Vishweshwar Bhat Column: ಸಂಸತ್ತಿನ ಅಭೂತ ಭಿತ್ತಿಪತ್ರಗಳಿಗೆ ಸುಧಾಮೂರ್ತಿಯವರ ಅಕ್ಷರ ರೂಪ
ದೇಶದ ಹಣೆಬರಹ ತಿದ್ದುವ, ಕಾಯ್ದೆ ರೂಪಿಸುವ, ವಾಗ್ವಾದಗಳ ಹೊಳೆ ಹರಿಸುವ ಇಷ್ಟು ಜನರಲ್ಲಿ ಯಾರಿಗೂ ಆ ಕಾರಿಡಾರಿನ ಮೌನವನ್ನು ಆಲಿಸಬೇಕು, ಅಲ್ಲಿ ತೂಗು ಹಾಕಿದ ಭಿತ್ತಿಚಿತ್ರಗಳ ಮಹತ್ವವನ್ನು ಹೊರ ಜಗತ್ತಿಗೆ ಹೇಳಬೇಕೆಂದು ಎನಿಸಲಿಲ್ಲ. ಗೋಡೆಯ ಮೇಲೆ ಬಿಡಿಸಿಟ್ಟ ಗೆರೆಗಳಲ್ಲಿ ಭಾರತದ ನರನಾಡಿಗಳು ಮಿಡಿಯುತ್ತಿರುವುದನ್ನು ಸ್ಪರ್ಶಿಸಬೇಕು ಎಂದೂ ಅನ್ನಿಸಲಿಲ್ಲ. ಅದು ಅವರ ತಪ್ಪಲ್ಲದಿರಬಹುದು.
-
ಇದೇ ಅಂತರಂಗ ಸುದ್ದಿ
ಅಧಿಕಾರದ ಆವರಣದಲ್ಲೂ ತಾಯ್ತನದ ಮುಗ್ಧತೆಯನ್ನು ಕಳೆದುಕೊಳ್ಳದ ಒಬ್ಬ ಲೇಖಕಿಗೆ ಮಾತ್ರ ಇಂಥದ್ದೊಂದು ಬೆರಗು ದಕ್ಕಲು ಸಾಧ್ಯ. ಸುಧಾ ಮೂರ್ತಿಯವರ ಈ ಮಹತ್ವದ ಕೃತಿಯು ಭಾರತದ ಸಂಸತ್ ಭವನದ ಸಂವಿಧಾನ ಸದನದಲ್ಲಿರುವ ಭಿತ್ತಿಚಿತ್ರಗಳ ಕಾಲಾತೀತ ಸೌಂದರ್ಯ ಮತ್ತು ಗಾಢ ಸಾಂಕೇತಿಕತೆ ಯನ್ನು ಮನೋಜ್ಞವಾಗಿ ಅನಾವರಣಗೊಳಿಸುತ್ತದೆ. ಇತಿಹಾಸದ ಈ ಅದ್ಭುತ ಪರಂಪರೆ ಯನ್ನು ಇಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ಸರಳವಾಗಿ ತಲುಪಿಸುವ ಸಾರ್ಥಕ ಪ್ರಯತ್ನ ಈ ಹೊತ್ತಿಗೆಯಲ್ಲಿದೆ.
ಖ್ಯಾತ ಸಾಹಿತಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಇತ್ತೀಚೆಗೆ ತಾವು ಬರೆದ Tides of Time: Bharat's History Through Murals in Parliament ಎಂಬ ಕಾಫಿ ಟೇಬಲ್ ಪುಸ್ತಕವನ್ನು ಕಳಿಸಿಕೊಟ್ಟಿದ್ದರು. ಲೋಕಸಭಾ ಸಚಿವಾಲಯ ಪ್ರಕಟಿಸಿರುವ ಈ ಕೃತಿಯನ್ನು ಉಪರಾಷ್ಟ್ರಪತಿ ಯವರು ಬಿಡುಗಡೆ ಮಾಡಿದ್ದು ಗಮನಾರ್ಹ. ನಮ್ಮ ಪ್ರಜಾಪ್ರಭುತ್ವದ ದೇಗುಲದಲ್ಲಿ 543 ಲೋಕಸಭಾ ಮತ್ತು 245 ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟೂ 788 ಮಂದಿ ಜನಪ್ರತಿನಿಧಿಗಳಿದ್ದಾರೆ.
ದೇಶದ ಹಣೆಬರಹ ತಿದ್ದುವ, ಕಾಯ್ದೆ ರೂಪಿಸುವ, ವಾಗ್ವಾದಗಳ ಹೊಳೆ ಹರಿಸುವ ಇಷ್ಟು ಜನರಲ್ಲಿ ಯಾರಿಗೂ ಆ ಕಾರಿಡಾರಿನ ಮೌನವನ್ನು ಆಲಿಸಬೇಕು, ಅಲ್ಲಿ ತೂಗು ಹಾಕಿದ ಭಿತ್ತಿಚಿತ್ರಗಳ ಮಹತ್ವವನ್ನು ಹೊರ ಜಗತ್ತಿಗೆ ಹೇಳಬೇಕೆಂದು ಎನಿಸಲಿಲ್ಲ. ಗೋಡೆಯ ಮೇಲೆ ಬಿಡಿಸಿಟ್ಟ ಗೆರೆಗಳಲ್ಲಿ ಭಾರತದ ನರನಾಡಿಗಳು ಮಿಡಿಯುತ್ತಿರುವುದನ್ನು ಸ್ಪರ್ಶಿಸಬೇಕು ಎಂದೂ ಅನ್ನಿಸಲಿಲ್ಲ. ಅದು ಅವರ ತಪ್ಪಲ್ಲದಿರಬಹುದು.
ಇದನ್ನೂ ಓದಿ: Vishweshwar Bhat Column: 7700 -7500 ಕೋಡ್ ಏನು ?
ಒಮ್ಮೊಮ್ಮೆ ಅಧಿಕಾರದ ರಸ್ತೆಯಲ್ಲಿ ನಡೆಯುವವರಿಗೆ ನೆಲದ ಹೂವುಗಳಾಗಲೀ, ಗೋಡೆಯ ಚಿತ್ತಾರ ಗಳಾಗಲೀ ದಕ್ಕುವುದು ತೀರಾ ವಿರಳ. ಆದರೆ ರಾಜ್ಯಸಭೆಯ ಮೆಟ್ಟಿಲೇರಿದ ಸುಧಾಮೂರ್ತಿ ಅವರಿಗೆ ಅಲ್ಲಿ ಮೊದಲು ಕಂಡದ್ದು ಅಧಿಕಾರದ ಪ್ರದರ್ಶನವಲ್ಲ, ಬದಲಿಗೆ ಆ ಗೋಡೆಗಳಲ್ಲಿ ಹೆಪ್ಪುಗಟ್ಟಿದ ನೂರಾರು ತಲೆಮಾರುಗಳ ಸಂಸ್ಕೃತಿಯ ಉಸಿರಾಟ.
ಅಧಿಕಾರದ ಆವರಣದಲ್ಲೂ ತಾಯ್ತನದ ಮುಗ್ಧತೆಯನ್ನು ಕಳೆದುಕೊಳ್ಳದ ಒಬ್ಬ ಲೇಖಕಿಗೆ ಮಾತ್ರ ಇಂಥದ್ದೊಂದು ಬೆರಗು ದಕ್ಕಲು ಸಾಧ್ಯ. ಸುಧಾ ಮೂರ್ತಿಯವರ ಈ ಮಹತ್ವದ ಕೃತಿಯು ಭಾರತದ ಸಂಸತ್ ಭವನದ ಸಂವಿಧಾನ ಸದನದಲ್ಲಿರುವ ಭಿತ್ತಿಚಿತ್ರಗಳ ಕಾಲಾತೀತ ಸೌಂದರ್ಯ ಮತ್ತು ಗಾಢ ಸಾಂಕೇತಿಕತೆಯನ್ನು ಅತ್ಯಂತ ಮನೋಜ್ಞವಾಗಿ ಅನಾವರಣಗೊಳಿಸುತ್ತದೆ.
ಸಂಸತ್ತಿನ ಗೋಡೆಗಳ ಮೇಲಿರುವ ಈ ಚಿತ್ರಗಳು ಕೇವಲ ಸೌಂದರ್ಯವರ್ಧಕ ಕಲಾಕೃತಿಗಳಾಗಿ ಉಳಿಯದೇ, ಈ ಕೃತಿಯಲ್ಲಿ ಭಾರತದ ಸಹಸ್ರಾರು ವರ್ಷಗಳ ಭವ್ಯ ನಾಗರಿಕತೆಯ ಮಹಾಪ್ರಯಾಣ ವನ್ನು ಕಣ್ಣಿಗೆ ಕಟ್ಟುವ ದೃಶ್ಯರೂಪಗಳಾಗಿವೆ. ಇತಿಹಾಸದ ಈ ಅದ್ಭುತ ಪರಂಪರೆಯನ್ನು ಇಂದಿನ ಮತ್ತು ಮುಂದಿನ ಪೀಳಿಗೆಗಳಿಗೆ ಅತ್ಯಂತ ಸರಳವಾಗಿ ತಲುಪಿಸುವ ಸಾರ್ಥಕ ಪ್ರಯತ್ನ ಈ ಹೊತ್ತಿಗೆ ಯಲ್ಲಿದೆ.
ಸಂಸತ್ತಿನ ಗೋಡೆಚಿತ್ರಗಳು ಎಂದರೆ ಅವೇನೋ ಹಳಸಲು ಇತಿಹಾಸದ ಸಿದ್ಧ ಪ್ರದರ್ಶನವಲ್ಲ. ಅವು ಭಾರತವೆಂಬ ನಿರಂತರ ಪ್ರವಾಹದ ಜೀವಂತ ರೇಖಾಚಿತ್ರಗಳು. ಸಿಂಧೂ ಬಯಲಿನ ನಾಗರಿಕತೆಯ ಮಣ್ಣಿನ ಮಡಕೆಗಳಿಂದ ಹಿಡಿದು, ಮೌರ್ಯ, ಗುಪ್ತ, ಚೋಳ ಸಾಮ್ರಾಜ್ಯಗಳ ವೈಭವದವರೆಗೆ, ಕಡಲಾಚೆಗೆ ನಾವೆ ಕಳಿಸಿದ ಸಾಹಸದಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನವರೆಗೆ ಎಲ್ಲವೂ ಅಲ್ಲಿ ಮೈದಾಳಿವೆ.
ಇಲ್ಲಿ ಚರಿತ್ರೆಯನ್ನು ಮನುಷ್ಯ ಸಂಬಂಧಗಳ ಎಳೆಯಾಗಿ ಹೆಣೆದಿರುವ ಸುಧಾಮೂರ್ತಿ, ಅಶೋಕನ ಕಳಿಂಗ ಯುದ್ಧದ ಆಕ್ರಂದನ ಕೇವಲ ಸಾಮ್ರಾಜ್ಯ ವಿಸ್ತರಣೆಯಲ್ಲ, ಅದು ಮನಪರಿವರ್ತನೆಯ ಕಣ್ಣೀರು; ಅಕ್ಬರನ ದರ್ಬಾರು ಕೇವಲ ಆಡಳಿತವಲ್ಲ, ಅದು ವಿಭಿನ್ನ ನಂಬಿಕೆಗಳ ಸಮ್ಮಿಲನ; ಭಗವದ್ಗೀತೆಯ ಬೋಧನೆ ಕೇವಲ ಯುದ್ಧಭೂಮಿಯ ತತ್ತ್ವವಲ್ಲ, ಅದು ಬದುಕಿನ ಸಂದಿಗ್ಧಕ್ಕೆ ದಕ್ಕಿದ ಬೆಳಕು ಎಂಬ ಅರ್ಥವನ್ನು ನೀಡುವ ಮೂಲಕ ಗೋಡೆಗಳ ಮೇಲಿದ್ದ ಚಿತ್ರಗಳ ಮೂಕ ಭಾಷೆಗೆ ತಮ್ಮ ಮೃದುವಾದ, ನೇರವಾದ, ಕತೆ ಹೇಳುವ ಧಾಟಿಯ ಮೂಲಕ ಜೀವ ತುಂಬಿದ್ದಾರೆ.
‘ಭಾರತವು ಜಗತ್ತಿಗೆ ಪ್ರಜಾಪ್ರಭುತ್ವದ ತಾಯಿ’ ಎಂಬುದನ್ನು ಈ ಕೃತಿಯು ಪ್ರತಿಪಾದಿಸುತ್ತದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಕೇವಲ ಪಾಶ್ಚಾತ್ಯ ಪರಿಕಲ್ಪನೆಯಲ್ಲ. ಬದಲಾಗಿ ಈ ನೆಲದಲ್ಲಿ ಅವು ಸನಾತನ ಕಾಲದಿಂದಲೂ ಸಮಾಜದ ಆಳದಲ್ಲಿ ಬೇರೂರಿರುವ ಜೀವನವಿಧಾನ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಉತ್ತರದ ವೈಶಾಲಿಯ ಗಣತಂತ್ರದಿಂದ ಹಿಡಿದು ದಕ್ಷಿಣದ ಚೋಳರ ಕಾಲದ ಕುಡವೋಲೈ ಗ್ರಾಮ ಪಂಚಾಯತ್ ಚುನಾವಣಾ ಪದ್ಧತಿಯವರೆಗೆ, ಭಾರತೀಯ ಸಮಾಜವು ಎಲ್ಲರನ್ನೂ ಒಳಗೊಳ್ಳುವ ಆಡಳಿತ ಪದ್ಧತಿಗೆ ಹೆಸರುವಾಸಿಯಾಗಿತ್ತು ಎಂಬುದು ಈ ಕೃತಿಯ ಪ್ರಮುಖ ಒಳನೋಟ. ನಮ್ಮ ನಾಗರಿಕತೆಯು ಸಂವಾದ, ಪರಸ್ಪರ ಸಹಮತ ಮತ್ತು ವಿಭಿನ್ನ ಅಭಿಪ್ರಾಯಗಳಿಗೆ ಗೌರವ ನೀಡುವು ದನ್ನು ಅನಾದಿ ಕಾಲದಿಂದಲೂ ಕಲಿಸಿದೆ.
ಭಿನ್ನಾಭಿಪ್ರಾಯಗಳು ಮತ್ತು ತರ್ಕಬದ್ಧ ಚರ್ಚೆಗಳು ಒಡಕು ಉಂಟುಮಾಡುವ ಬದಲಾಗಿ, ಅಂತಿಮ ವಾಗಿ ದೇಶದ ಒಳಿತಿಗಾಗಿ ರಚನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಬೇಕು ಎಂಬ ಸಾರ್ವಕಾಲಿಕ ಮೌಲ್ಯವನ್ನು ಪುಸ್ತಕವು ಪ್ರಖರಗೊಳಿಸುತ್ತದೆ. ಸಂಸದೀಯ ಪ್ರಕ್ರಿಯೆಗಳ ತಿರುಳಾದ ಚರ್ಚೆ, ಸಮಾಲೋಚನೆ ಮತ್ತು ಭಿನ್ನಮತ ಗೌರವಿಸುವ ತತ್ವಗಳಿಗೆ ಈ ಐತಿಹಾಸಿಕ ಹಿನ್ನೆಲೆಯು ದೃಢ ಬೆಂಬಲ ನೀಡುತ್ತದೆ.
ಈ ಕೃತಿಯಲ್ಲಿ ಸಂಸತ್ತಿನ ವಾಸ್ತುಶಿಲ್ಪದ ಗಾಂಭೀರ್ಯದ ಜತೆಗೇ ಅಲ್ಲಿನ ಚಿತ್ರಕಲೆಯ ಸೌಂದರ್ಯ ಮೀಮಾಂಸೆ ಅತ್ಯಂತ ಆಪ್ತವಾಗಿ ದಾಖಲಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶದ ಅತ್ಯುತ್ತಮ ಕಲಾವಿದರು ಸೇರಿ ವರ್ಷಗಟ್ಟಲೆ ತಪಸ್ಸಿನಂತೆ ರಚಿಸಿದ ಈ ಕಲಾಕೃತಿಗಳು, ದೇಶದ ಐಕ್ಯತೆಯ ಸಂಕೇತಗಳು. ಸುಧಾಮೂರ್ತಿಯವರು ಆ ಕಲೆಯ ಹಿಂದಿರುವ ಕಲಾವಿದರ ಸಂವೇದನೆ ಯನ್ನು ಗೌರವಿಸುತ್ತಾರೆ.
ಕುಂಚದ ಪ್ರತಿಯೊಂದು ಎಳೆಯಲ್ಲೂ ಹರಿದ ಕಲ್ಪನೆ, ಬಳಸಿದ ನೈಸರ್ಗಿಕ ಬಣ್ಣಗಳ ಶ್ರೀಮಂತಿಕೆ ಯನ್ನು ಅವರು ಗ್ರಹಿಸಿದ ರೀತಿ ಬೆರಗು ಹುಟ್ಟಿಸುತ್ತದೆ. ಕಣ್ಣಿಗೆ ಕಂಡದ್ದನ್ನು ಮನಸ್ಸಿಗೆ ದಾಟಿಸುವ, ಮನಸ್ಸಿನಲ್ಲಿ ಮಾಗಿದ್ದನ್ನು ಕಾಗದದ ಮೇಲೆ ಇಳಿಸುವ ಅವರ ಸಹಜ ಕಲೆಗಾರಿಕೆ ಈ ಪುಸ್ತಕದ ಆತ್ಮ. ಸಂಸತ್ತೆಂದರೆ ಬರೀ ಪಕ್ಷ ಪ್ರತಿಪಕ್ಷಗಳ ಜಗಳ, ಗದ್ದಲ, ಕಲಾಪಗಳ ಮುಂದೂಡಿಕೆ ಎಂಬ ನಕಾರಾತ್ಮಕ ಚಿತ್ರಣವೇ ಜನಮಾನಸದಲ್ಲಿ ಗಟ್ಟಿಯಾಗಿರುವ ಈ ಕಾಲದಲ್ಲಿ, ಆ ಕಟ್ಟಡ ಸಾಂಸ್ಕೃತಿಕ ಗರ್ಭಗುಡಿ ಎಂಬುದನ್ನು ಈ ಪುಸ್ತಕ ನಮಗೆ ನೆನಪಿಸಿಕೊಡುತ್ತದೆ.
ಜನಪ್ರತಿನಿಧಿಗಳು ಕುಳಿತು ನಿರ್ಧಾರ ಕೈಗೊಳ್ಳುವ ಆ ಸಭಾಂಗಣದ ಸುತ್ತಲೂ ಇಡೀ ಭಾರತದ ಚೇತನವೇ ಕಾವಲು ನಿಂತಿದೆ ಎಂಬ ಎಚ್ಚರವನ್ನು ಅದು ಮೂಡಿಸುತ್ತದೆ. 788 ಮಂದಿ ಸಂಸದರ ನಡುವೆ, ಸುಧಾಮೂರ್ತಿ ಅವರಿಗೆ ಇಂಥದ್ದೊಂದು ಹೊಳಹು ಮೂಡಿದ್ದು ಅವರೊಳಗಿನ ಸದಾ ಜಾಗೃತವಾಗಿರುವ ಓದುಗ, ಲೇಖಕ ಮತ್ತು ಸಂಸ್ಕೃತಿ ಪ್ರೇಮಿಯ ಕಾರಣದಿಂದಲೇ. ಒಬ್ಬ ನಿಜವಾದ ಲೇಖಕಿ ಎಲ್ಲೇ ಹೋದರೂ ಅಧಿಕಾರಕ್ಕಿಂತ ಮಿಗಿಲಾಗಿ ಮನುಷ್ಯನ ಕಥೆಗಳನ್ನು ಹುಡುಕುತ್ತಾಳೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.
ಪುಸ್ತಕದಲ್ಲಿ ಬರುವ ಪ್ರತಿಯೊಂದು ಗೋಡೆಚಿತ್ರದ ವಿವರಣೆಯಲ್ಲೂ ಒಂದು ಬಗೆಯ ಧ್ಯಾನಸ್ಥ ಸ್ಥಿತಿಯಿದೆ. ಶಿಲಾಯುಗದ ಭೀಮ್‌ಬೆಟ್ಕಾದ ಗೀಟುಗಳಿಂದ ಶುರುವಾಗಿ, ನಳಂದ ವಿಶ್ವವಿದ್ಯಾಲಯದ ಜ್ಞಾನದಾಹ, ಛತ್ರಪತಿ ಶಿವಾಜಿಯ ಸ್ವಾಭಿಮಾನ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಕೆಚ್ಚು, ಗಾಂಧೀಜಿಯ ದಂಡಿ ಯಾತ್ರೆಯ ಶಾಂತ ಹೆಜ್ಜೆಗಳವರೆಗೆ ಕಾಲದ ತೆರೆಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಇವೆಲ್ಲವೂ ಕೇವಲ ಇತಿಹಾಸದ ಘಟನೆಗಳಲ್ಲ, ಕಾಲದ ನದಿಯಲ್ಲಿ ಎದ್ದುಬಿದ್ದ ಅಲೆಗಳು. ಆ ಅಲೆಗಳನ್ನೆಲ್ಲ ಒಂದೆಡೆ ಹಿಡಿದಿಟ್ಟು, ಅದಕ್ಕೊಂದು ಸುಂದರ ಚೌಕಟ್ಟು ಹಾಕಿ ನಮ್ಮ ಕೈಗಿಟ್ಟಿದ್ದಾರೆ ಸುಧಾಮೂರ್ತಿ.
ಪುಸ್ತಕದ ಶೀರ್ಷಿಕೆಯಲ್ಲಿರುವ ’ Tides of Time’ ಎಂಬ ಪದಕ್ಕೆ ಅವರು ಬರವಣಿಗೆಯ ಮೂಲಕ ನ್ಯಾಯ ಒದಗಿಸಿದ್ದಾರೆ. ಇದು ಕೇವಲ ಸಂಸತ್ತಿನ ಗೋಡೆಗಳ ಪರಿಚಯವಲ್ಲ, ನಮ್ಮೊಳಗಿನ ಕಣ್ತೆರೆಸುವ ಒಂದು ಸಾಂಸ್ಕೃತಿಕ ಯಾತ್ರೆ. ನಾವೆಷ್ಟೋ ಬಾರಿ ನಮ್ಮದೇ ಮನೆಯ ಗೋಡೆಯ ಮೇಲಿರುವ ಫೋಟೋವನ್ನು, ಅಂಗಳದ ಮೂಲೆಯ ಗಿಡವನ್ನು ಗಮನಿಸುವುದೇ ಇಲ್ಲ.
ಕಣ್ಣಿದ್ದೂ ಕುರುಡರಾಗುವ ನಮ್ಮ ಅಭ್ಯಾಸಕ್ಕೆ ಈ ಕೃತಿ ಒಂದು ಮೃದುವಾದ ತಪರಾಕಿ. ನಮ್ಮ ಕಣ್ಣೆದುರೇ ಇರುವ ಸೌಂದರ್ಯವನ್ನು, ಇತಿಹಾಸವನ್ನು ಪ್ರೀತಿಸುವುದು ಹೇಗೆ ಎಂಬುದನ್ನು ಇದು ಹೇಳುತ್ತದೆ. ಅಧಿಕಾರದ ದಾರಿಯಲ್ಲಿ ಸಾಗುವಾಗಲೂ ಕಣ್ಣುಗಳಲ್ಲಿ ಬೆರಗು, ಎದೆಯಲ್ಲಿ ವಿನಯ ಇಟ್ಟುಕೊಂಡರೆ ಏನೆಲ್ಲ ಕಾಣಲು ಸಾಧ್ಯ ಎಂಬುದಕ್ಕೆ ಈ ಪುಸ್ತಕವೇ ಕನ್ನಡಿ.
ಮಹಾಕವಿ ಸುಬ್ರಹ್ಮಣ್ಯ ಭಾರತಿಯವರು ವರ್ಣಿಸಿದ ಭಾರತದ ಅಗಾಧ ಜ್ಞಾನಸಂಪತ್ತು, ಘನತೆ, ಔದಾರ್ಯ ಮತ್ತು ಸಾಂಸ್ಕೃತಿಕ ಆಳವನ್ನು ಈ ಕೃತಿಯು ಮೆಲುಕು ಹಾಕುತ್ತದೆ. ಪ್ರತಿಯೊಬ್ಬರ ಧ್ವನಿಯನ್ನು ಸಮಾನವಾಗಿ ಆಲಿಸುವ ಮತ್ತು ಗೌರವಿಸುವ ಭಾರತೀಯ ಸಂಸ್ಕೃತಿಯ ವಿಶಾಲ ಹೃದಯವೇ ನಮ್ಮ ಪ್ರಜಾಪ್ರಭುತ್ವದ ಭದ್ರ ಬುನಾದಿ. ವೈವಿಧ್ಯದಲ್ಲಿ ಏಕತೆಯನ್ನು ಕಾಣುವ ಭಾರತೀಯ ಮನಸ್ಥಿತಿಯು ಪ್ರತಿಯೊಂದು ಜೀವಿಯ ಹಿತಾಸಕ್ತಿಯನ್ನು ಕಾಪಾಡುವ ಉದಾತ್ತ ಧರ್ಮವನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಲೇಖಕಿ ಸುಂದರವಾಗಿ ನಿರೂಪಿಸಿದ್ದಾರೆ.
ಆಧುನಿಕ ಭಾರತದ ಆಡಳಿತ ಕೇಂದ್ರದಲ್ಲಿ ಸಾಂಪ್ರದಾಯಿಕ ಸಂಕೇತಗಳ ಮರುಸ್ಥಾಪನೆಯ ಮಹತ್ವವನ್ನೂ ಈ ಪುಸ್ತಕವು ಗುರುತಿಸುತ್ತದೆ. ಚೋಳ ಸಾಮ್ರಾಜ್ಯದ ಧರ್ಮದಂಡವಾದ ಪವಿತ್ರ ‘ಸೆಂಗೋಲ’ನಂಥ ಐತಿಹಾಸಿಕ ಚಿಹ್ನೆಗಳು ಕೇವಲ ಪ್ರಾಚೀನ ಸ್ಮರಣಿಕೆಗಳಲ್ಲ. ಅವು ಪ್ರಾಚೀನ ನಾಗರಿಕತೆಯ ನೈತಿಕ ಹೊಣೆಗಾರಿಕೆ ಮತ್ತು ಧರ್ಮಪಾಲನೆಯ ಆದರ್ಶಗಳನ್ನು ಸಮಕಾಲೀನ ಪ್ರಜಾಪ್ರಭುತ್ವಕ್ಕೆ ಬೆಸೆಯುವ ಶಕ್ತಿಯುತ ಕೊಂಡಿಗಳಾಗಿವೆ.
ಇಂಥ ಸಂಕೇತಗಳು ಆಧುನಿಕ ಆಡಳಿತಗಾರರಿಗೆ ಕರ್ತವ್ಯನಿಷ್ಠೆ ಮತ್ತು ನ್ಯಾಯದ ಹಾದಿಯನ್ನು ಸದಾ ನೆನಪಿಸುತ್ತವೆ. ಪುಸ್ತಕದ ಕೇಂದ್ರಬಿಂದು ಸಂವಿಧಾನ ಸದನದಲ್ಲಿರುವ ಬರೋಬ್ಬರಿ 124 ಭಿತ್ತಿಚಿತ್ರ -ಲಕಗಳ ಸವಿಸ್ತಾರ ವಿವರಣೆ. ಪ್ರತಿಯೊಂದು ಫಲಕವೂ ಭಾರತೀಯ ಚರಿತ್ರೆಯ ಒಂದೊಂದು ಮಹತ್ವದ ಘಟ್ಟವನ್ನು, ತಿರುವನ್ನು ಜೀವಂತವಾಗಿ ಬಿಂಬಿಸುತ್ತದೆ.
ಸಿಂಧೂ ಬಯಲಿನ ನಾಗರಿಕತೆಯ ನಗರಾಭಿವೃದ್ಧಿ, ಸಾಮಾಜಿಕ ಶಿಸ್ತು ಮತ್ತು ಅಲ್ಲಿಂದ ವಿಕಸನ ಗೊಂಡ ಜೀವನಕ್ರಮವನ್ನು ಚಿತ್ರಿಸುವ ಮೂಲಕ ಕೃತಿಯು ನಮ್ಮ ನಾಗರಿಕತೆಯ ಭವ್ಯ ಆರಂಭವನ್ನು ಅನಾವರಣಗೊಳಿಸುತ್ತದೆ. ಭಾರತದ ಬೌದ್ಧಿಕ ಸಂಪತ್ತಿಗೆ ಅಡಿಪಾಯ ಹಾಕಿದ ಶ್ರೇಷ್ಠ ಚಿಂತಕರ ಕೊಡುಗೆಯನ್ನು ಪುಸ್ತಕದಲ್ಲಿ ವಿಶೇಷವಾಗಿ ಸಾದರಪಡಿಸಲಾಗಿದೆ.
ಆದಿಕಾವ್ಯ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಯವರ ಸಾರ್ವಕಾಲಿಕ ನೀತಿಮೌಲ್ಯಗಳು ಹಾಗೂ ‘ಅರ್ಥಶಾಸ್ತ್ರ’ದ ಜನಕ ಚಾಣಕ್ಯನ ರಾಜನೀತಿ, ಕೌಟಿಲ್ಯನ ಆಡಳಿತ ಕೌಶಲಗಳು ಭಾರತದ ಆಡಳಿತ ವೈಖರಿಗೆ ನೀಡಿದ ಮಾರ್ಗದರ್ಶನವನ್ನು ಈ ಚಿತ್ರಗಳು ಹಾಗೂ ವಿವರಣೆಗಳು ಸ್ಮರಿಸುತ್ತವೆ.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾವೀರ ಮತ್ತು ಗೌತಮ ಬುದ್ಧರ ಬೋಧನೆಗಳು ಈ ಕೃತಿಯಲ್ಲಿ ಆಳವಾಗಿ ಬಿಂಬಿತವಾಗಿವೆ. ಅಹಿಂಸೆ, ಶಾಂತಿ, ಕರುಣೆ, ಸಹಬಾಳ್ವೆ ಮತ್ತು ಎಲ್ಲ ಜೀವಿಗಳ ಸಮಾನತೆಯ ತತ್ವಗಳು ಭಾರತೀಯ ರಾಜಧರ್ಮದ ಅವಿಭಾಜ್ಯ ಅಂಗಗಳಾಗಿ ಹೇಗೆ ಬೆಳೆದು ಬಂದವು ಎಂಬುದನ್ನು ಇಲ್ಲಿನ ನಿರೂಪಣೆಗಳು ತೆರೆದಿಡುತ್ತವೆ. ಬುದ್ಧ-ಮಹಾವೀರರ ವಿಚಾರಧಾರೆಗಳು ನಮ್ಮ ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ನೀಡಿದ ಮಾನವೀಯ ಆಯಾಮ ಅಪಾರ. ರಾಜಧರ್ಮ ಮತ್ತು ಪರಾಕ್ರಮದ ಸಂಕೇತಗಳಾಗಿ ಅಶೋಕ ಚಕ್ರವರ್ತಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಗಳನ್ನು ಪುಸ್ತಕವು ಹೆಮ್ಮೆಯಿಂದ ದಾಖಲಿಸಿದೆ.
ಯುದ್ಧಕ್ಕಿಂತ ಧರ್ಮವಿಜಯವೇ ಶ್ರೇಷ್ಠವೆಂದು ಸಾರಿದ ಅಶೋಕನ ಧರ್ಮನೀತಿ ಹಾಗೂ ಸರ್ವಧರ್ಮ ಸಮನ್ವಯದೊಂದಿಗೆ ಸ್ವಧರ್ಮ-ಸ್ವರಾಜ್ಯ ಕಟ್ಟಿದ ಛತ್ರಪತಿ ಶಿವಾಜಿಯ ಜನಪರ ಆಡಳಿತ ಶೈಲಿಗಳು ನಮ್ಮ ದೇಶದ ನಾಯಕತ್ವ ಪರಂಪರೆಗೆ ಸ್ಪೂರ್ತಿದಾಯಕ ಮಾದರಿಗಳಾಗಿ ನಿಲ್ಲುತ್ತವೆ. ದೇಶದ ಕಲೆ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆಗೆ ಸಾಕ್ಷಿಯಾಗಿರುವ ಕೊನಾರ್ಕ್‌ನ ವಿಶ್ವವಿಖ್ಯಾತ ಸೂರ್ಯ ದೇವಾಲಯದ ಶಿಲ್ಪಕಲೆಯ ವೈಭವ, ಭಾಷೆ-ಪ್ರಾಂತ್ಯಗಳ ಗಡಿ ಮೀರಿ ಜನಸಾಮಾನ್ಯರಲ್ಲಿ ಭಕ್ತಿ, ಪ್ರೀತಿ ಮತ್ತು ಸಮಾನತೆಯ ಭಾವವನ್ನು ಬಿತ್ತಿ ಸಾಮಾಜಿಕ ಕ್ರಾಂತಿಗೆ ಕಾರಣವಾದ ಭಕ್ತಿ ಚಳವಳಿಯ ಸಂತರು, ಶರಣರು ಮತ್ತು ಕವಿಗಳ ಸಾಂಸ್ಕೃತಿಕ ಮಹಾಪೂರ ವನ್ನು ಪುಸ್ತಕವು ಗೌರವದಿಂದ ನೆನೆಯುತ್ತದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೋಮಾಂಚಕ ಅಧ್ಯಾಯಗಳು ಈ ಪುಸ್ತಕದಲ್ಲಿ ವಿಶೇಷ ಗೌರವ ಪಡೆದುಕೊಂಡಿವೆ. ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ ತತ್ವ ಮತ್ತು ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದ ಅಹಿಂಸಾತ್ಮಕ ಹೋರಾಟ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಪ್ರತಿಮ ದೇಶಪ್ರೇಮ, ತ್ಯಾಗ ಮತ್ತು ಕೆಚ್ಚೆದೆಯ ನಾಯಕತ್ವವನ್ನು ಚಿತ್ರಿಸುವ ಫಲಕಗಳು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಲಕ್ಷಾಂತರ ವೀರರ ತ್ಯಾಗ-ಬಲಿದಾನಗಳನ್ನು ಕಣ್ಣೆದುರು ತರುತ್ತವೆ.
ಸುಧಾಮೂರ್ತಿ ಅವರ ಶೈಲಿಯ ದೊಡ್ಡ ಶಕ್ತಿಯೇ ಅವರ ಆಡಂಬರವಿಲ್ಲದ ಸರಳ ಮತ್ತು ನೇರ ನಿರೂಪಣೆ. ಸಂಸತ್ತಿನ ಗೋಡೆಗಳ ಮೇಲಿರುವ ಗಂಭೀರ ಕಲಾಕೃತಿಗಳನ್ನು ಅವರು ಕ್ಲಿಷ್ಟಕರ ಇತಿಹಾಸ ಗ್ರಂಥದಂತೆ ವಿವರಿಸದೇ, ಕಲಾವಿಮರ್ಶಕಿಯ ಕ್ಲಿಷ್ಟ ಭಾಷೆಯಲ್ಲಿ ತೂರಿಸದೇ ಸುಂದರ ಕಥನ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಭಾರತದ ರಾಜಕೀಯ ಮತ್ತು ಸಾಮಾಜಿಕ ವಿಕಾಸದ ಹಾದಿಯನ್ನು ಅತ್ಯಂತ ಸಹಜವಾಗಿ ಮತ್ತು ಭಾವನಾತ್ಮಕವಾಗಿ ವಿವರಿಸುವ ಅವರ ಧಾಟಿ ಓದುಗರನ್ನು ನೇರವಾಗಿ ಆ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಸುಧಾಮೂರ್ತಿ ಅವರ ಈ ಕೃತಿಯು ಇತಿಹಾಸ, ಕಲೆ ಮತ್ತು ಸಾಹಿತ್ಯದ ಸುಂದರ ತ್ರಿವೇಣಿ ಸಂಗಮ ಹಾಗೂ ಭಾರತದ ಪ್ರಾಚೀನತೆ ಮತ್ತು ಆಧುನಿಕತೆಯ ನಡುವಿನ ಸಾಂಸ್ಕೃತಿಕ ಸೇತುವೆ. ಸಂಸತ್ತಿನ ಕಲಾಕೃತಿಗಳ ಹಿಂದಿನ ಆತ್ಮವನ್ನು ಗುರುತಿಸಿ, ಅದನ್ನು ಪ್ರೀತಿಯಿಂದ, ಶ್ರದ್ಧೆಯಿಂದ ಲೋಕಕ್ಕೆ ಅರ್ಪಿಸಿರುವ ಅವರ ಕಾರ್ಯ ಅನನ್ಯ.
ಕಾಲದ ಅಲೆಗಳಲ್ಲಿ (Tides of Time) ಭಾರತವು ಕಂಡ ಏಳು-ಬೀಳುಗಳು, ಸಂಸ್ಕೃತಿಯ ಸ್ಥಿರತೆ ಮತ್ತು ಪ್ರಜಾಪ್ರಭುತ್ವದ ಗಟ್ಟಿತನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವ ಈ ಕೃತಿ ಭಾರತೀಯ ಸಾಹಿತ್ಯ ಲೋಕದಲ್ಲಿ ಸದಾ ಪ್ರಸ್ತುತವಾಗಿ ಉಳಿಯುವಂಥದ್ದು. ಸಂಸತ್ತಿನ ಒಳಗೆ ಪ್ರವೇಶಿಸಲು ಸಾಧ್ಯವಾಗದ ಕೋಟ್ಯಂತರ ಸಾಮಾನ್ಯ ಭಾರತೀಯರಿಗೆ ಸಂಸತ್ತಿನ ಒಳಗಿನ ಈ ಅಮೂಲ್ಯ ಕಲಾ ಸಂಪತ್ತನ್ನು ತಲುಪಿಸುವ ಮೂಲಕ ಸುಧಾಮೂರ್ತಿಯವರು ದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಮಾಡಿದ್ದಾರೆ.
ಇದು ಪ್ರತಿಯೊಬ್ಬ ಭಾರತೀಯನಲ್ಲೂ ತನ್ನ ನಾಡಿನ ಪರಂಪರೆಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುತ್ತದೆ. ಈ ಕೃತಿಯು ಭಾರತೀಯ ಸಂವಿಧಾನದ ಗರ್ಭಗುಡಿಯಲ್ಲಿ ಕೆತ್ತಲಾದ ಸಾಂಸ್ಕೃತಿಕ ಪರಂಪರೆಯನ್ನು ಅಕ್ಷರರೂಪಕ್ಕೆ ಇಳಿಸಿದ ಶ್ರೇಷ್ಠ ದಾಖಲೆ. ಪ್ರಾಚೀನ ನಾಗರಿಕತೆಯಿಂದ ತೊಡಗಿ ಸ್ವಾತಂತ್ರ್ಯದ ಉಷಃ ಕಾಲದವರೆಗಿನ ಮಹಾಯಾನವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಈ ಪುಸ್ತಕವು, ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳು, ಕಲೆ ಮತ್ತು ಸಾಂಸ್ಕೃತಿಕ ವೈಭವವನ್ನು ತಿಳಿದುಕೊಳ್ಳಲು ಬಯಸುವ ಪ್ರತಿಯೊಬ್ಬ ಓದುಗನಿಗೂ ಒಂದು ಅಮೂಲ್ಯ ಕೈಪಿಡಿಯಾಗಿದೆ. ಈ ಕೃತಿ ಕನ್ನಡದಲ್ಲೂ ದಕ್ಕುವಂತಾಗಬೇಕು.