ಒಂದೊಳ್ಳೆ ಮಾತು
ನಿಷಧ ದೇಶದ ರಾಜವಂಶದ ನಳ ಮತ್ತು ವಿದರ್ಭ ದೇಶದ ರಾಜ ಭೀಮನ ಮಗಳು ದಮಯಂತಿ ಪರಸ್ಪರರ ಗುಣ-ರೂಪಗಳ ಬಗ್ಗೆ ಕೇಳಿ ಅನುರಕ್ತರಾಗಿದ್ದರು. ಒಮ್ಮೆ ನಳನು ಸರೋವರದಲ್ಲಿ ಹಿಡಿದ ಹಂಸವೊಂದು ದಮಯಂತಿಯ ಸೌಂದರ್ಯವನ್ನು ವರ್ಣಿಸಿ, ಅವರಿಬ್ಬರ ನಡುವೆ ಪ್ರೇಮದೂತ ನಾಗಿ ಕೆಲಸ ಮಾಡುತ್ತದೆ.
ದಮಯಂತಿಯ ಸ್ವಯಂವರ ಏರ್ಪಟ್ಟಾಗ, ದೇವತೆಗಳಾದ ಇಂದ್ರ, ವರುಣ, ಅಗ್ನಿ ಮತ್ತು ಯಮ ಕೂಡ ಅವಳನ್ನು ವರಿಸಲು ನಳನ ರೂಪದಲ್ಲೇ ಬರುತ್ತಾರೆ, ಆದರೆ ದಮಯಂತಿಯು ತನ್ನ ನಿಶ್ಚಲ ಭಕ್ತಿಯಿಂದ ಅಸಲಿ ನಳನನ್ನೇ ಗುರುತಿಸಿ ವರಿಸುತ್ತಾಳೆ.
ದೇವತೆಗಳು ನಳನ ಪ್ರಾಮಾಣಿಕತೆಗೆ ಮೆಚ್ಚಿ, ಅಡುಗೆಯಲ್ಲಿ ನೈಪುಣ್ಯತೆ (ನಳಪಾಕ) ಸೇರಿದಂತೆ ಹಲವು ವರಗಳನ್ನು ನೀಡುತ್ತಾರೆ. ದಮಯಂತಿಯನ್ನು ಮದುವೆಯಾಗಬೇಕೆಂದು ಬಂದಿದ್ದ ಕಲಿ ಪುರುಷನಿಗೆ ಇದು ಕೋಪ ತರಿಸುತ್ತದೆ. ನಳನ ಜೀವನದಲ್ಲಿ ವಿಘ್ನ ತರಲು ಕಾಯುತ್ತಿದ್ದ ಕಲಿಗೆ, ನಳನು ಸಂಧ್ಯಾವಂದನೆಯ ಸಮಯದಲ್ಲಿ ಕಾಲು ಸರಿಯಾಗಿ ತೊಳೆಯದ ಒಂದು ಸಣ್ಣ ಅಚಾತುರ್ಯ, ಅವನ ದೇಹ ಪ್ರವೇಶಿಸಲು ಅವಕಾಶ ಸಿಗುತ್ತದೆ.
ಕಲಿಯ ಪ್ರಭಾವದಿಂದ ನಳನು ತನ್ನ ತಮ್ಮ ಪುಷ್ಕರನೊಂದಿಗೆ ಪಗಡೆಯಾಟವಾಡಿ ತನ್ನ ಇಡೀ ರಾಜ್ಯ ಮತ್ತು ಸಂಪತ್ತನ್ನು ಸೋಲುತ್ತಾನೆ. ಕೇವಲ ಉಟ್ಟ ವಸ್ತ್ರದಲ್ಲಿ ದಂಪತಿಗಳು ಕಾಡಿಗೆ ತೆರಳು ತ್ತಾರೆ. ಕಾಡಿನ ಕಷ್ಟದಲ್ಲಿ ದಮಯಂತಿ ಬಳಲಬಾರದು, ಅವಳು ತನ್ನ ತಂದೆಯ ಮನೆಗೆ ಸೇರಿ ಕೊಳ್ಳಲಿ ಎಂಬ ಉದಾತ್ತ ಉದ್ದೇಶದಿಂದ ನಳನು ಅವಳು ಮಲಗಿದ್ದಾಗ ಅರ್ಧ ಸೀರೆಯನ್ನು ಹರಿದುಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ.
ಇದನ್ನೂ ಓದಿ: Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು
ದಾರಿಯಲ್ಲಿ ನಳನು ಕಾಡ್ಗಿಚ್ಚಿನಿಂದ ಕಾರ್ಕೋಟಕ ಎಂಬ ಸರ್ಪವನ್ನು ರಕ್ಷಿಸುತ್ತಾನೆ. ಪ್ರತಿಯಾಗಿ ಸರ್ಪವು ಅವನನ್ನು ಕಚ್ಚುತ್ತದೆ, ಇದರಿಂದ ನಳನ ರೂಪ ಬದಲಾಗಿ ಅವನು ಕುಬ್ಜನಂತಾಗುತ್ತಾನೆ (ಬಾಹುಕ). ಈ ರೂಪವು ಅವನನ್ನು ಶತ್ರುಗಳು ಗುರುತಿಸದಂತೆ ರಕ್ಷಿಸುತ್ತದೆ, ನಂತರ ಅವನು ಅಯೋಧ್ಯೆಯ ರಾಜ ಋತುಪರ್ಣನ ಬಳಿ ಸಾರಥಿಯಾಗಿ ಸೇರಿಕೊಳ್ಳುತ್ತಾನೆ. ಇತ್ತ ದಮಯಂತಿಯು ಅನೇಕ ಕಷ್ಟಗಳನ್ನು ಎದುರಿಸಿ ಅಂತಿಮವಾಗಿ ತನ್ನ ತಂದೆಯ ಮನೆ ಸೇರುತ್ತಾಳೆ.
ದಮಯಂತಿಯು ತನ್ನ ಪತಿಯನ್ನು ಹುಡುಕಲು ‘ಎರಡನೇ ಸ್ವಯಂವರ’ದ ತಂತ್ರ ಹೂಡುತ್ತಾಳೆ. ಇದನ್ನು ಕೇಳಿ ಋತುಪರ್ಣನು ಬಾಹುಕನೊಂದಿಗೆ ವಿದರ್ಭಕ್ಕೆ ಧಾವಿಸುತ್ತಾನೆ. ದಾರಿಯಲ್ಲಿ ಋತುಪರ್ಣನಿಂದ ನಳನು ‘ಅಕ್ಷಹೃದಯ’ (ಪಗಡೆಯಾಟದ ವಿದ್ಯೆ) ಕಲಿತರೆ, ನಳನಿಂದ ಋತು ಪರ್ಣನು ‘ಅಶ್ವವಿದ್ಯೆ’ ಕಲಿಯುತ್ತಾನೆ. ವಿದರ್ಭ ತಲುಪಿದ ಮೇಲೆ ಬಾಹುಕನ ಅಡುಗೆಯ ರುಚಿ ಮತ್ತು ರಥ ನಡೆಸುವ ಶೈಲಿಯಿಂದ ದಮಯಂತಿ ಅವನು ತನ್ನ ಪತಿಯೇ ಎಂದು ಗುರುತಿಸುತ್ತಾಳೆ. ಕಾರ್ಕೋಟಕ ನೀಡಿದ್ದ ವಸ್ತ್ರ ಧರಿಸಿದಾಗ ನಳನು ತನ್ನ ನಿಜರೂಪ ಪಡೆಯುತ್ತಾನೆ.
ಅಂತಿಮವಾಗಿ ನಳನು ಹೊಸದಾಗಿ ಕಲಿತ ದ್ಯೂತ ವಿದ್ಯೆಯಿಂದ ಪುಷ್ಕರನನ್ನು ಸೋಲಿಸಿ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ಹೀಗೆ ಎಲ್ಲವನ್ನೂ ಕಳೆದುಕೊಂಡರೂ ಧರ್ಮ ಮತ್ತು ತಾಳ್ಮೆ ಯಿಂದ ನಳ-ದಮಯಂತಿಯರು ಮತ್ತೆ ಒಂದಾಗಿ ಸುಖವಾಗಿ ಬಾಳುತ್ತಾರೆ.
ಮಹಾಭಾರತದ ವನಪರ್ವದಲ್ಲಿ ಬರುವ ‘ನಳ-ದಮಯಂತಿ’ಯರ ಕಥೆಯು ಮನುಷ್ಯನ ಜೀವನ ದಲ್ಲಿ ಬರುವ ಏರಿಳಿತಗಳು, ಧರ್ಮದ ಹಾದಿ ಮತ್ತು ಅಚಲವಾದ ಪ್ರೇಮಕ್ಕೆ ಸಾಕ್ಷಿಯಾಗಿದೆ. ಬೃಹದಶ್ವರ ಮುನಿಗಳು ಧರ್ಮರಾಯನಿಗೆ ಧೈರ್ಯ ತುಂಬಲು ಈ ಕಥೆಯನ್ನು ವಿವರಿಸಿದ್ದರಂತೆ. ನಮಗೂ ಸಹ ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಸವಾಲುಗಳು ಎದುರಾಗುತ್ತವೆ.
ಅನೇಕ ಬಾರಿ ನಮ್ಮವರೇ ನಮಗೆ ಪೆಟ್ಟು ಕೊಡುತ್ತಾರೆ. ಅಪರಿಚಿತರಿಂದ ಮೋಸ ಹೋದರೆ ಅದನ್ನು ತಡೆದುಕೊಳ್ಳಬಹುದು, ಆದರೆ ನಮ್ಮವರೇ ಹೀಗೆ ಮಾಡಿದಾಗ ಅದನ್ನು ಸಹಿಸುವುದು ಕಷ್ಟ ವಾಗುತ್ತದೆ. ಅವರನ್ನು ಕ್ಷಮಿಸಲೂ ಆಗದೆ, ಮತ್ತೆ ಮೊದಲಿನಂತೆ ಇರಲೂ ಆಗದೆ ನೆರಳುತ್ತೇವೆ. ಆದರೆ ಒಂದನ್ನು ತಿಳಿದುಕೊಳ್ಳಬೇಕು, ನಮಗೆ ಪೆಟ್ಟು ಎಷ್ಟು ದೊಡ್ಡದಾಗಿರುತ್ತದೆಯೋ ಅದನ್ನು ಕೊಟ್ಟವರು ಅಷ್ಟೇ ಹತ್ತಿರದವರಾಗಿರುತ್ತಾರೆ, ಕಾರಣ ಅವರಿಗೆ ಮಾತ್ರ ನಾವು ಅಷ್ಟು ಹತ್ತಿರದಿಂದ ಲಭ್ಯರಾಗಿರುತ್ತೇವೆ, ಇದು ಜಗದ ನಿಯಮ.
ಇಂತಹ ಪುರಾಣದ ಕಥೆಗಳೇ, ಈ ಸಂಬಂಧಗಳ ಸೂಕ್ಷ್ಮಗಳನ್ನು ನೂರಾರು ವರ್ಷಗಳಿಂದ ವಿವರಿಸುತ್ತಾ ಬಂದಿದೆ. ಇಂತಹ ಕಥೆಗಳನ್ನು ತಿಳಿದುಕೊಂಡಾಗ ಬದುಕು ನಮಗೆ ಹೆಚ್ಚು ಅರ್ಥ ವಾಗುತ್ತಾ ಹೋಗುತ್ತದೆ, ಬದುಕುವ ಸಂಯಮವೂ ಬೆಳೆಯುತ್ತದೆ.