಯೆಂದರೆ ‘ಟೆಲಿಫೋರ್ಸ್’ ಅಥವಾ ’ಡೆತ್ ರೇ’. ಕಣಗಳ ಕಿರಣದ ಮೂಲಕ ನೂರಾರು ಮೈಲಿ ದೂರದ ಶತ್ರುಗಳನ್ನು ನಾಶಮಾಡುವ ಈ ಆಯುಧವನ್ನು ಅವರು ರಕ್ಷಣೆಗಾಗಿ ರೂಪಿಸಿದ್ದರು. ಯುದ್ಧಗಳನ್ನು ಶಾಶ್ವತವಾಗಿ ನಿಲ್ಲಿಸುವುದು ಅವರ ಉದ್ದೇಶ ವಾಗಿತ್ತು.

ಈ ಸಂಶೋಧನೆಯ ಗಂಭೀರತೆಯನ್ನು ಅರಿತ ಎಫ್ಬಿಐ , ಟೆಸ್ಲಾ ಮರಣದ ತಕ್ಷಣವೇ ಅವರ ಎಲ್ಲಾ ಪತ್ರಗಳನ್ನು ಮತ್ತು ಸಂಶೋಧನಾ ದಾಖಲೆಗಳನ್ನು ವಶಪಡಿಸಿಕೊಂಡಿತು.‌ ಅವರ ಅಂತ್ಯಕ್ರಿಯೆ ಯಲ್ಲಿ 2000ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ವಿಜ್ಞಾನಿಗಳು, ನೋಬೆಲ್ ಪುರಸ್ಕೃತರು ಮತ್ತು ಸಾಮಾನ್ಯ ಜನರೆಲ್ಲರೂ ಸೇರಿ ಆ ಮಹಾನ್ ಚೇತನಕ್ಕೆ ವಿದಾಯ ಹೇಳಿದರು.

ಟೆಸ್ಲಾ ಬಡವರಾಗಿ ಸತ್ತಿರಬಹುದು, ಆದರೆ ಅವರು ನೀಡಿದ ಪ್ರತೀ ಕಲ್ಪನೆಯೂ ಇಂದು ನಮ್ಮ ಜೀವನದ ಭಾಗವಾಗಿದೆ. ವೈರ್‌ಲೆಸ್ ಸಂವಹನ, ರೇಡಿಯೋ, ರಿಮೋಟ್ ಕಂಟ್ರೋಲ್-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇತಿಹಾಸವು ಒಂದು ಪಾಠವನ್ನು ಪದೇ ಪದೇ ಕಲಿಸುತ್ತದೆ, ಪ್ರತಿಭೆಯನ್ನು ಜೀವಂತವಿದ್ದಾಗ ನಿರ್ಲ ಕ್ಷಿಸಬಹುದು, ಆದರೆ ಅದರ ಪ್ರಭಾವವನ್ನು ಎಂದಿಗೂ ಅಳಿಸಲಾಗದು. ಟೆಸ್ಲಾ ಹರಿಸಿದ ಜ್ಞಾನದ ಪ್ರವಾಹ ಇಂದಿಗೂ ಇಡೀ ಜಗತ್ತಿನ ನಾಡಿಮಿಡಿತದಲ್ಲಿದೆ. ನಿಕೋಲಾ ಟೆಸ್ಲಾ ಎಂಬ ಹೆಸರು ಅಳಿಯದ ವಿದ್ಯುತ್ಕಾಂತೀಯ ಶಕ್ತಿಯಾಗಿ ಎಂದೆಂದಿಗೂ ಉಳಿಯುತ್ತದೆ.

ದೇಹಕ್ಕೆ ಅಳಿವಿದೆ, ಆದರೆ ವ್ಯಕ್ತಿತ್ವಕ್ಕೆ ಇಲ್ಲ. ಪ್ರಪಂಚದಲ್ಲಿ ನಿತ್ಯ ಅಸಂಖ್ಯ ಹುಟ್ಟು-ಸಾವುಗಳು ದಾಖಲಾಗುತ್ತಲೇ ಇರುತ್ತವೆ, ಆದರೆ ಅವುಗಳಲ್ಲಿ ಹಲವರ ಜೀವನ ಮಾತ್ರ ನಮಗೆ ಪ್ರೇರಣೆಯಾಗಿ ಉಳಿದುಬಿಡುತ್ತದೆ. ಇದು ಅವರ ಅಸಿ-ಪಾಸಿ, ಅಧಿಕಾರ ಶಕ್ತಿಗಾಗಿ ಅಲ್ಲ. ಆದರೆ ಅವರ ವ್ಯಕ್ತಿತ್ವ, ಬದುಕಿದ ರೀತಿ ಮಾಡಿದ ತ್ಯಾಗಗಳಿಂದಾಗಿ ಅನುಕರಣೆಯವಾಗುತ್ತದೆ.

ಹೀಗಾಗಿಯೇ ಅದಾವುದೋ ಜಗತ್ತಿನ ಮೂಲೆಯಲ್ಲಿ ಹುಟ್ಟಿ, ತಮ್ಮ ಪಾಡಿಗೆ ತಾವು ಸಂಶೋ ಧನೆಗಳಲ್ಲಿ ಮುಳುಗಿ ಕೊನೆಗೆ ಜೆಬಿನಲ್ಲಿ 33 ಸೆಂಟ್ಸ್ ಉಳಿಸಿಕೊಂಡು ಕಣ್ಮುಚ್ಚಿದ ನಿಕೋಲಾ ಟೆಸ್ಲಾ ಅವರನ್ನು ಇಂದಿಗೂ ಸ್ಮರಿಸುತ್ತಿದ್ದೇವೆ.