ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಅಮಾವಾಸ್ಯೆಯ ಬಾಳಿಗೆ ಲಾಂದ್ರ ಹಿಡಿದ ಚಂದ್ರ...

“ನನ್ನ ಕಂಗಳನ್ನೇ ಅರೆಕ್ಷಣ ದಿಟ್ಟಿಸಿದ ಚಂದ್ರಣ್ಣ, ‘ಆಯ್ತು, ಮೊದಲು ಒಂಚೂರು ಚೂಡಾ ತಿಂದು ಆಮೇಲೆ ಆತ್ಮಹತ್ಯೆ ಮಾಡ್ಕಾ...’ ಎಂದು ಹೇಳಿ ಪತ್ರಿಕೆಯೊಂದರ ಭಾನುವಾರದ ಪುರವಣಿಯ ಮೇಲೆ ಚೂಡಾ ಸುರಿದು ಕೊಟ್ಟು, ಭುಜ ಹಿಡಿದು ಬಲವಂತವಾಗಿ ಕೂರಿಸಿದ. ಅದನ್ನು ತಿಂದ ಮೇಲೆ, ಆ ಪುರವಣಿಯಲ್ಲಿ ಮುದ್ರಿತವಾಗಿದ್ದ ಅಕ್ಷರಗಳ ಮೇಲೆ ಕಣ್ಣಾಡಿಸಿದೆ. ಅದರಲ್ಲಿ ‘ದುಡುಕಬೇಡ ಜೀವವೇ...’ ಎಂಬ ಶೀರ್ಷಿಕೆಯ ನಿಮ್ಮ ಕಥೆ ಪ್ರಕಟವಾಗಿತ್ತು

ಅಮಾವಾಸ್ಯೆಯ ಬಾಳಿಗೆ ಲಾಂದ್ರ ಹಿಡಿದ ಚಂದ್ರ...

ರಸದೌತಣ

naadigru@gmail.com

ತನ್ನಲ್ಲಿಗೆ ಮಾಲೀಶಿಗೆ ಬಂದ ಕಥೆಗಾರನಿಗೆ ಶ್ರಮಜೀವಿಯು ತನ್ನ ವೃತ್ತಾಂತವನ್ನು ವಿವರಿಸುತ್ತಾ ಹೋಗಿದ್ದನ್ನು ಹಿಂದಿನ ಸಂಚಿಕೆಗಳಲ್ಲಿ ಓದಿದಿರಿ. ಅದರ ಮುಂದುವರಿದ ಭಾಗ ಇಲ್ಲಿದೆ. ಒಪ್ಪಿಸಿ ಕೊಳ್ಳಿ...

“ಚೌರದಂಗಡಿ ಚಂದ್ರಣ್ಣ ನನ್ನ ಬಾಲ್ಯಸ್ನೇಹಿತ, ಕಷ್ಟ-ಸುಖಗಳನ್ನು ಹಂಚಿಕೊಂಡವನು. ಅವನ ಅಂಗಡಿಯ ಮುಂದೆಯೇ ಹಾದು ಹೋಗುತ್ತಿದ್ದರೂ ಗಮನಿಸದೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ ನನ್ನ ವರ್ತನೆ ಅವನಿಗೆ ವಿಲಕ್ಷಣ ಎನಿಸಿರಬೇಕು. ಹಾಗಾಗಿಯೇ, ‘ಏನು ಶಿವನೇ, ಬಿಲ್ಲು ವಿದ್ಯೆ ತರಬೇತಿಗೆ ಸೇರ‍್ಕೊಂಡ ಮೇಲೆ ನಮ್ಮನ್ನೆಲ್ಲಾ ಮಾತಾಡ್ಸದೇ ಇಲ್ವಲ್ಲಪ್ಪಾ...’ ಎಂದು ಚಂದ್ರಣ್ಣ ಕಾಲೆಳೆದ. ‘ನನ್ನನ್ನು ತಡೀಬೇಡ ಚಂದ್ರಣ್ಣಾ, ತುಂಬಾ ಅರ್ಜೆಂಟಲ್ಲಿದ್ದೀನಿ’ ಎಂದು ತ್ವರೆ ಮಾಡಿದೆ. ‘ಅದೆಂಥ ದಾರಾ ಅರ್ಜೆಂಟು ಇರ‍್ಲಿ, ಒಂದಿಷ್ಟು ಮಾತಾಡಮ ಬಾ, ಬೆಳಗ್ಗಿಂದ ಯಾರೂ ಸಿಕ್ಕಿಲ್ಲ..’ ಎಂದ. ಇವನಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬ ಯತ್ನದಲ್ಲಿ ನನ್ನ ಕೈ ಅಪ್ರಯತ್ನವಾಗಿ ಜೇಬನ್ನು ತಡಕಿದಾಗ, ಕಿರೀಟಿಯ (ಮತ್ತು ನನ್ನ!) ತಾಯಿ ಕೊಟ್ಟಿದ್ದ ದುಡ್ಡು ಬೆರಳಿಗೆ ಸೋಕಿತು. ಸಾಯೋಕ್ಕೆ ಹೋಗ್ತಾ ಇರೋನಿಗೆ ದುಡ್ಡೇಕೆ ಅಂದ್ಕೊಂಡು ಅಷ್ಟನ್ನೂ ಚಂದ್ರಣ್ಣನಿಗೆ ಕೊಟ್ಟು ‘ತಗಾ, ಇಟ್ಕಾ’ ಅಂದು ಅಲ್ಲಿಂದ ಹೊರಡಲು ಅವಸರಿಸಿದೆ. ‘ಅಯ್ಯೋ ಶಿವನೇ, ಬರೀ ದುಡ್ಡು ಕೊಟ್ರೆ ಹೆಂಗೆ? ಏನಾದ್ರೂ ಸೇವೆ ಮಾಡಿಸ್ಕಾ’ ಅಂದ ಚಂದ್ರಣ್ಣ. ‘ನಂಗೆ ಟೈಮಿಲ್ಲ ಚಂದ್ರಣ್ಣಾ, ಆತ್ಮಹತ್ಯೆ ಮಾಡ್ಕೊ ಳ್ಳೋಕ್ಕೆ ಹೋಗ್ತಿದ್ದೀನಿ, ತಡೀಬೇಡ..’ ಅಂದುಬಿಟ್ಟೆ ಬಾಯಿತಪ್ಪಿ....

7.2 R

“ನನ್ನ ಕಂಗಳನ್ನೇ ಅರೆಕ್ಷಣ ದಿಟ್ಟಿಸಿದ ಚಂದ್ರಣ್ಣ, ‘ಆಯ್ತು, ಮೊದಲು ಒಂಚೂರು ಚೂಡಾ ತಿಂದು ಆಮೇಲೆ ಆತ್ಮಹತ್ಯೆ ಮಾಡ್ಕಾ...’ ಎಂದು ಹೇಳಿ ಪತ್ರಿಕೆಯೊಂದರ ಭಾನುವಾರದ ಪುರವಣಿಯ ಮೇಲೆ ಚೂಡಾ ಸುರಿದು ಕೊಟ್ಟು, ಭುಜ ಹಿಡಿದು ಬಲವಂತವಾಗಿ ಕೂರಿಸಿದ. ಅದನ್ನು ತಿಂದ ಮೇಲೆ, ಆ ಪುರವಣಿಯಲ್ಲಿ ಮುದ್ರಿತವಾಗಿದ್ದ ಅಕ್ಷರಗಳ ಮೇಲೆ ಕಣ್ಣಾಡಿಸಿದೆ. ಅದರಲ್ಲಿ ‘ದುಡುಕಬೇಡ ಜೀವವೇ...’ ಎಂಬ ಶೀರ್ಷಿಕೆಯ ನಿಮ್ಮ ಕಥೆ ಪ್ರಕಟವಾಗಿತ್ತು. ಅದರ ಪೀಠಿಕೆಯಲ್ಲಿ, ‘ಜೀವನದಲ್ಲಿ ಅಸಹನೀಯ ಕಷ್ಟಗಳನ್ನೋ, ವೈಫಲ್ಯಗಳನ್ನೋ, ಸರಣಿ ಸಾವು ಗಳನ್ನೋ ಕಂಡವರು ದುಡುಕಿ ಆತ್ಮಹತ್ಯೆಗೆ ಮುಂದಾಗುವುದುಂಟು. ಆದರೆ, ಅದೊಂದು ಕ್ಷಣವನ್ನೂ ಹೇಗಾದರೂ ಮಾಡಿ ಮುಂದೂಡಿ ಬಿಟ್ಟರೆ ಅಥವಾ ಆಪ್ತರು ಉಪಾಯ ಮಾಡಿ ಅವರನ್ನು ಮಾತಿಗೋ ಕೆಲಸಕ್ಕೋ ಎಳೆದುಬಿಟ್ಟರೆ, ಆತ್ಮಹತ್ಯೆಯ ನಿರ್ಧಾರದಿಂದ ಅವರು ಹಿಂದೆ ಸರಿದು, ಪಟ್ಟುಹಿಡಿದು ಸಾಧನೆ ಯಲ್ಲಿ ತೊಡಗಿ ಯಶಸ್ಸು ದಕ್ಕಿಸಿಕೊಳ್ಳುವ ಸಾಧ್ಯತೆ ಇರುತ್ತದೆ...’ ಎಂಬ ಸಾಲು ಇತ್ತು. ಕುತೂಹಲ ಕೆರಳಿ ಆ ಕಥೆಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇನ್ನಷ್ಟು ಸಂಕಷ್ಟಗಳು ಎದೆಗೆ ಒದ್ದರೂ ಧೃತಿಗೆಡಬಾರದು. ಈಗ ನನ್ನ ಬದುಕು ಅಕ್ಷರಶಃ ಸೊನ್ನೆಗೆ ಬಂದು ನಿಂತಿದೆ. ಆದರೂ ಪರವಾಗಿಲ್ಲ, ಬದುಕು ಕಟ್ಟಿಕೊಳ್ಳಬೇಕು ಎಂದು ಛಲ ತೊಟ್ಟೆ. ‘ಈ ಪೇಪರ್ ನಾನೇ ಇಟ್ಟುಕೊಳ್ಳಲಾ?’ ಎಂದು ಚಂದ್ರಣ್ಣನಿಗೆ ಕೇಳಿದೆ. ನನ್ನ ಆತ್ಮಹತ್ಯೆಯ ದುಡುಕಿಗೆ ಬ್ರೇಕ್ ಹಾಕಿದ್ದರ ಜತೆಗೆ ಒಳಗೊಳಗೇ ನಗುತ್ತಿದ್ದ ಆತ, ‘ಆಯ್ತು ಬುದ್ದೀ’ ಅಂದ. ನಾನು ಮನೆ ಕಡೆಗೆ ತಿರುಗಿದಾಗ, ‘ಅದೇನೋ ಆತ್ಮಹತ್ಯೆ ಮಾಡ್ಕತೀನಿ ಅಂದ್ಹಂಗಿತ್ತೂ? ರೈಲು ಹಳಿ ಈ ದಿಕ್ಕಿಗೆ ಇದೆ ಸ್ವಾಮೀ.. ಇನ್ನೇನು ಪ್ಯಾಸೆಂಜರ್ ಟ್ರೇನು ಬರೋ ಹೊತ್ತು...’ ಅಂತ ಮತ್ತೆ ಕಾಲೆಳೆದ ಚಂದ್ರಣ್ಣ. ನಾನು ನಾಚಿಕೆಯಿಂದ ತಲೆ ತಗ್ಗಿಸಿದಾಗ ಚಂದ್ರಣ್ಣ, ‘ಈ ಭೂಮಿಗೆ ನಮ್ಮನ್ನ ಕಳಿಸಿದ ಆ ದೇವರಿಗೆ ಗೊತ್ತು ನಮ್ಮನ್ನ ಯಾವಾಗ ಕರ್ಕೊಬೇಕು ಅಂತ, ನಾವಾಗೇ ಅವನಲ್ಲಿಗೆ ಹೋಗೋ ದುಡುಕು ಬುದ್ಧಿ ಮಾಡಬಾರದು’ ಎಂದು ಹೇಳಿ ತಲೆಗೆ ಮೊಟಕಿದ. ದುಡುಕಿಗೆ ಬ್ರೇಕ್ ಹಾಕಿದ ಚಂದ್ರಣ್ಣನಿಗೆ ನಗುತ್ತಲೇ ಕೈಮುಗಿದು ಮನೆಯತ್ತ ಹೊರಡಲು ಅನುವಾದೆ. ‘ಇರು ಒಂದ್ನಿಮಿಷ’ ಎಂದವನೇ ಒಳಗೆ ಹೋಗಿ, ಮನೆಯಿಂದ ತನಗೆಂದು ತಂದುಕೊಂಡಿದ್ದ ಅನ್ನದ ಬುತ್ತಿಯನ್ನು ನನ್ನ ಕೈಗಿತ್ತು, ‘ಮನೆಗೆ ಹೋಗಿ ಇದನ್ನು ಉಂಡುಬಿಟ್ಟು ಸ್ವಲ್ಪ ನಿದ್ರೆ ಮಾಡಿ ನಿರಾಳನಾಗು. ಸಂಜೆ ಮುಖ ತೊಳ್ಕೊಂಡು ಫ್ಲ್ಯಾಶ್‌ ಆಗಿ ಬಾ, ಏನಾದ್ರೂ ತಲೆ ಓಡ್ಸಾಣಾ...’ ಅಂದ. ನನ್ನ ಕಂಗಳು ಕೊಳಗಳಾದವು. ಇದನ್ನು ಕಂಡ ಚಂದ್ರಣ್ಣ , ‘ಛೀ ದಡ್ಡಾ. ಇಷ್ಟಕ್ಕೆಲ್ಲಾ ಅಳ್ತಾರೇನಲೇ... ಹೆಣ್ಣಿಗರಾಮ’ ಎಂದು ಹೇಳಿ ಬೆನ್ನು ಚಪ್ಪರಿಸಿದ. ಮನೆಗೆ ಬಂದು ಪತ್ರಿಕೆಯಲ್ಲಿನ ‘ದುಡುಕಬೇಡ ಜೀವವೇ...’ ಕಥೆಯನ್ನು ಇನ್ನೊಮ್ಮೆ ಓದಿಕೊಂಡೆ. ಏನಾದರೂ ಸಾಧಿಸಲೇಬೇಕೆಂಬ ಛಲ ಮತ್ತೊಮ್ಮೆ ಹೆಡೆಯಾಡಿಸಿತು. ಚಂದ್ರಣ್ಣ ಕೊಟ್ಟ ಬುತ್ತಿಯನ್ನು ಉಂಡೆ. ಸಾಕುತಾಯಿ ಇಲ್ಲದ್ದು ಕಾಡಿದಂತಾಗಿ ಚಾಪೆಯ ಮೇಲೆ ಅವಳ ಸೀರೆಯೊಂದನ್ನು ಹಾಸಿ ಒಪ್ಪ ಮಾಡಿಕೊಂಡೆ. ಅದರಲ್ಲಿ ಅವಳ‘ಸ್ಪರ್ಶ’ ಇದ್ದುದರಿಂದಲೋ ಏನೋ ಚೆನ್ನಾಗಿ ನಿದ್ರೆ ಬಂತು. ಕಣ್ಣು ಬಿಟ್ಟಾಗ ಸಂಜೆಯಾಗಿತ್ತು. ಮುಖ ತೊಳೆದುಕೊಂಡು ಚಂದ್ರಣ್ಣನ ಫ್ಲ್ಯಾಶ್‌ ಬ್ಯಾಕ್ ಕಥೆ ಯನ್ನೇ ನೆನೆಸಿಕೊಂಡು ಅವನ ಅಂಗಡಿಯತ್ತ ಹೆಜ್ಜೆ ಹಾಕಿದೆ....

ಇದನ್ನೂ ಓದಿ: Yagati Raghu Naadig Column: ಪಹಲ್ಗಾಮ್‌ ಪ್ರಹಾರ

“ಮೂಲತಃ ಹಾವೇರಿಯ ಹಿರೇಕೆರೂರಿನವನಾದ ಚಂದ್ರಣ್ಣ ಪ್ರತಿಭಾವಂತ, ಕಲ್ಲನ್ನೂ ಮಾತಿ ಗೆಳೆಯಬಲ್ಲ ಪ್ರಳಯಾಂತಕ, ಜೀವನೋತ್ಸಾಹಿ ಮತ್ತು ಅಕ್ಷರಪ್ರೇಮಿ. ಆದರೆ ಕಡುಬಡತನದಿಂದಾಗಿ ಸಾಂಪ್ರದಾಯಿಕ ಶಿಕ್ಷಣ ವನ್ನು ಆತನಿಗೆ ಮುಂದುವರಿಸಲಾಗಿರಲಿಲ್ಲ. ಜತೆಗೆ ದುಡಿಯುವ ಅಪ್ಪ ನಿಲ್ಲದ ಮನೆಯ ನಿಗಾ ನೋಡುವ ಅನಿವಾರ್ಯತೆಯೂ ಇತ್ತು. ಹೀಗಾಗಿ ಹಿರೇಕೆರೂರಿನಿಂದ ಗುಳೆ ಹೊರಟು ನಮ್ಮೂರಿಗೆ ಬಂದಿದ್ದ, ಎಳವೆಯಲ್ಲೇ ಕೂಲಿ ಕೆಲಸಕ್ಕೆ ಒಡ್ಡಿ ಕೊಂಡಿದ್ದ. ದಿನಗಳೆ ದಂತೆ ಪೈಸೆಗೆ ಪೈಸೆ ಸೇರಿಸಿ ಕ್ಷೌರದ ಅಂಗಡಿಯನ್ನಿಟ್ಟ. ತಮ್ಮೂರಿನ ಕಡೆಯವರಾದ ಚಿತ್ರನಟ ಬಿ.ಸಿ. ಪಾಟೀಲರ ‘ಕೌರವ’ ಚಿತ್ರವೆಂದರೆ ಅವನಿಗೆ ಇನ್ನಿಲ್ಲದ ಹುಚ್ಚು. ಹೀಗಾಗಿ ತನ್ನಂಗಡಿಗೆ ‘ಕೌರವೇಶ್ವರ ಕ್ಷೌರಕೇಂದ್ರ’ ಎಂದೇ ಹೆಸರಿಟ್ಟಿದ್ದ. ‘ಚಹಾದ ಜೋಡಿ ಚೂಡಾದ್ಹಾಂಗ’ ಎಂಬ ತಮ್ಮ ಕಡೆಯ ಮಾತನ್ನೇ ಕೊಂಚ ಬದಲಿಸಿ, ‘ಚೌರದ ಜೋಡಿ, ಚೂಡಾ ಮೋಡಿ’ ಅಂತ ಬರೆಸಿ ಅಂಗಡಿಯ ಹೆಸರಿನಡಿ ‘ಪಂಚ್‌ ಲೈನ್’ ಆಗಿಸಿಕೊಂಡಿದ್ದ. ಅಂದರೆ, ಕ್ಷೌರಕ್ಕೆಂದು ಬರುವವರು ಜತೆಗೆ ಅವಲ ಕ್ಕಿಯ ಚೂಡಾವನ್ನೂ ಸವಿಯಬಹುದಿತ್ತು. ಅಕ್ಷರ ವ್ಯಾಮೋಹವೂ ಅವನಿಂದ ದೂರವಾಗಿರಲಿಲ್ಲ.

ಯಾರೊಬ್ಬರೂ ತರಿಸದಷ್ಟು ದಿನಪತ್ರಿಕೆ, ನಿಯತಕಾಲಿಕೆಗಳನ್ನು ಅಂಗಡಿಗೆ ಹಾಕಿಸಿಕೊಳ್ಳುತ್ತಿದ್ದ. ಕ್ಷೌರಕ್ಕೆ ಬಂದವರು ಚೂಡಾವನ್ನೂ ಮೆಲುಕು ಹಾಕುತ್ತಿದ್ದುದರಿಂದ ಚಂದ್ರಣ್ಣನಿಗೆ ಒಂದೇ ಗುಕ್ಕಿಗೆ ಡಬಲ್ ವ್ಯಾಪಾರವಾಗುತ್ತಿತ್ತು. ಕೇವಲ ಪತ್ರಿಕೆ ಓದಲು ಬಂದವರು ಕೂಡ, ಹತ್ತಾರು ಪತ್ರಿಕೆ, ನಿಯತ ಕಾಲಿಕೆಗಳನ್ನು ಪುಕ್ಕಟೆಯಾಗಿ ಓದಿದ್ದಕ್ಕೆ ಋಣಸಂದಾಯ ಎನ್ನುವಂತೆ ದಂಡಿಯಾಗಿ ಚೂಡಾ ತಿಂದು ದುಡ್ಡು ಕೊಟ್ಟು ಹೋಗುತ್ತಿದ್ದರು. ಹೀಗೆ ಚಂದ್ರಣ್ಣನದು ಹೆಸರಿಗೆ ಕ್ಷೌರದಂಗಡಿ ಆಗಿದ್ದರೂ, ತನ್ನ ವ್ಯವಹಾರ-ವೈವಿಧ್ಯದಿಂದಾಗಿ ಅಕ್ಷರಶಃ ‘ರಿಕ್ರಿಯೇಷನ್ ಸೆಂಟರ್’ ಆಗಿ ಬಿಟ್ಟಿತ್ತು!....

“ಚಂದ್ರಣ್ಣನ ಫ್ಲ್ಯಾಶ್‌ ಬ್ಯಾಕ್ ಮುಗಿಯುವಷ್ಟರ ಹೊತ್ತಿಗೆ ಅವನ ಅಂಗಡಿಯ ಬಳಿಗೆ ಬಂದಿದ್ದೆ. ಆತ ನನ್ನನ್ನೇ ಕಾಯುತ್ತಿದ್ದಂತಿತ್ತು. ‘ಬಂದ್ಯಾ... ಬಾ... ಬಾ...’ ಎನ್ನುತ್ತಾ ಜಗಲಿಯ ಮೇಲೆ ನನ್ನನ್ನು ಕೂರಿಸಿಕೊಂಡ ಚಂದ್ರಣ್ಣ ಕೆಲಕ್ಷಣ ಸುಮ್ಮನಿದ್ದು, ‘ಲೇ ದೋಸ್ತಾ, ದಿನಪೂರ್ತಿ ಬೆಳಗುತ್ತಿದ್ದ ಸೂರ್ಯ ಮುಳುಗಿಹೋದ ಅಂತ ಅಳ್ತಾ ಕೂತಿದ್ರೆ, ರಾತ್ರಿಯ ಕತ್ತಲೆಯಲ್ಲಿ ಮಿನುಗೋ ನಕ್ಷತ್ರಗಳ ರಮ್ಯನೋಟವನ್ನ ಕಣ್ತುಂಬಿಕೊಳ್ಳೋ ಅವಕಾಶವನ್ನ ಕಳೆದುಕೊಳ್ತೀಯಾ ಅಂತ ನಮ್ಮ ರವೀಂದ್ರ ನಾಥ ಟ್ಯಾಗೋರರು ಹೇಳಿದ್ದಾರೆ. ಅವರು ಯಾರು ಗೊತ್ತಾ, ನಮ್ ರಾಷ್ಟ್ರಗೀತೆಯನ್ನ ಬರೆದೋರು. ಇಂಥ ಮಾತುಗಳನ್ನೆಲ್ಲ ಓದಿ ಸುಮ್ಮನಿದ್ದು ಬಿಟ್ರೆ, ಅದು ಪುಸ್ತಕದ ಬದನೇಕಾಯಿ ಆಗಿಬಿಡ್ತದೆ. ಹಾಗಾಗಲಿಕ್ಕೆ ಬಿಡದೆ, ಅಂಥ ಮಾತನ್ನ ಕಾರ್ಯರೂಪಕ್ಕೆ ತರಬೇಕು. ಅತ್ತ ಆಶ್ರಯ ವಿತ್ತ ಧಣಿ ಯನ್ನೂ, ಇತ್ತ ಸಾಕುತಾಯನ್ನೂ ಕಳಕೊಂಡ ನಿನ್ನ ನೋವು ಎಂಥದ್ದು ಅಂತ ನಂಗೆ ಗೊತ್ತು. ಹಾಗಂತ ಎಷ್ಟು ದಿನ ಕಣ್ಣೀರಲ್ಲೇ ಕೈತೊಳೀತೀಯ? ಉಸಿರು ನಿಂತರೂ ಬದುಕು ನಿಲ್ಲೋದಿಲ್ಲ ಅಂದಿದ್ದಾರೆ ದೊಡ್ಡೋರು. ಬದುಕಿನ ಬಂಡಿಗೆ ಪೆಟ್ರೋಲು ಹಾಕ್ತಾನೇ ಇರಬೇಕು. ನಿನ್ನನ್ನ ಕೊನೆ ವರೆಗೂ ಜತೆಗಿಟ್ಟುಕೊಳ್ಳಬಲ್ಲೆ, ಆದರೆ ಆಗ ನೀನು ಪರಾವಲಂಬಿಯೇ ಆಗಿಬಿಡ್ತೀಯ. ಒಂದು ಕೆಲಸ ಮಾಡು, ಕೆಲಕಾಲ ನನ್ನ ಜತೆಗಿದ್ದು ಕೆಲಸ ಕಲಿ. ಕ್ಷೌರದ ಕೆಲಸವನ್ನೇ ಮಾಡು ಅಂತೇನೂ ಹೇಳ್ತಾ ಇಲ್ಲ, ನಾನು ಕಲಿತಿರೋ ‘ಮಾಲೀಶ್’ ಕೌಶಲವನ್ನ ಹೇಳಿಕೊಡ್ತೀನಿ. ಆದರೆ, ಅದನ್ನ ಕರಗತ ಮಾಡಿಕೊಂಡ ಮೇಲೆ ಇಲ್ಲಿರಬೇಡ, ಬೇರೊಂದು ಊರಲ್ಲಿ ಕಸುಬು ಶುರು ಮಾಡೋಕೆ ವ್ಯವಸ್ಥೆ ಮಾಡ್ತೀನಿ’ ಎಂದ ಚಂದ್ರಣ್ಣ. ಮಾತಾಡಲು ನನಗೇನೂ ತೋಚದೆ ಕೂತಲ್ಲಿಂದ ಎದ್ದು ಚಂದ್ರಣ್ಣ ನನ್ನು ಒಮ್ಮೆ ಬಿಗಿದಪ್ಪಿಬಿಟ್ಟೆ. ಮಾಲೀಶ್ ಕೆಲಸದ ಕೌಶಲವನ್ನು ಚಂದ್ರಣ್ಣ 2-3 ತಿಂಗಳು ಹೇಳಿ ಕೊಟ್ಟ, ಶ್ರದ್ಧೆಯಿಂದ ಕಲಿತೆ. ಒಮ್ಮೆ ಸಂತೆಗೆ ತೆರಳಿದ ಚಂದ್ರಣ್ಣ ಬರುವಾಗ ನನಗೆಂದು ಒಂದಿಷ್ಟು ಬಟ್ಟೆ, ಸೂಟ್‌ಕೇಸ್ ಇತ್ಯಾದಿ ಹಿಡಿದುಕೊಂಡು ಬಂದ. ಹಾಗೆ ಬಂದವನ ಮುಖವನ್ನೇ ದಿಟ್ಟಿಸಿದೆ, ಅಲ್ಲಿ ಸಂತೃಪ್ತಿ ರಾರಾಜಿಸುತ್ತಿತ್ತು...

“ಚಂದ್ರಣ್ಣ ಅಷ್ಟೂ ವಸ್ತುಗಳನ್ನು ನನಗೆ ಕೊಟ್ಟು, ನಂತರ ನನ್ನ ಕೈಯಲ್ಲಿ ಒಂದು ಬಟ್ಟೆಯ ಗಂಟನ್ನು ಇಟ್ಟ. ಅಪ್ರತಿಭನಾಗಿದ್ದ ನಾನು ಬಿಡಿಸಿ ನೋಡಿದರೆ, ಕಂತೆ ಕಂತೆ ನೋಟುಗಳು! ‘ಚಂದ್ರಣ್ಣಾ... ಏನಿದು? ಇಷ್ಟೊಂದು ದುಡ್ಡು ನಂಗೇಕೆ?’ ಎಂದೆ. ಅದಕ್ಕೆ ಆ ಮಾತೃಹೃದಯಿ, ‘ಕ್ಷೌರದಂಗಡಿಯ ಸಂಪಾದನೆಯಲ್ಲಿ ವರ್ಷದ ಹಿಂದೆ ಒಂದು ಹೊಲವನ್ನು ಖರೀದಿಸಿದ್ದೆ, ಅದನ್ನೀಗ ಮಾರಿಬಿಟ್ಟೆ. 1 ಲಕ್ಷ ರುಪಾಯಿ ಬಂತು. ಇದನ್ನು ತಗೊಂಡು ನಗರಕ್ಕೆ ಹೋಗು, ಅಲ್ಲಿ ಶುರುವಿನಲ್ಲಿ ಒಂದು ಪುಟ್ಟ ಜಾಗವನ್ನು ಹಿಡಿದು ಮಾಲೀಶ್ ಕಸುಬನ್ನು ಶುರುವಿಟ್ಟುಕೋ. ಚೆನ್ನಾಗಿ ಸಂಪಾದಿಸಿದ ಮೇಲೆ ನನಗೆ ಹಣವನ್ನು ಹಿಂದಿರುಗಿಸಿದರೂ ಆಯಿತು. ಒಂದೊಮ್ಮೆ ವ್ಯವಹಾರ ಕೈಹಿಡಿಯದೆ ನಷ್ಟವಾಗಿ ಅಷ್ಟೂ ಹಣವನ್ನು ಕಳಕೊಂಡ್ರೂ ಚಿಂತೆ ಮಾಡಬೇಡ, ಹಣವನ್ನ ಹಿಂದಿರುಗಿ ಸಲಾಗಲಿಲ್ಲವಲ್ಲಾ ಅಂತ ಟೆನ್ಷನ್ ಮಾಡ್ಕೊಂಡು ಮತ್ತೆ ಆತ್ಮಹತ್ಯೆಗೆ ಮುಂದಾಗಬೇಡ. ನನ್ನ ತಮ್ಮನಿಗೆ ಖರ್ಚು ಮಾಡಿದೆ ಅಂದ್ಕೋತೀನಿ’ ಎಂದು ಹೇಳಿ ನನ್ನ ಜೇಬಿಗೆ ಟ್ರೇನಿನ ಟಿಕೆಟ್ ತುರುಕಿ, ‘ಈಗ ಮನೆಗೆ ಹೋಗಿ, ನಿನ್ನದು ಏನೆಲ್ಲಾ ತೆಗೆದುಕೊಳ್ಳ ಬೇಕೋ ತಗೊಂಡು ಬೇಗ ಹೊರಡು. ಇನ್ನು 1 ಗಂಟೆಯಲ್ಲಿ ಟ್ರೇನು ಬಂದುಬಿಡುತ್ತೆ’ ಎಂದು ತ್ವರೆಮಾಡಿದ. ವಯಸ್ಸಿ ನಲ್ಲಿ ನನಗಿಂತ 1 ವರ್ಷ ದೊಡ್ಡವನಾಗಿದ್ದ ಅವನನ್ನು ನಾನು ಅಲ್ಲಿಯವರೆಗೂ ಭೇಟಿ ಯಾದಾಗ ಲೆಲ್ಲಾ ಭುಜಕ್ಕೆ ಗುದ್ದುವುದು, ಇಲ್ಲವೇ ಅಪ್ಪಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ಅಂದು ಮೊದಲ ಬಾರಿಗೆ ಚಂದ್ರಣ್ಣನ ಪಾದಮುಟ್ಟಿ ನಮಸ್ಕರಿಸಿದೆ. ಭುಜತಟ್ಟಿ ಮೇಲಕ್ಕೆ ಎಬ್ಬಿಸಿದ ಚಂದ್ರಣ್ಣ, ಹೆಗಲ ಮೇಲಿದ್ದ ವಲ್ಲಿಯಿಂದ ಒಮ್ಮೆ ಕಣ್ಣೊರೆಸಿಕೊಂಡು ನನ್ನನ್ನು ಅಕ್ಷರಶಃ ಅಲ್ಲಿಂದ ಹೊರದಬ್ಬಿದ- ಅಲ್ಲೇ ನಿಂತಿದ್ದರೆ ನಾನೂ ಅತ್ತುಬಿಡುವೆ, ಗುರಿಸಾಧನೆಯಿಂದ ಹಿಮ್ಮೆಟ್ಟಿಬಿಡುವೆ ಎಂಬ ಸಣ್ಣ ಭಯದೊಂದಿಗೆ!....

“ಸಾಕುತಾಯಿಯ ಮನೆಗೆ ಬಂದು ಅಗತ್ಯ ಸಾಮಾನುಗಳನ್ನು ಎತ್ತಿಕೊಂಡೆ, ಜತೆಗೆ ನಿಮ್ಮ ಕಥೆ ಪ್ರಕಟವಾಗಿದ್ದ ದಿನಪತ್ರಿಕೆಯ ಪುರವಣಿಯೂ ನನ್ನ ಚೀಲವನ್ನು ಸೇರಿತು. ಆ ಕಥೆಯ ಕೊನೆಯಲ್ಲಿ ನಿಮ್ಮದೊಂದು ಫೋಟೋ ಮತ್ತು ವಿಳಾಸ ಮುದ್ರಿತವಾಗಿತ್ತು....

(ಮುಂದುವರಿಯುವುದು)