Srivathsa Joshi Column: ಕಬ್ಬಿಗರೆಂದರೆ ಕಾವ್ಯ ಬರೆವವರೇ ? ಕಬ್ಬು ಬೆಳೆವವರೇ ?
ನೇರ, ಸರಳ, ಸಂಕ್ಷಿಪ್ತ ಭಾಷೆ ಬಳಸಿ ಕರಾರುವಾಕ್ಕಾದ ಸಂವಹನ. ಈ ದೃಷ್ಟಿಯಿಂದ, ಪ್ರಸ್ತುತ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದ ಸುದ್ದಿ ತಲೆಬರಹಗಳನ್ನು ‘ಕಬ್ಬಿಗರಿಗೆ ಸಿಎಂ ಸಾಥ್ (ವಿಶ್ವವಾಣಿ), ‘ಕಬ್ಬಿಗರ ಕಷ್ಟಕ್ಕೆ ಸ್ಪಂದನೆ (ವಿಜಯ ಕರ್ನಾಟಕ), ‘ಕಬ್ಬಿಗರ ನೋವಿನ ಚರ್ಚೆ ಅವಿರತ (ಕನ್ನಡಪ್ರಭ), ‘ಕಬ್ಬಿಗರ ಸಂಧಾನ ವಿಫಲ (ಉದಯವಾಣಿ)... ಈ ರೀತಿಯಾಗಿ ಬರೆಯುವುದು ತಪ್ಪು ಎನ್ನಲಾರೆವಾದರೂ ಒಳ್ಳೆಯ ರೀತಿ ಅಲ್ಲ." - ಇದು ಈ ವಿಷಯವನ್ನು ಒಂದು ಜಿಜ್ಞಾಸೆ ಎಂಬಂತೆ ಮಿತ್ರರೊಬ್ಬರು ನನ್ನ ಗಮನಕ್ಕೆ ತಂದಾಗ ನಾನು ಉತ್ತರಿಸಿದ ರೀತಿ.
-
ತಿಳಿರುತೋರಣ
“ಅರ್ಥಕ್ಕೋಸ್ಕರ ವ್ಯಾಕರಣವನ್ನು ಅವಲಂಬಿಸುವುದಾದರೆ ಎರಡೂ ಸರಿಯೇ. ಕಬ್ಬಿಗ ಎಂದರೆ ಕಾವ್ಯ ಬರೆಯುವವನು ಅಥವಾ ಕವಿ ಎನ್ನುವುದಂತೂ ಶತಸಿದ್ಧ. ಕಬ್ಬಿಗ ಎಂದರೆ ಕಬ್ಬು ಬೆಳೆಯುವವನು ಎಂದು ಕೂಡ ವ್ಯಾಕರಣ ರೀತಿಯಿಂದ ಸಾಧಿಸಿ ತೋರಿಸಲಿಕ್ಕಾಗುತ್ತದೆ. ಆದರೆ ಶಾಸ್ತ್ರಕ್ಕಿಂತ ಯಾವಾಗಲೂ ರೂಢಿಗೆ ಹೆಚ್ಚು ಮಾನ್ಯತೆ ಇರುವುದು. ಹಾಗಾಗಿ ರೂಢಿಯಲ್ಲಿರುವ ಅರ್ಥವಾದ ಕಬ್ಬಿಗ ಎಂದರೆ ಕವಿ ಎನ್ನುವುದಕ್ಕೇ ಹೆಚ್ಚು ಮಾನ್ಯತೆ.
ಅಲ್ಲದೇ ಸುದ್ದಿ ಮನೆಯವರು ಸುದ್ದಿಗೆ ತಲೆಬರಹ ಕೊಡುವಾಗ, ಮತ್ತು ವಿವರ ಬರೆಯುವಾಗಲೂ, ವ್ಯಾಕರಣ ಪರಿಪಾಲನೆಗಿಂತ ಹೆಚ್ಚಾಗಿ ವಿಷಯದ ನಿಖರತೆ ಮತ್ತು ಸಂವಹನದ ಸ್ಪಷ್ಟತೆಯತ್ತ ಹೆಚ್ಚು ಗಮನ ಕೊಡಬೇಕು. ಅವರು ಒಂದು ತಲೆಬರಹದಲ್ಲಿ ಅಥವಾ ವಾಕ್ಯದಲ್ಲಿ ಯಾವ ಅರ್ಥೋದ್ದೇಶದಿಂದ ಪದಬಳಕೆ ಮಾಡಿರುತ್ತಾರೋ ಅದನ್ನೋದುವಾಗ ಓದುಗರ ಮನಸ್ಸಿನಲ್ಲೂ ಅದೇ ಉದ್ದೇಶಿತ ಅರ್ಥವೇ ಮೂಡಬೇಕು. ದಿನಪತ್ರಿಕೆಯ ಓದು ಮಾಡರ್ನ್ ಆರ್ಟ್ ರಸಾಸ್ವಾದನೆಯಂತಲ್ಲ.
ನೇರ, ಸರಳ, ಸಂಕ್ಷಿಪ್ತ ಭಾಷೆ ಬಳಸಿ ಕರಾರುವಾಕ್ಕಾದ ಸಂವಹನ. ಈ ದೃಷ್ಟಿಯಿಂದ, ಪ್ರಸ್ತುತ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದ ಸುದ್ದಿ ತಲೆಬರಹಗಳನ್ನು ‘ಕಬ್ಬಿಗರಿಗೆ ಸಿಎಂ ಸಾಥ್ (ವಿಶ್ವವಾಣಿ), ‘ಕಬ್ಬಿಗರ ಕಷ್ಟಕ್ಕೆ ಸ್ಪಂದನೆ (ವಿಜಯ ಕರ್ನಾಟಕ), ‘ಕಬ್ಬಿಗರ ನೋವಿನ ಚರ್ಚೆ ಅವಿರತ (ಕನ್ನಡಪ್ರಭ), ‘ಕಬ್ಬಿಗರ ಸಂಧಾನ ವಿಫಲ (ಉದಯವಾಣಿ)... ಈ ರೀತಿಯಾಗಿ ಬರೆಯುವುದು ತಪ್ಪು ಎನ್ನಲಾರೆವಾದರೂ ಒಳ್ಳೆಯ ರೀತಿ ಅಲ್ಲ." - ಇದು ಈ ವಿಷಯವನ್ನು ಒಂದು ಜಿಜ್ಞಾಸೆ ಎಂಬಂತೆ ಮಿತ್ರರೊಬ್ಬರು ನನ್ನ ಗಮನಕ್ಕೆ ತಂದಾಗ ನಾನು ಉತ್ತರಿಸಿದ ರೀತಿ.
ಇದನ್ನು ಇನ್ನೊಂಚೂರು ಅಗೆದು ಸೂಕ್ಷ್ಮವಾಗಿ ನೋಡೋಣ. ಪತ್ರಿಕೆಗಳು ಹೀಗೆ ಏಕೆ ಬರೆಯುತ್ತವೆ? ಒಂದೇ ಪತ್ರಿಕೆಯೇನಲ್ಲ ಕನ್ನಡದ ಪ್ರಮುಖ ದೈನಿಕಗಳೆಲ್ಲ ಈ ರೀತಿ ಪದಬಳಕೆ ಮಾಡಿವೆಯೆಂದರೆ ಅದಕ್ಕೊಂದು ಕಾರಣವಿರಬೇಕು. ತಲೆಬರಹದಲ್ಲಿ ‘ಕಬ್ಬು ಬೆಳೆಗಾರರ’ ಎಂದು ಎರಡು ಪ್ರತ್ಯೇಕ ಪದಗಳಾಗಿ, ಏಳು ಅಕ್ಷರಗಳು ಮತ್ತು ನಡುವೆ ಒಂದು ಸ್ಪೇಸ್ ಕೊಟ್ಟು ಬರೆಯುವುದಕ್ಕೆ ಬೇಕಾಗುವು ದರ ಅರ್ಧದಷ್ಟು ಜಾಗ ಸಾಕು ‘ಕಬ್ಬಿಗರ’ ಎಂದು ನಾಲ್ಕಕ್ಷರಗಳ ಒಂದೇ ಪದ ಬರೆಯಲಿಕ್ಕೆ. ಅಲ್ಲದೇ ತಲೆಬರಹದ ವರ್ಣಸಂಯೋಜನೆಯಲ್ಲಿ ಮಿಕ್ಕಿದ್ದೆಲ್ಲ ಕಪ್ಪು ಬಣ್ಣದಲ್ಲಿರುವಾಗ ಆ ಪದವನ್ನಷ್ಟೇ ಕೆಂಪು ಬಣ್ಣದಲ್ಲಿ ಬರೆಯುವುದರ ಮೂಲಕ, ನಾವಿದನ್ನು ವಿಶೇಷ ಅರ್ಥದಲ್ಲಿ ಬಳಸಿದ್ದೇವೆ ಎಂದು ಓದುಗರಿಗೆ ಸೂಚನೆಯಿತ್ತಂತೆ ಆಗುತ್ತದೆ.
ಇದನ್ನೂ ಓದಿ: Srivathsa Joshi Column: ಅನಿವಾರ್ಯಕ್ಕೂ ಅನುಕೂಲಕ್ಕೂ ಒದಗುವ ಬದಲಿ ಬಳಕೆ
ಸುದ್ದಿ ಹೇಗೂ ಕಬ್ಬು ಬೆಳೆಗಾರರಿಗೆ ಸಂಬಂಧಿಸಿದ್ದಾದ್ದರಿಂದ ಕಬ್ಬಿಗರು ಎಂದರೆ ಕಬ್ಬು ಬೆಳೆಗಾರರು ಅಂತ ಓದುಗರು ಸಂದರ್ಭೋಚಿತ ಅರ್ಥಮಾಡಿಕೊಳ್ಳುತ್ತಾರೆ- ಎಂದು ಸುದ್ದಿಮನೆಗಳವರ ನಿಲುವು. ‘ಕಬ್ಬಿಗ’ರಿಗೆ ಈಗ ಹುಳುಗಳ ಕಾಟ: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ- ಎಂಬೊಂದು ತಲೆಬರಹ ಪ್ರಜಾವಾಣಿಯಲ್ಲೂ ಹಿಂದೊಮ್ಮೆ ಬಂದಿತ್ತು. ತಲೆಬರಹದಲ್ಲಿ ಕಪ್ಪು-ಕೆಂಪು ವರ್ಣಸಂಯೋಜನೆ ಇಲ್ಲದ್ದರಿಂದ ಕಬ್ಬಿಗ ಪದಕ್ಕೆ ವಾಕ್ಯವೇಷ್ಟನ (oಜ್ಞಿಜ್ಝಛಿ ಟ್ಠಿಟಠಿಛಿo) ಚಿಹ್ನೆ ಬಳಸಲಾಗಿತ್ತು.
ಉದ್ದೇಶ ಅದೇ: ನಾವಿದನ್ನು ವಿಶೇಷ ಅರ್ಥದಲ್ಲಿ ಬಳಸಿದ್ದೇವೆ, ಕಬ್ಬಿಗ ಎಂಬ ಪದಕ್ಕಿರುವ ಮಾಮೂಲಿ ಸಾಮಾನ್ಯ ಅರ್ಥದಲ್ಲಲ್ಲ ಎಂದು ಓದುಗರಿಗೆ ಸೂಚನೆ. ಕವಿ ಎಂಬ ಅರ್ಥ ಕಬ್ಬಿಗ ಪದಕ್ಕೆ ಹೇಗೆ ಬಂದದ್ದೆಂಬುದನ್ನೂ ನೋಡೋಣ. ಕಾವ್ಯ ಸಂಸ್ಕೃತ ಪದ. ಅದರ ತದ್ಭವ ರೂಪ ಕಬ್ಬ. ನಾಮಪದಗಳ ಮೇಲೆ ಬೇರೆಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಅಡಿಗ, ವಂತ, ವಳ, ಇಳ, ಆಳಿ ಇತ್ಯಾದಿ ತದ್ಧಿತಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ ಅಂತೊಂದು ವ್ಯಾಕರಣ ನಿಯಮವಿದೆ.
ಇದರ ಪೈಕಿ ನಾವಿಲ್ಲಿ ‘ಇಗ ಪ್ರತ್ಯಯವನ್ನಷ್ಟೇ ಗಮನಿಸೋಣ. ಕಬ್ಬ ಪದಕ್ಕೆ ಇಗ ಪ್ರತ್ಯಯ ಸೇರಿ ‘ಕಬ್ಬಿಗ’ ಆಗುತ್ತದೆ. ಕಬ್ಬವನ್ನು ಬರೆಯುವವನು ಕಬ್ಬಿಗ. ಹೀಗೆ ಇಗ ಪ್ರತ್ಯಯ ಸೇರಿ ಆದ ಪದಗಳು ಕನ್ನಡದಲ್ಲಿ ತುಂಬ ಇವೆ ಎಂದು ಕನ್ನಡಿಗರಾಗಿ ನಮಗೆ ಗೊತ್ತಿರಬೇಕು. ನೋಡಿ, ‘ಕನ್ನಡಿಗ’ ಸಹ ಅಂಥದೇ ಪದ! ಕನ್ನಡ + ಇಗ = ಕನ್ನಡಿಗ. ಕನ್ನಡವನ್ನು ಬಲ್ಲವನು ಕನ್ನಡಿಗ. ಅಂತೆಯೇ ಲೆಕ್ಕವನ್ನು ಮಾಡುವವನು ಲೆಕ್ಕಿಗ.
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು ನಮ್ಮದು. ಗಂಧವನ್ನು ಮಾರುವವನು ಗಂಧಿಗ. ಗಾಣವನ್ನು ಆಡಿಸುವವನು ಗಾಣಿಗ. ಗಾರುಡಿ ವಿದ್ಯೆಯವನು ಗಾರುಡಿಗ. ಡಿಂಗರ(ಸೇವಕ) ಆಗಿರು ವವನು ಡಿಂಗರಿಗ. ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರೂ. ಬಣಜು (ವಾಣಿಜ್ಯ) ಮಾಡುವವನು ಬಣಜಿಗ. ವ್ಯಾಪಾರವನ್ನು ಮೂಲ ಕಸುಬಾಗಿಸಿಕೊಂಡ ದಕ್ಷಿಣಭಾರತದ ಒಂದು ಪ್ರಮುಖ ಸಮುದಾಯ. ಬೆಂಬಲ ನೀಡುವವನು ಬೆಂಬಲಿಗ.
ಪುಢಾರಿಗಳ ಹಿಂದೆ ಇಂಥವರ ದೊಡ್ಡ ಪಡೆಯೇ ಇರುತ್ತದೆ. ಮಲೆನಾಡಿನಲ್ಲಿರುವವನು ಮಲೆನಾಡಿಗ. ಮದುವೆ ಆಗುತ್ತಿರುವವನು ಮದುವಣಿಗ. ಎಲ್ಲಿಂದಲೋ ಗುಳೆ ಎದ್ದು ವಲಸೆ ಬಂದವನು ವಲಸಿಗ. ಮೊದಲಿಗೆ ಹೋದವನು ಮೊದಲಿಗ. ಸಂಗಡ (ಜೊತೆಯಲ್ಲಿ) ಇರುವವನು ಸಂಗಡಿಗ. ಚೆನ್ನು(ಚೆಲುವು/ಸೊಗಸು) ಉಳ್ಳವನು ಚೆನ್ನಿಗ. ಲೇಸು(ಹಿತ) ಬಯಸುವವನು ಲೇಸಿಗ. ಇನ್ನೂ ಬೇಕಾದಷ್ಟಿವೆ, ಕಡಿಮೆ ಚಾಲ್ತಿಯಲ್ಲಿರುವವು: ತೇಟು(ಹೊಳಪು) ಗೊಳಿಸುವವನು ತೇಟಿಗ. ತೊತ್ತು(ಊಳಿಗ) ಮಾಡಿಕೊಂಡಿರುವವನು ತೊತ್ತಿಗ. ಪಿಸುಣ(ಚಾಡಿಮಾತು) ಹೇಳುವವನು ಪಿಸುಣಿಗ ಇತ್ಯಾದಿ. ಸಾಲಿಗ (ಸಾಲ + ಇಗ) ಎಂದರೆ ಸಾಲವನ್ನು ಕೊಟ್ಟವನೂ ಆಗುತ್ತದೆ (“ಸಾಲವನು ಕೊಂಬಾಗ ಹಾಲೋಗರವುಂಡಂತೆ| ಸಾಲಿಗನು ಬಂದು ಎಳೆವಾಗ ಕಿಬ್ಬದಿಯ| ಕೀಲು ಮುರಿದಂತೆ ಸರ್ವಜ್ಞ"); ಸಾಲವನ್ನು ಪಡೆದವನೂ ಆಗುತ್ತದೆ (“ಬೆಂಡಿರದೆ ಮುಳುಗಿದರು ಗುಂಡೆದ್ದು ತೇಲಿದರು| ಬಂಡಿಯ ನೊಗವು ಚಿಗಿತರೂ ಸಾಲಿಗನು| ಕೊಂಡದ್ದು ಕೊಡನು ಸರ್ವಜ್ಞ").
ಇದೇ ಜಾಡನ್ನು ಹಿಡಿದು ಈಗ ‘ಅಂಬಿಗ’ ಎಂಬ ಚಿರಪರಿಚಿತ ಪದವನ್ನು ಅವಲೋಕಿಸೋಣ. ಅಂಬಿಗ ಎಂದೊಡನೆ ದೋಣಿಯಲ್ಲಿ ಹೊಳೆ ದಾಟಿಸುವವನ ಚಿತ್ರಣವೇ ನಮ್ಮ ಕಣ್ಮುಂದೆ ಬರುವುದು. ಅಧ್ಯಾತ್ಮದ ನೆಲೆಯಲ್ಲಿ ಚಿಂತಿಸಿದರೆ ಅಂಬಿಗ ಎಂದೊಡನೆ “ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣ ನಿನ್ನ ನಂಬಿದೆ..." ದಾಸರ ಪದವೇ ಥಟ್ಟನೆ ನಮಗೆ ನೆನಪಾಗುವುದು.
ರಾಮಾಯಣದಲ್ಲಿ ರಾಮ-ಸೀತೆ-ಲಕ್ಷ್ಮಣರು ವನವಾಸಕ್ಕೆ ಹೊರಟಾಗ ಅವರನ್ನು ಸರಯೂ ನದಿಯ ಆಚೆಗೆ ದಾಟಿಸಿದ ಅಂಬಿಗ ಗುಹನ ನೆನಪೂ ಆದೀತು. ಕನ್ನಡ ವ್ಮಾಯದಲ್ಲಿ “ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ?", “ಹೊಳೆ ದಾಟಿದ ಮೇಲೆ ಅಂಬಿಗರ ಮಿಂಡ" ಮುಂತಾದ ಗಾದೆಗಳೂ ಇವೆ. ಈ ಅಂಬಿಗ ಪದ ರಚನೆಯಾದದ್ದು ಹೇಗೆ? ಅಂಬಿ + ಇಗ = ಅಂಬಿಗ. ಅಂಬಿ ಎಂದರೆ ದೋಣಿ ಅಥವಾ ನಾವೆ ಎಂದು ಅರ್ಥ.
ಅಂಬಿಯನ್ನು ನಡೆಸುವವನು ಅಂಬಿಗ. ಇದು ಲೋಕರೂಢಿಯಲ್ಲಿರುವ, ಜನಸಾಮಾನ್ಯರಿಗೂ ತಿಳಿದಿರುವ ಅರ್ಥ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ‘ಅಂಬಿಗ’ ಪದಕ್ಕೆ ಬಿಲ್ಲುಗಾರ, ಬೇಡರವನು ಎಂಬ ಇನ್ನೊಂದು ಅರ್ಥವೂ ಇದೆ! ಅಂಬು ಎಂದರೆ ಬಾಣ. ಅಂಬು + ಇಗ = ಅಂಬಿಗ. ಬಾಣವನ್ನು ಹಿಡಿದವನು ಅಂಬಿಗ.
ಹಾಗಾದರೆ, ಕಬ್ಬಿಗ ಎಂಬ ಪದ ಕೂಡ, ಕಬ್ಬ + ಇಗ (ಕಬ್ಬವನ್ನು ಬರೆಯುವವನು) ಎಂಬ ಒಂದೇ ರೀತಿಯಲ್ಲಿ ರಚನೆಯಾಗಬೇಕೆಂದಿಲ್ಲ. ಕಬ್ಬು + ಇಗ (ಕಬ್ಬು ಬೆಳೆಯುವವನು) ಎಂದು ಕೂಡ ಆಗಬಹುದು! ಅಂದ ಮೇಲೆ ಕನ್ನಡದ ಪತ್ರಿಕೆಗಳು ಕಬ್ಬು ಬೆಳೆಗಾರರನ್ನು ಕಬ್ಬಿಗರು ಎಂದು ಉಲ್ಲೇಖಿಸುವುದು ಘನಘೋರ ಅಪರಾಧವೇನಲ್ಲ.
ಒಂದು ಸ್ಥಾಪಿತ ಅರ್ಥದೆದುರಿಗೆ ಅದು ಹೊಸದಾಗಿ ವಿಚಿತ್ರವಾಗಿ ಕಾಣುತ್ತದೆ ಅಷ್ಟೇ. ಕಬ್ಬಿಗ ಎಂದರೆ ಕವಿ ಅಂತ ಗೊತ್ತಿಲ್ಲದವರು ಈ ಹೊಸ ಅರ್ಥವನ್ನೇ ನಿಜವೆಂದು ತಿಳಿದಾರು. ಸರಿ, ಇಷ್ಟೆಲ್ಲ ಕೊಂಕಣ ಸುತ್ತಿ ಮೈಲಾರ ತಲುಪಿದ ಮೇಲೆ, ಕವಿ ಎಂಬರ್ಥದಲ್ಲೇ ಕಬ್ಬಿಗ ಪದವನ್ನು ಇನ್ನೊಂದಿಷ್ಟು ವ್ಯಾಖ್ಯಾನಿಸೋಣ. ಸಾಧ್ಯವಾದರೆ ಕಬ್ಬಿಗ ಪದಕ್ಕೆ ಇನ್ನೂ ಒಂದು ಸ್ವಾರಸ್ಯಕರ ಹೊಸ ಅರ್ಥವನ್ನು ಹೊಸೆಯೋಣ. ಕಬ್ಬಿಗ ಎಂದೊಡನೆ ನಮಗೆಲ್ಲ ಕುವೆಂಪು ನೆನಪಾಗುತ್ತಾರೆ. “ಕಬ್ಬಿಗರುದಿಸಿದ ಮಂಗಳಧಾಮ ಕವಿಕೋಗಿಲೆಗಳ ಪುಣ್ಯಾರಾಮ..." ಸಾಲು ನೆನಪಾಗುತ್ತದೆ ಕುವೆಂಪು ಬರೆದ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯಲ್ಲಿ. ‘ಕಬ್ಬಿಗರು’ ಎಂಬ ಶೀರ್ಷಿಕೆಯದೇ ಒಂದು ಕವಿತೆಯನ್ನೂ ಬರೆದಿದ್ದಾರೆ ಕುವೆಂಪು.
ಅವರ ‘ನವಿಲು’ ಕವನಸಂಕಲನದಲ್ಲಿ ಅದು ಪ್ರಕಟವಾಗಿದೆ. ಅದರಲ್ಲಿ “ಕಬ್ಬಿಗರು ವಾಗೈಂದ್ರಜಾಲಿಕರು ನಾವು..." ಎಂಬ ಸಾಲು ಬರುತ್ತದೆ. “ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು..." ಎಂದು ಚೆಲುವ ಕನ್ನಡನಾಡನ್ನು ಕೊಂಡಾಡಿದ್ದಾರೆ ಹುಯಿಲಗೋಳ ನಾರಾಯಣರಾಯರು. ಮಲ್ಲಿಗೆ ಕವಿ ಕೆ.ಎಸ್. ನರಸಿಂಹ ಸ್ವಾಮಿಯವರ ಒಂದು ಕವನದಲ್ಲೂ ಕಬ್ಬಿಗರು ಬರುತ್ತಾರೆ “ಕೊಳಗಳ ದಡಗಳ ಕುಂಜಗಳಲ್ಲಿ ಕೊಳಲನ್ನೂದುವ ಕಬ್ಬಿಗರು... ಹೂವನು ಚುಂಬಿಸಿ ಹೃದಯಕೆ ಒತ್ತುತ ಇನಿಯಳ ನೆನೆಯುವ ಕಬ್ಬಿಗರು..." ಸಾಲುಗಳಲ್ಲಿ.
ಅಷ್ಟೇ ಏಕೆ, ಹಂಸಲೇಖ ಬರೆದ ಶಬ್ದವೇಧಿ... ದಂತದ ಬೊಂಬೆಗೆ ಇವಳೇ ಗಂಧದ ಬೊಂಬೆಗೆ ಇವಳೇ ಉಪಮಾನ ಉಪಮೇಯ..." ಸಾಲುಗಳಲ್ಲೂ ಕಬ್ಬಿಗರು ಕಾಣಿಸಿಕೊಂಡಿದ್ದಾರೆ. ಕನ್ನಡದ ಕಣ್ಮಣಿ ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರು ಡಾ.ರಾಜಕುಮಾರ್ ಅಭಿನಯಿಸಿ ಹಾಡಿದ ಸಾಲುಗಳು ಅವು. ಐದಾರು ಶತಮಾನಗಳಷ್ಟು ಹಿಂದೆ ಸರಿದು ಕನ್ನಡ ಸಾಹಿತ್ಯ ಚರಿತ್ರೆಯನ್ನು ಕೆದಕಿ ನೋಡಿದರೆ ‘ಕಬ್ಬಿಗರ ಕೈಪಿಡಿ’ ಅಂತೊಂದು ಕೃತಿ ಇರುವುದೂ ಗೋಚರಿಸುತ್ತದೆ.
ಇದನ್ನು ರಚಿಸಿದಾತ ಲಿಂಗಮಂತ್ರಿ ಎಂಬ ಪ್ರಸಿದ್ಧ ವಿದ್ವಾಂಸ. ಈತ ವಿಜಯನಗರದ ಅರಸರ ಕಾಲದಲ್ಲಿ ಜೀವಿಸಿದ್ದ ಜೈನ ಅಥವಾ ವೀರಶೈವ ಕವಿಯಾಗಿರಬಹುದು ಎಂದು ಸಂಶೋಧಕರ ಊಹೆ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಕಠಿನ ಹಳಗನ್ನಡ ಪದಗಳು, ನಾನಾರ್ಥ ಗಳು ಮತ್ತು ಸಮಾನಾರ್ಥಕ ಪದಗಳನ್ನು ಕವಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಸುಲಭವಾಗಿ ಪರಿಚಯಿಸುವುದು ಈ ಕೈಪಿಡಿಯ ಮುಖ್ಯ ಉದ್ದೇಶ.
ಸಾಮಾನ್ಯವಾಗಿ ನಿಘಂಟುಗಳು ಅಥವಾ ಕೋಶಗಳು ಗದ್ಯ ರೂಪದಲ್ಲಿರುತ್ತವೆ. ಪದಗಳನ್ನು ಅಕಾರಾದಿ ಪಟ್ಟಿ ಮಾಡಿದ್ದಿರುತ್ತದೆ. ಆದರೆ ಈ ‘ಕಬ್ಬಿಗರ ಕೈಪಿಡಿ ನಿಘಂಟನ್ನು ವಾರ್ಧಕ ಷಟ್ಪದಿ ಪದ್ಯರೂಪದಲ್ಲಿ ಜೋಡಿಸಲಾಗಿದೆ. ಅಂದರೆ ಸಂಸ್ಕೃತದಲ್ಲಿ ಅಮರಕೋಶವು ಶ್ಲೋಕಗಳ ರೂಪದಲ್ಲಿ ಇರುವಂತೆ, ಕನ್ನಡದಲ್ಲಿ ಷಟ್ಪದಿ ರೂಪದಲ್ಲಿ ಶಬ್ದಕೋಶ. ಮತ್ತೂ ಒಂದೆರಡು ಶತಮಾನಗಳಷ್ಟು ಹಿಂದೆ ಸರಿದರೆ ಇನ್ನೊಂದು ಉಜ್ಜ್ವಲ ಕೃತಿ ‘ಕಬ್ಬಿಗರ ಕಾವಂ’ ಎಂಬ ಹೆಸರಿನದು ಥಳಥಳಿಸುತ್ತದೆ.
ಹದಿಮೂರನೆಯ ಶತಮಾನದ ಪ್ರಸಿದ್ಧ ಜೈನ ಕವಿ ಆಂಡಯ್ಯ ರಚಿಸಿರುವ ಈ ಕೃತಿಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಅತ್ಯಂತ ವಿಶಿಷ್ಟ ಹಾಗೂ ಪ್ರಮುಖವಾದದ್ದು ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಆಂಡಯ್ಯನ ಕಾಲದಲ್ಲಿ ಕನ್ನಡ ಕಾವ್ಯಗಳ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚಾಗಿತ್ತು. ಸಂಸ್ಕೃತ ಪದಗಳಿಲ್ಲದೆ ಕನ್ನಡದಲ್ಲಿ ಕಾವ್ಯ ಬರೆಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ. ಇದನ್ನೊಂದು ಸವಾಲಾಗಿ ಸ್ವೀಕರಿಸಿದ ಆಂಡಯ್ಯ, ಸಂಸ್ಕೃತ ಪದಗಳನ್ನು ನೇರವಾಗಿ ಬಳಸದೆ ಕೇವಲ ಅಚ್ಚಗನ್ನಡ ಮತ್ತು ತದ್ಭವ ಪದಗಳನ್ನು ಮಾತ್ರ ಬಳಸಿ ಈ ಇಡೀ ಕಾವ್ಯವನ್ನು ರಚಿಸಿದ್ದಾನೆ. ಗದ್ಯ ಮತ್ತು ಪದ್ಯಗಳೆರಡೂ ಮಿಶ್ರಿತವಾಗಿರುವ ಸಾಂಪ್ರದಾಯಿಕ ‘ಚಂಪೂ’ ಶೈಲಿಯನ್ನು ಅಳವಡಿಸಿಕೊಂಡಿದ್ದಾನೆ.
ಕಾವ್ಯರಚನೆಗೆ ತನಗೆ ಪ್ರೇರಣೆ ಸಿಕ್ಕ ಹಿನ್ನೆಲೆ ಹಾಗೂ ತನ್ನ ಭಾಷಾ ನಿಲುವನ್ನು ಈ ಕೆಳಗಿನ ಪ್ರಸಿದ್ಧ ಸಾಲುಗಳಲ್ಲಿ ಸ್ಪಷ್ಟಪಡಿಸಿದ್ದಾನೆ: “ಸೊಗವಿಪ ಸಕ್ಕದಂ ಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ| ಬಗೆಗೊಳೆ ಪೇಳಿಲಾರರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ| ಬ್ಬಿಗರದು ಮಾತನಾಡಿದವೊಲಂದವನಾಳ್ದಿರೆ ಪೇಳ್ವ್ ಬಲ್ಪು ನೆ| ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊ ಳ್ಳದಾರೊಳಂ||" (ಭಾವಾರ್ಥ: “ಸಂಸ್ಕೃತವನ್ನು ಬೆರೆಸದಿದ್ದರೆ ಕನ್ನಡ ದಲ್ಲಿ ಕಾವ್ಯ ಚಂದಗಾಣದು ಎಂದು ಭಾವಿಸುವವರ ಬಯಕೆ ಯನ್ನು ಈಡೇರಿಸಲು, ಮುನ್ನಿನ ಹಿರಿಯ ಕವಿಗಳು ಆಡಿದ ಅಚ್ಚಗನ್ನಡದ ಸೊಗಸಿನಲ್ಲೇ, ಆ ಭಾಷಾಬಂಧಕ್ಕೆ ಯಾವುದೇ ಕುಂದು ಬಾರದಂತೆ ಬಿಗಿಯಾಗಿ ಈ ಕಬ್ಬಿಗರ ಕಾವನನ್ನು ಪ್ರೀತಿಯಿಂದ ರಚಿಸಿದ್ದೇನೆ."
ಕನ್ನಡ ನಾಡು ಮತ್ತು ನುಡಿಯ ಸೌಂದರ್ಯವನ್ನೂ “ಕನ್ನಡಮೆನಿಪ್ಪನಾಡು ಚಲ್ವಾಯ್ತು ಮೆಲ್ಲೆಲರಿಂಪೂತಕೊಳಂಗಳಿಂ ಕಾಲೂರ್ಗಳಿಂ ಕೆಯ್ಗಳಿಂ..." (ಕನ್ನಡದ ನಾಡು ತಂಪಾದ ತಂಗಾಳಿ, ತಾವರೆ ಹೂ ಬಿಟ್ಟ ಕೆರೆಗಳು, ಹರಿಯುವ ಕಾಲುವೆಗಳು ಹಾಗೂ ಹಸಿರು ಗದ್ದೆಗಳಿಂದ ಕಣ್ಮನ ಸೆಳೆಯುವಂತೆ ಅತ್ಯಂತ ಸುಂದರವಾಗಿದೆ) ಎನ್ನುತ್ತ ಆಂಡಯ್ಯನು ತುಂಬುಹೃದಯದಿಂದ ವರ್ಣಿಸಿದ್ದಾನೆ. ಸಂಸ್ಕೃತ ಭೂಯಿಷ್ಠವಲ್ಲದ ಕಾರಣ ಈ ಕಾವ್ಯದ ಭಾಷೆ ಅತ್ಯಂತ ಮೃದುವಾಗಿ, ಕಿವಿಗೆ ಇಂಪಾಗಿ ಮತ್ತು ಜನಸಾಮಾನ್ಯರಿಗೂ ಅರ್ಥವಾಗುವಂತಹ ಸೊಗಸಾದ ದೇಶಿ ಶೈಲಿಯಲ್ಲಿದೆ ಎಂದು ವಿದ್ವಾಂಸರ ಅಭಿಪ್ರಾಯ.
ಸಂಸ್ಕೃತ ಪದಗಳ ಭೋರ್ಗರೆತದ ನಡುವೆ “ನನ್ನ ತಾಯಿನುಡಿ ಕನ್ನಡಕ್ಕೆ ತನ್ನದೇ ಆದ ಸ್ವತಂತ್ರ ಅಸ್ತಿತ್ವವಿದೆ" ಎಂದು ಸಾಬೀತುಪಡಿಸಲು ಆತ ಕೈಕೊಂಡ ಭಾಷಾ ಪ್ರಯೋಗ ಇಂದಿಗೂ ಅನನ್ಯ ವೆನಿಸಿದೆ. ಆಂಡಯ್ಯ ಹೊಯ್ಸಳ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಬಾಳಿದವನು. ಜೈನ ಧರ್ಮಕ್ಕೆ ಸೇರಿದವನಾಗಿದ್ದು, ಈತನ ಮನೆತನವು ಲೆಕ್ಕಿಗರ (ಲೆಕ್ಕ ಬರೆಯುವ ಕರಣಿಕರ) ಕುಟುಂಬವಾಗಿತ್ತು ಎನ್ನಲಾಗಿದೆ.
ಧರ್ಮಶ್ರದ್ಧೆ, ನೀತಿ-ನಿಷ್ಠೆ ಮತ್ತು ತಾಯಿನುಡಿಯ ಮೇಲಿನ ಅಪಾರ ಗೌರವ ಆಂಡಯ್ಯನಿಗೆ ರಕ್ತಗತವಾಗಿ ಒದಗಿ ಬಂದಿದ್ದವು. ಬನವಾಸಿ ಪ್ರಾಂತ್ಯವನ್ನು ಆಳುತ್ತಿದ್ದ ಕದಂಬ ವಂಶದ ದೊರೆ ಕಾಮದೇವನು ಈತನಿಗೆ ರಾಜಾಶ್ರಯ ನೀಡಿದ್ದನು. ಆಂಡಯ್ಯನ ಕಾವ್ಯದಲ್ಲಿ ಬರುವ ಕಾಮದೇವನ ಪಾತ್ರಕ್ಕೂ ಈ ಕದಂಬ ದೊರೆಗೂ ಐತಿಹಾಸಿಕ ಸಾಮ್ಯ ಇದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕವಿಯ ತವರು ನೆಲ ಬನವಾಸಿ ಪ್ರಾಂತ್ಯ (ಇಂದಿನ ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಭಾಗ). ಈ ಕಾರಣದಿಂದಲೇ ಆಂಡಯ್ಯನ ಕಾವ್ಯದಲ್ಲಿ ಬನವಾಸಿಯ ಪ್ರಕೃತಿ ಸೌಂದರ್ಯದ ವರ್ಣನೆ ದಟ್ಟವಾಗಿ ಮೂಡಿಬಂದಿದೆ. ಕಬ್ಬಿಗರ ಕಾವಂ ಕೃತಿಗೆ ಕವಿಯು ಇಟ್ಟಿದ್ದ ಮೂಲ ಹೆಸರು ‘ಕಾವನ ಗೆಲ್ಲಂ’ (ಮದನ ವಿಜಯ) ಎಂದಾಗಿತ್ತು.
ಆದರೆ ಸಂಸ್ಕೃತದ ಸಹಾಯವಿಲ್ಲದೆ ಅಚ್ಚಕನ್ನಡದಲ್ಲಿ ಬರೆದು ಕವಿಲೋಕವನ್ನು ರಕ್ಷಿಸಿದ ಕೃತಿ ಎಂಬ ಹೆಮ್ಮೆಯಿಂದ, ತಲೆಮಾರುಗಳಿಂದ ಇದಕ್ಕೆ ‘ಕಬ್ಬಿಗರ ಕಾವಂ’ ಎಂಬ ಹೆಸರೇ ಅತ್ಯಂತ ಜನಪ್ರಿಯವಾಗಿ ಸ್ಥಿರವಾಗಿದೆ. ಈ ಕಾವ್ಯದ ಕಥಾವಸ್ತುವು ಸಂಪೂರ್ಣವಾಗಿ ಕಲ್ಪನಾ ಆಧಾರಿತವಾಗಿದ್ದು, ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಪ್ರೇಮದೇವತೆ ಮದನ (ಕಾಮದೇವ ಮನ್ಮಥ) ಮತ್ತು ಶಿವನ ನಡುವೆ ನಡೆಯುವ ಯುದ್ಧವೇ ಈ ಕಾವ್ಯದ ಕೇಂದ್ರ ಬಿಂದು. ಚಂದ್ರನನ್ನು ತನ್ನ ಮುಡಿಯಲ್ಲಿ ಮುಡಿದುಕೊಂಡಿರುವ ಶಿವನು, ಒಮ್ಮೆ ಮದನನ ಪ್ರಿಯ ಗೆಳೆಯನಾದ ಚಂದ್ರನನ್ನು ಬಂಧಿಸಿಡುತ್ತಾನೆ.
ಇದರಿಂದ ಕೋಪಗೊಂಡ ಮದನನು ತನ್ನ ಮಿತ್ರನನ್ನು ಬಿಡಿಸಲು ಶಿವನ ಮೇಲೆಯೇ ಯುದ್ಧ ಸಾರುತ್ತಾನೆ. ತನ್ನ ಪುಷ್ಪಬಾಣಗಳಿಂದ (ಅರವಿಂದ, ಅಶೋಕ, ನವಮಲ್ಲಿಕಾ, ಚೂತ, ಮತ್ತು ನೀಲೋತ್ಪಲ ಹೂವುಗಳ ಬಾಣಗಳು) ಶಿವನನ್ನೇ ಸಮ್ಮೋಹಗೊಳಿಸಿ, ಯುದ್ಧದಲ್ಲಿ ಶಿವನನ್ನು ಸೋಲಿಸಿ ವಿಜಯಶಾಲಿಯಾಗುತ್ತಾನೆ. ಸಾಮಾನ್ಯವಾಗಿ ಪುರಾಣಗಳಲ್ಲಿ ಶಿವನು ಕಾಮನನ್ನು ತನ್ನ ಮೂರನೇ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ ಕಥೆ ಪ್ರಸಿದ್ಧವಾಗಿರುವುದು. ಆದರೆ ಆಂಡಯ್ಯನ ಈ ಕೃತಿಯಲ್ಲಿ ತದ್ವಿರುದ್ಧವಾಗಿ, ಕಾಮನೇ ಶಿವನನ್ನು ಗೆದ್ದಂತೆ ಚಿತ್ರಿಸಿರುವುದು ಈ ಕೃತಿಯ ಕಲ್ಪನಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ.
ಅಂದ ಹಾಗೆ ಮನ್ಮಥನು ಪುಷ್ಪಬಾಣಗಳನ್ನು ಬಿಡಲಿಕ್ಕೆ ಬಳಸುವ ಬಿಲ್ಲು ಯಾವುದು ಹೇಳಿ? ಶಿವನು ಹಿಡಿದ ಪಿನಾಕ ಅಲ್ಲ, ಶ್ರೀರಾಮನು ಹಿಡಿದ ಕೋದಂಡ ಅಲ್ಲ, ಅರ್ಜುನನು ಹಿಡಿದ ಗಾಂಡೀವವೂ ಅಲ್ಲ. ಮನ್ಮಥನ ಬಿಲ್ಲೆಂದರೆ ಒಂದು ಕಬ್ಬಿನ ಜಲ್ಲೆ!
ಹಾಗಾದರೆ, ಕೈಯಲ್ಲಿ ಕಬ್ಬು ಹಿಡಿದ ಮನ್ಮಥನನ್ನೂ ‘ಕಬ್ಬಿಗ’ ಎನ್ನಬಹುದಲ್ಲ!? ಎಂಬ ಈ ಒಂದು ಹೊಸ ಹೊಳಹಿನೊಂದಿಗೆ ಕನ್ನಡದ ಕಬ್ಬವೆಂಬ ಸುಮಧುರ ಕಬ್ಬಿನ ತೋಟದಲ್ಲಿ, ಕನ್ನಡ ಹಬ್ಬದಂದು ಈ ಕಬ್ಬಿಗವಿಹಾರ ಸಮಾಪ್ತವಾದುದು. ಎಲ್ಲರಿಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು