ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಅಹಂಕಾರಜನ್ಯ ವ್ಯಾಧಿಗಳಿಗೆ ಭಿಕ್ಷಾನ್ನವೇ ಪರಮೌಷಧ

ಹಿಂದೂ, ಜೈನ ಹಾಗೂ ಬೌದ್ಧ ಧರ್ಮಗಳಲ್ಲಿ ಭಿಕ್ಷೆಗೆ ಪವಿತ್ರವಾದ ದಾನದ ಸ್ಥಾನವನ್ನು ನೀಡ ಲಾಗಿದೆ. ಯತಿಗಳು, ಪರಿವ್ರಾಜಕರ ಲಕ್ಷಣವನ್ನು ಹೇಳುವಾಗ, ‘ಕರತಲ ಭಿಕ್ಷಃ, ತರುತಲ ವಾಸಃ’ ಮುಂತಾಗಿ ಹೇಳುತ್ತಾರೆ, ಈ ಕರತಲ ಭಿಕ್ಷವೆನ್ನುವುದು ಜೈನ ಮುನಿಗಳಲ್ಲೂ ರೂಢಿಯಲ್ಲಿದೆ. ಅಂದರೆ, ಯಾಚಕನ ಅಂಜಲಿಯಲ್ಲಿ ದಾನಿಯು ನೀಡುವ ಎಂಟು ತುತ್ತು ಆಹಾರ ಮಾತ್ರ ಆತನಿಗೆ ಗ್ರಾಹ್ಯವೆಂದರ್ಥ.

ಅಹಂಕಾರಜನ್ಯ ವ್ಯಾಧಿಗಳಿಗೆ ಭಿಕ್ಷಾನ್ನವೇ ಪರಮೌಷಧ

-

ವಿದ್ಯಮಾನ

ನಾವೆಲ್ಲ ಚಿಕ್ಕವರಿದ್ದಾಗ, ಮನೆಮುಂದೆ ಭಿಕ್ಷುಕರು ಜೋಳಿಗೆ ಹಿಡಿದು ಬರುತ್ತಿದ್ದುದುಂಟು, ಸನ್ಯಾಸಿಗಳ ದಿರಿಸಿನಲ್ಲಿರುವ ಬಾವಾಜಿಗಳು, ಏಕತಾರಿ ತಂಬೂರಿಯ ಜತೆಗೆ ದಾಸರ ಪದ ಗಳನ್ನು ಹಾಡುವವರು ಅಥವಾ ಕಣಿಹೇಳುವವರುಗಳನ್ನು ಸಾಮಾನ್ಯವಾಗಿ ನಾವು ನೋಡ ಬಹುದಾಗಿತ್ತು. ಅವರುಗಳಿಗೆ ಸಿದ್ಧ ಆಹಾರ ಅಥವಾ ಮುಷ್ಟಿಗಾತ್ರದ ಅಕ್ಕಿಯನ್ನು ನೀಡು ವುದು ವಾಡಿಕೆ.

ಇನ್ನು, ಬೇಡುವವರೂ, ಹಾವಾಡಿಗರೂ ಬರುತ್ತಿದ್ದರು, ಅವರದ್ದು ಬೇರೆ ಕ್ರಮ; ‘ಅಮ್ಮಾ, ತಾಯಿ’ ಎಂದು ಕೂಗು ಹಾಕಿ, ದುಡ್ಡು, ತಿಂಡಿ ಮುಂತಾಗಿ, ಕೊಟ್ಟಿದ್ದನ್ನು ತೆಗೆದುಕೊಂಡು ಹೋಗುವ ಜನರವರು. ಭಿಕ್ಷುಕರಿಗೂ ಬೇಡುವವರಿಗೂ ಇರುವ ಅಂತರವನ್ನು ಗಮನಿಸ ಬಹುದು.

ಈಗ ಭಿಕ್ಷುಕರು ಮನೆಬಾಗಿಲಿಗೆ ಬರುತ್ತಿಲ್ಲ, ಬೇಡುವವರನ್ನು ‘ಟ್ರಾಫಿಕ್ ಸಿಗ್ನಲ್’ಗಳಲ್ಲಷ್ಟೇ ನೋಡಬಹುದಾಗಿದೆ. ಅಷ್ಟೆ ಅಲ್ಲದೇ, ಭಿಕ್ಷಾಟನೆ ನಿಷೇಧ ಕಾಯಿದೆಯ ಅಡಿಯಲ್ಲಿ ಭಿಕ್ಷಾ ಟನೆಯನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಕಾಯಿದೆಯಲ್ಲಿ ಹೇಳುವ ಭಿಕ್ಷೆಯ ವ್ಯಾಖ್ಯಾನ ಬೇರೆ, ನಾನು ಹೇಳಹೊರಟಿರುವ ಭಿಕ್ಷೆಯೇ ಬೇರೆ.

ಸಾಮಾನ್ಯವಾಗಿ ಇಂಗ್ಲಿಷಿನ ‘ Begging’ ಎನ್ನುವ ಶಬ್ದಕ್ಕೆ ಅನ್ವರ್ಥವಾಗಿ ಭಿಕ್ಷೆ ಎನ್ನುವ ಶಬ್ದವನ್ನು ಬಳಸಲಾಗುತ್ತದೆ. ವಾಸ್ತವಿಕವಾಗಿ, ಭಿಕ್ಷಾಟನೆಗೂ ಬೇಡುವುದಕ್ಕೂ ಜಗಜಾಂತರ ಫರಕ್ಕಿದೆ. ಬೇಡುವುದೆಂದರೆ, ಅದು ಏನನ್ನಾದರೂ, ಎದರೂ, ಹಣ, ವಸ್ತು, ಸಹಾಯ ಹೀಗೆ ಬೇಕಾದ್ದನ್ನೆಲ್ಲ ಯಾಚಿಸುವುದು. ಆದರೆ ಭಿಕ್ಷೆ ಹಾಗಲ್ಲ, ಅದು ಆಹಾರವೇ ಆಗಬೇಕು ಅಥವಾ ಆಹಾರ ತಯಾರಿಸಲು ಬೇಕಾಗುವ ದವಸ ಧಾನ್ಯಗಳಾಗಬೇಕು.

‘ದೇಶ ಸುಭಿಕ್ಷವಾಗಿದೆ’ ಎನ್ನುವಾಗ, ದೇಶದಲ್ಲಿ ಆಹಾರದ ಸಮೃದ್ಧಿಯಿದೆ ಎಂತಲೇ ಅರ್ಥ ವಾಗುತ್ತದೆ. ಭಿಕ್ಷ ಎನ್ನುವ ಶಬ್ದ, ಭಕ್ಷಕ್ಕೇ ಅಂದರೆ ಆಹಾರಕ್ಕೆ ಸಂಬಂಧಿಸಿದ್ದಾಗಿದೆ. ‘ಭಿಕ್ಷೆ’ ಎಂಬ ಪದವು ‘ದೈನ್ಯತೆಯಿಂದ ಯಾಚಿಸಿ ಪಡೆವ ಆಹಾರ’ ಎನ್ನುವ ಅರ್ಥವನ್ನು ಹೇಳು ತ್ತದೆ.

ಇದನ್ನೂ ಓದಿ: Vinayaka V Bhat Column: ವೈರುಧ್ಯಗಳನ್ನು ಮೀರಿ ಕನ್ನಡ ಹೋರಾಟ ಸಾಗಿ ಬಂದ ದಾರಿ

ಭಿಕ್ಷವೆಂದರೆ ಒಂದು ಬಾರಿ ಭಕ್ಷಣೆ ಮಾಡುವಷ್ಟು ಆಹಾರ, ಒಂದು ತುತ್ತು ಅಥವಾ ಒಂದು ಹಿಡಿ ಎಂದು ಅರ್ಥೈಸಬಹುದಾಗಿದೆ. ಇಲ್ಲಿ ಸಂಗ್ರಹಕ್ಕೆ ಆಸ್ಪದವಿರುವುದಿಲ್ಲ, ಪ್ರತಿನಿತ್ಯವೂ ಭಿಕ್ಷಾಟನೆ ಮಾಡಿಯೇ ಉದರಂಭರಣವಾಗಬೇಕು. ಹಾಗಾಗಿ ಈ ವೃತ್ತಿ, ಧರ್ಮನಿಷ್ಠ ನಿಸ್ಪೃ ಹತೆಯನ್ನು ಸೂಚಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ, ಭಿಕ್ಷೆಗೆ ಅಥವಾ ಭಿಕ್ಷಾಟನೆಗೆ ಅತ್ಯಂತ ಮಹತ್ವವಿದೆ.

ಹಿಂದೂ, ಜೈನ ಹಾಗೂ ಬೌದ್ಧ ಧರ್ಮಗಳಲ್ಲಿ ಭಿಕ್ಷೆಗೆ ಪವಿತ್ರವಾದ ದಾನದ ಸ್ಥಾನವನ್ನು ನೀಡಲಾಗಿದೆ. ಯತಿಗಳು, ಪರಿವ್ರಾಜಕರ ಲಕ್ಷಣವನ್ನು ಹೇಳುವಾಗ, ‘ಕರತಲ ಭಿಕ್ಷಃ, ತರುತಲ ವಾಸಃ’ ಮುಂತಾಗಿ ಹೇಳುತ್ತಾರೆ, ಈ ಕರತಲ ಭಿಕ್ಷವೆನ್ನುವುದು ಜೈನ ಮುನಿಗಳಲ್ಲೂ ರೂಢಿ ಯಲ್ಲಿದೆ. ಅಂದರೆ, ಯಾಚಕನ ಅಂಜಲಿಯಲ್ಲಿ ದಾನಿಯು ನೀಡುವ ಎಂಟು ತುತ್ತು ಆಹಾರ ಮಾತ್ರ ಆತನಿಗೆ ಗ್ರಾಹ್ಯವೆಂದರ್ಥ.

ತಟ್ಟೆ ಬಟ್ಟಲು ಮುಂತಾದ ಯಾವ ಸಾಧನವನ್ನೂ ಈ ಮುನಿಗಳು ಭೋಜನಕ್ಕೆ ಬಳಸು ವಂತಿಲ್ಲ, ಅಂಜಲಿಯೇ ಅವರಿಗೆ ತಟ್ಟೆ ಬಟ್ಟಲು ಎಲ್ಲ (‘ಗ್ರಾಸಮಾತ್ರಾ ಭವೇದ್ಭಿಕ್ಷಾಃ’, ‘ಅಷ್ಟೌ ಗ್ರಾಸಾ ಮುನೇರ್ಗ್ರಾಹ್ಯಾಃ’). ಇನ್ನು, ಸಾಧನ ಪಂಚಕದಲ್ಲಿ ಶ್ರೀ ಶಂಕರಾಚಾರ್ಯರು ಭಿಕ್ಷಾನ್ನವನ್ನು ಔಷಧಕ್ಕೆ ಹೋಲಿಸುತ್ತಾರೆ (ಭಿಕ್ಷೌಷಧಂ ಭುಜ್ಯತಾಂ). ಈ ಮಾತಿಗೆ, ಅಹಂಕಾರ ಜನ್ಯವಾದ ವ್ಯಾಧಿಗಳಿಗೆ ಭಿಕ್ಷಾನ್ನ ಎನ್ನುವುದು ಪರಮ ಔಷಧವಾಗುತ್ತದೆ ಎನ್ನುವುದು ಒಂದು ವಿವರಣೆಯಾದರೆ, ಸಾಧನಾ ಮಾರ್ಗದಲ್ಲಿರುವವರು ಭಿಕ್ಷಾಹಾರ ವನ್ನು ಔಷಧದ ಪ್ರಮಾಣದಲ್ಲಿ ಮಾತ್ರ ಸ್ವೀಕರಿಸಬೇಕು ಎನ್ನುವುದೂ ಆಗುತ್ತದೆ.

‘ಭಿಕ್ಷಾನ್ನಮಾತ್ರೇಣ ಚ ತುಷ್ಟಿಮಂತಃ, ಭಿಕ್ಷಾಶನಾ ದಿಕ್ಷು ಪರಿಭ್ರಮಂತಃ ಕೌಪೀನವಂತಃ ಖಲು ಭಾಗ್ಯವಂತಃ’- ಕೇವಲ ಭಿಕ್ಷಾನ್ನದಿಂದಲೇ ತೃಪ್ತಿಪಟ್ಟುಗೊಂಡು ಜೀವ ಧಾರಣೆ ಮಾಡುತ್ತಾ ಧರ್ಮರಕ್ಷಣೆಗೋಸ್ಕರ ದೇಶ ಸಂಚಾರಮಾಡುತ್ತಿರುವ ಕೌಪೀನಧಾರಿಗಳೇ ನಿಜವಾಗಿಯೂ ಧನ್ಯರು ಎಂದು ಯತಿ ಪಂಚಕ ಸ್ತೋತ್ರಮಾಲೆಯೂ ಹೇಳುತ್ತದೆ.

ಮೊದಲು ಗುರುಕುಲಗಳಲ್ಲಿ, ಬ್ರಹ್ಮಚಾರಿಗಳಿಗೆ/ವಿದ್ಯಾರ್ಥಿಗಳಿಗೆ ಭಿಕ್ಷಾನ್ನವೇ ಆಹಾರ ವಾಗಿತ್ತು. ವಿದ್ಯಾರ್ಥಿಗಳು ನಿತ್ಯವೂ ತಮ್ಮ ಗುರುಗಳಿಗೂ ಸೇರಿ ಭಿಕ್ಷ ಸಂಗ್ರಹಿಸಿ ತರಬೇಕು ಎನ್ನುವುದು ನಿಯಮ. ಸ್ವಲ್ಪ ಕಾಲದ ನಂತರ, ವಿದ್ಯಾರ್ಥಿಗಳು ಪ್ರತಿದಿನ ಒಬ್ಬರ ಮನೆಗೆ ತೆರಳಿ ಭಿಕ್ಷಯಾಚಿಸುವ ‘ವಾರಾನ್ನ’ ಪದ್ಧತಿಯೂ ಇತ್ತು.

ಹಾಗಾದಾಗ ಮಾತ್ರ, ಅಭಿಮಾನ ಸಂಕೋಚವಾಗಿ, ನಿಜ ವಿದ್ಯಾರ್ಜನೆಗೆ ದಾರಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಮಧುಕರಿ ಎನ್ನುವ ಹೆಸರಿನಿಂದಲೂ ಭಿಕ್ಷವನ್ನು ಕೆಲವು ಕಡೆ ಕರೆಯಲಾಗುತ್ತದೆ. ಮಧುಕರಿ ವೃತ್ತಿ, ದತ್ತ ಕ್ಷೇತ್ರ ಗಾಣಗಾಪುರದಲ್ಲಿ ಆಚರಿಸುವ ಒಂದು ಸಂಪ್ರದಾಯ, ಅಲ್ಲಿ, ಭಕ್ತರು ಕನಿಷ್ಠ ಐದು ಮನೆಗಳಿಂದ ಭಿಕ್ಷೆಯನ್ನು ಸ್ವೀಕರಿಸಬೇಕಾ ಗುತ್ತದೆ. ಶ್ರೀ ದತ್ತಾತ್ರೇಯರು ಗಾಣಗಾಪುರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಮನೆಮನೆಗೆ ತೆರಳಿ ಭಿಕ್ಷೆ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆಯೂ ಇದೆ.

ಒಂದು ನೆಲ್ಲಿಕಾಯಿ ಭಿಕ್ಷಕ್ಕೆ ಪ್ರತಿಯಾಗಿ, ಶ್ರೀ ಲಕ್ಷ್ಮೀದೇವಿಯ ಸ್ತೋತ್ರ ರಚಿಸಿ, ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಶ್ರೀ ಶಂಕರಾಚಾರ್ಯರು ಸುರಿಸಿದ್ದ ಕಥೆಯನ್ನು ನಾವು ಕೇಳುತ್ತೇವೆ. ಹಾಗೆ ರಚಿಸಿದ ಸ್ತೋತ್ರ ‘ಕನಕಧಾರಾ ಸ್ತೋತ್ರ’ ಎಂದು ಪ್ರಸಿದ್ಧವಾಗಿದೆ. ಶ್ರೀ ಶಂಕರಭಗವತ್ಪಾದರು ತಮ್ಮ ಸಂಚಾರ ಕಾಲದಲ್ಲಿ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ಒಬ್ಬ ಬಡ ಬ್ರಾಹ್ಮಣನ ಮನೆಯ ಮುಂದೆನಿಂತು, ಭವತಿ ಭಿಕ್ಷಾಂದೇಹಿ ಎಂದು ಭಿಕ್ಷೆಯನ್ನು ಬೇಡುತ್ತಾರೆ.

ಆ ಬ್ರಾಹ್ಮಣನಾದರೋ ಕಡು ಬಡವ. ಮನೆ ಮಂದಿಗೆ ಊಟಕ್ಕಿಲ್ಲದ ಪರಿಸ್ಥಿತಿ. ಏನಾದರೂ ಇದ್ದರೆ ಯತಿಗಳಿಗೆ ನೀಡಲು ಆ ಬ್ರಾಹ್ಮಣ ತನ್ನ ಸಾಧ್ವಿ ಹೆಂಡತಿಗೆ ಹೇಳುತ್ತಾನೆ. ಕೊಡಲು ಮನೆಯಲ್ಲಿ ಏನೂ ಇಲ್ಲ, ಮನೆಗೆ ಬಂದ ಅತಿಥಿ ರೂಪದ ದೇವರನ್ನು ಬರಿಗೈಯಲ್ಲಿ ಕಳುಹಿಸಲೂ ಆಗುವುದಿಲ್ಲ.

ಏನು ಮಾಡುವುದೆಂದು ತೋಚದೇ, “ಸ್ವಾಮಿ, ನಾವು ಕಡುಬಡವರು, ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನು ಇಲ್ಲ. ಇದ್ದ ಒಂದು ನೆಲ್ಲಿಕಾಯಿಯನ್ನೇ ತಮಗೆ ಭಕ್ತಿಯಿಂದ ಅರ್ಪಿಸುತ್ತಿದ್ದೇನೆ, ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು" ಎಂದು ಕಾಲಿಗೆರಗುತ್ತಾಳೆ. ಶ್ರೀ ಶಂಕರರು ಆ ಬಡ ಹೆಂಗಸಿನ ತ್ಯಾಗ ಬುದ್ಧಿಯನ್ನೂ, ಭಕ್ತಿಯನ್ನೂ ಮನಗಂಡು, ಆ ಕುಟುಂಬದ ಬಡತನವನ್ನು ಹೋಗಲಾಡಿಸಬೇಕೆಂದು ಸಂಕಲ್ಪ ಮಾಡಿ, ಆಕ್ಷಣವೇ ಶ್ರೀ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರವೊಂದನ್ನು ರಚಿಸಿ ಪ್ರಾರ್ಥಿಸುತ್ತಾರೆ.

ಆಗ ಆ ಬ್ರಾಹ್ಮಣನ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆಯೇ ಸುರಿಯು ತ್ತದೆ. ಭಿಕ್ಷದಾನಕ್ಕಿರುವ ಶಕ್ತಿ ಇದು. ಹಾಗಾಗಿ, ಯಾರಾದರೂ ಭಿಕ್ಷ ಕೇಳಿದರೆ ನಾಸ್ತಿ ಎನ್ನಬಾ ರದು, ಮುಂದೆ ಹೋಗಿ ಎನ್ನಬಾರದು ಎನ್ನುವ ವಾಡಿಕೆಯಿದೆ.

ಭಿಕ್ಷ ನೀಡುವುದರಿಂದ, ಅದರಲ್ಲೂ ಯತ್ಯಾಶ್ರಮಿಗಳಿಗೆ ನೀಡುವುದರಿಂದ ದೊರೆಯುವ ಫಲಗಳ ಬಗ್ಗೆಯೂ ಹೇಳುತ್ತಾರೆ. ಯತಿಗಳ ಅಂಜಲಿಯಲ್ಲಿ ನೀಡುವ ಒಂದು ಕುಡುತೆ ನೀರು, ಒಂದು ತುತ್ತು ಅನ್ನ, ಮಹತ್ತಾದ ಫಲವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ. ‘ಯತಿ ಹಸ್ತೇ ಜಲಂ ದದ್ಯಾತ್ ಭೈಕ್ಷ್ಯಂ ದದ್ಯಾತ್ ಜಲೋಪರಿ, ತದನ್ನಂ ಮೇರು ತುಲ್ಯಂ ಸ್ಯಾತ್ ತಜ್ಜಲಂ ಸಾಗರೋಪಮ’- ಸಂಸಾರಿಯಾದವನು ಯತಿಗಳಿಗೆ ಭಿಕ್ಷಾನ್ನವನ್ನು ನೀಡಿದರೆ ಅಥವಾ ತೃಷೆಗೆ ನೀರು ನೀಡಿದರೆ ಅದು ಮಹತ್ತಾದ ಫಲವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.

ಭಿಕ್ಷ ಎನ್ನುವುದು ಸಂಸ್ಕೃತದ ಪದ, ಕವಳ ಎನ್ನುವುದು ಭಿಕ್ಷಕ್ಕೆ ಸಮಾನವಾದ ಕನ್ನಡ ಪದ. ಕವಳ ಎನ್ನುವ ಪದ ಈಗ ಅಷ್ಟು ಬಳಕೆಯಲ್ಲಿಲ್ಲದಿದ್ದರೂ, ಈ ಶಬ್ದಕ್ಕೆ ವಿಸ್ತೃತವಾದ ಪವಿತ್ರವಾದ ಅರ್ಥ ನಿರೂಪಣೆಯಿದೆ. ವಿದ್ಯಾಪ್ರಸನ್ನ ತೀರ್ಥರು ರಚಿಸಿದ ‘ಕವಳತಾಯಿ ಕವಳ ಅಮ್ಮ’ ಪದ ಬಹಳ ಪ್ರಖ್ಯಾತವಾಗಿದೆ.

ಶ್ರೀ ಶಂಕರರು ಮಹಾಲಕ್ಷ್ಮಿಯನ್ನು ಸ್ತುತಿಸಿ ಸುವರ್ಣವೃಷ್ಟಿ ಸುರಿಸಿದರೆ, ವಿದ್ಯಾಪ್ರಸನ್ನ ತೀರ್ಥರು ಶ್ರೀಮಂತಳಾದ ಮಹಾಲಕ್ಷ್ಮಿಯ ಭಿಕ್ಷಯಾಚಿಸುವ ಜಾಣ್ಮೆತೋರುತ್ತಾರೆ: ‘ಕವಳ ತಾಯಿ ಕವಳ ಅಮ್ಮ, ಪಾಪಿ ಪರದೇಶಿಯ ಮರೆಯಬೇಡಿರಮ್ಮ, ಸಂಜೆಯ ಕವಳಕ್ಕೆ ಸಾವಿರ ಆಪತ್ತು, ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ, ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ, ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ’- ಈ ಪರದೇಸಿಯನ್ನು ಮರಿಬೇಡಮ್ಮಾ, ರಾತ್ರಿ ಭಿಕ್ಷಾನ್ನ ನೀಡಿದರೆ ಕಷ್ಟ ಪರಂಪರೆಗಳೆ ಓಡಿಹೋಗುತ್ತೆ ಎನ್ನುವುದು ನಿನಗೆ ತಿಳಿದಿಲ್ಲ ವೇನಮ್ಮಾ, ಹಾಗಾಗಿ, ನಿನ್ನ ಯಜಮಾನ, ಅಂದರೆ ಶ್ರೀ ವಿಷ್ಣು ಉಂಡಾದ ಮೇಲೆ ನೀನೂ ಉಂಡು ಉಳಿಯುವ ಎಂಜಲನ್ನವನ್ನು ನನ್ನ ಜೋಳಿಗೆಗೆ ಸ್ವಲ್ಪ ಹಾಕಮ್ಮಾ ಎನ್ನುತ್ತಾರೆ ವಿದ್ಯಾಪ್ರಸನ್ನ ತೀರ್ಥರು.

ಹಳೇಕಾಲದಲ್ಲಿ, ಗಂಡ ಉಂಡ ಬಾಳೆಯ ಹೆಂಡತಿಯಾದವಳೂ ಉಣ್ಣುವ ಪದ್ದತಿ ಇತ್ತು, ಅದು ಸರಿಯೋ ತಪ್ಪೋ ಎನ್ನುವುದು ಬೇರೆ ಮಾತು. ವಿದ್ಯಾಪ್ರಸನ್ನ ತೀರ್ಥರ ಭಿಕ್ಷದ ಪದ್ಯದ ಮುಂದಿನ ಸಾಲುಗಳ ಸಾರ ಹೀಗಿದೆ: ನನ್ನದು ಬಹಳ ದೊಡ್ಡ ಸಂಸಾರವೇನೋ ಇದೆ, ಆದರೆ ಇಲ್ಲಿ ಎಲ್ಲರೂ ಉಣ್ಣುವವರೇ ಹೊರತು ದುಡಿಯುವವರೊಬ್ಬರೂ ಇಲ್ಲ.

ಕಮಲವ್ವ, ನಿನ್ನ ಅಮೃತ ಹಸ್ತಗಳಿಂದ ಭಿಕ್ಷವೇನಾದರೂ ದೊರೆತಿದ್ದೇ ಆದರೆ, ಅದು ನನ್ನ ಸಂಸಾರಕ್ಕೆ ಅಮೃತಸಮಾನವಾಗುತ್ತದೆ. ಹಾಗಾಗಿ ಕವಳಾ ಕೊಡವ್ವಾ. ಮಿತಿಯೇ ಇಲ್ಲದ ಷ್ಟು ಐಶ್ವರ್ಯ ನೀವು ಗಂಡ ಹೆಂಡಿರಿಗಿಬ್ಬರಿಗೂ ಇದೆ ಎಂದು ತಿಳಿದವರು ಮಾತಾಡುತ್ತಾರೆ.

ಎಷ್ಟು ನೀಡಿದರೂ ಖರ್ಚಂತೂ ಆಗುವುದಲ್ಲ. ಹಾಗಾಗಿ, ನಿನ್ನ ಪತಿಯ ಅತುಲ್ಯವಾದ ಮಹಿಮಾ ಸಂಪತ್ತಿನಲ್ಲಿ ಸ್ವಲ್ಪವನ್ನಾದರೂ ನನಗೆ ಭಿಕ್ಷವಾಗಿ ನೀಡಮ್ಮಾ. ಕವಳ ಕೇಳಿದರೆ ಹೀಗೆ, ಇಂಥವರಲ್ಲಿ ಕೇಳಬೇಕು, ಯಾರ ಯಾರ ಮುಂದೋ ಕೈಯೊಡ್ಡುವುದಲ್ಲ ಎನ್ನುವು ದನ್ನು ವಿದ್ಯಾಪ್ರಸನ್ನ ತೀರ್ಥರು ಹೇಳಿಕೊಟ್ಟಿದ್ದಾರೆ.

ಕವಳದ ಕುರಿತು ಇದೇ ಅರ್ಥವನ್ನು ಸಾರುವ ‘ಕವಳ ಕೊಡಿ ತಾಯಿ, ಕರುಣೆಯ ಅಮ್ಮ ತಾಯಿ’ ಎನ್ನುವ ಇನ್ನೊಂದು ಕನ್ನಡದ ಹಾಡಿದೆ. ಇದು ಯಾರ ರಚನೆಯೋ ಗೊತ್ತಿಲ್ಲ, ಭಾವ ಮಾತ್ರ ಮನೋವೇದ್ಯವಾಗಿದೆ. ಈ ಲೋಕದಲ್ಲಿ ಅನ್ನವೊಂದೇ ತಂದೆ-ತಾಯಿ, ಅನ್ನವೇ ಸರ್ವಸ್ವ. ಹಸಿವಾದಾಗ ಮನಸ್ಸಿನಲ್ಲಿ ಹಣದ ಆಸೆಯಿರುವುದಿಲ್ಲ, ಬಿಸಿಲು ಚಳಿಯ ಭಯವೂ ಇರುವುದಿಲ್ಲ.

ಹಸಿವಿನ ಮುಂದೆ ಉಳಿದೆಲ್ಲವೂ ನಗಣ್ಯ ಎನ್ನುತ್ತಾನೆ ಕವಿ. ಅನ್ನವಿಟ್ಟ ಕೈ ತಾಯಿಗೆ ಸಮಾನ, ಅಂಥವಳ ಮನಸ್ಸು ಹೂವಿನಷ್ಟು ಮೃದುಮಧುರ. ಹಸಿದವರಿಗೆ, ಅನ್ನವಿಟ್ಟ ವರಿಗಿಂತ ದೊಡ್ಡ ದೇವರಿರುವುದಿಲ್ಲ. ಹಾಗಾಗಿ, ಅನ್ನ ನೀಡುವವರಿಗೆ ಚಿನ್ನವನ್ನು ತರಲಿ, ಅವರ ಮನೆ ನಂದನವನವಾಗಲಿ, ನಮಗೆ ತುತ್ತು ದಿನವೂ ಸಿಗಲಿ, ಅನ್ನ ಕೊಟ್ಟವರ ಹೊಟ್ಟೆ ಸದಾ ತುಂಬಿರಲಿ ಎಂದು ಆಶೀರ್ವಚನದ ಮಾತನ್ನಾಡಿ, ಕೊಡುವ ಕರಗಳಿಗೆ ಮಂಗಳಾಶಾಸನ ಮಾಡುತ್ತಾನೆ ಕವಿ.

ಬ್ರಹ್ಮ ಕಪಾಲವನ್ನು ಹಿಡಿದು ಭಿಕ್ಷಾಟನೆ ಮಾಡಿದ ಪರಶಿವನ ಕಥೆಯನ್ನು ಹಾಗೂ ಆ ಕುರಿತು ಇರುವ ‘ಶಿವನು ಭಿಕ್ಷಕ್ಕೆ ಬಂದ ನೋಡುಬಾರೆ’, ಪುರಂದರ ದಾಸರ ‘ರಾಗೀ ತಂದೀರಾ ಭಿಕ್ಷಕೆ ರಾಗೀ ತಂದೀರಾ’ ಮುಂತಾದ ಕನ್ನಡ ಪದ್ಯಗಳನ್ನೂ ನಾವು ಕೇಳುತ್ತೇವೆ. ಯಾಚನೆ ಎನ್ನುವಂಥದ್ದು ಬಹಳ ಕಷ್ಟದ ಕೆಲಸ, ಅಹಂಕಾರ ಅಭಿಮಾನಗಳನ್ನು ತೊರೆದು ನಡು ಬಗ್ಗಿಸಿ ಕೈ ಚಾಚುವುದಿದೆಯ ಅದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ.

ಆದರೆ, ದೇಹಾಭಿಮಾನವೆನ್ನುವುದು ಸಾಧನೆಗೆ ಅಡ್ಡಬಾರದಿರಲಿ ಎನ್ನುವ ಕಾರಣಕ್ಕೋ ಏನೋ, ಸಾಧಕಜನರಿಗೆ ಭಿಕ್ಷಾನ್ನವನ್ನೇ ವಿಧಿಸಲಾಗಿದೆ. ಹಾಗೆ ನೋಡಿದರೆ, ನಾವೂ ಒಂದ ಒಂದು ರೀತಿಯಿಂದ ಯಾಚಕರೇ ಆಗಿದ್ದೇವೆ. ಅಹಂಕಾರ ಅಭಿಮಾನಗಳನ್ನು ತೊರೆದು ಭಿಕ್ಷುಗಳಾಗುವ ಬದಲು, ನಾಚಿಕೆ, ಮಾನ, ಮರ್ಯಾದೆಗಳನ್ನು ತೊರೆದು, ಯಾರ‍್ಯಾ ರಿಂದಲೋ, ಏನೇನನ್ನೋ ಬೇಡುತ್ತ ನಿರ್ಲಜ್ಜವಾದ ಜೀವನ ಸಾಗಿಸುತ್ತಿರುವುದರಿಂದ, ಬೇಡುವವರಾಗಿದ್ದೇವೆ ಅಷ್ಟೆ.