ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಪಹಲ್ಗಾಮ್‌ ಪ್ರಹಾರ

ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣವು ಉಗ್ರರ ದಾಳಿಯಿಂದಾಗಿ ರಕ್ತಸಿಕ್ತವಾಯಿತು. ಪಾಕ್-ಪ್ರೇರಿತ ಭಯೋತ್ಪಾದಕರ ಕುಯುಕ್ತಿಯು 26 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣವಾಗಿದ್ದನ್ನು ಕಂಡು ಇಡೀ ಜಗತ್ತೇ ಬೆಚ್ಚಿದೆ. ಜತೆಗೆ, ಈ ಸಂಬಂಧವಾಗಿ ಹತ್ತು ದಿಕ್ಕುಗಳಿಂದ ಹಲವು ದನಿಗಳು ಹೊಮ್ಮುವುದಕ್ಕೆ ಸದರಿ ‘ಪಹಲ್ಗಾಮ್ ಪ್ರಹಾರ’ ಪ್ರಕರಣ ಕಾರಣವಾಗಿದೆ.

ಪಹಲ್ಗಾಮ್‌ ಪ್ರಹಾರ

ಯಗಟಿ ರಘು ನಾಡಿಗ್

ವಿಶ್ವದ ವಿವಿಧ ದೇಶಗಳಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ಅಮೆರಿಕದ ಅಧ್ಯಕ್ಷ ಸುಂಕ ಹೇರಲು ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಚೀನಾ ತಾನೇನು ಕಮ್ಮಿಯೆನ್ನುವಂತೆ ಪ್ರತಿ ಸುಂಕದ ಹೇರಿಕೆಗೆ ಮುಂದಾಗಿದ್ದು, ಇದರ ಫಲವಾಗಿ ಅಮೆರಿಕ ಮತ್ತು ಚೀನಾ ದೇಶಗಳು ‘ಸುಂಕ- ಏರಿಕೆ’ಯ ಹಗ್ಗಜಗ್ಗಾಟದಲ್ಲಿ ತೊಡಗಿಸಿಕೊಂಡಿದ್ದು, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಷೇರು ಮಾರುಕಟ್ಟೆ ಗಳು ತಲ್ಲಣಿಸಿದ್ದು ಹೀಗೆ ಕೆಲ ದಿನಗಳ ಹಿಂದೆ ವಿಶ್ವವು ‘ವ್ಯಾಪಾರ-ವಾಣಿಜ್ಯ’ ವಲಯದಲ್ಲಿ ಭಾರಿ ಕದಲಿಕೆಗೆ ಸಾಕ್ಷಿಯಾಯಿತು. ಈ ಬೆಳವಣಿಗೆಯ ಸಾಧಕ-ಬಾಧಕಗಳ ಕುರಿತೇ ವಿವಿಧೆಡೆಯ ವಿತ್ತ ಶಾಸ್ತ್ರಜ್ಞರು ಲೆಕ್ಕಾಚಾರ ಹಾಕುತ್ತಿರುವಾಗ, ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣವು ಉಗ್ರರ ದಾಳಿಯಿಂದಾಗಿ ರಕ್ತಸಿಕ್ತವಾಯಿತು. ಪಾಕ್-ಪ್ರೇರಿತ ಭಯೋತ್ಪಾದಕರ ಕುಯುಕ್ತಿಯು 26 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣವಾಗಿದ್ದನ್ನು ಕಂಡು ಇಡೀ ಜಗತ್ತೇ ಬೆಚ್ಚಿದೆ. ಜತೆಗೆ, ಈ ಸಂಬಂಧವಾಗಿ ಹತ್ತು ದಿಕ್ಕುಗಳಿಂದ ಹಲವು ದನಿಗಳು ಹೊಮ್ಮುವುದಕ್ಕೆ ಸದರಿ ‘ಪಹಲ್ಗಾಮ್ ಪ್ರಹಾರ’ ಪ್ರಕರಣ ಕಾರಣವಾಗಿದೆ.

ಅಮೆರಿಕದ ಎಚ್ಚರಿಕೆ

ಪಹಲ್ಗಾಮ್ ಹತ್ಯಾಕಾಂಡದ ನಂತರ ಕಾಶ್ಮೀರದಲ್ಲಿ ಹಿಂಸಾತ್ಮಕ ನಾಗರಿಕ ದಂಗೆಯಾಗುವ ಸಂಭವ ವಿರುವುದರಿಂದ, ಜಮ್ಮು-ಕಾಶ್ಮೀರ ಪ್ರದೇಶಕ್ಕೆ ಹಾಗೂ ಭಾರತ-ಪಾಕ್ ಗಡಿಯಿಂದ 10 ಕಿ.ಮೀ. ಒಳಭಾಗದ ಪ್ರದೇಶಕ್ಕೆ ಪ್ರಯಾಣಿಸಬಾರದೆಂದು ಅಮೆರಿಕ ತನ್ನ ನಾಗರಿಕರಿಗೆ ಸೂಚಿಸಿದೆ. 2019ರ ಪುಲ್ವಾಮಾ ದಾಳಿಯ ತರುವಾಯ ಕಣಿವೆ ಪ್ರದೇಶದಲ್ಲಿ ನಡೆದ ಭೀಕರ ದಾಳಿ ಇದಾಗಿದ್ದು, ಪೂರ್ವ ಲಡಾಖ್ ಪ್ರದೇಶ ಹಾಗೂ ಅದರ ರಾಜಧಾನಿ ಲೇಹ್‌ಗೆ ತೆರಳುವುದನ್ನು ಹೊರತುಪಡಿಸಿ ಜಮ್ಮು- ಕಾಶ್ಮೀರದೆಡೆಗೆ ಕಾಲಿಡಬೇಡಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: Yagati Raghu Naadig Column: ಅನ್ನ ಬೋಗುಣಿಯ ತಳದಲ್ಲಿತ್ತು ತಣ್ಣನೆಯ ಕ್ರೌರ್ಯ !

ಹೀಗೊಂದು ಹೋಲಿಕೆ

ಪಹಲ್ಗಾಮ್ ಪ್ರಕರಣವನ್ನು ಕಟುವಾಗಿ ಟೀಕಿಸಿರುವ ಅಮೆರಿಕದ ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, “ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ತನ್ನ ಹೇಳಿಕೆಯ ಮೂಲಕ ನೀಡಿದ ಕುಮ್ಮಕ್ಕೇ ಸದರಿ ದಾಳಿಗೆ ಕಾರಣ. ಈ ಮುನೀರ್‌ನನ್ನು ಅಲ್-ಖೈದಾ ಮುಖ್ಯಸ್ಥ ನಾಗಿದ್ದು ಹತನಾದ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸ ಬಹುದು. ಇವರಿಬ್ಬರ ನಡುವಿನ ಒಂದೇ ವ್ಯತ್ಯಾಸ ವೆಂದರೆ, ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ, ಮುನೀರ್ ಅರಮನೆಯಲ್ಲಿ ನೆಲೆಸಿ ದ್ದಾನೆ. ಹಂದಿಗೆ ಲಿಪ್‌ಸ್ಟಿಕ್ ಹಾಕಿದರೂ ಕಸವನ್ನು ತಿನ್ನೋದನ್ನ ಅದು ಬಿಡುವುದಿಲ್ಲ. ಹಮಾಸ್ ಉಗ್ರರಿಗೆ ಇಸ್ರೇಲ್ ಮಾಡಿದ ಶಾಸ್ತಿಯನ್ನೇ ಪಾಕಿಸ್ತಾನಕ್ಕೂ ಭಾರತ ಮಾಡಬೇಕು" ಎಂದಿದ್ದಾರೆ.

ರೂಬಿನ್ ಕಿಡಿನುಡಿಗಳು

? ಪಹಲ್ಗಾಮ್ ದಾಳಿಗೆ ನಾವು ನೀಡಬೇಕಾದ ಏಕೈಕ ಪ್ರತಿಕ್ರಿಯೆಯೆಂದರೆ, ಪಾಕಿಸ್ತಾನವನ್ನು ಉಗ್ರ ವಾದದ ಪ್ರಾಯೋಜಕ ರಾಷ್ಟ್ರವೆಂದು ಘೋಷಿಸಬೇಕು, ಪಾಕ್ ಸೇನಾ ಮುಖ್ಯಸ್ಥ ಮುನೀರ್‌ನನ್ನು ‘ಭಯೋತ್ಪಾದಕ’ ಎಂದೇ ಔಪಚಾರಿಕವಾಗಿ ಹೆಸರಿಸಬೇಕು.

? ಪಹಲ್ಗಾಮ್ ದಾಳಿಗೆ ಯಾವುದೇ ರೀತಿಯ ‘ಸ್ವಯಂಪ್ರೇರಿತ ಕ್ರಿಯೆ’ ಎಂಬ ಕುಂಟುನೆಪ ಹೇಳುವುದಕ್ಕೆ ಆಸ್ಪದ ನೀಡಬಾರದು.

? ಈ ಹಿಂದೆ, ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ತೆರಳಿದಾಗ ಆದಂತೆಯೇ, ಪ್ರಸ್ತುತ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಭಾರತ ಭೇಟಿಯ ಸಂದರ್ಭದಲ್ಲೂ ಉಗ್ರರ ದಾಳಿಯಾಗಿದೆ. ಈ ಮೂಲಕ ಪಾಕಿಸ್ತಾನವು ಅಮೆರಿಕಕ್ಕೆ ರವಾನಿಸಲು ಯತ್ನಿಸುತ್ತಿರುವ ಸಂದೇಶವಾದರೂ ಏನು?

? ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಆಕ್ರಮಣ ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ಹತ್ಯಾಕಾಂಡ ಎರಡೂ ಒಂದೇ ಸ್ವರೂಪದವು. ಅಂದರೆ ಈ ಎರಡೂ ದಾಳಿಗಳು ಶಾಂತಿಯುತ ನಾಗರಿಕರನ್ನು ಕೇಂದ್ರೀಕರಿಸಿದ್ದಂಥವು. ಇಸ್ರೇಲ್‌ನಲ್ಲಿ ಉದಾರ ವಾದಿ ಯಹೂದಿಗಳ ಮೇಲೆ ದಾಳಿಯಾಗಿದ್ದರೆ, ಕಾಶ್ಮೀರದಲ್ಲಿ ಮಧ್ಯಮ ವರ್ಗದ ಹಿಂದೂಗಳು ದಾಳಿಯ ಬಲಿಪಶುಗಳಾಗಿದ್ದಾರೆ.

ಇನ್ನೂ ಬುದ್ಧಿ ಬಂದಿಲ್ಲ

ದ್ವೇಷ ಸಾಧನೆಯನ್ನೇ ಮೂಲಮಂತ್ರವಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಪಹಲ್ಗಾಮ್ ಘಟನೆಯನ್ನು ವಿರೋಧಿಸಿ ತನ್ನ ವಿರುದ್ಧ ಭಾರತ ಕೈಗೊಂಡ ಕ್ರಮಗಳಿಗೆ ಪಾಕಿಸ್ತಾನ ಕೂಡ ಮಾರುತ್ತರ ನೀಡಿದೆ. ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯುಪ್ರದೇಶವನ್ನು ಅದು ನಿರ್ಬಂಧಿಸಿರುವುದರ ಜತೆಗೆ ವಾಘಾ ಗಡಿ ದಾಟುವಿಕೆಗೂ ತಡೆ ಒಡ್ಡಿದೆ ಹಾಗೂ ಭಾರತದ ಜತೆಗಿನ ಎಲ್ಲ ವ್ಯಾಪಾರ-ವಾಣಿಜ್ಯಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

ಶೆಹಬಾಜ್ ಗುಟುರು!

1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವ ಭಾರತದ ಕ್ರಮವನ್ನು ತಿರಸ್ಕರಿಸಿ ರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, “ಈ ಒಪ್ಪಂದವನ್ನು ಅಮಾನತುಗೊಳಿಸುವು‌ ದರಿಂದ 240 ದಶಲಕ್ಷದಷ್ಟಿರುವ ಪಾಕಿಸ್ತಾನೀಯರ ಜೀವನಾಡಿಯನ್ನೇ ನಿರ್ಬಂಧಿಸಿದಂತಾಗುತ್ತದೆ. ಭಾರತವು ತನ್ನ ಸಂಕುಚಿತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಪಹಲ್ಗಾಮ್‌ನಂಥ ಘಟನೆಗಳಿಗೆ ಪಾಕಿಸ್ತಾನವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಸಿನಿಕತನವನ್ನು ಪ್ರದರ್ಶಿ ಸಿದೆ. ಪಾಕಿಸ್ತಾನದ ಭದ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆ ಬಂದರೆ ಅದಕ್ಕೆದುರಾಗಿ ಎಲ್ಲ ಕ್ಷೇತ್ರಗಳಲ್ಲೂ ದೃಢವಾದ ಪ್ರತೀಕಾರಗಳನ್ನು ಕೈಗೊಳ್ಳಲಾಗುವುದು. ಸದರಿ ಒಪ್ಪಂದದಡಿ ಪಾಕಿಸ್ತಾನಕ್ಕೆಂದು ಉದ್ದೇಶಿಸಲಾದ ನೀರನ್ನು ಬೇರೆಡೆಗೆ ತಿರುಗಿಸಲು ಯತ್ನಿಸಿದರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು" ಎಂದು ಗುಟುರು ಹಾಕಿದ್ದಾರೆ.

ಕ್ರಿಕೆಟ್‌ಗೂ ಎಳ್ಳು-ನೀರು

ಪಹಲ್ಗಾಮ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಪತ್ರ ಬರೆದಿದೆ ಎಂದು ತಿಳಿದುಬಂದಿದೆ. ಇನ್ನು ಮುಂದೆ ಐಸಿಸಿಯ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕ್ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸದಂತೆ ಈ ಪತ್ರದಲ್ಲಿ ಮನವಿ ಮಾಡಲಾಗಿದೆ ಎನ್ನಲಾಗಿದೆ.