ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಮಥಿಸಿದಷ್ಟೂ ಮನದಟ್ಟಾಗುವ ಮೂವತ್ತಮೂರರ ಮಹಾತ್ಮೆ !

ಕಾಂಸ್ಯಪಾತ್ರೇ ಅಂದರೆ ಕಂಚಿನ ಪಾತ್ರೆಯಲ್ಲಿ. ಸುವರ್ಣ ಗುಡಸಂ ಯುಕ್ತಾನ್ ಅಂದರೆ ಬೆಲ್ಲ ಮತ್ತು ಬಂಗಾರದ ಜತೆಗೆ. ಆದರೇನು ಮಾಡುವುದು ಈಗ ಮನೆಯಲ್ಲಿದ್ದ ಬಂಗಾರ ವನ್ನಷ್ಟೇ ದಾನ ಮಾಡಬಹುದೇ ಹೊರತು ಹೊಸದಾಗಿ ಕೊಳ್ಳಬೇಡಿರೆಂದು ಪ್ರಧಾನಸೇವಕ ಮೋದಿ ಯವರು ಕೇಳಿಕೊಂಡಿದ್ದಾರೆ. ಚಿಂತೆಯೇನಿಲ್ಲ, ಬೇರೆ ಕೆಲ ಶ್ಲೋಕಗಳಲ್ಲಿ ಬಂಗಾರದ ಪ್ರಸ್ತಾವ ವಿಲ್ಲ, ಘೃತಸಂಯುತಾನ್ ಅಂದರೆ ತುಪ್ಪದೊಡನೆ ಎಂದು ಹೇಳಲಾಗಿದೆ.

ತಿಳಿರುತೋರಣ

ಅಂತೂ ಪಟ್ಟಿಗಳ ಚಿಕ್ಕಪುಟ್ಟ ವ್ಯತ್ಯಾಸಗಳೇನೇ ಇರಲಿ, ದ್ವಾದಶ ಆದಿತ್ಯರು, ಏಕಾದಶ ರುದ್ರರು, ಅಷ್ಟವಸುಗಳು, ಮತ್ತಿಬ್ಬರು ಸೇರಿ ಮೂವತ್ತಮೂರು ದೇವತೆ ಗಳೆನಿಸಿರುವುದು. ಮೂವತ್ತಮೂರು ಕೋಟಿ ಎಂಬ ಕವನವೊಂದನ್ನು ದ.ರಾ. ಬೇಂದ್ರೆ ಬರೆದಿದ್ದಾರೆ. 1931ರಲ್ಲಿ ಪ್ರಕಟವಾದ ಅವರ ಮೊತ್ತಮೊದಲ ಕವನ ಸಂಕಲನ ‘ಗರಿ’ಯಲ್ಲಿದೆ ಆ ಕವನ. ಅದನ್ನ ಅವರು ದೇವತೆಗಳ ಬಗ್ಗೆ ಬರೆದದ್ದಲ್ಲ! ಆದ್ದರಿಂದಲೇ ಕವನದ ಶೀರ್ಷಿಕೆಯಲ್ಲಿ 33ರ ಪಕ್ಕ ಏಳು ಸೊನ್ನೆ ಬರೆದಿದ್ದಾರೆ. ಬಹುಶಃ ಅದು ಆಗಿನ ಭಾರತದ ಜನಸಂಖ್ಯೆ ಇರಬಹುದು.

ಅಧಿಕಮಾಸ ನಡೆಯುತ್ತಿದೆ. ಇದರ ಬಗ್ಗೆ ಲೇಖನಗಳು, ವಿವರಗಳು ಪತ್ರಿಕೆಗಳಲ್ಲಿ ಈಗಾಗಲೇ ಸಾಕಷ್ಟು ಪ್ರಕಟವಾಗಿವೆ. ಎರಡು ಅಮಾವಾಸ್ಯೆಗಳ ನಡುವಿನ ಅವಧಿಯಲ್ಲಿ- ಅಂದರೆ ಒಂದು ಚಾಂದ್ರಮಾನ ಮಾಸದಲ್ಲಿ- ಸಾಮಾನ್ಯವಾಗಿ ಒಂದು ಸಂಕ್ರಮಣ ಬರುತ್ತದೆ. ಒಂದು ವೇಳೆ ಬರದಿದ್ದರೆ ಆ ಚಾಂದ್ರಮಾನ ಮಾಸವನ್ನು ಅಧಿಕಮಾಸ ಎನ್ನಲಾಗುತ್ತದೆ.

ಇದನ್ನು ಪೂಜ್ಯ ಭಾವದಿಂದ ‘ಪುರುಷೋತ್ತಮ ಮಾಸ’ ವೆಂದೂ ನಿಕೃಷ್ಟಭಾವದಿಂದ ‘ಮಲಮಾಸ’ವೆಂದೂ ಕರೆಯಲಾಗುತ್ತದೆ. ಸೌರಮಾನಕ್ಕಿಂತ ಚಾಂದ್ರಮಾನದ ವರ್ಷಗಣನೆ ಯಲ್ಲಿ ಸುಮಾರು 11 ದಿನಗಳು ಕಡಿಮೆ ಇರುವುದು, ಈ ವ್ಯತ್ಯಾಸ ವೃದ್ಧಿಸುತ್ತ ಹೋಗಿ ಸರಿಸುಮಾರು 33 ತಿಂಗಳಿಗೊಮ್ಮೆ ಒಂದಿಡೀ ತಿಂಗಳಷ್ಟಾಗುವುದು, ಮತ್ತು ಅದನ್ನೇ ಅಧಿಕ ಮಾಸ ಎನ್ನುವುದು.

ತನ್ಮೂಲಕ ಚಾಂದ್ರಮಾನ ಹಬ್ಬಹರಿದಿನಗಳ ಆಚರಣೆಯು ಪ್ರಕೃತಿಯ ತಾಳ ಮೇಳಕ್ಕಿಂತ ಬಹುದೂರ ಸಾಗದೆ ಹೊಂದಿಕೊಂಡೇ ಇರುವಂತೆ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುವುದು. ಅಧಿಕಮಾಸದಲ್ಲಿ ವಿವಾಹ ಉಪನಯನಾದಿ ಮಂಗಳಕಾರ್ಯಗಳನ್ನು ನಡೆಸದೆ ಇರುವುದು, ಬದಲಿಗೆ ದಾನಧರ್ಮಾದಿ ಪುಣ್ಯ ಕಾರ್ಯಗಳಿಗೆ ಮತ್ತು ಉಪವಾಸ ನೇಮನಿಷ್ಠೆ ಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುವುದು, ಮುಖ್ಯವಾಗಿ 33 ಸಂಖ್ಯೆಯ ‘ಅಪೂಪ’ಗಳ ದಾನ/ಬಾಗಿನ ಕೊಡುವುದು... ಇವು ಅಧಿಕಮಾಸದ ಬಗೆಗಿನ ಸಾಮಾನ್ಯಜ್ಞಾನ ಮಾಹಿತಿಯ ಮುಖ್ಯಾಂಶಗಳು.

ಇದರಲ್ಲಿ ನಾವು ಇಂದಿನ ಅಂಕಣಬರಹದ ಮಟ್ಟಿಗೆ 33 ಸಂಖ್ಯೆಯ ಅಪೂಪಗಳ ದಾನ ಎಂಬುದಷ್ಟನ್ನೇ ಗಮನಿಸಿದರೆ ಸಾಕು. ಮೊದಲನೆಯದಾಗಿ ‘ಅಪೂಪ’ ಎಂದರೇನು? ಸಂಸ್ಕೃತ-ಕನ್ನಡ ನಿಘಂಟುವಿನ ಪ್ರಕಾರ ‘ಅಪೂಪ’ ಎಂದರೆ “ಹಿಟ್ಟಿನಿಂದ ಮಾಡಿದ ರೊಟ್ಟಿ, ದೋಸೆ, ಹೋಳಿಗೆ, ಕಜ್ಜಾಯ ಮೊದಲಾದವು" ಎಂದು ಅರ್ಥ.

ಇದನ್ನೂ ಓದಿ: Srivathsa Joshi Column: ಕರಜಗಿಯವರನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ಕ್ಷಣ

ಬಾಯಿಯಲ್ಲಿ ನೀರೂರಿಸಬಹುದಾದ ಇನ್ನಷ್ಟು ಉದಾಹರಣೆಗಳಿಂದಲೇ ಹೇಳಬೇಕಿದ್ದರೆ- ಅತಿರಸ, ಚಕ್ಕುಲಿ, ಕೋಡುಬಳೆ, ತೇಂಗೊಳಲು, ಎರೆಯಪ್ಪ, ನಿಪ್ಪಟ್ಟು ಮುಂತಾದು ವೆಲ್ಲವೂ ಅಪೂಪಗಳೇ. ದೇವರಿಗೆ ನೈವೇದ್ಯ ಮಾಡುವಾಗ “ಅಪೂಪ ಮಹಾನೈವೇದ್ಯಂ ಸಮರ್ಪ ಯಾಮಿ" ಎಂದು ಮಂತ್ರೋಚ್ಚಾರಣೆ.

ಪ್ರತಿಯೊಂದು ಅಪೂಪದಲ್ಲಿ ವಿಷ್ಣು ಜಿಷ್ಣು ಮೊದಲಾದ ಭಗವದ್ರೂ ಪಗಳನ್ನು ಚಿಂತಿಸಿ ಒಟ್ಟು 33 ಅಪೂಪಗಳನ್ನು ಅಧ್ಯಯನಶೀಲರಾದ ಸದ್ಬ್ರಾಹ್ಮಣರಿಗೆ ಪ್ರತಿನಿತ್ಯವೂ ಚಿನ್ನದ ಸಮೇತ ಕಂಚಿನ ಪಾತ್ರೆಯಲ್ಲಿರಿಸಿ ದಾನ ಮಾಡಬೇಕು ಅಂತ ಅಧಿಕಮಾಸದ ವ್ರತನಿಯಮಗಳ ಬಗ್ಗೆ ಶಾಸ್ತ್ರಗಳಲ್ಲಿ ಹೇಳಿರುವುದು. ಇದನ್ನು ತಿಳಿಸುವ ಶ್ಲೋಕಗಳೂ ಇವೆ, “ಅಧಿಮಾಸೇ ತು ಸಂಪ್ರಾಪ್ತೇ ಶುಭೇ ಸೂರ್ಯಾದಿದೈವತೇ| ತ್ರಯಸಿಂಶದಪೂಪಾಂಶ್ಚ ದಾನಾರ್ಹಾ ಂಶ್ಚ ದಿನೇದಿನೇ|| ಸುವರ್ಣ ಗುಡಸಂಯುಕ್ತಾನ್ ಕಾಂಸ್ಯ ಪಾತ್ರೇ ನಿಧಾಯ ಚ| ವಿಷ್ಣುಪ್ರೀತ್ಯೈ ಪ್ರದದ್ಯಾಶ್ಚ ಪೃಥ್ವೀದಾನ-ಲಂ ಲಭೇತ್||" ಇಲ್ಲಿ ಕೆಲ ಪದಗಳನ್ನು ಗಮನಿಸಿ: ತ್ರಯಸಿಂಶತ್ ಅಂದರೆ 33.

ಕಾಂಸ್ಯಪಾತ್ರೇ ಅಂದರೆ ಕಂಚಿನ ಪಾತ್ರೆಯಲ್ಲಿ. ಸುವರ್ಣ ಗುಡಸಂ ಯುಕ್ತಾನ್ ಅಂದರೆ ಬೆಲ್ಲ ಮತ್ತು ಬಂಗಾರದ ಜತೆಗೆ. ಆದರೇನು ಮಾಡುವುದು ಈಗ ಮನೆಯಲ್ಲಿದ್ದ ಬಂಗಾರ ವನ್ನಷ್ಟೇ ದಾನ ಮಾಡಬಹುದೇ ಹೊರತು ಹೊಸದಾಗಿ ಕೊಳ್ಳಬೇಡಿರೆಂದು ಪ್ರಧಾನಸೇವಕ ಮೋದಿಯವರು ಕೇಳಿಕೊಂಡಿದ್ದಾರೆ. ಚಿಂತೆಯೇನಿಲ್ಲ, ಬೇರೆ ಕೆಲ ಶ್ಲೋಕಗಳಲ್ಲಿ ಬಂಗಾರದ ಪ್ರಸ್ತಾವವಿಲ್ಲ, ಘೃತಸಂಯುತಾನ್ ಅಂದರೆ ತುಪ್ಪದೊಡನೆ ಎಂದು ಹೇಳಲಾಗಿದೆ.

ಅತಿರಸ ಎರೆಯಪ್ಪಗಳನ್ನೆಲ್ಲ ತುಪ್ಪದಲ್ಲೇ ಕರಿಯುವುದೂ ಉಂಟಲ್ಲ, ಆಗ ಪ್ರತ್ಯೇಕವಾಗಿ ತುಪ್ಪವೂ ಬೇಡವೇನೋ. ಇರಲಿ, ಒಟ್ಟಿನಲ್ಲಿ ಇಂತಹ ದಾನವು ಪೃಥ್ವೀದಾನದ ಫಲವನ್ನೇ ತಂದುಕೊಡುತ್ತದೆನ್ನಲಾಗಿದೆ. ಒಂದು ವೇಳೆ ಅಪೂಪಗಳನ್ನು ಮಾಡಲು ಸಾಧ್ಯವಾಗದಿದ್ದರೆ ಅದರ ಬದಲಿಗೆ 33 ಹಣ್ಣುಗಳು, 33 ನಾಣ್ಯಗಳು, 33 ವೀಳ್ಯದೆಲೆ, 33 ದೀಪಗಳು, 33 ಅರಿಶಿನ-ಕುಂಕುಮದ ಪ್ಯಾಕೆಟ್‌ಗಳು, 33 ಬಳೆಗಳು ಹೀಗೆ ಯಾವುದೇ ಯೋಗ್ಯ ವಸ್ತುವನ್ನಾದರೂ ದಾನ ಮಾಡಬಹುದು. ಪೃಥ್ವೀದಾನದಷ್ಟಲ್ಲದಿದ್ದರೂ ಸ್ವಲ್ಪ ಪುಣ್ಯವಂತೂ ಸಿಕ್ಕೇ ಸಿಗುತ್ತದೆ.

Screenshot_5

ಇಲ್ಲಿ 33 ಎಂಬ ಸಂಖ್ಯೆಯದೇನು ಮಹತ್ತ್ವ? ಅವು ಶ್ರೀಹರಿಯದೇ 33 ರೂಪಗಳು ಎನ್ನು ತ್ತದೆ ಒಂದು ಥಿಯರಿ. ವಿಷ್ಣು, ಜಿಷ್ಣು, ಮಹಾವಿಷ್ಣು, ಹರಿ, ಕೃಷ್ಣ, ಅಧೋಕ್ಷಜ, ಕೇಶವ, ಮಾಧವ, ರಾಮ, ಅಚ್ಯುತ, ಪುರುಷೋತ್ತಮ, ಗೋವಿಂದ, ವಾಮನ, ಶ್ರೀಶ, ಶ್ರೀಕಂಠ, ವಿಶ್ವಸಾಕ್ಷಿ, ನಾರಾಯಣ, ಮಧುಸೂದನ, ಅನಿರುದ್ಧ, ತ್ರಿವಿಕ್ರಮ, ವಾಸುದೇವ, ಜಗದ್ಯೋನಿ, ಅನಂತ, ಶೇಷಶಾಯಿ, ಸಂಕರ್ಷಣ, ಪ್ರದ್ಯುಮ್ನ, ದೈತ್ಯಾರಿ, ವಿಶ್ವತೋಮುಖ, ಜನಾರ್ಧನ, ಧರಾವಾಸ, ದಾಮೋದರ, ಅಘಾರ್ದನ, ಶ್ರೀಪತಿ- ಇವೇ ಆ 33 ರೂಪಗಳು.

ಸೂಕ್ಷ್ಮವಾಗಿ ಗಮನಿಸಿದರೆ ಕೇಶವಾದಿ ಇಪ್ಪತ್ತನಾಲ್ಕು ನಾಮಗಳಲ್ಲಿ ಬರುವಂಥವು ಕೆಲವು, ಇಲ್ಲವಾದರೂ ವಿಷ್ಣುಸಹಸ್ರನಾಮದಲ್ಲಿ ಕವರ್ ಆಗಿರುವಂಥವು. ಇದು ವಿಷ್ಣುವನ್ನು ಆರಾಽಸುವವರು ಮಂಡಿಸುವ ಥಿಯರಿ. ಆದರೆ, ಇನ್ನೊಂದು ಥಿಯರಿಯ ಪ್ರಕಾರ 33 ಎಂಬ ಸಂಖ್ಯೆ ಪುರಾಣಗಳಲ್ಲಿ ಹೇಳಲಾದ ‘ಮೂವತ್ತಮೂರು ಕೋಟಿ’ ದೇವತೆಗಳನ್ನು ಸೂಚಿ ಸುವಂಥದು.

ಅದರಲ್ಲಿ ದ್ವಾದಶ(12) ಆದಿತ್ಯರು, ಏಕಾದಶ(11) ರುದ್ರರು, ಮತ್ತು ಅಷ್ಟ(8) ವಸುಗಳು... ಅಲ್ಲಿಗೆ 12+11+8=31 ಆಯ್ತು. ಆಮೇಲೆ ಪ್ರಜಾಪತಿ ಮತ್ತು ವಷಟ್ಕಾರ ಇವರಿಬ್ಬರೂ ಸೇರಿ ಒಟ್ಟು 33. ಈ ಕೊನೆಯ ಎರಡು ಮಾತ್ರ ಒಂದೊಂದು ಪುರಾಣದಲ್ಲಿ ಒಂದೊಂದು ರೀತಿ ಹೇಳಿದ್ದಿರುತ್ತದೆ. ಪ್ರಜಾಪತಿ ಮತ್ತು ವಷಟ್ಕಾರ ಅಂತ ಒಂದು ಪುರಾಣದಲ್ಲಿದ್ದರೆ ದೇವೇಂದ್ರ ಮತ್ತು ಪ್ರಜಾಪತಿ ಅಂತ ಇನ್ನೊಂದರಲ್ಲಿ. ಅವರಿಬ್ಬರೂ ಅಲ್ಲದೆ ಅಶ್ವಿನೀ ದೇವತೆಗಳು ಅಂತ ಮಗದೊಂದು ಪುರಾಣದಲ್ಲಿ ಹೇಳಿರುವ ಸಾಧ್ಯತೆಯೂ ಇದೆ.

ಅದೇನಿದ್ದರೂ ಟೋಟಲ್ 33 ಅನ್ನೋದು ಮುಖ್ಯ. ರುದ್ರ-ಆದಿತ್ಯ-ವಸುಗಳ ಪಟ್ಟಿಗಳಲ್ಲೂ ಬೇರೆ-ಬೇರೆ ಪುರಾಣಗಳನ್ನು ಪರಾಮರ್ಶಿಸಿದರೆ ಅಲ್ಪಸ್ವಲ್ಪ ವ್ಯತ್ಯಾಸಗಳಿರುತ್ತವೆ.

ಒಟ್ಟು ಸಂಖ್ಯೆ ಅಷ್ಟೇ ಇದ್ದರೂ ಹೆಸರುಗಳು ಅಷ್ಟಿಷ್ಟು ಬದಲಾಗಿರುತ್ತವೆ. ಉದಾಹರಣೆಗೆ ಶಾಂತಿಪುರಾಣದ ಪ್ರಕಾರ ದ್ವಾದಶ ಆದಿತ್ಯರೆಂದರೆ ಕಶ್ಯಪನಿಂದ ಅದಿತಿಯಲ್ಲಿ ಜನಿಸಿದ ಈ ಹನ್ನೆರಡು ಮಂದಿ: ಧಾತೃ, ಮಿತ್ರ, ಅರ್ಯಮಾ, ಶಕ್ರ, ವರುಣ, ಅಂಶ, ಭಗ, ವಿವಸ್ವಾನ್, ಪೂಷಾ, ಸವಿತೃ, ತ್ವಷ್ಟೃ, ಮತ್ತು ವಿಷ್ಣು. ವಾಚಸ್ಪತ್ಯ ನಿಘಂಟುವಿನ ಪ್ರಕಾರ ಅರುಣ, ಸೂರ್ಯ, ವೇದಜ್ಞ, ಇಂದ್ರ, ರವಿ, ಗಭಸ್ತಿ, ಯಮ, ಹಿರಣ್ಯರೇತಾ, ದಿವಾಕರ, ಚಿತ್ರ, ಮತ್ತು ವಿಷ್ಣು. ಇವರು ಅನುಕ್ರಮವಾಗಿ ಮಾಘದಿಂದ ಮಾರ್ಗಶೀರ್ಷವರೆಗಿನ ಹನ್ನೆರಡು ಮಾಸ ಗಳ ಅಧಿಪತಿಗಳು.

ಇದೇ ರೀತಿ ಏಕಾದಶ ರುದ್ರರ ಪಟ್ಟಿಗಳಲ್ಲೂ ಏಕರೂಪತೆ ಇಲ್ಲ. ಹರ, ಬಹುರೂಪ, ತ್ರ್ಯಂಬಕ, ಅಪರಾಜಿತ, ವೃಷಾಕಪಿ, ಶಂಭು, ಕಪರ್ದಿ, ದೈವತ, ಮೃಗವ್ಯಾಧ, ಶರ್ವ, ಕಪಾಲಿ- ಎಂದು ಬ್ರಹ್ಮಪುರಾಣದಲ್ಲಿದ್ದರೆ, ವೀರಭದ್ರ, ಶಂಭು, ಗಿರೀಶ, ಅಜೈಕಪಾತ್, ಅಹಿರ್ಬುಧ್ನ್ಯ, ಪಿನಾಕಿ, ಸ್ಥಾಣು, ಪಶುಪತಿ, ಭವ, ಉಗ್ರ, ಮತ್ತು ತ್ವಿಟ್ಟತಿ- ಎನ್ನುತ್ತದೆ ವಿವೇಕ ಚಿಂತಾಮಣಿ ಯಲ್ಲಿರುವ ಪಟ್ಟಿ.

ಒಟ್ಟಿನಲ್ಲಿ ರುದ್ರನ 11 ಬೇರೆಬೇರೆ ರೂಪಗಳು ಅಂತ ಗೊತ್ತಿದ್ದರೆ ಸಾಕು. ವಸುಗಳ ಪಟ್ಟಿ ಯಾದರೂ ಏಕರೂಪದ್ದಿದೆಯೇ? ಇಲ್ಲ! ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂದು ಮಹಾಭಾರತದಲ್ಲಿ ಬರುವ ಪಟ್ಟಿಯಾದರೆ ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ, ದೋಷ, ವಸು, ವಿಭಾವಸು ಎಂದು ಭಾಗವತದಲ್ಲಿ ಬರುವ ಪಟ್ಟಿ. ಎಲ್ಲಿ ಸಿಗುತ್ತವೆ ಇವೆಲ್ಲ ವಿವರಗಳು ಎಂಬ ಆಶ್ಚರ್ಯಭರಿತ ಕುತೂಹಲ ನಿಮ್ಮದಾದರೆ ಅದಕ್ಕೆ ಉತ್ತರ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರ ‘ಶ್ರೀವತ್ಸ ನಿಘಂಟು’(ಸಂಖ್ಯಾ ವಿಶಿಷ್ಟ ಶಬ್ದಕೋಶ)ದಲ್ಲಿ.

ಅಂತೂ ಪಟ್ಟಿಗಳ ಚಿಕ್ಕಪುಟ್ಟ ವ್ಯತ್ಯಾಸಗಳೇನೇ ಇರಲಿ, ದ್ವಾದಶ ಆದಿತ್ಯರು, ಏಕಾದಶ ರುದ್ರರು, ಅಷ್ಟವಸುಗಳು, ಮತ್ತಿಬ್ಬರು ಸೇರಿ ಮೂವತ್ತಮೂರು ದೇವತೆಗಳೆನಿಸಿರುವುದು. ಇವರನ್ನೇ ‘ಮೂವತ್ತ ಮೂರು ಕೋಟಿ ದೇವತೆಗಳು’ ಎನ್ನುವುದು. ಇಲ್ಲಿ ಕೋಟಿ ಎಂಬ ಪದ ಸಂಖ್ಯಾವಾಚಕ ಅಲ್ಲ. ಸಂಸ್ಕೃತದಲ್ಲಿ ಈ ಪದಕ್ಕೆ ಹತ್ತು ಬೇರೆಬೇರೆ ಅರ್ಥಗಳಿವೆ.

ಅತ್ಯುತ್ಕರ್ಷ, ಅತಿಶಯ, ಅನೇಕ ಸಂಗತಿಗಳು, ವಸ್ತುವಿನ ವರ್ಗೀಕರಣ ವಿಧಗಳು ಮುಂತಾ ದ ಅರ್ಥಗಳು ಇಲ್ಲಿ ಸರಿಹೊಂದುತ್ತವೆ. ಆದ್ದರಿಂದ ‘ಮೂವತ್ತಮೂರು ಕೋಟಿ ದೇವತೆ ಗಳು’ ಎಂದು ಹೇಳಿದರೆ ಅದರರ್ಥ 33ರ ಪಕ್ಕದಲ್ಲಿ ಏಳು ಸೊನ್ನೆ ಗಳಿರುವ ಸಂಖ್ಯೆ ಅಲ್ಲ, 33 ಅಂತಷ್ಟೇ. ಮೂವತ್ತಮೂರು ಅತ್ಯುತ್ಕರ್ಷ ಅತಿಶಯ ದೇವತೆಗಳು ಎಂದು ಬೇಕಿದ್ದರೆ ಅರ್ಥ ಮಾಡಿಕೊಳ್ಳಬಹುದು.

“ಗೋಮಾತೆಯಲ್ಲಿ ಮೂವತ್ತಮೂರು ಕೋಟಿ ದೇವತೆಗಳು ಅಡಕವಾಗಿವೆ" ಎಂದು ಹೇಳು ವಾಗಲೂ ಅಷ್ಟೇ, ಮೇಲೆ ಹೇಳಿದ 33 ದೇವತೆಗಳ ರೆ-ರೆನ್ಸೇ ಅಲ್ಲಿಯೂ ಇರುವುದು. ನಮ್ಮ ಸಂಸ್ಕೃತಿಯಲ್ಲಿ ನದಿ, ಪರ್ವತ, ಗಿಡ-ಮರ-ಬಳ್ಳಿಗಳನ್ನೂ, ಪುಸ್ತಕ ಕಾಗದದಂಥ ಅಚರ ವಸ್ತುಗಳನ್ನೂ ದೇವರೆಂದು ಭಾವಿಸುವ ಅಥವಾ ಅವೆಲ್ಲದರಲ್ಲೂ ದೇವರಿದ್ದಾನೆ ಎಂದುಕೊಳ್ಳುವ ಉದಾತ್ತ ಚಿಂತನೆ ಇರುವುದರಿಂದ, ಬಹುಶಃ ಅತಿದೊಡ್ಡ ಸಂಖ್ಯೆಯಲ್ಲಿ ದೇವತೆಗಳಿದ್ದಾರೆ ಎಂಬ ಭಾವನೆ ಬರುವಂತೆ ‘ಮೂವತ್ತಮೂರು ಕೋಟಿ ದೇವತೆಗಳು’ ಎಂಬ ಬಳಕೆ ರೂಢಿಯಾಗಿಬಿಟ್ಟಿದೆ.

ಒಂದು ಸ್ವಾರಸ್ಯಕರ ಉದಾಹರಣೆಯನ್ನು ನೋಡೋಣ. ಇದು ಶಿಶುನಾಳ ಶರೀಫನ ಜೀವನಚರಿತ್ರೆಯಲ್ಲಿ (ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾದ ಪುಸ್ತಕದಲ್ಲಿ) ಬರುವ ವಿವರ. “ಸಾವಿರದ ಎಂಟು ನೂರಾ ಎಂಬತ್ತೇಳರಲ್ಲಿ ಹುಬ್ಬಳ್ಳಿಯಲ್ಲಿ ಒಂದು ಅರಿವೆ ಗಿರಣಿ ಆರಂಭವಾಯಿತು. ಅದು ಶರೀಫನ ಅರಿವನ್ನು ಕಡೆಯಿತು.

ಅವನ ಕಾವ್ಯಕಲ್ಪನೆಗೆ ಹೊಸ ನೇಯ್ಗೆಯನ್ನು ನೀಡಿತು. ‘ಪರಮಾನೆಂಬುವ ಪಟ್ಟೇವೋ| ಅಲ್ಲೆ ಮಾರಾಟಕಿಟ್ಟೆವೋ... ಪರಮಾನೆಂಬುವ ಪಟ್ಟೇವೂ ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ ನೇಸಿ ಹಚ್ಚಡ ಹೊಚ್ಚಿತೋ, ಲೋಕ ಮೆಚ್ಚಿತೋ...’ ಏನಿದರ ಅರ್ಥ? ಪರಮ ಎಂಬುವ ಪಟ್ಟೆಪೀತಾಂಬರ ಥಾನುಗಟ್ಟಲೆ ಬಂದಿದೆ ಮಾರುಕಟ್ಟೆಗೆ.

ಈ ಬಟ್ಟೆಯನ್ನು ನೇಯ್ದು ಕೊಟ್ಟವರು ಯಾರು? ಅವನೇ ದೇವಾಂಗ ಋಷಿ. ಮೂವತ್ತ ಮೂರು ಕೋಟಿ ದೇವತೆಗಳೆಲ್ಲ ಬೆತ್ತಲಾಗಿ ನಾಚಿಕೆಯಿಲ್ಲದೆ ತಿರುಗುತ್ತಿದ್ದರು. ಲೋಕದ ಮಾನವನ್ನು ಕಾಪಾಡುವ ಹೊಣೆಯನ್ನು ದೇವಾಂಗ ಋಷಿ ಹೊತ್ತಿದ್ದ. ಅವನೇ ನೇಕಾರರ ಕುಲದೈವ. ಅವನು ಪರಶಿವನ ಹಣೆಗಣ್ಣಿನಿಂದ ಹುಟ್ಟಿದವನು.

ಅವನು ಮೂವತ್ತಮೂರು ಕೋಟಿ ದೇವತೆಗಳಿಗೆ ಬಟ್ಟೆ ನೇಯ್ದು ಕೊಟ್ಟ. ಜಗತ್ತಿನ ಮಾನ ವನ್ನು ಕಾಪಾಡಿದ. ಈಗ ಆಧುನಿಕ ಯುಗದಲ್ಲಿ ಗಿರಣಿ ಬಂದಿದೆ. ಇದೇನೂ ದೇವಾಂಗ ಋಷಿಯಲ್ಲ. ಆದರೆ, ಇದರ ಗರ್ಭದಲ್ಲಿನ ಯಂತ್ರಶಕ್ತಿಯಲ್ಲಿ ದೇವಾಂಗ ಮುನಿಯ ತಪಃಶಕ್ತಿ ಇದೆ.

ಗಿರಣಿಯ ಹೊಟ್ಟೆಯಲ್ಲಿ ದುಡಿಯುವ ಜನರ ರಟ್ಟೆಗಳೇ ದೇವಾಂಗ ಮುನಿಯ ರಟ್ಟೆಗಳು. ಅವನೇ ಅವರ ಮೂಲಕ ಹಚ್ಚಡವನ್ನು ನೇಯಿಸಿ ಹೊಚ್ಚುತ್ತಿದ್ದಾನೆ. ಇದು ಲೋಕ ಮೆಚ್ಚುವ ಕಾಯಕ." ಆಹಾ... ಎಂತಹ ರೋಮಾಂಚಕ ದೈವಿಕ ಕಲ್ಪನೆ!

ಮೂವತ್ತಮೂರು ಕೋಟಿ ಎಂಬ ಕವನವೊಂದನ್ನು ದ.ರಾ. ಬೇಂದ್ರೆ ಬರೆದಿದ್ದಾರೆ. 1931ರಲ್ಲಿ ಪ್ರಕಟವಾದ ಅವರ ಮೊತ್ತಮೊದಲ ಕವನ ಸಂಕಲನ ‘ಗರಿ’ಯಲ್ಲಿದೆ ಆ ಕವನ. ಅದನ್ನ ಅವರು ದೇವತೆಗಳ ಬಗ್ಗೆ ಬರೆದದ್ದಲ್ಲ! ಆದ್ದರಿಂದಲೇ ಕವನದ ಶೀರ್ಷಿಕೆಯಲ್ಲಿ 33ರ ಪಕ್ಕ ಏಳು ಸೊನ್ನೆ ಬರೆದಿದ್ದಾರೆ.

ಬಹುಶಃ ಅದು ಆಗಿನ ಭಾರತದ ಜನಸಂಖ್ಯೆ ಇರಬಹುದು. ಕವನಕ್ಕೊಂದು ಪೀಠಿಕೆಯೂ ಇದೆ, “ಕಡೆಯಿಲ್ಲದ ಕಡಲ ನಡುವೆ ಸ್ಥಿರಾಸನದಲ್ಲಿ ಭೂಮಿ ತಾಯಿಯು ಧ್ಯಾನಮುದ್ರೆ ಯಲ್ಲಿ ಕುಳಿತಿದ್ದಾಳೆ. ಅವಳ ಎಡತೊಡೆಯ ಮೇಲೆ ಭಾರತಿಯು ತನ್ನ ಮೊಗವನ್ನು ಬಲಗೈಯಿಂದ ಒರಗಿಸಿ ಎಡಗೈಯನ್ನೆತ್ತಿ ಹಾಡಿಹಾಡಿ ತನ್ನ ಪಾಡನ್ನು ತೋಡಿಕೊಳ್ಳುತ್ತ ಲಿದ್ದಾಳೆ. ಅವಳ ಸುತ್ತಲೂ ಕೋಟ್ಯಂತರ ಪ್ರಾಣಿಗಳು ಅಸ್ತವ್ಯಸ್ತವಾಗಿ ಬಿದ್ದುಕೊಂಡಿವೆ."

ಅದಾದ ಮೇಲೆ ಕವನ ಆರಂಭವಾಗುತ್ತದೆ, ಮಕ್ಕಳಿವರೇನಮ್ಮ? ಮಕ್ಕಳಿವರೇನಮ್ಮ ಮೂವತ್ತ ಮೂರು ಕೋಟಿ? ಮೂವತ್ತಮೂರು ಕೋಟಿ! ನಾ ಹಡೆದ ಮೂವತ್ತ ಮೂರು ಕೋಟಿ! ಹಲಕೆಲವು ಹುಳುಗಳೆನ್ನಿ, ಹಲಕೆಲವು ಕುರುಡು ಕುನ್ನಿ! ಕೆಲಕೆಲವು ಹುಚ್ಚು ಕುರಿ, ಕೆಲವು ಹೊಚ್ಚಹೊಸ ಮರಿ! ಗಂಡುತನಕೇಸೊ ಸೊನ್ನಿ!

ಲೆಕ್ಕಕ್ಕೆ ಮೂವತ್ತಮೂರು ಕೋಟಿ! ಬೀತ ನರಪೇತುಗಳಿರಾ, ಬಾತಂಥ ಪ್ರೇತಗಳಿರಾ| ಮಣ್ಣನ್ನು ಮುಕ್ಕುವಿರಿ, ಮಸಣದಲಿ ಬಿಕ್ಕುವಿರಿ! ಹಾರಿ ರೋ ಜೊಳ್ಳುಗಳಿರಾ! ಹಾಳರ್ಧ ಹೊಲೆಯರೆಂದೂ, ಬೀಳರ್ಧ ಹೆಣ್ಣು ಎಂದೂ, ಹೋಳು ಹೋಳಾಗಿಹುದು; ಆಳು ಬಾಳಾಗಿಹುದು ಏಳಿರೋ ಆಳಿರೆಂಬೇ- ಬಾಳಿರೋ!... ಹೀಗೆ ತಾಯಿಭಾರತಿ ತನ್ನ ಮೂವತ್ತ ಮೂರು ಕೋಟಿ ಮಕ್ಕಳ ಬಗೆಗೆ ವ್ಯಕ್ತಪಡಿಸುವ ವಿಷಾದವೇ ಕವಿತೆಯ ಹೂರಣ.

ಈಗ 100 ವರ್ಷಗಳಲ್ಲಿ ಜನಸಂಖ್ಯೆ ನಾಲ್ಕೈದು ಪಟ್ಟು; ಒಗ್ಗಟ್ಟಿಲ್ಲದೆ ಹೋಳು ಹೋಳಾ ಗಿರುವುದು ಮತ್ತಷ್ಟು ವಿಷಾದಕರವೇ. ಮತ್ತೆ ದೇವತೆಗಳ ವಿಚಾರಕ್ಕೇ ಬರೋಣ. 33 ದೇವತೆಗಳು ಎಂಬ ಕಾನ್ಸೆಪ್ಟ್ ಹೇಗೆ ಹುಟ್ಟಿಕೊಂಡಿರಬಹುದು? 33 ಎಂಬ ಸಂಖ್ಯೆಯದು ಏನು ವಿಶೇಷ? ಹಿಂದೂಗಳಿಗೆ ಮಾತ್ರ ಈ ಸಂಖ್ಯೆ ಪವಿತ್ರವೆಂದು ಕಂಡದ್ದೇ? ಅಗೆದು ನೋಡಿದರೆ ಅಲ್ಲವೆಂದು ತಿಳಿಯುತ್ತದೆ! ಭ್ರೂಣಾವಸ್ಥೆಯಲ್ಲಿ ಮನುಷ್ಯನ ಬೆನ್ನೆಲುಬಿನಲ್ಲಿ 33 ಸಣ್ಣಮೂಳೆ ಅಥವಾ ‘ಕಶೇರು’ಗಳಿರುತ್ತವೆ. ವಯಸ್ಸಾದಂತೆ ಈ ಮೂಳೆಗಳಲ್ಲಿ ಕೆಲವು ಒಂದಕ್ಕೊಂದು ಸೇರಿಕೊಳ್ಳುವುದಿದೆಯಾದರೂ ಹುಟ್ಟುವಾಗ 33 ಎಂಬುದು ಗಮನಾರ್ಹ.

ರಸಾಯನ ಶಾಸ್ತ್ರಕ್ಕೆ ಬಂದರೆ ‘ಆರ್ಸೆನಿಕ್’ನ ಪರಮಾಣು ಸಂಖ್ಯೆ 33. ಇದು ಬಣ್ಣವಿಲ್ಲದ, ರುಚಿಯಿಲ್ಲದ ಮತ್ತು ವಾಸನೆಯಿಲ್ಲದ ಖನಿಜ. ಇದನ್ನು ಪರಿಪೂರ್ಣ ವಿಷವೆಂದು ಹೇಳ ಲಾಗುತ್ತದೆ. ‘ವಿಷಗಳ ರಾಜ’ ಎಂದು ಕೂಡ ವರ್ಣಿಸಲಾಗುತ್ತದೆ. ಇದೇ ಕಾರಣದಿಂದ ಹಳೆಯ ರಾಜರಿಗೆಲ್ಲ- ಉದಾಹರಣೆಗೆ ಮೂರನೆಯ ಕಿಂಗ್ ಜಾರ್ಜ್, ನೆಪೊಲಿಯನ್ ಬೊನಪಾರ್ಟ್ ಮುಂತಾದವರಿಗೆ ಆದರ್ಶ ವಿಷವೆಂದು ಸಾಬೀತಾಯಿತು.

ಬೌದ್ಧಧರ್ಮದವರ ನಂಬಿಕೆಯಂತೆ ಅವಲೋಕಿತೇಶ್ವರ ಬೋಧಿಸತ್ತ್ವನು ‘ತ್ರಯಸಿಂಶ’ ಅಂದರೆ 33 ರೂಪಾಂತರಗಳನ್ನು ಹೊಂದಿದ್ದನು. ಇಸ್ಲಾಂ ಮತದವರ ಕುರಾನ್‌ನಲ್ಲಿ ದೇವರಿಗಿರುವ 99 ಹೆಸರುಗಳನ್ನು ತಲಾ 33ರ ಮೂರು ವಿಭಾಗಗಳಾಗಿ (ಮಹಿಮೆ ಮತ್ತು ಸರ್ವಾಧಿಕಾರಗಳ ಮೊದಲ ಗುಂಪು, ಕರುಣೆ ಮತ್ತು ದಯೆಯ ಎರಡನೆಯ ಗುಂಪು, ಬೆಳಕು, ಮಾರ್ಗದರ್ಶನ ಮತ್ತು ಸತ್ಯದ ಮೂರನೆಯ ಗುಂಪು) ಹೀಗೆ ವಿಂಗಡಣೆ ಮಾಡಲಾಗಿದೆ. ಆದ್ದರಿಂದಲೇ ಅವರ ಜಪಮಾಲೆಗಳಲ್ಲಿ 33 ಮಣಿಗಳಿರುತ್ತವೆ.

ಜುಡಾಯಿಸಂನಲ್ಲೂ 33 ಎಂಬ ಸಂಖ್ಯೆಗೆ ಮಹತ್ತ್ವ. ಜುಡಾಯಿಸಂ ಸ್ಥಾಪಕರಲ್ಲೊಬ್ಬ ಜೇಕಬ್‌ನಿಗೆ ಒಟ್ಟು 33 ಮಕ್ಕಳು; ಶಾಸ್ತ್ರೋಕ್ತ ಶುದ್ಧೀಕರಣಕ್ಕಾಗಿ 33 ದಿನಗಳು ಅಗತ್ಯ; ಪಾಸೋವರ್ ಹಬ್ಬವಾಗಿ 33 ದಿನಗಳ ನಂತರ ಬರುವುದು ಲಾಗ್‌ಬೌಮರ್ ಎಂಬ ಪವಿತ್ರ ದಿನ ಇತ್ಯಾದಿ.

ಕ್ರೈಸ್ತಮತದವರ ನಂಬಿಕೆಯ ಪ್ರಕಾರ ಯೇಸುಕ್ರಿಸ್ತನು 33 ವರ್ಷಗಳ ಕಾಲ ಭೂಮಿಯಲ್ಲಿ ಬಾಳಿದ್ದನು. ಕ್ರೈಸ್ತರು ಪೂಜ್ಯಭಾವದಿಂದ ಕಾಣುವ ಸುವಾರ್ತೆ (ಗಾಸ್ಪೆಲ್)ಗಳಲ್ಲಿ ಕ್ರಿಸ್ತನು 33 ಅದ್ಭುತಗಳನ್ನು ನೆರವೇರಿಸಿದ್ದನೆಂದು ಉಲ್ಲೇಖಿಸಲಾಗಿದೆಯಂತೆ.

ನಂಬಿಕೆ, ವಿಶ್ವಾಸಗಳನ್ನು ವ್ಯಕ್ತಪಡಿಸುವ ’Amen’ ಪದದ ಅಕ್ಷರಗಳ ಸ್ಥಾನ ವರ್ಣಮಾಲೆ ಯಲ್ಲಿ ನೋಡಿದಾಗ a=1, m=13, e=5, n=14 ಒಟ್ಟು 33 ಎಂದಾಗುವುದನ್ನೂ ಕೆಲವರು ಪಾವಿತ್ರ್ಯವೆಂದೇ ಪರಿಗಣಿಸುತ್ತಾರೆ. ಇದೆಲ್ಲ ಬಿಡಿ, ಯಾವುದೇ ನಿರ್ದಿಷ್ಟ ಧರ್ಮ/ರಾಜಕೀಯ /ಜನಾಂಗೀಯ ಭೇದವಿಲ್ಲದೆ, ವ್ಯಕ್ತಿಯ ನೈತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಒತ್ತು ನೀಡುವ ಲೋಕೋಪಕಾರಿ ‘ಫ್ರೀಮ್ಯಾಸನ್ರಿ’ (Freemasonry) ಬಳಗದಲ್ಲೂ ಸಂಖ್ಯೆ 33ಕ್ಕೆ ಪೂಜ್ಯ ಸ್ಥಾನ.

ಫ್ರೀಮ್ಯಾಸನ್ರಿಯ ಅಂಗ ಭಾಗಗಳಾದ ರೆಡ್‌ಕ್ರಾಸ್ ಆಫ್ ಕಾನ್ಸ್ಟೆಂಟೈನ್, ದ ನೈಟ್ಸ್ ಆಫ್‌ ಟೆಂಪ್ಲರ್ ಪ್ರೀಸ್ಟ್ಸ್, ರಾಯಲ್ ಆರ್ಡರ್ ಆಫ್ ಸ್ಕಾಟ್ಲೆಂಡ್, ಸೊಸ ಯ್ಟಾಸ್ ರೊಸಿಕ್ರುಸಿ‌ ಯಾನಾ ಮುಂತಾದುವೆಲ್ಲವೂ ತಮ್ಮ ಧ್ಯೇಯ ಘೋಷಣೆಗಳನ್ನು 33‌ ಸಂಖ್ಯೆ ಗಳದಿಟ್ಟು ಕೊಂಡಿವೆ. ಫ್ರೀಮ್ಯಾ ಸನ್ರಿಯ ಕೇಂದ್ರಸ್ಥಾನವೇ ಎನ್ನಬಹುದಾದ ಫ್ರಾನ್ಸ್ ದೇಶದ ಅಂತಾರಾಷ್ಟ್ರೀಯ ದೂರವಾಣಿ ಕೋಡ್ +33 ಆಗಿರುವುದೂ ಕಾಕತಾಳೀಯ ಇರಲಾರದು!

ಇಷ್ಟೆಲ್ಲ ಓದಿದ ಮೇಲೆ ನಮ್ಮ ಅತಿಪ್ರಾಚೀನ ಸನಾತನ ಧರ್ಮದಲ್ಲಿ 33 ದೇವತೆಗಳಿದ್ದಾ ರೆಂಬ ನಂಬಿಕೆ, ಅದನ್ನೇ ಮತ್ತಷ್ಟು ವೈಭವೀಕರಿಸಿ ಮೂವತ್ತಮೂರು ಕೋಟಿ ದೇವತೆಗಳು ಎನ್ನುವುದು, ಗೋಮಾತೆಯಲ್ಲೇ ಮೂವತ್ತಮೂರು ಕೋಟಿ ದೇವತೆಗಳೂ ನೆಲೆಸಿರುತ್ತಾರೆ ಎಂದು ನಂಬುವುದು, ಸರಿಸುಮಾರು 33 ತಿಂಗಳಿಗೊಮ್ಮೆ ಬರುವ ‘ಅಧಿಕಮಾಸ’ಕ್ಕೂ 33ನ್ನು ತಳಕುಹಾಕಿರುವುದು, 33 ಅಪೂಪಗಳ ಅಥವಾ ವಸ್ತುಗಳ ದಾನ ಮಾಡುವುದು... ಇದೆಲ್ಲ ಆಶ್ಚರ್ಯವೆನಿಸುವುದಿಲ್ಲ. ಬದಲಿಗೆ ಅತ್ಯಭಿಮಾನದ ಸಂಗತಿಯೇ ಅಂತನಿಸುತ್ತದೆ!

ಶ್ರೀವತ್ಸ ಜೋಶಿ

View all posts by this author