ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Praveen Vivek Column: ಸಮರ್ಥ ನಾಯಕತ್ವ ಸಿಕ್ಕಿದರಷ್ಟೇ ರಾಜ್ಯ ಸಮೃದ್ಧವಾದೀತು !

1962ರಲ್ಲಿ ನಿಜಲಿಂಗಪ್ಪನವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಗಲೂ ಅವರು ಹಿಂದೇಟು ಹಾಕಲಿಲ್ಲ. 1968ರಲ್ಲಿ ನಿಜಲಿಂಗಪ್ಪನವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ನಿಜಲಿಂಗಪ್ಪನವರ ನಂತರ ಯಾರ ನಾಯಕತ್ವ ಎನ್ನುವ ಪ್ರಶ್ನೆ ಶುರುವಾಗಿತ್ತು. ನಿಜಲಿಂಗಪ್ಪ ನವರು ರಾಮಕೃಷ್ಣ ಹೆಗಡೆ ಅವರನ್ನು ಉತ್ತರಾಧಿಕಾರಿ ಮಾಡುವ ಇರಾದೆಯಲ್ಲಿ ಇದ್ದರಂತೆ!

ದಿಕ್ಸೂಚಿ

ಪ್ರವೀಣ್‌ ವಿವೇಕ್

ಒಂದಿಡೀ ದೇಶದ ಚಿತ್ತ ಬಿಹಾರದತ್ತ ಇದ್ದರೆ, ಬಿಹಾರದ ನಂತರ ಕರ್ನಾಟಕದಲ್ಲಿ ಏನಾಗಬಹುದು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ನವೆಂಬರ್ 21ಕ್ಕೆ ಎರಡೂವರೆ ವರ್ಷ ಆಗುತ್ತಿದೆ. ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೆಯೋ? ಸಚಿವ ಸಂಪುಟ ಪುನಾರಚನೆ ಆಗುತ್ತದೆಯೋ? ಅಥವಾ ಯಾವುದೂ ಇಲ್ಲದೇ ಸಿದ್ದರಾಮಯ್ಯನವರ ನೇತೃತ್ವದ ಬಂಡಿ ಹೀಗೆಯೇ ಸಾಗುತ್ತದೆಯೋ? ಈ ಪ್ರಶ್ನೆಗೆ ಉತ್ತರ ಬೇಕಾದರೆ ರಾಜ್ಯದ ಜನರು ಇನ್ನೂ ಒಂದಿಷ್ಟು ಕಾಯಬೇಕು.

“ನಮ್ಮ ತಂದೆಯವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ, ಅವರ ನಂತರ ನಾಯಕತ್ವ ವಹಿಸಿ ಕೊಳ್ಳಲು ಸತೀಶ್ ಜಾರಕಿಹೊಳಿ ಸಮರ್ಥರಾಗಿದ್ದಾರೆ" ಎಂದು ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಇದು ಹೊಮ್ಮಿದ್ದೇ ತಡ ಅದರ ಪರ ಮತ್ತು ವಿರೋಧ ಚರ್ಚೆಗಳು ಕಾಂಗ್ರೆಸ್ ಪಕ್ಷದ ಶುರುವಾಗಿವೆ.

ಸಿದ್ದರಾಮಯ್ಯನವರ ನಂತರ ಯಾರು ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರ ನೀಡಬಹುದೇನೋ? ಆದರೆ, ರಾಜ್ಯದ ಅಭಿವೃದ್ಧಿ, ಜನಸಾಮಾನ್ಯರ ದೃಷ್ಟಿಯಿಂದ ಮತ್ತೊಬ್ಬರ ಕೈಗೊಂಬೆ ಆಗದಿರುವ ನಾಯಕತ್ವದ ಅವಶ್ಯಕತೆ ಇದೆ. ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಅನೇಕ ಬಿಕ್ಕಟ್ಟುಗಳು/ ಗಂಭೀರ ಸಂದರ್ಭಗಳು ಸೃಷ್ಟಿ ಆಗಿದ್ದನ್ನು ನೋಡಿದ್ದೇವೆ.

ಇದನ್ನೂ ಓದಿ: Vishweshwar Bhat Column: ಇಸ್ರೇಲ್‌ ಮತ್ತು ಇಸ್ರೇಲಿಗರ ಕುರಿತ ಹತ್ತು ತಪ್ಪು ಕಲ್ಪನೆಗಳು

ಇಂಥ ವೇಳೆ, ಸಮರ್ಥ ನಾಯಕತ್ವ ಹೊಮ್ಮಿರುವ ಉದಾಹರಣೆಗಳು ಇವೆ, ಅದೇ ರೀತಿಯಲ್ಲಿ ನಾಯಕತ್ವವು ಸೋತು ಸುಣ್ಣವಾದ ಜ್ವಲಂತ ನಿದರ್ಶನಗಳು ಸಹ ಇವೆ. ರಾಜ್ಯ ರಾಜಕೀಯದ ಇತಿಹಾಸದಲ್ಲಿ, ಅವಧಿ ಪೂರ್ವದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಂಥವರ ಉದಾ ಹರಣೆಗಳು ಸಾಕಷ್ಟಿವೆ.

ವಿವಾದಗಳು ಮೈಮೇಲೆ ಬಂದಾಗ ನೈತಿಕ ಹೊಣೆಗಾರಿಕೆಯ ದೃಷ್ಟಿಯಿಂದ 1958ರಲ್ಲಿ ನಿಜಲಿಂಗಪ್ಪ ನವರು, 1988ರಲ್ಲಿ ರಾಮಕೃಷ್ಣ ಹೆಗಡೆಯವರು ರಾಜೀನಾಮೆ ನೀಡಿದ್ದರು. ರಾಷ್ಟ್ರ ರಾಜಕಾರಣಕ್ಕೆ ಹೋದ ಸಂದರ್ಭದಲ್ಲಿ 1968ರಲ್ಲಿ ನಿಜಲಿಂಗಪ್ಪನವರು, 1996ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಪದವಿ ತ್ಯಾಗ ಮಾಡಿದ್ದರು.

ದೆಹಲಿಯ ನಿರ್ಧಾರ ಮತ್ತು ಭಿನ್ನಮತದ ಕಾರಣಕ್ಕೆ 1990ರಲ್ಲಿ ವೀರೇಂದ್ರ ಪಾಟೀಲರು, 1993ರಲ್ಲಿ ಬಂಗಾರಪ್ಪನವರು, 2011ರಲ್ಲಿ ಯಡಿಯೂರಪ್ಪನವರು ಹಾಗೂ 2012ರಲ್ಲಿ ಸದಾನಂದಗೌಡರು ಮತ್ತು 2021ರಲ್ಲಿ ಮತ್ತೊಮ್ಮೆ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯ ಬೇಕಾಗಿ ಬಂತು.

Ramakrishna H ok

1958ರಲ್ಲಿ, ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ನಿಜಲಿಂಗಪ್ಪನವರು ರಾಜೀನಾಮೆ ನೀಡಿದರು. ಆಗ ಆ ಸ್ಥಾನಕ್ಕೆ ಬಂದವರು ಬಸಪ್ಪ ದಾನಪ್ಪ ಜತ್ತಿ. ಲಿಂಗಾಯತ ಶಾಸಕರು ಅಧಿಕವಾಗಿದ್ದ ಕಾರಣಕ್ಕೆ ಜತ್ತಿ ಅವರನ್ನು ಆ ಸ್ಥಾನಕ್ಕೆ ತಂದು ಕುಳ್ಳಿರಿಸಲಾಯಿತು. ನೆಹರು ಕುಟುಂಬದ ಹಿಡಿತಕ್ಕೆ ಸಿಲುಕಿದ ಜತ್ತಿ, ನಾಲ್ಕು ವರ್ಷಗಳ ಕಾಲ ಆಡಳಿತವನ್ನು ತೂಗಿಸಿ ಕೊಂಡು ಹೋದರೇ ಹೊರತು, ಸಮರ್ಥ ನಾಯಕತ್ವದ ಪ್ರದರ್ಶನ ಮಾಡಲಿಲ್ಲ!

ಪರಿಣಾಮ, 1962ರಲ್ಲಿ ನಿಜಲಿಂಗಪ್ಪನವರ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಗಲೂ ಅವರು ಹಿಂದೇಟು ಹಾಕಲಿಲ್ಲ. 1968ರಲ್ಲಿ ನಿಜಲಿಂಗಪ್ಪನವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ನಿಜಲಿಂಗಪ್ಪನವರ ನಂತರ ಯಾರ ನಾಯಕತ್ವ ಎನ್ನುವ ಪ್ರಶ್ನೆ ಶುರುವಾಗಿತ್ತು. ನಿಜಲಿಂಗಪ್ಪ ನವರು ರಾಮಕೃಷ್ಣ ಹೆಗಡೆ ಅವರನ್ನು ಉತ್ತರಾಧಿಕಾರಿ ಮಾಡುವ ಇರಾದೆಯಲ್ಲಿ ಇದ್ದರಂತೆ!

ಆದರೆ, ಸ್ವತಃ ಹೆಗಡೆಯವರೇ ನಿಜಲಿಂಗಪ್ಪನವರ ಸಲಹೆಯನ್ನು ನಯವಾಗಿ ನಿರಾಕರಿಸಿ, “ಪಕ್ಷದಲ್ಲಿ ಲಿಂಗಾಯತ ಶಾಸಕರೇ ಹೆಚ್ಚಾಗಿ ಇರುವುದರಿಂದ ನನ್ನ ಸೋಲು ಖಚಿತ" ಎಂದು ಹೇಳಿ ವೀರೇಂದ್ರ ಪಾಟೀಲರ ಹೆಸರನ್ನು ಸೂಚಿಸಿದರಂತೆ. ಆಗ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಪಾಟೀಲರು ರಾಜ್ಯದಲ್ಲಿ ಜನಪ್ರಿಯರಾದರು.

1983ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ 95 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಆದರೆ ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಬಿಜೆಪಿ ಹಾಗೂ ಇತರ ಪಕ್ಷಗಳ ಬೆಂಬಲವು ಜನತಾ ಪಕ್ಷಕ್ಕೆ ಸಿಕ್ಕಿತಾದರೂ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ಮತ್ತು ಎಸ್.ಆರ್. ಬೊಮ್ಮಾಯಿ ಅವರ ನಡುವೆ ಭಾರಿ ಪೈಪೋಟಿ ಇತ್ತು. ಈ ಪೈಪೋಟಿಯ ನಡುವೆ ದೇವೇಗೌಡರು ಮತ್ತು ಬೊಮ್ಮಾಯಿ ಸೇರಿ ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಮಾಡಿ ತಮ್ಮ ಇಶಾರೆಯಂತೆ ಸರಕಾರವನ್ನು ನಡೆಸಲು ಪ್ರಯತ್ನಿಸಿದರು.

ಆದರೆ ರಾಮಕೃಷ್ಣ ಹೆಗಡೆಯವರು ಅವರಿಬ್ಬರ ನಿರೀಕ್ಷೆಯನ್ನು ಸುಳ್ಳಾಗಿಸಿದರು. ಅಷ್ಟೇ ಯಾಕೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋದಾಗಲೂ ಜನರು ಜನತಾ ಪಕ್ಷಕ್ಕೆ 139 ಸ್ಥಾನಗ ಳನ್ನು ನೀಡುವ ಮೂಲಕ ಹೆಗಡೆ ಅವರ ನಾಯಕತ್ವಕ್ಕೆ ಸೈ ಅಂದಿದ್ದರು. ದೇವೇಗೌಡರು 1996ರಲ್ಲಿ ದೇಶದ ಪ್ರಧಾನಿ ಹುzಗೆ ಏರಿದಾಗ ಜೆ.ಎಚ್. ಪಟೇಲರು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಗೌಡರ ನಿಯಂತ್ರಣದ ಹೊರತಾಗಿಯೂ ಪಟೇಲರು ಉತ್ತಮ ಆಡಳಿತ ನೀಡಿದ್ದನ್ನು ಇತಿಹಾಸದ ಪುಟಗಳಲ್ಲಿ ನೋಡಬಹುದು.

ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಹೆಗಡೆ ಅವರು ರಾಜೀನಾಮೆ ನೀಡಿದಾಗ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಎಸ್.ಆರ್. ಬೊಮ್ಮಾಯಿ ಅವರಾಗಲಿ, ಹೈಕಮಾಂಡ್ ನಿರ್ಧಾರದ ಕಾರಣಕ್ಕೆ ವೀರೇಂದ್ರ ಪಾಟೀಲರು ತೆರೆಗೆ ಸರಿದಾಗ ಮುಖ್ಯಮಂತ್ರಿ ಆದ ಎಸ್.ಬಂಗಾರಪ್ಪ ಅವರಾಗಲಿ, ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಬಂದ ಸದಾನಂದಗೌಡರು ಆಗಿರಲಿ, ಗೌಡರ ನಂತರ ಬಂದ ಜಗದೀಶ್ ಶೆಟ್ಟರ್ ಅವರಾಗಲಿ ‘ಮಾಸ್ ಲೀಡರ್’ ಆಗಿ ಪ್ರದರ್ಶನ ಮಾಡುವ ಪ್ರಯತ್ನ ಮಾಡಲಿಲ್ಲ.

ತೀರಾ ಇತ್ತೀಚೆಗೆ, ಅಪರೇಷನ್ ಕಮಲದ ನಂತರ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಹೈಕಮಾಂಡ್ ನಿರ್ಧಾರದ ಕಾರಣಕ್ಕೆ ರಾಜೀ ನಾಮೆ ನೀಡಿದರು. ಯಡಿಯೂರಪ್ಪನವರ ಸ್ಥಾನ ತುಂಬಲು ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ಬೊಮ್ಮಾಯಿ ಅವರು ಆ ಸ್ಥಾನವನ್ನು ಹೇಗೆ ನಿಭಾಯಿಸಿದರು ಎನ್ನುವುದನ್ನು ರಾಜ್ಯದ ಜನ ಗಮನಿಸಿದ್ದಾರೆ. ಹೀಗೆ ಕರ್ನಾಟಕದಲ್ಲಿ ಅನಿರೀಕ್ಷಿತ ಅವಕಾಶವನ್ನು ಉಪಯೋಗ ಮಾಡಿಕೊಳ್ಳದೇ ಬೇರೆಯವರ ಕೈಗೊಂಬೆ ಆದ ಅನೇಕ ಉದಾಹರಣೆಗಳು ಇವೆ. ಇನ್ನೂ ಕೆಲವರು ಸಂಘರ್ಷದ ನಾಯಕತ್ವ ಪ್ರದರ್ಶಿಸಿ ಚಿರಸ್ಥಾಯಿ ಆಗಿದ್ದಾರೆ. ಈಗ ಮತ್ತೊಮ್ಮೆ ಕರ್ನಾಟಕದ ರಾಜಕಾರಣ ವನ್ನು ನಾಯಕತ್ವ ಬದಲಾವಣೆಯ ಗುಮ್ಮ ಕಾಡತೊಡಗಿದೆ. ಆ ಗುಮ್ಮ ಏನೇ ಇರಲಿ, ಯಾವುದೇ ಒಬ್ಬ ವ್ಯಕ್ತಿಯ ಕೈಗೊಂಬೆ ಆಗದೇ ಜನತಾಂತ್ರಿಕ ಮನಸ್ಸುಳ್ಳ ನಾಯಕರ ಅವಶ್ಯಕತೆ ರಾಜ್ಯಕ್ಕಿದೆ.

(ಲೇಖಕರು ಪತ್ರಕರ್ತರು)