Karnataka CM Race: ರಾಜ್ಯದ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ; ಯತ್ನಾಳ್ ಸ್ಫೋಟಕ ಹೇಳಿಕೆ
Mallikarjun Kharge: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಸಿಎಂ ರೇಸ್ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಮುಂದಿನ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.
-
Prabhakara R
Oct 29, 2025 5:25 PM
ಬೆಳಗಾವಿ, ಅ.29: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಸೇರಿ ಯಾರೂ ಸಿಎಂ ಆಗಲ್ಲ. ನವೆಂಬರ್ ಕ್ರಾಂತಿಯಲ್ಲಿ ಬ್ಲ್ಯಾಕ್ ಹಾರ್ಸ್ ಬರ್ತದೆ, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಿಎಂ ಆಗಲಿದ್ದಾರೆ ಎಂದು ಶಾಸಕ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿರುವ ಅವರು, ಇವತ್ತು ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿಯನ್ನು ಏನಾದರೂ ಮುಂದಿನ ಸಿಎಂ ಎಂದು ಹೇಳಿಬಿಡುತ್ತಾರೋ ಎಂದು ಎಂಬಿ ಪಾಟೀಲ್ ಸಿಎಂಗೆ ಹಾರ ಹಾಕುತ್ತಿದ್ದಾರೆ. ನಮಗೆ ಯಾರು ಸಿಎಂ ಆದರೂ ವಿರೋಧ ಇಲ್ಲ. ನೀವು ನೋಡುತ್ತಿರಿ, ಇವರ್ಯಾರೂ ಸಿಎಂ ಆಗಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ತಿಳಿಸಿದರು.
ಇನ್ನು ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರೇ ಆಗಲಿ ಮತಾಂತರವಾದರೆ ಅವರಿಗೆ ಮೂಲ ಜಾತಿಯ ಮೀಸಲಾತಿ ಸಿಗಬಾರದು. ಭ್ರಷ್ಟ ರಾಜಕಾರಣಿಗಳು ಧರ್ಮ ಒಡೆದರೇ ವೋಟ್ ಬರುತ್ತೆ ಕಾಯುತ್ತಿದ್ದಾರೆ. ಕುರುಬ ಕ್ರಿಶ್ಚಿಯನ್ನರು, ಒಕ್ಕಲಿಗ ಕ್ರಿಶ್ಚಿಯನ್ನರು ಅಂತ ಎಲ್ಲಾದರೂ ಇದ್ದಾರಾ?, ನಾವು ಹಿಂದೂ ಲಿಂಗಾಯತ ಎಂದು ಬರೆಸುತ್ತಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಎಲ್ಲಿಯಾದರೂ ಇದೆಯಾ? ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಟನಲ್ ರಸ್ತೆ ಯೋಜನೆ ಮುಂದುವರಿಸಿ; ಡಿಸಿಎಂಗೆ ಸಾರ್ವಜನಿಕರ ಬೆಂಬಲ
ಡಿ.ಕೆ.ಶಿವಕುಮಾರ್ ಸಿಎಂ ಆಗಿ ನೋಡಲು ಬಯಸುತ್ತೇನೆ: ಡಿ.ಕೆ. ಸುರೇಶ್

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿರುವ ನಡುವೆ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ತಮ್ಮ ಸಹೋದರ, ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ ಎಂದು ಹೇಳಿರುವುದು ಕಂಡುಬಂದಿದೆ.
ಅವರ ಅದೃಷ್ಟ ಕೈಹಿಡಿದರೆ ಅವರು ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಮುಂದಿನ ತಿಂಗಳು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ತಲುಪಲಿದ್ದು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಇದನ್ನು ಕೆಲವರು 'ನವೆಂಬರ್ ಕ್ರಾಂತಿ' ಎಂದು ಕರೆಯುತ್ತಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ, ನವೆಂಬರ್ ಎಂದರೆ 'ಕನ್ನಡ ರಾಜ್ಯೋತ್ಸವ' ಮತ್ತು ಕನ್ನಡಿಗರ ಹಬ್ಬವನ್ನು ಆಚರಿಸುವುದು ಎಂದು ಅವರು ಹೇಳಿದರು.
ಬಿಹಾರ ಚುನಾವಣಾ ಫಲಿತಾಂಶದ ನಂತರ ನವೆಂಬರ್‌ನಲ್ಲಿ ನಡೆಯಲಿರುವ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತಂತೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನೀವು ಇದರ ಬಗ್ಗೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಮತ್ತು ಎಐಸಿಸಿ ನಾಯಕರನ್ನು ಕೇಳಬೇಕು. ತಮ್ಮ ಸಹೋದರನ ರಾಜಕೀಯ ಭವಿಷ್ಯದ ಬಗ್ಗೆ ಕೇಳಿದಾಗ, ಸಿಎಂ ಆಗುವ ಕುರಿತು ಅವರ ಹಣೆಯಲ್ಲಿ ಬರೆದಿದ್ದರೆ ಆಗುತ್ತದೆ. ಇಲ್ಲದಿದ್ದರೆ ಆಗಲ್ಲ. ಅದರ ಬಗ್ಗೆ ಏಕೆ ಚಿಂತಿಸಬೇಕು? ನನ್ನ ಸಹೋದರನನ್ನು ಮುಖ್ಯಮಂತ್ರಿಯಾಗಿ ನೋಡುವ ಬಯಕೆ ನನಗೂ ಇದೆ ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಕಾಗಿನೆಲೆ ಅಭಿವೃದ್ಧಿಗೆ 34 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಿದ ಸಿಎಂ ಸಿದ್ದರಾಮಯ್ಯ
ಆ ಗುರಿಯತ್ತ ಯಾವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಳಿದಾಗ 'ಯಾವುದೇ ಪ್ರಯತ್ನಗಳಿಲ್ಲ; ಪಕ್ಷ ಏನು ನಿರ್ಧರಿಸಿದರೂ, ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಯಾಗಿರುವ ಶಿವಕುಮಾರ್ ಅವರು ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ವರ್ತಿಸುವುದು ಅವರ ಕರ್ತವ್ಯ. ಅವರು ಅದನ್ನು ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ.