ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಪರಮ ಭಕ್ತ ಕನಕದಾಸರ ಹರಿಭಕ್ತಿಸಾರ ಹುಟ್ಟಿದ ಕಥೆ

ರಣರಂಗದಿಂದ ಎದ್ದು ಬಂದ ತಿಮ್ಮಪ್ಪ ನಾಯಕರು ದಂಡನಾಯಕರ ಉಡುಪನ್ನು ಕಳಚಿ, ಕೈಗೆ ತಂಬೂರಿ ಹಿಡಿದು ‘ಕನಕದಾಸ’ರಾದರು. ಈ ಘಟನೆಯ ನಂತರ, ಸಂಸಾರದ ನಶ್ವರತೆಯನ್ನು ಕಂಡು, ಮನಸ್ಸನ್ನು ಭಗವಂತನಿಗೆ ಸಂಪೂರ್ಣವಾಗಿ ಅರ್ಪಿಸುವಾಗ ಅವರ ಅಂತರಾಳದಿಂದ ಮೊದಲು ಹೊರ ಹೊಮ್ಮಿದ ಕಾವ್ಯವೇ ಈ ‘ಹರಿಭಕ್ತಿಸಾರ’.

ಒಂದೊಳ್ಳೆ ಮಾತು

ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಇವರು ವಿಜಯನಗರ ಸಾಮ್ರಾಜ್ಯದ ಬಂಕಾಪುರ ಪ್ರಾಂತ್ಯದ ದಂಡನಾಯಕರಾಗಿದ್ದರು. ವೀರ ಯೋಧರಾಗಿದ್ದ ಇವರಿಗೆ ಸಂಪತ್ತು, ಅಧಿಕಾರ, ಯಶಸ್ಸು ಎಲ್ಲವೂ ಇತ್ತು. ಆದರೆ, ಭಗವಂತ ಅವರನ್ನು ತನ್ನತ್ತ ಸೆಳೆಯಲು ಒಂದು ಮಹತ್ತರ ನಾಟಕವಾಡಿದನು.

ಒಮ್ಮೆ ಭೀಕರ ಯುದ್ಧವೊಂದು ನಡೆಯಿತು. ಆ ಯುದ್ಧದಲ್ಲಿ ತಿಮ್ಮಪ್ಪ ನಾಯಕರ ಸೈನ್ಯ ಸೋಲನ್ನ ನುಭವಿಸಿತು. ಶತ್ರುಗಳ ಆಕ್ರಮಣಕ್ಕೆ ಸಿಲುಕಿ ತಿಮ್ಮಪ್ಪನವರು ತೀವ್ರವಾಗಿ ಗಾಯಗೊಂಡು, ರಣರಂಗ ದಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ಪ್ರಜ್ಞೆ ಕಳೆದುಕೊಂಡರು.

ಸುತ್ತಲೂ ಹೆಣಗಳ ರಾಶಿ, ರಕ್ತದ ಕೋಡಿ. ಯಾರು ಕೂಡ ಅವರ ರಕ್ಷಣೆಗೆ ಬರಲಿಲ್ಲ. ಅರ್ಧ ಪ್ರಜ್ಞಾ ವಸ್ಥೆಯಲ್ಲಿದ್ದ ತಿಮ್ಮಪ್ಪನವರಿಗೆ ತಾನು ನಂಬಿದ್ದ ಅಧಿಕಾರ, ಸೈನ್ಯ, ಐಶ್ವರ್ಯ ಯಾವುದೂ ತನ್ನ ಪ್ರಾಣ ಉಳಿಸಲು ಬರಲಿಲ್ಲವಲ್ಲ ಎಂಬ ತೀವ್ರ ವೈರಾಗ್ಯ ಉಂಟಾಯಿತು. ಆ ತೀವ್ರ ನೋವಿನ ಕ್ಷಣ ದಲ್ಲಿ ಅವರು ತಮ್ಮ ಕುಲದೈವವಾದ ಬಾಡದ ಆದಿಕೇಶವನನ್ನು ನೆನೆದು, ಪ್ರಭು, ಈ ಸಂಸಾರ, ಯುದ್ಧ, ಸಾವು-ನೋವುಗಳಿಂದ ನನಗೆ ಮುಕ್ತಿ ಕೊಡು ಎಂದು ಅಂತರಾಳದಿಂದ ಪ್ರಾರ್ಥಿಸಿದರು.

ಇದನ್ನೂ ಓದಿ: Roopa Gururaj Column: ಹಕ್ಕು ಮರುಸ್ಥಾಪಿಸಿದ ತೀರ್ಪು

ಆಗ ಅವರ ಸನ್ಮುಖದಲ್ಲಿ ಶ್ರೀಹರಿಯು ಪ್ರತ್ಯಕ್ಷನಾಗಿ, ಅವರ ಗಾಯಗಳನ್ನು ಗುಣಪಡಿಸಿ, ತಿಮ್ಮಪ್ಪ, ನೀನು ಕತ್ತಿ ಹಿಡಿದು ಯುದ್ಧ ಮಾಡುವವನಲ್ಲ; ಭಕ್ತಿಯ ಕಡ್ಗ ಹಿಡಿದು ಜಗತ್ತನ್ನು ಗೆಲ್ಲುವವನು. ನಿನ್ನ ಲೌಕಿಕ ಬದುಕು ಮುಗಿಯಿತು, ಇನ್ನು ಹರಿಭಕ್ತಿಯನ್ನು ಪ್ರಚಾರ ಮಾಡು ಎಂದು ಆದೇಶಿಸಿ ದನು.

ರಣರಂಗದಿಂದ ಎದ್ದು ಬಂದ ತಿಮ್ಮಪ್ಪ ನಾಯಕರು ದಂಡನಾಯಕರ ಉಡುಪನ್ನು ಕಳಚಿ, ಕೈಗೆ ತಂಬೂರಿ ಹಿಡಿದು ‘ಕನಕದಾಸ’ರಾದರು. ಈ ಘಟನೆಯ ನಂತರ, ಸಂಸಾರದ ನಶ್ವರತೆಯನ್ನು ಕಂಡು, ಮನಸ್ಸನ್ನು ಭಗವಂತನಿಗೆ ಸಂಪೂರ್ಣವಾಗಿ ಅರ್ಪಿಸುವಾಗ ಅವರ ಅಂತರಾಳದಿಂದ ಮೊದಲು ಹೊರಹೊಮ್ಮಿದ ಕಾವ್ಯವೇ ಈ ‘ಹರಿಭಕ್ತಿಸಾರ’.

ಅಂದರೆ, ಸಾವಿನ ದವಡೆಯಿಂದ ಪಾರಾಗಿ, ಹರಿಯ ಪರಮ ಭಕ್ತನಾಗಿ ಮರುಜನ್ಮ ಪಡೆದಾಗ ಹುಟ್ಟಿದ ಕೃತಿ ಇದು. ಹರಿಭಕ್ತಿಸಾರದ ಮೊದಲ ಪದ್ಯವು ಕಾವ್ಯದ ಮಂಗಲಚರಣೆಯಾಗಿದೆ (ಪ್ರಾರ್ಥನೆ). ಕನಕದಾಸರು ತಮಗೆ ಜ್ಞಾನೋದಯವಾದ ತಕ್ಷಣ, ತನು-ಮನಗಳನ್ನು ಶುದ್ಧಗೊಳಿಸಿ ಕೊಂಡು ಭಗವಂತನನ್ನು ಹೇಗೆ ಪ್ರಾರ್ಥಿಸಿದರು ಎಂಬುದನ್ನು ಈ ಕಥೆಯ ಮೂಲಕ ತಿಳಿಯಬಹುದು.

ಮೊದಲ ಪದ್ಯ

ಶ್ರೀನಿಕೇತನ ನಮಿಸುತಿಹೆ ಬು-

ಧಾನಿಕರ ಚರಣಕ್ಕೆ ನಿರುಪಮ

ಧ್ಯಾನದಲಿ ಸಂತೈಸು ಯೆನ್ನನು ಬಾಡದಾದಿಕೇಶ||

ಮಾನ ರಕ್ಷಕ ಮತ್ಸ್ಯ ಕೂರ್ಮ ವಿ-

ಮಾನಗಾಮಿ ಮುಕುಂದ ಮುರಹರ

ನೂನ ಚರಿತನ ಹರಿಭಕ್ತಿಸಾರವನು ಪೇಳುವೆನು|| ೧ ||

ಪದ್ಯದ ಭಾವಾರ್ಥ:

ಯುದ್ಧಭೂಮಿಯ ಕಹಿ ನೆನಪುಗಳಿಂದ ದೂರ ಬಂದು, ಹರಿಭಕ್ತಿಯ ಅಮೃತ ಸವಿದ ಕನಕದಾಸರು ಬಾಡದ ಆದಿಕೇಶವನ ಮೂರ್ತಿಯ ಮುಂದೆ ಕೈಮುಗಿದು ಕುಳಿತಿದ್ದಾರೆ. ಕಾವ್ಯವನ್ನು ಆರಂಭಿಸುವ ಮುನ್ನ ಅವರ ಮನಸ್ಸಿನಲ್ಲಿ ಮೂಡಿದ ಕೃತಜ್ಞತಾ ಭಾವವೇ ಈ ಪದ್ಯ.

ಕನಕದಾಸರು ಕಥಾರೂಪದಲ್ಲಿ ಹೀಗೆ ಪ್ರಾರ್ಥಿಸುತ್ತಾರೆ: ಲಕ್ಷ್ಮೀದೇವಿಗೆ ಆಶ್ರಯನಾದ (ಶ್ರೀನಿಕೇತನ), ಭಕ್ತರ ಮಾನ ಕಾಯುವ (ಮಾನ ರಕ್ಷಕ), ದುಷ್ಟರನ್ನು ಸಂಹರಿಸಲು ಮತ್ಸ್ಯ-ಕೂರ್ಮ ಮುಂತಾದ ಅವತಾರಗಳನ್ನು ತಾಳಿದ, ಮೋಕ್ಷ ನೀಡುವ ಮುಕುಂದನೇ... ನಾನು ನಿನ್ನ ಕೀರ್ತಿಯನ್ನು ಹಾಡಲು ಹೊರಟಿದ್ದೇನೆ.

ಆದರೆ, ಅದಕ್ಕಿಂತ ಮುಂಚೆ, ಈ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡುವ ಸತ್ಪುರುಷರ, ಜ್ಞಾನಿಗಳ (ಬುಧಾನಿಕರ) ಪಾದಗಳಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಏಕೆಂದರೆ ಗುರು ಹಿರಿಯರ ಆಶೀರ್ವಾದವಿಲ್ಲದೆ ಹರಿ ಸಿಗಲಾರ.

ಎಲೈ ಬಾಡದ ಆದಿಕೇಶವರಾಯನೇ, ನಿನ್ನ ನಿರುಪಮವಾದ (ಅಪ್ರತಿಮವಾದ) ಧ್ಯಾನದಲ್ಲಿ ನನ್ನ ಮನಸ್ಸು ಸದಾ ಮುಳುಗಿರುವಂತೆ ಮಾಡಿ ನನ್ನನ್ನು ಸಲಹು. ಲೋಕ ರಕ್ಷಕನಾದ ನಿನ್ನ ಚರಿತ್ರೆ ಯನ್ನು, ಭಕ್ತಿಯ ರಸಾಯನವಾದ ಈ ‘ಹರಿಭಕ್ತಿಸಾರ’ವನ್ನು ನಾನು ಜಗತ್ತಿಗೆ ಹೇಳುತ್ತಿದ್ದೇನೆ. ನನ್ನ ಅಹಂಕಾರವನ್ನು ಅಳಿಸಿ, ಈ ಕಾವ್ಯವನ್ನು ನೀನೇ ನನ್ನ ಮೂಲಕ ಬರೆಯಿಸು ಪ್ರಭು!

ಕನಕದಾಸರು ತಮ್ಮ ಕಾವ್ಯದ ಮೊದಲ ಹೆಜ್ಜೆಯ ಅಹಂಕಾರವನ್ನು ತೊರೆದು, ಗುರು-ಹಿರಿಯರಿಗೆ ವಂದಿಸಿ, ದೇವರಲ್ಲಿ ಅನನ್ಯ ಭಕ್ತಿಯನ್ನು ಬೇಡುತ್ತಾ, ತಾವು ಬರೆಯುತ್ತಿರುವ ಕೃತಿ ಭಗವಂತನಿಗೆ ಅರ್ಪಿತ ಎಂದು ವಿನಯದಿಂದ ಘೋಷಿಸುತ್ತಾರೆ. ನಮ್ಮೊಳಗಿರುವ ಅಹಂಕಾರವನ್ನು ನಾವು ಪೋಷಿಸಿದರೆ ನಮ್ಮಲ್ಲಿರುವ ಜ್ಞಾನವೆಲ್ಲ ವ್ಯರ್ಥವಾಗುತ್ತದೆ. ನಾವೆಷ್ಟೇ ಬುದ್ಧಿವಂತರಾದರು ವಿನಯವಿಲ್ಲದ ಬದುಕಿಗೆ ಬೆಲೆ ಇಲ್ಲ.

ರೂಪಾ ಗುರುರಾಜ್

View all posts by this author