ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಮಾನದಿಂದಲೇ ದೇವರನ್ನು ತೋರಿಸಿದ ಆ ಪೈಲಟ್

ಮೆಲ್ಬರ್ನ್ ಎಂಸಿಜಿ ಕ್ರೀಡಾಂಗಣದಲ್ಲಿ ಸುಮಾರು 93 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಆಸ್ಟ್ರೇ ಲಿಯಾ-ನ್ಯೂಜಿಲೆಂಡ್ ನಡುವೆ ಅಂತಿಮ ಪಂದ್ಯ. ಅದೇ ದಿನ ನಾನು ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಟಿಕೆಟ್ ಬುಕ್ ಮಾಡುವಾಗ ಆ ದಿನ ಫೈನಲ್ ಪಂದ್ಯವಿರುತ್ತದೆಂಬುದನ್ನು ಯೋಚಿಸಲೇ ಇಲ್ಲ.

ವಿಮಾನದಿಂದಲೇ ದೇವರನ್ನು ತೋರಿಸಿದ ಆ ಪೈಲಟ್

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅಂಕಣ

ನೂರೆಂಟು ವಿಶ್ವ

vbhat@me.com

ಆ ಪೈಲಟ್ ಹಾಗಿರಲಿಲ್ಲ! ಕೆಲವು ಪೈಲಟ್‌ಗಳು ಮಾತೇ ಆಡುವುದಿಲ್ಲ. ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ವಿಮಾನ ಟೇಕಾಫ್ ಆಗುತ್ತಿದ್ದಂತೆ, ತಮ್ಮದೇ ಹರಟೆಯಲ್ಲಿ ನಿರತರಾಗಿ‌ ಬಿಡುತ್ತಾರೆ. ಕೆಲವು ಪೈಲಟ್‌ಗಳು ವಿಮಾನ ಎಷ್ಟು ಎತ್ತರದಲ್ಲಿ ಹಾರುತ್ತಿದೆ, ಹೊರಗಿನ ತಾಪಮಾನ ಎಷ್ಟಿದೆ, ಯಾವ ನಗರ, ದೇಶದ ಮೇಲೆ ಹಾರುತ್ತಿದ್ದೇವೆ... ಇತ್ಯಾದಿ ವಿವರಗಳನ್ನು ಪ್ರಯಾಣಿಕರಿಗೆ ವಿಮಾನದೊಳಗಿನ ಧ್ವನಿವರ್ಧಕಗಳ ಮೂಲಕ ತಿಳಿಸುತ್ತಾರೆ. ಇನ್ನು ಕೆಲವರು ಇದನ್ನೂ ಹೇಳುವುದಿಲ್ಲ. ಪ್ರಯಾಣಿಕರಂತೂ ಪೈಲಟ್‌ಗಳ ಮುಖ ಸಹ ನೋಡಿರುವುದಿಲ್ಲ. ಅವರ ಜತೆ ವ್ಯವಹರಿಸುವ ಪ್ರಸಂಗವೂ ಬರುವುದಿಲ್ಲ. ಹೀಗಿರುವಾಗ ಪ್ರಯಾಣಿಕರ ಜತೆ ಮಾತುಕತೆ ಏಕೆ ಎಂಬ ಭಾವನೆಯೂ ಇದ್ದಿರಬಹುದು. 10 ವರ್ಷದ ಹಿಂದೆ ಏಕದಿನ ಕ್ರಿಕೆಟ್ ಪಂದ್ಯದ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿತ್ತು.

ಮೆಲ್ಬರ್ನ್ ಎಂಸಿಜಿ ಕ್ರೀಡಾಂಗಣದಲ್ಲಿ ಸುಮಾರು 93 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವೆ ಅಂತಿಮ ಪಂದ್ಯ. ಅದೇ ದಿನ ನಾನು ಇಥಿಯೋಪಿ ಯಾದ ಅಡಿಸ್ ಅಬಾಬಾದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಟಿಕೆಟ್ ಬುಕ್ ಮಾಡುವಾಗ ಆ ದಿನ ಫೈನಲ್ ಪಂದ್ಯವಿರುತ್ತದೆಂಬುದನ್ನು ಯೋಚಿಸಲೇ ಇಲ್ಲ.

ಇದನ್ನೂ ಓದಿ: Vishweshwar Bhat Column: ಇಕಿಗಾಯಿ ಅರಿಯದೇ ಜಪಾನ್‌ ಸರಿಯಾಗಿ ಅರ್ಥವಾಗುವುದುಂಟೇ ?

ಆದರೆ ಪ್ರಯಾಣದ ಹಿಂದಿನ ದಿನ ಈ ಸಂಗತಿ ಗೊತ್ತಾಯಿತು. ಆದರೆ ಪ್ರಯಾಣವನ್ನು ಮುಂದೂಡುವಂತಿರಲಿಲ್ಲ. ಹಾಗೆಂದು ಫೈನಲ್ ಪಂದ್ಯ ತಪ್ಪಿಸಿಕೊಳ್ಳಲೂ ಮನಸ್ಸಿರಲಿಲ್ಲ. ಒಲ್ಲದ ಮನಸ್ಸಿನಿಂದ ವಿಮಾನವನ್ನೇರಿದೆ. ವಿಮಾನವೇರುವ ಹೊತ್ತಿಗೆ ನ್ಯೂಜಿಲ್ಯಾಂಡ್ 45 ಓವರ್‌ಗಳಲ್ಲಿ 183 ರನ್‌ಗೆ ಆಲೌಟ್ ಆಗಿತ್ತು. ಪಂದ್ಯ ಏನಾಗಬಹುದೆಂಬ ಕುತೂಹಲ. ವಿಮಾನ ಟೇಕಾಫ್ ಆಗಿ ಕೆಲ ಸಮಯದ ನಂತರ, ಪೈಲಟ್ ಅನೌನ್ಸ್ ಮಾಡಿದ- ‘ನಿಮ್ಮಲ್ಲಿ ಅನೇಕರು ಕ್ರಿಕೆಟ್ ಅಭಿಮಾನಿಗಳಿದ್ದಿರಬಹುದು. ಅವರಿಗಾಗಿ ನಾನು ಪ್ರತಿ ಓವರ್‌ನ ಬೆಳವಣಿಗೆಗಳನ್ನು ನೀಡುತ್ತೇನೆ. ‌

ಕ್ರಿಕೆಟ್ ಮ್ಯಾಚ್ ನೋಡಲಾಗಲಿಲ್ಲ ಎಂಬ ಬೇಸರ ಬೇಡ. ನೀವೆಲ್ಲರೂ ಶಾಂತ ರೀತಿಯಿಂದ ಕೇಳಿ ಸಹಕರಿಸಿ.’ ಇಡೀ ವಿಮಾನದಲ್ಲಿ ಇದ್ದವರೆಲ್ಲ ‘ಹೋ’ ಎಂದು ಕೂಗಿ ಸಂಭ್ರಮಿಸಿದರು. ಕ್ರಿಕೆಟ್ ಪಂದ್ಯ ತಪ್ಪಿಹೋಯಿತಲ್ಲ ಎಂದು ವಿಷಾದವಾಗಲಿಲ್ಲ. ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಪ್ರತಿ ಓವರ್‌ನ ಮಾಹಿತಿ ಪಡೆದು, ಪ್ರಯಾಣಿಕರಿಗೆ ಒಪ್ಪಿಸುತ್ತಿದ್ದ. ಕೊನೆ ಕೊನೆಗೆ ಪ್ರತಿ ಬಾಲ್‌ನ ವಿವರ ನೀಡುತ್ತಾ ವೀಕ್ಷಕ ವಿವರಣಕಾರನಾದ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 33 ಓವರ್ ಗಳಲ್ಲಿ ಮೂರು ವಿಕೆಟ್‌ಗೆ 186 ರನ್ ಹೊಡೆದು ವಿಶ್ವಕಪ್ ಬಾಚಿಕೊಂಡಿತು!

parvata ok

ವಿಮಾನದಲ್ಲಿ ಕೆಲವು ಆಸ್ಟ್ರೇಲಿಯನ್ ಪ್ರಜೆಗಳೂ ಇದ್ದರು. ಅವರೆಲ್ಲ ವಿಮಾನದಲ್ಲಿ ಕೂಗಿ, ಕಿರುಚಾಡಿ, ಸಂಭ್ರಮಿಸಿದರು. ನನಗೆ ಪೈಲಟ್‌ನ ಆಸಕ್ತಿ, ಪ್ರಯಾಣಿಕರಿಗೆ ಎಲ್ಲ ವಿವರ ನೀಡಬೇಕೆಂಬ ಕಳಕಳಿ ಬಹಳ ಖುಷಿ ನೀಡಿತು. ಆತ ಆ ಎಲ್ಲ ತಾಪತ್ರಯಗಳನ್ನು ತೆಗೆದುಕೊಳ್ಳಬೇಕಾದ ಆಗತ್ಯವಿರಲಿಲ್ಲ. ಆದರೆ ಪ್ರಯಾಣಿಕರ ಕ್ರಿಕೆಟ್ ಹಸಿವು ನೀಗಿಸಲು ಆತ ಅಂದು ಸಾಕಷ್ಟು ಮುತುವರ್ಜಿ ವಹಿಸಿದ್ದ.

ಸಾಕಷ್ಟು ಪರಿಶ್ರಮವನ್ನೂ ಹಾಕಿದ್ದ. ವಿಮಾನ ಲ್ಯಾಂಡ್ ಆದ ಬಳಿಕ ಕಾಕ್‌ಪಿಟ್‌ನ ಹತ್ತಿರ ಹೋಗಿ ನಾನು ಪೈಲಟ್‌ನಿಗೆ ಧನ್ಯವಾದ ಹೇಳಿ ಬಂದೆ. ಆನಂತರ ಎಲ್ಲರೂ ಅವನ ಕೈಕುಲುಕಿ ಬಂದರು. ನನಗೆ ಅವನ ಬಗ್ಗೆ ಅತೀವ ಹೆಮ್ಮೆ ಹಾಗೂ ಅಭಿಮಾನ ಮೂಡಿತು.

ಇದೇ ರೀತಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ದಿನ ನಾನು ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದೆ. ಅಂದೂ ಸಹ ಪೈಲಟ್, ಚುನಾವಣೆ ಫಲಿತಾಂಶವನ್ನು ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಹೇಳುತ್ತಿದ್ದ. ಯಾವ ಯಾವ ಕ್ಷೇತ್ರದಲ್ಲಿ ಯಾರು ಮುಂದಿದ್ದಾರೆ, ಪಕ್ಷಗಳ ಬಲಾಬಲ ವಿವರಗಳನ್ನೆಲ್ಲ ಒಪ್ಪಿಸುತ್ತಿದ್ದ. ಪ್ರಯಾಣಿಕರೆಲ್ಲ ತದೇಕಚಿತ್ತದಿಂದ ಕೇಳುತ್ತಿದ್ದರು. ಇಂಥ ಪೈಲಟ್‌ಗಳು ಅಪರೂಪ. ತಮ್ಮ ವಿಮಾನದಲ್ಲಿ ಪ್ರಯಾಣಿಸುವ ‘ಅತಿಥಿ’ಗಳಿಗೆ ಏನಾದರೂ ವಿಶೇಷ ಅನುಭವ ನೀಡಲು ಸದಾ ಕಾತರರಾಗಿರುತ್ತಾರೆ.

ಇದರಿಂದ ಏರ್‌ಲೈನ್ಸ್ ಕಂಪನಿಯವರೇನು ಶಹಭಾಷ್ ಅನ್ನುವುದಿಲ್ಲ. ಪ್ರಯಾಣಿಕರು ‘ಥ್ಯಾಂಕ್ಸ್’ ಎಂದೂ ಹೇಳುವುದಿಲ್ಲ. ಕೆಲವರು ವಿಮಾನದಲ್ಲಿ ನಿದ್ದೆ ಮಾಡಲು ಬಿಡಲಿಲ್ಲ ಎಂದು ಗೊಣಗುವುದೂ ಉಂಟು. ಏನೇ ಆಗಲಿ, ಪೈಲಟ್‌ಗಳ ಈ ‘ಅತಿ ಉತ್ಸಾಹ ಹಾಗೂ ಅತಿ ಕಾಳಜಿ’ಯನ್ನು ಮೆಚ್ಚಲೇಬೇಕು. ಪ್ರಯಾಣಿಕರ ಅಗತ್ಯ, ಆಸಕ್ತಿ ಅರಿತು ಹೆಚ್ಚು ಶ್ರಮ ವಹಿಸಿ ಅವರ ಕುತೂಹಲ ತಣಿಸುವ ಪ್ರಯತ್ನ ಮಾಡುತ್ತಾರೆ.

ಯುರೋಪಿನ ಕೆಲದೇಶಗಳಲ್ಲಿ ಪ್ರಯಾಣ ಮಾಡುವಾಗ, ಪೈಲಟ್ ಸುರಕ್ಷಿತವಾಗಿ, Smooth landing ಮಾಡಿದರೆ, ಪ್ರಯಾಣಿಕರು ಚಪ್ಪಾಳೆ ಹೊಡೆದು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಪ್ರಯಾಣಿಕರು ಮತ್ತು ಪೈಲಟ್‌ಗಳ ಮಧ್ಯೆ ಇಂಥದೊಂದು ಸುಮಧುರ ಕೊಡು-ಕೊಳ್ಳುವಿಕೆ ಯಿರಬೇಕು. ಆದರೆ ಬಹುತೇಕ ಸಂದರ್ಭಗಳಲ್ಲಿ ಇದು ನಡೆಯುವುದೇ ಇಲ್ಲ.

ಪೈಲಟ್‌ಗಳೂ ಬಾಯಿಗೆ ಬೀಗ ಹಾಕಿ ಕುಳಿತಿರುತ್ತಾರೆ. ಸುರಕ್ಷಿತವಾಗಿ ಕರೆತಂದ ಪೈಲಟ್ ಹಾಗೂ ಗಗನಸಖಿಯರಿಗೆ ಧನ್ಯವಾದವನ್ನೂ ಸಲ್ಲಿಸುವುದಿಲ್ಲ. ನಾನು ದಕ್ಷಿಣ ಆಫ್ರಿಕಾದ ಜೋಹಾನೆಸ್‌ಬರ್ಗ್‌ದಿಂದ ಕೀನ್ಯಾದ ರಾಜಧಾನಿ ನೈರೋಬಿಗೆ ಕೀನ್ಯಾ ಏರ್‌ವೇಸ್ ವಿಮಾನದಲ್ಲಿ ಬರುತ್ತಿದ್ದೆ. ಅದೇ ದಿನ ಬೆಳಗ್ಗೆ ದಕ್ಷಿಣ ಆಫ್ರಿಕಾದ ತುತ್ತತುದಿಯಲ್ಲಿರುವ ಕೇಪ್‌ಟೌನ್‌ನಿಂದ ಜೋಹಾನೆಸ್ ಬರ್ಗ್‌ಗೆ ಬಂದಿದ್ದೆ.

ಎರಡು ಗಂಟೆ ವಿಮಾನ ಪ್ರಯಾಣದ ನಂತರ, ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ಕಾಯು ವಂತಾಗಿತ್ತು. ನಿದ್ದೆಯಿಲ್ಲದೇ ದಣಿದಿದ್ದರಿಂದ ಜೋಹಾನೆಸ್‌ ಬರ್ಗ್‌ನಲ್ಲಿ ವಿಮಾನವನ್ನೇರಿದವನೇ ಮಲಗಿಬಿಟ್ಟೆ. ಜೋರು ನಿದ್ದೆ ಕಣ್ಣಿನೊಳಗೆ ಇಳಿದಿತ್ತು. ನಾನು ಗಾಢ ನಿದ್ದೆಯಲ್ಲಿದ್ದಾಗ ಪೈಲಟ್ ಏನೋ ಅನೌನ್ಸ್ ಮಾಡುತ್ತಿದ್ದ. ಆತ ಏನು ಹೇಳುತ್ತಿದ್ದಾನೆಂಬುದು ನಿದ್ದೆಗಣ್ಣಿನಲ್ಲಿದ್ದ ನನಗೆ ಸ್ಪಷ್ಟವಾಗಲಿಲ್ಲ. ಆದರೆ ಆತ ಹೇಳಿದ ಒಂದು ಪದ ಮಾತ್ರ ಸ್ಪಷ್ಟವಾಗಿ ಕೇಳಿಸಿತು.

ಮೌಂಟ್ ಕಿಲಿಮಂಜಾರೋ!

ದಡಕ್ಕನೆ ಎದ್ದು ಕುಳಿತೆ. ಪಕ್ಕದಲ್ಲಿದ್ದ ಪ್ರಯಾಣಿಕನನ್ನು ಕೇಳಿದೆ. ಆತನಿಗೂ ಸ್ಪಷ್ಟವಾಗಿ ಪೈಲಟ್ ಏನು ಹೇಳಿದ್ದಾನೆಂಬುದು ತಿಳಿದಿರಲಿಲ್ಲ. ಗಗನಸಖಿಯನ್ನು ಕೇಳಿದೆ. ಆಕೆ ‘ಒನ್ ಮಿನಿಟ್’ ಎಂದು ಹೇಳಿ ಹೋದವಳು ಬರಲೇ ಇಲ್ಲ. ಅಷ್ಟ್ರರೊಳಗೆ ಪೈಲಟ್ ಪುನಃ ಅನೌನ್ಸ್ ಮಾಡಿದ -‘ಈಗ ನಾವು ಟಾಂಜೇನಿಯಾ ದೇಶದ ಮೇಲೆ ಹಾರುತ್ತಿದ್ದೇವೆ.

ಇಲ್ಲಿ ಜಗತ್ಪ್ರಸಿದ್ಧವಾದ ಮೌಂಟ್ ಕಿಲಿಮಂಜಾರೋ ಎಂಬ ಪರ್ವತವಿದೆ. ಸಾಮಾನ್ಯವಾಗಿ ಈ ಪರ್ವತ ಮೋಡದಿಂದ ಮುಚ್ಚಿರುತ್ತದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಕಾಣಲೂಬಹುದು. ಆ ಪರ್ವತ ಕಾಣಲು ಇನ್ನೂ ಇಪ್ಪತ್ತು ನಿಮಿಷ ಪ್ರಯಾಣಿಸಬೇಕಾಗಬಹುದು. ನಾನು ಈ ಮಾರ್ಗದಲ್ಲಿ ಹಲವು ವರ್ಷಗಳಿಂದ ಪ್ರಯಾಣಿಸಿದ್ದೆ. ನನಗೆ ಹತ್ತು-ಹನ್ನೆರಡು ಸಲ ಮಾತ್ರ ಗೋಚರವಾಗಿತ್ತು.

ಉಳಿದ ಸಂದರ್ಭದಲ್ಲಿ ಈ ಪರ್ವತ ಮೋಡದಿಂದ ಮುಚ್ಚಿರುತ್ತದೆ. ಇದು ನಿಮ್ಮ ಅದೃಷ್ಟ ಪರೀಕ್ಷೆಯೂ ಹೌದು. ಯಾವುದಕ್ಕೂ ಎಚ್ಚರವಾಗಿರಿ.’ ವಾವ್ ! ಮೌಂಟ್ ಕಿಲಿಮಂಜಾರೋ !! ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಕಾರಣ ಅದನ್ನು ನೋಡಲೇಬೇಕೆಂಬುದು ನನ್ನ ಜೀವಮಾನದ ಕನಸು. ಹೈಸ್ಕೂಲಿನಲ್ಲಿ ಭೂಗೋಳ ಓದುವಾಗ, ಆ ಪರ್ವತದ ಬಗ್ಗೆ ಮೊದಲ ಬಾರಿಗೆ ಕೇಳಿದ್ದೆ.

ನಮಗೆ ಹಬ್ಬು ಮಾಸ್ತರರೆಂಬುವವರು ಇದ್ದರು. ಅವರು ಬಹಳ ಸ್ವಾರಸ್ಯವಾಗಿ ಆ ಪರ್ವತದ ಬಗ್ಗೆ ಹೇಳಿದ್ದರು. ಇದು ಸುಮಾರು ಮೂವತ್ತೇಳು ವರ್ಷಗಳ ಹಿಂದೆ. ಅಂದಿನಿಂದಲೂ ಕಿಲಿಮಂಜಾರೋ ನನ್ನ ಮನಸ್ಸಿನಲ್ಲಿ ಅಚ್ಚರಿಯ ಪರ್ವತವಾಗಿ ಬೆಳೆಯುತ್ತಲೇ ಇದೆ. ಕೆಲವು ವರ್ಷಗಳ ಹಿಂದೆ, ಟಾಂಜೇನಿಯಾಕ್ಕೆ ಹೋಗಿದ್ದಾಗಲೂ ಆ ಪರ್ವತದ ಕಡೆಗೆ ಹೋಗಲು ಆಗಿರಲಿಲ್ಲ.

ಒಮ್ಮೆ ‘ಡಿಸ್ಕವರಿ’ ಚಾನೆಲ್‌ನಲ್ಲಿ ಐದಾರು ವರ್ಷಗಳ ಹಿಂದೆ, ಮೌಂಟ್ ಕಿಲಿಮಂಜಾರೋ ಬಗ್ಗೆ ಒಂದು ಅಪರೂಪದ ಸಾಕ್ಷ್ಯಚಿತ್ರ ನೋಡಿದ್ದೆ. ಅದು ನನ್ನ ಕೌತುಕದ ಗೊಣವೆಗೆ ಬೆಂಕಿ ಹಚ್ಚಿದಂತಾಗಿತ್ತು. ಕಿಲಿಮಂಜಾರೋ ಪರ್ವತದ ಬೆರಗುಗಳನ್ನು ಅನಾವರಣಗೊಳಿಸಿತ್ತು. ಅದಾದ ಬಳಿಕ ನಾನು ಕಿಲಿಮಂಜಾರೋ ಕುರಿತ ಪುಸ್ತಕ, ಸಿಡಿ, ಸಾಕ್ಷ್ಯಚಿತ್ರಗಳಿಗಾಗಿ ತಡಕಾಡಲಾರಂಭಿಸಿದೆ. ಸೆರೆಬ್ರಲ್ ಪಾಲ್ಸಿಗೆ ತುತ್ತಾಗಿ, ಕಿಲಿಮಂಜಾರೋವನ್ನು ಏರಿದ ಬೋನ್ನರ್ ಪಡ್ಡೋಕ್ ಎಂಬಾತ ಬರೆದ One more step ಎಂಬ ಕೃತಿ ಓದಿದೆ. ಆ ಲೇಖಕ ಪರ್ವತದ ಬಗ್ಗೆ ಹೊಸ ಚಿತ್ರಣ ಕಟ್ಟಿಕೊಟ್ಟಿದ್ದ.

ಪಡ್ಡೋಕ್ ಮೂಲತಃ ಪರ್ವತಾರೋಹಿ ಅಲ್ಲ. ಕಿಲಿಮಂಜಾರೋ ಪರ್ವತವನ್ನು ಏರುತ್ತೇನೆಂದು ಹೇಳಿದಾಗ, ಯಾವ ಕಾರಣಕ್ಕೂ ಅಂಥ ದುಸ್ಸಾಹಸಕ್ಕೆ ಮುಂದಾಗಬೇಡ ಎಂದು ಅವನ ವೈದ್ಯರು ಬುದ್ಧಿಮಾತು ಹೇಳಿದರು. ಆದರೆ ಆತ ಕೇಳಲಿಲ್ಲ. ತನ್ನಲ್ಲಿರುವ ನ್ಯೂನತೆಗಳನ್ನು ಆತನಿಗೆ ಗೆಲ್ಲಲೇಬೇಕಿತ್ತು. ಹೀಗಾಗಿ ಆತ ಹರಸಾಹಸಕ ಮುಂದಾದ. 2011 ರಲ್ಲಿ ತನ್ನ ಸಾಹಸಗಾಥೆಯನ್ನು ಚಿತ್ರಿಸುವ Beyond Limits ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ. ನಾನು ಇದನ್ನು ನೋಡಿದ್ದೆ. ಬ್ರಿಟನ್ನಿನ ಆರನ್ ಫಿಪ್ಪ್ಸ ಎಂಬ ಎರಡೂ ಕಾಲಿಲ್ಲದ ಪ್ಯಾರಾ ಒಲಿಂಪಿಕ್ ಅಥ್ಲೀಟ್ ವೀಲ್‌ಚೇರ್‌ನಲ್ಲಿ ಕಿಲಿಮಂಜಾರೋ ಪರ್ವತವನ್ನೇರಿದಾಗ ನನಗೆ ರೋಮಾಂಚನವಾಗಿತ್ತು.

ಈ ಸಾಹಸಕ್ಕಾಗಿ ಆತ ಯಾರ ಸಹಾಯವನ್ನೂ ಪಡೆದಿರಲಿಲ್ಲ. 33 ವರ್ಷದ, ಎರಡು ಮಕ್ಕಳ ತಂದೆಯಾದ ಫಿಪ್ಪ್ಸ ಈ ಸಾಹಸವನ್ನು ಮಾಡಿದಾಗ, ಬ್ರಿಟನ್ನಿನ ರಾಣಿ ಅವನ ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿ ಬಂದಳು. ಎಂಟು ದಿನಗಳ ಕಾಲ ಆತ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ತನ್ನೆಲ್ಲ ದೌರ್ಬಲ್ಯಗಳನ್ನು ಮೀರಿ ಆತ ಆ ಅಗಾಧ ಸಾಧನೆ ಮೆರೆದಿದ್ದ.

‘ಆಫ್ರಿಕಾದ ಛಾವಣಿ’ ( Roof Of Africa) ಎಂದು ಕರೆಯಿಸಿಕೊಳ್ಳುವ ಈ ಪರ್ವತವನ್ನು ಅದಾದ ಬಳಿಕ ಅನೇಕ ವಿಕಲಚೇತನರು ಏರಿದ್ದಾರೆ. ‘ಕಿಲಿಮಂಜಾರೋ : ಟು ದಿ ರೂಫ್ ಆಫ್ ಆಫ್ರಿಕಾ’ ಮತ್ತು ‘ದಿ ಸ್ನೋ ಆಫ್ ಕಿಲಿಮಂಜಾರೋ’ ಎಂಬ ಎರಡು ಸಿನಿಮಾಗಳು ಈ ಪರ್ವತದ ಬಗ್ಗೆ ಇರುವ ಕಲ್ಪನೆಗಳನ್ನು ಮತ್ತಷ್ಟು ಹಿರಿದುಗೊಳಿಸಿದ್ದು ಸುಳ್ಳಲ್ಲ. ‌

ಈ ಪರ್ವತದ ಬಗ್ಗೆ ಸಾವಿರಾರು ಪುಸ್ತಕಗಳು ಪ್ರಕಟವಾಗಿವೆ. ನಮ್ಮ ಕನ್ನಡದ ಕತೆಗಾರ ವಸುಧೇಂದ್ರ ಸಹ ಕಿಲಿಮಂಜಾರೋ ಏರಿ ಬಂದಿದ್ದಾರೆ. ಪ್ರಶಾಂತ್ ಎಂಬ ಕನ್ನಡಿಗರೊಬ್ಬರು ಸಹ ಈ ಪರ್ವತವನ್ನೇರಿ ‘ಕಿಲಿಮಂಜಾರೋ’ ಎಂಬ ಪುಸ್ತಕ ಬರೆದಿದ್ದಾರೆ. ಯಾರ‍್ಯಾರು ಇದರ ನೆತ್ತಿ ಮೇಲೆ ಕಾಲನ್ನೂರಿ ಬಂದಿದ್ದಾರೋ ಅವರೆಲ್ಲ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಕಿಲಿಮಂಜಾರೋ ಬಗ್ಗೆ ಯಾವ ಪುಸ್ತಕವೂ ಒಂದೇ ಥರ ಇಲ್ಲವಂತೆ. ಅಂದರೆ ಈ ಪರ್ವತ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸುತ್ತದೆ. ಅಲ್ಲದೇ ಇದು ಎಲ್ಲ ದಿನ ಒಂದೇ ರೀತಿ ಕಾಣಿಸುವುದಿಲ್ಲ. ಒಂದೊಂದು ದಿನ ಒಂದೊಂದು ರೀತಿ ಕಾಣಿಸುತ್ತದೆ. ಅದರ ನೋಟ ಕ್ಷಣ ಕ್ಷಣವೂ ಬದಲಾಗುತ್ತದೆ. ದಿನದಲ್ಲಿ ಸೂರ್ಯನ ಪಥ ಬದಲಾದಂತೆ ಪರ್ವತದ ಚಮಕ್ ಕೂಡ ಬದಲಾಗುತ್ತದೆ.

ಆಫ್ರಿಕಾದಲ್ಲಿ ಈ ಪರ್ವತದಷ್ಟು ಎತ್ತರದ ಮತ್ತೊಂದು ಪರ್ವತವಿಲ್ಲ. ದೂರದಿಂದ ನೋಡಲು ಅಷ್ಟು ಎತ್ತರದ ಪರ್ವತ ಎಂದು ಅನಿಸುವುದಿಲ್ಲ. ಆದರೆ ಕಿಲಿಮಂಜಾರೋ 4900 ಮೀಟರ್ ಅಥವಾ ಹತ್ತಿರ ಹತ್ತಿರ ಐದು ಕಿಮಿ ಎತ್ತರದ ಪರ್ವತ. ಸಮುದ್ರ ಮಟ್ಟದಿಂದ 5895 ಮೀಟರ್ ಎತ್ತರದಲ್ಲಿದೆ. 1889 ರ ಈ ಪರ್ವತದ ತಲೆಯ ಮೇಲೆ ಇಬ್ಬರು ಪರ್ವತಾರೋಹಿಗಳು ಹೋಗಿ ನಿಂತು ಬಂದರು.

ಕಿಲಿಮಂಜಾರೋ ಪರ್ವತ ಒಂದು ಅದ್ಭುತ ಬಯಲು ವಿಶ್ವವಿದ್ಯಾಲಯವಿದ್ದಂತೆ. ಅದೊಂದು ಅಪೂರ್ವ, ವಿಸ್ಮಯ ಲೋಕ. ಅಲ್ಲಿ ಇಲ್ಲದ ಬೆರಗುಗಳಿಲ್ಲ. ಎರಡೂವರೆ ಲಕ್ಷ ಎಕರೆ ವಿಸ್ತಾರ ಪ್ರದೇಶದಲ್ಲಿ ಹರಡಿರುವ ಇಲ್ಲಿನ ಕಾಡಿನಲ್ಲಿ ಸಾವಿರಾರು ಬಗೆಯ ಸಸ್ಯ ಪ್ರಭೇದಗಳಿವೆ. ಪರ್ವತದ ತಪ್ಪಲಿನಲ್ಲಿ ಅಪರೂಪದ ಕಾಫಿ ತೋಟವಿದೆ. ಕಿಲಿಮಂಜಾರೋ ಎಂಬ ಬ್ರಾಂಡ್ ಹೆಸರಿನಲ್ಲಿ ಇದು ಲೋಕ ಪ್ರಸಿದ್ಧವಾಗಿದೆ.

ಪರ್ವತಾರೋಹಿಗಳಿಗೆ ಅಲ್ಲಲ್ಲಿ ಆನೆ, ಜೀಬ್ರಾ, ಕಾಡುಕೋಣ, ಕಾಡೆಮ್ಮೆ, ಮುಂಗೂಸಿ ಮುಂತಾದ ಪ್ರಾಣಿಗಳ ದರ್ಶನವಾಗುತ್ತವೆ. ಇಲ್ಲಿನ ವಾತಾವರಣ ಪರ್ವತಾರೋಹಿಗಳಿಗೆ ಉಸದಾಯಕವಾಗಿಲ್ಲ. ಹವಾಮಾನ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಅಲ್ಲದೇ ಪರ್ವತವನ್ನೇರುವಾಗ ಐದು ಬೇರೆ ಬೇರೆ ಹವಾಮಾನ ವಲಯಗಳನ್ನು ದಾಟಿ ಹೋಗಬೇಕಾಗುತ್ತದೆ. ಪರ್ವತದ ತುತ್ತ ತುದಿಯ ಮೇಲೆ ಯಾವತ್ತೂ ಮೈ ಕೊರೆಯುವ ಚಳಿ. ಮೈನಸ್ ಏಳರಿಂದ ಹತ್ತು ಡಿಗ್ರಿ!

ಪ್ರತಿ ವರ್ಷ ಈ ಪರ್ವತದ ಹಣೆಯನ್ನು ಸವರಿ, ನೆತ್ತಿಯನ್ನು ಗುದ್ದಲು ಮೂವತ್ತೈದರಿಂದ ನಲವತ್ತು ಸಾವಿರ ಜನ ಹೋಗುತ್ತಾರೆ. ಆ ಪೈಕಿ ಏನಿಲ್ಲವೆಂದರೂ ಹತ್ತು ಸಾವಿರ ಮಂದಿ ಕೈ ಚೆಲ್ಲುತ್ತಾರೆ. ಆರರಿಂದ ಎಂಟು ದಿನಗಳ ಕಾಲ ಹಿಡಿಯುವ ಈ ಪರ್ವತಾರೋಹಣದಲ್ಲಿ ಪ್ರತಿವರ್ಷ ಮೂವತ್ತು ನಲವತ್ತು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೂ ಇದನ್ನು Every Man's Mount Everest ಎಂದು ಕರೆಯುತ್ತಾರೆ. ಸ್ವಲ್ಪ ಶ್ರಮ ಪಟ್ಟರೆ ಯಾರು ಬೇಕಾದರೂ ಇದನ್ನು ಏರಬಹುದು. ಹಾಗಂತ ಸುಲಿದ ಬಾಳೆಹಣ್ಣಲ್ಲ. ಬಹಳ ಜನ ಸಾಯುವುದು mountain sickness ನಿಂದ.

ಪರ್ವತದ ತುತ್ತ ತುದಿಯನ್ನು ಏರಿದವರೆಲ್ಲ ಅಲ್ಲಿ ಇಟ್ಟಿರುವ ಮರದ ಪೆಟ್ಟಿಗೆಯಲ್ಲಿ ಇಟ್ಟಿರುವ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಬರೆದಿಟ್ಟು ಬರುವುದು ವಾಡಿಕೆ. ಅದು ನೀವು ಪರ್ವತವೇರಿರುವುದಕ್ಕೆ ದಾಖಲೆಯೂ ಹೌದು. ಮೌಂಟ್ ಎವರೆಸ್ಟ್ ಏರುವುದಕ್ಕೆ ಮುನ್ನ ಕಿಲಿಮಂಜಾರೋ ಏರಿದ್ದೀಯಾ ಎಂದು ಕೇಳುವುದುಂಟು. ಅಂದರೆ ಕಿಲಿಮಂಜಾರೋ ಏರಿದರೆ, ಎವರೆಸ್ಟ್ ಏರಲು ಅರ್ಹತೆ ಪಡೆದ ಹಾಗೆ.

ಪೈಲಟ್ ಕಿಲಿಮಂಜಾರೋ ಬಗ್ಗೆ ಅನೌನ್ಸ್ ಮಾಡಿದಾಗ ನನ್ನ ಮನಸ್ಸಿನಲ್ಲಿ ಇಷ್ಟೆ ಸಂಗತಿಗಳು ಹಾದು ಹೋದವು. ಅಂಥ ಅಪರೂಪದ ಪರ್ವತವನ್ನು ಮೇಲಿಂದ ಖುದ್ದು ನೋಡಲು ನಾನು ಕ್ಷಣಗಳನ್ನು ಎಣಿಸುತ್ತಿದ್ದೆ. ‘ಇನ್ನು ಎರಡು-ಮೂರು ನಿಮಿಷಗಳಲ್ಲಿ ನಾವು ಮೌಂಟ್ ಕಿಲಿಮಂಜಾರೋ ಮೇಲೆ ಹಾರಲಿದ್ದೇವೆ. ಆದರೆ ಪರ್ವತದ ತುತ್ತ ತುದಿ ಕಾಣಿಸುವುದೋ ಇಲ್ಲವೋ ಗೊತ್ತಿಲ್ಲ.

ಯಾವುದಕ್ಕೂ ರೆಡಿ ಆಗಿರಿ. ವಿಮಾನದ ಎಡ ಭಾಗದಲ್ಲಿ ಕುಳಿತಿರುವವರು ತಮ್ಮ ಮೊಬೈಲ್ ಮತ್ತು ಕ್ಯಾಮೆರಾಗಳನ್ನು ತೆಗೆದಿಟ್ಟುಕೊಂಡಿರಿ’ ಎಂದು ಪೈಲಟ್ ಅನೌನ್ಸ್ ಮಾಡಿದ. ನಾನು ಬಿರಬಿರನೆ ನನ್ನ ಮೊಬೈಲ್ ಮತ್ತು ಕ್ಯಾಮೆರಾಗಳನ್ನು ಹೊರತೆಗೆದೆ. ಅದೃಷ್ಟವಶಾತ್ ನಾನು ವಿಮಾನದ ಎಡ ಭಾಗದಲ್ಲಿಯೇ ಕುಳಿತಿದ್ದೆ. 'You are very very lucky ಈಗ ಕೆಳಗೆ ನೋಡಿ... ಅದೋ ಮೌಂಟ್ ಕಿಲಿಮಂಜಾರೋ !’ ಎಂದ ಪೈಲಟ್. ‌

ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಒಂದು ವೇಳೆ ದೇವರು ಬಂದು ಎದುರು ನಿಂತರೆ ಏನಾಗಬಹುದೋ ಅಂಥ ಭಾವ! ಮೈಯ ಪುಳಕ, ರೋಮಾಂಚನ. ನನ್ನ ಜೀವನದಲ್ಲಿ ಅಂಥzಂದು ಕ್ಷಣಕ್ಕೆ ಎದುರಾಗುತ್ತೇನೆ ಎಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಖುzಗಿ ಕಿಲಿಮಂಜಾರೋ ಏರಿದವರಿಗೂ ಪರ್ವತ ಹಾಗೆ ಕಾಣಿಸಲಿಕ್ಕಿಲ್ಲ. ಅಂಥ ಅದ್ಭುತ ದೃಶ್ಯಗಳು ನನ್ನ ಮುಂದೆ ತೆರೆದುಕೊಂಡಿದ್ದವು. ಕಣ್ಣು ಹಾಯುವ ತನಕ ಎಲ್ಲಿ ನೋಡಿದರೂ ಬೆಳ್ಳಿ ಮೋಡಗಳ ಹಾಸು. ಮಧ್ಯದಲ್ಲಿ ಕಪ್ಪು ಪರ್ವತ. ಅದರ ಮಧ್ಯದಲ್ಲಿ ಆಳವಾದ ಬಾವಿ. ಅಲ್ಲಲ್ಲಿ ಬಿದ್ದ ಹಿಮ ರಾಶಿ. ತಟ್ಟನೆ ನೋಡಿದರೆ ಥೇಟು ಈಶ್ವರ ಲಿಂಗ!

ಅದಕ್ಕೂ ಮೊದಲು ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿ ಪಡೆದಿದ್ದ. ಪರ್ವತದ ಸುತ್ತ ಒಂದು ಸುತ್ತು ಹೊಡೆಯುವುದಾಗಿ ಹೇಳಿದ. ಅದೇ ಪ್ರಕಾರ ಆ ‘ಈಶ್ವರ ಲಿಂಗ’ಕ್ಕೆ ಒಂದು ಪ್ರದಕ್ಷಿಣೆ ಹಾಕಿದ. ಹೀಗೆ ಸುತ್ತು ಹಾಕುವಾಗ ಇಡೀ ವಿಮಾನವನ್ನು ಮತ್ತಷ್ಟು ವಾಲಿಸಿದಾಗ ಪರ್ವತ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಿತು. ಹಾಲು ಮೋಡಗಳ ಮಧ್ಯೆ ಸೂರ್ಯನ ಕಿರಣಗಳು ಸರಿಯಾಗಿ ಪರ್ವತದ ಶೃಂಗದ ಮೇಲೆ ಬಿದ್ದು ಅದರ ತುತ್ತ ತುದಿ ಇನ್ನಷ್ಟು ಕಪ್ಪಾಗಿ ಎದ್ದು ಕಾಣುತ್ತಿತ್ತು.

ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಉತ್ಸಾಹವೋ ಉತ್ಸಾಹ. ಮೂರ್ನಾಲ್ಕು ನಿಮಿಷಗಳಲ್ಲಿ ಒಂದು ಕನಸಿನಂತೆ ಎಲ್ಲವೂ ಪಟಪಟನೆ ನಡೆದುಹೋಯಿತು. ನನ್ನ ಪಾಲಿಗೆ ಅದು ಜೀವಮಾನದ ಆಸೆಯನ್ನು ತಣಿಸಿದ ಕ್ಷಣ. ಕಿಲಿಮಂಜಾರೋ ಏರಿದ್ದರೆ ನನಗೆ ಅಷ್ಟು ಸಂತಸವಾಗುತ್ತಿತ್ತೋ ಇಲ್ಲವೋ. ಆದರೆ ನಾನು ಅದನ್ನು ಏರಿದವರಿಗಿಂತ ಒಂದು ಹಿಡಿ ಎತ್ತರದಲ್ಲಿದ್ದೆ. ಮನಸ್ಸಿನಲ್ಲಿ ಏನೋ ಧನ್ಯತೆಯ ಭಾವ ಇಳಿದಂತಾಗಿತ್ತು.