ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಡಪಂಥೀಯರ ನೂತನ ಅಸ್ತ್ರ

ರಷ್ಯಾ ಮತ್ತು ಚೀನಾದಂಥ ರಾಷ್ಟ್ರಗಳಲ್ಲಿ ಇದು ಯಶಸ್ವಿಯಾಯಿತು. ಆದರೆ, ಅಮೆರಿಕ ಮತ್ತು ಯುರೋಪ್‌ನಲ್ಲಿ ಈ ತಂತ್ರ ವಿಫಲವಾಯಿತು. ಕಾರಣ, ಅಲ್ಲಿನ ಬಂಡವಾಳಶಾಹಿ ವ್ಯವಸ್ಥೆ ಮತ್ತು ಬಲವಾದ ಸ್ಥಳೀಯ ಸಂಸ್ಕೃತಿಯು ಜನಸಾಮಾನ್ಯರಿಗೆ ಉತ್ತಮ ಜೀವನ ಮಟ್ಟವನ್ನು ನೀಡಿತ್ತು. ಹೊಟ್ಟೆ ತುಂಬಿದ ಕಾರ್ಮಿಕರು ಕ್ರಾಂತಿಗೆ ಸಿದ್ಧರಿರಲಿಲ್ಲ. ಹೀಗಾಗಿ, ಎಡಪಂಥೀಯ ಬುದ್ಧಿಜೀವಿಗಳು ಯುದ್ಧದ ಹಾದಿಯನ್ನು ಬದಲಿಸಲು ನಿರ್ಧರಿಸಿದರು.

ವರ್ತಮಾನ

ಡಾ.ನಿರಂಜನ ಪೂಜಾರ

ಆಫ್ರಿಕಾದ ಆಡುಭಾಷೆಯಲ್ಲಿ ‘ವೋಕ್’ (Woke) ಎಂಬ ಶಬ್ದವು ಆರಂಭದಲ್ಲಿ ಕೇವಲ ಸಾಮಾಜಿಕ ಜಾಗೃತಿಗೆ ಸೀಮಿತವಾಗಿತ್ತು. ಆದರೆ, ಸಮಕಾಲೀನ ರಾಜಕೀಯ ಪಡಸಾಲೆ ಯಲ್ಲಿ ‘ವೋಕಿಸಂ’ ಎಂಬುದು ತನ್ನ ಅರ್ಥವನ್ನೇ ಬದಲಿಸಿಕೊಂಡಿದೆ. ಅದೀಗ ಜಗತ್ತಿನ ಮೇಲೆ ಪ್ರಭುತ್ವ ಸಾಧಿಸಲು ಶತಮಾನಗಳಿಂದಲೂ ನಡೆಯುತ್ತಿರುವ ಯುದ್ಧದ ಅತ್ಯಂತ ಅಪಾಯಕಾರಿ ಮತ್ತು ಮಾರಕ ಆಯುಧವಾಗಿ ರೂಪಾಂತರಗೊಂಡಿದೆ.

ಇದು ದೇಶದ ಗಡಿಗಳಲ್ಲಿ ನಡೆಯುವ ಯುದ್ಧವಲ್ಲ; ನಾಗರಿಕತೆಯ ಅಸ್ಮಿತೆ, ಕುಟುಂಬ ವ್ಯವಸ್ಥೆ ಮತ್ತು ವ್ಯಕ್ತಿಯ ಆಲೋಚನಾಲಹರಿಯ ಮೇಲೆ ನಡೆಯುತ್ತಿರುವ ‘ಐದನೇ ತಲೆಮಾರಿನ ಯುದ್ಧ’.

ಜಗತ್ತಿನ ಮೇಲೆ ಏಕಚಕ್ರಾಧಿಪತ್ಯ ಸಾಧಿಸಬೇಕೆಂಬ ದಾಹ ಇಂದಿನದಲ್ಲ. ರೋಮನ್ ಸಾಮ್ರಾಜ್ಯವು ಖಡ್ಗ ಮತ್ತು ಕಾನೂನಿನ ಮೂಲಕ ಇದನ್ನು ಸಾಧಿಸಲು ಯತ್ನಿಸಿತು. ಅಬ್ರಹಾಮಿಕ್ ಮತಗಳು ‘ಕ್ರುಸೇಡ್’ ಮತ್ತು ‘ಜಿಹಾದ್’ಗಳ ಮೂಲಕ ಧಾರ್ಮಿಕ ಸಾಮ್ರಾಜ್ಯಶಾಹಿಯನ್ನು ವಿಸ್ತರಿಸಿದವು.

ತದನಂತರದ ಶತಮಾನಗಳಲ್ಲಿ ಯುರೋಪಿನ ವಸಾಹತುಶಾಹಿಗಳು ವ್ಯಾಪಾರದ ಮೂಲಕ ಜಗತ್ತನ್ನು ಲೂಟಿ ಮಾಡಿದವು. ಇವೆಲ್ಲವೂ ಭೌತಿಕ ಯುದ್ಧಗಳಾಗಿದ್ದವು. ಆದರೆ, 17 ರಿಂದ 20ನೇ ಶತಮಾನದ ಅವಧಿಯಲ್ಲಿ ಯುದ್ಧದ ಸ್ವರೂಪ ಬದಲಾಯಿತು. ಜಾತ್ಯ ತೀತತೆ, ಜ್ಞಾನೋದಯ ಮತ್ತು ಬಂಡವಾಳಶಾಹಿಗಳಂಥ ಸಿದ್ಧಾಂತಗಳು ಹುಟ್ಟಿಕೊಂಡವು. ಇವೆಲ್ಲದರ ನಡುವೆ, ಸಮಾಜವನ್ನು ಆಮೂಲಾಗ್ರವಾಗಿ ಒಡೆಯಲು ಜನ್ಮತಾಳಿದ ಅತ್ಯಂತ ಪ್ರಬಲ ಸಿದ್ಧಾಂತವೇ ‘ಕಮ್ಯುನಿಸಂ’ (ಸಮತಾವಾದ). ಸೋವಿಯತ್ ಒಕ್ಕೂಟದ ಪತನದೊಂದಿಗೆ ಕಮ್ಯುನಿಸಂ ಸತ್ತಿತು ಎಂದು ಜಗತ್ತು ಭಾವಿಸಿತು. ಆದರೆ ವಾಸ್ತವದಲ್ಲಿ ಅದು ಸಾಯಲಿಲ್ಲ, ರೂಪಾಂತರಗೊಂಡಿತು.

ಇದನ್ನೂ ಓದಿ: Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'

ತನ್ನ ಅಸ್ತಿತ್ವವನ್ನುಳಿಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವವನ್ನು ಕೆಡವಲು ಅದು 3 ಹಂತ ಗಳಲ್ಲಿ ದಾಳಿ ನಡೆಸಿತು. ಕಮ್ಯುನಿಸಂನ ಮೊದಲ ಹಂತವು ಶಾಸ್ತ್ರೀಯ ಮಾರ್ಕ್ಸ್‌ ವಾದ ವಾಗಿತ್ತು. ಸಮಾಜದ ಆರ್ಥಿಕ ಬುನಾದಿಯನ್ನು ನಾಶಪಡಿಸುವುದು ಇದರ ಏಕೈಕ ಗುರಿ. ಶ್ರಮಜೀವಿಗಳು ಮತ್ತು ಬಂಡವಾಳಶಾಹಿಗಳ ನಡುವೆ ರಕ್ತಸಿಕ್ತ ಕ್ರಾಂತಿಯನ್ನು ಪ್ರಚೋದಿ ಸುವ ಮೂಲಕ ಅಧಿಕಾರ ಹಿಡಿಯುವ ತಂತ್ರವಿದು.

ರಷ್ಯಾ ಮತ್ತು ಚೀನಾದಂಥ ರಾಷ್ಟ್ರಗಳಲ್ಲಿ ಇದು ಯಶಸ್ವಿಯಾಯಿತು. ಆದರೆ, ಅಮೆರಿಕ ಮತ್ತು ಯುರೋಪ್‌ನಲ್ಲಿ ಈ ತಂತ್ರ ವಿಫಲವಾಯಿತು. ಕಾರಣ, ಅಲ್ಲಿನ ಬಂಡವಾಳಶಾಹಿ ವ್ಯವಸ್ಥೆ ಮತ್ತು ಬಲವಾದ ಸ್ಥಳೀಯ ಸಂಸ್ಕೃತಿಯು ಜನಸಾಮಾನ್ಯರಿಗೆ ಉತ್ತಮ ಜೀವನ ಮಟ್ಟವನ್ನು ನೀಡಿತ್ತು. ಹೊಟ್ಟೆ ತುಂಬಿದ ಕಾರ್ಮಿಕರು ಕ್ರಾಂತಿಗೆ ಸಿದ್ಧರಿರಲಿಲ್ಲ. ಹೀಗಾಗಿ, ಎಡಪಂಥೀಯ ಬುದ್ಧಿಜೀವಿಗಳು ಯುದ್ಧದ ಹಾದಿಯನ್ನು ಬದಲಿಸಲು ನಿರ್ಧರಿಸಿದರು. ಆರ್ಥಿಕವಾಗಿ ಸಮಾಜವನ್ನು ಒಡೆಯಲು ಸಾಧ್ಯವಾಗದಿದ್ದಾಗ, ಎಡಪಂಥೀಯರು ಗುರಿ ಇಟ್ಟಿದ್ದು ಸಂಸ್ಕೃತಿಯ ಮೇಲೆ. ಇದನ್ನೇ ಸಾಂಸ್ಕೃತಿಕ ಮಾರ್ಕ್ಸ್‌ವಾದ ಎಂದು ಕರೆಯ ಲಾಗುತ್ತದೆ.

ಫ್ರಾಂಕ್ ಫರ್ಟ್ ಶಾಲೆಯ ಚಿಂತಕರು ರೂಪಿಸಿದ ಈ ತಂತ್ರದ ಪ್ರಕಾರ, ಒಂದು ದೇಶವನ್ನು ಸೋಲಿಸಬೇಕಾದರೆ ಅದರ ಸೇನೆಯನ್ನು ಸೋಲಿಸಬೇಕಿಲ್ಲ; ಬದಲಾಗಿ ಆ ದೇಶದ ಜನರಿಗೆ ತಮ್ಮದೇ ಇತಿಹಾಸ, ಧರ್ಮ ಮತ್ತು ಪರಂಪರೆಯ ಬಗ್ಗೆ ಕೀಳರಿಮೆ ಮೂಡುವಂತೆ ಮಾಡಿ ದರೆ ಸಾಕು. ವಿಶ್ವವಿದ್ಯಾಲಯಗಳು, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳನ್ನು ವಶಪಡಿಸಿಕೊಳ್ಳುವ ಮೂಲಕ, ಅವರು ವರ್ಗ ಹೋರಾಟದ ಬದಲಿಗೆ ಗುರುತಿನ ರಾಜಕಾರಣವನ್ನು ಮುನ್ನೆಲೆಗೆ ತಂದರು.

ಸ್ತ್ರೀ ವಾದ, ಜಾತಿ ಮತ್ತು ಪ್ರಗತಿಪರತೆಯ ಮುಖವಾಡ ಧರಿಸಿ ಸ್ಥಳೀಯ ಸಂಸ್ಕೃತಿಯನ್ನು ಅವಹೇಳನ ಮಾಡುವುದು ಇವರ ದಿನನಿತ್ಯದ ಕಾಯಕವಾಯಿತು. ನಾವೀಗ ಕಮ್ಯುನಿಸಂನ ಅತ್ಯಂತ ವಿನಾಶಕಾರಿ ಹಂತದಲ್ಲಿದ್ದೇವೆ. ಆರ್ಥಿಕತೆ ಮತ್ತು ಸಂಸ್ಕೃತಿಯನ್ನು ನಿಯಂತ್ರಿಸಿದ ನಂತರ, ಎಡಪಂಥೀಯ ಸಿದ್ಧಾಂತಕ್ಕೆ ಉಳಿದಿರುವ ಏಕೈಕ ತಡೆಗೋಡೆ ಎಂದರೆ ಕುಟುಂಬ ವ್ಯವಸ್ಥೆ. ಕುಟುಂಬವು ನಾಗರಿಕತೆಯ ಮೂಲ ಘಟಕ.

ಎಲ್ಲಿಯವರೆಗೆ ಕುಟುಂಬ ವ್ಯವಸ್ಥೆ ಭದ್ರವಾಗಿರುತ್ತದೆಯೋ, ಅಲ್ಲಿಯವರೆಗೆ ವ್ಯಕ್ತಿಯು ತನ್ನ ಪೋಷಕರಿಗೆ ಮತ್ತು ಪೂರ್ವಜರಿಗೆ ನಿಷ್ಠನಾಗಿರುತ್ತಾನೆ ಹೊರತು ಪ್ರಭುತ್ವಕ್ಕಲ್ಲ. ಈ ಕಾರಣ ಕ್ಕಾಗಿಯೇ ‘ವೋಕಿಸಂ’ ಕುಟುಂಬವನ್ನು ಗುರಿಯಾಗಿಸಿಕೊಂಡಿದೆ. ಇದಕ್ಕಾಗಿ ಅವರು ಲಿಂಗತ್ವ ಮತ್ತು ಲೈಂಗಿಕತೆಯನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ.

ಗಂಡು-ಹೆಣ್ಣು ಎಂಬುದು ನೈಸರ್ಗಿಕವಲ್ಲ, ಅದು ಕೇವಲ ಸಾಮಾಜಿಕ ಕಲ್ಪನೆ ಎಂಬ ಅವೈಜ್ಞಾನಿಕ ವಾದವನ್ನು ಮಕ್ಕಳ ತಲೆಯಲ್ಲಿ ತುಂಬಲಾಗುತ್ತಿದೆ. ಪೋಷಕರ ವಿರೋಧ ವನ್ನೂ ಲೆಕ್ಕಿಸದೆ ಮಕ್ಕಳು ತಮ್ಮ ಲಿಂಗ ಬದಲಾವಣೆಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಪ್ರಚೋದಿಸಲಾಗುತ್ತಿದೆ. ಇದು ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧ ವನ್ನು ಶಾಶ್ವತವಾಗಿ ನಾಶಮಾಡುವ ಹುನ್ನಾರ.

ಛಿದ್ರಗೊಂಡ ಕುಟುಂಬಗಳು ಮತ್ತು ಗೊಂದಲಕ್ಕೀಡಾದ ಯುವಪೀಳಿಗೆಯನ್ನು ಆಳುವುದು ಜಾಗತಿಕ ಶಕ್ತಿಗಳಿಗೆ ಅತ್ಯಂತ ಸುಲಭ. ಎಲ್ಲಿ ಬಂದೂಕುಗಳು ಮತ್ತು ಆರ್ಥಿಕ ಸಿದ್ಧಾಂತಗಳು ಸೋತವೋ, ಅಲ್ಲಿ ‘ವೋಕಿಸಂ’ ಗೆದ್ದಿದೆ. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಸಾಂಪ್ರ ದಾಯಿಕ ಕಮ್ಯುನಿಸಂ (ಆರ್ಥಿಕ ಮಾರ್ಕ್ಸ್‌ವಾದ) ನೆಲಕಚ್ಚಿತ್ತು; ಆದರೆ ಇಂದು ಅದೇ ರಾಷ್ಟ್ರಗಳು ‘ಸಾಂಸ್ಕೃತಿಕ ಮಾರ್ಕ್ಸ್ ವಾದ’ದ ಮುಂದೆ ಮಂಡಿಯೂರಿವೆ.

ಅಲ್ಲಿನ ಸಮಾಜವನ್ನು ನಿಯಂತ್ರಿಸುತ್ತಿರುವುದು ಈಗ ಸರಕಾರಗಳಲ್ಲ, ಬದಲಾಗಿ Politically Correct ಎಂದು ಹಠ ಹಿಡಿಯುವ ಸಣ್ಣ ಉಗ್ರಗಾಮಿ ಸಿದ್ಧಾಂತವಾದಿಗಳ ಗುಂಪುಗಳು. ಅಮೆರಿಕದಲ್ಲಿ ಇಂದು ಗಂಡು ಹೆಣ್ಣಾಗಲು ಸಾಧ್ಯವಿಲ್ಲ ಎಂಬ ನಗ್ನಸತ್ಯ ವನ್ನು ಹೇಳಿದರೆ ಸಾಕು, ಆ ವ್ಯಕ್ತಿ ತನ್ನ ಕೆಲಸವನ್ನೇ ಕಳೆದುಕೊಳ್ಳುತ್ತಾನೆ.

ಇದಕ್ಕೆ ಅವರು ಇಟ್ಟಿರುವ ಹೆಸರೇ ‘ಕ್ಯಾನ್ಸಲ್ ಕಲ್ಚರ್’. ಅಲ್ಲಿನ ಬಹುಸಂಖ್ಯಾತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಲಿಂಗ ಅಲ್ಪಸಂಖ್ಯಾತ ಅಸ್ಮಿತೆಯ ಗುಂಪುಗಳು, ಭಾವನಾತ್ಮಕತೆಯನ್ನೇ ಬಂಡವಾಳವನ್ನಾಗಿಸಿ ಕೊಂಡು, ಮಾಧ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಇಡೀ ಸಮಾಜದ ನೈತಿಕತೆಯನ್ನು ನಿಯಂತ್ರಿಸುತ್ತಿವೆ.

ಹೀಗೆ, ಯುದ್ಧವಿಲ್ಲದೆಯೇ ಪಾಶ್ಚಿಮಾತ್ಯ ನಾಗರಿಕತೆ ಒಳಗಿನಿಂದಲೇ ಕುಸಿಯುತ್ತಿದೆ. ಇಂದು ಈ ಸೈದ್ಧಾಂತಿಕ ಯುದ್ಧವನ್ನು ನಡೆಸುತ್ತಿರುವುದು ಕೇವಲ ಬೀದಿ ಹೋರಾಟಗಾರರಲ್ಲ; ಜಗತ್ತಿನ ಬೃಹತ್ ಕಾರ್ಪೊರೇಟ್ ಕಂಪನಿಗಳು ಈ ಯುದ್ಧದ ರೂವಾರಿಗಳು.

ಪ್ರಜಾಪ್ರಭುತ್ವವಾದಿ ಸಮಾಜವಾದ, ಸುಸ್ಥಿರ ಅಭಿವೃದ್ಧಿ ಗುರಿಗಳು ಮುಂತಾದ ಸುಂದರ ಹೆಸರುಗಳ ಅಡಿಯಲ್ಲಿ ವಿನಾಶಕಾರಿ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ESG (ಪರಿಸರ, ಸಾಮಾಜಿಕ ಮತ್ತು ಆಡಳಿತ)- ಇದೊಂದು ರೀತಿಯಲ್ಲಿ ಕಂಪನಿಗಳಿಗೆ ನೀಡುವ ನಡವಳಿಕೆ ಯ ಅಂಕಪಟ್ಟಿ. ಯಾವ ಕಂಪನಿಯು ‘ವೋಕ್’ ಅಜೆಂಡಾವನ್ನು ಬೆಂಬಲಿಸುವು ದಿಲ್ಲವೋ, ಅದಕ್ಕೆ ಬಂಡವಾಳ ಹೂಡಿಕೆ ಸಿಗುವುದಿಲ್ಲ.

ಇದು ಮುಕ್ತ ಮಾರುಕಟ್ಟೆಯ ಕುತ್ತಿಗೆ ಹಿಸುಕುವ ತಂತ್ರ. DEI (ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ)- ಸಮಾನತೆಯ ಹೆಸರಿನಲ್ಲಿ, ಅರ್ಹತೆ ಮತ್ತು ದಕ್ಷತೆಯನ್ನು ಬದಿಗಿಟ್ಟು, ಕೇವಲ ಜಾತಿ, ಲಿಂಗ ಮತ್ತು ಅಸ್ಮಿತೆಯ ಆಧಾರದ ಮೇಲೆ ಹುದ್ದೆಗಳನ್ನು ನೀಡುವ ವ್ಯವಸ್ಥೆ ಇದಾ ಗಿದೆ. ಇದು ಸಂಸ್ಥೆಗಳ ಗುಣಮಟ್ಟವನ್ನು ಕುಸಿಯುವಂತೆ ಮಾಡುತ್ತದೆ ಮತ್ತು ಸಮಾಜ ದಲ್ಲಿ ಹೊಸ ರೀತಿಯ ಅಸಮಾನತೆಯನ್ನು ಸೃಷ್ಟಿಸುತ್ತದೆ.

ವೋಕಿಸಂ ಕೇವಲ ಒಂದು ಪಾಶ್ಚಿಮಾತ್ಯ ಟ್ರೆಂಡ್ ಅಲ್ಲ; ಅದೊಂದು ಜಾಗತಿಕ ಪಿಡುಗು. ರಾಷ್ಟ್ರಗಳ ಸಾರ್ವಭೌಮತ್ವವನ್ನು ನಾಶಪಡಿಸಿ, ಇತಿಹಾಸವಿಲ್ಲದ, ಧರ್ಮವಿಲ್ಲದ ಮತ್ತು ಕುಟುಂಬವಿಲ್ಲದ ‘ಜಾಗತಿಕ ಪ್ರಜೆ’ಗಳನ್ನು ಸೃಷ್ಟಿಸುವುದು ಇದರ ಅಂತಿಮ ಉದ್ದೇಶ.

ಭಾರತದಂಥ ಸನಾತನ ಸಂಸ್ಕೃತಿಯುಳ್ಳ ರಾಷ್ಟ್ರಕ್ಕೆ ಇದು ಬಲುದೊಡ್ಡ ಸವಾಲು. ನಮ್ಮ ಕುಟುಂಬ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು, ನಮ್ಮ ಪರಂಪರೆಯನ್ನು ಗೌರವಿಸುವುದು ಮತ್ತು ಈ ‘ನಕಲಿ ಪ್ರಗತಿಪರ’ ಸಿದ್ಧಾಂತಗಳ ಹಿಂದಿರುವ ರಾಜಕೀಯ ಹುನ್ನಾರವನ್ನು ಅರ್ಥಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಸಮಾಜವು ಈಗಲಾದರೂ ಮೌನ ಮುರಿದು, ಈ ಬೌದ್ಧಿಕ ಆಕ್ರಮಣದ ವಿರುದ್ಧ ಧ್ವನಿ ಎತ್ತದಿದ್ದರೆ, ಮುಂದಿನ ಪೀಳಿಗೆ ತನ್ನತನವನ್ನು ಕಳೆದುಕೊಂಡು ಪಶ್ಚಿಮದಂತೆ ದಾಸ್ಯಕ್ಕೆ ಜಾರುವುದರಲ್ಲಿ ಅನುಮಾನವಿಲ್ಲ.

(ಲೇಖಕರು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)