ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಬ್ಯಾಂಕ್‌ ಸೇವೆಯಿಂದ ನಿವೃತ್ತಿಯ ಬಳಿಕ ಅಕ್ಷರಕೃಷಿಯ ಪ್ರವೃತ್ತಿ

ತಮ್ಮ ತಮ್ಮ ಪುಸ್ತಕಗಳಿಗೆ ಇವರಿಂದ ಡಿಟಿಪಿ/ಪುಟವಿನ್ಯಾಸ ಮಾಡಿಸಿಕೊಂಡವರು ಇವರ ಆ ಕೌಶಲ ವನ್ನೂ ನೆನೆದಾರು. ಪರಂತು ಉತ್ತರಕನ್ನಡ ಜಿಲ್ಲೆಯ ಸೋಂದಾ ನಿವಾಸಿಗಳು ಮಾತ್ರ- ಮಿಥಿಲೆಯ ಪ್ರಜೆಗಳು ಶ್ರೀರಾಮಚಂದ್ರನನ್ನು ನಮ್ಮ ಸೀತಮ್ಮನ ಗಂಡ ಎಂದು ಗುರುತಿಸಿದಂತೆ- “ಇವರು ನಮ್ಮ ನಿಮ್ಮಿಯ (ನಿರ್ಮಲಳ) ಗಂಡ" ಎಂದೇ ಗುರುತಿಸಿಯಾರು! ಏಕೆಂದರೆ ಇದೆಲ್ಲವೂ ಅನಂತ ತಾಮ್ಹನಕರರ ಅಸ್ಮಿತೆಯೂ ಹೌದು, ಅನನ್ಯತೆಯೂ ಹೌದು.

ತಿಳಿರುತೋರಣ

ಅನಂತ ತಾಮ್ಹನಕರ್ ಅಂದರೆ ಯಾರು? ಅಂತ ಕೇಳಿದರೆ ಬೇರೆಬೇರೆಯವರು ಬೇರೆ ಬೇರೆ ರೀತಿ ಉತ್ತರಿಸಿಯಾರು. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮಸ್ಥರು “ಈತ ನಮ್ಮೂರಿನ ಅನಂತು, ಬಹುಮುಖ ಪ್ರತಿಭೆ!" ಎಂದಾರು. ಉಜಿರೆ ಧ.ಮಂ ಕಾಲೇಜಿನ ಹಳೇ ವಿದ್ಯಾರ್ಥಿಗಳು “ನಮ್ಮ ಕಾಲೇಜಿನಲ್ಲಿ ಬಿಎಸ್ಸಿ ಓದಿದವನು, ವಿದ್ಯಾರ್ಥಿಸಂಘದ ನಾಯಕ ಆಗಿದ್ದವನು" ಅಂತೆಲ್ಲ ನೆನಪಿಸಿಕೊಂಡಾರು.

ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸಹೋದ್ಯೋಗಿಗಳಾಗಿದ್ದವರು ಅಥವಾ ಬ್ಯಾಂಕ್‌ನ ವಿವಿಧ ಶಾಖೆಗಳ ಕೆಲ ಗ್ರಾಹಕರೂ ಇವರ ಸೇವಾವೈಶಿಷ್ಟ್ಯಗಳನ್ನು ಸ್ಮರಿಸಿ ಕೊಂಡಾಡಿಯಾರು. ನೋಟು-ನಾಣ್ಯಗಳ ಅಮೋಘ ಸಂಗ್ರಹವನ್ನು ವೀಕ್ಷಿಸಿದವರು ಅದೇ ಇವರ ಪೂರ್ಣಕಾಲಿಕ ವೃತ್ತಿ ಎಂದು ಹೇಳಿಯಾರು. ಅಥವಾ ಸಾವಿರಾರು ಖಾಲಿ ಬೆಂಕಿಪೊಟ್ಟಣಗಳ ಸಂಗ್ರಹವನ್ನಷ್ಟೇ ನೋಡಿದವರು ಅದರಿಂದಲೇ ಇವರನ್ನು ಗುರುತಿಸಿಯಾರು. ಮೈಸಾಬೂನುಗಳ ವಿಧವಿಧ ಕವರ್‌ಗಳ ಸಂಗ್ರಹವನ್ನು ನೋಡಿ ದವರು ಅದರ ಬಗ್ಗೆ ಹೇಳಿಯಾರು.

ಅಂಚೆ ಚೀಟಿಗಳ ಸಂಗ್ರಹಕ್ಕೆ ಮಾರುಹೋದವರು ಆ ಬಗ್ಗೆ ಬೆರಗು ವ್ಯಕ್ತಪಡಿಸಿಯಾರು. ಒಂದೇ ಒಂದು ಹನಿ ಮದ್ಯ ಮುಟ್ಟದೆಯೇ (ಕುಡಿಯದೆಯೇ) ಮದ್ಯದ ಖಾಲಿ ಸೀಸೆಗಳನ್ನೂ ಇವರು ಸಂಗ್ರಹಿಸುತ್ತಾರೆಂದು ಗೊತ್ತಿದ್ದವರು ಅದನ್ನು ಪ್ರಸ್ತಾಪಿಸಿ ಯಾರು. ವಾಟ್ಸಾಪ್‌ನಲ್ಲಿ ಹವ್ಯಾಸಿ ಮುಕ್ತಕ ರಚನೆಕಾರರ ಬಳಗದವರು ಇವರ ಮಾರ್ಗದರ್ಶನ ಪ್ರೋತ್ಸಾಹಗಳನ್ನು ಸ್ಮರಿಸಿಯಾರು.

ಇದನ್ನೂ ಓದಿ: Srivathsa Joshi Column: ಕಬ್ಬಿಗರೆಂದರೆ ಕಾವ್ಯ ಬರೆವವರೇ ? ಕಬ್ಬು ಬೆಳೆವವರೇ ?

ತಮ್ಮ ತಮ್ಮ ಪುಸ್ತಕಗಳಿಗೆ ಇವರಿಂದ ಡಿಟಿಪಿ/ಪುಟವಿನ್ಯಾಸ ಮಾಡಿಸಿಕೊಂಡವರು ಇವರ ಆ ಕೌಶಲ ವನ್ನೂ ನೆನೆದಾರು. ಪರಂತು ಉತ್ತರಕನ್ನಡ ಜಿಲ್ಲೆಯ ಸೋಂದಾ ನಿವಾಸಿಗಳು ಮಾತ್ರ- ಮಿಥಿಲೆಯ ಪ್ರಜೆಗಳು ಶ್ರೀರಾಮಚಂದ್ರನನ್ನು ನಮ್ಮ ಸೀತಮ್ಮನ ಗಂಡ ಎಂದು ಗುರುತಿಸಿದಂತೆ- “ಇವರು ನಮ್ಮ ನಿಮ್ಮಿಯ (ನಿರ್ಮಲಳ) ಗಂಡ" ಎಂದೇ ಗುರುತಿಸಿಯಾರು! ಏಕೆಂದರೆ ಇದೆಲ್ಲವೂ ಅನಂತ ತಾಮ್ಹನಕರರ ಅಸ್ಮಿತೆಯೂ ಹೌದು, ಅನನ್ಯತೆಯೂ ಹೌದು.

ಇನ್ನೂ ಒಂದೆರಡು ಅಂಶಗಳನ್ನು ಸೇರಿಸುವುದಾದರೆ- ಇವರು ಇದುವರೆಗೆ ಒಂಬತ್ತು ಮೌಲ್ಯಯುತ ಕನ್ನಡ ಪುಸ್ತಕಗಳನ್ನು ಬರೆದು ಪ್ರಕಟಿಸಿದವರು; ಅದರಲ್ಲಿ ನಾಲ್ಕು ಪುಸ್ತಕಗಳು ಕಳೆದ ಭಾನುವಾರ ಕನ್ನಡ ರಾಜ್ಯೋತ್ಸವ ದಿನದಂದು ಮೈಸೂರಿನಲ್ಲಿ ಬಿಡುಗಡೆಯಾಗಿ ಸಾರಸ್ವತ ಲೋಕಕ್ಕೆ ಅರ್ಪಣೆಯಾದುವು; ಮತ್ತು ಯೋಗಾಯೋಗವೆಂಬಂತೆ ಆವತ್ತಿನ ಸುಂದರ ಸಮಾರಂಭದಲ್ಲಿ ನಾನೂ ಭಾಗವಹಿಸುವ ಅವಕಾಶ ಒದಗಿಬಂತು!

ಅಂದ ಮೇಲೆ ಅನಂತ ತಾಮ್ಹನಕರರ ಬಗ್ಗೆ, ಅವರ ಪುಸ್ತಕಗಳ ಬಗ್ಗೆ, ಸಂಕ್ಷಿಪ್ತವಾಗಿಯಾದರೂ ಇಂದಿನ ಅಂಕಣದಲ್ಲಿ ಉಲ್ಲೇಖಿಸಲೇಬೇಕು. ಸ್ವಾರಸ್ಯಕರ ಮಾಹಿತಿಯೊಂದಿಷ್ಟನ್ನು ನಿಮ್ಮೆಲ್ಲ ರೊಡನೆ ಹಂಚಿಕೊಳ್ಳಲೇಬೇಕು. ಬಹುಶಃ ನಿಮಗೆಲ್ಲರಿಗೂ ಗೊತ್ತೇ ಇರಬಹುದಾದ, ಮಾನಸಿ ಸುಧೀರ್ ಅವರ ವಿಡಿಯೊಗಳಿಂದಾಗಿ ಸಾಕಷ್ಟು ಪ್ರಚಾರವಾದ, “ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲ ಮೊಗವಿತ್ತು... ಇಲಿಯನ್ನೇರಿದ ಯಾರಿದು ಎನ್ನಲು ಈಶ್ವರಸುತ ನೆಂದನು ಅಪ್ಪ...." ಎಂಬ ಜನಪ್ರಿಯ ಶಿಶುಗೀತೆಯಿಂದಲೇ ಆರಂಭಿಸೋಣ.

62 ok

ಆ ನೆಪದಿಂದ ಗಣೇಶನನ್ನು ವಂದಿಸಿ ಮುಂದಡಿಯಿಟ್ಟಂತೆಯೂ ಆಗುತ್ತದೆ. ಆ ಕವಿತೆಯನ್ನು ರಚಿಸಿದವರು ಮುಂಡಾಜೆ ರಾಮಚಂದ್ರ ಭಟ್ಟರೆಂಬ ಕವಿ, ಸಾಹಿತಿ. ಮಕ್ಕಳಿಗೆಂದೇ ಕವನಗಳನ್ನು ಬರೆದು ಪುಸ್ತಕಗಳನ್ನು ಪ್ರಕಟಿಸಿದವರು. ಅನಂತ ತಾಮ್ಹನಕರರಿಗೆ ಖಾಸಾ ಚಿಕ್ಕಪ್ಪ. ಅಂದರೆ ಅಕ್ಷರವ್ಯಾಮೋಹ ಅನಂತ ತಾಮ್ಹನಕರರಿಗೆ ವಂಶವಾಹಿನಿಯಲ್ಲಿ ಬಂದದ್ದೇ. ಜೊತೆಗೆ ಅವರ ಕುಟುಂಬದವರೆಲ್ಲರೂ ಸಂಗೀತಾಸಕ್ತರು, ಭಜನೆಯೇ ಮೊದಲಾದ ಲಘುಶಾಸ್ತ್ರೀಯ ಸಂಗೀತ ಪ್ರಕಾರದ ಕಲಾವಿದರು.

ಸಂಗೀತಗಾರರು ಸಾಹಿತಿಗಳಾಗಬೇಕೆಂದೇನಿಲ್ಲ, ಆದರೆ ಸಂಗೀತದ ಅಷ್ಟಿಷ್ಟು ಹಿನ್ನೆಲೆಯಿದ್ದರೆ ಸಾಹಿತಿಗಳಿಗೆ, ಮುಖ್ಯವಾಗಿ ಕವಿಗಳಿಗೆ ಎಷ್ಟು ಉಪಯೋಗವಾಗುತ್ತದೆ ಎಂಬುದಕ್ಕೆ ಅನಂತ ತಾಮ್ಹನಕರರೇ ಸಾಕ್ಷಿ. ಹೇಗೆಂದು ಆಮೇಲೆ ವಿವರಿಸುತ್ತೇನೆ. “ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ದಿನಗಳು ಕಳೆದುಹೋದದ್ದೇ ಗೊತ್ತಾಗುತ್ತಿರಲಿಲ್ಲ.

37 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಸಮಯದ ಸದುಪಯೋಗ ಮಾಡುವುದು ಹೇಗೆ ಎಂಬ ಆಲೋಚನೆ ಬಂದಾಗ ನನಗೆ ಹೊಳೆದದ್ದು ಸಾಹಿತ್ಯ. ಸಾಹಿತ್ಯ ಸಂಗೀತ ಇತ್ಯಾದಿ ಹವ್ಯಾಸಗಳಿದ್ದರೆ ಆ ವ್ಯಕ್ತಿಗೆ ವೈದ್ಯರ ಅಗತ್ಯ ಅತಿ ಕಡಿಮೆ ಎಂಬುದು ನನ್ನ ಅಭಿಪ್ರಾಯ.

ಸಾಹಿತ್ಯ ಒಂದು ಔಷಧ. ಮನಸ್ಸಿನ ಯಾವುದೇ ಚಿಂತೆಯನ್ನು ದೂರೀಕರಿಸುವ ಶಕ್ತಿ ಅದಕ್ಕಿದೆ ಎಂಬುದು ನನ್ನ ಪ್ರಬಲ ನಂಬಿಕೆ ಹಾಗೂ ನನ್ನದೇ ಅನುಭವ ಕೂಡ. ಮೊದಲಿನಿಂದಲೂ ಕೈಗೆ ಸಿಕ್ಕಿದ್ದನ್ನು ಓದುತ್ತಿದ್ದ ನನಗೆ ವಾಟ್ಸಾಪ್ ಗುಂಪುಗಳಲ್ಲಿ ಬರುತ್ತಿದ್ದ ಕವನಗಳು, ಲೇಖನಗಳು, ಮುಕ್ತಕಗಳು ಹರಟೆ ಇತ್ಯಾದಿಗಳನ್ನು ಓದುತ್ತಿದ್ದಾಗ ನಾನೂ ಬರೆಯಬೇಕೆಂಬ ಉಮೇದು ಬಂತು.

ಮೊದಮೊದಲು ಪದಬಂಧಗಳನ್ನು ತಯಾರಿಸುತ್ತಿದ್ದ ನಾನು ಪದಗಳೊಡನೆ ಆಟವಾಡುತ್ತಿದ್ದ ಕಾರಣ ಮೆಲ್ಲನೆ ಕವನಗಳನ್ನು ಬರೆಯಲು ಆರಂಭಿಸಿದೆ. ಈಗ ನಾನು ಅತ್ಯಂತ ಸುಖೀ ಮನುಷ್ಯ" ಎನ್ನುತ್ತಾರೆ ಅನಂತ ತಾಮ್ಹನಕರ್.

ಹಾಗೆ ಬರೆಯತೊಡಗಿದ ಅವರು ‘ಹೊತ್ತು ಕಳೆಯಲು ಬರೆದ ಹತ್ತು ಸಾಲುಗಳು ಎಂಬ ಕವನ ಸಂಕಲನ, ‘ಸದ್ದು ಮಾಡುವ ಶಬ್ದಗಳು’ ಮತ್ತು ‘ಅಕ್ಷರಗಳೊಡನೆ ಅಕ್ಕರೆಯ ಸರಸ’ ಎಂಬ ಪದಬಂಧ ಆಧಾರಿತ ಪುಸ್ತಕಗಳನ್ನೂ ಪ್ರಕಟಿಸಿದರು. ಅವೇನೂ ಬಿಸಿಬಿಸಿ ದೋಸೆಯಂತೆ ಖರ್ಚಾದವು ಎಂದಲ್ಲ; ಆದರೆ ತಾನೂ ಬರೆಯಬಲ್ಲೆ, ನಾಲ್ಕು ಜನರ ಮೆಚ್ಚುಗೆಯನ್ನು ಗಳಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿದ್ದಂತೂ ಸತ್ಯ. ಆಮೇಲಿನದು ‘ಮುಕ್ತಕ ಮಂಜರಿ’ ಎಂಬ ಶೀರ್ಷಿಕೆಯ ಪುಸ್ತಕ.

ಅದು ಮುಕ್ತಕಗಳ ಸಂಕಲನ. ಮುಕ್ತಕವೆಂದರೆ ಡಿವಿಜಿಯವರ ಮಂಕುತಿಮ್ಮನ ಕಗ್ಗ ಶೈಲಿಯ ಚೌಪದಿ. ನಾಲ್ಕನೆಯ ಸಾಲು ಅಂಕಿತದೊಂದಿಗೆ ಕೊನೆಗೊಳ್ಳಬೇಕು. ತನ್ನ ತಾಯಿಯ ಹೆಸರು ಗೌರಿ ಎಂದು ಇದ್ದುದರಿಂದ ‘ಗೌರಿತನಯ’ ಎಂಬ ಅಂಕಿತವಿರುತ್ತದೆ ಅನಂತ ತಾಮ್ಹನಕರರ ಮುಕ್ತಕ ಗಳಲ್ಲಿ. ನವ್ಯ ಭವ್ಯ ಶೈಲಿ ಎನ್ನುತ್ತ ಗದ್ಯವನ್ನೇ ಉದ್ದುದ್ದಕ್ಕೆ ಸಾಲುಗಳಲ್ಲಿ ಬರೆದು ಅದನ್ನು ಪದ್ಯ ಎನ್ನುವುದು ಅನಂತ ತಾಮ್ಹನಕರರಿಗೆ ಸ್ವಲ್ಪವೂ ಇಷ್ಟವಿಲ್ಲ.

ಎಮ್ಮೆ ಉಚ್ಚೆ ಹೊಯ್ದಂತೆ ರೀತಿಯ ಅಂತಹ ಕವನಗಳನ್ನು ಅವರು ಬರೆಯುವುದೂ ಇಲ್ಲ. ಹಾಗಂತ ಷಟ್ಪದಿ, ಕಂದಪದ್ಯ, ಸೀಸಪದ್ಯ, ಮಂದಾಕ್ರಾಂತಾ, ಮತ್ತೇಭವಿಕ್ರೀಡಿತ, ದ್ವಿತೀಯಾಕ್ಷರ ಪ್ರಾಸ ಎನ್ನುತ್ತ ಗುರು-ಲಘು ಮಾತ್ರೆಗಳನ್ನು ಎಣಿಸಿ ಶಬ್ದಗಳನ್ನು ಲೆಕ್ಕಾಚಾರದಿಂದ ಜೋಡಿಸು ವುದೂ ಅಲ್ಲ.

ಒಟ್ಟಿನಲ್ಲಿ ಅತ್ತ ಮುಕ್ತಛಂದವೂ ಅಲ್ಲದ, ಇತ್ತ ಛಂದಸ್ಸಿನ ಕಟ್ಟುನಿಟ್ಟಿನ ಬಿಗಿಯೂ ಇಲ್ಲದ ನಡುಪಂಥೀಯ ಶೈಲಿ ಅನಂತ ತಾಮ್ಹನಕರರದು. ಅದು ಅವರ ಕವನಗಳಿಗೊಂದು ವಿಶೇಷ ಮೆರುಗನ್ನೂ, ಎಲ್ಲಕ್ಕಿಂತ ಮುಖ್ಯವಾಗಿ ಸರಳ-ಸುಲಭ ಗೇಯತೆಯನ್ನೂ ಅತಿಸಹಜವೆಂಬಂತೆ ತಂದುಕೊಡುತ್ತದೆ. ಒಂದು ರೀತಿಯಲ್ಲಿ ಕೆ.ಎಸ್.ನರಸಿಂಹ ಸ್ವಾಮಿಯವರ ಕವನಗಳ ಹಾಗೆ. ಜುಳುಜುಳು ಸದ್ದು ಮಾಡಿ ಹರಿಯುವ ತೊರೆಯಂತೆ ಕಿವಿಗಿಂಪು, ಮನಕೆ ತಂಪು. ಯಾವುದೇ ಕವನವನ್ನು ಆಯ್ದು ಓದತೊಡಗುತ್ತಿದ್ದಂತೆ ಇದು ಕವನವಲ್ಲ ಪದ್ಯ ಎಂಬ ಭಾವನೆ ಓದುಗನಲ್ಲಿ ತತ್‌ಕ್ಷಣಕ್ಕೆ ಮೂಡುತ್ತದೆ. ಅದರಿಂದ ಓದು ಸಲೀಸಾಗುತ್ತದೆ.

ಅಷ್ಟೇಅಲ್ಲ, ಓದಿದ್ದು ಮನಸ್ಸಿನಲ್ಲಿ ನೆನಪುಳಿವ ಸಾಧ್ಯತೆಯೂ ಹೆಚ್ಚುತ್ತದೆ. ಆ ಕಾರಣದಿಂದಲೇ ಇರಬಹುದು, ಅನಂತ ತಾಮ್ಹನಕರರ ಸರಳಸುಂದರ ಕವನಗಳು ವಾಟ್ಸಾಪ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಓದಲಿಕ್ಕೆ ಸಿಕ್ಕಿದಂಥವು ನನಗೂ ಮೆಚ್ಚುಗೆಯಾದವು. ಸಂಸ್ಕೃತ ಭಾಷೆಯ ಕಲಿಕೆ ಅಥವಾ ಒಡನಾಟ ಅಷ್ಟೇನೂ ಇಲ್ಲದೆಯೂ ಅವರ ಶಬ್ದಭಂಡಾರ ಶ್ರೀಮಂತವಾಗಿದೆ, ವಿಷಯಗಳ ಹರಹೂ ಬಲುವಿಸ್ತಾರವಾಗಿದೆ, ರವಿ ಕಾಣದ್ದನ್ನು ತಾನು ಕಾಣುವ ಸಾಮರ್ಥ್ಯವನ್ನೂ ಇವರು ಭರಪೂರವಾಗಿಯೇ ಹೊಂದಿದ್ದಾರೆ ಎಂದು ನನಗೆ ಮನವರಿಕೆಯಾಯಿತು.

ಒಮ್ಮೆ ಹೀಗೇ ವಾಟ್ಸಾಪ್‌ನಲ್ಲಿ ಅದೂ ಇದೂ ಹರಟುತ್ತಿದ್ದಾಗ, ಲಿಮರಿಕ್ ಎಂಬ ಪಾಶ್ಚಾತ್ಯ ಪದ್ಯಪ್ರಕಾರದ ಬಗ್ಗೆ ನಾನೇ ಅವರಿಗೆ ತಿಳಿಸಿದೆ. ಆಗಷ್ಟೇ ಡುಂಡಿರಾಜ್ ಮತ್ತು ಅಣಕು ರಾಮನಾಥ್ ಜೋಡಿಯ ‘ಡುಂಡಿರಾಮ್ಸ್ ಲಿಮರಿಕ್ಸ್’ ಪುಸ್ತಕವನ್ನು ಓದಿದ್ದೆನಾದ್ದರಿಂದ, ಅದರ ಬಗ್ಗೆಯೇ ಒಮ್ಮೆ ತಿಳಿರುತೋರಣ ಅಂಕಣದಲ್ಲೂ ಬರೆದಿದ್ದೆನಾದ್ದರಿಂದ, ನಾನೇನೂ ಕವಿ ಅಲ್ಲದಿದ್ದರೂ ಲಿಮರಿಕ್ಸ್ ಆಸ್ವಾದನೆಯ ಹುಚ್ಚು ನನ್ನನ್ನಾವರಿಸಿತ್ತು. ಅದನ್ನು ಅನಂತ ತಾಮ್ಹನಕರರಿಗೂ ಹಬ್ಬಿಸಿದ್ದೆ ಅಷ್ಟೇ. ಅವರಿಗೆ ಅದೇನು ಆವೇಶ ಬಂತೋ ಒಂದಾದ ಮೇಲೊಂದರಂತೆ ಲಿಮರಿಕ್ಸ್ ಬರೆದು ಬರೆದು ನನ್ನತ್ತ ಒಗೆದರು.

ನೋಡನೋಡುತ್ತಿದ್ದಂತೆ ಸಂಖ್ಯೆ ನೂರು ದಾಟಿತು. “ಇವುಗಳದೇ ಒಂದು ಸಂಕಲನ ಮಾಡಿ ಪ್ರಕಟಿಸಿ. ಡುಂಡಿರಾಜರಿಂದಲೇ ಮುನ್ನುಡಿ ಬರೆಸಿ ಕೊಡುವ ಜವಾಬ್ದಾರಿ ನನ್ನದು" ಎಂದೆ. ಹಾಗೆ ತಯಾರಾದದ್ದೇ ‘ಕಿಕ್ಕು ಲಿಮರಿಕ್ಕು’ ಪುಸ್ತಕ. ಮೊನ್ನೆ ಬಿಡುಗಡೆಯಾದ ನಾಲ್ಕು ಪುಸ್ತಕಗಳಲ್ಲೊಂದು.

“ಲಿಮರಿಕ್ ಎಂಬುದು ಪಂಚಪದಿ| ಪದಗಳು ತೇಲುತ ಹರಿವ ನದಿ| ಕೇವಲ ಪ್ರಾಸ| ಇಲ್ಲವು ತ್ರಾಸ| ಜ್ಞಾನವ ಬೆಳೆಸಲು ಊದು ತಿದಿ" ಇದು ಆ ಪುಸ್ತಕದಿಂದಲೇ ಒಂದು ಸ್ಯಾಂಪಲ್. ಪಕ್ಕಾ ಲಿಮರಿಕ್ ಛಾಪು. 1, 2, ಮತ್ತು 5ನೇ ಸಾಲುಗಳದೊಂದು ಪ್ರಾಸ, ಅವುಗಳಿಗಿಂತ ಗಿಡ್ಡವಾದ 3, 4ನೇ ಸಾಲುಗಳದು ಬೇರೆ ಪ್ರಾಸ.

ಇನ್ನೊಂದು ಉದಾಹರಣೆ- “ರವೆಯನು ಹುರಿದೆನು ಮಾಡಲು ಉಂಡೆ| ಸಕ್ಕರೆ ತುಪ್ಪದಿ ತುಂಬಿದೆ ಹಂಡೆ| ಪಾಕವು ಬಿಸಿಬಿಸಿ| ಸಟ್ಟುಗ ತಿರುಗಿಸಿ| ಕಟ್ಟಲು ಹೊರಟರೆ ಕಲ್ಲಿನ ಬಂಡೆ!" ಈ ನಡುವೆ ತಾನು ಪದ್ಯಕ್ಕಷ್ಟೇ ಅಲ್ಲ ಗದ್ಯಕ್ಕೂ ಸೈ ಎಂದು ಅನಂತ ತಾಮ್ಹನಕರರು ಸಾಬೀತುಪಡಿಸಿದ್ದರು, ‘ಒಂದು ಬ್ಯಾಂಕ್ ಸ್ಪೆಷಲ್ ಊಟ’ ಹೆಸರಿನ ಪುಸ್ತಕ ಬರೆದು ಪ್ರಕಟಿಸುವುದರ ಮೂಲಕ. ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಅವರು ಸೇವೆ ಸಲ್ಲಿಸಿದ್ದು ಹೆಚ್ಚಾಗಿ ಉತ್ತರ ಕರ್ನಾಟಕದ ಹಳ್ಳಿ ಪಟ್ಟಣಗಳಲ್ಲಿ.

ನೀರಿಲ್ಲದ ಊರುಗಳಲ್ಲಿ. ಮೇಲ್ನೋಟಕ್ಕೆ ಒರಟರೆನಿಸಿದರೂ ಮುಗ್ಧತೆ ಮೈವೆತ್ತಂತಿರುವ ಮತ್ತು ಹೃದಯ ದಲ್ಲಿ ಶ್ರೀಮಂತಿಕೆ ತುಂಬಿತುಳುಕುವ ಬಡಜನರ ಒಡನಾಟದಲ್ಲಿ. ಅಂತಹ ವೃತ್ತಿಜೀವನದ ಕೆಲವು ಸ್ವಾರಸ್ಯಕರ, ಕೆಲವು ದುಃಖಕರ, ಒಟ್ಟಿನಲ್ಲಿ ನವರಸಗಳ ಅನುಭವಕಥನಗಳ ಸಂಕಲನವೇ ‘ಒಂದು ಬ್ಯಾಂಕ್ ಸ್ಪೆಷಲ್’ ಊಟ ಪುಸ್ತಕ.

ಒಬ್ಬ ಬ್ಯಾಂಕ್ ಉದ್ಯೋಗಿಯ ಡೈರಿ ರೀತಿಯದು. ಬ್ಯಾಂಕಿಂಗ್ ಲೋಕದ ಒಳಚಿತ್ರಣಗಳ ಪರಿಚಯ ನೀಡುವಂಥದೂ ಹೌದು. ಅದಕ್ಕಿಂತಲೂ ಹೆಚ್ಚಾಗಿ, ಪುಸ್ತಕದ ಬೆನ್ನುಡಿಯಲ್ಲಿ ಬರೆದಿರುವಂತೆ- ಮನಸು ಮಾಡಿದರೆ ಬ್ಯಾಂಕ್ ಸಿಬ್ಬಂದಿಯೋರ್ವ ಎಷ್ಟು ಜನಾನುರಾಗಿ ಆಗಿರಬಹುದು ಎಂದು ತೋರಿಸಿಕೊಡುವ ಪುಸ್ತಕ. ವೈಯುಕ್ತಿಕವಾಗಿ ನನಗೆ ಕವನ ಸಂಕಲನಗಳಿಗಿಂತ ಆ ರೀತಿಯ ಸ್ವಾನುಭವ ಕಥನಗಳನ್ನು ಓದುವ ಖಯಾಲಿ ಹೆಚ್ಚು. ಹಾಗೆ ನಾನು ಓದಿ ಬಹಳವಾಗಿ ಮೆಚ್ಚಿ ಕೊಂಡಿರುವ ಪುಸ್ತಕವದು.

ಕಳೆದ ವಾರ ಬಿಡುಗಡೆಯಾದ ಉಳಿದ ಮೂರು ಪುಸ್ತಕಗಳನ್ನೂ ಮೌಲ್ಯಯುತ ಎಂದು ಹೇಳಲಿಕ್ಕೆ ಕಾರಣವಿದೆ. ‘ಅಕ್ಷರಮಾಲೆ’ ಶೀರ್ಷಿಕೆಯ ಪುಸ್ತಕ, ಕನ್ನಡದ ಮೊತ್ತಮೊದಲ ಗುಣಿತಾಕ್ಷರ ಕವನ ಮಾಲಿಕೆ ಎನ್ನಲಿಕ್ಕಡ್ಡಿಯಿಲ್ಲ. ಇದರ ಪ್ರತಿಯೊಂದು ಕವನವೂ ಒಂದೋ ಸ್ವರಾಕ್ಷರಗಳ ಆರೋಹಣಮಾಲೆ- “ಅಮ್ಮನು ಕಣ್ಣಿಗೆ ಕಾಣುವ ದೇವರು| ಆಲಸಿ ಎಂದೂ ಅನಿಸಿಲ್ಲ| ಇಷ್ಟವೊ ಕಷ್ಟವೊ ಅವಳಿಗೆ ಅನಿಸದು| ಈಶನ ಪೂಜೆಯ ಬಿಡಲಿಲ್ಲ..." ಇಲ್ಲವೇ ವ್ಯಂಜನದ ಕಾಗುಣಿತಕ್ರಮ- “ಸಕ್ಕರೆಗಿಂತಲು ಸಿಹಿ ಮಾತಾಡುವೆ| ಸಾತ್ವಿಕ ಗುಣವು ನಿನದಮ್ಮ| ಸಿರಿತನ ತುಂಬಿದೆ ನಿನ್ನಯ ಮನದಲಿ| ಸೀತಾ ಮಾತೆಯೇ ನೀನಮ್ಮ..." ರೀತಿಯಲ್ಲಿ ಇದೆ. ಮತ್ತೆ ಕೆಲವು ಜಡೆ ಹೆಣೆದಂತೆ ಒಂದೇ ಕವನದಲ್ಲಿ ಎರಡೆರಡು ವ್ಯಂಜನ-ಕಾಗುಣಿತಗಳ ಜುಗಲ್‌ಬಂದಿ: “ಜಗವನು ಬೆಳಗುವ ಕಿರಣವು ಬೀಳದು| ಕತ್ತಲು ತುಂಬಿದೆ ಕಾಡೊಳಗೆ| ಜಾಜಿಯು ಬಿರಿಯುತ ಪರಿಮಳ ಹರಡಿದೆ| ಕಾವಲು ಇಲ್ಲದ ವನದೊಳಗೆ| ಜಿಗಿಯುವ ಜಿಂಕೆಯ ವಿಹಾರದಂದವ| ಕಿರುಕುಳ ಕೊಡದೆಯೆ ನೋಡೋಣ| ಜೀಕುತ ಕುಣಿಯುವ ವಾನರ ವೃಂದಕೆ| ಕೀಟಲೆ ಮಾಡದೆ ನಲಿಯೋಣ..." ಮಕ್ಕಳಿಗಷ್ಟೇ ಏನು ಹಿರಿಯರಿಗೂ ಕನ್ನಡ ವರ್ಣಮಾಲೆಯ ಮೇಲೆ, ಅದರ ಕ್ರಮಬದ್ಧತೆಯ ಮೇಲೆ ಪ್ರೀತಿ ಉಕ್ಕದಿರುತ್ತದೆಯೇ ಇಂಥವನ್ನು ಮೆಲ್ಲುವಾಗ? ಇನ್ನೊಂದು ಪುಸ್ತಕ ‘ಹುಣ್ಣಿಮೆಯ ಚಂದಿರನ ಕಂಡೆ ಮೊಗದೊಳಗೆ’.

ಇದು ಕೂಡ ಮಕ್ಕಳಿಗೆಂದೇ ಬರೆದ ಕವನಗಳ ಸಂಕಲನ. ದೊಡ್ಡವರಿಗೂ ಇಷ್ಟ ಆಗುವಂಥದೇ. ಮತ್ತದೇ ಕಾರಣ- ಈ ಎಲ್ಲ ಕವನಗಳನ್ನು ಬರೀ ಓದುವುದಲ್ಲ, ಗುನುಗುನಿಸಬಹುದು, ಸಲೀಸಾಗಿ ಹಾಡಬಹುದು. ಬೇಕಿದ್ದರೆ ಅದು ಮಸಾಲೆದೋಸೆಯ ಬಗೆಗೇ ಇರಲಿ- “ಉದ್ದಿನ ಜತೆಯಲಿ ನೆನೆಸಿದ ಅಕ್ಕಿಯ| ಸಂಜೆಯ ಹೊತ್ತಲಿ ರುಬ್ಬಿ ಇಡು| ಮರುದಿನ ಬೆಳಗಿನ ಸಮಯದಿ ಹಿಟ್ಟಿಗೆ| ಉಪ್ಪನು ಬೆರೆಸುತ ಕಲಸಿಬಿಡು|| ತುರಿದಿಹ ತೆಂಗಿನಕಾಯಿಯ ಜತೆಯಲಿ| ಹುಣಸೆಯ ಹಣ್ಣನು ಹಾಕಿಬಿಡು| ಖಾರಕೆ ಹಸಿ ಒಣ ಮೆಣಸನು ಸೇರಿಸು| ಶುಂಠಿಯ ಚೂರನು ಮರೆಯದಿರು..." ರೀತಿಯಲ್ಲಿ, ಅಥವಾ ನೀತಿಬೋಧೆಯೇ ಇರಲಿ- “ಅಗುಳನು ಕಂಡರೆ ಬಳಗವ ಕರೆಯುವ ಕಾಗೆಯ ಗುಣವನು ನೋಡಿ ಕಲಿ| ತಿಪ್ಪೆಯ ಕೆದಕಲು ಮರಿಗಳ ಕರೆಯುವ ಕೋಳಿಯ ಭಾವದ ತಿರುಳ ತಿಳಿ|| ಸರತಿಯ ಸಾಲಲಿ ಮುಂದಕೆ ಸಾಗುವ ಇರುವೆಯ ಶಿಸ್ತನು ನೀನು ಕಲಿ| ಜೇನಿನ ಹನಿಗಳ ಸಂಗ್ರಹ ಮಾಡುವ ದುಡಿಮೆಯ ಬೆಲೆಯನು ನೀನು ತಿಳಿ..." ರೀತಿಯಲ್ಲಿ. ಮಕ್ಕಳ ಪದ್ಯ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಮಾದರಿ. ಈ ಸಂಕಲನದ ಕೆಲವು ಪದ್ಯಗಳಿಗಂತೂ ಪಠ್ಯಪುಸ್ತಕಗಳಲ್ಲಿ ಸೇರುವ ಸಂಪೂರ್ಣ ಅರ್ಹತೆ ಮತ್ತು ಯೋಗ್ಯತೆಗಳಿವೆ.

ದೊಡ್ಡವರಿಗೆಂದು ಬರೆದ ‘ಗೋಡೆ ಮೇಲಿನ ಹಲ್ಲಿ ಲೊಚಗುಟ್ಟಿತು’ ಸಂಕಲನದ ಕವನಗಳೂ ಅಷ್ಟೇ: ಅಭಿಜಾತ ಲಯ ಮತ್ತು ಗೇಯತೆಗಳಿಂದಾಗಿ ರೆಡಿ-ಟು-ಸಿಂಗ್ ರೀತಿಯವು. ಸುಗಮಸಂಗೀತಕಾರರ ಕೈಗೇನಾದರೂ ಸಿಕ್ಕಿದರೆ ತತ್‌ಕ್ಷಣವೇ ಸುಶ್ರಾವ್ಯವಾಗಿ ಹಾಡಿ ಇನ್ನಷ್ಟು ಭಾವಪೂರ್ಣ ಆಗಬಲ್ಲಂಥವು.

“ನನ್ನ ಒಲವಿನ ಮಡದಿ ತವರಿಂಗೆ ಹೋಗಿರಲು| ನಾವೀನ್ಯವು ಇಲ್ಲ ಎನ್ನ ದಿನಗಳಲಿ| ನಿತ್ಯ ನೇಮಗಳೆಲ್ಲ ಹಳಿತಪ್ಪಿ ಹೋಗಿಹವು| ನೀಟುತನವೂ ಇಲ್ಲ ಎನ್ನ ಕೆಲಸಗಳಲಿ|| ನುಡಿಜಾಣ ನಿರಬಹುದು ಬಾಣಸಿಗ ನಾನಲ್ಲ| ನೂಕುತಿಹೆ ದಿನಗಳನು ಬಲು ಕಷ್ಟದಲ್ಲಿ| ನೆಲವನೊರಸುವ ಕೆಲಸ ಬೆನ್ನು ನೋವಿಹುದೆನಗೆ| ನೇರಾಣಿ ಇರದಿರಲು ತಿಂಡಿ ಸಿಗದಿಲ್ಲಿ..." ಮುಂತಾದವನ್ನು ಓದುವಾಗ ಮಲ್ಲಿಗೆಕವಿಯ ದಾಂಪತ್ಯಗೀತೆಗಳು ನೆನಪಾಗದಿರುವುದಿಲ್ಲ.

ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲೂ ಈ ಕವನದಲ್ಲೂ ನ ವ್ಯಂಜನದ ಕಾಗುಣಿತ! ಇನ್ನೊಂದು ‘ಸ್ಮಾರ್ಟ್ -ನಾಷ್ಟಕಮ್’ ಎಂಬ ಶೀರ್ಷಿಕೆಯ ಕವನ. ಕಾಲಭೈರವಾಷ್ಟಕಮ್ ಧಾಟಿಯಲ್ಲೇ ಹಾಡಲಿಕ್ಕಾಗುತ್ತದೆ, ಸ್ಮಾರ್ಟ್ʼಫೋನ್ ಹೇಗೆ ಈಗ ಎಲ್ಲರ ಜೀವನವನ್ನು ನಿಯಂತ್ರಿಸಬಲ್ಲ ಕಾಲಭೈರವನೇ ಆಗಿದೆ ಎಂದು ಕೊಂಚ ಹೆದರಿಕೆಯೂ ಆಗುತ್ತದೆ. ಈ ಸಂಕಲನದ ಕೆಲವು ಕವನಗಳು ಓದುಗರ ಮನಸ್ಸಿಗೆ ಕಚಗುಳಿಯಿಟ್ಟರೆ ಇನ್ನು ಕೆಲವು ಮನ ಕಲಕುತ್ತವೆ, ಈಗಿನ ಜೀವನಶೈಲಿಯ ಕಹಿಸತ್ಯಗಳೇ ಚಿತ್ರಿತವಾಗಿರುವುದರಿಂದ ಓದಿ ಮುಗಿಸಿದಾಗ ವಿಷಾದ ಮಡುಗಟ್ಟು ತ್ತದೆ.

ಅನಂತ ತಾಮ್ಹನಕರರ ಅಕ್ಷರಕೃಷಿಗೆ ನೀರೆರೆದು ಪೋಷಿಸುತ್ತಿರುವ, ಅವರ ಇದುವರೆಗಿನ ಕೃತಿಗಳೆಲ್ಲದರ ಪ್ರಕಾಶಕರೂ ಆಗಿರುವ ಮೈಸೂರಿನ ಅಪ್ಪಟ ಕನ್ನಡಿಗ ಸಂಸ್ಕೃತಿ ಸುಬ್ರಹ್ಮಣ್ಯ ಅವರ ಹೆಸರನ್ನೂ ಇಲ್ಲಿ ಉಲ್ಲೇಖಿಸಲೇಬೇಕು. ಮೊನ್ನೆ ಅಷ್ಟು ಚಂದದ ಆತ್ಮೀಯವೆನಿಸುವ ಸಮಾರಂಭದ ಆಯೋಜನೆ ಅವರದೇ. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮತ್ತು ಮೈಸೂರಿನ ವಿಜಯವಿಠಲ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ವಾಸುದೇವ ಭಟ್ ಅವರ ಉಪಸ್ಥಿತಿ, ಅನಂತ ತಾಮ್ಹನಕರರ ಮಗಳು ಅಕ್ಷತಾಳಿಂದ ನಿರೂಪಣೆ, ಮೊಮ್ಮಗಳು ಶಾರ್ವರಿಯಿಂದ ಪ್ರಾರ್ಥನೆ, ಸಮಾರಂಭ ಮುಗಿದಮೇಲೆ ಬಿಸಿಬೇಳೆ ಭಾತ್-ಮೊಸರನ್ನ-ಆಂಬೊಡೆ-ಮೈಸೂರುಪಾಕ್ ಸಹಿತ ಸವಿರುಚಿಯ ಊಟ... ಎಲ್ಲವೂ ಸೊಗಸು ಸ್ವಾದಿಷ್ಟ.

ನನಗಂತೂ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇಂಥದೊಂದು ಸಮಾರಂಭದಲ್ಲಿ ಸದಭಿರುಚಿಯ ಸಜ್ಜನರೊಡನೆ ಕಲೆತು ಆಚರಿಸಿದ ಖುಷಿ. ಅನಂತ ತಾಮ್ಹನಕರರಂಥ ಸತ್ತ್ವಯುತ ಕವಿಯಿಂದ ಇನ್ನಷ್ಟು ಸತ್ತ್ವಯುತ ಕೃತಿಗಳು ಬರಬೇಕಾದರೆ ಅವರಿಗೆ ಸಲ್ಲಬೇಕಾದ ಪ್ರೋತ್ಸಾಹ ಉತ್ತೇಜನಗಳು ಸಿಗಬೇಕು. ಅವರ ಪುಸ್ತಕಗಳನ್ನು ಕೊಂಡು ಓದಬೇಕು. ಓದಿದ ಮೇಲೆ ಪ್ರಾಮಾಣಿಕ ಅನಿಸಿಕೆಯನ್ನೂ ತಿಳಿಸಬೇಕು. ಅಷ್ಟನ್ನು ಮಾಡುವ ಆಸಕ್ತಿ ಉತ್ಸಾಹ ನಿಮ್ಮಲ್ಲಿದೆ ಯೆಂದು ನನಗೆ ಗೊತ್ತು. ಅನಂತ ತಾಮ್ಹನಕರರ ಸಂಪರ್ಕವಿವರ ನಿಮಗೆ ಗೊತ್ತಿರಲಿಕ್ಕಿಲ್ಲ ಅಷ್ಟೇ. ಅವರ ಪುಸ್ತಕಗಳನ್ನು ತರಿಸಿ ಓದಿ ಸವಿಯುತ್ತೀರಾದರೆ ಅದನ್ನೂ ತಿಳಿಸುತ್ತೇನೆ: 94488 99321.

ಶ್ರೀವತ್ಸ ಜೋಶಿ

View all posts by this author