ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ತುತ್ತು ಅನ್ನಕ್ಕಿರುವಷ್ಟೇ ಗೌರವ ಕವಳಕ್ಕೂ ಇದೆ

ಊಟ-ತಿಂಡಿ ಮಾಡಿದ ಮೇಲೆ ಒಂದು ಎಲೆ-ಅಡಕೆ ಹಾಕುವುದಲ್ಲ, ಊಟ-ತಿಂಡಿ ಮಾಡು ವುದೇ ಆಮೇಲೆ ಕವಳ ಹಾಕುವುದಕ್ಕೆ ಎಂಬಂತಾಗಿಬಿಟ್ಟಿದೆ. ಹೀಗೆ ತಾಂಬೂಲ ಅಗಿಯುವ ಗಂಡಸರ ತುಟಿಗಳು ಹೆಚ್ಚಾಗಿ ಕೆಂಪಡರಿದರೆ, ಆತ ತನ್ನ ಹೆಂಡತಿಯನ್ನು ಅಧಿಕವಾಗಿ ಪ್ರೀತಿಸುತ್ತಾನೆ ಎನ್ನುವ ಮಾತೂ ಇದೆ.

ವಿದ್ಯಮಾನ

ಕಳೆದ ವಾರ, ‘ಕವಳಾ ಕೊಡೆ ತಾಯಿ ಕವಳಾ ಕೊಡು ಅಮ್ಮಾ’ ಎನ್ನುವುದರ ಬಗ್ಗೆ ಬರೆದಿದ್ದೆ. ಈ ವಾರ ‘ಕವಳಾ ಬೇಡಪ್ಪಾ ಕವಳಾ ಸಾಕಪ್ಪಾ’ ಎನ್ನುವ ಅಮ್ಮನ ಮಾತಿನ ಬಗ್ಗೆ ಸ್ವಲ್ಪ ಬರೆಯಬೇಕಾಗಿದೆ. ಇದೇನಿದು ಎಂದು ನಿಮಗನಿಸುತ್ತಿರಬಹುದು. ಹೌದು, ಕರ್ನಾಟಕದ ಕರಾವಳಿ, ಮಲೆನಾಡು ಮುಂತಾದ ಪ್ರದೇಶಗಳಲ್ಲಿ ತಾಂಬೂಲಕ್ಕೆ ‘ಕವಳ’ ಎನ್ನುತ್ತಾರೆ.

ಬೇರೆ ಬೇರೆ ಪ್ರದೇಶಗಳಲ್ಲಿ, ತಾಂಬೂಲಕ್ಕೆ ಬೀಡಾ, ಎಲೆಯಡಿಕೆ, ಪಾನ್ ಮುಂತಾದ ಹೆಸರುಗಳಿವೆ. ಆದರೆ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಮಾತ್ರ ತಾಂಬೂಲಕ್ಕೆ ಕವಳ ಅಂತ ಇರುವುದು ವಿಶೇಷ. ಈ ಭಾಗದ ಜನರನ್ನು ಈ ಕವಳ ಎಷ್ಟು ಆವರಿಸಿದೆ ಯೆಂದರೆ, ಬೆಳಗ್ಗೆ ಬಹಿರ್ದೆಸೆಗೆ ಹೋಗುವುದರಿಂದ ಹಿಡಿದು, ಯಾವುದೇ ಕೆಲಸ ಕವಳ ವಿಲ್ಲದೇ ಮುಂಬರಿಯುವುದಿಲ್ಲ.

ತಾಯಿ, ‘ತೋಟಕ್ಕೆ ಹೋಗ್ಬಾರೋ ಮಗನೇ’ ಅಂದ್ರೆ, ‘ಒಂದು ಕವಳ ಹಾಕಿ ಹೋಗುತ್ತೇ ನಮ್ಮಾ’ ಅಂತಾರೆ; ‘ಸ್ನಾನ ಮಾಡ್ಬಾರೋ’ ಅಂದರೆ, ‘ಒಂದೊಳ್ಳೆ ಕವಳ ಹಾಕಿ ಸ್ನಾನಕ್ಕೆ ಹೋಗುತ್ತೇನೆ’ ಎನ್ನುತ್ತಾರೆ ಅಲ್ಲಿನ ಗಂಡಸರು. ಕಾರು ಬೈಕುಗಳಿಗೆ ಪೆಟ್ರೋಲ್ ಡೀಸೆಲ್ ಇದ್ದಂತೆ, ಅಲ್ಲಿನ ಪುರುಷರ ನಿತ್ಯಜೀವನ ಪ್ರಯಾಣಕ್ಕೆ ಕವಳವೇ ಇಂಧನವಾಗಿ ಕೆಲಸ ಮಾಡುತ್ತದೆ.

ಊಟ-ತಿಂಡಿ ಮಾಡಿದ ಮೇಲೆ ಒಂದು ಎಲೆ-ಅಡಕೆ ಹಾಕುವುದಲ್ಲ, ಊಟ-ತಿಂಡಿ ಮಾಡು ವುದೇ ಆಮೇಲೆ ಕವಳ ಹಾಕುವುದಕ್ಕೆ ಎಂಬಂತಾಗಿಬಿಟ್ಟಿದೆ. ಹೀಗೆ ತಾಂಬೂಲ ಅಗಿಯುವ ಗಂಡಸರ ತುಟಿಗಳು ಹೆಚ್ಚಾಗಿ ಕೆಂಪಡರಿದರೆ, ಆತ ತನ್ನ ಹೆಂಡತಿಯನ್ನು ಅಧಿಕವಾಗಿ ಪ್ರೀತಿಸುತ್ತಾನೆ ಎನ್ನುವ ಮಾತೂ ಇದೆ. ‘ಯಾಕೋ ನಿಮ್ಮ ಕವಳ ಜಾಸ್ತಿಯಾಗಿದೆ, ಸ್ವಲ್ಪ ಕಡಿಮೆ ಮಾಡಿ’- ಇದು ಮಲೆನಾಡಿನ ತಾಯಿ, ಹೆಂಡತಿಯಿಂದ ಗಂಡಸರು ನಿತ್ಯ ಕೇಳಿಸಿ ಕೊಳ್ಳುವ ಸಲಹೆ!

ಇದನ್ನೂ ಓದಿ: Vinayaka V Bhat Column: ಅಹಂಕಾರಜನ್ಯ ವ್ಯಾಧಿಗಳಿಗೆ ಭಿಕ್ಷಾನ್ನವೇ ಪರಮೌಷಧ

ಮಲೆನಾಡಿನ ಪ್ರತಿ ಮನೆಯಲ್ಲಿ ನಾವು ಕವಳದ ಬಟ್ಟಲನ್ನು ನೋಡಬಹುದು. ಮಲೆನಾಡಿ ನಲ್ಲಿ ‘ಬಟ್ಟಲು’ ಎಂದರೆ ಬೆಂಗಳೂರಿನ ‘ತಟ್ಟೆ’. ಬೆಂಗಳೂರಿನ ತಟ್ಟೆಯೆಂದರೆ ಅಲ್ಲಿ ಅದು ಬಟ್ಟಲು. ಊಟ ಮಾಡುವುದು ಬಟ್ಟಲಲ್ಲಿ, ನೀರು ಕುಡಿಯುವುದು ತಟ್ಟೆಯಲ್ಲಿ ಅಂದರೆ ನಿಮಗೆ ಅರ್ಥವಾದೀತು.

ಇರಲಿ, ಸಾಂಪ್ರದಾಯಿಕ ಕವಳದ ಬಟ್ಟಲನ್ನು ಸ್ವಲ್ಪ ವಿವರಿಸೋಣ. ಸಾಮಾನ್ಯವಾಗಿ ಕವಳದ ಬಟ್ಟಲು ಮರದಿಂದ ಅಥವಾ ಹಿತ್ತಾಳೆಯಿಂದ ಮಾಡಿರುವಂಥದ್ದಾಗಿರುತ್ತದೆ. ಒಂದಷ್ಟು ಎಲೆ-ಅಡಕೆ, ಅಡಕೆ ಕತ್ತರಿಸಲು ಬಳಸುವ ಅಡಕತ್ತರಿ, ಸುಣ್ಣ ಮತ್ತು ತಂಬಾಕಿನ ಎಸಳನ್ನು ತುಂಬುವ ಅಂಡೆಯಾಕಾರಾದ ಬೆಳ್ಳಿಯ ಅಥವಾ ಸ್ಟೀಲಿನ ವಸ್ತು (ಸುಣ್ಣದಂಡೆ) ಇವಿಷ್ಟು ಕವಳದ ಬಟ್ಟಲಿನಲ್ಲಿರುತ್ತವೆ.

ಆ ತಂಬಾಕಿಗೂ ಒಂದು ವ್ಯವಸ್ಥೆಯಿದೆ. ಒಣಗಿಸಿದ ತಂಬಾಕಿನ ಉದ್ದನೆಯ ಎಲೆಯನ್ನು ಬಿಸಿನೀರಿನಲ್ಲಿ ತೊಳೆದು, ಹದಬರಿಸಿ, ಹುರಿ ಹೊಸೆದು, ಸುಣ್ಣದ ಡಬ್ಬಿಯ ಒಂದು ಬದಿಗೆ ತುಂಬಲಾಗುತ್ತದೆ. ಕವಳದ ಬಟ್ಟಲಿಗೆ ಒಂದು ಪಾವಿತ್ರ್ಯವೂ ಇದೆ. ಅಪ್ಪಿ ತಪ್ಪಿ ಕಾಲು ತಾಕಿದರೆ ಮನುಷ್ಯರಿಗೆ ನಮಸ್ಕಾರ ಮಾಡುತ್ತಾರೋ ಇಲ್ಲವೋ, ಆದರೆ ಕವಳದ ಬಟ್ಟಲಿಗೆ ಕಾಲು ತಾಕಿದರೆ ನಮಸ್ಕಾರ ಮಾಡಬೇಕು.

kavala

ಇನ್ನು, ಎಲೆ-ಅಡಕೆ ಅತಿ ಅಭ್ಯಾಸವಿದ್ದ ಜನ, ಬಟ್ಟೆಯಿಂದ ಹೊಲಿದ ‘ಎಲೆ ಸಂಚಿ’ (ಸಣ್ಣ ಚೀಲ) ಯನ್ನು ಪ್ರಯಾಣ ಕಾಲದ ಸೌಕರ್ಯವಾಗಿ ತಮ್ಮ ಜತೆಗೆ ತೆಗೆದುಕೊಂಡು ಹೋಗು ವ ಅಭ್ಯಾಸವೂ ಇತ್ತು. ಆದರೆ, ಕವಳದ ಬಟ್ಟಲಿಗಿರುವ ಮಾನ, ಕವಳದ ಸಂಚಿಗೆ ಸಿಗುವು ದಿಲ್ಲ.

ಹೀಗೆ ಕವಳದ ಬಟ್ಟಲಿನ ನಿರ್ವಹಣೆಗೆ ಒಂದಷ್ಟು ನಿಯಮಗಳೂ ಇವೆ. ಸುಣ್ಣದ ಡಬ್ಬಿಗೆ ರಾತ್ರಿ ಸುಣ್ಣ ತುಂಬುವ ಹಾಗಿಲ್ಲ, ಹಾಗೊಮ್ಮೆ ತುಂಬಲೇಬೇಕಾದರೆ, ಸುಣ್ಣ ತುಂಬಿದ ದೊಡ್ಡ ಡಬ್ಬಿಗೆ ‘ನೆಂಟರು ಬಂದಿದ್ದಾರೆ’ ಎಂದು ಸುಳ್ಳು ಹೇಳಿ ‘ರಿಕ್ವೆಸ್ಟ್’ ಮಾಡಿ ಸುಣ್ಣ ತರಬೇಕು. ಕೌಳಿಗೆಯಿಂದ ವೀಳ್ಯದೆಲೆ ತಂದು ಕವಳದ ಬಟ್ಟಲಿಗೆ ಹಾಕುವಾಗ, ಬೋರಲಾಗಿ ಬೀಳದಂತೆ ಎಚ್ಚರ ವಹಿಸಬೇಕು, ಅಂಗಾತವಾಗಿಯೇ ಕವಳದ ಬಟ್ಟಲಿಗೆ ಬೀಳಬೇಕು.

ಅಲ್ಲದಿದ್ದರೆ ಅಪಶಕುನ ಎಂದು ಪರಿಗಣಿಸುತ್ತಾರೆ ಅಲ್ಲಿನ ಹಿರಿಯರು. ವೀಳ್ಯದೆಲೆಯ ತೊಟ್ಟನ್ನು ದರಿದ್ರ ಎಂದು ಪರಿಭಾವಿಸಿ ದೂರ ಎಸೆಯುತ್ತಾರೆ. ಎಲೆಯ ಅಗ್ರಭಾಗವನ್ನು ‘ಲಕ್ಷ್ಮಿ’ ಎಂದು ಪರಿಗಣಿಸಿ ಆಡುಗೆನ್ನೆಗೆ ಹಚ್ಚಿಕೊಳ್ಳುತ್ತಾರೆ.

ಇನ್ನು, ಮದುವೆಗೋ ಮುಂಜಿಗೋ ಆಮಂತ್ರಣ ನೀಡಲು ಮನೆಗೆ ಬಂದವರಿಗೆ ಊಟ ತಿಂಡಿ ಮಾಡಲು ಪುರುಸೊತ್ತಿಲ್ಲದಿದ್ದರೆ, ‘ಒಂದು ಕವಳನಾದರೂ ಹಾಕಿ ಹೋಗಿ’ ಎನ್ನು ವುದು ವಾಡಿಕೆ. ಒಂದು ತಾಂಬೂಲಕ್ಕೆ ತುತ್ತು ಊಟಕ್ಕಿರುವ ಮರ್ಯಾದೆಯಿದೆ ಈ ಭಾಗ ದಲ್ಲಿ. ಹಾಗಾಗಿಯೇ ತಾಂಬೂಲಕ್ಕೆ ‘ಕವಳ’ ಎನ್ನುವ ಹೆಸರು ಬಂದಿರಬಹುದು ಎನಿಸುತ್ತದೆ.

ಹಿಂದೂ ನಂಬಿಕೆಯಲ್ಲಿ ತಾಂಬೂಲಕ್ಕೆ ಬಹಳ ಮಹತ್ವವನ್ನು ಹೇಳಲಾಗಿದೆ. ದೇವರಿಗೆ ಪೂಜೆ ಮಾಡುವಾಗ ಹದಿನಾರು ಬಗೆಯ ಉಪಚಾರಗಳನ್ನು ಹೇಳುತ್ತಾರೆ. ಆವಾಹನೆ, ಪಾದ ಪ್ರಕ್ಷಾಳನೆ ಅರ್ಘ್ಯ, ಆಚಮನ, ಸ್ನಾನ/ಅಭಿಷೇಕ, ವಸ್ತ್ರಗಳನ್ನು ಅರ್ಪಿಸುವುದು, ಯಜ್ಞೋ ಪವೀತವನ್ನು ಅರ್ಪಿಸುವುದು, ಗಂಧ-ಚಂದನಗಳನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು, ದೀಪವನ್ನು ಬೆಳಗಿಸುವುದು, ನೈವೇದ್ಯ ಅರ್ಪಿಸುವುದು. ಆಮೇಲೆ, ಹಣ್ಣು ಸಮರ್ಪಿಸಿ ಮಂಗಳಾರತಿ, ನಮಸ್ಕಾರ ಮಾಡುವ ಮೊದಲು ‘ಮುಖ (ಬಾಯಿ) ಶುದ್ಯರ್ಥೇ ತಾಂಬೂಲಂ ಸಮರ್ಪಯಾಮಿ’ ಎಂದು ತಾಂಬೂಲವನ್ನು ಅರ್ಪಿ ಸುವುದೂ ಪೂಜಾವಿಧಿಯ ಭಾಗವೇ ಆಗಿದೆ.

ಹೆಣ್ಣು ದೇವರಾಗಲಿ ಅಥವಾ ಗಂಡು ದೇವರಾಗಲಿ, ಪೂಜೆಯಲ್ಲಿ ತಾಂಬೂಲ ಸಮರ್ಪಣೆ ಯಂತೂ ಆಗಲೇಬೇಕು. ಸಾಮಾನ್ಯವಾಗಿ ಹೆಂಗಸರು ತಾಂಬೂಲ ಚರ್ವಣ ಮಾಡುವುದು ಕಡಿಮೆಯೇ, ಆದರೆ ಹೆಣ್ಣು ದೇವರು ಎಲೆ-ಅಡಕೆ ಹಾಕುತ್ತಾಳೆಯೇ ಎಂದರೆ, ಹೌದು ಎನ್ನುವುದೇ ಉತ್ತರವಾಗಿದೆ.

‘ತಾಂಬೂಲ ಪೂರಿತ ಮುಖೀ ದಾಡಿಮೀ ಕುಸುಮಪ್ರಭಾ’ ಎಂದು ಶ್ರೀ ಲಲಿತಾ ಸಹಸ್ರನಾಮ ದಲ್ಲಿ ದೇವಿಯನ್ನು ಸ್ತುತಿಸಲಾಗಿರುವುದನ್ನು ನೋಡುವಾಗ, ಹೆಣ್ಣು ದೇವರೂ ತಾಂಬೂಲ ವನ್ನು ಬಳಸುತ್ತಾಳೆ ಎನ್ನುವುದು ತಿಳಿದು ಬರುತ್ತದೆ. ಈ ನಾಮವು ದೇವಿಯ ಮುಖವು ತಾಂಬೂಲದಿಂದ ಕಂಗೊಳಿಸುತ್ತದೆ ಎನ್ನುತ್ತದೆ.

ತಾಂಬೂಲವನ್ನು ಅಗಿಯುವುದರಿಂದ ಕೆಂಪಾದ ರಸವು ಉತ್ಪನ್ನವಾಗುತ್ತದೆ. ಕೆಂಪು ಬಣ್ಣವು ಕರುಣೆಯ ಸಂಕೇತವಾಗಿರುವುದರಿಂದ, ದೇವಿಯ ಮುಖವು ಕರುಣಾರಸ ಪೂರಿತ ವಾಗಿದೆ ಎನ್ನುವುದನ್ನು ಈ ನಾಮವು ಪರೋಕ್ಷವಾಗಿ ಹೇಳುತ್ತದೆ ಎನ್ನುವುದು ಬೇರೆ ಮಾತು.

ಶಾಸ್ತ್ರಾನುಸಾರ ವಿದ್ಯಾರ್ಥಿಗಳಿಗೆ (ಬ್ರಹ್ಮಚಾರಿಗಳಿಗೆ) ಹಾಗೂ ಸನ್ಯಾಸಾಶ್ರಮಿಗಳಿಗೆ ತಾಂಬೂಲ ಚರ್ವಣ ನಿಷಿದ್ಧ. ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ‘ತಾಂಬೂಲ’ ಹಾಸುಹೊಕ್ಕಾಗಿದೆ. ಮನುಷ್ಯ-ದೈವ, ಅತಿಥಿ-ಆತಿಥೇಯ, ಗಂಡು-ಹೆಣ್ಣು ಹೀಗೆ ಜೀವನದ ವಿವಿಧ ಸಂಬಂಧಗಳನ್ನು ತಾಂಬೂಲವೇ ಬೆಸೆಯುತ್ತದೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಅಷ್ಟಮಂಗಳ, ಆರೂಢ ಪ್ರಶ್ನೆಗಳಿದ್ದಂತೆ ‘ತಾಂಬೂಲ ಪ್ರಶ್ನೆ’ ಎಂತಲೂ ಇದೆ. ತಾಂಬೂಲ ಪ್ರಶ್ನೆ ಎನ್ನುವುದು ಜ್ಯೋತಿರ್ವಿಜ್ಞಾನ ದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಒಂದು ವಿಧಾನವಾಗಿದೆ. ಕೇರಳ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ತಾಂಬೂಲ ಪ್ರಶ್ನೆಯನ್ನು ತುಂಬಾ ಜನ ಇಂದಿಗೂ ನಂಬುತ್ತಾರೆ.

ಮುಖ್ಯವಾಗಿ ವೀಳ್ಯದೆಲೆಯ ಸಂಖ್ಯೆ, ಸ್ವರೂಪದ ಆಧಾರದಲ್ಲಿ ಪ್ರಶ್ನೆಗೆ ಫಲ ಹೇಳುವ ವ್ಯವಸ್ಥೆಯನ್ನು ತಾಂಬೂಲ ಪ್ರಶ್ನೆ ಎಂದು ಹೇಳಲಾಗುತ್ತದೆ. ಪ್ರಶ್ನೆಕರ್ತ ಕೊಡುವ ತಾಂಬೂಲದ ಸಹಾಯದಿಂದ ಶುಭಾಶುಭ ಫಲಗಳನ್ನು ಹೇಳಲಾಗುತ್ತದೆ.

ಮದುವೆಯ ನಿಶ್ಚಿತಾರ್ಥಕ್ಕೂ ತಾಂಬೂಲದ ಬಟ್ಟಲನ್ನೇ ವಿನಿಮಯ ಮಾಡಿಕೊಳ್ಳುವ ಶಿಷ್ಟಾಚಾರ ಇಂದಿಗೂ ಇದೆ. ಹಿಂದೆ ಯುದ್ಧಕ್ಕಾಗಿ ವಿರೋಧಿಗಳನ್ನು ಆಮಂತ್ರಿಸಲೂ ‘ತಾಂಬೂಲ’ದ ಬಳಕೆಯಾಗುತ್ತಿತ್ತು; ಸಂಧಾನದ ನೆಪದಿಂದ ಹಸ್ತಿನಾಪುರಕ್ಕೆ ಬಂದ ಶ್ರೀ ಕೃಷ್ಣನಿಗೆ, ಕೊನೆಯಲ್ಲಿ ದುರ್ಯೋಧನ ಬಂಗಾರದ ಬಟ್ಟಲಿನಲ್ಲಿ ಧುರ ವೀಳ್ಯವನ್ನು (ರಣವೀಳ್ಯ) ಕೊಟ್ಟು ಯುದ್ಧಕ್ಕೆ ಆಮಂತ್ರಿಸಿದ ಕಥೆಯನ್ನು ನಾವು ಕೇಳುತ್ತೇವೆ.

ಕೊಲ್ಲಲೂ ತಾಂಬೂಲವೇ ಸಾಕ್ಷಿ (ಸುಪಾರಿ); ಕಾಯುವಂತೆ ದೇವರನ್ನು ಪ್ರಾರ್ಥಿಸಲೂ ತಾಂಬೂಲದ ಸಮರ್ಪಣೆ, ಕೆಲಸ ಶುಭವಿರಲಿ ಅಥವಾ ಅಶುಭವಿರಲಿ, ಸಾಕ್ಷೀಭಾವದಿಂದ ತಾಂಬೂಲ ಅಲ್ಲಿ ಇರಲೇಬೇಕು. ಹಾಗೆ ತಾಂಬೂಲ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿ ಕೊಂಡಿದೆ ಎನ್ನಬಹುದು. ವೀಳ್ಯ ಸ್ವೀಕರಿಸಿದವ, ಯಾವುದೇ ಕಾರಣಕ್ಕೆ ಮಾತು ತಪ್ಪುವ ಹಾಗಿಲ್ಲ.

ಈಗೀಗ ತಾಂಬೂಲದ ಮೂಲರೂಪ ವಿರೂಪಗೊಂಡು, ತಂಬಾಕು, ಖೈನಿ, ಅನೇಕ ಮಸಾಲೆ ಪದಾರ್ಥಗಳು ಗುಟಕಾ ಮೂಲಸ್ವರೂಪಕ್ಕೆ ಸೇರಿಕೊಂಡುಬಿಟ್ಟಿವೆ. ವಾಸ್ತವಿಕವಾಗಿ ತಾಂಬೂಲದ ‘ಡೆಫಿನಿಶನ್’ ಇರುವುದು ‘ಫೂಗೀಫಲ ಸಮಾಯುಕ್ತಂ ನಾಗವಲ್ಲೀ ದಲೈರು ತಮ, ಚೂರ್ಣಂಕರ್ಪೂರ ಸಮ್ಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಮ’ ಎಂದಿರುವುದಾಗಿದೆ.

ಅಡಕೆ, ನಾಗವಲ್ಲಿ ಜಾತಿಯ ವೀಳ್ಯದೆಲೆ, ಕರ್ಪೂರ ಹಾಗೂ ಲವಂಗ ಇವಷ್ಟು ಸೇರಿದರೆ ತಾಂಬೂಲವಾಗುತ್ತದೆ. ಅಡಕೆ, ನಾಗವಲ್ಲಿ ಎಲೆ, ಕರ್ಪೂರ ಹಾಗೂ ಲವಂಗ ಈ ನಾಲ್ಕೂ ದ್ರವ್ಯಗಳಿಗೆ ಪ್ರತ್ಯೇಕವಾಗಿ ವಿಶೇಷವಾದ ಔಷಧಿಯ ಗುಣಗಳಿವೆ. ಇನ್ನು, ನಾಲ್ಕೂ ಸೇರಿದ ರಂತೂ ಅದು ಅದ್ಭುತವಾದ ಔಷಧಿಯ ಸತ್ವವನ್ನು ಪಡೆಯುತ್ತದೆ.

ತಾಂಬೂಲಕ್ಕೆ ಬಳಸುವ ನಾಗವಲ್ಲಿ ಅಥವಾ ನಾಗಬಳ್ಳಿ ಎಲೆ ಇಂದಿಗೂ ಮಲೆನಾಡು ಕರಾವಳಿಗಳಲ್ಲಿ ಹೇರಳವಾಗಿ ದೊರೆಯುತ್ತದೆ. ಕುಮಟಾ, ಹೊನ್ನಾವರ ಭಾಗದ ಈ ನಾಗಬಳ್ಳಿ ಎಲೆಗೆ ಎಲ್ಲಿದ ಬೇಡಿಕೆಯಿದೆ. ವಿದೇಶಕ್ಕೂ ರಫ್ತಾಗುತ್ತದೆ. ಈ ಭಾಗದ ಜನರಿಗೆ ವೀಳ್ಯದೆಲೆ ಆದಾಯದ ಒಂದು ಪ್ರಮುಖ ಮೂಲವಾಗಿದೆ.

ಕುರುಕ್ಷೇತ್ರ ಯುದ್ಧದ ನಂತರ ಹಸ್ತಿನಾಪುರದಲ್ಲಿ ‘ಧರ್ಮಸಾಮ್ರಾಜ್ಯ’ ಸ್ಥಾಪನೆಯಾಯಿತು. ತಾಂಬೂಲಪ್ರಿಯರಾದ ಪಾಂಡವರಿಗೆ ವೀಳ್ಯದೆಲೆ ದೊರಕದೆ ಇದ್ದಾಗ ಪಾತಾಳ ಲೋಕ ದಿಂದಲಾದರೂ ಅದನ್ನು ತರಬೇಕೆಂದು ದೂತನೊಬ್ಬನನ್ನು ಪಾತಾಳಕ್ಕೆ ಅಟ್ಟಲಾಯಿತು. ಪಾತಾಳದಲ್ಲಿದ್ದ ಅರ್ಜುನನ ಪ್ರೇಯಸಿಯಾದ ಉಲೂಚಿ ತನ್ನ ಕಿರುಬೆರಳ ತುದಿಯನ್ನು ಕತ್ತರಿಸಿ ಹಸ್ತಿನಾಪುರದಲ್ಲಿ ಅದನ್ನು ನೆಡುವಂತೆ ತಿಳಿಸುತ್ತಾಳೆ.

ಹಸ್ತಿನಾಪುರದಲ್ಲಿ ಅದನ್ನು ನೆಟ್ಟಾಗ ಅದರಿಂದ ಬಳ್ಳಿಯೊಂದು ಹುಟ್ಟಿಕೊಂಡಿತು. ನಾಗಲೋಕದಿಂದ ಭೂಲೋಕಕ್ಕೆ ಬಂದ ಈ ಬಳ್ಳಿಯನ್ನು ‘ನಾಗವಲ್ಲಿ’ಯೆಂದು ಕರೆಯ ಲಾಯಿತು. ಈ ಬಳ್ಳಿಗೆ ಹಬ್ಬುವುದಕ್ಕೆ ಆಸರೆ ಬೇಕಲ್ಲ! ಈ ಬಳ್ಳಿಯ ಸೌಂದರ್ಯಕ್ಕೆ ಮಾರು ಹೋದ ಪೂಗವೃಕ್ಷ (ಅಡಕೆ ಮರ) ಅದಕ್ಕೆ ಆಸರೆಯನ್ನು ನೀಡಿತು. ಪೂಗವೃಕ್ಷವನ್ನು ತಬ್ಬಿ ಆವರಿಸುವ ನಾಗವಲ್ಲಿಗೆ ಎತ್ತರೆತ್ತರಕ್ಕೇರಿ ಅದನ್ನು ಚುಂಬಿಸುವ ಬಯಕೆ!

ಹೀಗೆ, ನಾಗಲೋಕದ ಬಳ್ಳಿಯು ಭೂಮಿಗೆ ಬಂದು ಪೂಗವೃಕ್ಷದ ಜತೆ ಅಮರಪ್ರೇಮ ಸಾಧಿಸಿ ದ ಕಥೆಯೂ ಜನಪದದಲ್ಲಿದೆ. ಅಂಬಾಡಿ, ಬನಾರಸ್, ಕಲ್ಕತ್ತಾ ಮುಂತಾದ, ಭಾರತದಲ್ಲಿ ಮೂವತ್ತಕ್ಕೂ ಮಿಕ್ಕಿ ವೀಳ್ಯದೆಲೆಯ ತಳಿಗಳಿವೆ. ಕೆಲವು ಬಗೆಯ ವೀಳ್ಯದೆಲೆಯನ್ನು ಪಾಕಿಸ್ತಾನದಿಂದಲೂ ಆಮದು ಮಾಡಿಕೊಳ್ಳಲಾಗುತ್ತದೆ.

ತಾಂಬೂಲದ ಸೃಷ್ಟಿಯ ಕುರಿತಂತೆ ಇನ್ನೊಂದು ಕಥೆಯಿದೆ. ಸಮುದ್ರ ಮಥನಾನಂತರ ಸಮುದ್ರದಿಂದ ಉದ್ಭವಿಸಿದ ಅಮೃತವನ್ನು ಮಹಾವಿಷ್ಣು ಮೋಹಿನಿಯ ರೂಪ ಧರಿಸಿ ದೇವತೆಗಳಿಗೆ ಹಂಚುತ್ತಾನೆ. ಹಂಚಿ ಮಿಕ್ಕುಳಿದ ಅಮೃತದ ಪಾತ್ರೆಯನ್ನು ಮೋಹಿನಿ ಇಂದ್ರನ ಪಟ್ಟದಾನೆ ಐರಾವತದ ಬಳಿಯಿರಿಸುತ್ತಾಳೆ.

ಐರಾವತದ ಸೊಂಡಿಲ ಬೀಸುವಿಕೆಗೆ ಅಮೃತವು ಭೂಮಿಯ ಮೇಲೆ ಚೆಲ್ಲಲ್ಪಟ್ಟು, ಅಲ್ಲಿ ಬಳ್ಳಿಯೊಂದು ಸೃಷ್ಟಿಯಾಗುತ್ತದೆ. ಆ ಬಳ್ಳಿಯ ಮಹತ್ವವನ್ನು ತಿಳಿಸಬೇಕೆಂದು ದೇವೇಂದ್ರ ನು ದೇವವೈದ್ಯ ಧನ್ವಂತರಿಯನ್ನು ಕೇಳಿಕೊಂಡಾಗ ಧನ್ವಂತರಿಯು ಅದರ ಔಷಧಯುಕ್ತ ಗುಣಗಳು ಮತ್ತು ಮಹತ್ವವನ್ನು ದೇವತೆಗಳಿಗೆ ತಿಳಿಸುತ್ತಾನೆ.

ಸಾರಾಂಶವಾಗಿ, ವೀಳ್ಯದೆಲೆ ಅಥವಾ ತಾಂಬೂಲ ಅಮೃತಸಮಾನ ಗುಣಗಳನ್ನು ಹೊಂದಿ ದೆ ಎನ್ನುವುದನ್ನು ತಿಳಿಸಲು ಈ ಕಥೆಯ ಸೃಷ್ಟಿಯಾಗಿರಲೂಬಹುದು. ತಾಂಬೂಲದ ಹದಿಮೂರು ಗುಣಗಳನ್ನು ವರ್ಣಿಸುವ ಸಂಸ್ಕೃತದ ಶ್ಲೋಕವೊಂದು ಹೀಗಿದೆ.

‘ತಾಂಬೂಲಂ ಕಟುತಿ ಕ್ತಮುಷ್ಣ ಮಧುರಂ ಕ್ಷಾರಂ ಕಷಾಯಾನ್ವಿತಂ, ವಾತಘ್ನಂ ಕ್ರಿಮಿ ನಾಶನಂ ಕಫಹರಂ ದುರ್ಗಂಧ ನಿರ್ನಾಶನಂ, ವಕ್ತಸ್ಯಾಭರಣಂ ವಿಶುದ್ಧಿಕರಣಂ ಕಾಮಾಗ್ನಿ ಸಂದೀಪನಂ, ತಾಂಬೂಲಸ್ಯ ಸಖೇ ತ್ರಯೋದಶ ಗುಣಾಃ ಸ್ವರ್ಗೇಪಿ ತೇ ದುರ್ಲಭಃ’ ತಾಂಬೂಲವು ಖಾರ, ಹುಳಿ, ಉಷ್ಣ, ಮಧುರ, ಕ್ಷಾರ ಮತ್ತು ಒಗರೆಂಬ ರುಚಿಗಳುಳ್ಳದ್ದು. ವಾತ, ಕಫಗಳನ್ನು ಪರಿಹರಿಸುವ, ಬಾಯಿ ವಾಸನೆಯನ್ನು ಹೋಗಲಾಡಿಸುವ, ಉದರದಲ್ಲಿ ಅನಾರೋಗ್ಯಕ್ಕೆ ಕಾರಣವಾದ ಕ್ರಿಮಿಗಳನ್ನು ನಾಶ ಮಾಡುವ, ಮುಖಕ್ಕೆ ಆಭರಣವಾಗಿ ರುವ, ವಿಶುದ್ಧಕಾರಕವಾಗಿಯೂ ಇರುವ ಈ ತಾಂಬೂಲವು ಗಂಡು-ಹೆಣ್ಣುಗಳ ಮಿಲನ ವನ್ನು ಪ್ರಚೋದಿಸುವಂಥದ್ದಾಗಿದೆ.

ಹದಿಮೂರು ಗುಣಗಳಿಂದ ಸಮೃದ್ಧವಾಗಿರುವ ಭೂಮಿಯಲ್ಲಿ ದೊರೆಯುವ ತಾಂಬೂಲ ದಂಥ ವಸ್ತು ಸ್ವರ್ಗದಲ್ಲಿಯೂ ಸಿಗಲಾರದು ಎನ್ನುವುದು ಈ ಶ್ಲೋಕದ ಭಾವಾರ್ಥ. ಬೆಣ್ಣೆ ಕಾಸಿ ತುಪ್ಪ ತಯಾರಿಸುವ ಪ್ರಕ್ರಿಯೆಯಲ್ಲಿ ವೀಳ್ಯದೆಲೆಯನ್ನು ಹಾಕಿ ಅದನ್ನು ಸುಗಂಧ ಯುಕ್ತವಾಗಿಸುವ ಕ್ರಮವಿದೆ. ಹಾಗೆ ತಯಾರಿಸಿದ ತುಪ್ಪ ಬಹಳ ಕಾಲ ಬಾಳಿಕೆಯೂ ಬರುತ್ತದೆ.

ಬಾಣಂತಿಯರಿಗೆ ಔಷಧಯುಕ್ತವಾದ ತಾಂಬೂಲವನ್ನು ನೀಡುವುದನ್ನು, ಸಣ್ಣ ಮಕ್ಕಳಿಗ ಕಫ ಕಟ್ಟಿದಾಗ ವೀಳ್ಯದೆಲೆಯ ರಸದ ಜತೆಗೆ ಜೇನುತುಪ್ಪ ವನ್ನು ಬೆರೆಸಿ ಕುಡಿಸುವ ಕ್ರಮವೂ ಇದೆ. ಆಯುರ್ವೇದಲ್ಲಿ ಉಕ್ತವಾದ ತಾಂಬೂಲದ ಗುಣಗಳ ಕುರಿತು ‘ವಿಶ್ವವಾಣಿ’ ಯ ಸಹ ಅಂಕಣಗಾರ್ತಿ ಡಾ.ಸಾಧನಶ್ರೀ ಇನ್ನೂ ಹೆಚ್ಚಿನ ಬೆಳಕು ಚೆಲ್ಲಬಲ್ಲರು.

ವ್ಯಾಪಾರದ ದೃಷ್ಟಿಯಿಂದಲೂ, ತಾಂಬೂಲವನ್ನು ಮೀರಿಸಿ ಲಾಭಕೊಡುವ ಇನ್ನಾವ ವ್ಯವಹಾರವೂ ಇಲ್ಲವೇನೋ! ಸರಿಸುಮಾರು ೬೦ರಿಂದ ೭೦ ಪ್ರತಿಶತ ಲಾಭವನ್ನು ಪಾನ್ ಬೀಡಾ ಅಂಗಡಿಗಳು ಗಳಿಸುತ್ತವೆಯಂತೆ. ಅಡಕೆ, ಏಲಕ್ಕಿ, ನಾಗವಲ್ಲಿ ಎಲೆಗಳನ್ನು ಬೆಳೆಯು ವವರು ಹೆಚ್ಚಾಗಿ ಕರ್ನಾಟಕದವರಾದರೂ, ಇಲ್ಲಿನ ಪ್ರಮುಖ ನಗರಗಳಲ್ಲಿನ ಬೀಡಾ ಅಂಗಡಿಗಳನ್ನು ನಡೆಸುವವರು ಮಾತ್ರ ಉತ್ತರ ಪ್ರದೇಶ ಅಥವಾ ಬಿಹಾರದ ಪಂಡಿತರು ಗಳೇ ಆಗಿದ್ದಾರೆ.

ಅವರು ತಯಾರಿಸುವ ಚಿತ್ರ ವಿಚಿತ್ರ, ಸ್ವಾದಿಷ್ಟ, ತ್ರಿಕೋನಾಕಾರದ ತಾಂಬೂಲದ ರುಚಿಯೇ ಬೇರೆ. ಅಂತೂ, ತಾಂಬೂಲವಿಲ್ಲದೆ ಪೂಜೆಯಿಲ್ಲ, ದಾನ-ಧರ್ಮವಿಲ್ಲ, ಅತಿಥಿ ಸತ್ಕಾರವಿಲ್ಲ, ಸಂಧಾನವಿಲ್ಲ, ಸಮರವೂ ಇಲ್ಲ, ವಿವಾಹವಿಲ್ಲ, ಸರಸ-ಸಪ, ಪ್ರೇಮ-ಕಾಮಗಳಿಲ್ಲ.

ಹೀಗೆ ಭಾರತೀಯ ಬದುಕಿನ ಅವಿಭಾಜ್ಯ ಅಂಗವಾದ ಯಾವುದಾದರೂ ವಸ್ತುವಿದ್ದರೆ ಅದು ತಾಂಬೂಲವೆನ್ನಬಹುದಾಗಿದೆ. ಆಯುರ್ವೇದ, ಪುರಾಣ ಇತಿಹಾಸದಲ್ಲಿ ಇಷ್ಟೆ ಗೌರವಿಸ ಲ್ಪಟ್ಟ ತಾಂಬೂಲದ ಮೂಲ ಮಾಲಾದ ಅಡಕೆಯ ಬಳಕೆಯನ್ನು (ಫೂಗೀಫಲ) ನಿಷೇಧಿ ಸುವ ಮಾತುಗಳು ಕೇಳಿಬರುತ್ತಿವೆ.

ರೋಗಗಳನ್ನು ತರಬಲ್ಲ ತಾಂಬೂಲದ ವಿರೂಪಗಳನ್ನು ನಿಷೇಧಿಸಬಹುದು, ರೋಗ ನಿವಾರಕವಾದ ತಾಂಬೂಲದ ಮೂಲಸ್ವರೂಪವನ್ನು ಅಥವಾ ತಾಂಬೂಲದ ಪ್ರಮುಖ ಅಂಗವಾದ ಅಡಕೆಯನ್ನು ನಿಷೇಧ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಹಾಗೆ ನೋಡಿದರೆ ಯೋಗ, ಆಯುರ್ವೇದಗಳಂತೆ, ಪುರಾತನ ತಾಂಬೂಲ ಚರ್ವಣದ ಮಹಾತ್ಮೆ ಯನ್ನು ವಿದೇಶಗಳಲ್ಲೂ ಪ್ರಚಾರ ಮಾಡುವ ಅಗತ್ಯವಿದೆ.

ವಿನಾಯಕ ವೆಂ ಭಟ್ಟ

View all posts by this author