ತುಂಟರಗಾಳಿ
ಸಿನಿಗನ್ನಡ
ಇತ್ತೀಚೆಗೆ ಕೆಲವು ಚಿತ್ರಗಳು ಥಿಯೇಟರ್‌ನಲ್ಲಿ ಬಿಡುಗಡೆ ಆದ ತಿಂಗಳಿಗೇ ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಆದರೆ ಅದು ರೆಂಟ್ ಬೇಸಿಸ್ ಮೇಲೆ. ಅದಕ್ಕೆ ನಮ್ಮ ಸಿನಿಪ್ರಿಯರು, ವಾರ್ಷಿಕ ಚಂದಾದಾರರಾದ ಮೇಲೂ ಮತ್ತೆ ದುಡ್ಡು ಕೊಟ್ಟು ನೋಡಬೇಕಾ ಅಂತ ವರಾತ ತೆಗೆಯುತ್ತಾರೆ. ಅದು ಸಹಜ ಕೂಡಾ. ಆದರೆ ರೆಂಟ್ ಬೇಸಿಸ್‌ನಲ್ಲಿ ಇದ್ದ ಚಿತ್ರಗಳು ಕೆಲವೇ ದಿನಗಳ ನಂತರ ಉಚಿತ ವೀಕ್ಷಣೆಗೆ ಲಭ್ಯವಾಗುತ್ತವೆ.
ಇಲ್ಲಿ ಅಮೆಜಾನ್ ಅವರ ಪಾಲಿಸಿ ಮತ್ತು ಆಲೋಚನೆ ಹೇಗಿದೆ ಅನ್ನೋದನ್ನ ಅರ್ಥ ಮಾಡಿ ಕೊಳ್ಳೋದೇ ಕಷ್ಟ. ಹೀಗೆ ಮೂರು ದಿನಕ್ಕೆ ಇವರು ತಮ್ಮ ಪ್ಲ್ಯಾನ್ ಚೇಂಜ್ ಮಾಡಿದರೆ ಯಾವ ಗ್ರಾಹಕ ತಾನೆ ರೆಂಟ್ ಕೊಟ್ಟು ಇವರು ಹಾಕುವ ಸಿನಿಮಾಗಳನ್ನು ನೋಡು ತ್ತಾನೆ? ಚಿತ್ರವೊಂದು ಸಿನಿಮಾ ಥಿಯೇಟರ್ ನಲ್ಲಿ ಸದ್ದು ಮಾಡುತ್ತಿದ್ದರೂ, ‘ಅಯ್ಯೋ, ಓಟಿಟಿ ಯಲ್ಲಿ ಬಂದಾಗ ನೋಡೋಣ ಬಿಡಿ’ ಅಂತ ತಿಂಗಳುಗಟ್ಟಲೆ ಕಾಯುವ ನಮ್ಮ ಮಂದಿ, ಒಂದು ವಾರ ಕಾಯದೇ, ಇವರಿಗೆ ರೆಂಟ್ ಕೊಟ್ಟು ಸಿನಿಮಾ ನೋಡುತ್ತಾರಾ? ಯಾವೋ ಕೆಲವು ದೊಡ್ಡ ಬಜೆಟ್‌ನ ಅತಿಯಾದ ನಿರೀಕ್ಷೆ ಇದ್ದ ಚಿತ್ರಗಳು ಅನ್ನೋ ಕಾರಣ ಕ್ಕೆ ಹಾಗೆ ಮಾಡಿರಬಹುದು ಅಂದುಕೊಂಡರೆ ಅದು ತಪ್ಪು.
ಯಾಕಂದ್ರೆ ಇವರು ಮಾಮೂಲಿ ಸ್ಟಾರ್ ಇಲ್ಲದೆ ಲೋ ಬಜೆಟ್ ಚಿತ್ರಗಳನ್ನೂ ಬಾಡಿಗೆಗೆ ಕೊಡುತ್ತಾರೆ. ಅವೇನೂ ದೊಡ್ಡ ಸಿನಿಮಾ ಆಗಿರೊಲ್ಲ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಚಿತ್ರಗಳೂ ಅಲ್ಲ. ಅಲ್ಲದೆ, ಅದು ಕೂಡಾ ಇನ್ನೊಂದು ಮೂರು ದಿನದಲ್ಲಿ ಫ್ರೀ ಆಗಿ ಸಿಗುತ್ತೆ ಅಂತ ಗೊತ್ತಿರೋ ಗ್ರಾಹಕರು ಈಗಲೇ ರೆಂಟ್ ಕೊಟ್ಟು ನೋಡ್ತಾರೆ ಅಂತ ಪ್ರೈಮ್ ವಿಡಿಯೋದವರಿಗೆ ಅದೇನು ನಂಬಿಕೆಯೋ ಗೊತ್ತಿಲ್ಲ.
ಈ ನಡುವೆ ದುಡ್ಡು ಕೊಟ್ಟು ವಾರ್ಷಿಕ ಚಂದಾದಾರರಾದ ಮೇಲೂ ಪ್ರೈಮ್‌ನಲ್ಲಿ ಮತ್ತೆ ಜಾಹೀರಾತುಗಳು ಬರುತ್ತವೆ. ಇವು ಬೇಡ ಅಂದ್ರೆ ಅವರಿಗೆ ಮತ್ತೆ 700 ರುಪಾಯಿ ಕೊಡ ಬೇಕಂತೆ. ಈ ಓಟಿಟಿಗಳ ಅಧ್ವಾನಗಳು ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತವೋ ಏನೋ.
ಇದನ್ನೂ ಓದಿ: Hari Paraak Column: Founded ಮತ್ತು Found dead
ಲೂಸ್ ಟಾಕ್ - ನರಭಕ್ಷಕ ಹುಲಿ
ಅಲ್ಲಪ್ಪಾ, ಊರೊಳಗೆ ನುಗ್ಗಿ ಮನುಷ್ಯರನ್ನ ಕೊಂದು ತಿನ್ನೋದು ತಪ್ಪಲ್ವಾ?
- ಏನ್ ತಪ್ಪು, ಹುಲಿ ಮುಪ್ಪಾದರೆ, ಹುಲ್ಲು ತಿಂತದಾ? ಉಪ್ಪು, ಹುಳಿ, ತಿಂದು ಬೆಳೆದಿರೋ ದೇಹ. ಹುಲಿ ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲೀನೇ ಗೊತ್ತಾ, ಈಗ ನೀನ್ ಸಿಕ್ಕಿದೀಯಾ.. ಕುತ್ತೇ ಮೇ ತೇರಾ ಖೂನ್ ಪೀ ಜಾವೂಂಗ
ಓ... ನೀನು ಧರ್ಮೇಂದ್ರನ ಅಭಿಮಾನಿ ಅನ್ನುತ್ತೆ, ಒಂದ್ ಸ್ವಲ್ಪ ಹೊತ್ತು ಇರು. ಇವತ್ತಿನ ಇಂಟರ್‌ವ್ಯೂ ಮುಗೀಲಿ, ಆಮೇಲ್ ತಿನ್ನುವಂತೆ
- ಮಗಾ, ಪುಣ್ಯಕೋಟಿ ಕಾಲ ಎಲ್ಲಾ ಈವಾಗಿಲ್ಲಮ್ಮಾ, ಇದು ಕಲಿಗಾಲ.
ನಿಜ ಹೇಳಬೇಕೂಂದ್ರೆ, ಇದು ಹುಲಿಗಾಲ. ಅದ್ಸರಿ, ಈಗ ಬೋನೊಳಗೆ ಹಾಕಿದ್ದಾರಲ್ಲ ನಿನ್ನ, ಈಗ ಹೇಳು, ನಿನ್ನ ಪ್ರಕಾರ ಯಾರು ಜಾಸ್ತಿ ಸ್ಟ್ರಾಂಗ್? ಮನುಷ್ಯನಾ ಅಥವಾ ‘ಹುಲಿಯಾ’?
- ಗೊತ್ತಿಲ್ಲ, ಕೆ.ವಿ.ರಾಜು ಅವರನ್ನೇ ಕೇಳಬೇಕು.
ಸರಿ, ಸರಿ. ಆದ್ರೆ, ‘ಕಾಡು ಹೋಗು ಅಂತಿದೆ, ಊರು ಬಾ ಅಂತಿದೆ’ ಅನ್ನೋ ನಿನ್ನ ಸಾಯಿಸ್ಬೇಕೂಂತ ಕೆಲವರು ಹೇಳಿದಾರೆ, ಏನಂತೀಯಾ?
- ಟೈಗರ್ ಪ್ರಭಾಕರ್, ಬಾಳಾ ಠಾಕ್ರೆ, ಪಟೌಡಿ ಹೀಗೆ ಹುಲಿಗಳ ಸಂತತಿ ಕಡಿಮೆಯಾಗಿದೆ. ಹಂಗಾಗಿ ನನ್ನನ್ನ ಕೊಲ್ಲಲ್ಲ ಅಂತ ಭರವಸೆ ಇದೆ.
ಸಿಕ್ಕಾಕ್ಕೊಂಡಿರೋ ಬೋನಿನಲ್ಲಿ ತಿನ್ನೋಕೆ ಬೋನ್ ಸಿಗ್ತಿಲ್ಲ, ಹಂಗೇ ಸತ್ರೂ ಸಾಯ ಬಹುದು ನೀನು. ಹಂಗೇನಾದ್ರೂ ಆದ್ರೆ, ನಿನ್ ಕೊನೇ ಆಸೆ ಏನು?
- ನೀವ್ಯಾರೂ ನಮ್ಮ ಹುಲಿಗಳ ಆಸೆ ತೀರ್ಸಲ್ಲ ಬಿಡ್ರಪ್ಪಾ. ಒಂದಷ್ಟು ವರ್ಷಗಳ ಹಿಂದೆ ‘ಹುಲಿ ಹಿಡಿದವರು ಕಂಡಂತೆ’ ಅಂತ ನನ್ ಮೇಲೊಂದ್ ಸಿನಿಮಾ ಮಾಡ್ತೀನಿ ಅಂತ ಹೇಳಿದ್ರು, ಆದ್ರೆ ಮಾಡದೇ ನನ್ನ ಆಸೆಗೆ ಹುಳಿ ಹಿಂಡಿಬಿಟ್ರು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮದುವೆ ಆಗಿ 5 ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್‌ಗಳು, ಎಲ್ಲಾ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರೆ ಮಕ್ಕಳು ಮಾತ್ರ ಆಗಲೇ ಇಲ್ಲ. ಹೀಗೆ ಒಂದು ದಿನ ಇಬ್ಬರೂ ಮಾರ್ಕೆಟ್‌ನಲ್ಲಿ ಹೋಗುತ್ತಿರುವಾಗ ಅಲ್ಲಿ ಖೇಮುಶ್ರೀಯ ತವರುಮನೆಗೆ ಬರುತ್ತಿದ್ದ ಪೂಜಾರಿಯೊಬ್ಬ ಆಕೆಯನ್ನು ಗುರುತು ಹಿಡಿದು ಮಾತನಾಡಿಸಿದರು.
“ಎಲ್ಲಾ ಸೌಖ್ಯನೇನಮ್ಮ?" ಎಂದು ಅವರು ಕೇಳಿದಾಗ ಖೇಮುಶ್ರೀ, “ಜೀವನದಲ್ಲಿ ಎಲ್ಲವೂ ಸರಿ ಇದೆ, ಆದ್ರೆ ಇನ್ನೂ ಮಕ್ಕಳಾಗಿಲ್ಲ" ಎಂಬ ಕೊರಗನ್ನು ಹೇಳಿಕೊಂಡಳು. ಅದಕ್ಕೆ ಪೂಜಾರಿ, “ಯೋಚನೆ ಮಾಡಬೇಡಮ್ಮ, ನಾನು ಕಾಶಿಗೆ ಹೋಗ್ತಾ ಇದ್ದೀನಿ, ಅಲ್ಲಿ ದೇವರ ಸನ್ನಿಧಿಯಲ್ಲಿ ನಿನ್ನ ಹೆಸರಲ್ಲಿ ಒಂದು ದೀಪ ಹಚ್ತೀನಿ. ಎಲ್ಲ ಸರಿ ಹೋಗುತ್ತೆ" ಅಂದ್ರು. ಅದಾಗಿ ೫ ವರ್ಷ ಆಯ್ತು.
ಒಂದು ದಿನ ಆ ಪೂಜಾರಿಯ ಮನೆ ಬಾಗಿಲು ಯಾರೋ ಬಡಿದಂತಾಯ್ತು. ಪೂಜಾರಿ ಎದ್ದು ಹೋಗಿ ಬಾಗಿಲು ತೆರೆದರೆ ಖೇಮು ನಿಂತಿದ್ದ. ಗುರುತು ಹಿಡಿದ ಪೂಜಾರಿ ಒಳಗೆ ಕರೆದು ಮಾತನಾಡಿಸಿದರು. “ಮಕ್ಕಳಾದ್ವಾ?" ಅಂತ ಪೂಜಾರ್ರು ಕೇಳಿದ ತಕ್ಷಣ ಖೇಮು ಪೂಜಾರ್ರ ಕೈಯಲ್ಲಿ 25 ಸಾವಿರ ಹಣ ಇಟ್ಟು, “ದಯವಿಟ್ಟು ಇನ್ನೊಮ್ಮೆ ಕಾಶಿಗೆ ಹೋಗಿ ಬನ್ನಿ ಪೂಜಾರ್ರೇ" ಅಂದ.
“ಯಾಕಪ್ಪಾ, ಇನ್ನೂ ಮಕ್ಕಳಾಗಲಿಲ್ವಾ?" ಅಂತ ಪೂಜಾರ್ರು ಕೇಳಿದ್ದಕ್ಕೆ ಖೇಮು ಹೇಳಿದ: “ನೀವೇನೋ ಕಾಶಿಗೆ ಹೋಗಿ ದೀಪ ಹಚ್ಚಿ ಬಂದ್ರಿ, ಆದ್ರೆ ಯಾವನೋ ಬಡ್ಡೀಮಗ ಇನ್ನೂ ಅದಕ್ಕೆ ಡೈಲಿ ಎಣ್ಣೆ ಹಾಕ್ತಾ ಇದ್ದಾನೆ ಅನ್ಸುತ್ತೆ. ಖೇಮುಶ್ರೀ ಈಗಾಗ್ಲೇ 3 ಸಲ ಅವಳಿ-ಜವಳಿ ಮಕ್ಕಳನ್ನ ಹೆತ್ತಿದ್ದಾಳೆ. ಇನ್ನು ನನ್ನ ಕೈಲಿ ತಡ್ಕೊಳ್ಳೋಕಾಗಲ್ಲ. ಮೊದ್ಲು, ಅಲ್ಲಿಗೆ ಹೋಗಿ ಆ ದೀಪ ಆರಿಸಿ ಬನ್ನಿ".
ಲೈನ್ ಮ್ಯಾನ್
ಯಾರನ್ನಾದ್ರೂ ಪರೀಕ್ಷೆ ಮಾಡಬೇಕು ಅಂತ ಅವರಿಗೆ ಸಚಿವ ಸ್ಥಾನ ಕೊಟ್ರೆ ಅದು
- ಸಂ‘ಪುಟಕ್ಕಿಟ್ಟ ಚಿನ್ನ’
ಹೋಮ್ ಮಿನಿಸ್ಟರ್‌ನ ಕನ್ನಡದಲ್ಲಿ ಗೃಹ ಮಂತ್ರಿ ಅಂತಾರೆ.
- ಆಕ್ಚುವಲಿ, ಅದು ವಸತಿ ಸಚಿವ ಆಗಬೇಕಲ್ವಾ?
ಮಿರರ್ ಮಾರುವವನಿಗೆ ಒಂದು ಹೆಸರು
- ‘ಕನ್ನಡಿ’ಗ
ಮಿತಿಮೀರಿದ ಆಭಾಸ
- ನಿದ್ದೆ ಮಾಡುವಾಗ ಕನಸಲ್ಲೂ ನಿದ್ದೆ ಮಾಡೋ ಥರ ಕನಸು ಬೀಳೋದು.
Heights of curiosity
- ಸೆಲೆಬ್ರಿಟಿ ಶೋ ಮುಗಿದ ಮೇಲೆ ಸಿನಿಮಾ ನೋಡಿದ ಸೆಲೆಬ್ರಿಟಿಗಳು ಆ ಸಿನಿಮಾ ಬಗ್ಗೆ ಏನ್ ಹೇಳ್ತಾರೆ ಅಂತ ಕುತೂಹಲ ಇಟ್ಕೊಳ್ಳೋದು.
ಭೂಗೋಳ ರಹಸ್ಯ
- ಭೂಮಿ ‘ಗುಂಡು’ ಗುಂಡಾಗಿದೆಯಂತೆ... ಅದಕ್ಕೇ ಬಡ್ಡಿಮಗಂದು ಟೈಟ್ ಆಗಿ ‘ತಿರುಗುತ್ತೆ’.
ನಶೆದಾತರಿಗೆ ತೋರಿಸೋ ತಾರತಮ್ಯ
- ಎಣ್ಣೆನ ‘ಪರಮಾತ್ಮ’ ಅಂತ ಗೌರವದಿಂದ ಕರೀತೀವಿ. ಆದ್ರೆ ಸಿಗರೇಟ್‌ನ ಮಾತ್ರ ಸೇದಿದ ಮೇಲೆ ಕಾಲಲ್ಲಿ ಹೊಸಕಿ ಹಾಕ್ತೀವಿ.
ಕುಡುಕರ ಸ್ವಗತ
- ಕುಡುಕರಿಗೆ ಒಂದು ಸಪರೇಟ್ ಧರ್ಮ ಬೇಕು..
‘ಪ್ರಜ್ಞಾವಂತ’ರ ಲೋಕ ನಮಗೆ ಪರಮ ಬೋರು.
ಮನೆ ಕೆಲಸದವಳು ಪಕ್ಕದ ಮನೆಯವರ ಬಗ್ಗೆ ‘ಕಿವಿ’ ಊದಿದರೂ ಅದು..
- ‘ಬಾಯಿ’ ಮಾತು
ಬ್ರೇಕ್ ಅಪ್, ಡೈವೋರ್ಸ್ ಆಗಿ ಬಿಟ್ಟು ಹೋಗುವಾಗ ಒಬ್ಬರ ಮೇಲೆ ಒಬ್ಬರು ಸಿಟ್ಟಿನಿಂದ ಆಡುವ ಮಾತುಗಳು - Bye ಗುಳ