ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ತುಳಸೀದಾಸರ ಹನುಮಾನ್ ಚಾಲೀಸಾದ ಉಗಮದ ಕಥೆ

ಪುರಾಣಗಳ ಪ್ರಕಾರ, ತುಳಸೀದಾಸರು ಚಾಲೀಸಾವನ್ನು ಪೂರ್ಣಗೊಳಿಸಿದಾಗ ಒಂದು ಅದ್ಭುತ ನಡೆಯಿತು. ಹಠಾತ್ತನೆ ಸಾವಿರಾರು ಮಂಗಗಳ ಸೈನ್ಯವು ಅಕ್ಬರನ ಅರಮನೆ ಮತ್ತು ಜೈಲನ್ನು ಮುತ್ತಿಗೆ ಹಾಕಿದವು. ಮಂಗಗಳು ಎಲ್ಲೆಡೆ ನಾಶ ಮಾಡಲು ಶುರುಮಾಡಿದವು, ಸೈನಿಕರಿಗೆ ಅವು ಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ತುಳಸೀದಾಸರ ಭಕ್ತಿಯ ಶಕ್ತಿ ಎಂದು ಅರಿತ ಅಕ್ಬರನು ತಕ್ಷಣ ಜೈಲಿಗೆ ಧಾವಿಸಿ, ಅವರ ಕ್ಷಮೆ ಕೇಳಿ ಅವರನ್ನು ಬಿಡುಗಡೆ ಮಾಡಿದನು.

ಒಂದೊಳ್ಳೆ ಮಾತು

ಗೋಸ್ವಾಮಿ ತುಳಸೀದಾಸರು ಅಯೋಧ್ಯೆ ಮತ್ತು ಕಾಶಿಯಲ್ಲಿ ರಾಮ ನಾಮದ ಮಹಿಮೆ ಯನ್ನು ಸಾರುತ್ತಾ ಜನಪ್ರಿಯರಾಗಿದ್ದರು. ಅವರ ಖ್ಯಾತಿ ಎಷ್ಟಿತ್ತೆಂದರೆ, ಅಂದಿನ ಮೊಘಲ್ ಚಕ್ರವರ್ತಿ ಅಕ್ಬರನ ಕಿವಿಗೂ ಇದು ಮುಟ್ಟಿತು.

ಒಮ್ಮೆ ಅಕ್ಬರನು ತುಳಸೀದಾಸರನ್ನು ತನ್ನ ಆಸ್ಥಾನಕ್ಕೆ ಕರೆಸಿ, "ನಿಮ್ಮ ರಾಮನ ಪವಾಡ ವನ್ನೇನಾದರೂ ತೋರಿಸಿ" ಎಂದು ಕೇಳಿದನು. ಅದಕ್ಕೆ ತುಳಸೀದಾಸರು ವಿನಯದಿಂದ, "ನಾನು ಕೇವಲ ಒಬ್ಬ ಭಕ್ತ, ಯಾವುದೇ ಪವಾಡಗಳನ್ನು ಮಾಡುವ ಶಕ್ತಿ ನನಗಿಲ್ಲ; ರಾಮ ನಾಮವೊಂದೇ ಸತ್ಯ" ಎಂದು ಉತ್ತರಿಸಿದರು.

ಈ ಉತ್ತರದಿಂದ ಅತೃಪ್ತನಾದ ಚಕ್ರವರ್ತಿಯು, ತುಳಸೀದಾಸರನ್ನು ಫತೇಪುರ್ ಸಿಕ್ರಿಯ ಕಾರಾಗೃಹದಲ್ಲಿ ಬಂಧಿಸಲು ಆದೇಶಿಸಿದನು. ಕಬ್ಬಿಣದ ಸರಳುಗಳ ಹಿಂದೆ ಬಂಧಿಯಾದ ತುಳಸೀದಾಸರಿಗೆ ರಾಮನ ದರ್ಶನವಾಗದಿದ್ದಕ್ಕೆ ಬಹಳ ವೇದನೆಯಾಯಿತು. ಆ ಭಾವನಾ ತ್ಮಕ ಕ್ಷಣದಲ್ಲಿ, ಅವರು ಆಂಜನೇಯನನ್ನು ಪ್ರಾರ್ಥಿಸಲು ನಿರ್ಧರಿಸಿದರು.

ಇದನ್ನೂ ಓದಿ: Roopa Gururaj Column: ಜಬ ನಾಮ ಸುನಾವೈ

ಕಾರಾಗೃಹದ ಕತ್ತಲ ಕೋಣೆಯಲ್ಲಿ ಕುಳಿತು, ತುಳಸೀದಾಸರು ಅತ್ಯಂತ ಭಕ್ತಿಯಿಂದ 40 ಚೌಪದಿಗಳನ್ನು ರಚಿಸಿದರು. ಇದನ್ನೇ ನಾವು ಇಂದು 'ಹನುಮಾನ್ ಚಾಲೀಸಾ' ಎಂದು ಕರೆಯುತ್ತೇವೆ. ಅವರು ಆ 40 ದಿನಗಳ ಕಾಲ ನಿರಂತರವಾಗಿ ಹನುಮಂತನನ್ನು ಸ್ತುತಿಸುತ್ತಾ ಹೋದಂತೆ, ಅವರ ಭಕ್ತಿ ಉತ್ತುಂಗಕ್ಕೇರಿತು.

ಪುರಾಣಗಳ ಪ್ರಕಾರ, ತುಳಸೀದಾಸರು ಚಾಲೀಸಾವನ್ನು ಪೂರ್ಣಗೊಳಿಸಿದಾಗ ಒಂದು ಅದ್ಭುತ ನಡೆಯಿತು. ಹಠಾತ್ತನೆ ಸಾವಿರಾರು ಮಂಗಗಳ ಸೈನ್ಯವು ಅಕ್ಬರನ ಅರಮನೆ ಮತ್ತು ಜೈಲನ್ನು ಮುತ್ತಿಗೆ ಹಾಕಿದವು. ಮಂಗಗಳು ಎಲ್ಲೆಡೆ ನಾಶ ಮಾಡಲು ಶುರುಮಾಡಿದವು, ಸೈನಿಕರಿಗೆ ಅವುಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ತುಳಸೀದಾಸರ ಭಕ್ತಿಯ ಶಕ್ತಿ ಎಂದು ಅರಿತ ಅಕ್ಬರನು ತಕ್ಷಣ ಜೈಲಿಗೆ ಧಾವಿಸಿ, ಅವರ ಕ್ಷಮೆ ಕೇಳಿ ಅವರನ್ನು ಬಿಡುಗಡೆ ಮಾಡಿದನು. ಅಷ್ಟೇ ಅಲ್ಲದೆ, ಅಂದಿನಿಂದ ತುಳಸೀದಾಸರ ಗೌರವಾರ್ಥವಾಗಿ ಮಂಗಗಳಿಗೆ ಯಾವುದೇ ತೊಂದರೆ ನೀಡಬಾರದೆಂದು ಆದೇಶಿಸಿದನು ಎನ್ನಲಾಗುತ್ತದೆ.

ತುಳಸೀದಾಸರು ತಮ್ಮ ಸಂಕಷ್ಟದ ಸಮಯದಲ್ಲಿ ಹನುಮಂತನನ್ನು ಸ್ತುತಿಸಿದ ಆ ಪ್ರಮುಖ ಚೌಪದಿಗಳು ಮತ್ತು ಅವುಗಳ ಭಾವಾರ್ಥ ಇಲ್ಲಿದೆ.

ಜೈ ಹನುಮಾನ್ ಜ್ಞಾನ ಗುಣ ಸಾಗರ |

ಜೈ ಕಪೀಶ ತಿಹು ಲೋಕ ಉಜಾಗರ || 1

ಬುದ್ಧಿಹೀನ ತನು ಜಾನಿಕೇ, ಸುಮಿರೌ ಪವನಕುಮಾರ |

ಬಲ ಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲೇಸ ವಿಕಾರ ||

"ಎಲೈ ಪವನಪುತ್ರನೇ, ನಾನು ಜ್ಞಾನವಿಲ್ಲದವನೆಂದು ತಿಳಿದು ನಿನ್ನನ್ನು ಸ್ಮರಿಸುತ್ತಿದ್ದೇನೆ. ನನಗೆ ಶಕ್ತಿ, ಬುದ್ಧಿ ಮತ್ತು ವಿದ್ಯೆಯನ್ನು ನೀಡಿ ಅನುಗ್ರಹಿಸು. ನನ್ನ ಮನಸ್ಸಿನ ಕ್ಲೇಶಗಳನ್ನು ಮತ್ತು ವಿಕಾರಗಳನ್ನ ದೂರ ಮಾಡು."

ದುರ್ಗಮ ಕಾಜ ಜಗತ ಕೇ ಜೇತೇ |

ಸುಗಮ ಅನುಗ್ರಹ ತುಮ್ಹರೇ ತೇತೇ ||

"ಈ ಜಗತ್ತಿನಲ್ಲಿ ಸಾಧಿಸಲು ಅಸಾಧ್ಯವೆನಿಸುವ ಎಂತಹ ಕಠಿಣ ಕೆಲಸಗಳಿದ್ದರೂ, ನಿನ್ನ ಕೃಪೆ ಅಥವಾ ಅನುಗ್ರಹವಿದ್ದರೆ ಅವು ಅತ್ಯಂತ ಸುಲಭವಾಗಿ ಮತ್ತು ಸರಳವಾಗಿ ಪೂರ್ಣಗೊಳ್ಳುತ್ತವೆ."

ಸಬ ಸುಖ ಲಹೈ ತುಮ್ಹಾರೀ ಶರಣಾ |

ತುಮ ರಕ್ಷಕ ಕಾಹೂ ಕೋ ಡರ ನಾ ||

"ನಿನ್ನ ಶರಣು ಬಂದವರಿಗೆ ಈ ಲೋಕದ ಸಕಲ ಸುಖಗಳೂ ಲಭಿಸುತ್ತವೆ. ನೀನೇ ರಕ್ಷಕನಾಗಿ ನಿಂತ ಮೇಲೆ, ಯಾರಿಗೂ ಅಥವಾ ಯಾವುದಕ್ಕೂ ಹೆದರುವ ಅವಶ್ಯಕತೆಯೇ ಇರುವುದಿಲ್ಲ."

ಸಂಕಟ ಕಟೈ ಮಿಟೈ ಸಬ ಪೀರಾ |

ಜೋ ಸುಮಿರೈ ಹನುಮತ ಬಲಬೀರಾ ||

ಭಾವಾರ್ಥ:"ಮಹಾ ಪರಾಕ್ರಮಿಯಾದ ಹನುಮಂತನನ್ನು ಯಾರು ಭಕ್ತಿಯಿಂದ ಸ್ಮರಿಸು ತ್ತಾರೋ, ಅವರ ಎಲ್ಲಾ ಸಂಕಟಗಳು ದೂರವಾಗುತ್ತವೆ ಮತ್ತು ಅವರ ಸಕಲ ನೋವುಗಳು ಅಳಿಸಿಹೋಗುತ್ತವೆ."

ಭೂತ ಪಿಸಾಚ ನಿಕಟ ನಹಿ ಆವೈ | ಮಹಾವೀರ ಜಬ ನಾಮ ಸುನಾವೈ"

ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುವುದರಿಂದ ಯಾವುದೇ ರೀತಿಯ ಭೂತ ಪ್ರೇತಗಳಾಗಲಿ ಅಥವಾ ಮನಸ್ಸಿನಲ್ಲಿರುವ ಅಜ್ಞಾತ ಭಯ, ನಕಾರಾತ್ಮಕ ಆಲೋಚನೆಗಳು ಮತ್ತು ದುಸ್ವಪ್ನಗಳು ದೂರವಾಗುತ್ತವೆ.

ಜೋ ಯಹ ಪಢೈ ಹನುಮಾನ ಚಾಲೀಸಾ |

ಹೋಯ ಸಿದ್ಧಿ ಸಾಖೀ ಗೌರೀಸಾ ||

ಯಾರು ಈ ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುತ್ತಾರೋ, ಅವರಿಗೆ ಖಂಡಿತ ವಾಗಿಯೂ ಸಿದ್ಧಿ ದೊರೆಯುತ್ತದೆ. ಇದಕ್ಕೆ ಸಾಕ್ಷಾತ್ ಕಾಶೀ ವಿಶ್ವನಾಥನೇ ಸಾಕ್ಷಿ ಎಂದು ಕೊನೆಯಲ್ಲಿ ಆಶೀರ್ವದಿಸುತ್ತಾರೆ ತುಳಸಿದಾಸರು.

ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುವುದರಿಂದ ಮನಸ್ಸಿನಲ್ಲಿರುವ ಭಯ, ಆತಂಕ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗಿ, ಹೊಸ ಚೈತನ್ಯ ಹಾಗೂ ಆತ್ಮವಿಶ್ವಾಸ ಮೂಡುತ್ತದೆ. ಹನುಮಂತನು ಬುದ್ಧಿ, ಶಕ್ತಿ ಮತ್ತು ಧೈರ್ಯದ ಸಂಕೇತ ವಾಗಿರುವುದರಿಂದ, ಚಾಲೀಸಾದ ಪಠಣವು ಜೀವನದ ಕಷ್ಟಕಾಲದಲ್ಲಿ ಮನೋಬಲವನ್ನು ಹೆಚ್ಚಿಸಿ ಅಡೆತಡೆಗಳನ್ನು ನಿವಾರಿಸಲು ಸಹಕರಿಸುತ್ತದೆ. ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೋಷದಂತಹ ಗ್ರಹ ದೋಷಗಳ ಪ್ರಭಾವವನ್ನು ತಗ್ಗಿಸಲು ಮತ್ತು ದೈನಂದಿನ ಜೀವನದಲ್ಲಿ ಏಕಾಗ್ರತೆ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳಲು ಇದು ಅತ್ಯಂತ ಪ್ರಭಾವಶಾಲಿ ಸ್ತೋತ್ರ. ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುವ ಈ ಪಠಣವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಜೈ ಹನುಮಾನ್..

ರೂಪಾ ಗುರುರಾಜ್

View all posts by this author