ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ವಾಪಸ್ ಬರುವಾಗ ಹುಡುಗ ಗುರುಗಳನ್ನು ಕೇಳಿದ, “ನಾನು ಒಂದೇ ಒಂದು ಪಟ್ಟಿನಿಂದ ಹೇಗೆ ಗೆದ್ದೆ?" ಗುರುಗಳು ಹೇಳಿದರು- “ಮಗು, ನೀನು ಕಲಿತ ಪಟ್ಟು ಜೂಡೋದ ಅತ್ಯಂತ ಕಷ್ಟಕರವಾದದ್ದು. ಅದರಿಂದ ಪಾರಾಗಲು ಎದುರಾಳಿಗೆ ಇರುವ ಏಕೈಕ ದಾರಿ ಎಂದರೆ, ನಿನ್ನ ಬಲಗೈಯನ್ನು ಹಿಡಿದು ಎಳೆಯುವುದು. ಆದರೆ ನಿನಗೆ ಆ ಕೈಯೇ ಇಲ್ಲವಲ್ಲ!". ಆತನ ದೊಡ್ಡ ದೌರ್ಬಲ್ಯವೇ ಅವನ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿ ಬದಲಾಗಿತ್ತು.

Roopa Gururaj Column: ನಮ್ಮ ದೌರ್ಬಲ್ಯಗಳನ್ನೇ ಅಸ್ತ್ರವಾಗಿಸಿಕೊಳ್ಳಬೇಕು

-

ಒಂದೊಳ್ಳೆ ಮಾತು

ಹನ್ನೊಂದು ವರ್ಷದ ಬಾಲಕ ಆಕಾಶಕ್ಕೆ ಕೈಚಾಚಿ ಕುಳಿತಿದ್ದ. ಅವನ ಬಲಗೈ ತುಂಡಾಗಿ ಮೊಣ ಕೈ ವರೆಗೆ ಮಾತ್ರ ಇತ್ತು. ಶಾಲೆಯ ಆಟದ ಮೈದಾನದಲ್ಲಿ ಉಳಿದ ಮಕ್ಕಳು ಕ್ರಿಕೆಟ್ ಆಡುತ್ತಿದ್ದರೆ, ಇವನು ದೂರದ ಬೆಂಚಿನ ಮೇಲೆ ಕುಳಿತು ತನ್ನ ತುಂಡಾದ ಕೈಯನ್ನೇ ನೋಡಿಕೊಳ್ಳುತ್ತಿದ್ದ. ಆದರೆ ಅವನ ಕಣ್ಣುಗಳಲ್ಲಿ ಕಂಬನಿಯಿರಲಿಲ್ಲ, ಬದಲಿಗೆ ಒಂದು ಅಗಾಧ ವಾದ ಹಠವಿತ್ತು.

ಒಂದು ದಿನ ಅವನು ತನ್ನ ತಂದೆಯ ಬಳಿ ಹೋಗಿ, “ನಾನು ಜೂಡೋ ಕಲಿಯಬೇಕು" ಎಂದ. ತಂದೆಗೆ ಆಶ್ಚರ್ಯ ಮತ್ತು ಆತಂಕ. ಒಂದು ಕೈ ಇಲ್ಲದ ಮಗ ಜೂಡೋದಂಥ ಕಠಿಣ ಕಲೆಯನ್ನ ಹೇಗೆ ತಾನೇ ಕಲಿಯಬಲ್ಲ? ಆದರೂ ಮಗನ ಆಸೆಗೆ ಅಡ್ಡಿ ಬರದೆ ಒಬ್ಬ ಹಳೆಯ ಗುರು ಗಳ ಬಳಿ ಅಪ್ಪ ಕರೆದೊಯ್ದ.

ಗುರುಗಳು ಆ ಹುಡುಗನನ್ನು ಪ್ರೀತಿಯಿಂದ ಬರಮಾಡಿಕೊಂಡರು. ತರಬೇತಿ ಶುರುವಾಯಿತು. ಅಚ್ಚರಿಯೆಂದರೆ, ಆರು ತಿಂಗಳಾದರೂ ಗುರುಗಳು ಆ ಹುಡುಗನಿಗೆ ಕೇವಲ ಒಂದೇ ಒಂದು ಪಟ್ಟು ಕಲಿಸಿಕೊಟ್ಟಿದ್ದರು. ಹುಡುಗನಿಗೆ ಗೊಂದಲವಾಯಿತು.

“ಗುರುಗಳೇ, ಉಳಿದ ಮಕ್ಕಳು ನೂರಾರು ಪಟ್ಟುಗಳನ್ನು ಕಲಿಯುತ್ತಿದ್ದಾರೆ, ನಾನೇಕೆ ಕೇವಲ ಇದೊಂದನ್ನೇ ಅಭ್ಯಾಸ ಮಾಡುತ್ತಿದ್ದೇನೆ?" ಎಂದು ಕೇಳಿದ. ಗುರುಗಳು ನಗುತ್ತಾ, “ನಿನಗೆ ಇದೊಂದೇ ಸಾಕು, ಇದನ್ನೇ ಪೂರ್ಣವಾಗಿ ಕರಗತ ಮಾಡಿಕೋ" ಎಂದರು. ಕೆಲವು ವರ್ಷಗಳ ನಂತರ ಒಂದು ದೊಡ್ಡ ಜೂಡೋ ಪಂದ್ಯಾವಳಿ ನಡೆಯಿತು. ಈ ಹುಡುಗ ಭಾಗವಹಿಸಿದ. ಎಲ್ಲರೂ ಇವನನ್ನು ನೋಡಿ ನಕ್ಕರು. ಆದರೆ ಅದ್ಭುತವೆಂಬಂತೆ, ಹುಡುಗ ತನಗೆ ತಿಳಿದಿದ್ದ ಆ ಒಂದೇ ಪಟ್ಟಿನ ಮೂಲಕ ಎದುರಾಳಿ ಗಳನ್ನು ಮಣ್ಣು ಮುಕ್ಕಿಸಿದ. ಫೈನಲ್‌ನಲ್ಲಿ ಎದುರಾಳಿ ತುಂಬಾ ಬಲಿಷ್ಠನಾಗಿದ್ದ. ಆದರೆ ಕ್ಷಣಾರ್ಧ ದಲ್ಲಿ ಹುಡುಗ ತನ್ನ ಆ ವಿಶೇಷ ಪಟ್ಟನ್ನು ಪ್ರಯೋಗಿಸಿ ಗೆದ್ದೇ ಬಿಟ್ಟ!

ಇದನ್ನೂ ಓದಿ: Roopa Gururaj Column: ಹಿಮದ ಸುಂಟರಗಾಳಿಯೆದುರು ಹಿಮಪರ್ವತವಾದ ಮಿನಿ ಫ್ರೀಮನ್

ಇಡೀ ಕ್ರೀಡಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ವಾಪಸ್ ಬರುವಾಗ ಹುಡುಗ ಗುರುಗಳನ್ನು ಕೇಳಿದ, “ನಾನು ಒಂದೇ ಒಂದು ಪಟ್ಟಿನಿಂದ ಹೇಗೆ ಗೆದ್ದೆ?" ಗುರುಗಳು ಹೇಳಿದರು- “ಮಗು, ನೀನು ಕಲಿತ ಪಟ್ಟು ಜೂಡೋದ ಅತ್ಯಂತ ಕಷ್ಟಕರವಾದದ್ದು. ಅದರಿಂದ ಪಾರಾಗಲು ಎದುರಾಳಿಗೆ ಇರುವ ಏಕೈಕ ದಾರಿ ಎಂದರೆ, ನಿನ್ನ ಬಲಗೈಯನ್ನು ಹಿಡಿದು ಎಳೆಯುವುದು. ಆದರೆ ನಿನಗೆ ಆ ಕೈಯೇ ಇಲ್ಲವಲ್ಲ!". ಆತನ ದೊಡ್ಡ ದೌರ್ಬಲ್ಯವೇ ಅವನ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿ ಬದಲಾ ಗಿತ್ತು. ನಮ್ಮ ಜೀವನದಲ್ಲೂ ಅಷ್ಟೇ, ನಾವು ಯಾವಾಗಲೂ ನಮ್ಮಲ್ಲಿ ಏನಿಲ್ಲವೋ ಅದರ ಬಗ್ಗೆಯೇ ಯೋಚಿಸಿ ಕೊರಗುತ್ತೇವೆ.

ನನ್ನ ಹತ್ತಿರ ಹಣವಿಲ್ಲ, ನನಗೆ ಬೆಂಬಲವಿಲ್ಲ, ನನಗೆ ಆ ಶಕ್ತಿ ಇಲ್ಲ ಎಂದು ನಮ್ಮ ಕೊರತೆಗಳನ್ನೇ ದೊಡ್ಡದು ಮಾಡಿ ನೋಡುತ್ತೇವೆ. ಆದರೆ ನಮ್ಮ ಪ್ರತಿ ಕೊರತೆಯ ಹಿಂದೆ ಒಂದು ಅದ್ಭುತವಾದ ಶಕ್ತಿ ಇದ್ದೇ ಇರುತ್ತದೆ. ಅದನ್ನು ಕಂಡುಕೊಳ್ಳುವ ಸೂಕ್ಷ್ಮತೆ ನಮಗಿರಬೇಕು ಅಥವಾ ಅದನ್ನು ಹುಡುಕಿ ಕೊಡುವ ಗುರು ನಮಗೆ ಸಿಗಬೇಕು.

ದಿನನಿತ್ಯದ ಜಂಜಾಟದಲ್ಲಿ ನಮ್ಮ ದೌರ್ಬಲ್ಯಗಳನ್ನು ಕಂಡು ಎದೆಗುಂದದೆ ನಮ್ಮಲ್ಲಿರುವ ಮಿತಿ ಯನ್ನೇ ವಿಶಿಷ್ಟತೆಯನ್ನಾಗಿ ಬದಲಾಯಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳೋಣ. ಕೆಲವೊಮ್ಮೆ ಅಸಾಮಾನ್ಯರು ಮಾಡಲಾಗದ ಕೆಲಸಗಳನ್ನ ಅತಿ ಸಾಮಾನ್ಯರು ಮಾಡಲಾಗುವುದು ಇದೇ ಕೌಶಲ ದಿಂದ. ನಮ್ಮನ್ನು ನಾವು ಪ್ರೀತಿಸಿ ಗೌರವಿಸಿ ನಿರಂತರವಾಗಿ ಹುರಿದುಂಬಿಸಿಕೊಂಡಾಗ ನಮ್ಮ ದೇಹ-ಮನಸ್ಸು ಎಲ್ಲವೂ ಅದಕ್ಕೆ ಅದ್ಭುತವಾಗಿ ಪ್ರತಿಕ್ರಿಯಿಸುತ್ತವೆ.

ಇದನ್ನು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಏಕೆಂದರೆ ಬದುಕಿನಲ್ಲಿ ಸದಾ ಬೇರೆಯವರು ನಮ್ಮ ಬೆನ್ನು ತಟ್ಟುವುದಿಲ್ಲ, ನಮ್ಮನ್ನು ಹಾಡಿ ಹೊಗಳುವುದಿಲ್ಲ. ಆದರೆ ನಮ್ಮ ಪುಟ್ಟ ಗೆಲುವುಗಳನ್ನ ನಾವು ಸಂಭ್ರಮಿಸಬೇಕು, ಸೋಲುಗಳನ್ನ ಸ್ವೀಕರಿಸಿ ಅದರ ಆಚೆಗೆ ಬೆಳೆಯುವ ಗಟ್ಟಿ ಮನಸ್ಸು ಮಾಡಬೇಕು. ಆಗ ಮಾತ್ರವೇ ನಾವು ಬದುಕಿನಲ್ಲಿ ನಮ್ಮದೇ ಆದ ವಿಭಿನ್ನ ಛಾಪನ್ನ ಮೂಡಿಸುತ್ತೇವೆ. ಸವಾಲುಗಳನ್ನು ಎದುರಿಸುವ ಹಠವಿದ್ದರೆ, ದೌರ್ಬಲ್ಯಗಳೂ ದಾರಿ ಮಾಡಿಕೊಡುತ್ತವೆ.