ಒಂದೊಳ್ಳೆ ಮಾತು
ಕೇರಳದ ಹಚ್ಚ ಹಸಿರಿನ ಸುಂದರ ಗ್ರಾಮ ಕಾಲಟಿ. ಈ ಊರಿನ ಜನರ ಪಾಲಿಗೆ ಜೀವನಾಡಿ ಯಾಗಿದ್ದವಳು ಪೂರ್ಣಾ ನದಿ (ಪ್ರಸ್ತುತ ಪೆರಿಯಾರ್ ನದಿ). ನದಿ ಜನರ ವಾಸ್ತವ್ಯದಿಂದ ಸ್ವಲ್ಪ ದೂರ ಹರಿಯುತ್ತಿತ್ತು. ಇದರಿಂದಾಗಿ ಮಹಿಳೆಯರು ದಿನವೂ ಬಿಸಿಲಿನಲ್ಲಿ ನಡೆದು ಹೋಗಿ ಕುಡಿಯುವ ನೀರು ಹೊತ್ತು ತರಬೇಕಾಗಿತ್ತು. ಒಂದು ಬೇಸಿಗೆಯ ಮಧ್ಯಾಹ್ನ ಬಾಲಕ ಶಂಕರನ ತಾಯಿ ನದಿಗೆ ನೀರು ತರಲು ಹೋಗಿ ಬಿಸಿಲಿನ ಝಳಕ್ಕೆ, ಕಾಲೆಲ್ಲ ಬೊಬ್ಬೆ ಬಂದು ತಲೆ ಸುತ್ತಿ ಮನೆಗೆ ಬರುವ ದಾರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಳು.
ಊಟದ ಹೊತ್ತು ಮೀರುತ್ತಾ, ತಾಯಿಯನ್ನು ಕಾಣದೆ ಅವಳನ್ನು ಅರಸುತ್ತಾ ಹೋದ ಬಾಲ ಶಂಕರನಿಗೆ ದಾರಿಯಲ್ಲಿ ಕಂಡ ದೃಶ್ಯ ಆಘಾತ ಉಂಟು ಮಾಡಿತ್ತು. ಈ ಸ್ಥಿತಿಯಲ್ಲಿ ತಾಯಿಯನ್ನು ಕಂಡ ಶಂಕರನ ಪುಟ್ಟ ಹೃದಯ ಕಂಪಿಸಿ ಹೋಗಿತ್ತು. ತಾಯಿಯನ್ನು ಎಚ್ಚರಿಸಿ ಮನೆಗೆ ಕರೆ ತಂದರೂ ಶಂಕರನಿಗೆ ನೆಮ್ಮದಿ ಇಲ್ಲದಾಗಿತ್ತು. ಹೇಗಾದರೂ ತಾಯಿಯ ಬವಣೆಯನ್ನು ನೀಗಿಸಬೇಕು ಎಂಬ ಆಲೋಚನೆ ಕಾಡುತ್ತಿತ್ತು.
ಇದನ್ನೂ ಓದಿ: Roopa Gururaj Column: ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ
ಅಂದು ರಾತ್ರಿ ಶಂಕರನು ನದಿಯ ಬಳಿ ಹೋಗಿ ಗಂಗಾಮಾತೆಯನ್ನು ಕುರಿತು ಕಣ್ಣೀರು ಹಾಕುತ್ತಾ, ತಾಯೇ, ನನ್ನ ಹೆತ್ತವ್ವಳ ಮತ್ತು ಊರಿನ ಎಲ್ಲಾ ತಾಯಂದಿರ ಕಷ್ಟವನ್ನು ದಯವಿಟ್ಟು ದೂರ ಮಾಡು. ಪೂರ್ಣಾ ನದಿಯು ನಮ್ಮ ಮನೆಯ ಸಮೀಪವೇ ಹರಿಯುವಂತೆ ಅನುಗ್ರಹಿಸು ಎಂದು ಭಕ್ತಿಯಿಂದ ಪ್ರಾರ್ಥಿಸಿದನು. ಅವನ ಮಾತೃ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷವಾದ ಗಂಗೆ ಆಗಲಿ ಎಂದು ಮಾತು ಕೊಟ್ಟಳು. ಮಾರನೇ ದಿನ ಮುಂಜಾನೆ ಕಾಲಟಿ ಗ್ರಾಮದಲ್ಲಿ ಒಂದು ವಿಸ್ಮಯವೇ ನಡೆದು ಹೋಗಿತ್ತು!
ಪೂರ್ಣಾ ನದಿಯು ತನ್ನ ಮೂಲ ಹಾದಿಯನ್ನು ಬದಲಿಸಿ, ಶಂಕರನ ಮನೆಯ ಪಕ್ಕದಲ್ಲೇ ಹರಿಯ ಲಾರಂಭಿಸಿತ್ತು! ಹಾಸಿಗೆಯಿಂದ ಏಳುವ ಮುನ್ನವೇ ಆರ್ಯಾಂಬೆ ಈ ಅಚ್ಚರಿಯನ್ನು ಕಂಡು ಓಡೋಡಿ ಬಂದು, ಶಂಕರಾ, ಏಳು ಮಗೂ! ನೋಡು, ಪೂರ್ಣಾ ನದಿ ನಮ್ಮ ಮನೆಯ ಮುಂದೆಯೇ ಹರಿಯುತ್ತಿದ್ದಾಳೆ! ಎಂದು ಹರ್ಷದಿಂದ ಕೂಗಿದಳು.
ಆಗ ಶಂಕರನು ಮುಗುಳ್ನಕ್ಕು, ಹೌದಮ್ಮ, ನಿನ್ನ ಕಷ್ಟವನ್ನು ನೋಡಿ ನಾನೇ ನಿನ್ನೆ ಗಂಗೆಯನ್ನು ಪ್ರಾರ್ಥಿಸಿದೆ. ಆಕೆ ಒಲಿದು ನಮ್ಮ ಕಷ್ಟವನ್ನು ದೂರ ಮಾಡಿದ್ದಾಳೆ ಎಂದನು. ಬಾಲಕ ಶಂಕರನ ಈ ಮಾತೃಭಕ್ತಿಯ ಸುದ್ದಿ ಊರ ಹರಡಿತು. ಮಹಿಳೆಯರೆಲ್ಲರೂ ಆ ಕರುಣಾಮಯಿ ಬಾಲಕನನ್ನು ಕೊಂಡಾಡಿದರು.
ಇದು ಕೇವಲ ಕಥೆಯಲ್ಲ; ಭೌಗೋಳಿಕವಾಗಿಯೂ ಇದಕ್ಕೆ ಪುರಾವೆಯಿದೆ. ಇಂದಿಗೂ ನೀವು ಕೇರಳದ ‘ಕಾಲಟಿ’ಗೆ ಭೇಟಿ ನೀಡಿದರೆ, ಐತಿಹಾಸಿಕವಾಗಿ ಪೂರ್ಣಾ ಎಂದು ಕರೆಯಲ್ಪಡುತ್ತಿದ್ದ ‘ಪೆರಿಯಾರ್ ನದಿ’ಯು ಪ್ರಾಚೀನ ಶೃಂಗೇರಿ ಶಂಕರ ಮಠ ಹಾಗೂ ಶಂಕರರ ತಾಯಿ ಆರ್ಯಾಂಬೆಯ ಸಮಾಧಿಯ ಪಕ್ಕದಲ್ಲೇ ಒಂದು ಅಚ್ಚರಿಯ ತಿರುವು ತೆಗೆದುಕೊಂಡು ಹರಿಯುವುದನ್ನು ಕಣ್ಣಾರೆ ಕಾಣಬಹುದು.
ಶಂಕರರ ಜೀವನ ಚರಿತ್ರೆಯನ್ನು ವಿವರಿಸುವ ‘ಶಂಕರ ವಿಜಯ’ ಗ್ರಂಥಗಳಲ್ಲಿ ಈ ಘಟನೆಯ ಸ್ಪಷ್ಟ ಉಲ್ಲೇಖವಿದೆ. ನಾವು ಬೆಳೆಯುತ್ತಾ ಹೋದಂತೆ ನಮಗೆ ಸರ್ವಸ್ವವೂ ಆದ ತಾಯಿಯಿಂದ ನಿಧಾನ ವಾಗಿ ದೈಹಿಕವಾಗಿ ಮಾನಸಿಕವಾಗಿ ದೂರ ಸರಿಯುತ್ತಾ ಹೋಗುತ್ತೇವೆ.
ನಮ್ಮ ವಿದ್ಯಾಭ್ಯಾಸ, ನೌಕರಿ ನಮ್ಮದೇ ಸಂಸಾರದ ಜಂಜಾಟಗಳು ಇವೆಲ್ಲವುಗಳ ಮಧ್ಯೆ ನಮಗಾಗಿ ಸರ್ವಸ್ವ ವನ್ನು ತ್ಯಾಗ ಮಾಡಿದ ತಾಯಿಯ ಸ್ಥಾನ ನಿಧನವಾಗಿ ಮಾಸುತ್ತಾ ಹೋಗುತ್ತದೆ. ಆದರೆ ತಾಯಿಗೆ ಮಕ್ಕಳ ಬಗೆಗಿನ ಪ್ರೀತಿ ಅಕ್ಕರೆ ಎಂದಿಗೂ ಕಡಿಮೆಯಾಗುವುದಿಲ್ಲ.
ಬದುಕಿನಲ್ಲಿ ನಾವು ಏನು ಸಾಧಿಸದಿದ್ದರೂ ತಾಯಿಯ ಪ್ರೀತಿ ಎಂದು ನಮ್ಮ ಜೊತೆ ಇರುವಾಗ ಯಾವ ಕೊರಗೂ ಕಾಡುವುದಿಲ್ಲ. ಆದರೆ ಪ್ರಪಂಚ ವನ್ನೇ ಗೆದ್ದು ತಾಯಿಯ ಪ್ರೀತಿಯನ್ನು ಕಳೆದು ಕೊಂಡರೆ ನಮ್ಮ ಸಂಪಾದನೆ ಶೂನ್ಯವೇ ಸರಿ. ನಿಷ್ಕಲ್ಮಶ ಮನಸ್ಸಿನಿಂದ ಬದುಕಿರುವ ಅಷ್ಟು ದಿನ ನಮಗಾಗಿ ಮಿಡಿಯುವ ಜೀವ ತಾಯಿ. ತಾಯಿಯ ಮನಸ್ಸನ್ನು ಎಂದಿಗೂ ನೋಯಿಸಬೇಡಿ. ಆಕೆಯ ಆಶೀರ್ವಾದವಿಲ್ಲದೆ ನಾವು ಸಾಧಿಸಿದ ಯಾವ ಗೆಲುವಿಗೂ ಅರ್ಥವೇ ಇಲ್ಲ.