ಸಂಪಾದಕರ ಸದ್ಯಶೋಧನೆ
ಇತ್ತೀಚೆಗೆ ನಾನು, ಅಮೆರಿಕದ ಹೆಸರಾಂತ ಪತ್ರಕರ್ತೆ ಮತ್ತು ಅಂಕಣಗಾರ್ತಿ ಇ.ಜೀನ್ ಕ್ಯಾರೋಲ್ ಅವರ ಅತ್ಯಂತ ಚರ್ಚಿತ ಮತ್ತು ಪ್ರಭಾವಶಾಲಿ ಆತ್ಮಕಥೆ ‘ನಾಟ್ ಮೈ ಟೈಪ್: ಒನ್ ವುಮೆನ್ ವರ್ಸಸ್ ಎ ಪ್ರೆಸಿಡೆಂಟ್’ ಕೃತಿಯನ್ನು ಓದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಕ್ಯಾರೋಲ್ ನಡೆಸಿದ ಕಾನೂನು ಹೋರಾಟ, ನ್ಯಾಯಾಲಯದ ಒಳ-ಹೊರಗಿನ ನಾಟಕೀಯ ವಿದ್ಯಮಾನಗಳು ಮತ್ತು ಒಬ್ಬ ಮಹಿಳೆ ಅಪಾರ ಅಧಿಕಾರ ಹಾಗೂ ಪ್ರಭಾವದ ವಿರುದ್ಧ ನಿಂತು ಗೆದ್ದ ರೋಚಕ ಕಥನವೇ ಈ ಪುಸ್ತಕದ ವಸ್ತು ವಿಷಯ.
ಪುಸ್ತಕದ ಶೀರ್ಷಿಕೆಯಾದ ’Not My Type’ ಎಂಬ ಪದಪುಂಜ ಹುಟ್ಟಿದ್ದೇ ಡೊನಾಲ್ಡ್ ಟ್ರಂಪ್ ಹೇಳಿಕೆಯಿಂದ. 1990ರ ದಶಕದ ಮಧ್ಯಭಾಗದಲ್ಲಿ ಮ್ಯಾನ್‌ಹ್ಯಾಟನ್‌ನ ಪ್ರತಿಷ್ಠಿತ ಬರ್ಗ್‌ಡಾಫ್ ಗುಡ್‌ಮನ್ ಡಿಪಾರ್ಟ್‌ಮೆಂಟ್ ಮಳಿಗೆಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಜೀನ್ ಕ್ಯಾರೋಲ್ 2019ರಲ್ಲಿ ಬಹಿರಂಗಪಡಿಸಿದ್ದರು. ಈ ಆರೋಪ ವನ್ನು ತಳ್ಳಿ ಹಾಕುವ ಭರದಲ್ಲಿ ಟ್ರಂಪ್, ನಾನು ಆಕೆಯನ್ನು ನೋಡಿಯೇ ಇಲ್ಲ, ಆಕೆ ಸಂಪೂರ್ಣ ಸುಳ್ಳುಗಾರ್ತಿ, ಅಷ್ಟಕ್ಕೂ ಆಕೆ ‘ನನ್ನ ಟೈಪ್ ಅಲ್ಲ’ ಎಂದು ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ್ದರು.
ಇದನ್ನೂ ಓದಿ: Vishweshwar Bhat Column: ಸಂಸತ್ತಿನ ಅಭೂತ ಭಿತ್ತಿಪತ್ರಗಳಿಗೆ ಸುಧಾಮೂರ್ತಿಯವರ ಅಕ್ಷರ ರೂಪ
ತನ್ನ ವ್ಯಕ್ತಿತ್ವ ಮತ್ತು ಗೌರವವನ್ನು ಕಡೆಗಣಿಸಲು ಬಳಸಿದ ಆ ಹಗುರ ಮಾತುಗಳನ್ನೇ ಕ್ಯಾರೋಲ್ ತಮ್ಮ ಕೃತಿಗೆ ಶೀರ್ಷಿಕೆಯನ್ನಾಗಿಸಿಕೊಂಡು, ಅದೇ ಹೇಳಿಕೆಯನ್ನು ವ್ಯಂಗ್ಯದ ಹಾಗೂ ಪ್ರತಿರೋಧದ ಅಸ್ತ್ರವಾಗಿ ಮರುರೂಪಿಸಿದ್ದಾರೆ. ಕಾನೂನು ಪುಸ್ತಕಗಳು ಅಥವಾ ಗಂಭೀರ ನ್ಯಾಯಾಲಯ ವಿಚಾರಣೆಗಳ ವರದಿಗಳು ಸಾಮಾನ್ಯವಾಗಿ ನೀರಸವಾಗಿರುತ್ತವೆ. ಆದರೆ ಜೀನ್ ಕ್ಯಾರೋಲ್ ಅವರ ಹಿನ್ನೆಲೆ, ಪತ್ರಿಕೋದ್ಯಮ ಮತ್ತು ‘ಸ್ಯಾಟರ್‌ಡೇ ನೈಟ್ ಲೈವ್’ನಂಥ ಹಾಸ್ಯ ಕಾರ್ಯಕ್ರಮಗಳಲ್ಲಿ ಹಾಸು ಹೊಕ್ಕಿದ್ದರಿಂದ, ಅವರು ಇಡೀ ವಿಚಾರಣಾ ಪ್ರಕ್ರಿಯೆಯನ್ನು ಕಣ್ಣಿಗೆ ಕಟ್ಟುವಂತೆ, ಚುರುಕಾದ ಹಾಗೂ ವ್ಯಂಗ್ಯಭರಿತ ಗದ್ಯದಲ್ಲಿ ಬರೆದಿದ್ದಾರೆ.
ಟ್ರಂಪ್ ಪರ ವಕೀಲರಾಗಿದ್ದ ಅಲೀನಾ ಹಬ್ಬಾ ಕೇಳಿದ ವಿಚಿತ್ರ ಪ್ರಶ್ನೆಗಳು, ಕ್ಯಾರೋಲ್ ಅವರ ಹಿಂದಿನ ವೈಯಕ್ತಿಕ ಜೀವನದ ವಿವರಗಳನ್ನು ನ್ಯಾಯಾಲಯದಲ್ಲಿ ಎಳೆದಾಡಿದ ಪರಿ, ನ್ಯಾಯಾ ಧೀಶ ಲೂಯಿಸ್ ಕಪ್ಲಾನ್ ಅವರ ದಿಟ್ಟ ಪ್ರತಿಕ್ರಿಯೆಗಳು ಎಲ್ಲವನ್ನೂ ಓದುಗ ನ್ಯಾಯಮಂಡಳಿಯ ಸಾಲಿನಲ್ಲಿ ಕೂತು ನೋಡುವಂತೆ ವಿವರಿಸಲಾಗಿದೆ.
ವಿಚಾರಣೆಯ ಒಂದು ಪ್ರಮುಖ ಹಂತದಲ್ಲಿ ಟ್ರಂಪ್‌ಗೆ ಕ್ಯಾರೋಲ್ ಅವರ ಹಳೆಯ ಫೋಟೋ ತೋರಿಸಿದಾಗ, ಅವರು ಕ್ಯಾರೋಲ್‌ರನ್ನು ತಮ್ಮ ಎರಡನೇ ಪತ್ನಿ ಮಾರ್ಲಾ ಮೇಪಲ್ಸ್ ಎಂದು ತಪ್ಪಾಗಿ ಗುರುತಿಸುತ್ತಾರೆ. ಆಕೆ ನನ್ನ ಟೈಪ್ ಅಲ್ಲ ಎಂದು ಹೇಳುತ್ತಿದ್ದ ಮನುಷ್ಯ, ಸ್ವತಃ ತನ್ನ ಮಾಜಿ ಪತ್ನಿ ಮತ್ತು ಕ್ಯಾರೋಲ್ ನಡುವಿನ ವ್ಯತ್ಯಾಸ ತಿಳಿಯದೆ ಮುಗ್ಗರಿಸಿದ ಕ್ಷಣವನ್ನು ಕ್ಯಾರೋಲ್ ಕಟುವಾದ ಹಾಸ್ಯದ ಮೂಲಕ ಅನಾವರಣಗೊಳಿಸುತ್ತಾರೆ.
ಅಧಿಕಾರದ ಅಹಂಕಾರವು ಸತ್ಯದ ಮುಂದೆ ಹೇಗೆ ಪೇಲವವಾಗುತ್ತದೆ ಎಂಬುದಕ್ಕೆ ಈ ಸನ್ನಿವೇಶವೇ ನಿದರ್ಶನ. ಪುಸ್ತಕದಲ್ಲಿ ಕೇವಲ ವ್ಯಂಗ್ಯ ಮತ್ತು ತಮಾಷೆ ಮಾತ್ರವಿಲ್ಲ, ಅದರ ಕೆಳಗೆ ಅಡಗಿರುವ ನೋವು ಕರುಳುಹಿಂಡುವಂಥದ್ದು. ಪ್ರಭಾವಿ ವ್ಯಕ್ತಿಯ ವಿರುದ್ಧ ದನಿ ಎತ್ತಿದಾಗ ಎದುರಾಗುವ ಕೊಲೆ ಬೆದರಿಕೆಗಳು, ಆನ್‌ಲೈನ್ ಟ್ರೋಲ್‌ಗಳು, ‘ಚಿನ್ನದಾಸೆಗೆ ಕೇಸ್ ಹಾಕಿದ್ದಾಳೆ’ ಎಂಬ ಕೆಟ್ಟ ಮಾತುಗಳು ಹೇಗೆ ಒಬ್ಬ ಮಹಿಳೆಯ ನೆಮ್ಮದಿಯನ್ನು ಕಸಿದುಕೊಳ್ಳುತ್ತವೆ ಎಂಬುದನ್ನು ಪ್ರಾಮಾ ಣಿಕವಾಗಿ ಬಿಚ್ಚಿಡುತ್ತಾರೆ.
ದಶಕಗಳ ಕಾಲ ಈ ರಹಸ್ಯವನ್ನು ಮುಚ್ಚಿಟ್ಟು, ಕೊನೆಗೆ 70-80ರ ವಯಸ್ಸಿನಲ್ಲಿ ಅದನ್ನು ಹೊರ ಹಾಕುವಾಗ ಅನುಭವಿಸಿದ ಮಾನಸಿಕ ತುಮುಲಗಳು ಇಲ್ಲಿ ದಾಖಲಾಗಿವೆ. ಟ್ರಂಪ್ ವಿರುದ್ಧದ ಸಿವಿಲ್ ಮೊಕದ್ದಮೆ ಯಲ್ಲಿ ಜ್ಯೂರಿ ಕ್ಯಾರೋಲ್ ಪರವಾಗಿ ನಿಂತು, ಟ್ರಂಪ್ ಲೈಂಗಿಕ ದೌರ್ಜನ್ಯ ಮತ್ತು ಮಾನನಷ್ಟ ಎಸಗಿದ್ದಾರೆಂದು ತೀರ್ಪಿತ್ತು.
ಕೋಟ್ಯಂತರ ಡಾಲರ್ ಪರಿಹಾರ ದೊರೆತಾಗ ಆ ಗೆಲುವು ಕೇವಲ ವ್ಯಕ್ತಿಗೆ ಸೀಮಿತವಾಗದೇ, ವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಹೆಣ್ಣಿನ ನೈತಿಕ ಜಯವಾಗಿ ಮಾರ್ಪಟ್ಟಿತು. ಈ ಹಣವನ್ನು ತಾನು ಟ್ರಂಪ್ ದ್ವೇಷಿಸುವ ಹಕ್ಕುಗಳ ಪರವಾದ (ಮಹಿಳಾ ಹಕ್ಕುಗಳು, ಪರಿಸರ ರಕ್ಷಣೆ) ಹೋರಾಟಕ್ಕೆ ಬಳಸುವುದಾಗಿ ಕ್ಯಾರೋಲ್ ಘೋಷಿಸುವುದು ಅವರ ಸ್ವಾಭಿಮಾನಕ್ಕೆ ಸಾಕ್ಷಿ.
ಸಾಮಾನ್ಯವಾಗಿ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರನ್ನು ‘ಕರುಣೆ ಬಯಸುವ ಬಲಿಪಶು’ (victim) ರೂಪದಲ್ಲೇ ಸಮಾಜ ನೋಡಲು ಬಯಸುತ್ತದೆ. ಆದರೆ ಕ್ಯಾರೋಲ್ ತಮ್ಮನ್ನು ಸಂತ್ರಸ್ತೆ ಯಂತೆ ಕಿರಿದಾಗಿಸಿ ಕೊಳ್ಳದೇ, ‘ಸರ್ವೈವರ್’ (survivor) ಆಗಿ ಹಾಗೂ ದಿಟ್ಟ ಸವಾಲುಗಾರಳಾಗಿ ನಿಲ್ಲುತ್ತಾರೆ. ಕಣ್ಣೀರಿನ ಬದಲು ಮುಗುಳುನಗೆಯನ್ನೇ ರಕ್ಷಣಾ ಕವಚವನ್ನಾಗಿಸಿಕೊಂಡು, ನ್ಯಾಯ ಕ್ಕಾಗಿ ಸೆಣಸಾಡಿ ಗೆದ್ದ ಈ ಕಥನ ಓದುಗನಲ್ಲಿ ಅದಮ್ಯ ಚೈತನ್ಯ ಮತ್ತು ನ್ಯಾಯದ ಮೇಲಿನ ನಂಬಿಕೆ ಯನ್ನು ಮೂಡಿಸುತ್ತದೆ