ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಹಕ್ಕು ಮರುಸ್ಥಾಪಿಸಿದ ತೀರ್ಪು

ಆಸ್ತಿಗಾಗಿ ಹಿರಿಯರನ್ನು ನಿರ್ಲಕ್ಷಿಸುವ ಇಂದಿನ ತಲೆಮಾರಿಗೆ ಈ ತೀರ್ಪು ಒಂದು ಗಂಭೀರ ಎಚ್ಚರಿಕೆಯಾಗಿದೆ. ನಂಬಿಕೆ ದ್ರೋಹ ಎಸಗುವ ಕುಟುಂಬದ ಸದಸ್ಯರ ವಿರುದ್ಧ ಕಾನೂನು ಯಾವ ರೀತಿ ರಕ್ಷಣೆಯಾಗಿ ನಿಲ್ಲುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ. 89ರ ಹರೆಯ ದಲ್ಲೂ ಹೌಸಾಬಾಯಿಯವರು ತೋರಿದ ಕಾನೂನು ಪ್ರಜ್ಞೆ ಮತ್ತು ಧೈರ್ಯ ಸಮಾಜದ ಎಲ್ಲ ಹಿರಿಯರಿಗೂ ಪ್ರೇರಣೆಯಾಗಿದೆ.

Roopa Gururaj Column: ಹಕ್ಕು ಮರುಸ್ಥಾಪಿಸಿದ ತೀರ್ಪು

-

ಒಂದೊಳ್ಳೆ ಮಾತು

ಇತ್ತೀಚೆಗೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಕರ್ಸಾ ಗ್ರಾಮದಲ್ಲಿ ನಡೆದ ಘಟನೆ ಯೊಂದು ಇಂದಿನ ಕೌಟುಂಬಿಕ ವ್ಯವಸ್ಥೆ ಹಾಗೂ ನೈತಿಕ ಮೌಲ್ಯಗಳ ಕುಸಿತಕ್ಕೆ ಕನ್ನಡಿ ಹಿಡಿಯುವಂತಿದೆ. ವೃದ್ಧಾಪ್ಯದಲ್ಲಿ ತಮಗೆ ಆಸರೆಯಾಗುತ್ತಾರೆಂಬ ನಂಬಿಕೆಯಿಂದ ಮೊಮ್ಮಕ್ಕಳಿಗೆ ಆಸ್ತಿ ಹಸ್ತಾಂತರಿಸಿದ್ದ 89 ವರ್ಷದ ಹಿರಿಯ ಜೀವವೊಂದು, ವಂಚನೆಗೊಳ ಗಾದಾಗ ಕಾನೂನಿನ ನೆರವಿನಿಂದಲೇ ತನ್ನ ಹಕ್ಕನ್ನು ಮರಳಿ ಪಡೆದ ಘಟನೆ ಇದು.

ಕರ್ಸಾ ಗ್ರಾಮದ ನಿವಾಸಿ ಹೌಸಾ ಬಾಯಿ ಲಹಾದೆ ಎಂಬ 89 ವರ್ಷದ ವೃದ್ಧೆಗೆ, ವೃದ್ಧಾಪ್ಯ ದಲ್ಲಿ ತಮ್ಮನ್ನು ಪ್ರೀತಿ ಮತ್ತು ಗೌರವದಿಂದ ಪೋಷಿಸುವುದಾಗಿ ಮೊಮ್ಮಗ ಮತ್ತು ಮರಿ ಮೊಮ್ಮಗ ಭರವಸೆ ನೀಡಿದ್ದರು. ಈ ಭರವಸೆಯನ್ನು ಸತ್ಯವೆಂದು ನಂಬಿದ ಹೌಸಾ ಬಾಯಿಯವರು, ತಮಗೆ ಸೇರಿದ ಬರೋಬ್ಬರಿ 3 ಹೆಕ್ಟೇರ್ (ಸುಮಾರು 7.5 ಎಕರೆ) ಫಲವತ್ತಾದ ಕೃಷಿ ಭೂಮಿಯನ್ನು ನೋಂದಾಯಿತ ದಾನ ಪತ್ರದ (Gift Deed) ಮೂಲಕ ಅವರ ಹೆಸರಿಗೆ ವರ್ಗಾಯಿಸಿದ್ದರು.

ಆದರೆ, ಭೂಮಿಯ ಮಾಲೀಕತ್ವ ಹಸ್ತಾಂತರಗೊಳ್ಳುತ್ತಿದ್ದಂತೆಯೇ ಮೊಮ್ಮಕ್ಕಳ ನಡವಳಿಕೆ ಯಲ್ಲಿ ತೀವ್ರ ಬದಲಾವಣೆಯಾಯಿತು. ವೃದ್ಧೆಯನ್ನು ಕನಿಷ್ಠ ಸೌಕರ್ಯ ಹಾಗೂ ಪ್ರೀತಿ ಯಿಂದ ನೋಡಿಕೊಳ್ಳುವ ಬದಲು, ಸಂಪೂರ್ಣವಾಗಿ ನಿರ್ಲಕ್ಷಿಸಿ ಅಸಹಾಯಕ ಸ್ಥಿತಿಗೆ ತಳ್ಳಲಾಯಿತು.

ಇದನ್ನೂ ಓದಿ: ‌Roopa Gururaj Column: ತಾಯಂದಿರ ಆರೋಗ್ಯಕ್ಕಾಗಿ ಮಿಡಿದ ಮಾತೃ ಹೃದಯಿ ರಾಣಿ ನಿಲೂಫರ್

ಈ ಹಂತದಲ್ಲಿ ಧೃತಿಗೆಡದ ಹೌಸಾ ಬಾಯಿಯವರು ಹಿರಿಯ ನಾಗರಿಕರ ನ್ಯಾಯ ಮಂಡಳಿ ಯ (Senior Citizens Tribunal) ಮೊರೆ ಹೋಗಿ, ‘ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ-2007’ ರ ಅಡಿಯಲ್ಲಿ ದೂರು ದಾಖಲಿಸಿದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮಂಡಳಿಯ ಅಧ್ಯಕ್ಷರಾದ ರೋಹಿಣಿ ನರ್ಹೆ-ವಿರೋಲೆ ಅವರು ಅತ್ಯಂತ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದರು. ಆಸ್ತಿ ಯನ್ನು ಹಸ್ತಾಂತರಿಸಿಕೊಳ್ಳುವಾಗ ನೀಡಿದ ಭರವಸೆಯಂತೆ ಹಿರಿಯ ನಾಗರಿಕರನ್ನು ಪೋಷಿಸುವುದು ಕೇವಲ ನೈತಿಕ ಹೊಣೆಗಾರಿಕೆಯಲ್ಲ, ಅದು ಕಾನೂನುಬದ್ಧವಾಗಿ ಕಡ್ಡಾಯವಾದ ಶರತ್ತಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾಯಮಂಡಳಿಯ ಪ್ರಮುಖ ಆದೇಶಗಳು: ವೃದ್ಧೆಯು ಮಾಡಿಕೊಟ್ಟಿದ್ದ ದಾನಪತ್ರ ವನ್ನು ಕಾನೂನುಬಾಹಿರವೆಂದು ಪರಿಗಣಿಸಿ ತಕ್ಷಣದಿಂದಲೇ ರದ್ದುಗೊಳಿಸಲಾಯಿತು. 7.5 ಎಕರೆ ಕೃಷಿ ಭೂಮಿಯ ಸಂಪೂರ್ಣ ಮಾಲೀಕತ್ವದ ಹಕ್ಕನ್ನು ಮತ್ತೆ ವೃದ್ಧೆಯ ಹೆಸರಿಗೇ ಮರುಸ್ಥಾಪಿಸಲು ಕಂದಾಯ ಇಲಾಖೆಗೆ ಆದೇಶಿಸಲಾಯಿತು. ಅಷ್ಟೇ ಅಲ್ಲದೆ, ಸದರಿ ಜಮೀನಿನಿಂದ ಮೊಮ್ಮಕ್ಕಳು ಇದುವರೆಗೆ ಪಡೆದುಕೊಂಡಿದ್ದ ಸರಕಾರಿ ಸಬ್ಸಿಡಿ, ಬೆಳೆ ವಿಮೆ ಹಾಗೂ ಇತರೆ ಆರ್ಥಿಕ ಲಾಭಗಳನ್ನು ಬಡ್ಡಿ ಸಮೇತ ವೃದ್ಧೆಗೆ ಮರಳಿ ಪಾವತಿಸಬೇಕು ಎಂದು ಹಿರಿಯ ನಾಗರಿಕರ ನ್ಯಾಯ ಮಂಡಳಿಯು ಆದೇಶಿಸಿತು.

ಆಸ್ತಿಗಾಗಿ ಹಿರಿಯರನ್ನು ನಿರ್ಲಕ್ಷಿಸುವ ಇಂದಿನ ತಲೆಮಾರಿಗೆ ಈ ತೀರ್ಪು ಒಂದು ಗಂಭೀರ ಎಚ್ಚರಿಕೆಯಾಗಿದೆ. ನಂಬಿಕೆ ದ್ರೋಹ ಎಸಗುವ ಕುಟುಂಬದ ಸದಸ್ಯರ ವಿರುದ್ಧ ಕಾನೂನು ಯಾವ ರೀತಿ ರಕ್ಷಣೆಯಾಗಿ ನಿಲ್ಲುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿ. 89ರ ಹರೆಯದಲ್ಲೂ ಹೌಸಾಬಾಯಿಯವರು ತೋರಿದ ಕಾನೂನು ಪ್ರಜ್ಞೆ ಮತ್ತು ಧೈರ್ಯ ಸಮಾಜದ ಎಲ್ಲ ಹಿರಿಯರಿಗೂ ಪ್ರೇರಣೆಯಾಗಿದೆ.

ಕೆಲವೊಮ್ಮೆ ನಮ್ಮನ್ನು ಇಳಿಗಾಲದಲ್ಲಿ ಕಾಯಬೇಕಾದ ಕುಟುಂಬದವರೇ ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಾರೆ. ಆದರೆ ಧೈರ್ಯಗೆಡದೆ ಆತ್ಮಸ್ಥೈರ್ಯದಿಂದ ನಮ್ಮ ಹಕ್ಕನ್ನು ಮರು ಪ್ರತಿಷ್ಠಾಪಿಸಬೇಕು. ಒಳ್ಳೆಯತನಕ್ಕೆ ತಲೆಬಾಗುವ ಸಂಸ್ಕೃತಿ ನಮ್ಮದಾದರೆ, ಕೆಟ್ಟತನಕ್ಕೆ ಸೆದ್ದು ಹೊಡೆದು ನಿಲ್ಲುವ ಆತ್ಮಸ್ಥೈರ್ಯವನ್ನು ಕೂಡ ನಮ್ಮ ವಿದ್ಯೆ ಸಂಸ್ಕೃತಿ, ವಿಚಾರಗಳು ನಮಗೆ ನೀಡಿವೆ. ಆದ್ದರಿಂದಲೇ ಬದುಕಿರುವವರೆಗೂ ಆತ್ಮವಿಶ್ವಾಸದಿಂದ, ಆತ್ಮ ಗೌರವವನ್ನು ಬಿಟ್ಟು ಕೊಡದೆ ಬದುಕುವ ಹಕ್ಕು ನಮ್ಮೆಲ್ಲರಿಗೂ ಇದೆ.

ಇಂತಹ ಮೌಲ್ಯಗಳನ್ನ ನಾವು ನಮ್ಮ ಮಕ್ಕಳಲ್ಲಿ ಕೂಡ ತುಂಬಬೇಕು. ಮದುವೆಯಾಗಿ ಬೇರೆಯ ಮನೆಗೆ ಹೋಗುವ ಹೆಣ್ಣು ಮಕ್ಕಳಿಗೆ ಎಂತಹದ್ದೇ ಸಂದರ್ಭ ಬಂದರೂ ಕೂಡ ತಮ್ಮ ಆತ್ಮ ಗೌರವವನ್ನು ಉಳಿಸಿಕೊಳ್ಳಲು ಗಟ್ಟಿತನದಿಂದ ನಿರ್ಧಾರ ತೆಗೆದುಕೊಂಡು ಬದುಕುವ ಆತ್ಮಸ್ಥೈರ್ಯ ಇರಬೇಕು.

ಪರಿಸ್ಥಿತಿ ಅವರಿಗೆ ವಿರುದ್ಧವಾಗಿದ್ದರೆ ಅ ಹೊಂದಿಕೊಂಡು ಬದುಕುವುದರಲ್ಲಿ ಅರ್ಥವಿಲ್ಲ. ಅನೇಕರು ಈ ನಿಟ್ಟಿನಲ್ಲಿ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ವಿದ್ಯೆ, ಬುದ್ಧಿ, ಸಂಸ್ಕಾರ ಇರುವ ನಾವು ನಮ್ಮ ಕಾಲ ಮೇಲೆ ನಾವು ನಿಂತುಕೊಂಡು ಬದುಕುವ ಛಲ ನಮ್ಮೆಲ್ಲರಿಗೂ ಇದೆ. ಇದನ್ನು ನಾವು ಎಂದಿಗೂ ಮರೆಯಬಾರದು.