ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಕರಜಗಿಯವರನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ಕ್ಷಣ

ಪ್ರಜಾವಾಣಿಯಲ್ಲಿ ಪ್ರತಿದಿನ ಪ್ರಕಟವಾಗುವ ‘ಕರುಣಾಳು ಬಾ ಬೆಳಕೆ’ ಲೇಖನ ಮಾಲೆಯಿಂದ ಅವರು ಲಕ್ಷಾಂತರ ಜನರ ಬಾಳಿಗೆ ಅಕ್ಷರಶಃ ಬೆಳಕು ತೋರಿದವರು; ಧನಾತ್ಮಕ ಚಿಂತನೆ, ಕಾರ್ಯಕ್ಷಮತೆ, ಮಾನವೀಯ ಮೌಲ್ಯಗಳು, ಮತ್ತು ಒಟ್ಟಾರೆಯಾಗಿ ವ್ಯಕ್ತಿತ್ವ ವಿಕಸನದ ಸಂಜೀವಿನಿಯನ್ನು ಅರಗಿಸಿ ಕೊಳ್ಳಬಲ್ಲ ಗುಟುಕುಗಳಾಗಿ ಜನರಿಗೆ ಒದಗಿಸಿದವರು.

ಕರಜಗಿಯವರನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿದ ಕ್ಷಣ

-

ತಿಳಿರುತೋರಣ

ಅವರೊಬ್ಬ ವಿದ್ವತ್ಪೂರ್ಣ ವಾಗ್ಮಿ, ಚಿಂತಕ, ಪ್ರೇರಣಾದಾಯಿ ಭಾಷಣಕಾರ. ಲೋಕವಿಖ್ಯಾತ ಲೇಖಕ, ಅಂಕಣಕಾರ, ಶಿಕ್ಷಣತಜ್ಞ. ತಮ್ಮದೇ ಆದ ವಿಶಿಷ್ಟ ಶೈಲಿಯ ಉಪನ್ಯಾಸಗಳಿಗೆ ಮತ್ತು ಲೇಖನಗಳಿಗೆ ಹೆಸರು ವಾಸಿ. ವಿಜ್ಞಾನದ ಹಿನ್ನೆಲೆಯಿದ್ದರೂ, ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರಾದರೂ, ಭಕ್ತಿ ಅಧ್ಯಾತ್ಮ ತತ್ತ್ವಶಾಸ್ತ್ರ ಶಿಕ್ಷಣ ಸಂವಹನ ಸೃಜನಶೀಲತೆ ಮುಂತಾಗಿ ವಿವಿಧ ಕ್ಷೇತ್ರಗಳ ಅರಿವುಳ್ಳ ವರು ಮತ್ತು ನಮ್ಮ ಅರಿವನ್ನು ವಿಸ್ತರಿಸಬಲ್ಲವರು.

ಚಿಕ್ಕ-ಚಿಕ್ಕ ಕಥೆಗಳು ಮತ್ತು ಪ್ರಸಂಗಗಳ ಮೂಲಕ ಬದುಕಿನ ಪಾಠಗಳನ್ನು, ಸಕಾರಾತ್ಮಕ ಚಿಂತನೆ ಗಳನ್ನು ಅತ್ಯಂತ ಸರಳವಾಗಿ ತಿಳಿಸಿಕೊಡುವುದು ಅವರ ವಿಶೇಷತೆ. ಆದ್ದರಿಂದಲೇ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಹಾಗೂ ಜನಸಾಮಾನ್ಯರೆಲ್ಲರಿಗೂ ಅಚ್ಚು-ಮೆಚ್ಚು. ಆದ್ದರಿಂದಲೇ ಅವರ ಉಪನ್ಯಾಸಗಳಿಗೆ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಬೇಡಿಕೆ.

ಪ್ರಜಾವಾಣಿಯಲ್ಲಿ ಪ್ರತಿದಿನ ಪ್ರಕಟವಾಗುವ ‘ಕರುಣಾಳು ಬಾ ಬೆಳಕೆ’ ಲೇಖನ ಮಾಲೆಯಿಂದ ಅವರು ಲಕ್ಷಾಂತರ ಜನರ ಬಾಳಿಗೆ ಅಕ್ಷರಶಃ ಬೆಳಕು ತೋರಿದವರು; ಧನಾತ್ಮಕ ಚಿಂತನೆ, ಕಾರ್ಯ ಕ್ಷಮತೆ, ಮಾನವೀಯ ಮೌಲ್ಯಗಳು, ಮತ್ತು ಒಟ್ಟಾರೆಯಾಗಿ ವ್ಯಕ್ತಿತ್ವ ವಿಕಸನದ ಸಂಜೀವಿನಿಯನ್ನು ಅರಗಿಸಿ ಕೊಳ್ಳಬಲ್ಲ ಗುಟುಕುಗಳಾಗಿ ಜನರಿಗೆ ಒದಗಿಸಿದವರು.

ಇದನ್ನೂ ಓದಿ: Srivathsa Joshi Column: ಗಂಗಾಲಹರಿ ಸ್ತೋತ್ರವೂ ಜಗನ್ನಾಥ ಪಂಡಿತನ ಕಥೆಯೂ

ಅದನ್ನವರು ‘ಸ್ವಘೋಷಿತ ದೇವಮಾನವ’ರಂತಲ್ಲದೆ, ವಿಚಿತ್ರ ವೇಷಭೂಷಣಗಳ ಹೆಚ್ಚುವರಿ ಪದರ ವಿಲ್ಲದೆ, ಅನಗತ್ಯ ಆವೇಶ ಉದ್ವೇಗಗಳಿಲ್ಲದೆ, ನಮ್ಮೆಲ್ಲರಲ್ಲೊಬ್ಬ ಸಾಮಾನ್ಯ ಎನಿಸಿಕೊಳ್ಳು ವಂತೆ ಇದ್ದುಕೊಂಡೇ ಮಾಡುವುದರಿಂದ ಇನ್ನಷ್ಟು ಇಷ್ಟವಾಗುವರು... ಡಾ.ಗುರುರಾಜ ಕರಜಗಿಯವರ ಬಗೆಗೆ ಈ ರೀತಿಯ ಗುಣಗಾನವನ್ನು ನಾನು ಆಗಾಗ ಅಲ್ಲಿ-ಇಲ್ಲಿ ಓದಿ, ಕೇಳಿ ತಿಳಿದುಕೊಂಡಿದ್ದೆ.

ಆರೇಳು ವರ್ಷಗಳ ಹಿಂದೊಮ್ಮೆ ಮರಳು ಚಿತ್ರ ಕಲಾವಿದ ರಾಘವೇಂದ್ರ ಹೆಗಡೆಯವರು ಇಲ್ಲಿ ಅಮೆರಿಕದಲ್ಲಿ ತಮ್ಮದೊಂದು ಕಲಾಪ್ರದರ್ಶನಕ್ಕೆ ಬಂದಿದ್ದವರು ಒಂದುದಿನ ನಮ್ಮನೆಯಲ್ಲೂ ಉಳಕೊಂಡಿದ್ದಾಗ ಅದೂ ಇದೂ ಮಾತಿನ ನಡುವೆ ಗುರುರಾಜ ಕರಜಗಿಯವರ ಪ್ರಸ್ತಾವವೂ ಬಂದು ಅವರ ಬಗ್ಗೆ ತುಂಬ ಪ್ರೀತ್ಯಭಿಮಾನದ ಮಾತುಗಳನ್ನಾಡಿದ್ದರು.

ನಾವೆಲ್ಲ ಅಂದ್ಕೊಳ್ಳೋದಕ್ಕಿಂತಲೂ ಅದೆಷ್ಟು ಸರಳ ಸಹೃದಯ ನಿಗರ್ವಿ ವ್ಯಕ್ತಿ ಅವರು ಎಂದು ಮನಃಪೂರ್ವಕವಾಗಿ ಕೊಂಡಾಡಿದ್ದರು. ಕರಜಗಿಯವರ ಅಂಕಣಬರಹ, ಲೇಖನಗಳನ್ನು ಪತ್ರಿಕೆ ಗಳಲ್ಲಿ ಓದುವಾಗ, ಭಾಷಣ ಉಪನ್ಯಾಸಗಳನ್ನು ಯುಟ್ಯೂಬ್‌ನಲ್ಲಿ ಕೇಳುವಾಗ ನಮಗದು ಅಂದಾಜಾಗುತ್ತಿದ್ದದ್ದೂ ಹೌದು.

‘ಕರುಣಾಳು ಬಾ ಬೆಳಕೆ’ ಸರಣಿಯ ಅಷ್ಟೂ ಅಲ್ಲದಿದ್ದರೂ ಕೆಲ ಸಂಪುಟಗಳು ನನ್ನ ಸಂಗ್ರಹದಲ್ಲಿವೆ. ನಾನದನ್ನು ಯಾದೃಚ್ಛಿಕವಾಗಿ ಒಂದೊಂದು ಲೇಖನದಂತೆ ಆಗೊಮ್ಮೆ ಈಗೊಮ್ಮೆ ಓದುವುದಿದೆ. ಒಂದು ಸಂಪುಟದ ಮುನ್ನುಡಿಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಬರೆದಿರುವಂತೆ “ಅಮೂಲ್ಯ ವಾದ ಗ್ರಂಥಗಳನ್ನು, ದೀರ್ಘ ಲೇಖನಗಳನ್ನೂ ಓದಲಿಕ್ಕೆ ಬಿಡುವಿಲ್ಲದ ಮಂದಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತದೆ.

Screenshot_13

ನಾವು ದಿನಾ ವ್ಯವಹರಿಸುತ್ತಿರುವ ಮತ್ತು ಅನುಭವಿಸುತ್ತಿರುವ ವಿಷಯಗಳೇ ಈ ಲೇಖನ ಮಾಲೆ ಯಲ್ಲಿ ಬಂದಾಗ ‘ಹೌದಲ್ವಾ ಈ ವಿಷಯ ಎಷ್ಟು ಸತ್ಯವಾದದ್ದು!’ ಎಂಬ ಭಾವನೆಯೊಂದಿಗೆ ವಿಚಾರಮಂಥನಕ್ಕೆ ಹಚ್ಚುತ್ತದೆ. ನಮ್ಮ ಮಸ್ತಕವೆಂಬ ಕಂಪ್ಯೂಟರ್‌ನಲ್ಲಿ ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿ ಹಾರವೂ ಆಗುತ್ತದೆ..." ಮಾತ್ರವಲ್ಲ, ಅದರಿಂದಾಗಿ ನಮಗೆ ಗೊತ್ತೇ ಇಲ್ಲದಂತೆ ಕರಜಗಿಯವರು ನಮಗೊಬ್ಬ ಆಪ್ತ ಹಿತೈಷಿ ಆಗಿಬಿಡುತ್ತಾರೆ!

ಇದು ಬಹುಶಃ ಕರಜಗಿಯವರ ‘ಟಾನಿಕ್’ ಬರಹಗಳನ್ನು ಓದುವವರೆಲ್ಲರ ಅಭಿಪ್ರಾಯವೇ. ಅಂತೆಯೇ ಅವರ ಉಪನ್ಯಾಸಗಳ ವಿಡಿಯೊಗಳು ಕೂಡ. ಕೋವಿಡ್ ಕಾಲಘಟ್ಟದಲ್ಲಂತೂ ಮನಸ್ಸಿಗೆ ಕವಿದಿದ್ದ ಗಾಢಾಂಧಕಾರವನ್ನು ಕರಗಿಸಲು ನೆರವಾದ ಕರಜಗಿಯವರಂಥ ‘ಎಂದರೋ ಮಹಾನು ಭಾವುಲು’ಗಳಿಗೆ ನಮ್ಮೆಲ್ಲರ ವಂದನಮುಲು ಸಲ್ಲಲೇಬೇಕು. ನಾನೂ ಸುಮಾರಷ್ಟು ಉಪನ್ಯಾಸ ಗಳನ್ನು ಯುಟ್ಯೂಬ್ ಕೃಪೆಯಿಂದ ನೋಡಿದ್ದೇನೆ/ಕೇಳಿದ್ದೇನೆ. ಎಲ್ಲವೂ ಇಷ್ಟವಾಗುವಂಥವೇ. ಕೆಲವೊಂದನ್ನು ಮತ್ತಷ್ಟು ಆಪ್ತವೆನಿಸಿದ್ದರಿಂದ ಎರಡು, ಮೂರು ಬಾರಿ ಕೇಳಿಸಿಕೊಂಡಿದ್ದೂ ಇದೆ.

ಭಗವದ್ಗೀತೆ, ಮಂಕುತಿಮ್ಮನ ಕಗ್ಗ, ಶಂಕರಾಚಾರ್ಯರು, ಉಪನಿಷತ್ತುಗಳು, ವಚನಾಂಜಲಿ, ರಮಣ ಮಹರ್ಷಿಗಳು, ಪರೀಕ್ಷೆಗೆ ಓದು, ಯಶಸ್ಸಿನ ಸೂತ್ರಗಳು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ... ವಿಷಯಗಳು ಒಂದೇ ಎರಡೇ! ಬೆಳಗ್ಗೆ, ಸಂಜೆ ವಾಕಿಂಗ್ ಹೋಗುವಾಗ ಹೆಡ್ ಫೋನ್ಸ್ ಹಾಕ್ಕೊಂಡು ಕೇಳುತ್ತ ನಡೆದರೆ ಕರಣಗಣದಿ ಕರಜಗಿ ಕೊರಳತಂತುಗಳ ರಿಂಗಣ.

ಭಾರತ ಸಂಸ್ಕೃತಿ ಪ್ರತಿಷ್ಠಾನದ ಪ್ರಕಟಣೆಗಳಾದ ‘ಎಳೆಯರ ರಾಮಾಯಣ’ ಮತ್ತು ‘ಕಿಶೋರ ಭಾರತ’ ಪುಸ್ತಕಗಳು ಕರಜಗಿಯವರ ಧ್ವನಿಯಲ್ಲಿ ಸಮಗ್ರವಾಗಿ ‘ಕೇಳು ಪುಸ್ತಕ’ಗಳಾಗಿ ಯುಟ್ಯೂಬ್ ಪ್ಲೇಲಿಸ್ಟ್‌ ನಲ್ಲಿವೆ ಎಂದು ತಿಳಿದು ಬಂದಾಗ ನನಗಾಗಿದ್ದ ಸಂತೋಷ ಅಷ್ಟಿಷ್ಟಲ್ಲ.

ಹಾಗೆ ನೋಡಿದರೆ ರಾಮಾಯಣ ಮಹಾಭಾರತ ಕಥೆಗಳು ಹೊಸದೇನಲ್ಲ, ಆದರೆ, ಹೈಸ್ಕೂಲಲ್ಲಿರುತ್ತ ಆ ಎರಡು ಪುಸ್ತಕಗಳನ್ನೋದಿ ಪರೀಕ್ಷೆ ಬರೆದು ಪ್ರಶಸ್ತಿ ಪತ್ರ ಪದಕ ಗಳಿಸಿದ್ದರಿಂದ ಸಿಹಿನೆನಪು. ಎರಡೂ ಪುಸ್ತಕಗಳಲ್ಲಿ ಲೇಖಕ ಮೈ.ನ.ನಾಗರಾಜ ಅವರ ನವಿರಾದ ಕಥನಕ್ರಮವನ್ನು ಈಗ ಕರಜಗಿ ಯವರ ಧ್ವನಿಯಿಂದ ಕೇಳುವ ಹೊಸ ಅನುಭವ!

ಇನ್ನೊಂದು ಉಪನ್ಯಾಸ ನಾನು ಬಹಳವಾಗಿ ಮೆಚ್ಚಿದ್ದೆಂದರೆ ನಾಲ್ಕೈದು ತಿಂಗಳ ಹಿಂದೆ ಶಿವಮೊಗ್ಗದ ಕನ್ನಡ ಸಂಘದಲ್ಲಿ ಮಾಡಿದ್ದು- ‘ಸಾಹಿತ್ಯದಿಂದ ಏನು ಪ್ರಯೋಜನ?’ ಎಂಬ ವಿಷಯ. ಅದರಲ್ಲಿ ಕರಜಗಿಯವರು ‘ಕರುಣಾಳು ಬಾ ಬೆಳಕೆ...’ ಸರಣಿಗೆ ಪ್ರೇರಣೆ ಏನು ಎಂಬು ದನ್ನೂ ಹೃದಯಂಗಮವಾಗಿ ಬಣ್ಣಿಸಿದ್ದರು. ಆ ಯುಟ್ಯೂಬ್ ವಿಡಿಯೊವನ್ನು ನನ್ನ ವಾಟ್ಸ್ಯಾಪ್, ಫೇಸ್‌ಬುಕ್ ಬಳಗದಲ್ಲೆಲ್ಲ ಹಂಚಿಕೊಂಡಿದ್ದೆ, “ರೀಲ್ಸ್ ಯುಗದಲ್ಲಿ ಸಾಹಿತ್ಯದ ಓದು ಮರೆಯಾಗು ತ್ತಿರುವ ಈ ಕಾಲಘಟ್ಟದಲ್ಲಿ ಹೊಸದೊಂದು ಚೈತನ್ಯ ತುಂಬುವ ಉಪನ್ಯಾಸವಿದು!" ಎಂಬ ಅಡಿಟಿಪ್ಪಣಿಯೊಂದಿಗೆ.

ಇಂತಿರಲು ಡಾ.ಗುರುರಾಜ ಕರಜಗಿಯವರನ್ನು ಮುಖತಃ ಭೇಟಿಯಾಗುವ ಅವಕಾಶವೊಂದಿದೆ ಎಂದು ಗೊತ್ತಾದದ್ದು ಮೂರು ತಿಂಗಳ ಹಿಂದೆ, ಅಮೆರಿಕದ ನ್ಯೂಜೆರ್ಸಿಯಲ್ಲಿ ಮೇ 9ರಂದು ನಡೆಯುವ ‘ಬನ್ನಂಜೆ-90 ವಿಶ್ವನಮನ’ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿ/ಉಪನ್ಯಾಸಕರಾಗಿ ಬರುತ್ತಿದ್ದಾರೆ ಎಂದು ತಿಳಿದಾಗ.

ಬನ್ನಂಜೆ ಗೋವಿಂದಾಚಾರ್ಯರು ಬದುಕಿದ್ದಿದ್ದರೆ ಅವರಿಗೆ 90 ಸಂವತ್ಸರಗಳು ತುಂಬಿರುತ್ತಿದ್ದ ಸಂದರ್ಭದಲ್ಲಿ ಅಂಥದೊಂದು ಕಾರ್ಯಕ್ರಮವನ್ನು ಅಮೆರಿಕದಲ್ಲೂ ನಡೆಸುವ ಉದ್ದೇಶ ವಿದೆಯೆಂದು ಡಾ.ವೀಣಾ ಬನ್ನಂಜೆ ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ, ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶಕ್ಕೆ, ಬಂದಿದ್ದಾಗಲೇ ತಿಳಿಸಿದ್ದರು. ಆದರೆ, ಕಾರ್ಯಕ್ರಮದ ಸ್ಪಷ್ಟ ಸ್ವರೂಪ ಆಗಿನ್ನೂ ನಿರ್ಧಾರವಾಗಿರಲಿಲ್ಲ.

ನ್ಯೂಜೆರ್ಸಿಯಲ್ಲಿ ಪುತ್ತಿಗೆಮಠದ ಶ್ರೀಕೃಷ್ಣ ವೃಂದಾವನದ ಆವರಣದಲ್ಲೇ ಕಾರ್ಯಕ್ರಮ ನಡೆಯು ವುದು, ಪುತ್ತಿಗೆಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರೂ ಬರುತ್ತಾರೆ, ಜತೆಯಲ್ಲಿ ಡಾ.ಗುರುರಾಜ ಕರಜಗಿಯವರೂ ಇರುತ್ತಾರೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕ, ಸನ್ಮಿತ್ರ ಶ್ರೀವತ್ಸ ಬಲ್ಲಾಳರು ಮೊನ್ನೆ ಫೆಬ್ರವರಿಯಲ್ಲಿ ತಿಳಿಸಿದರು.

ನನಗೊಂದು ಆತ್ಮೀಯ ಆಹ್ವಾನವನ್ನೂ ನೀಡಿದರು. ಆಮೇಲೆ ನೋಂದಣಿ ಪ್ರಕ್ರಿಯೆ, ಸ್ಮರಣ ಸಂಚಿಕೆ ತಯಾರಿ ಮತ್ತಿತರ ಸಿದ್ಧತೆಗಳೆಲ್ಲ ಆರಂಭವಾದುವು. ಸ್ಮರಣ ಸಂಚಿಕೆಗೊಂದು ಪುಟ್ಟ ಲೇಖನ, 2015ರಲ್ಲಿ ಬನ್ನಂಜೆಯವರು ಇಲ್ಲಿಗೆ ಬಂದಿದ್ದು, ಭಗವದ್ಗೀತೆಯ ಬಗೆಗೊಂದು ಉಪನ್ಯಾಸ ನೀಡಿದ್ದು ಮುಂತಾದುವನ್ನು ನೆನಪಿಸಿಕೊಂಡು ನಾನೂ ಬರೆದುಕೊಟ್ಟೆ.

ಏತನ್ಮಧ್ಯೆ ಇರಾನ್-ಇಸ್ರೇಲ್/ಅಮೆರಿಕ ಯುದ್ಧಘೋಷಣೆಯಾಗಿ ಕೆಲವೆಲ್ಲ ವಿಮಾನಯಾನಗಳ ರದ್ದತಿ ಮತ್ತಿತರ ಅನಿಶ್ಚಿತತೆಗಳ ಕಾರ್ಮೋಡವೂ ಕವಿಯಿತು. ಆದರೂ ದೈವಾನುಗ್ರಹವೊಂದಿದ್ದರೆ ಎಲ್ಲವೂ ಸಾಂಗೋ ಪಾಂಗವಾಗಿಯೇ ನಡೆಯುತ್ತದಷ್ಟೆ. ಹಾಗೆಯೇ ಆಯಿತು ಕೂಡ. ನ್ಯೂಜೆರ್ಸಿಯ ಕೃಷ್ಣವೃಂದಾವನವು ನಾನಿರುವಲ್ಲಿಂದ ಸುಮಾರು ಮೂರುವರೆ ಗಂಟೆ ಕಾರ್ ಡ್ರೈವಿಂಗ್‌ನಷ್ಟು ದೂರ.

ಮೇ 9ರ ಶನಿವಾರ ಬೆಳಗ್ಗೆ 7ಕ್ಕೆ ಉಪಾಹಾರದಿಂದ ಆರಂಭವಾಗಿ ರಾತ್ರಿ 8ರವರೆಗೂ ಇಡೀ ದಿನದ ಕಾರ್ಯಕ್ರಮ, ಬನ್ನಂಜೆಯವರ ಸ್ಮರಣೆಯಲ್ಲಿ ಹಲವರಿಂದ ಭಾಷಣಗಳು, ಸಾಂಸ್ಕೃತಿಕ ಪ್ರಸ್ತುತಿ ಗಳು, ವಿಷ್ಣುಸಹಸ್ರನಾಮ ಪಠನ, ಮೂರೂ ಹೊತ್ತು ಅಲ್ಲೇ ಮಠದ ಅಡುಗೆಮನೆಯಲ್ಲೇ ತಯಾ ರಾದ ಪಕ್ಕಾ ಉಡುಪಿ ಶೈಲಿಯ ರುಚಿಕರ ಊಟ-ತಿಂಡಿ... ಮುಂತಾಗಿ ವಿವರಗಳೆಲ್ಲ ನೋಂದಾಯಿತ ರಿಗೆ ವಾಟ್ಸ್ಯಾಪ್ ಪ್ರಕಟಣೆಗಳ ಮೂಲಕ ಮೊದಲೇ ತಿಳಿಯಪಡಿಸಿದ್ದರಿಂದ ನಮ್ಮ ಪ್ರಯಾಣವನ್ನು ಯೋಜಿಸಿ ಕೊಳ್ಳುವುದು ಸಾಧ್ಯವಾಗಿತ್ತು.

ನಮ್ಮಲ್ಲಿಂದ ಸುಮಾರು ಮೂರುವರೆ ಗಂಟೆ ಡ್ರೈವಿಂಗ್‌ನಷ್ಟು ದೂರ ಎಂದೆನಾದರೂ ಶುಕ್ರವಾರ ಗಳಂದು ಸಂಜೆಹೊತ್ತು ಆ ಮಾರ್ಗದಲ್ಲಿ ಹೇಳಲಸದಳ ಸಂಚಾರದಟ್ಟಣೆಯಿಂದಾಗಿ ಆರೇಳು ಗಂಟೆ ತಗುಲಿದರೂ ಆಶ್ಚರ್ಯವಿಲ್ಲ. ಆಫೀಸ್ ಕೆಲಸ ಮುಗಿಸಿ ಹೊರಟರೆ ಮಧ್ಯರಾತ್ರಿ ತಲುಪಬೇಕಷ್ಟೇ. ಆ ಉಸಾಬರಿಯೇ ಬೇಡ ವೆಂದು ನಾನು ಶನಿವಾರ ಬ್ರಾಹ್ಮೀಮುಹೂರ್ತದಲ್ಲಿ 4 ಗಂಟೆಗೆ ಮನೆಯಿಂದ ಹೊರಟು ನಿರ್ಜನ ರಸ್ತೆಗಳಲ್ಲಿ ಆರಾಮಾಗಿ ಸಾಗಿ ಏಳೂ ಕಾಲಕ್ಕೆಲ್ಲ ಕೃಷ್ಣವೃಂದಾವನ ತಲುಪಿದೆ. ಅಲ್ಲಿಗೆ ಹೋಗುವುದೆಂದರೆ ಒಂಥರ ವಿಶೇಷ ರೋಮಾಂಚನ.

ನಾನದನ್ನು ಯಾವತ್ತೂ ಆನಂ ದಿಸುತ್ತೇನೆ. ರಥದ ಆಕಾರದ ಅನನ್ಯ ಗರ್ಭಗುಡಿ, ಪ್ರಧಾನ ಅರ್ಚಕ ಯೋಗೀಂದ್ರ ಭಟ್ಟರಿಂದ ಮತ್ತು ದಾನಿಗಳ ನೆರವಿಂದ ದಿನಕ್ಕೊಂದು ಹೊಸ ವಸದ ಮುಂಡಾಸು ತಲೆಗೆ ಸುತ್ತಿ ಅಲಂಕಾರ ಮಾಡಿಸಿಕೊಳ್ಳುವ ಶ್ರೀಕೃಷ್ಣ, ಹಬ್ಬಹರಿದಿನ ವಿಶೇಷ ಸಂದರ್ಭಗಳಲ್ಲಿ ಯೋಗೀಂದ್ರ ಭಟ್ಟರಿಂದಲೇ ಸತ್ತ್ವಪೂರ್ಣ ಆಶೀರ್ವಚನ ಮಾತುಗಳು... ನಿಜಕ್ಕೂ ಅದೊಂದು ದಿವ್ಯಾನುಭವ.

ಆವತ್ತು ನಾನಲ್ಲಿಗೆ ತಲುಪುವಷ್ಟರಲ್ಲಿ ಪ್ರಾತಃಪೂಜೆ ಮಂಗಳಾರತಿ ನಡೆದಿತ್ತು. ಡಾ.ಕರಜಗಿಯವರು, ವೀಣಾ ಬನ್ನಂಜೆ, ಅವರ ತಂಗಿ ಕವಿತಾ ಉಡುಪ, ಮತ್ತು ಬೆಂಗಳೂರಿನಿಂದ ಬಂದಿದ್ದ ಇನ್ನೂ 8-10 ಮಂದಿ ಅಲ್ಲಿ ಸೇರಿದ್ದರು. ಶ್ರೀವತ್ಸ ಬಲ್ಲಾಳರ ನೇತೃತ್ವದಲ್ಲಿ ಸ್ವಯಂ ಸೇವಕರು ಪಕ್ಕದ ಸಭಾಂಗಣ ದಲ್ಲಿ ಎಲ್ಲವನ್ನೂ ಅಣಿಗೊಳಿಸಿದ್ದರು.

ಕರಜಗಿಯವರ ಬಳಿಹೋಗಿ ಕೈಮುಗಿದು, ಕೈಕುಲುಕಿ ಮಾತನಾಡಿಸಿ ಪರಿಚಯ ತಿಳಿಸಿದೆ. “ಶ್ರೀವತ್ಸ ಜೋಶಿ! ನೀವು ನನಗೆ ಚನ್ನಾಗಿ ಗೊತ್ತು. ವಿಶ್ವವಾಣಿಯಲ್ಲಿ ಪ್ರತಿ ಭಾನುವಾರ ನಿಮ್ಮ ಅಂಕಣ ಓದುತ್ತೇನೆ. ಬಹಳ ಚಂದ ಬರೀತೀರಿ" ಎಂದಾಗ ಬೆರಗಾಗುವ ಸರದಿ ನನ್ನದು.

ವರ್ಷಗಳಿಂದಲೂ ಪರಿಚಯವುಳ್ಳವರೇನೋ ಎಂಬಂಥ ಆತ್ಮೀಯತೆಯಿಂದ ಮಾತನಾಡಿಸಿದರು. “ನಾವೆಲ್ಲ ಅಂದ್ಕೊಳ್ಳೋದಕ್ಕಿಂತಲೂ ಅದೆಷ್ಟು ಸರಳ ಸಹೃದಯ ನಿಗರ್ವಿ ವ್ಯಕ್ತಿ" ಎಂದು ಈ ಹಿಂದೆ ರಾಘವೇಂದ್ರ ಹೆಗಡೆಯವರು ಹೇಳಿದ್ದರ ಪ್ರತ್ಯಕ್ಷಾನುಭವವಾಯಿತು.

ಬೆಳಗಿನ ಉಪಾ ಹಾರವನ್ನು ನಾವೆಲ್ಲ ಒಟ್ಟಿಗೇ ಸೇವಿಸಿದೆವು. “ಟೀ ಎಂದು ಲೇಬಲ್ ಇರುವ ಪಾತ್ರೆ ಯಲ್ಲಿ ಕಾಫಿ ಇದೆ, ಲೇಬಲ್ ಇಲ್ಲದ ಮತ್ತೊಂದು ಪಾತ್ರೆಯಲ್ಲಿ ಚಹ ಇದೆ" ಎಂದು ಅಲ್ಲ್ಯಾರೋ ಎನೌನ್ಸ್ ಮಾಡಿದರು. “ಬಯಲು ಆಲಯದೊಳಗೊ ಆಲಯವು ಬಯಲೊಳಗೊ ಎಂದಂ ತಾಯ್ತಲ್ಲ ಇದು?" ಎಂದು ನಸುನಗುತ್ತ ನಾನೆಂದರೆ “ಅದೇ ಇಂದಿನ ಫಲಾಹಾರ ಫಿಲಾಸಫಿ!" ಎಂದು ದನಿಗೂಡಿಸಿದರು ಕರಜಗಿ. ಹಮ್ಮು ಬಿಮ್ಮುಗಳಿಲ್ಲದ ಸಜ್ಜನರೊಡನೆ ಅದುಹೇಗೆ ತರಂ ಗಾಂತರಗಳ ಏಕ್‌ದಂ ಹೊಂದಾಣಿಕೆ ಆಗುತ್ತದೆ ನೋಡಿ!

ವೇದಿಕೆಯ ಕಾರ್ಯಕ್ರಮದಲ್ಲೂ ಅಷ್ಟೇ. ಅವರೆಂಥ ಸರಳಾತಿಸರಳ ವಿನಯವಂತ ಮನುಷ್ಯ ರೆಂಬುದು ಯಾರಿಗೇ ಆದರೂ ಗೊತ್ತಾಗುವಂತಿತ್ತು. ಜ್ಯೋತಿ ಬೆಳಗಿಸಿ ಉದ್ಘಾಟನೆ, ಸ್ವಾಗತ ಭಾಷಣ, ಸ್ಮರಣಸಂಚಿಕೆ ಬಿಡುಗಡೆ ಎಲ್ಲ ಚೊಕ್ಕವಾಗಿ ನಡೆದವು. ಕರಜಗಿಯವರ ಮಾತುಗಳನ್ನು ಕೇಳಲೆಂದೇ ಮೈಯೆಲ್ಲ ಕಿವಿಯಾಗಿ ಕಾಯುತ್ತಿದ್ದರು ಸಭೆಯಲ್ಲಿದ್ದವರೆಲ್ಲ.

ಬನ್ನಂಜೆ ಗೋವಿಂದಾಚಾರ್ಯರ ವಿದ್ವತ್ತು, ವೈಶಾಲ್ಯ, ವ್ಮಾಯ ವಿವರಗಳನ್ನು ಬಹಳ ಸೊಗಸಾಗಿ ಬಣ್ಣಿಸಿದರು. ಅಬ್ಬರವಿಲ್ಲ ಉದ್ವೇಗವಿಲ್ಲ. ಜುಳು-ಜುಳು ಹರಿಯುವ ನದಿಯಂತೆ ಸೌಮ್ಯವಾದ, ಶ್ರೋತೃಗಳಿಗೆ ಅತಿಹಿತವೆನಿಸುವ ಶೈಲಿ. “ಸಭೆಯಲ್ಲಿ ಕನ್ನಡೇತರರೂ ಇರುವುದರಿಂದ ಆಯೋಜಕರ ಕೋರಿಕೆಯಂತೆ ಇಂಗ್ಲಿಷ್‌ನಲ್ಲಿ ಮಾತಾಡುತ್ತೇನೆ.

ಆದರೂ ಹೃದಯದ ಭಾಷೆ ಕನ್ನಡವೇ ನನಗೆ ಸಲೀಸು ಮತ್ತು ಸೊಗಸು" ಎನ್ನುತ್ತ ನಡುನಡುವೆ ಕನ್ನಡವನ್ನೇ ಆಯ್ದು ಕೊಳ್ಳುತ್ತಿದ್ದರು. ಅಂತೂ ಕರಜಗಿಯವರಿಂದ ಅತ್ಯುತ್ತಮವಾದೊಂದು ಭಾಷಣವನ್ನು ಪ್ರತ್ಯಕ್ಷವಾಗಿ ಕೇಳಿದ ಮೊತ್ತಮೊದಲ ಅನುಭವ ಬಹಳವೇ ಚಂದವೆನಿಸಿತು.

ಸಂಜೆಯ ಸಮಾರೋಪ ಸಮಾರಂಭದಲ್ಲೂ ಕರಜಗಿಯವರ ಮಾತು ಕೇಳಬೇಕೆಂದು ಅಲ್ಲಿ ಬಹುಜನರ ಅಪೇಕ್ಷೆ ವ್ಯಕ್ತವಾಯಿತು. ಅದನ್ನು ಮನ್ನಿಸಿ ಒಂದು ಚಿಕ್ಕ ಭಾಷಣ ಕನ್ನಡದಲ್ಲೇ ಮಾಡಿದರು, ‘ಕಾರ್ಯಕರ್ತರಿಗೆ ಎದುರಾಗುವ ಇಬ್ಬಂದಿತನ ಕುರಿತಂತೆ ರಾಮಾಯಣದಲ್ಲಿ ವನವಾಸಕಾಲದಲ್ಲಿ ಲಕ್ಷ್ಮಣನ ಪರಿಸ್ಥಿತಿಯನ್ನು ಸೋದಾಹರಣವಾಗಿ ವಿಶ್ಲೇಷಿಸಿದರು. ಅವರು ಲಕ್ಷ್ಮಣನ ಬಗ್ಗೆ ಮಾತಾಡಲಿ, ವಿಭೀಷಣನ ಬಗ್ಗೆ ಮಾತಾಡಲಿ, ನಮಗಂತೂ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..." ಎನ್ನುವ ಪರಿಸ್ಥಿತಿ, ಶ್ರವಣದಾಹ.

ರಾತ್ರಿ ಭೋಜನಪ್ರಸಾದ ಮುಗಿಸಿದ ಮೇಲೆ ಕರಜಗಿಯವರ ಬಳಿ ಸಾರಿ “ನಾನಿನ್ನು ಹೊರಡುತ್ತೇನೆ. ನಾಳಿದ್ದು ಮಂಗಳವಾರ ನಮ್ಮ ವಾಷಿಂಗ್ಟನ್ ಡಿಸಿಯಲ್ಲಿ ನಿಮ್ಮ ಮತ್ತು ವೀಣಾ ಬನ್ನಂಜೆಯವರ ಉಪನ್ಯಾಸಗಳಿವೆ ಎಂದು ತಿಳಿದುಕೊಂಡಿದ್ದೇನೆ, ಅಲ್ಲಿ ಭೇಟಿಯಾಗೋಣ" ಎಂದೆ.

“ಸರಿ. ಆದರೆ, ನಿಮ್ಮ ಮಾತನ್ನು ಕೇಳುವುದು ಆಗಲಿಲ್ಲವಲ್ಲ?" ಎಂದರು. ಬಹುಶಃ ನ್ಯೂಜೆರ್ಸಿಯ ಕಾರ್ಯಕ್ರಮದಲ್ಲಿ ನನ್ನದೂ ಒಂದು ಭಾಷಣ ಇರುತ್ತದೆ ಎಂದುಕೊಂಡಿದ್ದರೇನೋ. ಅದಕ್ಕೆ ನನ್ನದು ಸಿದ್ಧ ಉತ್ತರವೇ ಇತ್ತು: “ಇಲ್ಲ ಇಲ್ಲ. ನನಗೆ ಭಾಷಣ ಬಿಗಿಯುವ ಪರಿಣತಿ ಇಲ್ಲ. ಅಷ್ಟೇ ಅಲ್ಲ, ನನ್ನದೊಂದು ಟ್ಯಾಗ್‌ಲೈನೂ ಇದೆ-ಅಂಕಣವಾದರೂ ಬರೆದೇನು ಭಾಷಣ ಕೊರೆಯಲಾರೆ!" ಎಂದು. ಅವರಿಗದು ಭಲೇತಮಾಷೆಯಾಗಿ ಕಂಡಿತು, ಮನಸಾರೆ ನಕ್ಕರು.

“ದ್ಯಾಟ್ಸ್ ಎ ಗುಡ್ ವನ್! ವಿಶ್ವೇಶ್ವರಭಟ್ಟರು ಭೇಟಿಯಾದಾಗ ಅವರಿಗೂ ತಿಳಿಸುತ್ತೇನೆ ಇದನ್ನು" ಎನ್ನುತ್ತ ನನ್ನನ್ನು ಬೀಳ್ಕೊಟ್ಟರು. ಮೂರೇ ದಿನಗಳ ನಂತರ ಪರಿಸ್ಥಿತಿ ಬದಲಾಗಬೇಕಾಗಿ ಬಂತು! ಅದೇನಾಯ್ತೆಂದರೆ, ಮಂಗಳವಾರ ಮೇ 12ರಂದು ಸಂಜೆ 6 ಗಂಟೆಗೆ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದ ಶ್ರೀವೆಂಕಟೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ವೀಣಾ ಬನ್ನಂಜೆ ಮತ್ತು ಗುರುರಾಜ ಕರಜಗಿಯವರ ಉಪನ್ಯಾಸ ಕಾರ್ಯಕ್ರಮ. ಮನಃಶಾಂತಿ ಮತ್ತು ವಿಶ್ವಶಾಂತಿ ವಿಷಯ.

ಇಟ್ ಸೋ ಞ್ಯಾಪ್ಪನ್ಡ್ ಎನ್ನುವಂತೆ, ಕಾರ್ಯಕ್ರಮದ ಆಯೋಜಕ ವಾಸು ಮೂರ್ತಿ ಅವರು “ಕರಜಗಿಯವರ ಪರಿಚಯ ಭಾಷಣ ನೀವು ಮಾಡಬೇಕು!" ಎಂದು ನನಗೆ ಪ್ರೀತಿಯ ಆದೇಶವಿತ್ತರು. “ಅವರ ಭಾಷಣ ಪೂರ್ಣವಾಗಿ ಕನ್ನಡದಲ್ಲೇ ಇರುತ್ತದೆ. ಪರಿಚಯವೂ ಕನ್ನಡದಲ್ಲೇ ಇರಲಿ" ಎಂಬ ಸೂಚನೆಯನ್ನೂ ನೀಡಿದರು. ನಿರ್ವಾಹವಿಲ್ಲದೆ ನಾನು ಒಪ್ಪಲೇಬೇಕಾಯಿತು.

“ಮೊನ್ನೆ ನ್ಯೂಜೆರ್ಸಿಯ ಕಾರ್ಯಕ್ರಮದ ಕೊನೆಯಲ್ಲಿ ಇಂಥದೊಂದು ಸಂಭಾಷಣೆ ನನ್ನ ಮತ್ತು ಕರಜಗಿಯವರ ನಡುವೆ ನಡೆದಿತ್ತು. ಅದರ ಮುಂದಿನ ಬೆಳವಣಿಗೆಯಾಗಿ ಈಗ ನಾನು ಧ್ವನಿ ವರ್ಧಕ ದೆದುರು ನಿಲ್ಲುವಂತಾಗಿದೆ, ಪ್ರಯತ್ನಿಸುತ್ತೇನೆ" ಎನ್ನುತ್ತಲೇ, ವಾಸು ಮೂರ್ತಿಯವರೇ ಬರೆದು ಕೊಟ್ಟಿದ್ದ ಪರಿಚಯವನ್ನು ಮಂಡಿಸಿದೆ.

ಅದು ಸೂರ್ಯನೆದುರಿಗೆ ಹಣತೆ ಹಿಡಿದಂಥ ಪ್ರಯೋಗವೇ. ಆದರೆ, ಅಷ್ಟರೊಳಗೆ ಕರಜಗಿಯವರು ನನಗೆ ಅತ್ಯಾಪ್ತ ಆತ್ಮೀಯರಾಗಿ ಬಿಟ್ಟಿದ್ದರಿಂದ ಯಾವುದೇ ಸಂಕೋಚ ಹಿಂಜರಿಕೆಗಳಿಲ್ಲದೆ ನನ್ನ ಮಟ್ಟಿಗೆ ಅಚ್ಚುಕಟ್ಟಾಗಿಯೇ ನಿರ್ವಹಿಸಿದೆ. ಆವತ್ತು ಅವರಿಬ್ಬರ ಭಾಷಣಗಳಂತೂ ಅತ್ಯುತ್ಕೃಷ್ಟ. ಇಂದಿನ ಪರಿಸ್ಥಿತಿಗೆ ಅತಿಪ್ರಸ್ತುತ. ಒಂದು ಕ್ಷಣವೂ ಬೋರ್ ಅನಿಸುವುದಿಲ್ಲ.

ವಿಷಯದಿಂದ ವಿಷಯಕ್ಕೆ ಘಟನೆಯಿಂದ ಘಟನೆಗೆ, ಕಥೆಯಿಂದ ಕಥೆಗೆ, ಪ್ರಸಂಗದಿಂದ ಪ್ರಸಂಗಕ್ಕೆ ನವಿರಾಗಿ ಪೋಣಿಸುತ್ತ ಸುಂದರ ಕಲಾಕೃತಿಯ ನೇಯ್ಗೆಯಂತೆ ಉಪನ್ಯಾಸವನ್ನು ಕಟ್ಟಿಕೊಡುವ ವರವಿದ್ಯೆ ಇವರಿಗೆ ಅದುಹೇಗೆ ಸಿದ್ಧಿ ಸಿದೆಯೋ ಎಂದು ಎಲ್ಲರಿಗೂ ಅಭಿಮಾನ ಆದರಗಳಿಂದ ಕೂಡಿದ ಹಿತಕರ ಅಚ್ಚರಿ.

ಮಾರನೆ ದಿನವೇ ಅವರೆಲ್ಲ ಇಲ್ಲಿಂದ ಹೊರಟು ಹ್ಯೂಸ್ಟನ್‌ಗೆ ಪ್ರವಾಸ ಬೆಳೆಸಿದರು, ಈ ವಾರಾಂತ್ಯ ಅಲ್ಲಿ ನಡೆಯುವ ಬನ್ನಂಜೆ-90 ವಿಶ್ವನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿಕ್ಕೆ. ಹಾಗಲ್ಲದೆ ಒಂದುವೇಳೆ ವಾಷಿಂಗ್ಟನ್ ಡಿಸಿಯಲ್ಲೇ ಮೂರ್ನಾಲ್ಕು ದಿನ ಉಳಿಯುತ್ತಾರೆ ಅಂತಾಗಿದ್ದಿದ್ದರೆ ಕರಜಗಿಯವರನ್ನೂ ಇಲ್ಲಿನ ನನ್ನ ಕೆಲ ಫೇವರಿಟ್ ತಾಣಗಳಿಗೆ ಕರೆದೊ ಯ್ಯುವ ಕೆಲಸವನ್ನು ಸಂತೋಷದಿಂದ ಮಾಡಬೇಕೆಂದಿದ್ದೆ, ಮಾಡಿರುತ್ತಿದ್ದೆ.

ಇರಲಿ, ಮುಂದಿನ ಸಲ. ಈಗಿನ್ನು “ಅವರು ಹೇಗೋ ಏನೋ. ಎಷ್ಟು ದೊಡ್ಡಸ್ತಿಕೆಯುಳ್ಳವರೋ. ಅವರೊಡನೆ ಏನು/ಹೇಗೆ ಮಾತನಾಡುವುದೋ..." ಅಂತೆಲ್ಲ ಅವ್ಯಕ್ತ ಆತಂಕಗಳು ಲವಲೇಶವೂ ಇಲ್ಲವಲ್ಲ!