ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ನವರಾತ್ರಿಯ ಶಕ್ತಿ, ಆಯುರ್ವೇದದ ಯುಕ್ತಿ

ನವರಾತ್ರಿಯ ವೇಳೆಯಲ್ಲಿ ಆರಾಧಿಸಲ್ಪಡುವ ದೇವಿಯ ನವರೂಪಗಳಲ್ಲಿ ಪ್ರತಿಯೊಂದು ರೂಪವು ಸಹ ಜೀವನದ ಒಂದು ಮೌಲ್ಯವನ್ನು ಪ್ರತಿನಿಧಿಸುತ್ತದೆ. ಆಯುರ್ವೇದವು ಸಹ ದೇಹದ ಮೂರು ದೋಷ ಗಳಾದ ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿರಿಸಿ, ಇಂದ್ರಿಯ-ಮನಗಳ ಪ್ರಶಾಂತತೆ ಯನ್ನು ಕಾಯ್ದಿರಿಸಲು ಪ್ರೇರೇಪಿಸುತ್ತದೆ. ಈ ಎರಡನ್ನೂ ಹೋಲಿಸಿದರೆ ಒಂದು ಆಳವಾದ ಸಂಬಂಧ ಗೋಚರಿಸುತ್ತದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ದೇಹ-ಮನ-ಆತ್ಮ ಸಮತೋಲನಕ್ಕೆ ಪಾಠಗಳು

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶಿಷ್ಟ ಸ್ಥಾನವಿದೆ. ಹಬ್ಬಗಳು ಕೇವಲ ಮನರಂಜನೆ ಅಥವಾ ಧಾರ್ಮಿಕ ಆಚರಣೆಗಳಲ್ಲ, ಅವು ಜೀವನ ಶೈಲಿಯ ಪಾಠ ಕಲಿಸುವ ಮಹತ್ವದ ಸಂದರ್ಭ ಗಳಾಗಿವೆ. ನವರಾತ್ರಿ ಹಬ್ಬವು ಒಂಬತ್ತು ದಿನಗಳ ಕಾಲ ನಡೆಯುವ ಶಕ್ತಿ ಆರಾಧನೆಯ ಮಹೋ ತ್ಸವ. ಈ ಹಬ್ಬದಲ್ಲಿ ದೇವಿಯ ನವರೂಪಗಳನ್ನು ಪೂಜಿಸುವುದರ ಜತೆಗೆ, ಉಪವಾಸ, ಸಾತ್ವಿಕ ಆಹಾರ ಸೇವನೆ, ಅರ್ಚನೆ, ಭಕ್ತಿ-ಧ್ಯಾನ-ಸಂಗೀತಗಳ ಮೂಲಕ ದೇಹ, ಮನಸ್ಸು ಮತ್ತು ಆತ್ಮಕ್ಕೆ ಹೊಸ ಶಕ್ತಿಯನ್ನು ತುಂಬಲಾಗುತ್ತದೆ.

ಇದು ಆಯುರ್ವೇದದ ಮುಖ್ಯ ಗುರಿ ಕೂಡ- ದೇಹದ ಸಮತೋಲನ, ಮನಸ್ಸಿನ ಶಾಂತಿ, ಆತ್ಮದ ಶುದ್ಧತೆ. ಹೀಗಾಗಿ, ನವರಾತ್ರಿ ಹಬ್ಬವನ್ನು ಆಯುರ್ವೇದದ ದೃಷ್ಟಿಯಿಂದ ನೋಡಿದರೆ ಅನೇಕ ಜೀವನಪಾಠಗಳನ್ನು ಕಲಿಯಬಹುದು.

ದೇವಿಯ ನವರೂಪ, ಆಯುರ್ವೇದದ ತತ್ವಗಳು

ನವರಾತ್ರಿಯ ವೇಳೆಯಲ್ಲಿ ಆರಾಧಿಸಲ್ಪಡುವ ದೇವಿಯ ನವರೂಪಗಳಲ್ಲಿ ಪ್ರತಿಯೊಂದು ರೂಪವು ಸಹ ಜೀವನದ ಒಂದು ಮೌಲ್ಯವನ್ನು ಪ್ರತಿನಿಧಿಸುತ್ತದೆ. ಆಯುರ್ವೇದವು ಸಹ ದೇಹದ ಮೂರು ದೋಷಗಳಾದ ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿರಿಸಿ, ಇಂದ್ರಿಯ-ಮನಗಳ ಪ್ರಶಾಂತತೆ ಯನ್ನು ಕಾಯ್ದಿರಿಸಲು ಪ್ರೇರೇಪಿಸುತ್ತದೆ. ಈ ಎರಡನ್ನೂ ಹೋಲಿಸಿದರೆ ಒಂದು ಆಳವಾದ ಸಂಬಂಧ ಗೋಚರಿಸುತ್ತದೆ.

ಇದನ್ನೂ ಓದಿ: Dr Sadhanashree Column: ನವರಾತ್ರಿಯ ನವೋಲ್ಲಾಸಕ್ಕೆ ನವ ನಿಯಮಗಳು

೧. ಶೈಲಪುತ್ರಿ: ಪರ್ವತದ ಪುತ್ರಿ ಎಂಬ ಅರ್ಥ. ಅವಳು ಸ್ಥಿರತೆ ಮತ್ತು ನೆಲೆಬದ್ಧತೆಯ ಸಂಕೇತ. ದೇಹದಲ್ಲಿ ವಾತದೋಷವು ಒಂದು ಚಾಲಕ ಶಕ್ತಿ. ಅದು ಸದಾ ಚಂಚಲ. ಅದರೆ ಚಂಚಲತೆಯು ಮಿತಿಮೀರಿದಾಗ ದೇಹದಲ್ಲಿ ವಿವಿಧ ರೋಗಗಳು ಪ್ರಾರಂಭ. ಹಾಗಾಗಿ ಈ ಚಂಚಲ ವಾತವನ್ನು ಮತ್ತು ಮನಸ್ಸಿನ ಅಸ್ಥಿರತೆಯನ್ನು ನಿಯಂತ್ರಿಸಲು ಶೈಲಪುತ್ರಿಯ ತತ್ವವನ್ನು ನೆನಪಿಸಿಕೊಳ್ಳ ಬಹುದು.

೨. ಬ್ರಹ್ಮಚಾರಿಣಿ: ಈಕೆ ತಪಸ್ಸು ಮತ್ತು ಶಿಸ್ತಿನ ಪ್ರತೀಕ. ದೋಷಗಳ ಏರುಪೇರುಗಳನ್ನು ನಿಯಂತ್ರಿಸಲು ಶಿಸ್ತಿನ ಜೀವನಶೈಲಿ ಅಗತ್ಯ. ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿ ಮನಸ್ಸನ್ನು ಏಕಾಗ್ರಗೊಳಿಸಲು ನಿತ್ಯವೂ ತಪಸ್ಸಿನ ಅಗತ್ಯವಿದೆ.

೩. ಮಾತಾ ಚಂದ್ರಘಂಟಾ: ಇವಳು ಶಾಂತಿ ಮತ್ತು ಸಮನ್ವಯದ ರೂಪ. ಇದು ಕಫ ದೋಷದ ಶಾಂತ, ಸಮತೋಲನ ಗುಣವನ್ನು ಪ್ರತಿಪಾದಿಸುವುದರ ಜತೆಗೆ ಸದಾ ಮನಃಶಾಂತಿಗೆ ನೀಡಬೇಕಾದ ಪ್ರಾಮುಖ್ಯವನ್ನು ನೆನಪಿಸುತ್ತದೆ.

೪. ಮಾತಾ ಕೂಷ್ಮಾಂಡಾ: ಇವಳು ಪೋಷಣೆ ಮತ್ತು ಶಕ್ತಿಯನ್ನು ನೀಡುವ ದೇವಿ. ಆಯುರ್ವೇದ ದಲ್ಲಿ ಪೌಷ್ಟಿಕ ಆಹಾರವು ದೇಹಕ್ಕೆ ಪ್ರಾಣಶಕ್ತಿ ನೀಡಿ ದೇಹೇಂದ್ರಿಯ-ಮನಗಳನ್ನು ಪೋಷಿಸುವಂತೆ, ಕೂಷ್ಮಾಂಡಾ ದೇವಿಯ ತತ್ವವು ಪೋಷಕ ಜೀವಸತ್ತ್ವದ ಸಂಕೇತ.

೫. ಮಾತಾ ಸ್ಕಂದಮಾತೆ: ಈ ದೇವಿಶಕ್ತಿಯು ತಾಯಿತನದ ಸಂಕೇತ. ದೇಹಕ್ಕೆ ರೋಗನಿರೋಧಕ ಶಕ್ತಿ ನೀಡುವ ಆಹಾರ ಮತ್ತು ಸ್ನೇಹಪೂರ್ಣ ಜೀವನಶೈಲಿಯ ಮಹತ್ವವನ್ನು ಈ ರೂಪ ನೆನಪಿಸು ತ್ತದೆ. ಸಮಾಜಕ್ಕೆ ಸತ್ಪ್ರಜೆಯನ್ನು ನೀಡುವ ಧ್ಯೇಯೋದ್ದೇಶವನ್ನು ಇದು ಸೂಚಿಸುತ್ತದೆ.

೬. ಮಾತಾ ಕಾತ್ಯಾಯಿನಿ: ಇವಳು ಧೈರ್ಯದ ಪ್ರತೀಕ. ಉತ್ಸಾಹ ಮತ್ತು ಹೃದಯದ ಬಲವನ್ನು ಕಾಪಾಡುವ ಉತ್ತಮ ಆಹಾರ-ವ್ಯಾಯಾಮಗಳ ಅನುಷ್ಠಾನವನ್ನು ಈ ತತ್ತ್ವವು ಪ್ರತಿಪಾದಿಸುತ್ತದೆ .

೭. ಮಾತಾ ಕಾಳರಾತ್ರಿ: ಅಂಧಕಾರವನ್ನು ನಾಶಮಾಡುವ ಶಕ್ತಿ. ಆಯುರ್ವೇದದಲ್ಲಿ ದೇಹದ ವಿಷ, ಅಜೀರ್ಣ, ಅಶುದ್ಧಿಯನ್ನು ದೂರ ಮಾಡುವ ತತ್ತ್ವ. ಮಾನಸಿಕ ಜಡತ್ತ್ವ ಮತ್ತು ತಮಸ್ಸನ್ನು ತೊಲಗಿಸಿದಾಗ ಮಾತ್ರ ಸಂಪೂರ್ಣ ಸ್ವಾಸ್ಥ್ಯದ ಅನುಭವ ಸಾಧ್ಯ ಎಂಬ ಬೋಧನೆ ಇಲ್ಲಿ ಧ್ವನಿತ.

೮. ಮಾತಾ ಮಹಾಗೌರಿ: ಈಕೆಯು ಶುದ್ಧತೆ ಮತ್ತು ತೇಜಸ್ಸಿನ ರೂಪ. ಉಪವಾಸ, ಲಘು ಆಹಾರ, ಹಾಲು, ತುಪ್ಪ ಇವುಗಳ ಮೂಲಕ ದೇಹ ಶುದ್ಧೀಕರಣವಾದರೆ, ಸತ್ಯ, ಅಹಿಂಸಾ, ಅಧ್ಯಯನ, ಸೇವೆ, ತ್ಯಾಗ- ಇವುಗಳಿಂದ ಮಾತ್ರ ಮನಸ್ಸಿನ ಶುದ್ಧಿ ಸಾಧ್ಯ ಎಂದು ಸಾರುವ ಸ್ವರೂಪ ಇದು.

೯. ಮಾತಾ ಸಿದ್ಧಿದಾತ್ರಿ: ದೇವಿಯ ಈ ಸ್ವರೂಪವು ಸಂಪೂರ್ಣತೆ ಮತ್ತು ಸಮೃದ್ಧಿಯ ರೂಪ. ಆಯುರ್ವೇದದ ಗುರಿಯು ಸಹ ಇದೇ- ದೇಹ, ಇಂದ್ರಿಯ, ಮನಸ್ಸು, ಆತ್ಮಗಳ ಸಾಮ್ಯತೆ, ತನ್ಮೂಲಕ ಸ್ವಾಸ್ಥ್ಯವೆಂಬ ಸ್ವಾತಂತ್ರ್ಯದ ಸಿದ್ಧಿ.

ಉಪವಾಸ ಮತ್ತು ದೇಹಶುದ್ಧೀಕರಣ

ನವರಾತ್ರಿಯಲ್ಲಿ ಉಪವಾಸ ಆಚರಿಸುವುದು ಸಾಮಾನ್ಯ. ಧಾರ್ಮಿಕ ದೃಷ್ಟಿಯಿಂದ ದೇವಿಯ ಆರಾಧನೆಗೆ ಉಪವಾಸ ಮುಖ್ಯವಾದರೂ, ಆಯುರ್ವೇದದ ದೃಷ್ಟಿಯಿಂದ ಇದು ದೇಹದ ದೋಷ ನಿವಾರಣೆಗೆ ಅತ್ಯಂತ ಸಹಾಯಕ.

ಆಯುರ್ವೇದದಲ್ಲಿ ‘ಲಘು ಆಹಾರ’ ಅಥವಾ ‘ಉಪವಾಸ’ವು ದೇಹದ ಆಮ (ಅಜೀರ್ಣ ವಿಷ)ವನ್ನು ಹೊರ ಹಾಕಿ, ಜೀರ್ಣಕ್ರಿಯೆಗೆ ವಿಶ್ರಾಂತಿ ನೀಡುತ್ತದೆ. ಹಣ್ಣು, ಹಾಲು, ಹೆಸರುಬೇಳೆ, ಹುರಿದ ಅಕ್ಕಿ, ಪಾಯಸ ಇಂಥ ಲಘು, ಸಾತ್ವಿಕ ಆಹಾರಗಳನ್ನು ಸೇವಿಸುವುದು ದೇಹವನ್ನು ಶುದ್ಧಿಗೊಳಿಸುವುದಕ್ಕೆ, ದೋಷಗಳ ಸಮತೋಲನಕ್ಕೆ ಸಹಕಾರಿ. ನವರಾತ್ರಿ ಉಪವಾಸವು Detox ನ ಒಂದು ವಿಧ!

ಸರಿಯಾಗಿ, ಕ್ರಮಬದ್ಧವಾಗಿ ಮಾಡಿದ ಉಪವಾಸದಿಂದ ಚರ್ಮವು ಕಾಂತಿಯುಕ್ತವಾಗುತ್ತದೆ, ಜೀರ್ಣ ಶಕ್ತಿ ಉತ್ತೇಜನಗೊಳ್ಳುತ್ತದೆ, ಶರೀರವು ಲಘುವಾಗುತ್ತದೆ, ಮನಸ್ಸು ಚುರುಕಾಗುತ್ತದೆ ಮತ್ತು ಆತ್ಮಶಕ್ತಿ ಹೆಚ್ಚುತ್ತದೆ. ಆದರೆ ಉಪವಾಸದ ಬಗ್ಗೆ ಒಂದು ಕಿವಿಮಾತು- ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ‘ಉಪ’ ಎಂದರೆ ಸಮೀಪ, ‘ವಾಸ’ ಎಂದರೆ ಇರುವುದು.

‘ಉಪವಾಸ’ವೆಂದರೆ ಸದಾ ಸತ್ವ ಗುಣದೊಟ್ಟಿಗೆ ಇರುವುದು. ಕಾಮ, ಕ್ರೋಧ, ಲೋಭ, ಮದ ಮತ್ತು ಮಾತ್ಸರ್ಯಗಳನ್ನು ಕಾಯಾ-ವಾಚಾ-ಮನಸ್ಸಿನ ಮೂಲಕ ಮಾಡದೆ ಇರುವುದು. ಎಲ್ಲರ ಒಳಗೂ ಚೈತನ್ಯದ ರೂಪದಲ್ಲಿ ನೆಲೆಸಿರುವ ಆ ಪರಮಾತ್ಮನ ಇರುವಿಕೆಯನ್ನು ತನ್ನೊಳಗೆ ಅರಿತು ಅವನ ಸಮೀಪವಾಗುವ ಪ್ರಯತ್ನವೇ ಉಪವಾಸ. ಈ ಸೂಕ್ಷ್ಮತರವಾದ ಅನುಭವಕ್ಕೆ ಅತಿಯಾದ ಆಹಾರ ಸೇವನೆಯು ಅಡ್ಡಿಯಾಗದಿರಲಿ ಎಂಬುದು ಉದ್ದೇಶವೇ ಹೊರತು ಉಪವಾಸವೆಂದರೆ ಶರೀರದ ಶೋಷಣೆಯಂತೂ ಅಲ್ಲವೇ ಅಲ್ಲ.

ಹಾಗಾಗಿ ಹಸಿವೆಯನ್ನು ಗೌರವಿಸದೆ, ಜಠರಾಗ್ನಿಗೆ ಆಹಾರದ ಮೂಲಕ ಆಹುತಿಯನ್ನು ನೀಡದೆ ಅದನ್ನು ಹಾಳುಮಾಡುವ ಪ್ರಕ್ರಿಯೆಯನ್ನು ಆಯುರ್ವೇದವು ಎಂದಿಗೂ ಉಪವಾಸ ಎಂದು ಪರಿಗಣಿಸುವುದಿಲ್ಲ. ಹಾಗಾಗಿ ಉಪವಾಸದ ಹೆಸರಿನಲ್ಲಿ ಹಸಿವೆಯನ್ನು ತಡೆಗಟ್ಟಿ, ನಂತರ ಒಮ್ಮೆಲೇ ಜೀರ್ಣಕ್ಕೆ ಜಡವಾಗುವ ಊಟವನ್ನು ಮಾಡಿದರೆ ಆರೋಗ್ಯ ಕೆಡುವುದರಲ್ಲಿ ಸಂಶಯವೇ ಇಲ್ಲ.

ಹಸಿವೆಯನ್ನು ತಡೆಯುವುದು ಆಯುರ್ವೇದದ ಪ್ರಕಾರ ಸರಿಯಲ್ಲ. ಹಾಗಾಗಿ ಆಹಾರ ಕಾಲದಲ್ಲಿ ಲಘು, ಸಾತ್ತ್ವಿಕ ಆಹಾರವನ್ನು ಸೇವಿಸಿ, ದೈವದ ಉಪಾಸನೆಯಲ್ಲಿ ಇಂದ್ರಿಯ-ಮನಸ್ಸುಗಳನ್ನು ತೊಡಗಿಸಿಕೊಂಡು ಒಳ್ಳೆಯ ಚಿಂತನೆಯನ್ನು ಮಾಡಿ ಪರಮಾತ್ಮನ ಸಮೀಪವಾಗುವ ಪ್ರಯತ್ನ ವನ್ನು ಮಾಡುವುದೇ ಹಬ್ಬದ ದಿನ ನಾವು ಮಾಡಬೇಕಾದ ನಿಜವಾದ ಮತ್ತು ಸರಿಯಾದ ಉಪವಾಸ. ಇದು ಮಾತ್ರ ಆಯುರ್ವೇದ ಸಮ್ಮತವಾದ ಉಪವಾಸವಾಗುತ್ತದೆ.

ಋತುಚರ್ಯೆ ಮತ್ತು ನವರಾತ್ರಿ ನವರಾತ್ರಿಯು ಸಾಮಾನ್ಯವಾಗಿ ಶರದೃತುವಿನಲ್ಲಿ ಬರುತ್ತದೆ. ಈ ಕಾಲದಲ್ಲಿ ದೇಹದಲ್ಲಿ ಕಾಲದ ಪ್ರಭಾವದಿಂದ ಪಿತ್ತದ ಪ್ರಮಾಣವು ಹೆಚ್ಚಾಗುತ್ತದೆ- ಅಜೀರ್ಣ, ಹುಳಿತೇಗು, ನಿದ್ರಾಕ್ಷಯ, ಚರ್ಮರೋಗ, ಕೋಪ, ಕಣ್ಣು-ಚರ್ಮದ ಉರಿ ಮುಂತಾದ ಸಮಸ್ಯೆಗಳು ಹೆಚ್ಚುತ್ತವೆ.

ಆಯುರ್ವೇದದಲ್ಲಿ ಶರದೃತುವಿನಲ್ಲಿ ಶೀತಲ-ಲಘು ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಾಗಿದೆ. ಬೆಳದಿಂಗಳಲ್ಲಿ ವಿಹಾರ ಉಲ್ಲಾಸದಾಯಕ. ಶ್ರೀಗಂಧ ಲೇಪನ ಬಹಳ ಹಿತ. ನವರಾತ್ರಿ ಹಬ್ಬದಲ್ಲಿ ಸೇವಿಸುವ ಹಣ್ಣು, ಪಾಯಸ, ಹಾಲು, ಬೆಲ್ಲ, ತುಪ್ಪ, ನವಧಾನ್ಯ- ಇವುಗಳು ಪಿತ್ತದ ಸಮತೋಲನಕ್ಕೆ ಸಹಕಾರಿ. ಸೂಕ್ಷ್ಮವಾಗಿ ಗಮನಿಸಿದರೆ ದೇವಿಗೆ ಅರ್ಪಿಸುವ ನೈವೇದ್ಯಗಳು seasonal balanceಗೆ ತಕ್ಕಂತಿವೆ. ಹೀಗಾಗಿ, ಹಬ್ಬದ ಆಚರಣೆಗಳಿಗೆ ಆಯುರ್ವೇದದ ಋತುಚರ್ಯೆ ಯೇ ಮುಖ್ಯ ಆಧಾರ ಎಂದರೆ ಅತಿಶಯೋಕ್ತಿಯಲ್ಲ!

ಭಕ್ತಿ, ಧ್ಯಾನ ಮತ್ತು ಮನಸ್ಸಿನ ಆರೋಗ್ಯ

ಆಯುರ್ವೇದದ ಪ್ರಕಾರ, ಆರೋಗ್ಯ ಎಂದರೆ ದೇಹದ ದೋಷಗಳು ಸಮತೋಲನದಲ್ಲಿರುವುದು, ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು ಮಾತ್ರವಲ್ಲದೆ ಇಂದ್ರಿಯಗಳ ಶಿಸ್ತು ಮತ್ತು ಮನಸ್ಸಿನ ಪ್ರಸನ್ನತೆಯೂ ಸೇರಿದೆ. ನವರಾತ್ರಿ ವೇಳೆ ಮಾಡುವ ಆರತಿ, ಜಪ, ಸಂಗೀತ, ನೃತ್ಯ, ಭಜನೆ ಇವೆಲ್ಲವೂ ಭಾವನೆಗಳನ್ನು ಪರಿಶುದ್ಧಗೊಳಿಸುವ ಸಾಧನಗಳಾಗಿವೆ. ಅವು ಮನಸ್ಸಿನ ಔಷಧವೂ ಹೌದು. ಅವು ಒತ್ತಡವನ್ನು ಕಡಿಮೆ ಮಾಡಿ, ಮಿದುಳಿನಲ್ಲಿ ಶಾಂತಿಯ ತರಂಗಗಳನ್ನು ಹೆಚ್ಚಿಸುತ್ತವೆ. ಧ್ಯಾನ ಮಾಡುವಾಗ ಉಸಿರಾಟದ ನಿಯಂತ್ರಣದಿಂದ ಮನಸ್ಸು ಏಕಾಗ್ರವಾಗುತ್ತದೆ, ತನ್ಮೂಲಕ ಇಂದ್ರಿಯ ಗಳ ಚಂಚಲತೆ ಕುಂದುತ್ತದೆ.

ಇಂಥ ಮಾನಸಿಕ ಸ್ಥಿತಿಯು ಆಯುರ್ವೇದದಲ್ಲಿ ‘ಸಾತ್ವಿಕ ಸ್ಥಿತಿ’ ಎಂದು ಕರೆಯಲ್ಪಡುತ್ತದೆ. ಹೀಗಾಗಿ ನವರಾತ್ರಿ ಹಬ್ಬವು ಭಕ್ತಿಯ ಮೂಲಕ ಮಾನಸಿಕ ಸ್ವಾಸ್ಥ್ಯವನ್ನು ಬಲಪಡಿಸುತ್ತದೆ. ನವರಾತ್ರಿ ಯಿಂದ ಕಲಿಯಬೇಕಾದ ಜೀವನಶೈಲಿ ನವರಾತ್ರಿಯ ಆಚರಣೆಗಳು ನಮಗೆ ಅನೇಕ ಜೀವನ ಪಾಠ ಗಳನ್ನು ನೀಡುತ್ತವೆ.

೧. ಆಹಾರದಲ್ಲಿ ಮಿತಿ: ಹಿತಮಿತವಾದ ‘ಉಪವಾಸ’ವು ಅತಿಸೇವನದಿಂದ ದೂರವಿರಲು ಕಲಿಸುತ್ತದೆ.

೨. ಶಿಸ್ತು: ಪ್ರತಿದಿನ ದೇವಿಯ ಪೂಜೆ, ಜಪ, ವ್ರತ ಆಚರಣೆಗಳಿಂದ ಇಂದ್ರಿಯಗಳ ಸಂಯಮ.

೩. ಸಾತ್ತ್ವಿಕ ಚೋದನ: ಲಘು ಆಹಾರ, ಧ್ಯಾನ, ಭಕ್ತಿ- ಮಾನಸಿಕ ಶುದ್ಧಿಯನ್ನೆರೆಯುತ್ತವೆ.

೪. ಸಮತೋಲನ: ದೇವಿಯ ನವರೂಪಗಳಂತೆ, ಜೀವನದಲ್ಲಿಯೂ ದೈಹಿಕ-ಮಾನಸಿಕ-ಆಧ್ಯಾತ್ಮಿಕ ಸಮತೋಲನ ಮುಖ್ಯ ಎಂಬ ಸತ್ತ್ವ ಸಂದೇಶ.

ಆಯುರ್ವೇದದಲ್ಲಿ ಹೇಳುವಂತೆ, ‘ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ ಪ್ರಸನ್ನಾತ್ಮೇಂದ್ರಿಯಮನಃ ಸ್ವಸ್ಥ ಇತ್ಯಭಿಧಿಯತೆ’- ಅಂದರೆ ದೇಹದ ದೋಷಗಳು ಸಮತೋಲನ ದಲ್ಲಿದ್ದು, ಜೀರ್ಣಾಗ್ನಿ ಸರಿಯಾಗಿ ಕೆಲಸ ಮಾಡಿದಾಗ, ಧಾತು-ಮಲಗಳು ಸಮನಾಗಿ ಕಾರ್ಯ ನಿರ್ವಹಿಸುತ್ತವೆ.

ಇದರ ಪರಿಣಾಮವಾಗಿ ಶರೀರ-ಇಂದ್ರಿಯ-ಮನಗಳು ಪ್ರಸನ್ನವಾಗುತ್ತವೆ. ನವರಾತ್ರಿಯ ಆಚರಣೆ ಗಳು ಈ ಅನುಭವವನ್ನು ಜೀವನದಲ್ಲಿ ಪಡೆಯಲು ಮಾರ್ಗದರ್ಶಕವಾಗಿವೆ.

ನವರಾತ್ರಿ ಹಬ್ಬವು ಕೇವಲ ದೇವಿಯ ಆರಾಧನೆಗೆ ಸೀಮಿತವಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮಗಳನ್ನು ಸಮತ್ತ್ವದೆಡೆಗೆ ಕರೆದೊಯ್ಯುವ ಸಮಗ್ರ ಹಬ್ಬ. ದೇವಿಯ ನವರೂಪಗಳು ನಮಗೆ ಸ್ಥಿರತೆ, ಶಿಸ್ತು, ಶಾಂತಿ, ಪೋಷಣೆ, ಧೈರ್ಯ, ಶುದ್ಧತೆ, ಸಂಪೂರ್ಣತೆಯನ್ನು ಧಾರೆ ಎರೆಯುತ್ತವೆ- ಇವೆಲ್ಲವೂ ಸ್ವಾಸ್ಥ್ಯದ ಅನುಭವಕ್ಕೆ ಅವಶ್ಯಕವಾದ ಗುಣಗಳು.

ಹೀಗಾಗಿ, ನವರಾತ್ರಿ ಆಚರಿಸುವಾಗ ಕೇವಲ ದೇವಿಯ ಪೂಜೆಗಷ್ಟೇ ಅದು ಸೀಮಿತವಾಗದೆ ನಮ್ಮ ದೇಹ ಮತ್ತು ಮನಸ್ಸಿನ ಸಮತೋಲನದ ಪ್ರಯತ್ನವೂ ಆಗಲಿ. ನವರಾತ್ರಿಯ ಶಕ್ತಿಯು ಆಯುರ್ವೇದದ ಯುಕ್ತಿಯಂತೆ ನಮಲ್ಲಿ ಸ್ವಾಸ್ಥ್ಯ, ಸಾತ್ತ್ವಿಕತೆ, ಶುದ್ಧತೆ ಮತ್ತು ಸಮತೋಲನವನ್ನು ಸಂಪನ್ನಗೊಳಿಸಲಿ!

ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಡಾ. ಸಾಧನಾಶ್ರೀ ಪಿ,

View all posts by this author