ಕನ್ನಡ ಡಿಂಡಿಮ
ಲಕ್ಷ್ಮೀಕಾಂತ್ ಎಲ್.ವಿ
ಕುವೆಂಪು ಅವರು ‘ಬಾರಿಸು ಕನ್ನಡ ಡಿಂಡಿಮವ’ ಎಂದು ಕರೆ ಕೊಟ್ಟಿದ್ದು ನಮಗೆಲ್ಲರಿಗೂ ಗೊತ್ತಿರು ವಂಥದ್ದೇ. ಇದು ಕೇವಲ ಒಂದು ಪ್ರಚಾರಗೀತೆಯಲ್ಲ, ಬದಲಿಗೆ ಕನ್ನಡಿಗರ ಜಾಯಮಾನದಲ್ಲಿ ಅಡಗಿರುವ ತಾಮಸ ಗುಣವನ್ನು ಬಡಿದೆಬ್ಬಿಸುವ, ಒಡಕು ಮನಸ್ಸುಗಳನ್ನು ಒಗ್ಗೂಡಿಸುವ ಒಂದು ತುರ್ತು ಕಹಳೆ.
ಕುವೆಂಪು ಅವರು ತಮ್ಮ ಈ ಗೀತೆಯಲ್ಲಿ ಉಲ್ಲೇಖಿಸಿರುವ ‘ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾ ಡುವರನು ಕೂಡಿಸಿ ಒಲಿಸು’ ಎಂಬ ಸಾಲು ಕರ್ನಾಟಕ ಹೃದಯಶಿವನಿಗೆ ಅಂದು ಅವರು ಅರ್ಪಿಸಿದ ಪ್ರಾರ್ಥನೆಯಾಗಿತ್ತಾದರೂ, ಅದು ಇಂದಿನ ಕನ್ನಡಿಗರ ಪ್ರಜ್ಞಾಹೀನ ಸ್ಥಿತಿಗೂ ಅನ್ವಯಿಸುತ್ತದೆ.
ಸ್ವಾತಂತ್ರ್ಯಾ ನಂತರ ಮತ್ತು ಏಕೀಕರಣದ ಕಾಲದಲ್ಲಿ ಕನ್ನಡವು ಕಂಡಿದ್ದ ಉತ್ಸಾಹ, ಹೋರಾಟ ಮತ್ತು ಹೆಮ್ಮೆಯ ಸ್ವರ ಇಂದು ಮಂಕಾಗಿದೆ. ಜಾಗತೀಕರಣದ ಸವಾಲುಗಳ ನಡುವೆ ಕನ್ನಡವು ತನ್ನ ನೆಲದಲ್ಲೇ ಪಲಾಯನಗೈಯುತ್ತಿದೆಯೇ ಎಂಬ ವಸ್ತುನಿಷ್ಠ ವಿಮರ್ಶೆಗೆ ಈಗ ನಾವು ನಿಲ್ಲಬೇಕಾಗಿದೆ.
ಕನ್ನಡದ ಸ್ಥಿತಿಗತಿಯ ಕುರಿತು ವಿಮರ್ಶೆ ಮಾಡುವಾಗ ನಾವು ಕೇವಲ ಭಾವನಾತ್ಮಕತೆಯಿಂದ ಮಾತನಾಡುವುದನ್ನು, ಡಿಂಡಿಮವನ್ನು ನಾವಾಗಿಯೇ ಬಾರಿಸುವ ಪ್ರಯತ್ನ ಮಾಡುವುದನ್ನು ಬಿಡಬೇಕು. ಬದಲಿಗೆ, ವಾಸ್ತವದ ನೆಲೆಗಟ್ಟಿನಲ್ಲಿ ನಮ್ಮ ಸವಾಲುಗಳೇನು ಮತ್ತು ನಮ್ಮ ಸಾಮರ್ಥ್ಯ ಗಳೇನು ಎಂಬುದನ್ನು ಅರಿತುಕೊಳ್ಳಬೇಕು. ಹಳೆಯ ವೈಭವದ ಕಥೆಗಳನ್ನು ಹೇಳುತ್ತಾ ಕಾಲ ಕಳೆಯುವುದಕ್ಕಿಂತ, ಆಧುನಿಕ ಕಾಲದ ಬಹುಮುಖಿ ಸಮಸ್ಯೆಗಳಿಗೆ ಕನ್ನಡವನ್ನು ಹೇಗೆ ಸಜ್ಜು ಗೊಳಿಸಬೇಕು ಎಂಬುದರತ್ತ ಗಮನ ಹರಿಸಬೇಕು.
ಇದನ್ನೂ ಓದಿ: Raghav Sharma Nidle Column: ಭಟ್ ಸಾಬ್ʼಗೆ ಲಿಚ್ಚಿ ಕಳುಹಿಸುತ್ತಿದ್ದ ಲಾಲೂ !
‘ಅನ್ನದ ಭಾಷೆ’ಯ ಸವಾಲು
ಕನ್ನಡದ ಇಂದಿನ ಸ್ಥಿತಿಗೆ ಅತ್ಯಂತ ಮುಖ್ಯ ಕಾರಣ, ಕುವೆಂಪು ಗುರುತಿಸಿದಂತೆ ಕನ್ನಡಿಗರೊಳಗಿನ ‘ಹೊಟ್ಟೆಯ ಕಿಚ್ಚು’ ಮತ್ತು ಸಂಘಟನಾತ್ಮಕ ಮನೋಭಾವದ ಕೊರತೆ. ಕನ್ನಡ ಪರ ಹೋರಾಟಗಳು ಪ್ರಸ್ತುತ, ಪ್ರಾದೇಶಿಕ ಭಿನ್ನಾಭಿಪ್ರಾಯಗಳು, ರಾಜಕೀಯ ಲಾಭಗಳು ಮತ್ತು ತಾತ್ಕಾಲಿಕ ಆವೇಶಗಳಿಗೆ ಸೀಮಿತವಾಗುತ್ತಿವೆ.
‘ಕನ್ನಡ’ ಎನ್ನುವ ಒಂದು ಅಸ್ಮಿತೆಯ ಅಡಿಯಲ್ಲಿ ಬರುವಂಥ ಒಕ್ಕೊರಲಿನ ಧ್ವನಿಯ ಕೊರತೆ ಇದೆ. ನೆಲ-ಜಲದಂಥ ಗಂಭೀರ ಸಮಸ್ಯೆಗಳಲ್ಲೂ ಕನ್ನಡಿಗರು ಒಡೆದು ಹೋಗಿ, ನಿಷ್ಕ್ರಿಯ ಮನೋ ಭಾವವನ್ನು ಪ್ರದರ್ಶಿಸುತ್ತಾರೆ. ಈ ಆಂತರಿಕ ದೌರ್ಬಲ್ಯವನ್ನು ನಮ್ಮ ಭಾಷೆಯ ವಿರೋಧಿಗಳು ಸುಲಭವಾಗಿ ಬಳಸಿಕೊಳ್ಳುತ್ತಿದ್ದಾರೆ.
ಕನ್ನಡವು ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ ಅದು ‘ಅನ್ನದ ಭಾಷೆ’ಯಾಗದಿರುವುದು ಎಂಬ ಭ್ರಮೆ. ಬಹುತೇಕ ಕನ್ನಡಿಗರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯು ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಕೀಲಿಕೈ ಎಂಬ ಆಳವಾದ ನಂಬಿಕೆ.
ಕುವೆಂಪು ಯುಗದ ಆಶಯಗಳು ಕೇವಲ ಸಾಂಸ್ಕೃತಿಕ ಹೆಮ್ಮೆಗೆ ಸೀಮಿತವಾಗಿದ್ದು, ವರ್ತಮಾನದ ಪೋಷಕರಿಗೆ ತಮ್ಮ ಮಕ್ಕಳ ಉಜ್ವಲ ಭವಿಷ್ಯವೇ ಮುಖ್ಯವಾಗಿದೆ. ಈ ‘ಕೀಳರಿಮೆ’ ಮತ್ತು ‘ಮೇಲರಿ ಮೆ’ಯ ದಾಸ್ಯವು ಕನ್ನಡದ ಮೂಲಕ್ಕೆ ಹತ್ತಿದ ಹುಳದಂತಿದೆ. ನಮ್ಮ ಕನ್ನಡ ಮಾಧ್ಯಮ ಶಾಲೆ ಗಳಲ್ಲಿ ಗುಣಮಟ್ಟದ ಇಂಗ್ಲಿಷ್ ಕಲಿಕೆ, ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸುವಲ್ಲಿನ ಹಿನ್ನಡೆ ಈ ಸಮಸ್ಯೆ ಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಕಂಪ್ಯೂಟರ್ ಮತ್ತು ಮೊಬೈಲ್ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಹೆಚ್ಚಿದ್ದರೂ, ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡದ ಸ್ಥಾನ ಇನ್ನೂ ಎರಡನೇ ದರ್ಜೆಯಲ್ಲಿದೆ. ಆಡಳಿತದ ಬಹುತೇಕ ಕಡತಗಳು ಇಂಗ್ಲಿಷಿನಲ್ಲೇ ಸಿದ್ಧವಾಗುತ್ತವೆ. ಜನಸಾಮಾನ್ಯರಿಗೆ ಸುಲಭವಾಗಿ ತಲುಪ ಬೇಕಾದ ಸರಕಾರಿ ಸೇವೆಗಳು ಮತ್ತು ಕಾನೂನು ಮಾಹಿತಿಗಳನ್ನು ಸಂಪೂರ್ಣವಾಗಿ ಕನ್ನಡದಲ್ಲಿ ತಲುಪಿಸುವಲ್ಲಿನ ವಿಳಂಬವು ಕನ್ನಡಿಗರನ್ನು ಆಂಗ್ಲ ಭಾಷಾ ಜ್ಞಾನವಿರುವ ಮಧ್ಯವರ್ತಿಗಳ ಮೇಲೆ ಅವಲಂಬಿಸುವಂತೆ ಮಾಡಿದೆ.
ಈ ವಸ್ತುನಿಷ್ಠ ಸತ್ಯವನ್ನು ಒಪ್ಪಿಕೊಂಡು, ಕನ್ನಡವನ್ನು ಸಾಹಿತ್ಯ ಮತ್ತು ಸಂಸ್ಕೃತಿಗೆ ಮಾತ್ರವಲ್ಲದೆ, ಆರ್ಥಿಕ ಪ್ರಗತಿ, ಜ್ಞಾನ ಮತ್ತು ಶಕ್ತಿಗೆ ಮೂಲವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ‘ಡಿಂಡಿಮ’ದ ಸ್ವರವನ್ನು ಬದಲಾಯಿಸಬೇಕಾಗಿದೆ.
ನವಪೀಳಿಗೆಯ ಭಾಷಾ ಬಳಕೆ
ಕಳೆದ ಎರಡು ದಶಕಗಳಲ್ಲಿ ಕನ್ನಡದ ಬಳಕೆಯಲ್ಲಿ ಹೊಸ ಪರ್ವವೊಂದು ಆರಂಭವಾಗಿದೆ. ತಂತ್ರಜ್ಞಾನದ ಆಗಮನವು ಕನ್ನಡವನ್ನು ಕೇವಲ ಪುಸ್ತಕ ಮತ್ತು ಪತ್ರಿಕೆಗಳ ಭಾಷೆಯಾಗಿ ಉಳಿಯಲು ಬಿಡದೆ, ಆಡುಭಾಷೆಯ ವಿಸ್ತೃತ ರೂಪಕ್ಕೆ ತಂದು ನಿಲ್ಲಿಸಿದೆ.
ಸಾಮಾಜಿಕ ಮಾಧ್ಯಮಗಳು, ಬ್ಲಾಗ್‌ಗಳು, ಯುಟ್ಯೂಬ್, ಪಾಡ್‌ಕಾಸ್ಟ್‌ಗಳು ಮತ್ತು ಡಿಜಿಟಲ್ ಪತ್ರಿಕೆಗಳಲ್ಲಿ ಕನ್ನಡವು ಹೊಸ ಹುರುಪಿನಿಂದ ಬಳಕೆಯಾಗುತ್ತಿದೆ. ಈ ವೇದಿಕೆಗಳಲ್ಲಿನ ಭಾಷಾ ನಿರೂಪಣೆಯು ಸಾಂಪ್ರದಾಯಿಕ ವ್ಯಾಕರಣ ಮತ್ತು ಶೈಲಿಗೆ ಅಂಟಿಕೊಳ್ಳದೆ, ಹೊಸ ತಲೆಮಾರಿನ ಸಂವಹನ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು ಸರಳ, ನೇರ ಮತ್ತು ಆಡುಮಾತಿನ ಶೈಲಿಗೆ ಬದಲಾ ಗಿದೆ.
ಇಂದಿನ ಕನ್ನಡ ಭಾಷಾಭಿಮಾನಿಗಳು ತಮ್ಮ ಮಾತೃಭಾಷೆಯನ್ನು ಕೇವಲ ಪೂಜನೀಯ ಭಾವ ದಿಂದ ನೋಡುವುದಕ್ಕಿಂತ, ಅದನ್ನು ತಮ್ಮ ದೈನಂದಿನ ಜೀವನದ ಅತ್ಯಗತ್ಯ ಸಾಧನವನ್ನಾಗಿ ಬಳಸುತ್ತಿದ್ದಾರೆ. ಆದರೆ, ಈ ಡಿಜಿಟಲ್ ಕ್ರಾಂತಿಯ ಸವಾಲುಗಳೂ ಸಣ್ಣವಲ್ಲ. ಕನ್ನಡದ ಶುದ್ಧತೆ ಮತ್ತು ಸಮೃದ್ಧತೆಯ ಬಗ್ಗೆ ಚಿಂತಿಸದೆ, ಯುಟ್ಯೂಬ್ ಮತ್ತು ರೀಲ್‌ಗಳಲ್ಲಿನ ತಕ್ಷಣದ ಪ್ರತಿಕ್ರಿಯೆ ಗಳನ್ನು ಪಡೆಯಲು ಆಕರ್ಷಕ ಮತ್ತು ಗುಣಮಟ್ಟವಿಲ್ಲದ ವಿಷಯವನ್ನೇ ಸೃಷ್ಟಿಸಲಾಗುತ್ತಿದೆ.
ಇದು ಒಂದು ಕಡೆ ಕನ್ನಡದ ವ್ಯಾಪ್ತಿಯನ್ನು ಹೆಚ್ಚಿಸಿದರೆ, ಇನ್ನೊಂದು ಕಡೆ ಗಂಭೀರವಾದ ಓದು, ಬರಹ ಮತ್ತು ಚಿಂತನೆಗಳನ್ನು ಗೌಣವಾಗಿಸುತ್ತಿದೆ. ಇಂದಿನ ಯುವಜನತೆ ದೀರ್ಘವಾದ ಲೇಖನ, ಮಹಾಕಾವ್ಯಗಳನ್ನು ಓದುವ ಬದಲು ಇನ್ಸ್ಟಾಗ್ರಾಮ್‌ನ ಚಿಕ್ಕ ಕವನಗಳತ್ತ, ‘ಎಕ್ಸ್’ ಮಾಧ್ಯಮ ದಲ್ಲಿನ (ಟ್ವಿಟರ್) ಸಂಕ್ಷಿಪ್ತ ಅಭಿಪ್ರಾಯಗಳತ್ತ ಹೆಚ್ಚು ವಾಲುತ್ತಿದ್ದಾರೆ.
ಇದು ಕನ್ನಡ ಸಾಹಿತ್ಯದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಬಹುದೊಡ್ಡ ಅಂತರವನ್ನು ಸೃಷ್ಟಿಸಬಹುದು. ಇನ್ನೊಂದು ವಾಸ್ತವವೆಂದರೆ, ಮಹಾನಗರಗಳಲ್ಲಿರುವ ಅನ್ಯ ಭಾಷಿಕರ ಸಂಖ್ಯೆಯ ಹೆಚ್ಚಳದಿಂದಾಗಿ ಕನ್ನಡಿಗರೇ ಕನ್ನಡದಲ್ಲಿ ಮಾತನಾಡುವ ಸಂಕೋಚಕ್ಕೆ ಒಳಗಾಗುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿ ಕನ್ನಡವನ್ನು ಮಾತನಾಡಲು ಕಲಿಯದ ಅನ್ಯಭಾಷಿಕರ ಸಂಖ್ಯೆ ಗಣನೀಯ ವಾಗಿದೆ. ಇದಕ್ಕೆ ಕಾರಣ ಕನ್ನಡಿಗರಲ್ಲೇ ಇರುವ ‘ಹೊಂದಿಕೊಂಡು ಹೋಗುವ’ ಮನೋಭಾವ, ಅಥವಾ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಮಾಡುವ ಒಂದು ನಿರ್ಧಾರಿತವಾದ ಒತ್ತಡದ ಕೊರತೆ.
ಕುವೆಂಪು ಅವರು ‘ಕರ್ನಾಟಕ ಹೃದಯ ಶಿವ’ನನ್ನು ಎಚ್ಚರಿಸಿದಂತೆ, ಈ ವಿಷಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದ ಹೊರತು, ಕನ್ನಡವು ತನ್ನ ಆಡಳಿತ ಮತ್ತು ವಾಣಿಜ್ಯ ಸ್ಥಾನ ಮಾನವನ್ನು ಪೂರ್ಣವಾಗಿ ಸಾಧಿಸಲು ಸಾಧ್ಯವಿಲ್ಲ. ಶಕ್ತಿಯ ಕೊರತೆಯು ಭಾಷೆಯ ಮೇಲೆ ಪರಿಣಾಮ ಬೀರುತ್ತದೆ.
ಹೀಗಾಗಿ, ಕನ್ನಡದ ವಸ್ತುನಿಷ್ಠ ಪ್ರಗತಿ ಎಂದರೆ, ಅದನ್ನು ಮಾತನಾಡುವವರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ಒದಗಿಸುವುದು. ನಿಜವಾದ ಡಿಂಡಿಮದ ಸ್ವರ ಕುವೆಂಪುರವರ ಡಿಂಡಿಮವು ಭವಿಷ್ಯದ ಕನ್ನಡ ಸಮುದಾಯಕ್ಕೆ ಒಂದು ದಾರಿದೀಪವನ್ನು ನೀಡುತ್ತದೆ. ಕೇವಲ ಕಚ್ಚಾಡುವ ಮನಸ್ಸುಗಳನ್ನು ಒಲಿಸುವುದು ಮಾತ್ರವಲ್ಲದೆ, ‘ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯ ವಾಗಲಿ ಸರ್ವರಲಿ’ ಎಂಬ ಅವರ ಆಶಯವನ್ನು ನಾವು ವರ್ತಮಾನಕ್ಕೆ ಅಳವಡಿಸಿಕೊಳ್ಳಬೇಕು.
ಕನ್ನಡದ ನಿಜವಾದ ಡಿಂಡಿಮದ ಸ್ವರವು ಕೇವಲ ರಾಜಕೀಯ ಹೋರಾಟಗಳಲ್ಲಾಗಲೀ ಅಥವಾ ಭಾವನಾತ್ಮಕ ಘೋಷಣೆಗಳಲ್ಲಾಗಲೀ ಇಲ್ಲ. ಅದು ಇರುವುದು- ಕನ್ನಡ ಮಾಧ್ಯಮ ಶಾಲೆಗಳನ್ನು ಇಂಗ್ಲಿಷ್ ಭಾಷೆ ಮತ್ತು ಆಧುನಿಕ ಜ್ಞಾನವನ್ನು ಉನ್ನತ ಗುಣಮಟ್ಟದಲ್ಲಿ ಕಲಿಸುವ ಕೇಂದ್ರ ಗಳನ್ನಾಗಿ ರೂಪಿಸುವುದರಲ್ಲಿ. ಕನ್ನಡವು ಉತ್ತಮ ಶಿಕ್ಷಣ, ಉನ್ನತ ಉದ್ಯೋಗ ಮತ್ತು ಜ್ಞಾನ ಸಂಪಾದನೆಗೆ ಅಡ್ಡಿಯಾಗುವುದಿಲ್ಲ, ಬದಲಿಗೆ ಮಾರ್ಗವಾಗುತ್ತದೆ ಎಂಬ ನಂಬಿಕೆಯನ್ನು ಮೂಡಿಸು ವುದು.
ತಂತ್ರಜ್ಞಾನದ ಬಲವರ್ಧನೆ
ಆಡಳಿತ, ಬ್ಯಾಂಕಿಂಗ್, ವಾಣಿಜ್ಯ ಮತ್ತು ನ್ಯಾಯಾಂಗದಂಥ ನಿರ್ಣಾಯಕ ಕ್ಷೇತ್ರಗಳಲ್ಲಿ ಕನ್ನಡ ವನ್ನು ಸಂಪೂರ್ಣವಾಗಿ ಅಳವಡಿಸಲು ತಂತ್ರಜ್ಞಾನವನ್ನು ಬಳಸುವುದು; ಕನ್ನಡವನ್ನು ‘ಕ್ಲಿಕ್’ ಮಾಡುವ ಭಾಷೆಯನ್ನಾಗಿ, ಕೀಬೋರ್ಡ್‌ನಿಂದ ನೇರವಾಗಿ ಬಳಕೆಯಾಗುವ ಭಾಷೆಯನ್ನಾಗಿ ಮಾಡುವುದು; ಭಾಷಾ ವೈವಿಧ್ಯವನ್ನು ಗೌರವಿಸುತ್ತಲೇ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬ ವಸ್ತುನಿಷ್ಠ ಸತ್ಯವನ್ನು ಪ್ರತಿಪಾದಿಸುವುದು; ಕನ್ನಡ ಕಲಿಯುವವರಿಗೆ ಪ್ರೋತ್ಸಾಹ, ಕನ್ನಡವನ್ನು ನಿರ್ಲಕ್ಷಿಸುವವರಿಗೆ ಕಡ್ಡಾಯದ ಒತ್ತಡವನ್ನು ಸೃಷ್ಟಿಸುವ ರಾಜಕೀಯ ಇಚ್ಛಾಶಕ್ತಿ ಯನ್ನು ಪ್ರದರ್ಶಿಸುವುದು- ಇವೆಲ್ಲವೂ ನೆರವೇರಬೇಕಿರುವ ಸಂಕಲ್ಪಗಳಾಗಿವೆ.
ಕನ್ನಡವು ಕೇವಲ ಒಂದು ಪ್ರಾಚೀನ ಭಾಷೆಯಾಗಿ ಉಳಿಯಬಾರದು; ಅದು ನಮ್ಮ ಜ್ಞಾನ, ವಿಜ್ಞಾನ, ವಾಣಿಜ್ಯ ಮತ್ತು ನಿತ್ಯ ಜೀವನದ ಪ್ರತಿಯೊಂದು ಕಣದಲ್ಲಿಯೂ ಜೀವಂತವಾಗಿರಬೇಕು. ‘ಚೈತ ಶಿವೇತರ ಕೃತಿ ಕೃತಿಯಲ್ಲಿ ಮೂಡಲಿ ಮಂಗಳ ಮತಿ ಮತಿಯಲ್ಲಿ’ ಎಂದಿದ್ದಾರೆ ಕುವೆಂಪು. ಅಂದರೆ, ಕೇವಲ ಬೌದ್ಧಿಕವಾಗಿ ಬೆಳೆಯುವುದಲ್ಲ, ನಮ್ಮ ಪ್ರತಿ ಕಾರ್ಯದಲ್ಲಿ, ಪ್ರತಿಯೊಂದು ಆಲೋಚನೆ ಯಲ್ಲಿ ಮಂಗಳಕರವಾದ, ಪ್ರಗತಿ ಪರವಾದ ಚಿಂತನೆ ಮೂಡಬೇಕು.
ಅಂಥ ಸಮೃದ್ಧವಾದ ಮತ್ತು ಪ್ರಜ್ಞಾಪೂರ್ವಕವಾದ ಸಮಾಜವನ್ನೇ ಕುವೆಂಪು ಬಯಸಿದ್ದರು. ಆ ಡಿಂಡಿಮದ ಸ್ವರ ಇಂದು ಕನ್ನಡಿಗರ ಪ್ರತಿಯೊಬ್ಬರ ಮನಸ್ಸಿನ ಆಳದಿಂದ ಹೊರಹೊಮ್ಮಬೇಕು. ಇದು ಕೇವಲ ನಮ್ಮ ಅಸ್ತಿತ್ವದ ಪ್ರಶ್ನೆಯಲ್ಲ, ಇದು ನಮ್ಮ ಭವಿಷ್ಯದ ಪ್ರಶ್ನೆ...
(ಲೇಖಕರು ಹವ್ಯಾಸಿ ಬರಹಗಾರರು)