ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka M Bhatta Column: ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಎರಡು ವಿಭಿನ್ನ ಕುಟುಂಬಗಳ ನಡುವೆ ಸಂಬಂಧ ಬೆಸೆಯುವ, ಸಂಬಂಧವಿಲ್ಲದ ಎರಡು ಜೀವ ಗಳ ಮಿಲನವಾಗುವ ಸುಂದರ ಸಂದರ್ಭವನ್ನು ವಿವಾಹ, ಮದುವೆ, ಲಗ್ನ ಎಂಬೆಲ್ಲ ಹೆಸರು ಗಳಿಂದ ಕರೆಯಲಾಗುತ್ತದೆ. ಮಾನವರ ಬದುಕಿಗೆ ನಿಗದಿಪಡಿಸಲಾಗಿರುವ 16 ಸಂಸ್ಕಾರಗಳಲ್ಲಿ ವಿವಾಹಕ್ಕೆ ಪ್ರಾಧಾನ್ಯವಿದ್ದು, ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ವಿಧದ ವಿವಾಹ ಪದ್ಧತಿಗಳನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ.

ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಅಂಕಣಕಾರ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

Profile Ashok Nayak Mar 16, 2025 7:58 AM

ಭಾರತೀಯ ಸಂಪ್ರದಾಯದಲ್ಲಿ ವಿವಾಹವೆಂಬುದು, ಅನ್ಯ ಸಂಸ್ಕೃತಿಗಳಲ್ಲಿಯಂತೆ ಬದುಕಲ್ಲಿ ಬಂದುಹೋಗುವ ಒಂದು ಮಾಮೂಲಿ ಘಟನೆಯಲ್ಲ. ನಮ್ಮಲ್ಲಿ ವಿವಾಹವನ್ನು ‘ಮಹೋತ್ಸವ’ ಎಂದು ಆಚರಿಸುತ್ತೇವೆ, ಕನ್ಯಾದಾನವನ್ನು ಶ್ರೇಷ್ಠದಾನವೆಂದು ಪರಿಗಣಿಸು ತ್ತೇವೆ. ಎರಡು ವಿಭಿನ್ನ ಕುಟುಂಬಗಳ ನಡುವೆ ಸಂಬಂಧ ಬೆಸೆಯುವ, ಸಂಬಂಧವಿಲ್ಲದ ಎರಡು ಜೀವಗಳ ಮಿಲನವಾಗುವ ಸುಂದರ ಸಂದರ್ಭವನ್ನು ವಿವಾಹ, ಮದುವೆ, ಲಗ್ನ ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಮಾನವರ ಬದುಕಿಗೆ ನಿಗದಿಪಡಿಸಲಾಗಿರುವ 16 ಸಂಸ್ಕಾರಗಳಲ್ಲಿ ವಿವಾಹಕ್ಕೆ ಪ್ರಾಧಾನ್ಯವಿದ್ದು, ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ವಿಧದ ವಿವಾಹ ಪದ್ಧತಿಗಳನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ.

ಇವನ್ನು ಸ್ಥೂಲವಾಗಿ ಅವಲೋಕಿಸೋಣ: ಬ್ರಾಹ್ಮ: ವರನು ಶಿಕ್ಷಣವನ್ನು ಪೂರ್ಣಗೊಳಿಸಿ ಅಗತ್ಯ ಕೌಶಲಗಳನ್ನು ಪಡೆದ ನಂತರ ಅವನ ಕುಟುಂಬವು ಸೂಕ್ತ ವಧುವಿನ ಕುಟುಂಬ ವನ್ನು ಸಂಪರ್ಕಿಸುತ್ತದೆ. ನಂತರ ವಧುವಿನ ತಂದೆಯು ವರನ ವಯೋನ್ನತಿ, ವಿದ್ಯೋನ್ನತಿ, ಗಾತ್ರೋನ್ನತಿ, ಕೌಟುಂಬಿಕ ಹಿನ್ನೆಲೆಗಳನ್ನು ಪರಿಶೀಲಿಸುತ್ತಾರೆ. ಈ ಪದ್ಧತಿಯನ್ನು ಅತ್ಯಂತ ಗೌರವಾನ್ವಿತ ವಿವಾಹವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Vinayaka M Bhatta Column: ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

ದೈವ: ಈ ಪದ್ಧತಿಯಲ್ಲಿ, ವಧುವಿನ ಕುಟುಂಬವು ಸೂಕ್ತ ವರನಿಗಾಗಿ ಕಾಯುತ್ತದೆ. ನಿರ್ದಿ ಷ್ಟ ಅವಧಿಯೊಳಗೆ ಸೂಕ್ತಜೋಡಿ ಸಿಗದಿದ್ದರೆ, ಯುಜ್ಞಗಳನ್ನು ನಿರ್ವಹಿಸುವ ಪುರೋಹಿತ ರೊಂದಿಗೆ ಆಕೆಯ ವಿವಾಹವನ್ನು ಏರ್ಪಡಿಸಲಾಗುತ್ತದೆ.

ಆರ್ಷ: ಸಂಸ್ಕೃತದಲ್ಲಿ ಈ ಪದವು ಋಷಿಯನ್ನು ಸೂಚಿಸುತ್ತದೆ. ಈ ಪದ್ಧತಿಯಲ್ಲಿ ವರನು ಸಾಮಾನ್ಯವಾಗಿ ಋಷಿಯಾಗಿರುತ್ತಾನೆ. ಎರಡು ಹಸುಗಳ ವಿನಿಮಯದೊಂದಿಗೆ ವಧು ವನ್ನು ಆ ಋಷಿಯೊಂದಿಗೆ ವಿವಾಹ ಮಾಡಿಕೊಡಲಾಗುತ್ತದೆ.

ಪ್ರಾಜಾಪತ್ಯ: ಬ್ರಾಹ್ಮ ವಿವಾಹಕ್ಕೆ ವ್ಯತಿರಿಕ್ತವಾದ ಈ ಪದ್ಧತಿಯಲ್ಲಿ ಅರ್ಹ ವರನು ವಧು ವಿನ ತಂದೆಯಿಂದ ಸಂಪತ್ತು-ಉಡುಗೊರೆಗಳ ಆಮಿಷಕ್ಕೆ ಒಳಗಾಗಿ ವಧುವನ್ನು ಮದುವೆ ಯಾಗುತ್ತಾನೆ.

ಅಸುರ: ವಧು ಮತ್ತು ಆಕೆಯ ಕುಟುಂಬಕ್ಕೆ ವರನು ಸಂಪತ್ತನ್ನು ವಿನಿಮಯ ಮಾಡಿ ಕೊಳ್ಳುವ ಮೂಲಕ ವಧುವನ್ನು ಬಾಳಸಂಗಾತಿಯಾಗಿ ಸ್ವೀಕರಿಸುವುದನ್ನು ಈ ಪದ್ಧತಿ ಒಳಗೊಂಡಿತ್ತು.

ಗಾಂಧರ್ವ: ಈ ರೀತಿಯ ವಿವಾಹವು, ಕನ್ಯೆ ಮತ್ತು ಆಕೆಯ ಪ್ರೇಮಿಯ ನಡುವಿನ ವಿವಾಹ ಪೂರ್ವ ದೈಹಿಕ ಸಂಬಂಧ ಮೂಲದಿಂದ ನಡೆಯುವಂಥದ್ದು. ಕುಟುಂಬ ಸದಸ್ಯರ ಒಳಗೊಳ್ಳುವಿಕೆಯಿಲ್ಲದೆ, ವಧೂ-ವರರ ಮುಕ್ತ ಆಯ್ಕೆಯನ್ನು ಆಧರಿಸಿ ಮದುವೆ ನಡೆ ಯುತ್ತಿತ್ತು.

ರಾಕ್ಷಸ: ಕನ್ಯೆಯ ಪಾಲಕರು ಯುದ್ಧ ಮುಂತಾದ ಸಂದರ್ಭಗಳಲ್ಲಿ ಕೊಲ್ಲಲ್ಪಟ್ಟಾಗ, ಆಕೆ ಯನ್ನು ಅವಳ ಮನೆಯಿಂದ ಅಪಹರಿಸಿ, ಬಲವಂತವಾಗಿ ಮತ್ತು ಹಿಂಸಾತ್ಮಕವಾಗಿ ವರಿಸುವಂಥ ವಿವಾಹ ಪದ್ಧತಿಯಿದು.

ಪೈಶಾಚ: ನಿದ್ರಿಸುತ್ತಿರುವ, ಕುಡಿದ ಅಮಲಿನಲ್ಲಿರುವ, ಮಾನಸಿಕ ಅಸಮತೋಲನವಿರುವ ಅಥವಾ ಅಂಗವಿಕಲ ಹುಡುಗಿಯ ದುರ್ಬಲತೆಯನ್ನು ಪುರುಷನೊಬ್ಬನು ದುರುಪ ಯೋಗಪಡಿಸಿಕೊಂಡು, ವಂಚಿಸಿ ಅವಳೊಂದಿಗೆ ದೈಹಿಕ ಸಂಬಂಧ ಹೊಂದಿ ವಿವಾಹ ವಾಗುವ ವಿಧಾನವಿದು.

ಇಂಥ ವಿವಾಹಗಳನ್ನು ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ನೋಡಬಹುದಾಗಿದೆ. ನಮ್ಮ ಪೂರ್ವಿಕರು ಪ್ರಶಸ್ತ ವಿವಾಹಕ್ಕೆ ಉದ್ದೇಶಗಳನ್ನು ಹೇಳುತ್ತಾರೆ ಮತ್ತು ವಿವಾಹ ವಿಧಿಯಲ್ಲಿ ಅವನ್ನು ಸ್ಪಷ್ಟವಾಗಿ ಹೇಳಲಾಗಿದೆ. “ಧರ್ಮಪ್ರಜಾ ಸಂಪತ್ ಅಭಿವೃದ್ಧ್ಯರ್ಥಂ ಇಮಾಂ ಕನ್ಯಾಂ ಪ್ರದಾಸ್ಯಾಮಿ ದೇವಾಗ್ನಿ ದ್ವಿಜ ಸನ್ನಿಧೌ" ಅಂದರೆ, ಸಮಾಜದಲ್ಲಿ ಪ್ರಜೋತ್ಪತ್ತಿ ಉಂಟಾಗಿ ಮನುಕುಲದ ಅಭಿವೃದ್ಧಿಗಾಗಿ, ತನ್ಮೂಲಕ ಧರ್ಮದ ಉನ್ನತಿಗಾಗಿ ನನ್ನ ಮಗಳನ್ನು ನಿಮ್ಮ ಮಗನಿಗೆ ಕೊಡುತ್ತಿದ್ದೇನೆ ಎಂದು ವಧುವಿನ ತಂದೆಯು ವಿವಾಹ ಪೂರ್ವದಲ್ಲಿ ವರನ ತಂದೆಗೆ ವಾಗ್ದಾನ ಮಾಡುತ್ತಾನೆ.

ಅದಕ್ಕೆ ಪ್ರತಿಯಾಗಿ ವರನು ವಧುವಿಗೆ, ‘ಧರ್ಮಪ್ರಜಾ ಸಿದ್ಧ್ಯರ್ಥಂ ಪ್ರತಿಹೃಹ್ಣಾಮಿ ಮಿತ್ರೋಸಿ’ ಅಂದರೆ, ‘ನನ್ನ ಆತ್ಮೀಯ ಸ್ನೇಹಿತಳಾಗಿ ನಿನ್ನ ಕೈಹಿಡಿಯುತ್ತೇನೆ’ ಎನ್ನುತ್ತಾನೆ. ಕನ್ಯಾಪಿತೃವು, “ಗೌರಿಯಂತಿರುವ ನನ್ನ ಮಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದೇನೆ, ಈ ಸಭಾಸದರ ಎದುರಿನಲ್ಲಿ ಸದುದ್ದೇಶದಿಂದ ನಿನಗೆ ಕೊಟ್ಟಿದ್ದೇನೆ.

ಅನೇಕ ಸಂವತ್ಸರಗಳವರೆಗೆ ಅವಳನ್ನು ಪಾಲಿಸಿ, ಮಕ್ಕಳು-ಮೊಮ್ಮಕ್ಕಳನ್ನು ಪಡೆದು ಸುಖ ವಾಗಿ ದಾಂಪತ್ಯ ಜೀವನ ನಡೆಸು" ಎಂದು ಆಶೀರ್ವದಿಸುತ್ತಾನೆ. ‘ಧರ್ಮೇಚಾರ್ಥೇಚ ಕಾಮೇಚ ನಾತಿ ಚರಾಮಿ’ ಅಂದರೆ, ಧರ್ಮ-ಅರ್ಥ-ಕಾಮ ಇವುಗಳನ್ನು ಇವಳಿಂದ ಅಗಲಿ ಆಚರಿಸಬೇಡ ಎಂದು ವರನಿಂದ ಪ್ರಮಾಣ ಪಡೆಯುತ್ತಾನೆ; ಆಗ ವರನು ‘ನಾತಿ ಚರಾಮಿ’ (ಈ ವಿಚಾರಗಳಲ್ಲಿ ಬಿಟ್ಟುಹೋಗುವುದಿಲ್ಲ) ಎಂದು ಪ್ರತಿನುಡಿಯುತ್ತಾನೆ.

ವಿವಾಹಾನಂತರದಲ್ಲಿ, ಧರ್ಮ, ಪೂಜೆ-ಪುನಸ್ಕಾರ, ಹಣಕಾಸು ಅಥವಾ ಕಾಮನೆ ಹೀಗೆ ಯಾವುದೇ ವಿಷಯವಿರಲಿ, ಅದು ಧರ್ಮಪತ್ನಿಯೊಂದಿಗೇ ಇರಬೇಕು, ಆಕೆಯನ್ನು ಅತಿ ಕ್ರಮಿಸಿ ಇವನ್ನು ನಡೆಸಬಾರದು ಎಂಬುದು ಈ ವಿಧಿ ತಾತ್ಪರ್ಯ.

ಧಾರೆಯೆರೆದು ಕನ್ಯಾದಾನವಾದ ಮೇಲೆ ಪರಸ್ಪರ ಹೂಮಾಲೆಗಳ ವಿನಿಮಯ, ಪಾಣಿ ಗ್ರಹಣ, ಸಪ್ತಪದಿ ಮತ್ತು ಹೋಮಗಳಂಥ ವಿಧಿಗಳಾದ ಮೇಲೆ, ವರನ ಕಡೆಯುವರು ವಧು ವನ್ನು ಮಹಾಲಕ್ಷ್ಮಿ ಸ್ವರೂಪದಿಂದ ಮನೆತುಂಬಿಸಿಕೊಳ್ಳುತ್ತಾರೆ. ನಂತರ ಎಲ್ಲ ಸಂಬಂಧಿ ಕರ ಸಮ್ಮುಖದಲ್ಲಿ ಹೆಣ್ಣೊಪ್ಪಿಸುವ ಅಥವಾ ಕನ್ಯಾಸಮರ್ಪಣೆಯ ಕಾರ್ಯಕ್ರಮ. ಮದು ಮಗಳ ತಂದೆ-ತಾಯಿಯಿಂದ ಪ್ರಾರಂಭಿಸಿ, ಅವಳ ಹತ್ತಿರದ ಸಂಬಂಧಿಕರು ಕಣ್ಣೀರಿಡುತ್ತಾ, ವಧೂ-ವರರ ಕೈಗಳನ್ನು ವರನ ಕಡೆಯ ಹಿರಿಯರ ಕೈಗಳಲ್ಲಿಡುತ್ತಾ, “ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ" ಎಂದು ಕೈಮುಗಿದು ಕೇಳಿಕೊಂಡರೆ, ಹುಡುಗನ ಕಡೆಯವರು, “ಏನೂ ಯೋಚಿಸಬೇಡಿ, ನಮ್ಮ ಮಗಳಂತೆ ನೋಡಿಕೊಳ್ಳುತ್ತೇವೆ" ಎಂಬ ಔಪಚಾರಿಕ ಮಾತನ್ನಾಡುತ್ತಾರೆ.

ಮುಂದೆ, ಸಹಜೀವನ ಎಂದರೇನು, ದಾಂಪತ್ಯದಲ್ಲಿ ಒಟ್ಟಾಗಿ ಏನೆಲ್ಲಾ ಸಾಧಿಸಬಹುದು, ಮನೆ-ಮನಸ್ಸು ಛಿದ್ರವಾಗದಂತೆ ಹೇಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು? ಮುಂತಾದ ಕಿವಿಮಾತುಗಳನ್ನು ನೂತನ ದಂಪತಿಗೆ ಹೇಳುತ್ತಾರೆ. ಅಂತೂ, ಅತ್ಯಂತ ಉತ್ಸಾಹದಿಂದ ನಡೆವ ವಿವಾಹ ಕಾರ್ಯಕ್ರಮವು, ಕೊನೆಯಲ್ಲಿನ ಕನ್ಯಾಸಮರ್ಪಣೆಯ ಸಂದರ್ಭದಿಂದಾಗಿ ಎಲ್ಲರ ಕಂಗಳನ್ನು ಹನಿಗೂಡಿಸಿ, ಹೃದಯಗಳನ್ನು ಭಾರವಾಗಿಸಿಬಿಡುತ್ತದೆ.

ಇತ್ತೀಚೆಗೆ ನಡೆದ ಸಂಸದ ತೇಜಸ್ವಿ ಸೂರ್ಯ ಅವರ ಮದುವೆಯ ವಿಡಿಯೋ ತುಣುಕು ಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸುವಾಗ, ಸಂಪ್ರದಾಯಬದ್ಧವಾಗಿ ನಡೆದ ಈ ಕನ್ಯಾಸಮರ್ಪಣೆಯ ಭಾಗ ಮನದುಂಬಿತು. ವಧು ಸಿವಶ್ರೀ ಅವರು ತುಂಬಿದ ಮಡಿಲಿ ನೊಂದಿಗೆ ತಂದೆ-ತಾಯಿಯ ಮಡಿಲಿನಿಂದಿಳಿದು ಪತಿ ತೇಜಸ್ವಿಯವರ ಮಡಿಲಿಗೆ ಏರುವ ಆ ಸಂವೇದನಾಶೀಲ ಸಂದರ್ಭ, ಸಂಬಂಧವಿಲ್ಲದ ನನ್ನ ಕಣ್ಣುಗಳನ್ನೂ ಹನಿಗೂಡಿಸಿದ್ದು ನಿಜ. ಈ ವೇಳೆ ಸಿವಶ್ರೀ ಅಳುತ್ತಿದ್ದರು.

ಅವರಿಗೆ ಸ್ವಾಭಾವಿಕವಾಗಿ ತವರನ್ನು ತೊರೆಯುವ ಸಂಕಟವಾದರೆ, ತವರಿನವರಿಗೆ ಮನೆ ಮಗಳನ್ನು ದೂರದ ಪತಿಮನೆಗೆ ಕಳಿಸಿಕೊಡುವ ನೋವು. ಸಿವಶ್ರೀ ಕಣ್ಣೀರಾಗಿದ್ದನ್ನು ಕಂಡು ಅರೆಕ್ಷಣ ತಬ್ಬಿಬ್ಬಾದ ತೇಜಸ್ವಿ, ತಾವೂ ಭಾವಪರವಶರಾಗಿ ಆಕೆಯ ಕಣ್ಣೀರೊರೆಸಿ ಸಂತೈಸಲು ಯತ್ನಿಸಿದರು. ಹೆಣ್ಣಾಗಿ ಸಿವಶ್ರೀ ಅಳುವುದು ಸ್ವಾಭಾವಿಕ, ಆದರೆ ಸೂಕ್ಷ್ಮವಾಗಿ ಗಮನಿಸಿದರೆ ತೇಜಸ್ವಿ ಕಣ್ಣಲ್ಲೂ ನೀರಿತ್ತು. ಹಾಗೇಕೆ? ಅಂದರೆ, ‘ಅದು ಹಾಗೆಯೇ!’ ಎಂದಷ್ಟೇ ಹೇಳಬಹುದು.

ತೇಜಸ್ವಿ ವಿದ್ಯಾವಂತ, ಪ್ರತಿಷ್ಠಿತ ವ್ಯಕ್ತಿ, ಸಂಸದ, ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತರು, ಸಾಕಷ್ಟು ಆಸ್ತಿ-ಅಂತಸ್ತು ಹೊಂದಿರುವಾತ; ಹುಡುಕಿದರೂ ಸಿಗದಂಥ ಸಂಬಂಧ, ಮೆಚ್ಚಿ ಆದ ಮದುವೆ. ಆದರೂ ವಧು, ಆಕೆಯ ಪಾಲಕರು ಅಳುವುದೇಕೆ ಎಂಬುದು ಪ್ರಶ್ನೆ. ಅದು ಹಾಗೆಯೇ! ಹೆಣ್ಣೊಪ್ಪಿಸಿಕೊಡುವ ಆ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಎಲ್ಲರನ್ನೂ ಕಣ್ಣೀ ರಾಗಿಸುವಂಥದ್ದು ಆ ಕ್ಷಣ. ಭಿಕ್ಷುಕನ ಮಗಳನ್ನು ಮಹಾರಾಜನಿಗೆ ಧಾರೆಯೆರೆದು ಕೊಟ್ಟಿ ದ್ದರೂ, ಭಿಕ್ಷುಕ ತಂದೆ-ತಾಯಿ ಗಳು ಈ ಕ್ಷಣದಲ್ಲಿ ಸಂತೋಷಪಡಲಾರರು!

ದುಃಖವೇ ಅಲ್ಲಿ ಯಾಚಿತ ರಸಭಾವ. ಮದುವೆ ಅನ್ನೋದು ಸಂತೋಷದ ಸಂದರ್ಭವೇ, ಆದರೆ ಈ ಹೆಣ್ಣೊಪ್ಪಿಸುವ ಕ್ಷಣವಿದೆಯಲ್ಲಾ, ಅದು ನೋವಿನಭಾವದ ಮೂಟೆ! ಈ ಅಳು ವಿನ ಸ್ರೋತ ಸಾಮಾನ್ಯವಾಗಿ ಶುರುವಾಗೋದು ವಧುವಿನ ತಾಯಿಯಿಂದ. ಅಮ್ಮನ ಕಣ್ಣೀರು ಕಂಡು ಮಗಳು ಉಮ್ಮಳಿಸುತ್ತಾಳೆ, ಈ ಭಾವ ಕ್ಷಣಾರ್ಧದಲ್ಲಿ ಎಲ್ಲರನ್ನೂ ಆವರಿಸಿ ಬಿಡುತ್ತದೆ.

ಭಾವನೆಗಳೇ ಹಾಗೆ, ಸಂತಸವಾಗಲಿ ದುಃಖವಾಗಲಿ ಒಂಥರಾ ಸಾಂಕ್ರಾಮಿಕವಾಗಿ ಕೆಲಸ ಮಾಡಿಬಿಡುತ್ತವೆ. ಕನ್ಯಾಸಮರ್ಪಣೆಯ ವೇಳೆ, ಮನೆ ತುಂಬಿಸಿಕೊಳ್ಳಬೇಕಾದ ಮದುಮಗನ ಕಡೆಯವರೂ ಅನೇಕ ಸಲ ಭಾವಪರವಶರಾಗುವುದಿದೆ. ಹೀಗೆ, ಅಲ್ಲಿರುವ ಎಲ್ಲರೂ ಅಳಲಾರಂಭಿಸಿದರೆ, ಅನೇಕ ನಿರೀಕ್ಷೆಗಳೊಂದಿಗೆ ಆಗಷ್ಟೇ ಹೊಸಬಾಳಿಗೆ ಕಾಲಿರಿಸಿರುವ ಮದುಮಗನ ಕಥೆಯೇನಾಗಬೇಕು?! ‘ಹಸುವೊಂದನ್ನು ಹುಲಿಯ ಬಾಯಲ್ಲಿ ತಳ್ಳುತ್ತಿದ್ದಾ ರೆಯೇ? ಆಕೆ ಹಸುವಾಗಿದ್ದು ನಾನು ಹುಲಿಯಾಗಿಬಿಟ್ಟಿದ್ದೇನೆಯೇ? ಆಕೆಯ ಮನೆಯವರ ಪಾಲಿಗೆ ನಾನು ಖಳನಾಯಕನಾಗಿಬಿಟ್ಟೆನೇ’ ಎಂಬ ತಪ್ಪಿತಸ್ಥ ಭಾವ ಆ ಕ್ಷಣಕ್ಕೆ ಆವರಿಸಿ ಆತ ತಬ್ಬಿಬ್ಬಾಗುವಂತಾಗುತ್ತದೆ.

ಮದುಮಗ ಹೆಂಗರುಳಿನವನಾಗಿಬಿಟ್ಟರಂತೂ ಭಾವುಕತೆಯಲ್ಲಿ ಅವನೂ ಕಣ್ಣೀರಾಗ ಬಹುದು. ಹೀಗಾಗಿ, ಸಂಬಂಧಿಕರ ಮನೆಯ ಮದುವೆಗಳಿಗೆ ಹೋದಾಗ ಈ ಕನ್ಯಾ ಸಮ ರ್ಪಣೆಯ ಕ್ಷಣವನ್ನು ನಾನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡಿದ್ದಿದೆ!

ವಿಶ್ವಾಮಿತ್ರ-ಮೇನಕೆಯರ ಸ್ವಲ್ಪಕಾಲದ ದಾಂಪತ್ಯಕ್ಕೆ ಜನಿಸಿದ ಶಕುಂತಲೆಯು ಕಣ್ವ ಮಹರ್ಷಿಗಳಲ್ಲಿ ಬೆಳೆಯುತ್ತಾಳೆ. ಮುಂದೆ ಅವಳು ರಾಜ ದುಷ್ಯಂತನನ್ನು ಮದುವೆಯಾಗಿ ಗಂಡನ ಮನೆಗೆ ತೆರಳುವ ಸಂದರ್ಭ ಬಂದಾಗ, ಸಾಕುತಂದೆ ಕಣ್ವರು ಬಹುವಾಗಿ ದುಃಖಿ ಸುವ ಸಂದರ್ಭವನ್ನು ‘ಅಭಿಜ್ಞಾನ ಶಾಕುಂತಲಾ’ ನಾಟಕದಲ್ಲಿ ಕಾಳಿದಾಸ ವರ್ಣಿಸಿದ್ದಾನೆ.

ದುಃಖ, ನಾಚಿಕೆ, ಸಂಭ್ರಮ ಎಲ್ಲವನ್ನೂ ಮೈವೆತ್ತ ಶಕುಂತಲೆಯು ಕಣ್ವರ ಕಾಲಿಗೆರಗಿ ನಾನು ಹೋಗಿ ಬರುತ್ತೇನೆ" ಎಂದಾಗ ಗದ್ಗದಿತ ಕಣ್ವರು, “ಹೊರಡುವ ಮುನ್ನ ಪವಿತ್ರ ಅಗ್ನಿಯನ್ನು ಪ್ರದಕ್ಷಿಣೆ ಮಾಡು" ಎನ್ನುತ್ತಾರೆ. ಈ ಸಂದರ್ಭದಲ್ಲಿ ಅವರು ಹೇಳುವ 4 ಪ್ರಮುಖ ಶ್ಲೋಕ ಗಳೇ ‘ಶ್ಲೋಕ ಚತುಷ್ಟಯ’ ಎಂದು ಹೆಸರುವಾಸಿಯಾಗಿವೆ.

ಕಣ್ವರೋ ಮಹಾತಪಸ್ವಿಗಳು, ವಿದ್ಯಾರ್ಥಿಗಳಿಗೆ ಪಾಠ ಹೇಳುವ ಗುರುಕುಲದ ಕುಲಪತಿಗಳು. ಆದರೆ, ಇವೆಲ್ಲದರ ಜತೆಗೆ ಅವರೊಬ್ಬ ತಂದೆ. ಸಾಕುಮಗಳಾದರೂ ಶಕುಂತಲೆ ಎಂದರೆ ಅವರಿಗೆ ಪಂಚಪ್ರಾಣ. ಮುಂದೊಂದು ದಿನ ಆಕೆ ಗಂಡನ ಮನೆಗೆ ಹೋಗಲೇಬೇಕು ಎಂಬು ದೂ ಅವರಿಗೆ ಗೊತ್ತು. ಅವಳಿಗೊಬ್ಬ ಸೂಕ್ತ ವರನನ್ನು ಹುಡುಕುವುದು ತಮ್ಮ ಜೀವನದ ಪರಮ ಕರ್ತವ್ಯ ಎಂಬುದೂ ಗೊತ್ತು.

ಅಂಥಾ ತಪಸ್ವಿಗಳೇ, ಶಕುಂತಲೆ ಪತಿಗೃಹಕ್ಕೆ ಹೊರಡುವ ಕಾಲ ಸನ್ನಿಹಿತವಾದಾಗ, “ನನ್ನ ವ್ಯಾಕುಲತೆ ಹೆಚ್ಚಾಗಿ ಏನೂ ತೋಚದಂತಾಗಿದೆ. ನನ್ನ ಕಣ್ಣುಗಳು, ಮನಸ್ಸು, ಗಂಟಲು ಎಲ್ಲವೂ ತುಂಬಿ ಬರುತ್ತಿವೆ. ಧ್ಯಾನ-ಯಜ್ಞಗಳಲ್ಲಿ ಮಗ್ನನಾಗಿ ರಾಗದ್ವೇಷಾದಿಗಳಲ್ಲಿ ವಿರಕ್ತ ನಾದ ನನ್ನಂಥ ಅರಣ್ಯವಾಸಿಯ ಗತಿಯೇ ಹೀಗಾದರೆ, ಇನ್ನು ಸಾಮಾನ್ಯರು ತಮ್ಮ ಮನೆ ಮಗಳನ್ನು ಕಳಿಸಿಕೊಡುವಾಗ ಎಷ್ಟು ಸಂಕಟಪಡಬಹುದು?" ಎಂದು ಅಳಲನ್ನು ತೋಡಿಕೊಳ್ಳುತ್ತಾರೆ.

ಸಮಯ ಬದಲಾಗಿರಬಹುದು, ಇಂದಿನ ಹೆಣ್ಣುಮಕ್ಕಳಲ್ಲಿ ಧೈರ್ಯ-ಸ್ಥೈರ್ಯಗಳು ಹೆಚ್ಚಿರಬಹುದು, ಅವರು ವಿದ್ಯಾವಂತೆಯರಾಗಿರಬಹುದು ಅಥವಾ ಅವರೇ ಹೆಚ್ಚು ‘ಡಾಮಿ ನೇಟಿಂಗ್’ ಇರಬಹುದು; ಆದರೆ, ಈ ಕನ್ಯಾಸಮರ್ಪಣೆಯ ಸಂದರ್ಭದ ಸೂಕ್ಷ್ಮ ಸಂವೇದನೆ ಗಳು ಮಾತ್ರ ಕಣ್ವರ ಕಾಲದಿಂದ ಇಂದಿನವರೆಗೂ ಬದಲಾಗದೇ ಹಾಗೇ ಇವೆ.

ಹೆಣ್ಣೊಪ್ಪಿಸಿಕೊಡುವಾಗ, ವಧುವಿನ ತಂದೆ-ತಾಯಿಯರನ್ನು ಬಿಡಿ, ಆ ವೇಳೆ ಹಾಜರಿರುವ ಯಾವೊಬ್ಬನ ಕಣ್ಣುಗಳು ಒದ್ದೆಯಾಗಲಿಲ್ಲವೆಂದಾದರೆ, ಆತ ಮನುಷ್ಯನೇ ಅಲ್ಲ ಎನ್ನಬಹು ದೇನೋ!