ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr N Someshwara Column: ನೀಲಿ ಮಕ್ಕಳಿಗೆ ಹೊಸ ಬದುಕನ್ನು ನೀಡಿದ ತ್ರಿಮೂರ್ತಿಗಳು

ಗ್ಲೂಕೋಸ್ ಮತ್ತು ಆಕ್ಸಿಜನ್ ಇರುವ ರಕ್ತವನ್ನು ಹೃದಯವು ಪಂಪ್ ಮಾಡುತ್ತದೆ. ಆಗ ರಕ್ತವು ತನ್ನಲ್ಲಿರುವ ಗ್ಲೂಕೋಸ್ ಮತ್ತು ಆಕ್ಸಿಜನ್ನನ್ನು ನಮ್ಮ ದೇಹದಲ್ಲಿರುವ ಪ್ರತಿಯೊಂದು ಜೀವಕೋಶ ಕ್ಕೂ ಪೂರೈಸುತ್ತದೆ. ಜೀವಕೋಶ ಗಳ ಒಳಗೆ ಆಕ್ಸಿಜನ್ ಎಂಬ ಕಿಡಿಯು ಗ್ಲೂಕೋಸ್ ಎಂಬ ಇಂಧನವನ್ನು ಉರಿಸಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಆ ಶಕ್ತಿಯನ್ನು ಬಳಸಿಕೊಂಡು ನಮ್ಮ ಜೀವಕೋಶಗಳು ಕೆಲಸ ಮಾಡುತ್ತವೆ.

ಹಿಂದಿರುಗಿ ನೋಡಿದಾಗ

ಹೃದಯವು ಭಗವಂತನ ಆವಾಸ ಸ್ಥಾನ, ದೇವರು ನೆಲೆಸಿರುವ ಪವಿತ್ರ ಸ್ಥಳವೇ ನಮ್ಮ ಹೃದಯ !

ನಾವು ಹುಟ್ಟುವುದಕ್ಕೆ ಮೊದಲೇ ಕೆಲಸವನ್ನು ಮಾಡಲಾರಂಭಿಸಿ, ನಾವು ಸಾಯುವ ಕೊನೆಯ ಕ್ಷಣದವರೆಗೆ ಕೆಲಸ ಮಾಡುತ್ತಿರುವ ಅದ್ಭುತ ಅಂಗ ಎಂದರೆ ನಮ್ಮ ಹೃದಯ. ನಾವು ಬದುಕಿರಲು ಎರಡು ಕಚ್ಚಾ ವಸ್ತುಗಳು ಬೇಕು. ಮೊದಲನೆಯದು ಗ್ಲೂಕೋಸ್. ಇದು ನಾವು ತಿನ್ನುವ ಆಹಾರ ದಿಂದ ದೊರೆಯುತ್ತದೆ. ಎರಡನೆಯದು ಆಕ್ಸಿಜನ್. ಇದನ್ನು ನಮ್ಮ ಶ್ವಾಸಕೋಶಗಳು ಪೂರೈಸುತ್ತವೆ.

ಗ್ಲೂಕೋಸ್ ಮತ್ತು ಆಕ್ಸಿಜನ್ ಇರುವ ರಕ್ತವನ್ನು ಹೃದಯವು ಪಂಪ್ ಮಾಡುತ್ತದೆ. ಆಗ ರಕ್ತವು ತನ್ನಲ್ಲಿರುವ ಗ್ಲೂಕೋಸ್ ಮತ್ತು ಆಕ್ಸಿಜನ್ನನ್ನು ನಮ್ಮ ದೇಹದಲ್ಲಿರುವ ಪ್ರತಿಯೊಂದು ಜೀವಕೋಶ ಕ್ಕೂ ಪೂರೈಸುತ್ತದೆ. ಜೀವಕೋಶ ಗಳ ಒಳಗೆ ಆಕ್ಸಿಜನ್ ಎಂಬ ಕಿಡಿಯು ಗ್ಲೂಕೋಸ್ ಎಂಬ ಇಂಧನ ವನ್ನು ಉರಿಸಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಆ ಶಕ್ತಿಯನ್ನು ಬಳಸಿಕೊಂಡು ನಮ್ಮ ಜೀವಕೋಶಗಳು ಕೆಲಸ ಮಾಡುತ್ತವೆ.

ದಣಿವರಿಯದ ಪಂಪ್: ನಮ್ಮ ಹೃದಯವು ಒಂದು ಸ್ನಾಯು ರಚನೆ. ನಾಲ್ಕು ಗೂಡುಗಳಿವೆ. ಮೇಲು ಗಡೆಯ ಎರಡು ಗೂಡುಗಳು ಎಡ ಮತ್ತು ಬಲ ಹೃತ್ಕರ್ಣಗಳು. ಕೆಳಗಡೆಯ ಎರಡು ಗೂಡು ಗಳು ಎಡ ಮತ್ತು ಬಲ ಹೃತ್ಕುಕ್ಷಿಗಳು. ಇವನ್ನು ಪ್ರತ್ಯೇಕಿಸುವ ಒಂದು ನಡುತಡಿಕೆಯಿದೆ.

ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿಯ ನಡುವೆ ದ್ವಿದಳ ಕವಾಟವಿದೆ. ಬಲ ಹೃತ್ಕರ್ಣ ಮತ್ತು ಹೃತ್ಕುಕ್ಷಿಯ ನಡುವೆ ತ್ರಿದಳ ಕವಾಟವಿದೆ. ಶ್ವಾಸಕ ಧಮನಿಯು (ಪಲ್ಮನರಿ ಆರ್ಟರಿ) ಮಲ ಹೃತ್ಕುಕ್ಷಿಯಲ್ಲಿ ಹುಟ್ಟಿ, ಆಕ್ಸಿಜನ್ ಕೊರತೆಯಿರುವ ರಕ್ತವನ್ನು ಶ್ವಾಸಕೋಶಗಳಿಗೆ ಸಾಗಿಸುತ್ತದೆ.

ಇದನ್ನೂ ಓದಿ: Dr N Someshwara Column: ಬ್ರಿಟಿಷ್‌ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಲಿಂಬೆ !

ಶ್ವಾಸಕೋಶಗಳಿಂದ ಆಕ್ಸಿಜನ್ ಭರಿತ ರಕ್ತವು ಶ್ವಾಸಕ ಸಿರೆಗಳ ಮೂಲಕ ಎಡ ಹೃತ್ಕುಕ್ಷಿಗೆ ಬರುತ್ತದೆ. ಎಡ ಹೃತ್ಕುಕ್ಷಿಯಿಂದ ಹುಟ್ಟುವ ಮಹಾಧಮನಿ ಅಥವಾ ಅಯೋರ್ಟವು ಹೃದಯವು ರಕ್ತವನ್ನು ಪಂಪ್ ಮಾಡಿದಾಗ, ರಕ್ತವು ಈ ಮಹಾಧಮನಿಯ ಮೂಲಕ ಇಡೀ ದೇಹಕ್ಕೆ ಆಕ್ಸಿಜನ್ ಭರಿತ ರಕ್ತವನ್ನು ಪಂಪ್ ಮಾಡುತ್ತದೆ.

ಫ್ಯಾಲೋ ಚತುಷ್ಟಯ: ಕಾಯಿಲೆಗಳು ನಾನಾ ಕಾರಣಗಳಿಂದ ಬರುತ್ತವೆ. ಅವುಗಳಲ್ಲಿ ಮುಖ್ಯ ವಾದದ್ದು ಹುಟ್ಟಿನಿಂದ ಬರುವ, ಜನ್ಮದತ್ತ ಕಾಯಿಲೆಗಳು (ಕಂಜೆ ನೈಟಲ್ ಡಿಸೀಸಸ್). ಕೆಲವು ಮಕ್ಕಳಿಗೆ ತುಟಿ ಸೀಳಿರಬಹುದು. ಕೆಲವು ಮಕ್ಕಳ ಕಾಲುಗಳು ತಿರುಚಿಕೊಂಡಿರಬಹುದು. ಕೆಲವು ಮಕ್ಕಳಿಗೆ ಹುಟ್ಟಿನಿಂದಲೇ ಕಣ್ಣುಪೊರೆ ಬಂದಿರಬಹುದು. ಹೀಗೆಯೇ ಕೆಲವು ಮಕ್ಕಳಿಗೆ ಹುಟ್ಟಿ ನಿಂದಲೇ ಅವುಗಳ ಹೃದಯದಲ್ಲಿ ನಾನಾ ದೋಷಗಳಿರುತ್ತವೆ. ಅವುಗಳಲ್ಲಿ ಫ್ಯಾಲೋ ಚತುಷ್ಟಯ (ಟೆಟ್ರಾಲಜಿ ಆಫ್ ಫ್ಯಾಲೊ; ಫ್ಯಾಲೊ ಎಂಬ ತಜ್ಞನು ಮೊದಲ ಬಾರಿಗೆ ಈ ವೈಪರೀತ್ಯವನ್ನು ಗಮನಿಸಿ ವಿವರಿಸಿದ) ಎಂಬ ದೋಷವು ಬಹಳ ಗಂಭೀರವಾದದ್ದು. ಹೆಸರೇ ಸೂಚಿಸುವ ಹಾಗೆ, ಈ ಮಕ್ಕಳಲ್ಲಿ ನಾಲ್ಕು ರೀತಿಯ ಹೃದಯ ರಚನಾ ದೋಷಗಳಿರುತ್ತವೆ. ‌

ಮೊದಲನೆಯದು ಎರಡು ಹೃತ್ಕುಕ್ಷಿಗಳ ನಡುವೆ ಇರುವ ತಡಿಕೆಯಲ್ಲಿ ರಂಧ್ರವಿರುತ್ತದೆ. ಎರಡನೆ ಯದು ಹೃದಯದ ಬಲ ಹೃತ್ಕುಕ್ಷಿಯಿಂದ ಶ್ವಾಸಕೋಶಗಳಿಗೆ ಆಕ್ಸಿಜನ್ ಕೊರತೆಯ ರಕ್ತವನ್ನು ಒಯ್ಯುವ ಶ್ವಾಸಕ ಧಮನಿಯು ಕಿರಿದಾಗಿರುತ್ತದೆ. ಹಾಗಾಗಿ ಬಲ ಹೃತ್ಕುಕ್ಷಿಯು ರಕ್ತವನ್ನು ಪಂಪ್ ಮಾಡಲು ಹೆಣಗಿ ಹೆಣಗಿ ಅತಿವೃದ್ಧಿತವಾಗುತ್ತದೆ. ಇದು ಮೂರನೆಯ ದೋಷ.

ನಾಲ್ಕನೆಯದು ಮಹಾಧಮನಿಯು ಸ್ವತಂತ್ರವಾಗಿ ಹುಟ್ಟುವ ಬದಲು, ಎಲ್ಲಿ ನಡುತಡಿಕೆಯಲ್ಲಿ ರಂಧ್ರವಿದೆಯೋ ಅಲ್ಲೇ ಹುಟ್ಟಿಕೊಳ್ಳುತ್ತದೆ. ಆಗ ಕೇವಲ ಆಕ್ಸಿಜನ್ ಭರಿತ ರಕ್ತವು ಮಹಾಧಮನಿಯ ಮೂಲಕ ಇಡೀ ದೇಹಕ್ಕೆ ಸರಬರಾಜು ಆಗುವ ಬದಲು ಮಿಶ್ರರಕ್ತವು ಸರಬರಾಜಾಗುತ್ತದೆ.

Screenshot_2 ಒಕ

ಪರಿಶುದ್ಧ ಆಕ್ಸಿಜನ್ ಭರಿತ ರಕ್ತವು ಶಿಶುವಿಗೆ ದೊರೆಯದ ಕಾರಣ, ಇಡೀ ದೇಹವು ನೀಲಿಗಟ್ಟುತ್ತದೆ. ವಿಶೇಷವಾಗಿ ತುಟಿ, ಮುಖ ಮತ್ತು ಬೆರಳುಗಳಲ್ಲಿ ನೀಲಿಯ ಛಾಯೆಯು ದಟ್ಟವಾಗುತ್ತದೆ (ಸಯನೋಸಿಸ್). ಇಂತಹ ಮಕ್ಕಳನ್ನು ನೀಲಶಿಶುಗಳು ಇಲ್ಲವೇ ಬ್ಲೂ ಬೇಬೀಸ್ ಎಂದು ಕರೆದು, ಅದರಿಂದ ಆಗುವ ರೋಗಲಕ್ಷಣಗಳನ್ನು ನೀಲ ಶಿಶುಗಳ ಲಕ್ಷಣಾವಳಿ ಅಥವಾ ಬ್ಲೂ ಬೇಬಿ ಸಿಂಡ್ರೋಮ್ ಎಂದು ಕರೆಯುತ್ತಿದ್ದರು.

40ರ ದಶಕ: ಕಳೆದ ಶತಮಾನದ 40ರ ದಶಕದಲ್ಲಿ ನೀಲ ಮಕ್ಕಳು ಹುಟ್ಟಿದಾಗ, ವೈದ್ಯರು ನಿರಾಶೆಯ ಮಾತುಗಳನ್ನು ಆಡುತ್ತಿದ್ದರು. ‘ಇದು ದೈವಾಧೀನ.’ ‘ಇದಕ್ಕೆ ಚಿಕಿತ್ಸೆ ಇಲ್ಲ.’ ‘ಮಗು ಹೆಚ್ಚು ದಿನ ಬದುಕುವುದಿಲ್ಲ.’ ವೈದ್ಯರು ಆಡುತ್ತಿದ್ದ ಇಂತಹ ನಿರ್ಭಾವುಕ ಮಾತುಗಳು ತಾಯಂದಿರ ಕಿವಿಗೆ ಸಿಡಿಲಿನಂತೆ ಬೀಳುತ್ತಿದ್ದವು. ಆದರೆ, ವೈದ್ಯರೂ ಸಹ ಅಸಹಾಕರಾಗಿದ್ದರು. ಫ್ಯಾಲೋ ಚತುಷ್ಟ ವನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯು ನಮ್ಮ ಮನಸ್ಸಿನಲ್ಲಿ ಬರಬಹುದು.

ಆದರೆ, ಅದು ಅಂದಿನ ದಿನಗಳಲ್ಲಿ ಅದು ಅಸಾಧ್ಯವಾಗಿತ್ತು. ಹೃದಯವು ಭಗವಂತನ ಆವಾಸ ಸ್ಥಾನ. ಅವನು ನೆಲೆಸಿರುವ ಪವಿತ್ರ ಸ್ಥಳ. ಅಂತಹ ಹೃದಯವನ್ನು ಸೀಳುವುದು ರೌರವ ನರಕಕ್ಕೆ ಹಾದಿಯನ್ನು ತೋರುತ್ತದೆ ಎಂದು ಜನಸಾಮಾನ್ಯರಲ್ಲ, ವೈದ್ಯರೂ ಭಾವಿಸಿದ್ದ ದಿನಗಳು. ಹಾಗಾಗಿ ಫ್ಯಾಲೋ ಚತುಷ್ಟಯ ವನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸುವ ವಿಚಾರವನ್ನು ವೈದ್ಯರು ಗಂಭೀರ ವಾಗಿ ಪರಿಗಣಿಸಿರಲಿಲ್ಲ.

ಹೃದಯವಂತೆ: ಇಂತಹ ವಿಷಮ ಸ್ಥಿತಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಿದವಳು ಅಮೆರಿಕದ ಶಿಶು ಹೃದಯ ವೈದ್ಯೆ ‘ಹೆಲೆನ್ ಬ್ರೂಕ್ ಟಾಸಿಗ್’(1898-1986). ಈಕೆಯು ತನ್ನ ಬಾಲ್ಯ ದಲ್ಲಿ ಎದುರಿಸಿದ ಸವಾಲುಗಳು ಅಸಾಮಾನ್ಯವಾಗಿದ್ದವು. ಅವರಿಗೆ ಡಿಸ್ಲೆಕ್ಸಿಯ ಎಂಬ ಸಮಸ್ಯೆ ಯಿತ್ತು. ಸರಿಯಾಗಿ ಓದುವ, ಭಾಷೆಯನ್ನು ನಿಖರವಾಗಿ ಬಳಸುವ ಸಾಮರ್ಥ್ಯವಿರಲಿಲ್ಲ. ಬಾಲ್ಯದಲ್ಲಿ ಕಾಡಿದ ಸೋಂಕಿನ ಫಲವಾಗಿ ಆಕೆಯ ಕಿವಿಗಳು ಮಂದವಾಗಿದ್ದವು. ವೈದ್ಯರು ಸ್ತೆಥಸ್ಕೋಪಿನಿಂದ ಹೃದಯ, ಎದೆಗೂಡು, ಉದರದ ಶಬ್ದಗಳನ್ನು ವಿಶ್ಲೇಷಿಸಲು ಕಿವಿಗಳು ಚುರುಕಾಗಿರಬೇಕು. ಆದರೆ, ಅವು ಮಂದವಾಗಿದ್ದವು.

ಹೆಲೆನ್ ಅವರು ತಮ್ಮ ವೀಕ್ಷಣಾ ಸಾಮರ್ಥ್ಯ ಹಾಗೂ ಸ್ಪರ್ಶ ಸಂವೇದನೆಗಳ ಸೂಕ್ಷ್ಮತೆಯನ್ನು ಮುಪ್ಪಟ್ಟು ಬೆಳೆಸಿಕೊಂಡರು. ತಮ್ಮ ವೀಕ್ಷಣಾ ಸಾಮರ್ಥ್ಯದಿಂದ ರೋಗಿಯ ಮುಖ, ಬೆರಳಿನ ಬಣ್ಣ, ಉಸಿರಾಟದ ರೀತಿ, ದಣಿವಿನ ಲಯ - ಇವೆಲ್ಲ ಗ್ರಹಿಸಬಲ್ಲವರಾದರು. ಅವರು ಸ್ತೆಥಸ್ಕೋಪಿನ ಶಬ್ದಗಳನ್ನು ಕೇಳುವುದಕ್ಕಿಂತ ಮಗುವಿನ ಬದುಕಿನ ಧ್ವನಿಯನ್ನು ಆಲಿಸಲು ಕಲಿತರು.

ಯುರೇಕಾ!: ಡಾ.ಹೆಲೆನ್ ಅವರು ಬಾಸ್ಟನ್ನಿನ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡು ತ್ತಿದ್ದರು. ಅಲ್ಲಿ ಅವರು ಅಸಂಖ್ಯ ನೀಲಿ ಮಕ್ಕಳನ್ನು ನೋಡುತ್ತಿದ್ದರು. ಈ ಮಕ್ಕಳ ಬದುಕು ನೀರಿನ ಮೇಲಿನ ಗುಳ್ಳೆಯಂತೆ, ಯಾವಾಗ ಬೇಕಾದರೂ ಸಾವಿಗೆ ತುತ್ತಾಗಬಹುದಾದ ಸಾಧ್ಯತೆಯು ಆಕೆಯ ಮನವನ್ನು ಕಲಕಿತು. ಹಾಗಾಗಿ ಈ ಬಗ್ಗೆ ತೀವ್ರವಾಗಿ ಮನನವನ್ನು ಮಾಡಿದರು. ಒಂದು ದಿನ ಟಾಸಿಗ್ ಅವರ ಪಾಲಿಗೆ ಯುರೇಕಾ ಕ್ಷಣವು ಒದಗಿ ಬಂದಿತು. ಅವರಿಗೆ ಹೊಳೆದ ಒಂದು ಸೂಕ್ಷ್ಮ ವಿಚಾರವು ವೈದ್ಯಕೀಯ ಇತಿಹಾಸದಲ್ಲಿ ನವಮನ್ವಂತರವನ್ನು ಆರಂಭಿಸಿತು.

ಡಕ್ಟಸ್ ಆರ್ಟೀರಿಯೋಸಿಸ್ ಎನ್ನುವುದು ಒಂದು ರಕ್ತನಾಳ. ಇದು ಶಿಶುವು ತಾಯಿಯ ಗರ್ಭದಲ್ಲಿರು ವಾಗ ಜಾಗೃತವಾಗಿರುತ್ತದೆ. ಇದು ಮಗುವಿನ ಹೃದಯದ ಶ್ವಾಸಕ ಧಮನಿ ಅಥವಾ ಪಲ್ಮನರಿ ಆರ್ಟರಿಯಿಂದ ಶ್ವಾಸಕೋಶಕ್ಕೆ ಆಕ್ಸಿಜನ್ ಕೊರತೆಯ ರಕ್ತವನ್ನು ಕೊಂಡೊಯ್ಯುವ ನಾಳ. ಮಹಾಧಮನಿ ಅಂದರೆ ದೇಹಕ್ಕೆ ಆಕ್ಸಿಜನ್ ಭರಿತ ರಕ್ತವನ್ನು ಕೊಂಡೊಯ್ಯುವ ಮುಖ್ಯ ನಾಳ. ಡಕ್ಟಸ್ ಆರ್ಟೀರಿಯೋಸಸ್, ಇವೆರಡರ ನಡುವೆ ಒಂದು ಪುಟ್ಟ ನಾಳಸೇತುವೆಯಾಗಿ (ಶಂಟ್) ಕೆಲಸವನ್ನು ಮಾಡುತ್ತಿರುತ್ತದೆ. ಶಿಶುವಿನ ಜನನವಾಗುತ್ತಿರುವಂತೆಯೇ, ಶಿಶುವಿನ ಶ್ವಾಸಕೋಶ ಗಳು ಸ್ವತಂತ್ರವಾಗಿ ಕೆಲಸವನ್ನು ಮಾಡಲು ಆರಂಭಿಸಿದಾಗ, ಈ ಸೇತುವೆಯು ಸ್ವಯಂ ಕುಗ್ಗಿ ಇಲ್ಲವಾಗುತ್ತದೆ. ಇದನ್ನು ಸ್ಮರಿಸಿಕೊಂಡ ಟಾಸಿಗ್, ತಾಯಿಯ ಗರ್ಭದಲ್ಲಿರುವವರಿಗೂ ಶಿಶುವಿಗೆ ಜೀವವನ್ನು ನೀಡಿದ ಈ ಡಕ್ಟಸ್ ಆರ್ಟೀರಿಯೋಸಸ್ ರಕ್ತನಾಳದಂತಹ ಮತ್ತೊಂದು ರಕ್ತನಾಳದ ಸೇತುವೆಯನ್ನು ಕೃತಕವಾಗಿ ಯಾಕೆ ನಿರ್ಮಿಸಬಾರದು ಎಂದು ಯೋಚಿಸಿದಳು. ಕೂಡಲೇ ತನ್ನ ಯೋಚನೆಯನ್ನು ಪ್ರಸಿದ್ಧ ಶಸ್ತ್ರಚಿಕಿತ್ಸಕ ಡಾ.ಅಪ್ರೆಡ್ ಬ್ಲೇಲಾಕ್ (1899-1964) ಅವರ ಮುಂದೆ ಇಟ್ಟಳು.

ಜಗತ್ತಿನಲ್ಲಿ ಇದುವರೆಗೂ ಯಾರೂ ಮಾಡದಿರುವ ಶಸ್ತ್ರಚಿಕಿತ್ಸೆಯೊಂದನ್ನು ಮಾಡುವಂತೆ ಟಾಸಿಗ್ ಆಹ್ವಾನಿಸಿದಾಗ ಬ್ಲೇಲಾಕ್ ಒಂದು ಕ್ಷಣ ಸ್ತಂಬೀಭೂತರಾದರು. ಆದರೆ, ಟಾಸಿಗ್ ಅವರ ಸಲಹೆಯು ಸೈದ್ಧಾಂತಿಕವಾಗಿ ಯಶಸ್ವಿಯಾಗುವ ಸಾಧ್ಯತೆಯನ್ನು ಪಡೆದಿತ್ತು. ಆದರೆ, ಅದನ್ನು ಕಾರ್ಯ ರೂಪಕ್ಕೆ ತರುವುದು ಒಂದು ಸವಾಲಿನ ಕೆಲಸವಾಗಿತ್ತು. ಈ ಪ್ರಯೋಗವನ್ನು ಮೊದಲು ಮನುಷ್ಯರ ಮೇಲೆ ಪ್ರಯೋಗಿಸುವ ಬದಲು ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶಸ್ಸನ್ನು ಪಡೆಯಬೇಕಾಗಿತ್ತು. ಯಾವ ರಕ್ತನಾಳವನ್ನು, ಯಾವ ರಕ್ತನಾಳಕ್ಕೆ ಜೋಡಿಸಬೇಕು, ರಕ್ತನಾಳವನ್ನು ಜೋಡಿಸಬೇಕಾದರೆ, ಅತ್ಯಂತ ಸೂಕ್ಷ್ಮ ಸ್ವರೂಪದ ಹೊಲಿಗೆಯ ತಂತ್ರವು ಕರಗತವಾಗಿರಬೇಕು.

ಒಂದು ವೇಳೆ ರಕ್ತದ ಒತ್ತಡವನ್ನು ತಡೆದುಕೊಳ್ಳಲಾಗದೆ ಹೊಲಿಗೆಯು ಬಿಚ್ಚಿಕೊಂಡು ಬಿಟ್ಟರೆ? ಅಥವಾ ಜೋಡಿಸಿದ ಹೊಸರಕ್ತನಾಳವು ನಿರೀಕ್ಷಿತ ಪ್ರಮಾಣದಲ್ಲಿ ರಕ್ತವನ್ನು ಹರಿಸದಿದ್ದರೆ ಇಲ್ಲವೇ ರಕ್ತನಾಳವು ಅಕಸ್ಮಾತ್ ಮುರುಟಿಕೊಂಡರೆ?... ಹೀಗೆ ಅಸಂಖ್ಯ ಪ್ರಶ್ನೆಗಳು ಬ್ಲೇಲಾಕ್ ಅವರನ್ನು ಕಾಡಿತು.

ಬ್ಲೇಲಾಕ್ ಅವರು ವ್ಯಾಂಡರ್‌ಬೆಲ್ಟ್ ವಿಶ್ವ ವಿದ್ಯಾನಿಲಯ ಹಾಗೂ ಜಾನ್‌ಹಾಪ್ಕಿನ್ಸ್ ವಿಶ್ವವಿದ್ಯಾ ನಿಲಯ ಗಳೆರಡರಲ್ಲೂ ಕೆಲಸವನ್ನು ಮಾಡುತ್ತಿದ್ದರು. ವ್ಯಾಂಡರ್‌ಬೆಲ್ಟ್ ವಿಶ್ವವಿದ್ಯಾನಿಲಯದಲ್ಲಿ ವಿವಿಯನ್ ಥಿಯೋಡರ್ ಥಾಮಸ್ (1910-1985) ಎಂಬ ಎಲೆಮರೆಯ ಕಾಯಿಯಾಗಿದ್ದ ಒಬ್ಬ ಪ್ರತಿಭಾವಂತನಿದ್ದ. ಕಪ್ಪು ವರ್ಣೀಯ: ಅಮೆರಿಕದ ಬಡ ಕುಟುಂಬದಲ್ಲಿ ಜನಿಸಿದ ವಿವಿಯನ್ ಥಾಮಸ್, ವೈದ್ಯಕೀಯ ಪದವಿ ಪಡೆಯಲು ಅವರ ಮನೆಯ ಆರ್ಥಿಕ ಪರಿಸ್ಥಿತಿ ಅನುಮತಿಸಲಿಲ್ಲ. ಆದರೆ, ಅವರ ಜ್ಞಾನ ಮತ್ತು ಕೌಶಲ್ಯ ಅದ್ಭುತವಾಗಿತ್ತು.

ಅವರು ಆರಂಭದಲ್ಲಿ ಅಪ್ರೆಡ್ ಬ್ಲೇಲಾಕ್ ಅವರ ಪ್ರಯೋಗಾಲಯದಲ್ಲಿ ಕೇವಲ ನೆಲ ಒರೆಸುವ ಅಥವಾ ಪ್ರಾಣಿಗಳ ಪಂಜರ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರಿದವರು. ಆದರೆ, ಅವರ ಚುರುಕುತನ ಮತ್ತು ವಿಜ್ಞಾನದ ಮೇಲಿನ ಆಸಕ್ತಿಯನ್ನು ಗಮನಿಸಿದ ಬ್ಲೇಲಾಕ್, ಅವರನ್ನು ತಮ್ಮ ಸಂಶೋಧನಾ ಸಹಾಯಕನನ್ನಾಗಿ ನೇಮಿಸಿಕೊಂಡರು.

ಅದ್ಭುತ ಪ್ರತಿಭಾವಂತ: ಹೆಲೆನ್ ಟಾಸಿಗ್ ಅವರು ನೀಲಶಿಶು ಲಕ್ಷಣಾವಳಿಯ ಶಿಶುಗಳಿಗೆ ಮರು ಜನ್ಮ ವನ್ನು ನೀಡಬಲ್ಲ ಪರಿಹಾರವನ್ನು ಸೈದ್ಧಾಂತಿಕವಾಗಿ ಮಂಡಿಸಿದರು. ಆ ಸಿದ್ಧಾಂತದ ಸಾಧ್ಯಾ ಸಾಧ್ಯತೆಯನ್ನು ಪ್ರಾಯೋಗಿಕವಾಗಿ ನಿರೂಪಿಸಬೇಕಾದ ಹೊಣೆಯು ಡಾ.ಬ್ಲೇಲಾಕ್ ಅವರ ಮೇಲೆ ಬಿದ್ದಿತು. ಬ್ಲೇಲಾಕ್ ಅತ್ಯಂತ ಪ್ರತಿಭಾವಂತನಾಗಿದ್ದ ವಿವಿಯನ್ ಥಾಮಸ್ ನನ್ನು ತನ್ನ ಪ್ರಯೋಗ ದಲ್ಲಿ ನೆರವಾಗಲು ಕೇಳಿಕೊಂಡರು. ಮೊದಲು ನಾಳ ಸೇತುವೆಯನ್ನು ಅಥವಾ ಶಂಟ್ ಶಸ್ತ್ರಚಿಕಿತ್ಸೆ ಯನ್ನು ನೇರವಾಗಿ ಮನುಷ್ಯರ ಮೇಲೆ ಪ್ರಯೋಗಿಸುವ ಬದಲು ನಾಯಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಬೇಕಿತ್ತು. ಈ ಪ್ರಯೋಗಗಳಿಗೆ ಅಗತ್ಯವಿದ್ದ ಸಂಕೀರ್ಣ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದು ವಿವಿಯನ್ ಥಾಮಸ್.

ಹೊಲಿಗೆಯ ತಂತ್ರ (ಸ್ಯೂಚರಿಂಗ್ ಟೆಕ್ನಿಕ್): ಆ ಕಾಲದ ಅತ್ಯಂತ ಸಣ್ಣ ರಕ್ತನಾಳಗಳನ್ನು ಹೊಲಿಯುವ ಕೌಶಲ್ಯವನ್ನು ವಿವಿಯನ್ ಥಾಮಸ್ ಕರಗತ ಮಾಡಿಕೊಂಡಿದ್ದರು. ಮನುಷ್ಯನ ಕೂದಲಿನಷ್ಟು ತೆಳುವಾದ ಸೂಜಿಯನ್ನು ಬಳಸಿ, ರಕ್ತನಾಳಗಳನ್ನು ಜೋಡಿಸುವ ತಂತ್ರವನ್ನು ವಿವಿಯನ್ ಥಾಮಸ್ ಕಲಿತುಕೊಂಡಿದ್ದರು. ಅವರು ತಮ್ಮ ಪರಿಣತಿಯನ್ನು ಬ್ಲೇಲಾರ್ಡ್ ಅವರಿಗೂ ಕಲಿಸಿದನು.

ಐಲೀನ್ ಸ್ಯಾಕ್ಸನ್: 1944ರ ನವೆಂಬರ್ 29. ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆ. ಶಸ್ತ್ರಚಿಕಿತ್ಸಾ ಕೊಠಡಿ ಯಲ್ಲಿ ಒಂದು ಪುಟ್ಟ ಕಂದಮ್ಮ. ಹೆಸರು ಐಲೀನ್ ಸ್ಯಾಕ್ಸನ್. ಕೇವಲ ಹದಿನೈದು ತಿಂಗಳ ಮಗು. ಉಸಿರಿಗಾಗಿ ಹೋರಾಡುತ್ತಿದ್ದಳು. ಇಡೀ ಮೈ ನೀಲಿಬಣ್ಣವನ್ನು ತಳೆದಿತ್ತು. ಅವಳ ಮೇಲೆ ಟಾಸಿಗ್-ವಿವಿಯನ್-ಬ್ಲೇಲಾಕ್ ಅವರ ರಕ್ತನಾಳ ಸೇತುವೆಯನ್ನು ನಿರ್ಮಿಸುವ ಕ್ರಾಂತೀಕಾರಕ ಯೋಜನೆ ಯನ್ನು ಕಾರ್ಯರೂಪಕ್ಕೆ ತರಲು ಎಲ್ಲರೂ ಸಿದ್ಧವಾಗಿದ್ದರು. ಡಾ. ಬ್ಲೇಲಾಕ್ ಅವರ ಪಕ್ಕದಲ್ಲಿ ವಿವಿಯನ್ ನಿಂತಿದ್ದರು. ಪ್ರತಿಯೊಂದು ಕ್ಷಣದಲ್ಲೂ ಶಸ್ತ್ರಚಿಕಿತ್ಸೆಯ ಬಗ್ಗೆ ಸಲಹೆಗಳನ್ನು ಕೊಡುತ್ತಿದ್ದರು.

ಶಸ್ತ್ರಚಿಕಿತ್ಸೆಯಲ್ಲಿ ಸಬ್‌ಕ್ಲೇವಿಯನ್ ಆರ್ಟರಿ ಎಂಬ ರಕ್ತನಾಳವನ್ನು ಪಲ್ಮನರಿ ಆರ್ಟರಿ ಎಂಬ ಶ್ವಾಸಕೋಶದ ರಕ್ತನಾಳಕ್ಕೆ ಜೋಡಿಸಿದರು. ಶಸಚಿಕಿತ್ಸೆ ಮುಗಿಯುತ್ತಿದ್ದಮ್ತೆಯೇ ಒಂದು ಅದ್ಭುತ ದೃಶ್ಯಕ್ಕೆ ಅವರೆಲ್ಲರೂ ಸಾಕ್ಷಿಯಾದರು. ಐಲೀನ್ ಸ್ಯಾಕ್ಸನ್ನಳ ಮೈ ನೀಲಿ ಬಣ್ಣವು ಕಡಿಮೆ ಯಾಗಲಾರಂಬಿಸಿತು. ತುಟಿಗಳಿಗೆ ಕೆಂಪು ಮರಳಿತು. ಇಡೀ ಮೈ ಗುಲಾಬಿ ಬಣ್ಣವನ್ನು ತಳೆಯಲಾ ರಂಭಿಸಿತು. ಐಲೀನಳಿಗೆ ಹೊಸ ಜನ್ಮ ದೊರೆಯಿತು. ಅವಳು ಸರಾಗವಾಗಿ ಉಸಿರಾಡಲಾ ರಂಭಿಸಿದಳು. ವೈದ್ಯಕೀಯ ಇತಿಹಾಸದಲ್ಲಿ ಒಂದು ಹೊಸ ಬೆಳಕು ಮೂಡಿತು.

ಐತಿಹಾಸಿಕ ಅನ್ಯಾಯ ಮತ್ತು ನಂತರದ ಮನ್ನಣೆ: ವಿವಿಯನ್ ಥಾಮಸ್ ಅವರು ಕಪ್ಪು ವರ್ಣೀಯರಾಗಿದ್ದರಿಂದ, ಆ ಕಾಲದ ವರ್ಣಭೇದ ನೀತಿಯು ತೀವ್ರ ಸ್ವರೂಪದಲ್ಲಿ ಅಸ್ತಿತ್ವದಲ್ಲಿ ಇದ್ದುದರಿಂದ ಯಾವುದೇ ವೈದ್ಯಕೀಯ ಮನ್ನಣೆ ಅಥವಾ ಪ್ರಶಸ್ತಿ ಸಿಗಲಿಲ್ಲ. ಬ್ಲೇಲಾಕ್ ಅವರ ಪಕ್ಕದಲ್ಲಿಯೇ ನಿಂತು ಶಸ್ತ್ರಚಿಕಿತ್ಸೆ ಮಾಡಿದರೂ, ಫೋಟೊಗಳಲ್ಲಿ ಅವರು ಇರಲಿಲ್ಲ. ಬೇಕೆಂದೇ ಅವರು ಕಾಣಿಸಿಕೊಳ್ಳದಂತೆ ಚಿತ್ರಗಳನ್ನು ತೆಗೆದಿದ್ದರು. ದಶಕಗಳ ನಂತರ, ಅವರ ಸಾಧನೆಯನ್ನು ಗುರುತಿಸಿದ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯು ಅವರಿಗೆ ಗೌರವ ಡಾಕ್ಟರೇಟ್ ನೀಡಿತು ಮತ್ತು ಅವರ ಭಾವ ಚಿತ್ರವನ್ನು ಆಸ್ಪತ್ರೆಯ ಗೋಡೆಯ ಮೇಲೆ ಅನಾವರಣಗೊಳಿಸಿತು.

ತೀರ್ಮಾನ: ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ಪ್ರಸಂಗ. ಹೆಲೆನ್ ಟಾಸಿಗ್ ಅವರು ತಮ್ಮ ಆಸಕ್ತಿ ಹಾಗೂ ತಿಳಿವಳಿಕೆಯ ಅನ್ವಯ ನೀಲಶಿಶುಗಳ ಸಮಸ್ಯೆಗೆ ಸೈದ್ಧಾಂತಿಕ ಪರಿಹಾರವನ್ನು ಸೂಚಿಸಿದರು. ವಿವಿಯನ್ ಥಾಮಸ್ ಅವರು ಆ ಸೈದ್ಧಾಂತಿಕ ಪರಿಹಾರವನ್ನು ಕಾರ್ಯರೂಪಕ್ಕೆ ತರುವ ತಂತ್ರಜ್ಞಾನವನ್ನು ರೂಪಿಸಿದರು. ಅದನ್ನು ಮೊದಲ ಬಾರಿಗೆ ಅಲ್ರೆಡ್ ಬ್ಲೇಲಾಕ್ ಕಾರ್ಯರೂಪಕ್ಕೆ ತಂದರು. ಈ ತಂತ್ರವನ್ನು ಮೊದ ಮೊದಲು ಬ್ಲೇಲಾಕ್-ಟಾಸಿಡ್ ಶಂಟ್ ಎಂದು ಕರೆದರೂ, ಈಗ ಅದನ್ನು ಬ್ಲೇಲಾಕ್- ವಿವಿಯನ್-ಟಾಸಿಡ್ ಶಂಟ್ ಎಂದು ಕರೆಯು ತ್ತಾರೆ. ಧರ್ಮ, ಜಾತಿ, ಭಾಷೆ, ಪ್ರಾಂತಗಳ ಸಂಕುಚಿತ ಮನೋಭಾವವು ಅದೆಷ್ಟು ಪ್ರತಿಭೆ ಗಳನ್ನು ಬೆಳಕಿಗೆ ಬಾರದಂತೆ ದಮನಗೊಳಿಸಿವೆಯೋ! ಬಹುಶಃ ಅವು ಎಂದಿಗೂ ಬೆಳಕಿಗೆ ಬಾರವು. ಈ ಸರ್ವ ನಿಯಮಕ್ಕೆ ಅಪವಾದ ಬ್ಲೇಲಾಕ್-ವಿವಿಯನ್-ಟಾಸಿಡ್ ಶಂಟ್ ಪ್ರಕರಣ.

ಡಾ.ನಾ. ಸೋಮೇಶ್ವರ

View all posts by this author